ಪ್ರಧಾನ ಮಂತ್ರಿಯವರ ಕಛೇರಿ
ಬ್ರಿಕ್ಸ್ ಉದ್ಯಮ ವ್ಯವಹಾರ ವೇದಿಕೆ 2026 ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
ಪ್ರಕಟಣಾ ದಿನಾಂಕ:
11 SEP 2026 7:05PM by PIB Bengaluru
ಗೌರವಾನ್ವಿತ ಗಣ್ಯರೆ,
ಬ್ರಿಕ್ಸ್ ಉದ್ಯಮ ವ್ಯವಹಾರ ರಂಗದ ದಿಗ್ಗಜರೆ,
ನವೋದ್ಯಮಿಗಳೆ ಮತ್ತು ಸ್ನೇಹಿತರೆ,
ನಮಸ್ಕಾರ!
ಬ್ರಿಕ್ಸ್ ಉದ್ಯಮ ವ್ಯವಹಾರ ವೇದಿಕೆಗೆ ನಿಮ್ಮೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ.
ಈ ವರ್ಷ ನಾವು ಬ್ರಿಕ್ಸ್‌ನ 20 ವರ್ಷಗಳನ್ನು ಆಚರಿಸುತ್ತಿದ್ದೇವೆ. 2006ರಲ್ಲಿ ಈ ಗುಂಪು ಆರಂಭವಾದಾಗ, ಅದು ಕೇವಲ 4 ದೇಶಗಳನ್ನು ಒಳಗೊಂಡಿತ್ತು. ಇಂದು ಬ್ರಿಕ್ಸ್ ಮತ್ತು ಅದರ ಪಾಲುದಾರರು ಒಳಗೊಂಡಂತೆ ನಮ್ಮಲ್ಲಿ 29 ದೇಶಗಳು ಸೇರಿವೆ.
ಇಂದು ಬ್ರಿಕ್ಸ್ ದೇಶಗಳು ವಿಶ್ವದ ಜನಸಂಖ್ಯೆಯ 50%, ಜಾಗತಿಕ ಜಿಡಿಪಿಯ 40% ಮತ್ತು ಜಾಗತಿಕ ಉದ್ಯಮ ವ್ಯವಹಾರದ 25%ಗಿಂತ ಹೆಚ್ಚಿನ ಪ್ರಮಾಣವನ್ನು ಪ್ರತಿನಿಧಿಸುತ್ತವೆ. ಅಷ್ಟೇ ಅಲ್ಲ, ಈ ವರ್ಷಗಳಲ್ಲಿ ಜಾಗತಿಕ ಜಿಡಿಪಿ ಸುಮಾರು 2.5 ಪಟ್ಟು ಬೆಳೆದಿದ್ದರೂ, ಬ್ರಿಕ್ಸ್ ದೇಶಗಳ ಒಟ್ಟು ಜಿಡಿಪಿ ಸುಮಾರು 4.5 ಪಟ್ಟು ಬೆಳೆದಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬ್ರಿಕ್ಸ್‌ನ ಆರ್ಥಿಕ ಶಕ್ತಿಯು ವಿಶ್ವ ಆರ್ಥಿಕತೆಯ ವೇಗಕ್ಕಿಂತ 2 ಪಟ್ಟು ಹೆಚ್ಚಾಗಿದೆ.
ಬ್ರಿಕ್ಸ್ ದೇಶಗಳು ಜಾಗತಿಕ ನಾವೀನ್ಯತೆ ಮತ್ತು ಪರಿಹಾರಗಳಿಗೆ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ತಳಮಟ್ಟದ ಉಪಕ್ರಮಗಳಿಂದ ಗಡಿನಾಡಿನ ತಂತ್ರಜ್ಞಾನಗಳ ತನಕ, ನಮ್ಮ ದೇಶಗಳಲ್ಲಿ ನಾವೀನ್ಯತೆಯ ಹೊಸ ಸಾಧ್ಯತೆಗಳು ರೂಪುಗೊಳ್ಳುತ್ತಿವೆ. ಬ್ರಿಕ್ಸ್‌ನ ಬೆಳೆಯುತ್ತಿರುವ ಪ್ರಮಾಣ, ವೇಗ ಮತ್ತು ಆಶಾವಾದವು ನಮ್ಮಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಈ ವೇದಿಕೆಯು ಇದುವರೆಗಿನ ಅತಿದೊಡ್ಡ ಬ್ರಿಕ್ಸ್ ಉದ್ಯಮ ವ್ಯವಹಾರ ವೇದಿಕೆಯಾಗಿದೆ.
ಸ್ನೇಹಿತರೆ,
ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ವಸ್ತು ವಿಷಯವೆಂದರೆ "ಚೇತರಿಕೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ" ಎಂಬುದಾಗಿದೆ
ಕಳೆದ 12 ವರ್ಷಗಳಲ್ಲಿ ಭಾರತವು ಈ ಮಂತ್ರವನ್ನು ತನ್ನ ಆರ್ಥಿಕ ಮತ್ತು ವ್ಯಾಪಾರ ನೀತಿಯ ಅಡಿಪಾಯವನ್ನಾಗಿ ಮಾಡಿಕೊಂಡಿದೆ. ಚೇತರಿಕೆಯ ವಿಷಯಕ್ಕೆ ಬಂದಾಗ, ಭಾರತವು ಇಂಧನದಿಂದ ತಂತ್ರಜ್ಞಾನದವರೆಗೆ ತನ್ನ ಪೂರೈಕೆ ಸರಪಳಿಗಳನ್ನು ಹೆಚ್ಚು ವೈವಿಧ್ಯಮಯವಾಗಿಸಿದೆ ಮತ್ತು ವಿಶ್ವಾಸಾರ್ಹವಾಗಿಸಿದೆ. ಜಾಗತಿಕ ಅನಿಶ್ಚೃಯಗಳ ನಡುವೆಯೂ, ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯಲ್ಲಿ ಜಗತ್ತಿಗೆ ವಿಶ್ವಾಸ ತುಂಬಲು ಭಾರತವನ್ನು ಸಕ್ರಿಯಗೊಳಿಸಿದ್ದು ಇದೇ ಚೇತರಿಕೆ ಆಗಿದೆ.
ನಾವು ನಮ್ಮ ರಸ್ತೆಗಳು, ರೈಲ್ವೆಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ವೇಗವಾಗಿ ವಿಸ್ತರಿಸುತ್ತಿದ್ದೇವೆ. ಅದೇ ಸಮಯದಲ್ಲಿ ಹಡಗು ನಿರ್ಮಾಣ, ಸೆಮಿಕಂಡಕ್ಟರ್ ಗಳು, ಕ್ವಾಂಟಮ್ ತಂತ್ರಜ್ಞಾನ, ನಿರ್ಣಾಯಕ ಖನಿಜಗಳು ಮತ್ತು ಜೈವಿಕ ತಂತ್ರಜ್ಞಾನದಂತಹ ಕಾರ್ಯತಂತ್ರ ಕ್ಷೇತ್ರಗಳಲ್ಲಿ ನಾವು ಹೊಸ ಸಾಮರ್ಥ್ಯಗಳನ್ನು ನಿರ್ಮಿಸುತ್ತಿದ್ದೇವೆ. ಈ ವಲಯಗಳಲ್ಲಿ, ಭಾರತವು ಜಾಗತಿಕ ವ್ಯವಹಾರಗಳಿಗೆ ಹೊಸ ಅವಕಾಶಗಳ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಆದ್ದರಿಂದ, ಮೇಕ್ ಇನ್ ಇಂಡಿಯಾ, ಇನ್ನೋವೇಟ್ ವಿತ್ ಇಂಡಿಯಾ ಮತ್ತು ಸ್ಕೇಲ್ ಫಾರ್ ದಿ ವರ್ಲ್ಡ್ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ.
ಸ್ನೇಹಿತರೆ,
ಇಂದು ಭಾರತವು ಸ್ಟಾರ್ಟಪ್ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. 200,000ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಮತ್ತು 120ಕ್ಕೂ ಹೆಚ್ಚು ಯುನಿಕಾರ್ನ್‌ಗಳೊಂದಿಗೆ, ಭಾರತವು ಜಾಗತಿಕ ಪರಿಹಾರಗಳ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಬ್ರಿಕ್ಸ್ ಭಾರತ್ ಇನ್ನೋವೇಟ್ಸ್ ಎಕ್ಸ್‌ಪೋದಲ್ಲಿ ನೀವು ಇದರ ಒಂದು ನೋಟ ಪಡೆಯಬಹುದು.
ನಮ್ಮ ನವೋದ್ಯಮಗಳು ಎಐ ಮೂಲಕ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯನ್ನು ಪರಿವರ್ತಿಸುತ್ತಿವೆ, ಹಸಿರು ಹೈಡ್ರೋಜನ್ ಮತ್ತು ಬ್ಯಾಟರಿಗಳ ಮೇಲೆ ಕೆಲಸ ಮಾಡುತ್ತಿವೆ, ರಕ್ಷಣೆ ಮತ್ತು ಬಾಹ್ಯಾಕಾಶದಲ್ಲಿ ಹೊಸ ದಾಖಲೆಗಳನ್ನು ಮುರಿಯುತ್ತಿವೆ. ಈಗ ಬ್ರಿಕ್ಸ್ ಮೂಲಕವೂ ನಾವು ಈ ವಿಶ್ವ ದರ್ಜೆಯ ನಾವೀನ್ಯತೆಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯಬೇಕು.
ಸ್ನೇಹಿತರೆ,
ಭಾರತದ ನಾವೀನ್ಯತೆ ಕಥೆಯ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ, ಜನಸಂಖ್ಯಾ ಪ್ರಮಾಣದಲ್ಲಿ ನಾವೀನ್ಯತೆ. ಭಾರತದ ಏಕೀಕೃತ ಪಾವತಿ ಇಂಟರ್ಫೇಸ್(ಯುಪಿಐ) ಜನಸಂಖ್ಯಾ ಪ್ರಮಾಣದಲ್ಲಿ ಆರ್ಥಿಕ ಸೇರ್ಪಡೆ ಮತ್ತು ಡಿಜಿಟಲ್ ವಹಿವಾಟುಗಳಿಗೆ ಹೊಸ ಆವೇಗ ನೀಡಿದೆ.
ಇಂದು ವಿಶ್ವದ ನೈಜ-ಸಮಯದ ಪಾವತಿಗಳಲ್ಲಿ 50% ಈ ತಂತ್ರಜ್ಞಾನದಿಂದ ನಡೆಯುತ್ತಿದೆ. ಈ ಡಿಜಿಟಲ್ ರಂಗದಲ್ಲಿ ಹೊಸ ಪರಿಹಾರಗಳನ್ನು ನಿರ್ಮಿಸಲು, ನಾವು ಉದ್ಯಮ ಮತ್ತು ನವೋದ್ಯಮಗಳಿಗೆ ಮುಕ್ತ ಪರಿಸರ ವ್ಯವಸ್ಥೆ ಒದಗಿಸಿದ್ದೇವೆ. ಅನೇಕ ದೇಶಗಳು ಭಾರತದ ವಿಶ್ವ ದರ್ಜೆಯ ಪರಿಸರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿವೆ ಎಂಬುದರಿಂದ ನಮಗೆ ಹೆಮ್ಮೆಯಿದೆ. ಬ್ರಿಕ್ಸ್ ದೇಶಗಳ ನಾವೀನ್ಯಕಾರರು ತಮ್ಮ ದೇಶಗಳಿಗೆ ಹೊಸ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಈ ಅನುಭವವನ್ನು ಸಹ ಪಡೆಯಬಹುದು.
ಸ್ನೇಹಿತರೆ,
ಇಂದು ವಿಶ್ವಾದ್ಯಂತ ಉದ್ಯಮ ವ್ಯವಹಾರ ಮತ್ತು ವ್ಯಾಪಾರ ಅಡೆತಡೆಗಳು ಹೆಚ್ಚುತ್ತಿರುವಂತೆ, ಭಾರತವು ಆರ್ಥಿಕ ಸೇತುವೆಗಳನ್ನು ನಿರ್ಮಿಸುತ್ತಿದೆ. 2014ರಿಂದ, ನಾವು ವಿಶ್ವಾದ್ಯಂತ ಸುಮಾರು 40 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದೇವೆ. ಬ್ರಿಕ್ಸ್‌ನೊಳಗಿನ ನಮ್ಮ ವಿಧಾನವು ಸಹ ಒಂದೇ ಆಗಿರುತ್ತದೆ, ಅದೆಂದರೆ, ಅಡೆತಡೆಗಳನ್ನು ಕಡಿಮೆ ಮಾಡುತ್ತದೆ ಮತ್ತು ವ್ಯವಹಾರಗಳಿಗೆ ಅವಕಾಶಗಳನ್ನು ವಿಸ್ತರಿಸುತ್ತದೆ.
ಆದ್ದರಿಂದ, ನಮ್ಮ ಅಧ್ಯಕ್ಷತೆಯಲ್ಲಿ ನಾವು ಕೃಷಿ, ಆರೋಗ್ಯ ರಕ್ಷಣೆ, ಕೌಶಲ್ಯ ಮತ್ತು ಸ್ಮಾರ್ಟ್ ಗ್ರಿಡ್‌ಗಳಂತಹ ಕ್ಷೇತ್ರಗಳಲ್ಲಿ ಹೊಸ ಸಹಕಾರ ಜಾಲಗಳನ್ನು ಸ್ಥಾಪಿಸಿದ್ದೇವೆ. ಸ್ಟಾರ್ಟಪ್‌ಗಳು ಮತ್ತು ಎಸ್ಎಂಇಗಳನ್ನು ಮಾರುಕಟ್ಟೆಗಳು ಮತ್ತು ಹಣಕಾಸಿನೊಂದಿಗೆ ಸಂಪರ್ಕಿಸಲು ನಾವು ಬ್ರಿಕ್ಸ್ ಇನ್ ಕ್ಯುಬೇಟರ್ ಜಾಲ, ಬ್ರಿಕ್ಸ್ ಎಂಎಸ್ಎಂಇ ಪೋರ್ಟಲ್ ಮತ್ತು ಬ್ರಿಕ್ಸ್ ಸ್ಟಾರ್ಟಪ್ ಇನ್ನೋವೇಶನ್ ಫಂಡ್‌ನಂತಹ ಉಪಕ್ರಮಗಳನ್ನು ಪ್ರಾರಂಭಿಸಿದ್ದೇವೆ.
ನೀವೆಲ್ಲರೂ ಈ ಸಹಕಾರ ಮಾರ್ಗಸೂಚಿಗಳಿಂದ ಪ್ರಯೋಜನ ಪಡೆಯಬಹುದು, ನಮ್ಮ ದೇಶಗಳಲ್ಲಿ ಹೂಡಿಕೆ ಮತ್ತು ಪ್ರತಿಭೆಗಳ ವಿನಿಮಯವನ್ನು ಮತ್ತಷ್ಟು ಹೆಚ್ಚಿಸಬಹುದು.
ಸ್ನೇಹಿತರೆ,
ಸಮುದ್ರ ಮಾರ್ಗಗಳು ಸುರಕ್ಷಿತವಾಗಿದ್ದಾಗ, ಪೂರೈಕೆ ಮಾರ್ಗಗಳು ಮುಕ್ತವಾಗಿದ್ದಾಗ ಮತ್ತು ನಾವಿಕರು ಸುರಕ್ಷಿತವಾಗಿದ್ದಾಗ ಮಾತ್ರ ಜಾಗತಿಕ ವ್ಯಾಪಾರ ವ್ಯವಹಾರ ಮುಂದುವರಿಯುತ್ತದೆ. ಅದಕ್ಕಾಗಿಯೇ ಭಾರತವು ಹಡಗುಗಳ ಸಂಚಾರ ಸ್ವಾತಂತ್ರ್ಯ ಮತ್ತು ನಾವಿಕರ ಸುರಕ್ಷತೆಯ ಸದೃಢವಾದ ಪ್ರತಿಪಾದಕವಾಗಿದೆ.
ಬ್ರಿಕ್ಸ್ ಮಹಿಳಾ ವ್ಯಾಪಾರ ಒಕ್ಕೂಟವು ನಮ್ಮ ದೃಷ್ಟಿಕೋನದ ಪ್ರಮುಖ ಭಾಗವಾಗಿದೆ. ಮಹಿಳಾ ಉದ್ಯಮಿಗಳು ನಮ್ಮ ಬೆಳವಣಿಗೆಯ ಯಶೋಗಾಥೆಯನ್ನು ಮುನ್ನಡೆಸಬೇಕೆಂದು ನಾವು ಬಯಸುತ್ತೇವೆ. ಭಾರತದಲ್ಲಿ ನಡೆದ ಈ ಒಕ್ಕೂಟ ಸಭೆಯಲ್ಲಿ ಸುಮಾರು 200 ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು ಎಂಬುದರಿಂದ ನಮಗೆ ತುಂಬಾ ಸಂತೋಷ ತಂದಿದೆ.
ಸ್ನೇಹಿತರೆ,
ಬ್ರಿಕ್ಸ್ 3ನೇ ದಶಕಕ್ಕೆ ಕಾಲಿಡುತ್ತಿರುವಾಗ, 3 ಅಂಶಗಳನ್ನು ಪರಿಗಣಿಸುವಂತೆ ಬ್ರಿಕ್ಸ್ ವ್ಯವಹಾರ ಮಂಡಳಿಗೆ ನಾನು ಒತ್ತಾಯಿಸುತ್ತೇನೆ ... ಬ್ರಿಕ್ಸ್ ದೇಶಗಳಲ್ಲಿನ ಟಾಪ್ 10 ವ್ಯಾಪಾರ ಅಡೆತಡೆಗಳನ್ನು ತೆಗೆದುಹಾಕುವ ಬಗ್ಗೆ ನೀವು ವರದಿ ಸಿದ್ಧಪಡಿಸಬಹುದೇ? ಇತರೆ ಬ್ರಿಕ್ಸ್ ಮಾರುಕಟ್ಟೆಗಳಿಗೆ ವಿಸ್ತರಿಸಲು ನಾವು ಪ್ರತಿ ವರ್ಷ 100 ಬ್ರಿಕ್ಸ್ ಸ್ಟಾರ್ಟಪ್‌ಗಳನ್ನು ಬೆಂಬಲಿಸಬಹುದೇ? ನಮ್ಮ ವ್ಯವಹಾರಗಳಲ್ಲಿ 1,000 ಹೊಸ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸಬಹುದೇ? ಈ 3 ಮಾನದಂಡಗಳಲ್ಲಿ ಆಗುವ ಪ್ರಗತಿಯನ್ನು ನಾವು ಪ್ರತಿ ವರ್ಷ ಪರಿಶೀಲಿಸಬೇಕು.
ಬ್ರಿಕ್ಸ್‌ನ ಮಹತ್ವಾಕಾಂಕ್ಷೆಯನ್ನು ಕಾರ್ಯರೂಪಕ್ಕೆ ತರೋಣ, ನಮ್ಮ ಸಾಮೂಹಿಕ ಶಕ್ತಿಯನ್ನು ಜಾಗತಿಕ ಪರಿಹಾರಗಳಾಗಿ ಪರಿವರ್ತಿಸೋಣ. ಬ್ರಿಕ್ಸ್ ಮುಂದುವರಿಯಲಿ, ಜಗತ್ತು ಸಹ ಮುಂದುವರಿಯಲು ಸಹಾಯ ಮಾಡಲಿ.
ಎಲ್ಲರಿಗೂ ತುಂಬು ಧನ್ಯವಾದಗಳು.
*****
(ಪ್ರಕಟಣೆ ಐ.ಡಿ.: 2310086)
ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ:
Malayalam
,
Odia
,
हिन्दी
,
English
,
Urdu
,
Marathi
,
Bengali
,
Manipuri
,
Assamese
,
Punjabi
,
Gujarati
,
Telugu