ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು 15 ತಿಂಗಳುಗಳಲ್ಲಿ ಗ್ರಾಹಕರಿಗೆ ₹105 ಕೋಟಿಗೂ ಹೆಚ್ಚು ಹಣವನ್ನು ಮರುಪಾವತಿಸಲು ನೆರವಾಗಿದೆ
25 ಏಪ್ರಿಲ್ 2025 ರಿಂದ 31 ಜುಲೈ 2026ರ ನಡುವೆ 35 ಕ್ಷೇತ್ರಗಳಲ್ಲಿ ಮರುಪಾವತಿ ಸಂಬಂಧಿತ 1,66,189 ಕುಂದುಕೊರತೆಗಳನ್ನು ಪರಿಹರಿಸಲಾಗಿದೆ
ಮರುಪಾವತಿಯಾದ ಒಟ್ಟು ಹಣದಲ್ಲಿ ಇ-ಕಾಮರ್ಸ್ ಕ್ಷೇತ್ರದ ಪಾಲು ₹74 ಕೋಟಿಗೂ ಹೆಚ್ಚು
ಮೇ-ಜುಲೈ 2026ರ ಅವಧಿಯಲ್ಲಿ ಇ-ಕಾಮರ್ಸ್ ಕ್ಷೇತ್ರದಲ್ಲಿ ₹1 ರಿಂದ ₹35.83 ಲಕ್ಷದವರೆಗಿನ ಹಣವನ್ನು ಮರುಪಾವತಿಸಲಾಗಿದೆ
ಪ್ರಕಟಣಾ ದಿನಾಂಕ:
09 SEP 2026 5:57PM by PIB Bengaluru
ಗ್ರಾಹಕ ವ್ಯವಹಾರಗಳ ಇಲಾಖೆಯ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು (ಎನ್ ಸಿ ಎಚ್), 25 ಏಪ್ರಿಲ್ 2025 ರಿಂದ 31 ಜುಲೈ 2026 ರವರೆಗಿನ 15 ತಿಂಗಳ ಅವಧಿಯಲ್ಲಿ ಮರುಪಾವತಿ (ರಿಫಂಡ್) ಸಂಬಂಧಿತ 1,66,189 ದೂರುಗಳನ್ನು ಪರಿಹರಿಸುವ ಮೂಲಕ 35 ಕ್ಷೇತ್ರಗಳಲ್ಲಿ ಗ್ರಾಹಕರಿಗೆ ₹105 ಕೋಟಿಗೂ ಹೆಚ್ಚು ಹಣವನ್ನು ಮರುಪಾವತಿಸಲು ನೆರವಾಗಿದೆ.
ಪ್ರಕರಣವು ನ್ಯಾಯಾಲಯ/ಆಯೋಗಗಳ ಮೆಟ್ಟಿಲೇರುವ ಮುನ್ನವೇ ಈ ಹಣವನ್ನು ಮರುಪಾವತಿಸಲಾಗಿದೆ, ಇದರಿಂದಾಗಿ ಗ್ರಾಹಕರು ಗ್ರಾಹಕ ಆಯೋಗಗಳನ್ನು ಸಂಪರ್ಕಿಸುವ ಅಗತ್ಯವಿಲ್ಲದೇ ಸಕಾಲದಲ್ಲಿ ಪರಿಹಾರ ಪಡೆಯಲು ಸಾಧ್ಯವಾಗಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು ದೇಶಾದ್ಯಂತ ಗ್ರಾಹಕರಿಗೆ ತಮ್ಮ ದೂರುಗಳನ್ನು ದಾಖಲಿಸಲು ಮತ್ತು ಪರಿಹಾರ ಪಡೆಯಲು ಏಕೈಕ ಪ್ರವೇಶ ವೇದಿಕೆಯಾಗಿ ಹೊರಹೊಮ್ಮಿದೆ.
ಮರುಪಾವತಿ ಸಂಬಂಧಿತ ದೂರುಗಳಲ್ಲಿ ಇ-ಕಾಮರ್ಸ್ ಕ್ಷೇತ್ರವು ಅತಿ ದೊಡ್ಡ ಪಾಲನ್ನು ಹೊಂದಿದ್ದು, 1,00,466 ದೂರುಗಳಿಗೆ ₹74 ಕೋಟಿಗೂ ಹೆಚ್ಚು ಹಣ ಮರುಪಾವತಿಯಾಗಿದೆ. ಪ್ರವಾಸೋದ್ಯಮ ಮತ್ತು ಪ್ರಯಾಣ ಕ್ಷೇತ್ರವು ಇದರ ನಂತರದ ಸ್ಥಾನದಲ್ಲಿದ್ದು, ₹10 ಕೋಟಿಗೂ ಹೆಚ್ಚು ಹಣ ಮರುಪಾವತಿಯಾಗಿದೆ. ಮೇ 2026 ರಿಂದ ಜುಲೈ 2026 ರ ಸಮಯದಲ್ಲಿ, ಇ-ಕಾಮರ್ಸ್ ವಲಯದಲ್ಲಿ ₹1ರಿಂದ ₹35,83,790 ವರೆಗಿನ ಮೊತ್ತದ ಮರುಪಾವತಿಗೆ ನೆರವು ನೀಡಲಾಗಿದ್ದು, ವಿವಿಧ ಸ್ವರೂಪ ಮತ್ತು ಮೌಲ್ಯದ ಗ್ರಾಹಕ ದೂರುಗಳನ್ನು ಇದು ಒಳಗೊಂಡಿದೆ.
ಮುಖ್ಯಾಂಶಗಳು:
- ₹105 ಕೋಟಿಗೂ ಅಧಿಕ ಮರುಪಾವತಿಗೆ ನೆರವು
- 1,66,189 ಮರುಪಾವತಿ ಸಂಬಂಧಿತ ದೂರುಗಳ ಪರಿಹಾರ
- 35 ವಲಯಗಳು ವ್ಯಾಪ್ತಿಗೆ ಒಳಪಟ್ಟಿವೆ
- 1,00,466 ಇ-ಕಾಮರ್ಸ್ ಮರುಪಾವತಿ ದೂರುಗಳ ಪರಿಹಾರ
- ಇ-ಕಾಮರ್ಸ್ ಕ್ಷೇತ್ರದಲ್ಲಿ ₹74 ಕೋಟಿಗೂ ಅಧಿಕ ಮರುಪಾವತಿಗೆ ನೆರವು
- ಪ್ರವಾಸೋದ್ಯಮ ಮತ್ತು ಪ್ರಯಾಣ ಕ್ಷೇತ್ರದಲ್ಲಿ ₹10 ಕೋಟಿಗೂ ಅಧಿಕ ಮರುಪಾವತಿಗೆ ನೆರವು
- ಮೇ-ಜುಲೈ 2026 ರಲ್ಲಿ ಇ-ಕಾಮರ್ಸ್‌ನಲ್ಲಿ ₹1 ರಿಂದ ₹35,83,790 ವರೆಗಿನ ಮೊತ್ತದ ಮರುಪಾವತಿ
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು ಸಂಯೋಜಿತ ಆಧಾರಿತ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಡಿ, ಗ್ರಾಹಕರ ದೂರುಗಳನ್ನು ಡಿಜಿಟಲ್ ಮೂಲಕ ಸಂಬಂಧಪಟ್ಟ ಕಂಪನಿಗಳಿಗೆ ರವಾನಿಸಿ, ನಿಗದಿತ ಕಾಲಮಿತಿಯೊಳಗೆ ಪರಿಹರಿಸಲಾಗುತ್ತದೆ. ಗ್ರಾಹಕರ ಪ್ರತಿಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಟ್ರ್ಯಾಕ್ ಮಾಡುವ ಮೂಲಕ ಈ ಪ್ರಕ್ರಿಯೆಯನ್ನು ಬೆಂಬಲಿಸಲಾಗುತ್ತದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಮೂಲಕ ಸ್ವೀಕರಿಸಲಾದ ಮರುಪಾವತಿ ಸಂಬಂಧಿತ ದೂರುಗಳು ದೇಶದ ಮಹಾನಗರಗಳ ಜೊತೆಗೆ ದೂರದ ಪ್ರದೇಶಗಳಿಂದಲೂ ಬಂದಿವೆ. ಇದು ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ದೇಶಾದ್ಯಂತ ವ್ಯಾಪಕವಾಗಿ ತಲುಪಿರುವುದನ್ನು ಪ್ರತಿಬಿಂಬಿಸುತ್ತದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಮೂಲಕ ಪರಿಹರಿಸಲಾದ ಗ್ರಾಹಕರ ದೂರುಗಳು
- ಬೆಂಗಳೂರು ನಗರ | ಮೊಬೈಲ್ ಫೋನ್ ವಿತರಣೆಯಲ್ಲಿ ವಿಳಂಬ: 21 ಆಗಸ್ಟ್ 2026ರಂದು ₹47,490 ಮೌಲ್ಯದ ಮೊಬೈಲ್ ಫೋನ್ ಅನ್ನು ಆರ್ಡರ್ ಮಾಡಿದ್ದ ಗ್ರಾಹಕರಿಗೆ ಆಗಸ್ಟ್ 22 ರಂದು ವಿತರಿಸುವುದಾಗಿ ತಿಳಿಸಲಾಗಿತ್ತು. ಆದರೆ ವಿತರಣೆಯ ದಿನಾಂಕವನ್ನು ಪದೇಪದೇ ಮುಂದೂಡಿದ ಹಿನ್ನೆಲೆಯಲ್ಲಿ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಿದರು. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಮಧ್ಯಪ್ರವೇಶದ ಬಳಿಕ, ಇ-ಕಾಮರ್ಸ್ ವೇದಿಕೆಯು ₹47,490ರ ಸಂಪೂರ್ಣ ಮೊತ್ತವನ್ನು ಮರುಪಾವತಿಸಿತು.
- ಎನ್ ಟಿ ಆರ್ ಜಿಲ್ಲೆ, ಆಂಧ್ರಪ್ರದೇಶ | ತಪ್ಪಾದ ಉತ್ಪನ್ನದ ಸ್ವೀಕೃತಿ: ಗ್ರಾಹಕರು ಆರ್ಡರ್ ಮಾಡಿದ್ದ 2.5-ಇಂಚಿನ ಹಾರ್ಡ್ ಡ್ರೈವ್ ಎನ್‌ಕ್ಲೋಸರ್, ಯು ಎಸ್ ಬಿ-ಸಿ 3.0 ಟು ಟೈಪ್-ಸಿ ಬದಲಿಗೆ, ಅಗತ್ಯವಿದ್ದ ಸಾಧನಕ್ಕೆ ಹೊಂದಿಕೆಯಾಗದ ಯು ಎಸ್ ಬಿ 3.1 ಎನ್‌ಕ್ಲೋಸರ್ ಅನ್ನು ಸ್ವೀಕರಿಸಿದರು. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ದೂರು ದಾಖಲಿಸಿದ ಬಳಿಕ, ಇ-ಕಾಮರ್ಸ್ ವೇದಿಕೆಯು ಉತ್ಪನ್ನದ ಮೊತ್ತವನ್ನು ಮರುಪಾವತಿಸಿತು.
- ಉದಾಲ್ಗುರಿ, ಅಸ್ಸಾಂ | ದ್ವಿಚಕ್ರ ವಾಹನದ ಬುಕ್ಕಿಂಗ್ ಮೊತ್ತದ ಮರುಪಾವತಿ: ದ್ವಿಚಕ್ರ ವಾಹನದ ಬುಕ್ಕಿಂಗ್ ರದ್ದುಗೊಂಡ ಬಳಿಕ ₹5,000 ಬುಕ್ಕಿಂಗ್ ಮೊತ್ತದ ಮರುಪಾವತಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ, ಗ್ರಾಹಕರು 21 ಮೇ 2026ರಂದು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಿದರು. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಮಧ್ಯಪ್ರವೇಶದ ಬಳಿಕ, ಡೀಲರ್ ಬುಕ್ಕಿಂಗ್ ಮೊತ್ತವನ್ನು ಮರುಪಾವತಿಸಿ, ಅದು ಗ್ರಾಹಕರ ಖಾತೆಗೆ ಜಮೆಯಾಗಿರುವುದನ್ನು ದೃಢಪಡಿಸಿದರು.
- ಪೂಂಚ್, ಜಮ್ಮು ಮತ್ತು ಕಾಶ್ಮೀರ | ತಪ್ಪಾದ ಮತ್ತು ಕಳಪೆ ಗುಣಮಟ್ಟದ ಉತ್ಪನ್ನ: ₹3,072 ಮೌಲ್ಯದ ಸ್ಪೋರ್ಟ್ಸ್ ಶೂಗಳನ್ನು ಆರ್ಡರ್ ಮಾಡಿದ್ದ ಗ್ರಾಹಕರಿಗೆ ಬೇರೆ ಮತ್ತು ಕಳಪೆ ಗುಣಮಟ್ಟದ ಬ್ರ್ಯಾಂಡ್ ನ ಉತ್ಪನ್ನವನ್ನು ವಿತರಿಸಲಾಯಿತು. ಉತ್ಪನ್ನವನ್ನು ಹಿಂದಿರುಗಿಸುವಂತೆ ಪದೇಪದೇ ಮಾಡಿದ ಮನವಿಗಳನ್ನು ರದ್ದುಪಡಿಸಿದ/ತಿರಸ್ಕರಿಸಿದ ಬಳಿಕ, ಗ್ರಾಹಕರು 29 ಜೂನ್ 2026ರಂದು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ದೂರು ದಾಖಲಿಸಿದರು. ಮಧ್ಯಪ್ರವೇಶದ ಬಳಿಕ, ಇ-ಕಾಮರ್ಸ್ ವೇದಿಕೆಯು ಉತ್ಪನ್ನದ ಮೊತ್ತವನ್ನು ಮರುಪಾವತಿಸಿತು.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಗ್ರಾಹಕರ ಸಂಪರ್ಕಕ್ಕಾಗಿ ಹಲವು ಮಾರ್ಗಗಳನ್ನು ಒದಗಿಸುತ್ತದೆ

ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು ಹಲವು ಮಾರ್ಗಗಳ ಮೂಲಕ 17 ಭಾಷೆಗಳಲ್ಲಿ ಗ್ರಾಹಕರಿಗೆ ದೂರು ಪರಿಹಾರ ಸೇವೆಯನ್ನು ಒದಗಿಸುತ್ತದೆ:
- ಟೋಲ್-ಫ್ರೀ: 1915
- ವಾಟ್ಸ್ಆ್ಯಪ್/ಎಸ್ಎಂಎಸ್: 8800001915
- ಇನ್ಗ್ರಾಮ್ ಪೋರ್ಟಲ್
- ಇ-ಮೇಲ್: nch-ca[at]gov[dot]in
- ಎನ್ಸಿಎಚ್ ಮೊಬೈಲ್ ಆ್ಯಪ್
- ವೆಬ್ ಪೋರ್ಟಲ್
- ಉಮಂಗ್ ಆ್ಯಪ್
25 ಏಪ್ರಿಲ್ 2025ರಿಂದ 31 ಜುಲೈ 2026ರವರೆಗಿನ ಅವಧಿಯಲ್ಲಿ ₹105 ಕೋಟಿಗೂ ಅಧಿಕ ಮೊತ್ತದ ಮರುಪಾವತಿಗೆ ನೆರವು ನೀಡಿರುವುದು, ದಾವೆಗೆ ಮೊದಲೇ ಸುಲಭವಾಗಿ ಲಭ್ಯವಾಗುವ ಮತ್ತು ಕಾಲಮಿತಿಯೊಳಗಿನ ದೂರು ಪರಿಹಾರವನ್ನು ಒದಗಿಸುವಲ್ಲಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಪಾತ್ರವನ್ನು ಉಲ್ಲೇಖಿಸುತ್ತದೆ.
ಈ ಉಪಕ್ರಮವು ದೂರುಗಳನ್ನು ದಾಖಲಿಸಿ ಸಕಾಲದಲ್ಲಿ ಪರಿಹಾರ ಪಡೆಯಲು ಅನುಕೂಲಕರ ವ್ಯವಸ್ಥೆಯನ್ನು ಒದಗಿಸುವ ಮೂಲಕ ಡಿಜಿಟಲ್ ಮಾರುಕಟ್ಟೆಗಳು ಮತ್ತು ಸೇವಾ ವ್ಯವಸ್ಥೆಗಳ ಮೇಲಿನ ಗ್ರಾಹಕರ ವಿಶ್ವಾಸವನ್ನು ಬಲಪಡಿಸಲು ಸಹ ಕೊಡುಗೆ ನೀಡುತ್ತದೆ. ಗ್ರಾಹಕರು ತಮ್ಮ ಗ್ರಾಹಕ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಹಾಗೂ ತಮ್ಮ ದೂರುಗಳಿಗೆ ಪರಿಹಾರ ಪಡೆಯಲು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯನ್ನು ಸಕ್ರಿಯವಾಗಿ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2308558)
ವಿಸಿಟರ್ ಕೌಂಟರ್ : 6