ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಗುವಾಹಟಿಯ ‘ಎನ್‌ಆರ್‌ಎಲ್’ ಕೇಂದ್ರದಲ್ಲಿ  ನಾಳೆ ಮೀಸಲಾದ ಸಹ-ಕಾರ್ಯನಿರ್ವಹಣೆ ಸ್ಥಳ (ಕೋ-ವರ್ಕಿಂಗ್ ಸ್ಪೇಸ್) ಮತ್ತು ನಾವೀನ್ಯತಾ ಕೇಂದ್ರಕ್ಕೆ ಚಾಲನೆ ನೀಡಲಿರುವ MC²+


ಈಶಾನ್ಯ ಭಾರತದಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು 50ಕ್ಕೂ ಹೆಚ್ಚು ಕೆಲಸದ ಸ್ಥಳಗಳು (ವರ್ಕ್‌ಸ್ಟೇಷನ್‌), 16 ಕ್ಯಾಬಿನ್‌ಗಳು, ಹೂಡಿಕೆದಾರರು ಮತ್ತು ತಾಂತ್ರಿಕ ಸಲಹೆಗಾರರ ಕೊಠಡಿಗಳನ್ನು ಹೊಸ ಘಟಕವು ಒದಗಿಸಲಿದೆ

ಪ್ರಕಟಣಾ ದಿನಾಂಕ: 09 SEP 2026 2:02PM by PIB Bengaluru

ಭಾರತದ ನವೋದ್ಯಮ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ವಿಶೇಷವಾಗಿ ಈಶಾನ್ಯ ಭಾರತದತ್ತ ಗಮನಹರಿಸುವ ಪ್ರಯತ್ನದ ಮಹತ್ವದ ಹೆಜ್ಜೆಯಾಗಿ, ಎಂಸಿ²+ (MC²+) ನಾಳೆ ಗುವಾಹಟಿಯ ‘ಎನ್‌ಆರ್‌ಎಲ್’ ಕೇಂದ್ರದ 6ನೇ ಮಹಡಿಯಲ್ಲಿ ಮೀಸಲಾದ ನಾವಿನ್ಯತಾ ಕೇಂದ್ರ ಮತ್ತು ಸಹ-ಕಾರ್ಯನಿರ್ವಹಣೆ ಸ್ಥಳಕ್ಕೆ (ಕೋ-ವರ್ಕಿಂಗ್ ಸ್ಪೇಸ್‌) ಚಾಲನೆ ನೀಡಲಿದೆ.

ಗುವಾಹಟಿಯ ಹೃದಯಭಾಗದಲ್ಲಿರುವ ಈ ಹೊಸ ಸೌಲಭ್ಯವನ್ನು ನವೋದ್ಯಮಿಗಳು, ಉದ್ಯಮಿಗಳು ಮತ್ತು ನಾವೀನ್ಯಕಾರರ ಪಾಲಿಗೆ ಕ್ರಿಯಾಶೀಲ, ಸಹಯೋಗದ ಮತ್ತು ವೃತ್ತಿಪರವಾಗಿ ಸುಸಜ್ಜಿತವಾದ ವಾತಾವರಣವಾಗಿ ರೂಪಿಸಲಾಗಿದೆ. ಹೆಚ್ಚುತ್ತಿರುವ ಉದಯೋನ್ಮುಖ ಉದ್ಯಮಗಳ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಈ ಸೌಲಭ್ಯವು, ಅತ್ಯುತ್ತಮ ಮೂಲಸೌಕರ್ಯ, ವೃತ್ತಿಪರ ಬೆಂಬಲ, ತಾಂತ್ರಿಕ ಪರಿಣತಿ, ಹೂಡಿಕೆದಾರರ ಪ್ರವೇಶ ಮತ್ತು ಉದ್ಯಮ ಸಂಪರ್ಕಗಳನ್ನು ಒಂದೇ ಸೂರಿನಡಿ ಒಟ್ಟುಗೂಡಿಸುತ್ತದೆ.

ಈ ಸೌಲಭ್ಯವು 50ಕ್ಕೂ ಹೆಚ್ಚು ಮೀಸಲಾದ ಕೆಲಸದ ಸ್ಥಳಗಳು, 16 ಕ್ಯಾಬಿನ್‌ಗಳು, 4 ಹೂಡಿಕೆದಾರರ ಸಭೆ ಕೊಠಡಿಗಳು ಮತ್ತು 2 ತಾಂತ್ರಿಕ ಸಲಹೆಗಾರರ ಕೊಠಡಿಗಳೊಂದಿಗೆ, 2 ಸಭೆ ಕೊಠಡಿಗಳು, ಸಂಪೂರ್ಣ ಸುಸಜ್ಜಿತ ಕೆಫೆಟೇರಿಯಾ ಮತ್ತು ಸಾಮಾನ್ಯ ಪ್ರದೇಶಗಳನ್ನು ಒಳಗೊಂಡಿದೆ. ಈ ಮೂಲಸೌಕರ್ಯವನ್ನು ರಾಷ್ಟ್ರೀಯ ಮಟ್ಟದ ಪ್ರಮುಖ ನವೋದ್ಯಮ ಮತ್ತು ನಾವೀನ್ಯತೆ ಕೇಂದ್ರಗಳಿಗೆ ಸರಿಸಮಾನವಾಗಿ, ಅತ್ಯುತ್ತಮ ಸೌಲಭ್ಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಇದು ನವೋದ್ಯಮಗಳಿಗೆ ಕೆಲಸ ಮಾಡಲು, ಸಹಯೋಗ ಹೊಂದಲು ಮತ್ತು ಬೆಳೆಯಲು ವೃತ್ತಿಪರವಾದ ಹಾಗೂ ಸಮಕಾಲೀನ ವಾತಾವರಣವನ್ನು ಒದಗಿಸುತ್ತದೆ.

ಹೂಡಿಕೆದಾರರ ಕೊಠಡಿಗಳು ಸಂಸ್ಥಾಪಕರಿಗೆ ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಲು, ಸಂಭಾವ್ಯ ಹೂಡಿಕೆದಾರರೊಂದಿಗೆ ಸಂವಹನ ನಡೆಸಲು ಜೊತೆಗೆ ಧನಸಹಾಯ ಹಾಗೂ ಕಾರ್ಯತಂತ್ರದ ಪಾಲುದಾರಿಕೆಗಾಗಿ ಅವಕಾಶಗಳನ್ನು ಅನ್ವೇಷಿಸಲು ವಿಶೇಷ ಸ್ಥಳವನ್ನು ಒದಗಿಸುತ್ತವೆ. ತಾಂತ್ರಿಕ ಸಲಹೆಗಾರರ ಕೊಠಡಿಗಳು ತಜ್ಞರೊಂದಿಗೆ ಸಂವಹನಗಳನ್ನು ಸುಗಮಗೊಳಿಸುತ್ತವೆ. ತಂತ್ರಜ್ಞಾನ ಅಭಿವೃದ್ಧಿ, ಉತ್ಪನ್ನಗಳ ಪರಿಷ್ಕರಣೆ ಮತ್ತು ತಾಂತ್ರಿಕ ಸವಾಲುಗಳ ಕುರಿತು ಮಾರ್ಗದರ್ಶನ ಪಡೆಯಲು ನವೋದ್ಯಮಗಳಿಗೆ ಅನುವು ಮಾಡಿಕೊಡುತ್ತವೆ.

ಈ ಸ್ಥಳದ ಮೌಲ್ಯವು ಕೇವಲ ಭೌತಿಕ ಮೂಲಸೌಕರ್ಯವನ್ನು ಮೀರಿ ವಿಸ್ತರಿಸಿದೆ. ಎಂಸಿ²+ ನವೋದ್ಯಮಗಳಿಗೆ ವಲಯ ತಜ್ಞರು, ತಾಂತ್ರಿಕ ಸಲಹೆಗಾರರು, ಕಾನೂನು ಸಲಹೆಗಾರರು, ಮತ್ತು ವಿಶೇಷ ಹಣಕಾಸು ಹಾಗೂ ಲೆಕ್ಕಪರಿಶೋಧನಾ (ಆಡಿಟ್) ಸಲಹೆಗಾರರನ್ನು ಒಳಗೊಂಡ ಸಮಗ್ರ ಬೆಂಬಲ ವ್ಯವಸ್ಥೆಯನ್ನು ಒದಗಿಸುತ್ತದೆ. ಇದರಿಂದ ಉದ್ಯಮಿಗಳಿಗೆ ತಂತ್ರಜ್ಞಾನ ಮತ್ತು ಉತ್ಪನ್ನ ಅಭಿವೃದ್ಧಿ, ಬೌದ್ಧಿಕ ಆಸ್ತಿ, ಒಪ್ಪಂದಗಳು ಮತ್ತು ನಿಯಂತ್ರಕ ಅಗತ್ಯತೆಗಳು, ಆರ್ಥಿಕ ಯೋಜನೆ, ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋಧನಾ ಸಿದ್ಧತೆ, ಅನುಸರಣೆ ಮತ್ತು ವ್ಯಾಪಾರ ರಚನೆಯಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ವೃತ್ತಿಪರ ಮಾರ್ಗದರ್ಶನ ಪಡೆಯಲು ಸಾಧ್ಯವಾಗುತ್ತದೆ.

ಔಪಚಾರಿಕ ಕಾರ್ಯಕ್ಷೇತ್ರಗಳ ಹೊರತಾಗಿ, ಅನೌಪಚಾರಿಕ ಸಂವಹನಗಳು ಮತ್ತು ನೆಟ್‌ವರ್ಕಿಂಗ್ ಅನ್ನು ಉತ್ತೇಜಿಸಲು ಸಂಪೂರ್ಣ ಸುಸಜ್ಜಿತ ಕೆಫೆಟೇರಿಯಾ ಮತ್ತು ಕೆಫೆ ಪ್ಯಾಂಟ್ರಿಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಉದ್ಯಮಿಗಳು ಬಿಡುವು ಪಡೆಯಲು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಅರ್ಥಪೂರ್ಣ ಸಹಯೋಗಗಳಾಗಿ ಬೆಳೆಯುವಂತಹ ಸಂಪರ್ಕಗಳನ್ನು ನಿರ್ಮಿಸಲು ಉತ್ತಮ ವಾತಾವರಣವನ್ನು ಒದಗಿಸುತ್ತದೆ.

ನವೋದ್ಯಮಗಳಿಗೆ ಕೇವಲ ಕೆಲಸ ಮಾಡುವ ಸ್ಥಳವನ್ನು ಮೀರಿದ ಸೌಲಭ್ಯಗಳನ್ನು ಪ್ರವೇಶಿಸಲು ಸಾಧ್ಯವಾಗುವಂತಹ ವಾತಾವರಣವನ್ನು ಸೃಷ್ಟಿಸುವುದು ಈ ಉಪಕ್ರಮದ ಹಿಂದಿನ ಆಶಯವಾಗಿದೆ. ಅಂದರೆ, ಅವರ ಪಯಣದ ವಿವಿಧ ಹಂತಗಳಲ್ಲಿ ಅಗತ್ಯವಿರುವ ಮೂಲಸೌಕರ್ಯ, ಪರಿಣತಿ, ಮಾರ್ಗದರ್ಶನ, ವೃತ್ತಿಪರ ಸಲಹೆ ಮತ್ತು ಸಂಪರ್ಕಗಳನ್ನು ಕಂಡುಕೊಳ್ಳಬಹುದಾದ ವೇದಿಕೆಯಾಗಿ ಇದನ್ನು ರೂಪಿಸಲಾಗಿದೆ.

ಗುವಾಹಟಿಯ ‘ಎನ್‌ಆರ್‌ಎಲ್’ ಸೆಂಟರ್‌ನಲ್ಲಿ ಎಂಸಿ²+ ಕೇಂದ್ರದ ಸ್ಥಾಪನೆಯು, ಗುವಾಹಟಿ ಮತ್ತು ಈಶಾನ್ಯ ಭಾರತದಲ್ಲಿ ನವೋದ್ಯಮ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಉದ್ಯಮಿಗಳು, ತಜ್ಞರು, ಹೂಡಿಕೆದಾರರು ಮತ್ತು ಉದ್ಯಮದ ಪಾಲುದಾರರನ್ನು ಒಗ್ಗೂಡಿಸಲಿದೆ. ಆ ಮೂಲಕ ಆಲೋಚನೆಗಳು ಕಲ್ಪನೆಯ ಹಂತದಿಂದ ಅಭಿವೃದ್ಧಿ, ಮೌಲ್ಯೀಕರಣ ಮತ್ತು ವಿಸ್ತರಣೆಯ ಹಂತಕ್ಕೆ ಸಾಗುವ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಇದು ಹೊಂದಿದೆ.

ಔಪಚಾರಿಕ ಉದ್ಘಾಟನೆಯು ನಾಳೆ, ಸೆಪ್ಟೆಂಬರ್ 10, 2026 ರಂದು ಗುವಾಹಟಿಯ ‘ಎನ್‌ಆರ್‌ಎಲ್‌’ ಕೇಂದ್ರದಲ್ಲಿ ನಡೆಯಲಿದೆ.

 

*****


(ಪ್ರಕಟಣೆ ಐ.ಡಿ.: 2308248) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Bengali-TR , Telugu