ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಅರಣ್ಯಗಳ ಕುರಿತ ಭಾರತ–ಜಪಾನ್ ಜಂಟಿ ಕಾರ್ಯಕಾರಿ ಗುಂಪಿನ 7ನೇ ಸಭೆ ಬೆಂಗಳೂರಿನಲ್ಲಿ ನಡೆಯಿತು

ಪ್ರಕಟಣಾ ದಿನಾಂಕ: 08 SEP 2026 5:02PM by PIB Bengaluru

ಅರಣ್ಯ ಕ್ಷೇತ್ರದಲ್ಲಿ ಸಹಕಾರಕ್ಕೆ ಸಂಬಂಧಿಸಿದ ಭಾರತ–ಜಪಾನ್ ಜಂಟಿ ಕಾರ್ಯಕಾರಿ ಗುಂಪಿನ (ಜೆಡಬ್ಲ್ಯೂಜಿ) 7ನೇ ಸಭೆ 2026ರ ಸೆಪ್ಟೆಂಬರ್ 8ರಂದು ಬೆಂಗಳೂರಿನಲ್ಲಿ ನಡೆಯಿತು. ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEFCC) ಹೆಚ್ಚುವರಿ ಮಹಾನಿರ್ದೇಶಕರಾದ (ಅರಣ್ಯ) ಶ್ರೀ ರಮೇಶ್ ಕುಮಾರ್ ಪಾಂಡೆ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು. ಜಪಾನ್ ಸರ್ಕಾರದ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಸಚಿವಾಲಯದ ಅರಣ್ಯ ಸಂಸ್ಥೆಯ ಉಪ ಮಹಾನಿರ್ದೇಶಕರಾದ ಶ್ರೀ ಶಿಮಿಜು ಕೊಟಾರೊ ಅವರು ಜಪಾನ್ ನಿಯೋಗದ ನೇತೃತ್ವ ವಹಿಸಿದ್ದರು.

ಸಭೆಯಲ್ಲಿ ಸಹಕಾರದ ಮೂರು ಪ್ರಮುಖ ಕ್ಷೇತ್ರಗಳ ಕುರಿತು ಚರ್ಚಿಸಲಾಯಿತು. ಅರಣ್ಯಗಳ ಹೊರಗಿನ ಮರಗಳು ವಿಷಯದಡಿ, ಅರಣ್ಯ ಪ್ರದೇಶಗಳ ಹೊರಗಿರುವ ಮರ ಸಂಪನ್ಮೂಲಗಳ ಮೌಲ್ಯಮಾಪನ, ನಿರ್ವಹಣೆ ಮತ್ತು ತಳಿ ಸುಧಾರಣೆಗೆ ಸಂಬಂಧಿಸಿದ ತಮ್ಮ ಅನುಭವಗಳನ್ನು ಎರಡೂ ದೇಶಗಳು ಹಂಚಿಕೊಂಡವು. ಅರಣ್ಯ ತಳಿಶಾಸ್ತ್ರ ವಿಷಯದಲ್ಲಿ ತಳಿಸಂಪನ್ಮೂಲಗಳ ಸಂರಕ್ಷಣೆ, ಮರಗಳ ತಳಿ ಅಭಿವೃದ್ಧಿ, ಸುಧಾರಿತ ನಾಟಿ ಸಾಮಗ್ರಿ ಮತ್ತು ಜರ್ಮ್‌ಪ್ಲಾಸಂ ಸಂರಕ್ಷಣೆಗೆ ಒತ್ತು ನೀಡಿ ಚರ್ಚಿಸಲಾಯಿತು. ಅರಣ್ಯ ಸ್ಟಾಕ್ (Forest Stack) ವಿಷಯದಡಿ, ಅರಣ್ಯ ದಾಸ್ತಾನು, ಅರಣ್ಯ ಸಂಪತ್ತಿನ ಮೌಲ್ಯಮಾಪನ ಹಾಗೂ ಜಿಯೋಸ್ಪೇಷಿಯಲ್ ಮತ್ತು ಮೇಲ್ವಿಚಾರಣಾ ತಂತ್ರಜ್ಞಾನಗಳ ಕುರಿತು ಎರಡೂ ದೇಶಗಳು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡವು.

2015ರಲ್ಲಿ ಸಹಿ ಮಾಡಲಾದ ಸಹಕಾರ ಒಪ್ಪಂದದ ಅಡಿಯಲ್ಲಿ 2027–2031ರ ಮಾರ್ಗಸೂಚಿಯನ್ನು ಎರಡೂ ದೇಶಗಳು ಅನುಮೋದಿಸಿದವು. ಅರಣ್ಯಗಳು, ಜೀವವೈವಿಧ್ಯ ಸಂರಕ್ಷಣೆ, ಸಂಶೋಧನೆ ಮತ್ತು ಸಾಮರ್ಥ್ಯ ನಿರ್ಮಾಣ ಕ್ಷೇತ್ರಗಳಲ್ಲಿ ಸಹಕಾರ ಹಾಗೂ ಸಂಬಂಧಗಳನ್ನು ಮತ್ತಷ್ಟು ಆಳಗೊಳಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು. 7ನೇ ಜಂಟಿ ಕಾರ್ಯಕಾರಿ ಗುಂಪಿನ ಸಭೆಯ ನಡಾವಳಿಗಳಿಗೆ ಸಹಿ ಹಾಕುವುದರೊಂದಿಗೆ ಸಭೆ ಮುಕ್ತಾಯಗೊಂಡಿತು.

ಕಾರ್ಯಕ್ರಮದ ಅಂಗವಾಗಿ, ಎರಡೂ ನಿಯೋಗಗಳು ಬೆಂಗಳೂರಿನ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗೆ ಭೇಟಿ ನೀಡಿ, ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದವು. ಇದಲ್ಲದೆ, ಸೆಪ್ಟೆಂಬರ್ 9ರಂದು ನಿಯೋಗಗಳು ಮೈಸೂರಿನ ಶ್ರೀಗಂಧದ ಕೃಷಿ-ಅರಣ್ಯ ತೋಟಗಳು, ಶ್ರೀಗಂಧದ ಡಿಪೋ ಹಾಗೂ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಲಿವೆ. ಬಳಿಕ ಸೆಪ್ಟೆಂಬರ್ 10ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿವೆ. ಈ ಕ್ಷೇತ್ರ ಭೇಟಿ ಕಾರ್ಯಕ್ರಮಗಳು ಖಾಸಗಿ ತೋಟಗಳಲ್ಲಿ ಶ್ರೀಗಂಧದ ಕೃಷಿ ಹಾಗೂ ವನ್ಯಜೀವಿ ಸಂರಕ್ಷಣಾ ಪದ್ಧತಿಗಳ ಕುರಿತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಒದಗಿಸುತ್ತವೆ.

 

*****

 


(ಪ್ರಕಟಣೆ ಐ.ಡಿ.: 2307932) ವಿಸಿಟರ್ ಕೌಂಟರ್ : 36
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Tamil , Malayalam