ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಪಣಜಿಯಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರೊಂದಿಗೆ ಗೋವಾಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿದರು


ಮೂರು ಹೊಸ ನ್ಯಾಯ ಸಂಹಿತೆಗಳು ಮತ್ತು ಐ ಸಿ ಜೆ ಎಸ್‌ ನ ಪರಿಣಾಮಕಾರಿ ಅನುಷ್ಠಾನದಿಂದಾಗಿ ಗೋವಾದಲ್ಲಿ ಶಿಕ್ಷೆಯ ಪ್ರಮಾಣವು ಈ ಹಿಂದಿನ ಶೇಕಡಾ 22 ರಿಂದ ಶೇಕಡಾ 53 ಕ್ಕೆ ಹೆಚ್ಚಳವಾಗಿದೆ

ಅನೇಕ ಪ್ರಕರಣಗಳಲ್ಲಿ, ನ್ಯಾಯಾಲಯಗಳು ಈಗ 6 ರಿಂದ 8 ತಿಂಗಳೊಳಗೆ ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗುತ್ತಿದೆ

ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಕರಾವಳಿ ಭದ್ರತೆಯನ್ನು ಕಾಯ್ದುಕೊಳ್ಳಲು ಗೋವಾ ಸರ್ಕಾರ ಮತ್ತು ರಾಜ್ಯ ಪೊಲೀಸರು ಮಾಡುತ್ತಿರುವ ಪ್ರಯತ್ನಗಳನ್ನು ಗೃಹ ಸಚಿವರು ಶ್ಲಾಘಿಸಿದರು

ಪ್ರಮುಖ ಪ್ರವೃತ್ತಿಗಳು ಮತ್ತು ಮಾದರಿಗಳು, ಅಪರಾಧಗಳ ಪರಸ್ಪರ ಸಂಪರ್ಕಗಳು, ಅಪರಾಧಿಗಳ ಅಂತರರಾಜ್ಯ ಸಂಚಾರ ಮತ್ತು ಕರಾವಳಿ ಭದ್ರತೆಯ ನಿರಂತರ ಮೇಲ್ವಿಚಾರಣೆಗೆ ಒತ್ತು ನೀಡಲಾಯಿತು

ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರ ತೆಗೆದುಕೊಂಡ ಎಲ್ಲಾ ಕ್ರಮಗಳು ದೇಶದಲ್ಲಿ ಗೋವಾ ಕಾನೂನು ಮತ್ತು ಸುವ್ಯವಸ್ಥೆಯ ವಿಷಯದಲ್ಲಿ ಅಗ್ರಸ್ಥಾನದಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು

ವಿಕಸಿತ ಭಾರತಕ್ಕಾಗಿ ಆಡಳಿತಾತ್ಮಕ ವಿಷಯಗಳು, ಸಾಮರ್ಥ್ಯ ವೃದ್ಧಿ ಮತ್ತು ಅಭಿವೃದ್ಧಿಯಲ್ಲಿ ಸಣ್ಣ ರಾಜ್ಯಗಳಿಗೆ ಬೆಂಬಲ ನೀಡಲು ಮೋದಿ ಸರ್ಕಾರ ಬದ್ಧವಾಗಿದೆ

ದೇಶದಲ್ಲೇ ಗೋವಾ ಮಾದರಿ ರಾಜ್ಯವಾಗುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ

ಪ್ರಕಟಣಾ ದಿನಾಂಕ: 06 SEP 2026 6:30PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಪಣಜಿಯಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರೊಂದಿಗೆ ಗೋವಾ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ ನಿರ್ದೇಶಕರು ಹಾಗೂ ಗೃಹ ವ್ಯವಹಾರಗಳ ಸಚಿವಾಲಯ, ಗೋವಾ ಸರ್ಕಾರ, ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಇತರ ಸಂಬಂಧಿತ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

CR5_0223.JPG.jpeg

ಸಭೆಯಲ್ಲಿ, ಗೋವಾ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಮಾಹಿತಿ ನೀಡಿದರು. ಮೂರು ಹೊಸ ನ್ಯಾಯ ಸಂಹಿತೆಗಳ ಅನುಷ್ಠಾನ, ಎನ್‌ ಡಿ ಪಿ ಎಸ್ ಗೆ ಸಂಬಂಧಿಸಿದ ವಿಷಯಗಳು, ಕರಾವಳಿ ಭದ್ರತೆ, ತಲೆಮರೆಸಿಕೊಂಡ ಅಪರಾಧಿಗಳ ವಿಷಯಗಳು, ವಿಪತ್ತು ನಿರ್ವಹಣೆ, ಪೊಲೀಸ್ ಆಧುನೀಕರಣ, ಶತ್ರು ಆಸ್ತಿಗಳ ನಿರ್ವಹಣೆ ಮತ್ತು ಅಕ್ರಮ ವಲಸಿಗರ, ಅದರಲ್ಲೂ ವಿಶೇಷವಾಗಿ ಅಪರಾಧಗಳು ಮತ್ತು ಮಾದಕ ದ್ರವ್ಯ ಅಪರಾಧಗಳಲ್ಲಿ ಭಾಗಿಯಾಗಿರುವವರ ಗಡೀಪಾರು ಮತ್ತು ಇತರ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸಲಾಯಿತು.

ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಕರಾವಳಿ ಭದ್ರತೆಯನ್ನು ಕಾಯ್ದುಕೊಳ್ಳಲು ಪ್ರಮುಖ ಉಪಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಗೋವಾ ಸರ್ಕಾರ ಮತ್ತು ರಾಜ್ಯ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದರು. ಈ ಪ್ರಯತ್ನಗಳು ಗೋವಾವನ್ನು 'ನಶಾ ಮುಕ್ತ' ಮಾಡುವಲ್ಲಿ ಮತ್ತು ಸೈಬರ್ ಅಪರಾಧಗಳನ್ನು ಯಶಸ್ವಿಯಾಗಿ ಎದುರಿಸುವಲ್ಲಿ ಕೊಡುಗೆ ನೀಡಿವೆ ಎಂದು ಅವರು ಹೇಳಿದರು. ಹೊಸ ಭದ್ರತಾ ಸವಾಲುಗಳಿಗೆ ಸಂಬಂಧಿಸಿದಂತೆ ಸಮಗ್ರ ಭದ್ರತಾ ಮೌಲ್ಯಮಾಪನವನ್ನು ಮಾಡುವಂತೆ ಶ್ರೀ ಶಾ ಅವರು ರಾಜ್ಯ ಸರ್ಕಾರ ಮತ್ತು ಎಲ್ಲಾ ಪಾಲುದಾರರಿಗೆ ಸಲಹೆ ನೀಡಿದರು. ಪ್ರಮುಖ ಪ್ರವೃತ್ತಿಗಳು ಮತ್ತು ಮಾದರಿಗಳು, ವಿವಿಧ ರೀತಿಯ ಅಪರಾಧಗಳ ಪರಸ್ಪರ ಸಂಪರ್ಕಗಳು, ಅಪರಾಧಿಗಳ ಅಂತರರಾಜ್ಯ ಸಂಚಾರ ಮತ್ತು ಕರಾವಳಿ ಭದ್ರತೆಯ ನಿರಂತರ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು. ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರ ತೆಗೆದುಕೊಂಡ ಎಲ್ಲಾ ಕ್ರಮಗಳು ದೇಶದಲ್ಲೇ ಗೋವಾ ಕಾನೂನು ಮತ್ತು ಸುವ್ಯವಸ್ಥೆಯ ವಿಷಯದಲ್ಲಿ ಅಗ್ರ ರಾಜ್ಯವಾಗುವುದನ್ನು ಖಚಿತಪಡಿಸಬೇಕು ಎಂದು ಶ್ರೀ ಶಾ ಹೇಳಿದರು.

2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಗುರಿಯನ್ನು ನನಸಾಗಿಸಲು ಸಣ್ಣ ರಾಜ್ಯಗಳಿಗೆ ಎಲ್ಲಾ ಆಡಳಿತಾತ್ಮಕ ವಿಷಯಗಳು, ಸಾಮರ್ಥ್ಯ ವೃದ್ಧಿ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳಲ್ಲಿ ಪೂರ್ಣ ಬೆಂಬಲ ಮತ್ತು ವೃತ್ತಿಪರ ನೆರವು ಸಿಗುವುದನ್ನು ಖಚಿತಪಡಿಸಿಕೊಳ್ಳಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ಗೋವಾ ರಾಜ್ಯವು ದೇಶದಲ್ಲೇ ಮಾದರಿಯಾಗುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ ಮತ್ತು ಭದ್ರತೆ ಹಾಗೂ ಅಭಿವೃದ್ಧಿಯ ಎಲ್ಲಾ ಗುರಿಗಳನ್ನು ಸಾಧಿಸುವ ಸುಂದರ ರಾಜ್ಯವು “ಭಾರತ ಮಾತೆಯ ತಿಲಕ”ವಾಗಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ರಾಜ್ಯದಲ್ಲಿ ಹಿಂಸಾತ್ಮಕ ಅಪರಾಧಗಳಲ್ಲಿ ಇಳಿಮುಖ ಪ್ರವೃತ್ತಿ ಕಂಡುಬರುತ್ತಿದೆ ಎಂದು ಗೋವಾ ಸರ್ಕಾರದ ಅಧಿಕಾರಿಗಳು ಕೇಂದ್ರ ಗೃಹ ಸಚಿವರಿಗೆ ತಿಳಿಸಿದರು. ಆದಾಗ್ಯೂ, ಸೈಬರ್ ಅಪರಾಧಗಳು, ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಅಪರಾಧಗಳು ಮತ್ತು ವಿದೇಶಿಯರಿಗೆ ಸಂಬಂಧಿಸಿದ ಉಲ್ಲಂಘನೆಗಳ ವಿರುದ್ಧ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕರಾವಳಿ ಭದ್ರತೆ, ಸೈಬರ್ ಅಪರಾಧಗಳು ಮತ್ತು ಮಾದಕ ದ್ರವ್ಯಗಳ ವಿಷಯಗಳಲ್ಲಿ ಗೋವಾ ಸರ್ಕಾರವು ಸಮಗ್ರವಾಗಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗೋವಾದ ಪೊಲೀಸ್ ಮಹಾನಿರ್ದೇಶಕರು ತಿಳಿಸಿದರು. ಮೂರು ಹೊಸ ನ್ಯಾಯ ಸಂಹಿತೆಗಳು ಮತ್ತು ಸಿ ಜೆ ಎಸ್ ಪರಿಣಾಮಕಾರಿ ಅನುಷ್ಠಾನದ ನಂತರ ರಾಜ್ಯದಲ್ಲಿ ಶಿಕ್ಷೆಯ ಪ್ರಮಾಣವು ಶೇಕಡಾ 22 ರಿಂದ ಶೇಕಡಾ 53ಕ್ಕೆ ಏರಿದೆ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದರು. ಅನೇಕ ಪ್ರಕರಣಗಳಲ್ಲಿ, ನ್ಯಾಯಾಲಯಗಳು ಈಗ 6 ರಿಂದ 8 ತಿಂಗಳೊಳಗೆ ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗುತ್ತಿದೆ ಎಂದು ಅವರು ತಿಳಿಸಿದರು.

ಗೋವಾವನ್ನು ಎಲ್ಲಾ ರಂಗಗಳಲ್ಲೂ ಮಾದರಿ ರಾಜ್ಯವನ್ನಾಗಿ ಮಾಡಲು ಕೇಂದ್ರ ಗೃಹ ಸಚಿವರ ಮಾರ್ಗದರ್ಶನದಲ್ಲಿ ಮತ್ತು ಕೇಂದ್ರ ಸರ್ಕಾರದೊಂದಿಗೆ ನಿಕಟ ಸಮನ್ವಯದೊಂದಿಗೆ ರಾಜ್ಯ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಗೋವಾ ಮುಖ್ಯಮಂತ್ರಿ ಭರವಸೆ ನೀಡಿದರು.

 

*****

 


(ಪ್ರಕಟಣೆ ಐ.ಡಿ.: 2307265) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Punjabi , Gujarati , Odia , Tamil