ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತೀಯ ಆರ್ಚರಿ ಸಂಘದ ‘ವಿಶ್ವ ಆರ್ಚರಿ ಪ್ಯಾರಾ ಸರಣಿ’ ಉದ್ಘಾಟನೆ
ಸೆಪ್ಟೆಂಬರ್ 5 ರಿಂದ 9 ರವರೆಗೆ ನಡೆಯಲಿರುವ ಈ ಸ್ಪರ್ಧೆಯು ಕ್ರೀಡಾಪಟುಗಳು ಮತ್ತು ಅಹಮದಾಬಾದ್ ಗೆ ಅತ್ಯಂತ ಸ್ಮರಣೀಯ ಸಂದರ್ಭವಾಗಲಿದೆ
ಈ ಕ್ರೀಡಾ ಕೇಂದ್ರದಲ್ಲಿರುವ ತರಬೇತಿ ಮತ್ತು ಮಾರ್ಗದರ್ಶನ ಸೌಲಭ್ಯಗಳನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು; ಈ ಕೇಂದ್ರವು ಭಾರತದ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ವಿಶ್ವದಾದ್ಯಂತದ ಕ್ರೀಡಾಪಟುಗಳಿಗೂ ಪ್ರಮುಖ ತರಬೇತಿ ಕೇಂದ್ರವಾಗಲಿದೆ
ಭಾರತವು ಎಲ್ಲಾ ರೀತಿಯ ಕ್ರೀಡೆಗಳ ತರಬೇತಿಯ ಕೇಂದ್ರವಾಗುವುದರ ಜೊತೆಗೆ, ಕ್ರೀಡಾ ಸೌಲಭ್ಯಗಳು ಮತ್ತು ಸಲಕರಣೆಗಳ ತಯಾರಿಕೆಯ ಪ್ರಮುಖ ಕೇಂದ್ರವಾಗಿಯೂ ಹೊರಹೊಮ್ಮಲಿದೆ
ಮುಂಬರುವ ದಿನಗಳಲ್ಲಿ, ಭಾರತವು ಕ್ರೀಡಾ ಎಂಜಿನಿಯರಿಂಗ್ ಮತ್ತು ಕ್ರೀಡಾ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲಿದೆ, ಜೊತೆಗೆ ಕ್ರೀಡಾ ಗಾಯಗಳ ಚಿಕಿತ್ಸೆ ಮತ್ತು ಪುನರ್ವಸತಿಯ ಪ್ರಮುಖ ವೈದ್ಯಕೀಯ ಕೇಂದ್ರವಾಗಲಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವನ್ನು ವಿಶ್ವದ ಅತಿದೊಡ್ಡ ಕ್ರೀಡಾ ಕೇಂದ್ರವನ್ನಾಗಿ ಮಾಡುವ ದೃಷ್ಟಿಕೋನದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ
ಭಾರತದ ಗುರಿ ಕೇವಲ ಗರಿಷ್ಠ ಸಂಖ್ಯೆಯ ಪದಕಗಳನ್ನು ಗೆಲ್ಲುವುದು ಮಾತ್ರವಲ್ಲ, ಒಲಿಂಪಿಕ್ಸ್, ಏಷ್ಯನ್ ಕ್ರೀಡಾಕೂಟ, ಕಾಮನ್‌ವೆಲ್ತ್ ಕ್ರೀಡಾಕೂಟ, ಪೋಲಿಸ್ ಕ್ರೀಡಾಕೂಟ ಮತ್ತು ಇತರ ಸ್ಪರ್ಧೆಗಳಲ್ಲಿ ಸೇರ್ಪಡೆಯಾಗಿರುವ ಎಲ್ಲಾ ಕ್ರೀಡೆಗಳನ್ನು ಬಲಪಡಿಸುವುದಾಗಿದೆ
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ‘ವಿಶ್ವ ಆರ್ಚರಿ ಪ್ಯಾರಾ ಸರಣಿ’ ಯಲ್ಲಿ ಭಾಗವಹಿಸುತ್ತಿರುವ 19 ದೇಶಗಳ 108 ಕ್ರೀಡಾಪಟುಗಳಿಗೆ ತಮ್ಮ ಶುಭಾಶಯಗಳನ್ನು ಕೋರಿದರು “ನೀವು ಭಾರತಕ್ಕೆ ಬಂದಿದ್ದೀರಿ, ಇದರ ನಾಗರಿಕತೆಯ ಸಂಸ್ಕೃತಿಯು 'ವಸುಧೈವ ಕುಟುಂಬಕಂ' ಎಂಬ ಭಾವನೆಯಲ್ಲಿ ಬೇರೂರಿದೆ”
2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಶತಮಾನೋತ್ಸವದ ಆವೃತ್ತಿಯಾಗಲಿದ್ದು, ಅಹಮದಾಬಾದ್ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ
ಅಹಮದಾಬಾದ್ 2036ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ತನ್ನ ಬಿಡ್ ಅನ್ನು ಸಲ್ಲಿಸಿದೆ ಮತ್ತು 2036ರ ಒಲಿಂಪಿಕ್ಸ್ ಕೂಡ ಅಹಮದಾಬಾದ್ ನಲ್ಲೇ ನಡೆಯಲಿದೆ ಎಂಬ ಭರವಸೆ ನಮಗಿದೆ
ಚಾಂಪಿಯನ್ ಗಳು ಕೇವಲ ಆಟಗಳು, ಅಭ್ಯಾಸ ಅಥವಾ ತರಬೇತಿಯಿಂದ ಮಾತ್ರ ರೂಪುಗೊಳ್ಳುವುದಿಲ್ಲ; ಅವರು ಗೆಲ್ಲುವ ಬಯಕೆ ಮತ್ತು ನಿರಂತರ ಪರಿಶ್ರಮದಿಂದ ರೂಪುಗೊಳ್ಳುತ್ತಾರೆ; ಗೆಲ್ಲುವ ಕ್ರೀಡಾಪಟುವಿನ ಉತ್ಸಾಹ, ಸಮರ್ಪಣೆ ಮತ್ತು ದೃಢಸಂಕಲ್ಪವೇ ಚಾಂಪಿಯನ್ ಆಗಲು ನಿಜವಾದ ಅಡಿಪಾಯವಾಗಿದೆ
ಪ್ರಕಟಣಾ ದಿನಾಂಕ:
04 SEP 2026 8:19PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತೀಯ ಆರ್ಚರಿ ಸಂಘದ ‘ವಿಶ್ವ ಆರ್ಚರಿ ಪ್ಯಾರಾ ಸರಣಿ’ ಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 5 ರಿಂದ 9, 2026 ರವರೆಗೆ ನಡೆಯಲಿರುವ ಈ ಸ್ಪರ್ಧೆಯು ಕ್ರೀಡಾಪಟುಗಳು ಮತ್ತು ಅಹಮದಾಬಾದ್ ಗೆ ಅತ್ಯಂತ ಸ್ಮರಣೀಯ ಸಂದರ್ಭವಾಗಲಿದೆ ಎಂದು ಹೇಳಿದರು.
ಅಹಮದಾಬಾದ್, ಗುಜರಾತ್ ಮತ್ತು ಭಾರತವು ಮುಂಬರುವ ದಿನಗಳಲ್ಲಿ ಕ್ರೀಡಾ ಪ್ರಪಂಚದ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮಲಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತವು ಎಲ್ಲಾ ರೀತಿಯ ಕ್ರೀಡೆಗಳ ತರಬೇತಿಯ ಕೇಂದ್ರವಾಗುವುದರ ಜೊತೆಗೆ, ಕ್ರೀಡಾ ಸೌಲಭ್ಯಗಳು ಮತ್ತು ಸಲಕರಣೆಗಳ ತಯಾರಿಕೆಯ ಕೇಂದ್ರವಾಗಿಯೂ ಹೊರಹೊಮ್ಮಲಿದೆ. ಈ ಸಮಗ್ರ ದೃಷ್ಟಿಕೋನದೊಂದಿಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ನಾವು ಭಾರತವನ್ನು ವಿಶ್ವದ ಅತಿದೊಡ್ಡ ಕ್ರೀಡಾ ಕೇಂದ್ರವನ್ನಾಗಿ ಮಾಡುವತ್ತ ಮುನ್ನಡೆಯುತ್ತಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಗುರಿ ಕೇವಲ ಗರಿಷ್ಠ ಸಂಖ್ಯೆಯ ಪದಕಗಳನ್ನು ಗೆಲ್ಲುವುದು ಮಾತ್ರವಲ್ಲ, ಒಲಿಂಪಿಕ್ಸ್, ಏಷ್ಯನ್ ಕ್ರೀಡಾಕೂಟ, ಕಾಮನ್‌ವೆಲ್ತ್ ಕ್ರೀಡಾಕೂಟ, ಪೋಲಿಸ್ ಕ್ರೀಡಾಕೂಟ ಮತ್ತು ಇತರ ಸ್ಪರ್ಧೆಗಳಲ್ಲಿ ಸೇರ್ಪಡೆಯಾಗಿರುವ ಎಲ್ಲಾ ಕ್ರೀಡೆಗಳನ್ನು ಬಲಪಡಿಸುವುದಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಇಲ್ಲಿ ಲಭ್ಯವಿರುವ ಅತ್ಯಾಧುನಿಕ ತರಬೇತಿ ಮತ್ತು ಮಾರ್ಗದರ್ಶನ ಸೌಲಭ್ಯಗಳು ಅಹಮದಾಬಾದ್, ಗುಜರಾತ್ ಅಥವಾ ಭಾರತಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ; ಬದಲಾಗಿ, ಅಂತರರಾಷ್ಟ್ರೀಯ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಸೌಲಭ್ಯವು ಭಾರತದ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ವಿಶ್ವದಾದ್ಯಂತದ ಕ್ರೀಡಾಪಟುಗಳಿಗೂ ಪ್ರಮುಖ ತರಬೇತಿ ಕೇಂದ್ರವಾಗಲಿದೆ. ಮುಂಬರುವ ದಿನಗಳಲ್ಲಿ, ಭಾರತ ಮತ್ತು ಗುಜರಾತ್ ಕ್ರೀಡಾ ಗಾಯಗಳ ಚಿಕಿತ್ಸೆ ಮತ್ತು ಆರೈಕೆ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಕೇಂದ್ರಗಳಾಗಿ ಹೊರಹೊಮ್ಮಲಿವೆ ಎಂದು ಅವರು ಹೇಳಿದರು.
ಭೂತಾನ್, ಬ್ರಿಟನ್, ಚೀನಾ, ಬಾಂಗ್ಲಾದೇಶ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ ಮತ್ತು ಅಮೆರಿಕ ಸೇರಿದಂತೆ 19 ದೇಶಗಳ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ʼವಿಶ್ವ ಆರ್ಚರಿ ಪ್ಯಾರಾ ಸರಣಿʼಯಲ್ಲಿ ‘ಭಾಗವಹಿಸುತ್ತಿರುವ 19 ದೇಶಗಳ 108 ಕ್ರೀಡಾಪಟುಗಳಿಗೆ ಕೇಂದ್ರ ಗೃಹ ಸಚಿವರು ತಮ್ಮ ಶುಭಾಶಯಗಳನ್ನು ಕೋರಿದರು. “ನೀವು ಭಾರತಕ್ಕೆ ಬಂದಿದ್ದೀರಿ, ಇದರ ನಾಗರಿಕತೆಯ ಸಂಸ್ಕೃತಿಯು 'ವಸುಧೈವ ಕುಟುಂಬಕಂ' ಎಂಬ ಭಾವನೆಯಲ್ಲಿ ಬೇರೂರಿದೆ” ಎಂದು ಅವರು ಹೇಳಿದರು. ಹರ್ವಿಂದರ್ ಸಿಂಗ್, ಶೀತಲ್ ದೇವಿ, ರಾಕೇಶ್ ಕುಮಾರ್, ಶ್ಯಾಮ್ ಸುಂದರ್ ಸ್ವಾಮಿ ಮತ್ತು ಪಾಯಲ್ ನಾಗ್ ಅವರಂತಹ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.

2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಶತಮಾನೋತ್ಸವದ ಆವೃತ್ತಿಯಾಗಲಿದ್ದು, ಅಹಮದಾಬಾದ್ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಅಹಮದಾಬಾದ್ 2036 ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ತನ್ನ ಬಿಡ್ ಅನ್ನು ಸಲ್ಲಿಸಿದೆ ಮತ್ತು 2036 ರ ಒಲಿಂಪಿಕ್ಸ್ ಕೂಡ ಅಹಮದಾಬಾದ್ ನಲ್ಲೇ ನಡೆಯಲಿದೆ ಎಂಬ ಭರವಸೆ ನಮಗಿದೆ. ಗುಜರಾತ್ 2025 ಮತ್ತು 2026 ರ ನಡುವೆ ಸುಮಾರು 10 ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿದೆ ಎಂದು ಶ್ರೀ ಶಾ ಹೇಳಿದರು. ಈ ಕ್ರೀಡಾಕೂಟಗಳು ಭಾಗವಹಿಸುವ ಕ್ರೀಡಾಪಟುಗಳಿಗೆ ಅಹಮದಾಬಾದ್, ಗುಜರಾತ್ ಮತ್ತು ಭಾರತವನ್ನು ಅನುಭವಿಸಲು ಮತ್ತು ತಿಳಿದುಕೊಳ್ಳಲು ಅವಕಾಶವನ್ನು ಒದಗಿಸುತ್ತವೆ. ಚಾಂಪಿಯನ್ ಗಳು ಕೇವಲ ಆಟಗಳು, ಅಭ್ಯಾಸ ಮತ್ತು ತರಬೇತಿಯಿಂದ ಮಾತ್ರ ರೂಪುಗೊಳ್ಳುವುದಿಲ್ಲ, ಬದಲಾಗಿ ಕ್ರೀಡಾಪಟುವಿನ ಗೆಲ್ಲುವ ಬಯಕೆಯಿಂದ ರೂಪುಗೊಳ್ಳುತ್ತಾರೆ ಎಂದು ಅವರು ಹೇಳಿದರು.
*****
(ಪ್ರಕಟಣೆ ಐ.ಡಿ.: 2307045)
ವಿಸಿಟರ್ ಕೌಂಟರ್ : 4