ರಾಜ್ಯಸಭಾ ಕಾರ್ಯಾಲಯ
azadi ka amrit mahotsav

ಭಾರತದ ಉಪರಾಷ್ಟ್ರಪತಿಯವರು ಸೆಷೆಲ್ಸ್ ನ್ಯಾಷನಲ್ ಅಸೆಂಬ್ಲಿಯ ಸ್ಪೀಕರ್ ನೇತೃತ್ವದ ಸೆಷೆಲ್ಸ್ ಸಂಸದೀಯ ನಿಯೋಗವನ್ನು ಭೇಟಿಯಾದರು

ಪ್ರಕಟಣಾ ದಿನಾಂಕ: 03 SEP 2026 3:03PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ನವದೆಹಲಿಯ ಸಂಸತ್ ಭವನದಲ್ಲಿ ಸೆಷೆಲ್ಸ್ ನ್ಯಾಷನಲ್ ಅಸೆಂಬ್ಲಿಯ ಸ್ಪೀಕರ್ ಗೌರವಾನ್ವಿತ ಶ್ರೀಮತಿ ಅಜರೆಲ್ ಎರ್ನೆಸ್ಟಾ ಅವರ ನೇತೃತ್ವದ   ಸೆಷೆಲ್ಸ್ ಗಣರಾಜ್ಯದ  ಸಂಸದೀಯ ನಿಯೋಗವನ್ನು ಭೇಟಿಯಾದರು.

ಸ್ಪೀಕರ್ ಮತ್ತು ನಿಯೋಗದ ಸದಸ್ಯರನ್ನು ಸ್ವಾಗತಿಸಿದ ಉಪರಾಷ್ಟ್ರಪತಿಯವರು, ಸೆಷೆಲ್ಸ್ ದೇಶದ 50ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಅಲ್ಲಿನ ಸರ್ಕಾರ ಮತ್ತು ಜನತೆಗೆ ತಿಳಿಸಿದರು. ಸೆಷೆಲ್ಸ್ ನ್ಯಾಷನಲ್ ಅಸೆಂಬ್ಲಿಯ ಮೊದಲ ಮಹಿಳಾ ಸ್ಪೀಕರ್ ಆದ ಗೌರವಾನ್ವಿತ ಶ್ರೀಮತಿ ಅಜರೆಲ್ ಎರ್ನೆಸ್ಟಾ ಅವರನ್ನು   ಅಭಿನಂದಿಸಿದರು ಹಾಗೂ ಜನವರಿ 2026 ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಸಂಸತ್ತಿನ ಸ್ಪೀಕರ್ ಮತ್ತು ಅಧ್ಯಕ್ಷತೆ ವಹಿಸುವ ಅಧಿಕಾರಿಗಳ (ಸಿಎಸ್ ಪಿ ಒ ಸಿ) 28ನೇ ಸಮ್ಮೇಳನದಲ್ಲಿ ಅವರ ಭಾಗವಹಿಸುವಿಕೆಯನ್ನು ಸ್ಮರಿಸಿದರು.

ಎರಡೂ ದೇಶಗಳ ನಡುವಿನ ನಿಕಟ ಮತ್ತು ಸುದೀರ್ಘ ಸಂಬಂಧವನ್ನು ಸ್ಮರಿಸಿದ ಉಪರಾಷ್ಟ್ರಪತಿಯವರು, ಸೆಷೆಲ್ಸ್ ತಮ್ಮಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಹೇಳಿದರು. ಅಕ್ಟೋಬರ್ 2025 ರಲ್ಲಿ ಅಧ್ಯಕ್ಷ ಗೌರವಾನ್ವಿತ ಡಾ. ಪ್ಯಾಟ್ರಿಕ್ ಹರ್ಮಿನಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕಾಗಿ ಸೆಷೆಲ್ಸ್ ಗೆ ಭೇಟಿ ನೀಡಿದ್ದನ್ನು ಅವರು ಪ್ರೀತಿಯಿಂದ ನೆನಪಿಸಿಕೊಂಡರು, ಇದು ಭಾರತದ ಉಪರಾಷ್ಟ್ರಪತಿಯಾಗಿ ಅವರ ಮೊದಲ ವಿದೇಶಿ ಭೇಟಿಯಾಗಿತ್ತು. ಅವರು ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಮತ್ತು ಉಪರಾಷ್ಟ್ರಪತಿ ಸೆಬಾಸ್ಟಿಯನ್ ಪಿಳ್ಳೈ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು ಮತ್ತು ಸೆಷೆಲ್ಸ್ ಜನರು ನೀಡಿದ ಆತ್ಮೀಯತೆ ಹಾಗೂ ಆತಿಥ್ಯವನ್ನು ಬಣ್ಣಿಸಿದರು.

ದ್ವಿಪಕ್ಷೀಯ ಸಂಬಂಧದಲ್ಲಿ 2026ರ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಉಪರಾಷ್ಟ್ರಪತಿಯವರು, ಈ ವರ್ಷದಲ್ಲಿ ಎರಡೂ ದೇಶಗಳು ಎರಡು ಸರ್ಕಾರಿ ಔಪಚಾರಿಕ ಭೇಟಿಗಳಿಗೆ ಸಾಕ್ಷಿಯಾದವು ಎಂದು ಹೇಳಿದರು . ಭಾರತದ ಪ್ರಧಾನಮಂತ್ರಿಯವರು ಜೂನ್ 2026ರಲ್ಲಿ ಸೆಷೆಲ್ಸ್ ನ 50ನೇ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು, ಹಾಗೆಯೇ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಅವರು ಫೆಬ್ರವರಿ 2026ರಲ್ಲಿ ಭಾರತಕ್ಕೆ ರಾಜ್ಯ ಭೇಟಿ ನೀಡಿದ್ದರು. ಉಪರಾಷ್ಟ್ರಪತಿ ಸೆಬಾಸ್ಟಿಯನ್ ಪಿಳ್ಳೈ ಅವರು ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸಲು ಫೆಬ್ರವರಿ 2026ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು ಎಂಬುದನ್ನು ಅವರು ಉಲ್ಲೇಖಿಸಿದರು. ಎರಡೂ ದೇಶಗಳು ಈ ವರ್ಷ 50 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಆಚರಿಸುತ್ತಿವೆ ಎಂದು ಉಪರಾಷ್ಟ್ರಪತಿಗಳು ಒತ್ತಿಹೇಳಿದರು ಮತ್ತು ಸೆಷೆಲ್ಸ್ ಸಂಸದೀಯ ನಿಯೋಗದ ಪ್ರಸ್ತುತ ಭೇಟಿಯು ಬೆಳೆಯುತ್ತಿರುವ ದ್ವಿಪಕ್ಷೀಯ ಪಾಲುದಾರಿಕೆಗೆ ಮತ್ತಷ್ಟು ವೇಗವನ್ನು ನೀಡುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಫೆಬ್ರವರಿ 2026ರಲ್ಲಿ, ಭಾರತವು ಸೆಷೆಲ್ಸ್ಗೆ 175 ದಶಲಕ್ಷ ಅಮೆರಿಕನ್ ಡಾಲರ್ ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿತು, ಇದು ಎರಡೂ ದೇಶಗಳ ನಡುವಿನ ಅಭಿವೃದ್ಧಿ ಮತ್ತು ಭದ್ರತಾ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಉಪರಾಷ್ಟ್ರಪತಿಗಳು ಹೇಳಿದರು.

ರಾಜ್ಯಸಭಾ ಸಚಿವಾಲಯವು ಆಧುನೀಕರಣ ಮತ್ತು ಡಿಜಿಟಲೀಕರಣದತ್ತ ಕೈಗೊಂಡಿರುವ ಉಪಕ್ರಮಗಳನ್ನು ಉಪರಾಷ್ಟ್ರಪತಿಯವರು ಹಂಚಿಕೊಂಡರು. ಸಂಸದೀಯ ಕಾರ್ಯನಿರ್ವಹಣೆಯ ಹೆಚ್ಚುತ್ತಿರುವ ಡಿಜಿಟಲೀಕರಣ, ಪ್ರಕ್ರಿಯೆಗಳ ಬಹುಭಾಷಾ ಸಮಕಾಲೀನ ಅನುವಾದ, ಸಂಸದೀಯ ಪ್ರಕ್ರಿಯೆಗಳನ್ನು ಕಾಗದರಹಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸುವ ಪ್ರಯತ್ನಗಳು, ಸೈಬರ್ ಭದ್ರತೆಯಲ್ಲಿ ನಿಯಮಿತ ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳು ಮತ್ತು ಸಂಸದೀಯ ಪಠ್ಯಗಳ ಡಿಜಿಟಲ್ ಆರ್ಕೈವ್ ಗಳ ರಚನೆಯನ್ನು ಅವರು ಉಲ್ಲೇಖಿಸಿದರು. ಸೆಷೆಲ್ಸ್ ನ್ಯಾಷನಲ್ ಅಸೆಂಬ್ಲಿಯೊಂದಿಗೆ ತನ್ನ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳಲು ಭಾರತದ ಸಿದ್ಧತೆಯನ್ನು ಅವರು ತಿಳಿಸಿದರು ಮತ್ತು ಸೆಷೆಲ್ಸ್ ನ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಅಧ್ಯಯನಕ್ಕಾಗಿ ಮಾಡುವ ಭೇಟಿಗಳು ಮತ್ತು  ಅವಶ್ಯಕತೆಗೆ ತಕ್ಕಂತೆ ಮಾಡಿದ ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳನ್ನು ಆಯೋಜಿಸಲು ಇಚ್ಛೆ ವ್ಯಕ್ತಪಡಿಸಿದರು.

ಜನರ ನಡುವಿನ ಸಂಬಂಧಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಉಪರಾಷ್ಟ್ರಪತಿಯವರು, ಸೆಷೆಲ್ಸ್ನಲ್ಲಿರುವ ಭಾರತೀಯ ಮೂಲದವರ, ವಿಶೇಷವಾಗಿ ಗುಜರಾತಿ ಮತ್ತು ತಮಿಳು ಸಮುದಾಯಗಳ ಕೊಡುಗೆಯನ್ನು ಹೊಗಳಿದರು, ಅವರು ಉಭಯ ದೇಶಗಳ ನಡುವಿನ ಸ್ನೇಹದ ಶಾಶ್ವತ ಸೇತುವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಸೆಷೆಲ್ಸ್ ನ್ಯಾಷನಲ್ ಅಸೆಂಬ್ಲಿಯ ಸ್ಪೀಕರ್ ಅವರು ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಾರೆ ಎಂಬುದನ್ನು ಉಪರಾಷ್ಟ್ರಪತಿಯವರು ಹೇಳುತ್ತಾ ಯೋಗವು ಭಾರತ ಮತ್ತು ಸೆಷೆಲ್ಸ್ ನಡುವಿನ ನಿಕಟ ಜನರ ನಡುವಿನ ಸಂಬಂಧದ ಪ್ರಬಲ ಸಂಕೇತವಾಗಿದೆ ಎಂದು ಹೇಳಿದರು. ಮುಂಬರುವ ವರ್ಷಗಳಲ್ಲಿ ಎರಡೂ ಸಂಸದೀಯ ಸಂಸ್ಥೆಗಳ ನಡುವೆ ನಿರಂತರ ತೊಡಗಿಸಿಕೊಳ್ಳುವಿಕೆ ಮತ್ತು ನಿಕಟ ಸಹಕಾರವನ್ನು ಅವರು ಎದುರು ನೋಡುತ್ತಿರುವುದಾಗಿ ಹೇಳಿದರು. ಸ್ಪೀಕರ್ ಮತ್ತು ನಿಯೋಗದ ಸದಸ್ಯರಿಗೆ ಭಾರತದಲ್ಲಿ ಆಹ್ಲಾದಕರ ಮತ್ತು ಫಲಪ್ರದ ವಾಸ್ತವ್ಯವನ್ನು ಅವರು ಹಾರೈಸಿದರು.

 

*****


(ಪ್ರಕಟಣೆ ಐ.ಡಿ.: 2306386) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati , Tamil