ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತದ ಜಾಗತಿಕ ವ್ಯಾಪಾರ ಹೆಜ್ಜೆಗುರುತನ್ನು ವಿಸ್ತರಿಸಲು ರಾಷ್ಟ್ರವ್ಯಾಪಿ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿ ಎ) ಬಳಕೆ ಜಾರಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಕರೆ
ಸುಮಾರು $60 ಟ್ರಿಲಿಯನ್ ಜಿಡಿಪಿ ಹೊಂದಿರುವ ಆರ್ಥಿಕತೆಗಳನ್ನು ವ್ಯಾಪಿಸಿರುವ ಭಾರತದ ಒಂಬತ್ತು ಎಫ್ ಟಿ ಎಗಳು ಜಾಗತಿಕ ವ್ಯಾಪಾರದ ಸುಮಾರು ಮೂರನೇ ಎರಡರಷ್ಟು ಭಾಗಕ್ಕೆ ಆದ್ಯತೆಯ ಪ್ರವೇಶ ಒದಗಿಸುತ್ತವೆ: ಶ್ರೀ ಗೋಯಲ್
ಮುಂಬರುವ ಎಫ್ ಟಿ ಎಗಳು ಮತ್ತು ಮಾರುಕಟ್ಟೆ ಲಭ್ಯತೆ ಹೆಚ್ಚಳ ಮಾಡುವ ಪ್ರಯತ್ನಗಳನ್ನು ಒಳಗೊಂಡಿದೆ, ಭಾರತವು ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ದರದಲ್ಲಿ ಜಾಗತಿಕ ವ್ಯಾಪಾರದ ಶೇ.75 ಪ್ರವೇಶಕ್ಕೆ ಅವಕಾಶ
ಏಪ್ರಿಲ್-ಜುಲೈ ಅವಧಿಯಲ್ಲಿ ಸುಮಾರು $317 ಶತಕೋಟಿ ತಲುಪಿದ ಭಾರತದ ರಫ್ತ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ $36-37 ಶತಕೋಟಿ ಹೆಚ್ಚಳ
ಎಫ್ ಟಿ ಎ ವ್ಯಾಪ್ತಿಗೆ ಪ್ರತಿಯೊಂದು ಜಿಲ್ಲೆ, ಎಂಎಸ್ ಎಂಇ, ವ್ಯಾಪಾರಿ, ಉದ್ಯಮಿ, ನವೋದ್ಯಮ ಮತ್ತು ಮಹಿಳಾ ಉದ್ಯಮಿಗಳನ್ನು ತರಲು ಕರೆ
ಪ್ರಕಟಣಾ ದಿನಾಂಕ:
03 SEP 2026 1:56PM by PIB Bengaluru
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಇಂದು ವಿಶ್ವಾದ್ಯಂತ ಭಾರತದ ವ್ಯಾಪಾರವನ್ನು ವಿಸ್ತರಿಸಲು ಮತ್ತು ವರ್ಧಿತ ಮಾರುಕಟ್ಟೆ ಪ್ರವೇಶದ ಪ್ರಯೋಜನಗಳನ್ನು ಹಾಗೂ ದೇಶಾದ್ಯಂತ ವ್ಯವಹಾರಗಳನ್ನು ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಮುಕ್ತ ವ್ಯಾಪಾರ ಒಪ್ಪಂದಗಳ (ಎಫ್ ಟಿ ಎ)ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಕೇಂದ್ರೀಕೃತ, ಸಮಗ್ರ ಮತ್ತು ರಾಷ್ಟ್ರವ್ಯಾಪಿ ಪ್ರಯತ್ನಕ್ಕೆ ಕರೆ ನೀಡಿದ್ದಾರೆ. ನವದೆಹಲಿಯಲ್ಲಿಂದು ನಡೆದ "ಎಫ್ ಟಿಎ ಗಳನ್ನು ಔಟ್ರೀಚ್ ಪ್ರೋಗ್ರಾಂ ಆಗಿ ಬಳಸಿಕೊಳ್ಳುವುದು" ಎಂಬ ರಾಷ್ಟ್ರೀಯ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಶ್ರೀ ಗೋಯಲ್, ಭಾರತದ ವಿಸ್ತರಿಸುತ್ತಿರುವ ಎಫ್ ಟಿ ಎ ಜಾಲವನ್ನು ದೇಶಾದ್ಯಂತ ವ್ಯವಹಾರಗಳಿಗೆ ಹೆಚ್ಚಿನ ರಫ್ತು ಅವಕಾಶಗಳಾಗಿ ಪರಿವರ್ತಿಸಲು ಸಂಘಟಿತ ಪ್ರಯತ್ನದ ಅಗತ್ಯವನ್ನು ಒತ್ತಿ ಹೇಳಿದರು.
ಈ ಉಪಕ್ರಮವು ದೇಶಾದ್ಯಂತ ವೇಗವಾಗಿ ಬೇರೂರಬೇಕು ಮತ್ತು ಎಲ್ಲಾ 780 ಜಿಲ್ಲೆಗಳಲ್ಲಿ, ದೊಡ್ಡ ಮತ್ತು ಸಣ್ಣ, ಕೊನೆಯ ವ್ಯಕ್ತಿ, ಚಿಕ್ಕ ಉದ್ಯಮಿ, ವ್ಯಾಪಾರಿ, ಉದ್ಯಮಿ, ನವೋದ್ಯಮ ಮತ್ತು ಮಹಿಳಾ ಉದ್ಯಮಿಗಳನ್ನು ತಲುಪಬೇಕು ಎಂದು ಶ್ರೀ ಗೋಯಲ್ ಹೇಳಿದರು. ಭಾರತವನ್ನು ಹೆಚ್ಚಾಗಿ ಆಂತರಿಕವಾಗಿ ನೋಡುವ ದೇಶೀಯ ಆರ್ಥಿಕತೆಯಿಂದ ಅಂತಾರಾಷ್ಟ್ರೀಯ ಮಹತ್ವದ ಪಾಲುದಾರನನ್ನಾಗಿ ಪರಿವರ್ತಿಸುವ ದೊಡ್ಡ ಉದ್ದೇಶವನ್ನು ಸಾಧಿಸುವಲ್ಲಿ ದೊಡ್ಡ ಅಥವಾ ಸಣ್ಣ ಪ್ರತಿಯೊಂದು ಕೊಡುಗೆ ಅಮೂಲ್ಯವಾಗಿರುತ್ತದೆ ಎಂದು ಅವರು ಹೇಳಿದರು.
ದಿನವಿಡೀ ನಡೆದ ಈ ಕಾರ್ಯಾಗಾರವು ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ರಫ್ತು ಉತ್ತೇಜನಾ ಮಂಡಳಿಗಳು ಮತ್ತು ಕೈಗಾರಿಕಾ ಸಂಘಗಳ ಹಿರಿಯ ಅಧಿಕಾರಿಗಳನ್ನು ಒಗ್ಗೂಡಿಸಿತು. ಭಾರತದ ವಿಸ್ತರಿಸುತ್ತಿರುವ ಮುಕ್ತ ವ್ಯಾಪಾರ ಒಪ್ಪಂದಗಳ ಜಾಲವನ್ನು ಭಾರತೀಯ ರಫ್ತುದಾರರಿಗೆ, ವಿಶೇಷವಾಗಿ ಎಂಎಸ್ ಎಂಇಗಳು ಮತ್ತು ಮೊದಲ ಬಾರಿಗೆ ರಫ್ತು ಮಾಡುವವರಿಗೆ ಅಳೆಯಬಹುದಾದ ಫಲಿತಾಂಶಗಳಾಗಿ ಪರಿವರ್ತಿಸುವ ಉದ್ದೇಶವನ್ನು ಇದು ಹೊಂದಿತ್ತು.
ಭಾರತವು ತನ್ನ ಕೊಡುಗೆಗಳಿಗಾಗಿ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟ ಮತ್ತು ಗೌರವಿಸಲ್ಪಡುವ ಆರ್ಥಿಕತೆಯಾಗಬೇಕು ಮತ್ತು ವಿಶ್ವದ ವಿಶ್ವಾಸಾರ್ಹ ಪಾಲುದಾರನಾಗಬೇಕು ಎಂದು ಸಚಿವರು ಹೇಳಿದರು. ಈ ವಿಶ್ವಾಸವು ಮೌಲ್ಯವಾಗಿ ರೂಪಾಂತರಗೊಳ್ಳಬೇಕು ಮತ್ತು ಈ ಮೌಲ್ಯ ಪ್ರತಿಪಾದನೆಯು 2047ರ ವೇಳೆಗೆ ಭಾರತವನ್ನು $30 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ದೇಶಾದ್ಯಂತದ ಸಾಮೂಹಿಕ ಪ್ರಯತ್ನಗಳಿಂದ ಹೊರಹೊಮ್ಮಬೇಕು, ಅಂತಾರಾಷ್ಟ್ರೀಯ ವ್ಯಾಪಾರದ ದೊಡ್ಡ ಪಾಲನ್ನು ಹೊಂದಿರಬೇಕು ಎಂದು ಅವರು ಹೇಳಿದರು.
ಭಾರತವು ತನ್ನ ಆರ್ಥಿಕ ಪಯಣದ ಪ್ರಮುಖ ಹಂತದ ಮೂಲಕ ಹಾದುಹೋಗುತ್ತಿದೆ ಎಂದು ಶ್ರೀ ಗೋಯಲ್ ಹೇಳಿದರು ಮತ್ತು ಸ್ಥಿರ ಬೆಲೆಗಳಲ್ಲಿ ಮೊದಲ ತ್ರೈಮಾಸಿಕದಲ್ಲಿ ಶೇ.7.8 ರಷ್ಟು ಜಿಡಿಪಿ ಪ್ರಗತಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಜಗತ್ತಿನಾದ್ಯಂತ ಅನಿಶ್ಚಿತತೆ ಮತ್ತುಭಾರಿ ಪ್ರಕ್ಷುಬ್ಧತೆಯ ನಡುವೆ ಶೇ. 7.8ರಷ್ಟು ಜಿಡಿಪಿ ಬೆಳವಣಿಗೆಯನ್ನು ಸಾಧಿಸುವುದು ಗಮನಾರ್ಹ ಸಾಧನೆಯಾಗಿದೆ ಎಂದು ಅವರು ಹೇಳಿದರು. ಜನರು "ಎಲ್ಲದಕ್ಕೂ ಆಗುವುದಿಲ್ಲವೆನ್ನುವವರಿಂದ " ಮಾರ್ಗದರ್ಶನ ಪಡೆಯಬಾರದು ಎಂದು ಅವರು ಕರೆ ನೀಡಿದರು.
ಜಿಡಿಪಿ ಸಂಖ್ಯೆಗಳನ್ನು ಸರ್ಕಾರ, ಸಚಿವರು ಅಥವಾ ಅಧಿಕಾರಿಗಳು ಮಾಡಿಲ್ಲ, ಆದರೆ ದಶಕಗಳಿಂದ ಜಾರಿಯಲ್ಲಿರುವ ಅಂಕಿಅಂಶ ಸಚಿವಾಲಯ ನಡೆಸುವ ವಿಸ್ತಾರವಾದ, ಮೂಲಭೂತ ಮತ್ತು ಸ್ವತಂತ್ರ ಪ್ರಕ್ರಿಯೆಯ ಮೂಲಕ ನಿರ್ಧರಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಇಡೀ ದೇಶವನ್ನುಮುನ್ನಡೆಸಲು ಹೆಚ್ಚಿನ ಸೇರ್ಪಡೆಯೊಂದಿಗೆ, ನಿರಂತರ, ಸ್ಥಿರ, ಸತತ ಮತ್ತು ಫಲಿತಾಂಶ-ಆಧಾರಿತ ಪ್ರಯತ್ನಗಳಿಗೆ ಸಚಿವರು ಕರೆ ನೀಡಿದರು, ಹೊಸ ಉದ್ಯಮಿಗಳು ಜಾಗತಿಕ ಮಾರುಕಟ್ಟೆಗಳನ್ನು ನೋಡಲು ಮತ್ತು ತೆರೆದಿರುವ ಅಗಾಧ ಅವಕಾಶಗಳನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸಿದರು.
ಜಿಡಿಪಿಯ ಸುಮಾರು $60 ಟ್ರಿಲಿಯನ್ ಪ್ರತಿನಿಧಿಸುವ ಆರ್ಥಿಕತೆಗಳನ್ನು ವ್ಯಾಪಿಸಿರುವ ಭಾರತದ ಒಂಬತ್ತು ಮುಕ್ತ ವ್ಯಾಪಾರ ಒಪ್ಪಂದಗಳು (ಎಫ್‌ಟಿಎಗಳು) ಜಾಗತಿಕ ವ್ಯಾಪಾರದ ಸುಮಾರು ಮೂರನೇ ಎರಡರಷ್ಟು ಭಾಗಕ್ಕೆ ಆದ್ಯತೆಯ ಪ್ರವೇಶವನ್ನು ಒದಗಿಸುತ್ತವೆ ಎಂದು ಶ್ರೀ ಗೋಯಲ್ ಹೇಳಿದರು. ಕೆನಡಾ, ಮೆಕ್ಸಿಕೊ, ಚಿಲಿ, ಮರ್ಕೊಸೂರ್, ಎಸ್‌ಎಸಿಯು, ಜಿಸಿಸಿ ಮತ್ತು ಇಸ್ರೇಲ್ ಸೇರಿ ಮುಂದಿನ ಕೆಲವು ತಿಂಗಳುಗಳು ಮತ್ತು ಒಂದೆರಡು ವರ್ಷಗಳಲ್ಲಿ ಭಾರತವು ಮುಕ್ತಾಯಗೊಳಿಸಲಿರುವ ಇತರ ಎಫ್‌ಟಿಎಗಳು, ಆಸಿಯಾನ್, ಕೊರಿಯಾ ಮತ್ತು ಜಪಾನ್ ಅನ್ನು ಪರಿಶೀಲಿಸುವ ಅಥವಾ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಪಡೆಯಲು ಇತರ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಯತ್ನಗಳೊಂದಿಗೆ, ಭಾರತವು ತನ್ನ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ದರದಲ್ಲಿ ಜಾಗತಿಕ ವ್ಯಾಪಾರದ ಶೇ.75ರಷ್ಟು ಪ್ರವೇಶವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಆದ್ಯತೆಯ ವ್ಯಾಪಾರ ಒಪ್ಪಂದ (ಪಿಟಿಎ), ಎಫ್‌ಟಿಎ ಅಥವಾ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಅಂತಿಮವಾಗಿ ಭಾರತದ ಸ್ಪರ್ಧಿಗಳಿಗಿಂತ ಉತ್ತಮ ದರವನ್ನು ಪಡೆಯುವ ಬಗ್ಗೆ ಎಂದು ಅವರು ಹೇಳಿದರು. ಸಂಪೂರ್ಣ ಸುಂಕ ಸಂಖ್ಯೆ ಅಪ್ರಸ್ತುತ ಮತ್ತು ಸ್ಪರ್ಧೆಗೆ ಸಂಬಂಧಿಸಿದಂತೆ ಪರಿಗಣಿಸಬೇಕಾಗಿತ್ತು.
ಅಮೆರಿಕಾ (ಯುನೈಟೆಡ್ ಸ್ಟೇಟ್ಸ್) ಮತ್ತು ಐರೋಪ್ಯ ಒಕ್ಕೂಟದ ವ್ಯಾಪಾರ ಮಾದರಿಗಳು ವಿಭಿನ್ನವಾಗಿವೆ, ಕಾರ್ಯಾಚರಣೆಯ ವೆಚ್ಚಗಳು ಮತ್ತು ಕಾರ್ಮಿಕ ವೆಚ್ಚಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ ಎಂದು ಶ್ರೀ ಗೋಯಲ್ ಹೇಳಿದರು. ಆದ್ದರಿಂದ ಭಾರತವು ವಿಯೆಟ್ನಾಂ ಮತ್ತು ಬಾಂಗ್ಲಾದೇಶದಂತಹ ಸ್ಪರ್ಧಾತ್ಮಕ ದೇಶಗಳು ಇತರ ಮಾರುಕಟ್ಟೆಗಳಲ್ಲಿ ಪಾವತಿಸುವ ದರಗಳನ್ನು ನಿರ್ಣಯಿಸಬೇಕಾಗಿದೆ ಎಂದರು.
ಜವಳಿ ಉದ್ಯಮದ ಉದಾಹರಣೆಯನ್ನು ನೀಡಿದ ಶ್ರೀ ಗೋಯಲ್, ಭಾರತವು ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಜೊತೆ ಸ್ಪರ್ಧಿಸಲು ಹಲವು ವರ್ಷಗಳಿಂದ ತೊಂದರೆಗಳನ್ನು ಎದುರಿಸುತ್ತಿತ್ತು, ಇವು ಕ್ರಮವಾಗಿ ಎಲ್ ಡಿಸಿ ಸ್ಥಾನಮಾನ ಮತ್ತು ಎಫ್ ಟಿ ಎ ಗಳಿಂದ ಪ್ರಯೋಜನ ಪಡೆದವು, ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳನ್ನು ಶೂನ್ಯ ಅಥವಾ ಕಡಿಮೆ ಸುಂಕದಲ್ಲಿ ಪ್ರವೇಶಿಸಲು ಅನುವು ಮಾಡಿಕೊಟ್ಟವು, ಆದರೆ ಭಾರತವು ಹೆಚ್ಚಿನ ಸುಂಕಗಳನ್ನು ಎದುರಿಸಬೇಕಾಯಿತು. ಪರಿಸ್ಥಿತಿ ಈಗ ಬದಲಾಗಿದೆ, ಭಾರತವು ಬಹುತೇಕ ಎಲ್ಲಾ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ಭೌಗೋಳಿಕ ಪ್ರದೇಶಗಳಿಗಿಂತ ಉತ್ತಮ ದರಗಳನ್ನು ಪಡೆದುಕೊಂಡಿದೆ, ಕಾರ್ಯಕ್ಷಮತೆಯನ್ನು ಹೊರತುಪಡಿಸಿ ಯಾವುದೇ ನೆಪವನ್ನು ಬಿಡಲಿಲ್ಲ, ಇದು ಪ್ರಮಾಣ, ಗುಣಮಟ್ಟ, ಶ್ರದ್ಧೆ, ಗ್ರಾಹಕರ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಗುಣಮಟ್ಟ, ವೇಳಾಪಟ್ಟಿಗಳು ಮತ್ತು ಪ್ಯಾಕೇಜಿಂಗ್ ವಿಷಯದಲ್ಲಿ ಸಕಾಲಿಕ ವಿತರಣೆಯನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದರು. "ಚೆಂಡು ಈಗ ಸಂಪೂರ್ಣವಾಗಿ ನಮ್ಮ ಅಂಗಳದಲ್ಲಿದೆ" ಎಂದು ಅವರು ಹೇಳಿದರು.
ಸಾಮೂಹಿಕ ಪ್ರಯತ್ನವು ಸರ್ಕಾರ ಮತ್ತು ವಿವಿಧ ಸಚಿವಾಲಯಗಳನ್ನು ಒಳಗೊಂಡಿರುತ್ತದೆ, ವಾಣಿಜ್ಯ ಇಲಾಖೆ ಮತ್ತು ಡಿಪಿಐಐಟಿ ಎಲ್ಲಾ ಸಚಿವಾಲಯಗಳೊಂದಿಗೆ ಮುನ್ನಡೆಸುತ್ತದೆ ಎಂದು ಶ್ರೀ ಗೋಯಲ್ ಹೇಳಿದರು. ತೊಡಗಿಸಿಕೊಳ್ಳುವಿಕೆಯ ಮೂಲಕ ಕ್ರಮೇಣ ಭಾರತ ಕೈಗೊಂಡ ಪಯಣದಲ್ಲಿ ಪ್ರಮುಖ ಪಾತ್ರ ವಹಿಸುವ ಜವಳಿ, ಔಷಧಗಳು, ರಾಸಾಯನಿಕಗಳು ಮತ್ತು ಎಲೆಕ್ಟ್ರಾನಿಕ್ಸ್ ಸೇರಿದಂತೆ ಎಲ್ಲಾ ನಿರ್ಣಾಯಕ ಸಚಿವಾಲಯಗಳನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮತ್ತು ಜಾರಿಗೆ ಬರುತ್ತಿರುವ ಎಫ್ ಟಿಎ ಗಳ ಕುರಿತು, ಪ್ರಸಕ್ತ ವರ್ಷಕ್ಕೆ ಮಹತ್ವಾಕಾಂಕ್ಷೆಯ ಗುರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು. ಜುಲೈ 15 ರಿಂದ ಭಾರತ-ಯುಕೆ ಎಫ್‌ಟಿಎ ಜಾರಿಗೆ ಬಂದಿರುವಂತೆಯೇ, ಮಾರಿಷಸ್, ಓಮನ್, ಯುಎಇ, ಆಸ್ಟ್ರೇಲಿಯಾ ಮತ್ತು ಯುಕೆ ಈಗಾಗಲೇ ನೇರ ಮಾತುಕತೆ ನಡೆಸಲಾಗಿದೆ. ನಾಲ್ಕು ದೇಶಗಳನ್ನು ಒಳಗೊಂಡಿರುವ ಇಎಫ್‌ಟಿಎ ಕೂಡ ಜಾರಿಯಾಗಲಿದೆ, ಆದರೆ ನ್ಯೂಜಿಲೆಂಡ್ ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ನಂತರ ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳೊಂದಿಗೆ ಒಪ್ಪಂದ ಅಂತಿಮವಾಗಲಿದೆ.
ಭಾರತದ ಸ್ಪರ್ಧೆಗೆ ಹೋಲಿಸಿದರೆ ಅಮೆರಿಕ ಭಾರತಕ್ಕೆ ಆದ್ಯತೆಯ ದರವನ್ನು ನೀಡಲು ಸಾಧ್ಯವಾದ ಕೂಡಲೇ ಪಿಟಿಎಯನ್ನು ಅಂತಿಮಗೊಳಿಸಲಾಗುತ್ತದೆ ಮತ್ತು ಸೂಕ್ಷ್ಮ ವಿವರಗಳನ್ನು ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದರು.
ಭಾರತವು ಎಲ್ಲಾ ಒಂಬತ್ತು ಎಫ್‌ಟಿಎಗಳಲ್ಲಿ ಉತ್ತಮ ಒಪ್ಪಂದವನ್ನು ಪಡೆದುಕೊಂಡಿದೆ ಎಂದು ಶ್ರೀ ಗೋಯಲ್ ಹೇಳಿದರು. ಪ್ರತಿಯೊಂದು ಒಪ್ಪಂದವು ಎರಡೂ ಕಡೆಯವರಿಗೆ ಗೆಲುವು-ಗೆಲುವು (ವಿನ್ ವಿನ್) ತಂದುಕೊಡಲಿದೆ ಎಂದು ಅವರು ಹೇಳಿದರು, ಆದರೆ ರೈತರು, ಮೀನುಗಾರರು, ಎಂಎಸ್‌ಎಂಇಗಳು ಮತ್ತು ಕಾರ್ಮಿಕರಿಗೆ ಸೂಕ್ಷ್ಮವಾಗಿರುವವುಗಳು ಸೇರಿದಂತೆ ಪ್ರತಿಯೊಂದು ಸೂಕ್ಷ್ಮ ವಲಯಗಳು ಹಾಗೂ ಔಷಧಗಳು, ಜವಳಿ, ಸಂಸ್ಕರಿಸಿದ ಕೃಷಿ-ಆಹಾರಗಳು ಮತ್ತು ಕೃಷಿ ಉತ್ಪನ್ನಗಳಂತಹ ನಿರ್ಣಾಯಕ ವಲಯಗಳಿಗೆ ಭಾರತವು ಹೆಮ್ಮೆಪಡಬಹುದಾದ ಉತ್ತಮ ಒಪ್ಪಂದವನ್ನು ಮಾಡಿಕೊಂಡಿದೆ ಎಂದರು.
ಆಳವಾದ ಪಾಲುದಾರರ ತೊಡಗಿಸಿಕೊಳ್ಳುವಿಕೆ ಮತ್ತು ಸಮಾಲೋಚನೆಯ ಮೂಲಕ ಉತ್ತಮವಾಗಿ ಒಪ್ಪಂದಗಳ ಮಾತುಕತೆ ನಡೆಸಲಾಗಿದೆ, ಸೂಕ್ಷ್ಮ ವಲಯಗಳಿಗೆ ಗಮನಾರ್ಹ ರಕ್ಷಣೆ ಮತ್ತು ಭಾರತದ ಆಸಕ್ತಿ ಮತ್ತು ಬಲದ ಕ್ಷೇತ್ರಗಳಲ್ಲಿ ರಫ್ತು ಮಾಡುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಎಂದರು.
ಭಾರತವು ಪ್ರಸಕ್ತ ವರ್ಷಕ್ಕೆ 1 ಟ್ರಿಲಿಯನ್ ಡಾಲರ್ ರಫ್ತು ಗುರಿಯನ್ನು ಹೊಂದಿದ್ದು, ಇದು ಸುಮಾರು ಶೇ.16 ರಷ್ಟು ಪ್ರಗತಿಯನ್ನು ಪ್ರತಿನಿಧಿಸುತ್ತದೆ ಎಂದು ಶ್ರೀ ಗೋಯಲ್ ಹೇಳಿದರು.
ಕಳೆದ ವರ್ಷ ಏಪ್ರಿಲ್-ಜುಲೈನಲ್ಲಿ ನಡೆದ 280 ಬಿಲಿಯನ್ ಡಾಲರ್‌ಗಳಿಗೆ ಹೋಲಿಸಿದರೆ, ಪ್ರಸಕ್ತ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ರಫ್ತು ಸುಮಾರು 317 ಬಿಲಿಯನ್ ಡಾಲರ್‌ಗಳನ್ನು ತಲುಪಿದೆ ಎಂದು ಅವರು ಹೇಳಿದರು, ಇದು ಮೊದಲ ನಾಲ್ಕು ತಿಂಗಳಲ್ಲಿಯೇ 36-37 ಬಿಲಿಯನ್ ಡಾಲರ್‌ಗಳ ಹೆಚ್ಚಳವನ್ನು ಪ್ರತಿನಿಧಿಸುತ್ತದೆ ಎಂದರು.
ದೇಶವು ಕ್ರಿಸ್‌ಮಸ್‌ಗೆ ಹತ್ತಿರವಾಗುತ್ತಿದ್ದಂತೆ ಮತ್ತು ಜನವರಿಯಿಂದ ಮಾರ್ಚ್‌ವರೆಗಿನ ಕೊನೆಯ ತ್ರೈಮಾಸಿಕದಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದಂತೆ ರಫ್ತು ಸಾಮಾನ್ಯವಾಗಿ ವೇಗಗೊಳ್ಳುತ್ತದೆ ಎಂದು ಸಚಿವರು ಹೇಳಿದರು. ಪ್ರಸ್ತುತ ಪ್ರವೃತ್ತಿ ಒಳ್ಳೆಯ ಸಂಕೇತವಾಗಿದೆ ಮತ್ತು ಬೆಳವಣಿಗೆಯನ್ನು ಉಳಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಆಗಸ್ಟ್‌ನಲ್ಲಿ ಈವರೆಗೆ ಲಭ್ಯವಿರುವ ಸಂಖ್ಯೆಗಳನ್ನು ಉಲ್ಲೇಖಿಸಿ, ಭಾರತವು ಉತ್ತಮ ಹಾದಿಯಲ್ಲಿದೆ ಎಂದು ಶ್ರೀ ಗೋಯಲ್ ಹೇಳಿದರು. ಸಾಮೂಹಿಕ ಪ್ರಯತ್ನ ಮತ್ತು ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುತ್ತಿರುವುದರಿಂದ, ಅವಕಾಶಗಳು ಪ್ರಸ್ತುತ ಮತ್ತು ಭವಿಷ್ಯದ ಸಾಮರ್ಥ್ಯದೊಂದಿಗೆ ಪ್ರತಿ ಜಿಲ್ಲೆ ಮತ್ತು ಪ್ರತಿಯೊಂದು ವಲಯವನ್ನು ತಲುಪುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಭಾರತವು ತನ್ನ ಉತ್ಪನ್ನಗಳ ಬುಟ್ಟಿಯನ್ನು ವಿಸ್ತರಿಸುತ್ತದೆ, ಹೊಸ ರಫ್ತುದಾರರನ್ನು ಪ್ರೋತ್ಸಾಹಿಸುತ್ತದೆ, ಸಣ್ಣ ರಫ್ತುದಾರರು ದೊಡ್ಡ ರಫ್ತುದಾರರಾಗಲು ನೆರವು ನೀಡುತ್ತದೆ ಮತ್ತು ದೊಡ್ಡ ರಫ್ತುದಾರರನ್ನು ಸಹ ಸಾಧ್ಯವಿರುವ ಎಲ್ಲ ವಿಷಯಗಳಲ್ಲಿ ಬೆಂಬಲಿಸುತ್ತದೆ ಎಂದು ಅವರು ಹೇಳಿದರು.
ರಫ್ತು ಉತ್ತೇಜನ ಮಿಷನ್‌ಗೆ ಬೆಂಬಲವನ್ನು ಕೋರಿದ ಶ್ರೀ ಗೋಯಲ್, ಕಾರ್ಯಾಗಾರದ ಸಮಯದಲ್ಲಿ ನವೀನ ಮತ್ತು ಸ್ಮಾರ್ಟ್ ವಿಚಾರಗಳಿಗೆ ಕರೆ ನೀಡಿದರು. ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಸೇರಿದಂತೆ ಬೆಟ್ಟ ಪ್ರದೇಶಗಳು ಅಥವಾ ಈಶಾನ್ಯದಿಂದ ರಫ್ತಿಗೆ ಬೆಂಬಲ ಅಗತ್ಯವಿರುವಲ್ಲೆಲ್ಲಾ ನಿಯಂತ್ರಣ ಅನುಮೋದನೆಗಳು, ಎಸ್ ಪಿಎಸ್ ಮತ್ತು ಟಿಬಿಟಿ ಅನುಮೋದನೆಗಳು ಮತ್ತು ಸರಕು ಪರಿಹಾರದಂತಹ ನಿರ್ಣಾಯಕ ಕ್ಷೇತ್ರಗಳ ಕುರಿತು ವಿಚಾರಗಳು ಮತ್ತು ಸಲಹೆಗಳಿಗೆ ಸರ್ಕಾರವು ಮುಕ್ತವಾಗಿದೆ ಎಂದು ಅವರು ಹೇಳಿದರು.
ಹೋರ್ಮುಜ್ ಜಲಸಂಧಿಯು ಎಲ್ಲೆಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೋ, ಅಂತಹ ಕಡೆಗಳಲ್ಲೆಲ್ಲಾ ವಿಶೇಷವಾಗಿ ಸಣ್ಣ ರಫ್ತುದಾರರನ್ನು ಬೆಂಬಲಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.
ಈಗಿನಿಂದ ನಾಲ್ಕು ವರ್ಷಗಳ ನಂತರ 2030ರ ವೇಳೆಗೆ, ಭಾರತವು ಹಲವು ವರ್ಷಗಳ ಹಿಂದೆ ನಿಗದಿಪಡಿಸಿದ ಗುರಿಯನ್ನು ತಲುಪಲು ಆಶಿಸಬೇಕು ಎಂದು ಸಚಿವರು ಹೇಳಿದರು. ಭಾರತವು ಕೋವಿಡ್ ಸಾಂಕ್ರಾಮಿಕ, ಎರಡು ಯುದ್ಧಗಳು ಮತ್ತು ಹಲವು ಸವಾಲುಗಳನ್ನು ಎದುರಿಸಿದೆ ಎಂದು ಅವರು ಒಪ್ಪಿಕೊಂಡರು, ಆದರೆ ಪ್ರಯತ್ನವು ಗಮನಹರಿಸಬೇಕು ಮತ್ತು ಭಾರತ $2 ಟ್ರಿಲಿಯನ್ ಗುರಿಯನ್ನು ಬಿಟ್ಟುಕೊಡಬಾರದು ಎಂದು ಹೇಳಿದರು.
ಗುರಿ ದೊಡ್ಡದಾಗಿದ್ದರೆ, ಕಾರ್ಯಕ್ಷಮತೆಯೂ ಉತ್ತಮವಾಗಿರುತ್ತದೆ ಎಂದು ಅವರು ಹೇಳಿದರು. ಸಣ್ಣ ನ್ಯೂನತೆಗಳಿದ್ದರೂ ಸಹ, ಫಲಿತಾಂಶವು ಸಾಧ್ಯವಾದಷ್ಟು $2 ಟ್ರಿಲಿಯನ್‌ಗೆ ಹತ್ತಿರವಾಗಬೇಕು. $1.2 ಟ್ರಿಲಿಯನ್ ಅಥವಾ $1.3 ಟ್ರಿಲಿಯನ್ ಗುರಿಯನ್ನು ನಿಗದಿಪಡಿಸುವುದು ಮತ್ತು ಅದನ್ನು ಸಾಧಿಸುವುದು ದೇಶಕ್ಕೆ ಸೇವೆ ಸಲ್ಲಿಸಲು, ಲಕ್ಷಾಂತರ ಜನರಿಗೆ ಉದ್ಯೋಗಗಳನ್ನು ಒದಗಿಸಲು ಮತ್ತು ಹೊಸ ಉದ್ಯಮಿಗಳನ್ನು ಸೃಷ್ಟಿಸಲು ಸಾಕಾಗುವುದಿಲ್ಲ ಎಂದು ಅವರು ಹೇಳಿದರು.
ಪ್ರಮುಖ ಕಂಪನಿಗಳು ಕೇಂದ್ರ ಕಚೇರಿಗಳು, ಉಪ ಕಚೇರಿಗಳನ್ನು ಹೊಂದಬೇಕು ಎಂದು ಶ್ರೀ ಗೋಯಲ್ ಕರೆ ನೀಡಿದರು. ಈ ಕಚೇರಿಗಳು ರಾಜ್ಯಗಳಲ್ಲಿವೆ ಮತ್ತು ಭವಿಷ್ಯದಲ್ಲಿ ರಾಜ್ಯ ಮಟ್ಟದಲ್ಲಿ ಬೆಂಬಲವನ್ನು ಒದಗಿಸಬೇಕಾಗುತ್ತದೆ ಎಂದು ಉಲ್ಲೇಖಿಸಿ, ಆವೇಗ ಮತ್ತು ಉತ್ಸಾಹವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ರಾಸಾಯನಿಕಗಳು, ಔಷಧಗಳು, ಜವಳಿ, ಸಾಗರ, ಕೃಷಿ, ರತ್ನಗಳು ಮತ್ತು ಆಭರಣಗಳು ಮತ್ತು ಚರ್ಮ ಸೇರಿದಂತೆ ಪ್ರತಿಯೊಂದು ವಲಯದಲ್ಲಿ ಅವಕಾಶಗಳಿವೆ ಎಂದು ಸಚಿವರು ಹೇಳಿದರು. ಪಟ್ಟಿ ಅಂತ್ಯಗೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಸೇವಾ ವಲಯದಲ್ಲಿ ಅನೇಕ ಹೊಸ ವಲಯಗಳ ತೆರೆದುಕೊಂಡಿವೆ ಎಂದು ಪ್ರಮುಖವಾಗಿ ಉಲ್ಲೇಖಿಸಿದ ಅವರು, ಹಣಕಾಸಿನ ಬಗ್ಗೆ ಉಲ್ಲೇಖಿಸುತ್ತಾ ಪ್ರತಿ ದೇಶವು ಚಂದ್ರನತ್ತ ಸಾಗುತ್ತಿದೆ ಎಂದು ಹೇಳಿದರು.
ತಾಂತ್ರಿಕ ಮಾನದಂಡಗಳು ಮತ್ತು ನೈರ್ಮಲ್ಯ ಮತ್ತು ಎಸ್ ಪಿಎಸ್ ಮಾನದಂಡಗಳ ಮಹತ್ವವನ್ನು ಶ್ರೀ ಗೋಯಲ್ ಒತ್ತಿ ಹೇಳಿದರು. ನೈತಿಕವಲ್ಲದ ಯಾವುದಕ್ಕೂ ಭಾರತ ಪಾರ್ಟಿಯಾಗಬಾರದು ಮತ್ತು ಪ್ರಪಂಚದ ವಿಶ್ವಾಸಾರ್ಹ ಪಾಲುದಾರನಾಗಿ ಉಳಿಯಬೇಕು ಎಂದು ಅವರು ಹೇಳಿದರು.
ಭಾರತವು ನಿಜವಾದ ಮೌಲ್ಯವನ್ನು ಸೇರಿಸಬೇಕು ಮತ್ತು ದೇಶದ ಮೂಲ ಪ್ರಮಾಣಪತ್ರವು ಮೌಲ್ಯವನ್ನು ಹೊಂದಿರಬೇಕು ಎಂದು ಅವರು ಹೇಳಿದರು.
ಮುಂಬರುವ 100 ಭವ್ಯ ಪಾರ್ಕ್‌ಗಳಿಗೆ ರಫ್ತುದಾರರಿಗೆ ಆದ್ಯತೆಯ ಬೆಂಬಲ ನೀಡಲಾಗುವುದು ಎಂದು ಸಚಿವರು ಹೇಳಿದರು. ಉನ್ನತ ಮಟ್ಟಕ್ಕೆ ಬದ್ಧರಾಗಿರುವ ರಫ್ತುದಾರರಿಗೆ ಹಂಚಿಕೆಗಾಗಿ ರಿಯಾಯಿತಿಗಳನ್ನು ನೀಡಲಾಗುವುದು. ಪ್ಲಗ್-ಅಂಡ್-ಪ್ಲೇ ಕಾರ್ಯಾಚರಣೆಗಳಿಗೆ ರಫ್ತುದಾರರಿಗೆ ಅಗತ್ಯವಿರುವ ಸೌಲಭ್ಯಗಳನ್ನು ತರಲಾಗುವುದು. ರಫ್ತು ಪ್ರಚಾರ ಮಿಷನ್ ಅಥವಾ ಕೈಗಾರಿಕಾ ಪಾರ್ಕ್‌ಗಳ ಮೂಲಕ ಅಸ್ತಿತ್ವದಲ್ಲಿರುವ ಕ್ಲಸ್ಟರ್‌ಗಳನ್ನು ಸಹ ಬೆಂಬಲಿಸಲಾಗುವುದು.
ಕಳೆದ ತಿಂಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಶ್ರೀ ಗೋಯಲ್ ಉಲ್ಲೇಖಿಸಿದರು, ಅದರಲ್ಲಿ ಉದ್ಯಮಗಳು ವಿವಿಧ ವಲಯಗಳ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುವಂತೆ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಪೂರೈಸುವ ಬದಲು ಅವುಗಳನ್ನು ಮೀರುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಲಾಗಿತ್ತು.
ಇದು ಮುನ್ನಡೆಯುವ ಮಾರ್ಗವಾಗಿದೆ ಮತ್ತು ದೇಶವು ಸಮರೋಪಾದಿಯಲ್ಲಿ ಪ್ರಯತ್ನವನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಶ್ರೀ ಗೋಯಲ್ ಹಲವು ಸಲಹೆಗಳನ್ನು ನೀಡಿದರು.
ಮೊದಲನೆಯದಾಗಿ, ಪ್ರತಿಯೊಂದು ರಾಜ್ಯವು ಎಫ್ ಎಟಿಎಗಳು ಈಗಾಗಲೇ ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತಿರುವ ಮತ್ತು ಪ್ರಯೋಜನಗಳು ಬಳಕೆಯಾಗದೆ ಉಳಿದಿರುವ ಉತ್ಪನ್ನಗಳು ಮತ್ತು ಕ್ಲಸ್ಟರ್‌ಗಳನ್ನು ಗುರುತಿಸಬೇಕು, ಇದರಿಂದ ಸರ್ಕಾರವು ಯಾವ ರೀತಿಯ ಬೆಂಬಲ ನೀಡಬಹುದೆಂಬುದನ್ನು ನಿರ್ಣಯಿಸಬಹುದು.
ಎರಡನೆಯದಾಗಿ, ಮೊದಲ ಬಾರಿಗೆ ರಫ್ತುದಾರರು ಮತ್ತು ಹೊಸ ಉತ್ಪನ್ನಗಳನ್ನು ಗುರುತಿಸಬೇಕು. ಇ-ಕಾಮರ್ಸ್ ಎಂಎಸ್ ಎಂಇಗಳು ಮತ್ತು ಮೊದಲ ಬಾರಿಗೆ ರಫ್ತುದಾರರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸಲು ಕಡಿಮೆ-ತಡೆ ಮಾರ್ಗವನ್ನು ನೀಡುತ್ತದೆ ಮತ್ತು ಇ-ಕಾಮರ್ಸ್ ಅನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲು ಪ್ರೋತ್ಸಾಹಿಸಲು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ಮೂರನೆಯದಾಗಿ, ರಫ್ತು ಉತ್ತೇಜನಾ ಮಂಡಳಿಗಳ (ಇಪಿಸಿಗಳು) ನಡುವಿನ ಸಮನ್ವಯವನ್ನು ಬಲಪಡಿಸಬೇಕು ಮತ್ತು ಒಪಿಸಿಗಳು ತಮ್ಮ ಉದ್ಯಮಕ್ಕೆ ತಲುಪಬೇಕು. ಇಪಿಸಿಗಳು ಮತ್ತು ಕೈಗಾರಿಕೆಗಳ ನಡುವಿನ ಸಂಬಂಧವು ಪಿರಮಿಡ್‌ನ ಕೆಳಭಾಗ, ಕೊನೆಯ ಮೈಲಿ ಮತ್ತು ಮುಂಚೂಣಿಯ ರಫ್ತುದಾರರನ್ನು ತಲುಪದಿರುವುದು ತಮಗೆ ಕಳವಳಕಾರಿ ಎಂದು ಶ್ರೀ ಗೋಯಲ್ ಹೇಳಿದರು. ಇಪಿಸಿಗಳು ರಫ್ತುದಾರರು ಮತ್ತು ಕೈಗಾರಿಕೆಗಳಿಗೆ ತಮ್ಮ ಸಂದೇಶಗಳನ್ನು ಎಷ್ಟರ ಮಟ್ಟಿಗೆ ತಲುಪಿಸುತ್ತಿವೆ ಎಂದು ಅವರು ಪ್ರಶ್ನಿಸಿದರು.
ಅದೇ ರೀತಿ ಕೈಗಾರಿಕಾ ಸಂಘಗಳು ಕೊನೆಯ ವ್ಯಕ್ತಿ ಮತ್ತು ಚಿಕ್ಕ ಘಟಕವನ್ನು ತಲುಪಬೇಕು ಎಂದು ಅವರು ಹೇಳಿದರು. ಸರ್ಕಾರ, ಸಂಘಗಳು ಮತ್ತು ಇಪಿಸಿಗಳ ನಡುವಿನ ಸಮನ್ವಯ ಬಲಪಡಿಸಬೇಕು, ದೇಶದ ವಿವಿಧ ಭಾಗಗಳಿಂದ ಮತ್ತು ಪ್ರತಿ ಜಿಲ್ಲೆಯಿಂದ ಹೆಚ್ಚು ಹೆಚ್ಚು ಜನರನ್ನು ಅಂತಾರಾಷ್ಟ್ರೀಯ ನಿಯೋಗಗಳಲ್ಲಿ ತೆಗೆದುಕೊಂಡು ಸರಿಯಾದ ಉತ್ಪನ್ನಗಳನ್ನು ಸರಿಯಾದ ಮಾರುಕಟ್ಟೆಗಳಿಗೆ ಪ್ರದರ್ಶಿಸಬೇಕು. ನಿರ್ದಿಷ್ಟವಾಗಿ ವಲಯ ನಿಯೋಗಗಳನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.
ನಾಲ್ಕನೆಯದಾಗಿ, ಕೈಗಾರಿಕಾ ಸಂಘಗಳು ತಮಗಾಗಿ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು. ಆದರೆ ಇಪಿಸಿಗಳು ಹೆಚ್ಚು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿಸಿಕೊಳ್ಳಬೇಕು, ಸ್ಥಳೀಯ ಭಾಷೆಗಳಲ್ಲಿ ಮತ್ತು ಬಳಸಲು ಸುಲಭವಾದ ವಿಷಯದ ಮೂಲಕ ತಮ್ಮ ಸದಸ್ಯರಿಗೆ ಮತ್ತು ಎಂಎಸ್‌ಎಂಇಗಳಿಗೆ ಮಾಹಿತಿಯನ್ನು ಪ್ರಸಾರ ಮಾಡಬೇಕು, ಹೆಚ್ಚಿನ ಸದಸ್ಯರನ್ನು ದಾಖಲಿಸಬೇಕು ಮತ್ತು ಸರ್ಕಾರ ಮತ್ತು ರಫ್ತುದಾರರ ನಡುವಿನ ಬೆಂಬಲ ಮತ್ತು ನಿಜವಾದ ಒಳಗೊಳ್ಳುವಿಕೆಯ ಕೇಂದ್ರವಾಗಬೇಕು.
ಕೊನೆಯದಾಗಿ, ಇಲಾಖೆಯು ವಲಯ- ಅಥವಾ ಕ್ಲಸ್ಟರ್-ವಾರು ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಅಥವಾ ರಾಜ್ಯ ಮಟ್ಟದಲ್ಲಿ ಸಂಪರ್ಕ ಕೇಂದ್ರಗೊಂದಿಗೆ ಸೌಲಭ್ಯ ಕಾರ್ಯವಿಧಾನವನ್ನು ಸ್ಥಾಪಿಸಬೇಕು ಎಂದು ಶ್ರೀ ಗೋಯಲ್ ಹೇಳಿದರು. ರಫ್ತುದಾರರು ಬೆಂಬಲಕ್ಕಾಗಿ ತಲುಪುವ ಪ್ರತಿಕ್ರಿಯೆ ಸಮಯವು ತುಂಬಾ ವೇಗವಾಗಿರಬೇಕು, ಸಾಧ್ಯವಾದಲ್ಲೆಲ್ಲಾ ತಕ್ಷಣವಾಗಿರಬೇಕು ಮತ್ತು ಎಲ್ಲಾ ಸಮಯದಲ್ಲೂ ಪ್ರಯಾಣಿಸುವ ಅಗತ್ಯವಿಲ್ಲದೆ ಪ್ರತಿಯೊಂದು ಸಂದರ್ಭದಲ್ಲೂ ಆನ್‌ಲೈನ್‌ನಲ್ಲಿರಬೇಕು ಎಂದರು.
ಒಗ್ಗೂಡಿ ಕಾರ್ಯನಿರ್ವಹಿಸುವುದರಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ, ದೇಶಕ್ಕೆ ಶತಕೋಟಿ ಡಾಲರ್ ವಿದೇಶಿ ವಿನಿಮಯ ಗಳಿಸುತ್ತವೆ ಮತ್ತು ಭವಿಷ್ಯದ ಪೀಳಿಗೆಗಳು ರಫ್ತು ವ್ಯವಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಿಸಲು ಪ್ರೇರೇಪಿಸುತ್ತವೆ ಎಂದು ಶ್ರೀ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದರು.
ಭಾರತವು ಇಂದು ಅಮೃತ ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ 2047 ರ ವೇಳೆಗೆ $30 ಟ್ರಿಲಿಯನ್ ಆರ್ಥಿಕ ಹೆಜ್ಜೆಗುರುತನ್ನು ಹೊಂದಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಅವರು ಹೇಳಿದರು.
ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಅವರು ಕಾರ್ಯಾಗಾರದ ಪ್ರಮುಖ ಉದ್ದೇಶವನ್ನು ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಇಪಿಸಿಗಳು, ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಒಟ್ಟುಗೂಡಿಸುವ ವಿಷಯವನ್ನು ಪ್ರಸ್ತಾಪಿಸಿದರು. ಎಲ್ಲಾ ರಾಜ್ಯಗಳಿಗೆ ತಮ್ಮ ಕೈಗಾರಿಕೆಗಳಿಗೆ ವಿವಿಧ ವಲಯಗಳಲ್ಲಿ ಉದ್ಭವಿಸುವ ನಿರ್ದಿಷ್ಟ ಅವಕಾಶಗಳನ್ನು ಪ್ರಸಾರ ಮಾಡಲು ಬ್ರೇಕ್‌ಔಟ್ ಸೆಷನ್ (ಗೋಷ್ಠಿ)ಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ರಫ್ತು ಉತ್ತೇಜನಕ್ಕೆ ನಿರಂತರ, ರಾಜ್ಯ-ಪಾಲುದಾರಿಕೆಯ ವಿಧಾನಕ್ಕೆ ಸರ್ಕಾರದ ಬದ್ಧತೆಯನ್ನು ಭಾಷಣಗಳಲ್ಲಿ ಪುನರುಚ್ಚರಿಸಲಾಯಿತು ಮತ್ತು ಮುಂಬರುವ ವರ್ಷಗಳಲ್ಲಿ ಎಫ್‌ಟಿಎ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲು ಇಲಾಖೆಯ ನೀಲನಕ್ಷೆ ಅನಾವರಣಗೊಳಿಸಲಾಯಿತು.
ರಫ್ತು ಪ್ರಚಾರ ಮಿಷನ್ (ಇಪಿಎಂ) ಮತ್ತು ಜಿಲ್ಲೆಗಳನ್ನು ರಫ್ತು ಕೇಂದ್ರಗಳಾಗಿ (ಡಿಇಎಚ್) ಉಪಕ್ರಮದ ಕುರಿತು ವಿಶೇಷ ಭಾಷಣವು, ರಫ್ತು ಸಾಲಕ್ಕೆ ಸುಲಭ ಲಭ್ಯತೆ, ಸರಳೀಕೃತ ಮತ್ತು ಡಿಜಿಟಲೀಕೃತ ಅನುಸರಣೆ ಮತ್ತು ಮೂಲ ಪ್ರಮಾಣೀಕರಣ ನಿಯಮಗಳನ್ನು ಒಳಗೊಂಡಂತೆ ಎಫ್‌ಟಿಎ ದಾಖಲಾತಿಗೆ ನೇರ ಬೆಂಬಲಕ್ಕಾಗಿ ವಿನ್ಯಾಸಗೊಳಿಸಲಾದ ಸ್ತಂಭಗಳ ಸುತ್ತಲೂ ಮಿಷನ್ ನಿರ್ಮಿಸಲಾಗಿದೆ ಎಂದು ಎತ್ತಿ ತೋರಿಸಿತು. ಮಿಷನ್ ಪ್ರಾದೇಶಿಕ ಅಧಿಕಾರಿಗಳ ಅರಿವನ್ನು ಬಲಪಡಿಸುತ್ತದೆ ಮತ್ತು ಮೊದಲ ತಲೆಮಾರಿನ ಮತ್ತು ಎಂಎಸ್‌ಎಂಇ ರಫ್ತುದಾರರಿಗೆ ಹೆಚ್ಚು ಅಗತ್ಯವಿರುವ ಮಾಹಿತಿ ಕೊರತೆಯನ್ನು ನಿವಾರಿಸುತ್ತದೆ.
ಐಟಿಪಿಒ ಅಧ್ಯಕ್ಷರಾದ ಶ್ರೀ ಜಾವೇದ್ ಅಶ್ರಫ್ ಅವರ ವಿಶೇಷ ಭಾಷಣವು ಭಾರತೀಯ ರಫ್ತುದಾರರಿಗೆ ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸುವುದು ಒಳಗೊಂಡಿತ್ತು. ರಫ್ತು ಪ್ರಚಾರಕ್ಕಾಗಿ ಸಹಯೋಗದ ಕ್ರಮದ ಬಗ್ಗೆ ಅವರು ಒತ್ತಿ ಹೇಳಿದರು. ಭಾರತೀಯ ರಫ್ತುದಾರರನ್ನು ಬೆಂಬಲಿಸುವಲ್ಲಿ ಐಟಿಪಿಒ ವಹಿಸುತ್ತಿರುವ ಪರಿವರ್ತನಾತ್ಮಕ ಪಾತ್ರವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.
ಭಾರತದ ಇತ್ತೀಚಿನ ಎಫ್‌ಟಿಎಗಳಿಂದ ಉಂಟಾಗುವ ಮಾರುಕಟ್ಟೆ ಅವಕಾಶಗಳ ಮೇಲೆ ಕೇಂದ್ರೀಕರಿಸಿದ ಮತ್ತೊಂದು ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಲಾಯಿತು. ರಫ್ತು ಸೌಲಭ್ಯದಲ್ಲಿ ತಳಮಟ್ಟದ ಅನುಭವವನ್ನು ಆಧರಿಸಿ ರಾಜಸ್ಥಾನ ರಾಜ್ಯವು ಎಫ್‌ಟಿಎಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ರಾಜ್ಯ ಮಟ್ಟದ ದೂರದೃಷ್ಟಿಯನ್ನು ಸಹ ಪ್ರಸ್ತುತಪಡಿಸಿತು.
ಮಧ್ಯಾಹ್ನದ ನಂತರದ ಗೋಷ್ಟಿಗಳಲ್ಲಿ ಆರು ಸಮಾನಾಂತರ, ರಾಜ್ಯ-ಕೇಂದ್ರಿತ ಬ್ರೇಕ್‌ಔಟ್ ಗುಂಪುಗಳನ್ನು ಒಳಗೊಂಡಿತ್ತು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಾದೇಶಿಕವಾಗಿ ಆಯೋಜಿಸಲ್ಪಟ್ಟವು ಮತ್ತು ಪ್ರತಿ ಗೋಷ್ಠಿಯಲ್ಲೂ ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿ ಮತ್ತು ರಾಜ್ಯದ ಹಿರಿಯ ಅಧಿಕಾರಿ ಸಹ-ಅಧ್ಯಕ್ಷರಾಗಿದ್ದರು. ಪ್ರತಿಯೊಂದು ಗುಂಪಿನಲ್ಲಿನ ಚರ್ಚೆಗಳು ನಿರ್ದಿಷ್ಟ ರಫ್ತು ಕ್ಲಸ್ಟರ್‌ಗಳು ಮತ್ತು ಉತ್ಪನ್ನಗಳನ್ನು ಗುರುತಿಸುವುದು, ಎಫ್ ಟಿಎ ಪ್ರಯೋಜನಗಳನ್ನು ಬಳಸಿಕೊಳ್ಳುವಲ್ಲಿ ರಫ್ತುದಾರರು ಎದುರಿಸುತ್ತಿರುವ ಪ್ರಾಯೋಗಿಕ ನಿರ್ಬಂಧಗಳು ಮತ್ತು ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಅನುಸರಣಾ ಬೆಂಬಲದ ಮೇಲೆ ಕೇಂದ್ರೀಕರಿಸಿದವು. ಪ್ರತಿಯೊಂದು ಬ್ರೇಕ್‌ಔಟ್ ಗುಂಪಿನ ಪ್ರಮುಖ ಕ್ರಿಯಾ ಅಂಶಗಳನ್ನು ಸಮಾರೋಪ ಸಮಾರಂಭದಲ್ಲಿ ಪ್ರಸ್ತುತಪಡಿಸಲಾಯಿತು, ನಂತರ ವಂದನಾರ್ಪಣೆಗಳನ್ನು ಸಲ್ಲಿಸಲಾಯಿತು.
ವಾಣಿಜ್ಯ ಇಲಾಖೆಯ ರಫ್ತು ಉತ್ತೇಜನದ ಕುರಿತು ಕೇಂದ್ರ-ರಾಜ್ಯ ಸಮನ್ವಯವನ್ನು ಬಲಪಡಿಸಲು ಮತ್ತು ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳ ಪ್ರಯೋಜನಗಳು ದೇಶಾದ್ಯಂತ ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಉತ್ಪಾದಕರು ಮತ್ತು ರಫ್ತುದಾರರನ್ನು ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ನಿರಂತರ ಪ್ರಯತ್ನದ ಭಾಗವಾಗಿ ಈ ಕಾರ್ಯಾಗಾರವನ್ನು ಆಯೋಜಿಸಿದೆ.
*****
(ಪ್ರಕಟಣೆ ಐ.ಡಿ.: 2306338)
ವಿಸಿಟರ್ ಕೌಂಟರ್ : 5