ಹಣಕಾಸು ಸಚಿವಾಲಯ
azadi ka amrit mahotsav

ಜಪಾನ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ (ಜೆಸಿಆರ್)‌ ಭಾರತದ ಸಾರ್ವಭೌಮ ಕ್ರೆಡಿಟ್ ರೇಟಿಂಗ್‌ ಅನ್ನು ಸ್ಥಿರ ಮುನ್ನೋಟದೊಂದಿಗೆ ‘A-’ ಶ್ರೇಣಿಗೆ ಮೇಲ್ದರ್ಜೆಗೇರಿಸಿದೆ


ಭಾರತದ ವಿದೇಶಿ ಕರೆನ್ಸಿ ಮತ್ತು ಸ್ಥಳೀಯ ಕರೆನ್ಸಿಯ ದೀರ್ಘಾವಧಿಯ ನೀಡಿಕೆದಾರರ ರೇಟಿಂಗ್‌ ಅನ್ನು ‘BBB+’ನಿಂದ ‘A-’ಗೆ ಒಂದು ಹಂತ ಹೆಚ್ಚಿಸಿದೆ

ಭಾರತದ ಬಲಿಷ್ಠ ಮತ್ತು ಸ್ಥಿತಿಸ್ಥಾಪಕ ಆರ್ಥಿಕ ಬೆಳವಣಿಗೆ, ಸುಧಾರಿತ ವಿತ್ತೀಯ ಗುಣಮಟ್ಟ, ಬಲಗೊಂಡ ಹಣಕಾಸು ವ್ಯವಸ್ಥೆ ಮತ್ತು ಸದೃಢ ಬಾಹ್ಯ ವಲಯದ ಸ್ಥಿತಿಯನ್ನು ಈ ರೇಟಿಂಗ್‌ ಪ್ರತಿಬಿಂಬಿಸುತ್ತದೆ

ಪ್ರಕಟಣಾ ದಿನಾಂಕ: 02 SEP 2026 6:37PM by PIB Bengaluru

ಭಾರತದ ದೀರ್ಘಾವಧಿಯ ವಿದೇಶಿ ಕರೆನ್ಸಿ ಮತ್ತು ಸ್ಥಳೀಯ ಕರೆನ್ಸಿ ನೀಡಿಕೆದಾರರ ರೇಟಿಂಗ್‌ ಅನ್ನು ‘BBB+’ನಿಂದ ‘A-’ಗೆ ಒಂದು ಹಂತ ಮೇಲ್ದರ್ಜೆಗೇರಿಸಿ, ಸ್ಥಿರ ಮುನ್ನೋಟವನ್ನು ಮುಂದುವರಿಸಿರುವ ಜಪಾನ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ (ಜೆಸಿಆರ್)ಯ ನಿರ್ಧಾರವನ್ನು ಭಾರತ ಸರ್ಕಾರ ಸ್ವಾಗತಿಸಿದೆ. ಜೆಸಿಆರ್ ಸಂಸ್ಥೆಯು ಭಾರತದ 'ಕಂಟ್ರಿ ಸೀಲಿಂಗ್' (ದೇಶದ ಗರಿಷ್ಠ ಸಾಲದ ಮಿತಿ) ಅನ್ನು ಸಹ ಒಂದು ಹಂತ ಹೆಚ್ಚಿಸಿ 'A' ಶ್ರೇಣಿಗೆ ಏರಿಸಿದೆ.

ಈ ರೇಟಿಂಗ್‌ ಮೇಲ್ದರ್ಜೆಯು ಭಾರತದ ದೃಢವಾದ ಆರ್ಥಿಕ ಬೆಳವಣಿಗೆ, ಬೆಳವಣಿಗೆಗೆ ಅಗತ್ಯವಾದ ಮೂಲಭೂತ ಅಂಶಗಳನ್ನು ಬಲಪಡಿಸುವಲ್ಲಿ ಆರ್ಥಿಕ ನೀತಿಗಳ ಪರಿಣಾಮಕಾರಿತ್ವ ಮತ್ತು ಹಣಕಾಸು ವ್ಯವಸ್ಥೆಯ ಸದೃಢತೆಯನ್ನು ಪ್ರತಿಬಿಂಬಿಸುತ್ತದೆ. ಬಲಿಷ್ಠ ಖಾಸಗಿ ಬಳಕೆ ಮತ್ತು ಸಾರ್ವಜನಿಕ ಹೂಡಿಕೆಯ ಬೆಂಬಲದೊಂದಿಗೆ ಭಾರತೀಯ ಆರ್ಥಿಕತೆಯು ಹೆಚ್ಚಿನ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ ಎಂದು ಜೆಸಿಆರ್ ಗಮನಿಸಿದೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಜಿಡಿಪಿ ಅಂದಾಜುಗಳ ಪ್ರಕಾರ, 2025-26ರ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆ ಶೇಕಡಾ 7.8ರಷ್ಟಿತ್ತು. ಜಾಗತಿಕ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ, 2026-27ರ ಮೊದಲ ತ್ರೈಮಾಸಿಕದಲ್ಲಿ ನೈಜ ಜಿಡಿಪಿ ಶೇಕಡಾ 7.8ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ಈ ಬೆಳವಣಿಗೆಯ ವೇಗ ಮುಂದುವರಿದಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಅಭಿವೃದ್ಧಿ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿ ಎಸ್‌ ಟಿ) ಅನುಷ್ಠಾನ ಸೇರಿದಂತೆ ಉತ್ಪಾದಕತೆಯ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ನೀತಿಗಳನ್ನು ಸರ್ಕಾರ ನಿರಂತರವಾಗಿ ಜಾರಿಗೊಳಿಸುತ್ತಿರುವುದನ್ನೂ ಏಜೆನ್ಸಿ ಪ್ರಮುಖವಾಗಿ ಉಲ್ಲೇಖಿಸಿದೆ. ಈ ಕ್ರಮಗಳು ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳನ್ನು ಬಲಪಡಿಸಿವೆ.

ವಿತ್ತೀಯ ವೆಚ್ಚದ ಗುಣಮಟ್ಟದಲ್ಲಿ ಆಗಿರುವ ಸುಧಾರಣೆಯನ್ನೂ ಏಜೆನ್ಸಿ ಗುರುತಿಸಿದೆ. ಅದರಲ್ಲೂ ಬಂಡವಾಳ ವೆಚ್ಚಕ್ಕೆ, ವಿಶೇಷವಾಗಿ ಮೂಲಸೌಕರ್ಯ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2024-25ರ ಹಣಕಾಸು ವರ್ಷದ ಶೇಕಡಾ 4.7ರಿಂದ 2025-26ರಲ್ಲಿ ಶೇಕಡಾ 4.4ಕ್ಕೆ ಇಳಿದಿದೆ ಎಂದು ಜೆಸಿಆರ್ ಗಮನಿಸಿದೆ. ಇದೇ ವೇಳೆ, ಬಂಡವಾಳ ವೆಚ್ಚವು ಹೆಚ್ಚಿನ ಮಟ್ಟದಲ್ಲಿಯೇ ಮುಂದುವರಿದಿದೆ.

ಭಾರತದ ಹಣಕಾಸು ವ್ಯವಸ್ಥೆಯ ಒಟ್ಟಾರೆ ಸದೃಢತೆಯಲ್ಲಿ ಆಗಿರುವ ಗಮನಾರ್ಹ ಸುಧಾರಣೆಯನ್ನೂ ಜೆಸಿಆರ್ ಎತ್ತಿ ತೋರಿಸಿದೆ. ದಿವಾಳಿತನ ಮತ್ತು ಋಣಭಾರ ಸಂಹಿತೆ  ಜಾರಿಗೊಳಿಸಿರುವುದು, ಸರ್ಕಾರದಿಂದ ಬಂಡವಾಳ ಒದಗಿಸಿರುವುದು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಮೇಲ್ವಿಚಾರಣೆಯನ್ನು ಬಲಪಡಿಸಿರುವುದು ಸೇರಿದಂತೆ ಹಲವು ಕ್ರಮಗಳ ಬೆಂಬಲದಿಂದ ಬ್ಯಾಂಕಿಂಗ್ ವಲಯದ ಆಸ್ತಿ ಗುಣಮಟ್ಟ ಸುಧಾರಿಸಿದೆ. ಬ್ಯಾಂಕಿಂಗ್ ವಲಯದಲ್ಲಿ ಬಂಡವಾಳ ಸಮರ್ಪಕತೆ ಮತ್ತು ಲಾಭದಾಯಕತೆ ಸದೃಢವಾಗಿಯೇ ಉಳಿದಿವೆ. ಬ್ಯಾಂಕೇತರ ಹಣಕಾಸು ವಲಯದಲ್ಲಿಯೂ ಆಸ್ತಿ ಗುಣಮಟ್ಟ ಮತ್ತು ಬಂಡವಾಳ ಸಮರ್ಪಕತೆ ಸುಧಾರಿಸಿದ್ದು, ಇದರಿಂದ ಹಣಕಾಸು ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ.

ಬಾಹ್ಯ ವಲಯಕ್ಕೆ ಸಂಬಂಧಿಸಿದಂತೆ, ಸೇವಾ ವಲಯದ ಬಲವಾದ ಆದಾಯದ ಬೆಂಬಲದಿಂದ ಭಾರತದ ಚಾಲ್ತಿ ಖಾತೆ ಕೊರತೆಯು ನಿಯಂತ್ರಿತ ಮಟ್ಟದಲ್ಲಿಯೇ ಇದೆ ಎಂದು ಏಜೆನ್ಸಿ ತಿಳಿಸಿದೆ. ಅಲ್ಪಾವಧಿಯ ಬಾಹ್ಯ ಸಾಲಕ್ಕಿಂತ ಗಣನೀಯವಾಗಿ ಹೆಚ್ಚಿನ ಪ್ರಮಾಣದಲ್ಲಿರುವ ಸಾಕಷ್ಟು ವಿದೇಶಿ ವಿನಿಮಯ ಮೀಸಲುಗಳು, ಬಾಹ್ಯ ಆಘಾತಗಳನ್ನು ಎದುರಿಸುವಲ್ಲಿ ಭಾರತಕ್ಕೆ ಬಲಿಷ್ಠ ಸ್ಥಿತಿಸ್ಥಾಪಕತೆಯನ್ನು ಒದಗಿಸುತ್ತವೆ.

ಸವಾಲಿನ ಜಾಗತಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಈ ರೇಟಿಂಗ್‌ ಮೇಲ್ದರ್ಜೆಗೇರಿರುವುದು, ನಿರಂತರ ಬೆಳವಣಿಗೆ, ಪರಿಣಾಮಕಾರಿ ಆರ್ಥಿಕ ನೀತಿಗಳು, ಸುಧಾರಿತ ವಿತ್ತೀಯ ಗುಣಮಟ್ಟ ಮತ್ತು ಬಲಿಷ್ಠ ಹಣಕಾಸು ವ್ಯವಸ್ಥೆಯ ಬೆಂಬಲದಿಂದ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ನಿರಂತರವಾಗಿ ಬಲಗೊಳ್ಳುತ್ತಿರುವುದನ್ನು ಇದು ಮತ್ತೊಮ್ಮೆ ಒತ್ತಿಹೇಳುತ್ತದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರಮುಖ ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳಿಂದ ಭಾರತವು ಸಾರ್ವಭೌಮ ರೇಟಿಂಗ್‌ ಗಳಲ್ಲಿ ಇಂತಹ ಏರಿಕೆಗಳನ್ನು ಈ ಹಿಂದೆಯೂ ಪಡೆದಿರುವುದು ಗಮನಾರ್ಹ. ಮಾರ್ನಿಂಗ್‌ಸ್ಟಾರ್ ಡಿ ಬಿ ಆರ್‌ ಎಸ್ 2025ರ ಮೇ ತಿಂಗಳಲ್ಲಿ ಭಾರತದ ಸಾರ್ವಭೌಮ ರೇಟಿಂಗ್‌ ಅನ್ನು ಮೇಲ್ದರ್ಜೆಗೇರಿಸಿತ್ತು. ಇದಾದ ಬಳಿಕ 2025ರ ಆಗಸ್ಟ್‌ ನಲ್ಲಿ ಎಸ್‌&ಪಿ ಗ್ಲೋಬಲ್ ರೇಟಿಂಗ್ಸ್ ಹಾಗೂ 2025ರ ಸೆಪ್ಟೆಂಬರ್‌ ನಲ್ಲಿ ಜಪಾನ್‌ ನ ರೇಟಿಂಗ್‌ ಮತ್ತು ಇನ್ವೆಸ್ಟ್‌ಮೆಂಟ್‌ ಇನ್‌ಫರ್ಮೇಷನ್‌, ಇಂಕ್ ಸಂಸ್ಥೆಗಳು ಭಾರತದ ಸಾರ್ವಭೌಮ ರೇಟಿಂಗ್‌ ಅನ್ನು ಮೇಲ್ದರ್ಜೆಗೇರಿಸಿದ್ದವು.

 

******

 


(ಪ್ರಕಟಣೆ ಐ.ಡಿ.: 2306125) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Malayalam