ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಅಂದಾಜುಗಳ ಬಿಡುಗಡೆಯ ನಂತರ ಸ್ವೀಕರಿಸಲಾದ ಹೆಚ್ಚುವರಿ ಮಾಹಿತಿ

ಪ್ರಕಟಣಾ ದಿನಾಂಕ: 02 SEP 2026 2:43PM by PIB Bengaluru

ಸಚಿವಾಲಯವು 2022-23ರ ಮೂಲ ವರ್ಷದೊಂದಿಗಿನ ವಾರ್ಷಿಕ ಮತ್ತು ತ್ರೈಮಾಸಿಕ ಜಿಡಿಪಿ (GDP) ಅಂದಾಜುಗಳ ನವೀಕರಿಸಿದ ಸರಣಿಯನ್ನು 31 ಆಗಸ್ಟ್ 2026 ರಂದು ಬಿಡುಗಡೆ ಮಾಡಿದೆ. ಈ ಜಿಡಿಪಿ ಅಂದಾಜುಗಳನ್ನು 2022-23 ರ ಮೂಲ ವರ್ಷದೊಂದಿಗಿನ ಉತ್ಪನ್ನ ಉತ್ಪಾದಕ ಬೆಲೆ ಸೂಚ್ಯಂಕ (PPI); ಬ್ಯಾಂಕಿಂಗ್ ಸೇವೆಗಳ ಬೆಲೆ ಸೂಚ್ಯಂಕ (BkSPI) ಮತ್ತು ವಿವಿಧ ಆಡಳಿತಾತ್ಮಕ ಮೂಲಗಳಿಂದ ನವೀಕರಿಸಿದ ಡೇಟಾವನ್ನು ಬಳಸಿಕೊಂಡು ನವೀಕರಿಸಲಾಗಿದೆ.

ಈಗ ಬಿಡುಗಡೆ ಮಾಡಲಾಗುತ್ತಿರುವ ಹೆಚ್ಚುವರಿ ಮಾಹಿತಿಯು ಮುಖ್ಯವಾಗಿ ಡಬಲ್ ಡಿಫ್ಲೇಶನ್ (double deflation) ವಿಧಾನದ ಅಳವಡಿಕೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ನಕಾರಾತ್ಮಕ ಅಂತರ್ಗತ ಡಿಫ್ಲೇಟರ್‌ಗಳು (implicit deflators), ಸಿಪಿಐ (CPI) ಮತ್ತು ಡಬ್ಲ್ಯೂಪಿಐ (WPI) ನಂತಹ ಇತರ ಡಿಫ್ಲೇಶನ್ ಸೂಚ್ಯಂಕಗಳೊಂದಿಗೆ ಅದರ ಹೋಲಿಕೆ, ನಾಮಮಾತ್ರ ಮತ್ತು ನೈಜ ಜಿವಿಎ/ಜಿಡಿಪಿ ನಡುವಿನ ಅಂತರ, ಉತ್ಪಾದನೆ/ಆದಾಯ ಮತ್ತು ವೆಚ್ಚದ ಕಡೆಯಿಂದ ಜಿಡಿಪಿ ಅಂದಾಜುಗಳ ನಡುವಿನ ವ್ಯತ್ಯಾಸ, ಹೊಸ ಮತ್ತು ಹಳೆಯ ಸರಣಿಗಳ ಬೆಳವಣಿಗೆಯ ದರಗಳ ಹೋಲಿಕೆ ಇತ್ಯಾದಿಗಳಿಗೆ ಸಂಬಂಧಿಸಿದೆ. ಹೆಚ್ಚಿನ ಸ್ಪಷ್ಟತೆಯನ್ನು ತರಲು, ವಿವಿಧ ಪಾಲುದಾರರ ಬಳಕೆಗಾಗಿ ಸಚಿವಾಲಯವು ಅನುಬಂಧದಲ್ಲಿರುವಂತೆ ಈ ಹೆಚ್ಚುವರಿ ಪ್ರಶ್ನೆಗಳು ಮತ್ತು ಉತ್ತರಗಳನ್ನು ಹೊರತಂದಿದೆ.

*****

ಅನುಬಂಧ

ಜಿಡಿಪಿ (GDP) ಅಂದಾಜುಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಉತ್ತರಗಳು

 

1. ತಯಾರಿಕಾ ವಲಯದ ಉತ್ಪಾದನೆ ಮತ್ತು ಇನ್‌ಪುಟ್ ಬೆಲೆಗಳೆರಡೂ ಹೆಚ್ಚಾಗಿದ್ದರೂ, 2026-27 ಮೊದಲ ತ್ರೈಮಾಸಿಕದಲ್ಲಿ ತಯಾರಿಕಾ ವಲಯವು ಜಿವಿಎ (GVA) ಅಂತರ್ಗತ ಡಿಫ್ಲೇಟರ್‌ನಲ್ಲಿ "-1.5%" ನಕಾರಾತ್ಮಕ ಹಣದುಬ್ಬರವನ್ನು ಹೇಗೆ ದಾಖಲಿಸಬಹುದು, ಆದರೆ ಕೃಷಿ ವಲಯವು 3.9% ನಷ್ಟು ಧನಾತ್ಮಕ ಹಣದುಬ್ಬರ ದರವನ್ನು ದಾಖಲಿಸಿದೆಯೇ?

ಉತ್ತರ:

ತಯಾರಿಕೆಯಲ್ಲಿ ಅಂತರ್ಗತ ಡಿಫ್ಲೇಟರ್‌ನಲ್ಲಿನ ನಕಾರಾತ್ಮಕ ಹಣದುಬ್ಬರ ಎಂದರೆ ತಯಾರಿಕಾ ಬೆಲೆಗಳು ಕುಸಿದಿವೆ ಎಂದರ್ಥವಲ್ಲ. ಉತ್ಪಾದನೆ  ಮತ್ತು ಇನ್‌ಪುಟ್‌ಗಳ ಬೆಲೆ ಡಿಫ್ಲೇಟರ್‌ಗಳು ಹಾಗೂ ಅಂತರ್ಗತ ಜಿವಿಎ (GVA) ಡಿಫ್ಲೇಟರ್ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಮುಖ್ಯವಾಗಿದೆ.

ಡಬಲ್-ಡಿಫ್ಲೇಶನ್ ವಿಧಾನದ ಅಡಿಯಲ್ಲಿ, ತಯಾರಿಕಾ ವಲಯದ ಉತ್ಪಾದನೆ ಮತ್ತು ಮಧ್ಯಂತರ ಬಳಕೆಯನ್ನು ಪ್ರತ್ಯೇಕವಾಗಿ ಡಿಫ್ಲೇಟ್ ಮಾಡಲಾಗುತ್ತದೆ ಮತ್ತು ನೈಜ ಉತ್ಪಾದನೆಯಿಂದ ನೈಜ ಮಧ್ಯಂತರ ಬಳಕೆಯನ್ನು ಕಳೆಯುವ ಮೂಲಕ ನೈಜ ಜಿವಿಎ ಪಡೆಯಲಾಗುತ್ತದೆ. ಆದ್ದರಿಂದ, ಇನ್‌ಪುಟ್ ಬೆಲೆಗಳು ಉತ್ಪಾದನಾ ಬೆಲೆಗಳಿಗಿಂತ ವೇಗವಾಗಿ ಹೆಚ್ಚಾದಾಗ, ಸಾಪೇಕ್ಷ ಬೆಲೆ ಚಲನೆಯು ನಾಮಮಾತ್ರ ಜಿವಿಎ, ನೈಜ ಜಿವಿಎ ಗಿಂತ ನಿಧಾನವಾಗಿ ಬೆಳೆಯಲು ಕಾರಣವಾಗಬಹುದು. ಪರಿಣಾಮವಾಗಿ, ನಾಮಮಾತ್ರ ಜಿವಿಎ ಅನ್ನು ನೈಜ ಜಿವಿಎ ಯೊಂದಿಗೆ ಹೋಲಿಸುವ ಮೂಲಕ ಪಡೆಯಲಾದ ಅಂತರ್ಗತ ಜಿವಿಎ ಡಿಫ್ಲೇಟರ್, ಉತ್ಪಾದನೆ ಮತ್ತು ಇನ್‌ಪುಟ್ ಬೆಲೆಗಳೆರಡೂ ಏರುತ್ತಿದ್ದರೂ ಸಹ ನಕಾರಾತ್ಮಕ ಹಣದುಬ್ಬರವನ್ನು ತೋರಿಸಬಹುದು.

ಪ್ರಮುಖವಾಗಿ, ನಕಾರಾತ್ಮಕ ಜಿವಿಎ ಡಿಫ್ಲೇಟರ್ ಎಂದರೆ ಯಾಂತ್ರಿಕವಾಗಿ ಕಡಿಮೆ ನೈಜ ಬೆಳವಣಿಗೆ ಎಂದರ್ಥವಲ್ಲ. ನೈಜ ಜಿವಿಎ ಬೆಳವಣಿಗೆಯು ನೈಜ ಉತ್ಪಾದನೆ ಮತ್ತು ನೈಜ ಮಧ್ಯಂತರ ಬಳಕೆಯಲ್ಲಿನ ಸಾಪೇಕ್ಷ ಚಲನೆಗಳನ್ನು ಅವಲಂಬಿಸಿರುತ್ತದೆ.

ಮೇಲಿನ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ಕೆಳಗೆ ನೀಡಲಾಗಿದೆ:

 

ವರ್ಷ 1

ವರ್ಷ 2

ಬೆಳವಣಿಗೆಯ ದರ

ಉತ್ಪಾದನೆಯ ಒಟ್ಟು ಮೌಲ್ಯ

1,000 ಕೋಟಿ

1,200 ಕೋಟಿ

20.0%

ಮಧ್ಯಂತರ ಬಳಕೆ

800 ಕೋಟಿ

976 ಕೋಟಿ

22.0%

ನಾಮಮಾತ್ರ ಒಟ್ಟು ಮೌಲ್ಯ ವರ್ಧಿತ (ಪ್ರಸ್ತುತ)

200 ಕೋಟಿ

224 ಕೋಟಿ

12.0%

(ಪಿಸಿಐ ಉತ್ಪಾದನಾ ಸೂಚ್ಯಂಕ)

100

110

10.0%

(ಪಿಸಿಐ ಇನ್‌ಪುಟ್ ಸೂಚ್ಯಂಕ)

100

114

14.0%

ಡಿಫ್ಲೇಟೆಡ್ ಉತ್ಪಾದನೆ (ಸ್ಥಿರ)

1,000 ಕೋಟಿ

1,091 ಕೋಟಿ

9.1%

ಡಿಫ್ಲೇಟೆಡ್ ಇನ್‌ಪುಟ್‌ಗಳು (ಸ್ಥಿರ)

800 ಕೋಟಿ

856 ಕೋಟಿ

7.0%

ನೈಜ ಮೌಲ್ಯ ವರ್ಧಿತ (ಸ್ಥಿರ)

200 ಕೋಟಿ

235 ಕೋಟಿ

17.5%

ಪ್ರಸ್ತುತ ಬೆಲೆ ಬೆಳವಣಿಗೆ ದರ (%)

12.0%

ಸ್ಥಿರ ಬೆಲೆ ಬೆಳವಣಿಗೆ ದರ (%)

17.5%

ಉದಾಹರಣೆಯ ಪ್ರಕಾರ, ನಾಮಮಾತ್ರ ಜಿವಿಎ 12% ಬೆಳೆದರೆ, ನೈಜ ಜಿವಿಎ 17.5% ಬೆಳೆಯುತ್ತದೆ, ಇದರ ಪರಿಣಾಮವಾಗಿ ನಕಾರಾತ್ಮಕ ಅಂತರ್ಗತ ಜಿವಿಎ ಡಿಫ್ಲೇಟರ್ ಉಂಟಾಗುತ್ತದೆ. ಇದು ತಯಾರಿಸಿದ ಉತ್ಪನ್ನಗಳ ಬೆಲೆಗಳು ಕುಸಿದಿವೆ ಎಂದು ಅರ್ಥೈಸುವುದಿಲ್ಲ; ಬದಲಾಗಿ, ಇದು ಡಬಲ್ ಡಿಫ್ಲೇಶನ್ ಅಡಿಯಲ್ಲಿ ಉತ್ಪಾದನೆ ಮತ್ತು ಇನ್‌ಪುಟ್ ಬೆಲೆಗಳ ಸಾಪೇಕ್ಷ ಚಲನೆಯನ್ನು ಪ್ರತಿಬಿಂಬಿಸುತ್ತದೆ.

2026-27 ರ ಮೊದಲ ತ್ರೈಮಾಸಿಕದಲ್ಲಿ, ತಯಾರಿಕಾ ಜಿವಿಎ ಅನ್ನು ಡಬಲ್-ಡಿಫ್ಲೇಶನ್ ವಿಧಾನವನ್ನು ಬಳಸಿ ಸಂಕಲಿಸಲಾಗುತ್ತದೆ, ಅದರ ಅಡಿಯಲ್ಲಿ ಉತ್ಪಾದನೆ ಮತ್ತು ಮಧ್ಯಂತರ ಬಳಕೆಯನ್ನು ಪ್ರತ್ಯೇಕವಾಗಿ ಡಿಫ್ಲೇಟ್ ಮಾಡಲಾಗುತ್ತದೆ. ಈ ಅವಧಿಯಲ್ಲಿ ಉತ್ಪಾದನಾ ಬೆಲೆಗಳಿಗೆ ಹೋಲಿಸಿದರೆ ಇನ್‌ಪುಟ್ ಬೆಲೆಗಳು ವೇಗವಾಗಿ ಹೆಚ್ಚಾದವು. ಪರಿಣಾಮವಾಗಿ, ಈ ವಲಯದ ನಾಮಮಾತ್ರ ಜಿವಿಎ ಬೆಳವಣಿಗೆಯು 7.7% ರಷ್ಟು ತುಲನಾತ್ಮಕವಾಗಿ ಕಡಿಮೆಯಿದ್ದರೆ, ನೈಜ ಜಿವಿಎ ಬೆಳವಣಿಗೆಯು 9.2% ರಷ್ಟಿತ್ತು. ನಾಮಮಾತ್ರ ಮತ್ತು ನೈಜ ಜಿವಿಎ ಬೆಳವಣಿಗೆಯ ನಡುವಿನ ಈ ವ್ಯತ್ಯಾಸವು 1.5% ರಷ್ಟು ನಕಾರಾತ್ಮಕ ಅಂತರ್ಗತ ಜಿವಿಎ ಡಿಫ್ಲೇಟರ್ ಅನ್ನು ಉಂಟುಮಾಡಿತು. ಉದಾಹರಣೆಗೆ, ಉತ್ಪಾದನಾ ಬೆಲೆಗಳಿಗಿಂತ ಇನ್‌ಪುಟ್ ಬೆಲೆಗಳ ಬೆಳವಣಿಗೆಯು ಹೆಚ್ಚಾಗಿ ಕಂಡುಬಂದ ಕೆಲವು ಚಟುವಟಿಕೆಗಳೆಂದರೆ ಜವಳಿ ಉತ್ಪಾದನೆ ಮತ್ತು ಹತ್ತಿ ಜಿನ್ನಿಂಗ್, ಮೂಲ ಲೋಹಗಳ ಉತ್ಪಾದನೆ, ರಬ್ಬರ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ ಇತ್ಯಾದಿ. ಇನ್ನಷ್ಟು ಸೇರಿಸುವುದಾದರೆ, ಒಇಸಿಡಿ (OECD) ಯ ಸಂಶೋಧನಾ ಪ್ರಬಂಧಗಳು ಜಾಗತಿಕ ಇಂಧನ ಮತ್ತು ಕಚ್ಚಾ ವಸ್ತುಗಳ ಆಘಾತಗಳ ಸಮಯದಲ್ಲಿ ಡಬಲ್ ಡಿಫ್ಲೇಶನ್ ಬಳಸುವ ದೇಶಗಳು ತಯಾರಿಕೆಯಲ್ಲಿ ಏರಿಳಿತದ ಅಥವಾ ನಕಾರಾತ್ಮಕ ಅಂತರ್ಗತ ಡಿಫ್ಲೇಟರ್‌ಗಳನ್ನು ಆಗಾಗ್ಗೆ ಅನುಭವಿಸುತ್ತವೆ ಎಂಬುದನ್ನು ಹೈಲೈಟ್ ಮಾಡುತ್ತವೆ. ಆಮದು ಮಾಡಿಕೊಂಡ ಕಚ್ಚಾ ವಸ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಮುಂದುವರಿದ ಅರ್ಥವ್ಯವಸ್ಥೆಗಳು ಅಂತಾರರಾಷ್ಟ್ರೀಯ ಪೂರೈಕೆ ಸರಪಳಿಗಳು ಏರಿಳಿತಗೊಂಡಾಗ ನಿಯಮಿತವಾಗಿ ನಕಾರಾತ್ಮಕ ತಯಾರಿಕಾ ಡಿಫ್ಲೇಟರ್‌ಗಳನ್ನು ಅನುಭವಿಸುತ್ತವೆ.

ಆದ್ದರಿಂದ, ಇದು ತಯಾರಿಕಾ ಕ್ಷೇತ್ರದ ಉತ್ಪಾದನಾ ಬೆಲೆಗಳು ಕುಸಿದಿವೆ ಎಂದರ್ಥವಲ್ಲ. ಬದಲಾಗಿ, ಇದು ಡಬಲ್-ಡಿಫ್ಲೇಶನ್ ಚೌಕಟ್ಟಿನಲ್ಲಿ ಉತ್ಪಾದನೆ ಮತ್ತು ಇನ್‌ಪುಟ್ ಬೆಲೆಗಳ ಸಾಪೇಕ್ಷ ಚಲನೆಯನ್ನು ಪ್ರತಿಬಿಂಬಿಸುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ತ್ರೈಮಾಸಿಕ ಮಟ್ಟದಲ್ಲಿ, ಕೃಷಿ ಜಿವಿಎ (GVA) ಅನ್ನು ಉತ್ಪಾದನಾ ಅಂದಾಜುಗಳನ್ನು ಬಳಸಿ ಮೊದಲು ಸ್ಥಿರ ಬೆಲೆಯಲ್ಲಿ ಸಂಕಲಿಸಲಾಗುತ್ತದೆ. ನಂತರ ಸೂಕ್ತ ಉತ್ಪಾದಕ ಬೆಲೆ ಸೂಚ್ಯಂಕವನ್ನು ಬಳಸಿಕೊಂಡು ಸ್ಥಿರ ಬೆಲೆ ಅಂದಾಜುಗಳನ್ನು ಹೆಚ್ಚಿಸುವ ಮೂಲಕ ಕೃಷಿ ಜಿವಿಎ ಯ ಪ್ರಸ್ತುತ ಬೆಲೆ ಅಂದಾಜುಗಳನ್ನು ಪಡೆಯಲಾಗುತ್ತದೆ.

2026-27 ರ ಮೊದಲ ತ್ರೈಮಾಸಿಕದಲ್ಲಿ, ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಗುಂಪಿನ ಉತ್ಪಾದನಾ ಉತ್ಪಾದಕ ಬೆಲೆ ಸೂಚ್ಯಂಕವು ಸುಮಾರು 5% ರಷ್ಟು ಹೆಚ್ಚಾಗಿದೆ. ಉತ್ಪಾದನಾ ಬೆಲೆಗಳು ಹೆಚ್ಚಾದ್ದರಿಂದ ಮತ್ತು ಕೃಷಿಯ ನಾಮಮಾತ್ರ ಜಿವಿಎ ಮುಖ್ಯವಾಗಿ ಈ ಉತ್ಪಾದನಾ ಬೆಲೆಗಳಿಂದ ಚಾಲಿತವಾಗುವುದರಿಂದ, ಅದರ ಅಂತರ್ಗತ ಹಣದುಬ್ಬರವು 3.9% ರಷ್ಟು ಧನಾತ್ಮಕವಾಗಿಯೇ ಉಳಿಯಿತು.

2. ಪ್ರಸಕ್ತ ವರ್ಷದ ಜಿಡಿಪಿ ಉತ್ತಮವಾಗಿ ಕಾಣುವಂತೆ ಮಾಡಲು ಕಳೆದ ವರ್ಷದ ಪ್ರಸ್ತುತ ಜಿಡಿಪಿಯನ್ನು 86 ಲಕ್ಷ ಕೋಟಿ ರೂ.ನಿಂದ 80 ಲಕ್ಷ ಕೋಟಿ ರೂ.ಗೆ ಇಳಿಸಲಾಗಿದೆ. ಕಳೆದ ವರ್ಷದ ಸಂಖ್ಯೆಯನ್ನು ಪರಿಶೀಲಿಸದಿದ್ದರೆ, ಪ್ರಸ್ತುತ ಬೆಲೆಗಳಲ್ಲಿ ಬೆಳವಣಿಗೆಯು 2.6% ಆಗಿರುತ್ತಿತ್ತು.

ಉತ್ತರ:

ಮೊದಲ ತ್ರೈಮಾಸಿಕದ ಜಿಡಿಪಿ ಅಂದಾಜುಗಳ ಹೋಲಿಕೆಯನ್ನು ಜಿಡಿಪಿ ಸರಣಿಗೆ ಮಾಡಲಾದ ತಿದ್ದುಪಡಿಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. 2025-26 ರ ಮೊದಲ ತ್ರೈಮಾಸಿಕದ ಅಂದಾಜಿನಲ್ಲಿನ ಬದಲಾವಣೆಯು ಪ್ರಸಕ್ತ ವರ್ಷದ ಬೆಳವಣಿಗೆಯನ್ನು ಹೆಚ್ಚಾಗಿ ತೋರಿಸಲು ಮಾಡಿದ ಕೆಳಮುಖ ಪರಿಷ್ಕರಣೆಯನ್ನು ಪ್ರತಿನಿಧಿಸುವುದಿಲ್ಲ. ಇದು ಜಿಡಿಪಿ ಸರಣಿಗೆ ಮಾಡಲಾದ ಸರಣಿ ಕ್ರಮಬದ್ಧ ವಿಧಾನ ಮತ್ತು ದತ್ತಾಂಶ ಪರಿಷ್ಕರಣೆಗಳನ್ನು ಪ್ರತಿಬಿಂಬಿಸುತ್ತದೆ.

ತ್ರೈಮಾಸಿಕ ಜಿಡಿಪಿ ಅಂದಾಜುಗಳನ್ನು ಬೆಂಚ್‌ಮಾರ್ಕ್-ಇಂಡಿಕೇಟರ್ ವಿಧಾನವನ್ನು ಬಳಸಿ ಸಂಕಲಿಸಲಾಗುತ್ತದೆ, ಇದರ ಅಡಿಯಲ್ಲಿ ತ್ರೈಮಾಸಿಕ ಅಂದಾಜುಗಳ ಚಲನೆಯು ಸಂಬಂಧಿತ ಹೆಚ್ಚಿನ-ಆವರ್ತನ ಸೂಚಕಗಳ ಚಲನೆಯಿಂದ ಮಾರ್ಗದರ್ಶಿಸಲ್ಪಡುತ್ತದೆ. ಹಿಂದಿನ ವರ್ಷದ ಬೆಂಚ್‌ಮಾರ್ಕ್‌ನಲ್ಲಿನ ಪರಿಷ್ಕರಣೆಯು ಪ್ರಸಕ್ತ ವರ್ಷದ ಮೂಲಭೂತ ಆರ್ಥಿಕ ಚಟುವಟಿಕೆಯಲ್ಲಿ ಅಥವಾ ಅಂದಾಜಿಗಾಗಿ ಬಳಸಲಾಗುವ ಸೂಚಕಗಳಲ್ಲಿ ಕೃತಕ ಹೆಚ್ಚಳವನ್ನು ಸೃಷ್ಟಿಸುವುದಿಲ್ಲ. ತ್ರೈಮಾಸಿಕ ಸರಣಿಯಲ್ಲಿ ನೂರಕ್ಕೂ ಹೆಚ್ಚು ಪ್ರಮಾಣ ಅಥವಾ ಮೌಲ್ಯದ ಸೂಚಕಗಳನ್ನು ಬಳಸಲಾಗುತ್ತದೆ. ಕೆಲವು ಪ್ರಮುಖ ಪ್ರಮಾಣದ ಸೂಚಕಗಳನ್ನು ಉಲ್ಲೇಖಿಸುವುದಾದರೆ - ಬೆಳೆ ಉತ್ಪಾದನೆಯಲ್ಲಿನ ಬೆಳವಣಿಗೆ, ಸಿಮೆಂಟ್ ಉತ್ಪಾದನಾ ಸೂಚ್ಯಂಕದಲ್ಲಿನ ಬೆಳವಣಿಗೆ, ಸಿದ್ಧಪಡಿಸಿದ ಉಕ್ಕಿನ ಬಳಕೆಯಲ್ಲಿನ ಬೆಳವಣಿಗೆ, ವಾಣಿಜ್ಯ ವಾಹನಗಳ ಮಾರಾಟದಲ್ಲಿನ ಬೆಳವಣಿಗೆ ಇತ್ಯಾದಿ.

ಮೊದಲನೆಯದಾಗಿ, 2025-26 ರ ಮೊದಲ ತ್ರೈಮಾಸಿಕದ ಜಿಡಿಪಿ ಅಂದಾಜನ್ನು ಆರಂಭದಲ್ಲಿ 29.08.2025 ರಂದು ಆಗ ಚಾಲ್ತಿಯಲ್ಲಿದ್ದ 2011-12 ಮೂಲ-ವರ್ಷದ ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಸರಣಿಯ ಅಡಿಯಲ್ಲಿ, 2025-26 ರ ಮೊದಲ ತ್ರೈಮಾಸಿಕದ ಪ್ರಸ್ತುತ ಬೆಲೆಗಳಲ್ಲಿನ ಜಿಡಿಪಿಯನ್ನು ₹86.05 ಲಕ್ಷ ಕೋಟಿ ಎಂದು ಅಂದಾಜಿಸಲಾಗಿತ್ತು.

ಎರಡನೆಯದಾಗಿ, ಫೆಬ್ರವರಿ 2026 ರಲ್ಲಿ, ಸಚಿವಾಲಯವು 2022-23 ಅನ್ನು ಮೂಲ ವರ್ಷವಾಗಿಟ್ಟುಕೊಂಡು ಹೊಸ ಜಿಡಿಪಿ ಸರಣಿಯನ್ನು ಪರಿಚಯಿಸಿತು. ಮೂಲ-ವರ್ಷದ ಪರಿಷ್ಕರಣೆಯ ಭಾಗವಾಗಿ, ನವೀಕರಿಸಿದ ದತ್ತಾಂಶದ ಮೂಲಗಳು, ಸುಧಾರಿತ ವಿಧಾನಗಳು, ಪರಿಷ್ಕೃತ ವ್ಯಾಪ್ತಿ ಮತ್ತು ಇತರ ಸಂಬಂಧಿತ ಮಾಹಿತಿಗಳನ್ನು ಅಳವಡಿಸಲು ಇಡೀ ಸಮಯದ ಸರಣಿಯ ಜಿಡಿಪಿ ಅಂದಾಜುಗಳನ್ನು ಸಮಗ್ರವಾಗಿ ಪರಿಷ್ಕರಿಸಲಾಗುತ್ತದೆ. ಅದರಂತೆ, ಹೊಸ ಸರಣಿಯ ಅಡಿಯಲ್ಲಿ ಪ್ರಸ್ತುತ ಬೆಲೆಗಳಲ್ಲಿ 2025-26 ರ ಮೊದಲ ತ್ರೈಮಾಸಿಕದ ಜಿಡಿಪಿ ಅಂದಾಜು ₹80.32 ಲಕ್ಷ ಕೋಟಿಯಾಗಿತ್ತು.

ಮೂರನೆಯದಾಗಿ, 05.06.2026 ರಂದು 2025-26 ರ ಜಿಡಿಪಿಯ ತತ್ಕಾಲೀನ ಅಂದಾಜುಗಳ  ಬಿಡುಗಡೆಯ ಸಮಯದಲ್ಲಿ, ಸೂಚಕಗಳು ಮತ್ತು ದತ್ತಾಂಶದ ಲಭ್ಯತೆ ಹಾಗೂ ನವೀಕರಣವನ್ನು ಪ್ರತಿಬಿಂಬಿಸುವ ಮೂಲಕ 2025-26 ರ ಮೊದಲ ತ್ರೈಮಾಸಿಕದ ಅಂದಾಜನ್ನು ₹80.44 ಲಕ್ಷ ಕೋಟಿಗೆ ಇನ್ನಷ್ಟು ನವೀಕರಿಸಲಾಯಿತು.

ನಾಲ್ಕನೆಯದಾಗಿ, ತರುವಾಯ, ಐಐಪಿ (IIP) ಮತ್ತು ಪಿಸಿಐ (PPI) ಯ ಹೊಸ ಸರಣಿಗಳು ಲಭ್ಯವಾದವು ಮತ್ತು ಅವುಗಳನ್ನು ಜಿಡಿಪಿ ಸಂಕಲನದಲ್ಲಿ ಅಳವಡಿಸಲಾಯಿತು. ಅವುಗಳ ಅಳವಡಿಕೆಯು 2022-23 ರಿಂದ ಮುಂದಿನ ಸಂಬಂಧಿತ ಜಿಡಿಪಿ ಅಂದಾಜುಗಳನ್ನು ನವೀಕರಿಸುವುದನ್ನು ಕಡ್ಡಾಯಗೊಳಿಸಿತು. ಪರಿಣಾಮವಾಗಿ, ಪ್ರಸ್ತುತ ಬೆಲೆಗಳಲ್ಲಿ 2025-26 ರ ಮೊದಲ ತ್ರೈಮಾಸಿಕದ ಜಿಡಿಪಿಯನ್ನು ₹80.00 ಲಕ್ಷ ಕೋಟಿಗೆ ಪರಿಷ್ಕರಿಸಲಾಯಿತು.

ಹೀಗಾಗಿ, ₹86.05 ಲಕ್ಷ ಕೋಟಿಯಿಂದ ₹80.00 ಲಕ್ಷ ಕೋಟಿಗೆ ತಲುಪಿದ ಚಲನೆಯು ಮೂಲ ವರ್ಷದ ಬದಲಾವಣೆ, ಸುಧಾರಿತ ದತ್ತಾಂಶದ ಮೂಲಗಳು ಮತ್ತು ವಿಧಾನಗಳ ಅಳವಡಿಕೆ ಹಾಗೂ ಲಭ್ಯವಿರುವ ಸೂಚಕಗಳ ನವೀಕರಣದಿಂದ ಉಂಟಾದ ಜಿಡಿಪಿ ಸರಣಿಯ ಸರಣಿ ಪರಿಷ್ಕರಣೆಗಳ ಫಲಿತಾಂಶವಾಗಿದೆ. ಆದ್ದರಿಂದ ಪ್ರಸಕ್ತ ವರ್ಷದ ಬೆಳವಣಿಗೆಯ ದರವನ್ನು ಯಾಂತ್ರಿಕವಾಗಿ ಹೆಚ್ಚಿಸಲು ಕಳೆದ ವರ್ಷದ ಜಿಡಿಪಿಯನ್ನು ಉದ್ದೇಶಪೂರ್ವಕವಾಗಿ ಕೆಳಮುಖವಾಗಿ ಪರಿಷ್ಕರಿಸಲಾಗಿದೆ ಎಂದು ಅರ್ಥೈಸುವುದು ತಪ್ಪಾಗುತ್ತದೆ.

ಅದರಲ್ಲೂ ಅತ್ಯಂತ ಮುಖ್ಯವಾಗಿ, ಹಳೆಯ 2011-12 ಸರಣಿಯ ₹86.05 ಲಕ್ಷ ಕೋಟಿ ಅಂದಾಜನ್ನು ಪರಿಷ್ಕೃತ 2022-23 ಸರಣಿಯ ಅಡಿಯಲ್ಲಿ ಪ್ರಸ್ತುತ 2026-27 ಮೊದಲ ತ್ರೈಮಾಸಿಕದ ಅಂದಾಜಿನೊಂದಿಗೆ ನೇರವಾಗಿ ಹೋಲಿಸಲು ಸಾಧ್ಯವಿಲ್ಲ. ಬದಲಾಗಿ, ಒಂದೇ ಮತ್ತು ಇತ್ತೀಚಿನ ಹೋಲಿಸಬಹುದಾದ ಜಿಡಿಪಿ ಸರಣಿಯ ಅಂದಾಜುಗಳನ್ನು ಬಳಸಿ ಬೆಳವಣಿಗೆಯ ದರಗಳನ್ನು ಲೆಕ್ಕಹಾಕಲಾಗುತ್ತದೆ (ಅಂದರೆ ಮೂಲ 2022-23 ನೊಂದಿಗೆ). ಹೀಗಾಗಿ, 88.27 ಲಕ್ಷ ಕೋಟಿ ರೂ. ಇರುವ 2026-27 ರ ಮೊದಲ ತ್ರೈಮಾಸಿಕಕ್ಕೆ ಸೂಕ್ತವಾದ ಹೋಲಿಕೆಯು 2025-26 ರ ಮೊದಲ ತ್ರೈಮಾಸಿಕದ ಹಿಂದಿನ ₹80.32 ಲಕ್ಷ ಕೋಟಿ ಅಂದಾಜಿನೊಂದಿಗೆ ಇರಬೇಕಿತ್ತೇ ಹೊರತು, ಹಳೆಯ ಸರಣಿಯ ₹86.05 ಲಕ್ಷ ಕೋಟಿ ಅಂದಾಜಿನೊಂದಿಗಲ್ಲ.

3. ಗ್ರಾಹಕ ಹಣದುಬ್ಬರ (CPI) 3.9% ಮತ್ತು ಸಗಟು ಹಣದುಬ್ಬರ (WPI) 9% ಕ್ಕಿಂತ ಹೆಚ್ಚಿದ್ದರೂ, 2.5% ರಷ್ಟಿರುವ ಜಿಡಿಪಿ ಅಂತರ್ಗತ ಹಣದುಬ್ಬರ ದರವನ್ನು ನಾವು ಹೇಗೆ ಸಮನ್ವಯಗೊಳಿಸಬಹುದು?

ಉತ್ತರ:

ಜಿಡಿಪಿ ಡಿಫ್ಲೇಟರ್ ಎಂಬುದು ನಿವ್ವಳ ಮೌಲ್ಯ ವರ್ಧನೆಯ  ಅಂತರ್ಗತ ಬೆಲೆಯೇ ಹೊರತು, ವಹಿವಾಟು ಬೆಲೆಗಳ ನೇರ ಅಳತೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಈ ಬೆಲೆ ವ್ಯತ್ಯಾಸವನ್ನು ಸಮನ್ವಯಗೊಳಿಸಬಹುದು. ಜಿಡಿಪಿ ಡಿಫ್ಲೇಟರ್, ಸಿಪಿಐ ಮತ್ತು ಡಬ್ಲ್ಯೂಪಿಐ ಅರ್ಥವ್ಯವಸ್ಥೆಯ ವಿವಿಧ ಆಯಾಮಗಳನ್ನು ಅಳೆಯುತ್ತವೆ ಮತ್ತು ವಿಭಿನ್ನ ವ್ಯಾಪ್ತಿ ಹಾಗೂ ತೂಕಗಳನ್ನು ಹೊಂದಿರುವುದರಿಂದ ಇಲ್ಲಿ ಯಾವುದೇ ಅಸಂಗತತೆ ಇಲ್ಲ.

ಈ ಆರ್ಥಿಕ ಸೂಚಕಗಳನ್ನು ಅಳೆಯಲು ಬಳಸಲಾಗುವ ಸರಕುಗಳ ಬುಟ್ಟಿಗಳು (baskets of goods) ಅವುಗಳ ಉದ್ದೇಶಗಳಿಗೆ ಅನುಗುಣವಾಗಿ ಬದಲಾಗುತ್ತವೆ:

ಸಿಪಿಐ (ಗ್ರಾಹಕ ಬೆಲೆ ಸೂಚ್ಯಂಕ - CPI): ಅಂತಿಮ ಗ್ರಾಹಕರ ಹಂತದಲ್ಲಿ ಕುಟುಂಬಗಳ ಬಳಕೆಯ ನಿರ್ದಿಷ್ಟ ಸರಕು ಮತ್ತು ಸೇವೆಗಳ ಬುಟ್ಟಿಯ ಬೆಲೆ ಬದಲಾವಣೆಗಳನ್ನು ಮಾತ್ರ ಪ್ರತಿಬಿಂಬಿಸುತ್ತದೆ.

ಡಬ್ಲ್ಯೂಪಿಐ (ಸಗಟು ಬೆಲೆ ಸೂಚ್ಯಂಕ - WPI): ಸಗಟು ವ್ಯಾಪಾರಿಯ ಹಂತದಲ್ಲಿ ಸೇವೆಗಳನ್ನು ಹೊರತುಪಡಿಸಿ ಸಗಟು ಸರಕುಗಳು, ಕಚ್ಚಾ ವಸ್ತುಗಳು ಮತ್ತು ತಯಾರಿಸಿದ ಸರಕುಗಳ ಬೆಲೆ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ.

ಅಂತರ್ಗತ ಜಿಡಿಪಿ ಡಿಫ್ಲೇಟರ್ (Implicit GDP Deflator): ಇದು ಪ್ರಸ್ತುತ ಬೆಲೆಗಳಲ್ಲಿನ ಜಿಡಿಪಿ ಮತ್ತು ಸ್ಥಿರ ಬೆಲೆಗಳಲ್ಲಿನ ಜಿಡಿಪಿಯ ನಡುವಿನ ಅನುಪಾತವಾಗಿದೆ. ಇದು ಸರ್ಕಾರಿ ವೆಚ್ಚ, ಕಾರ್ಪೊರೇಟ್ ಹೂಡಿಕೆಗಳು, ರಫ್ತುಗಳು ಹಾಗೂ ಹಣಕಾಸು ಮತ್ತು ಹಣಕಾಸೇತರ ಸೇವೆಗಳನ್ನು (ಬ್ಯಾಂಕಿಂಗ್, ಐಟಿ ಮತ್ತು ರಿಯಲ್ ಎಸ್ಟೇಟ್‌ನಂತಹ) ಒಳಗೊಂಡು ಇಡೀ ಅರ್ಥವ್ಯವಸ್ಥೆಯನ್ನು ಆವರಿಸುತ್ತದೆ. ಕಚ್ಚಾ ವಸ್ತುಗಳ ಬೆಲೆಗಳು ಅತ್ಯಂತ ಹೆಚ್ಚಿದ್ದರೂ ಮತ್ತು ಕೆಲವು ಸೇವಾ ವಲಯದ ಹಣದುಬ್ಬರವು ಅತ್ಯಂತ ಕಡಿಮೆಯಿದ್ದ ಕಾರಣ, ಇದು ಗ್ರಾಹಕ ಅಥವಾ ಸಗಟು ಸರಕು ವಲಯಗಳಲ್ಲಿ ಕಂಡುಬಂದ ಹೆಚ್ಚಿನ ಹಣದುಬ್ಬರವನ್ನು ತಗ್ಗಿಸಿತು (diluted).

ಆದ್ದರಿಂದ, ಅಂತರ್ಗತ ಜಿಡಿಪಿ ಡಿಫ್ಲೇಟರ್ ಸಿಪಿಐ ಅಥವಾ ಡಬ್ಲ್ಯೂಪಿಐಗೆ ಅನುಗುಣವಾಗಿ ಚಲಿಸಬೇಕಾದ ಅಗತ್ಯವಿಲ್ಲ. ವ್ಯಾಪ್ತಿ, ತೂಕಗಳು, ಬೆಲೆಯ ಕಲ್ಪನೆಗಳು ಮತ್ತು ಅರ್ಥವ್ಯವಸ್ಥೆಯ ವಿವಿಧ ವಲಯಗಳ ಸಾಪೇಕ್ಷ ಪ್ರದರ್ಶನದಲ್ಲಿನ ವ್ಯತ್ಯಾಸಗಳು ಜಿಡಿಪಿ ಡಿಫ್ಲೇಟರ್ ಗ್ರಾಹಕ ಅಥವಾ ಸಗಟು ಹಣದುಬ್ಬರಕ್ಕಿಂತ ಗಣನೀಯವಾಗಿ ಭಿನ್ನವಾಗಿರಲು ಕಾರಣವಾಗಬಹುದು.

ಪ್ರತ್ಯೇಕ ವಸ್ತು/ವಸ್ತುಗಳ ಗುಂಪಿನ ಡಿಫ್ಲೇಶನ್ ಅನ್ನು ಆ ವಸ್ತು/ವಸ್ತುಗಳ ಗುಂಪಿಗೆ ಸಂಬಂಧಿಸಿದ ಬೆಲೆ ಸೂಚ್ಯಂಕಗಳನ್ನು ಬಳಸಿ ಮಾಡಲಾಗುತ್ತದೆ ಎಂಬುದನ್ನು ಗಮನಿಸಬೇಕಾಗಿದೆ. ಅಂತರ್ಗತ ಜಿಡಿಪಿ ಡಿಫ್ಲೇಟರ್ ಎಂಬುದು ಕೇವಲ ವಸ್ತು/ವಸ್ತುಗಳ ಗುಂಪಿನ ಹಂತದಲ್ಲಿ ಬಳಸಲಾಗುವ 300 ಕ್ಕೂ ಹೆಚ್ಚು ಪ್ರತ್ಯೇಕ ಬೆಲೆ ಡಿಫ್ಲೇಟರ್‌ಗಳ ಬೆಲೆಯ ಪ್ರಭಾವವನ್ನು ಪ್ರತಿಬಿಂಬಿಸುವ ಒಂದು ಪಡೆದ ಸಂಖ್ಯೆಯಾಗಿದೆ.

4. ಖಾಸಗಿ ಅಂತಿಮ ಬಳಕೆ ವೆಚ್ಚಕ್ಕೆ (PFCE) ಡಬಲ್ ಡಿಫ್ಲೇಶನ್ ಕಾರ್ಯವಿಧಾನವು ಹೇಗೆ ಅನ್ವಯಿಸುತ್ತದೆ ಮತ್ತು ಅದು ಪಿಎಫ್‌ಸಿಇ ಲೆಕ್ಕಾಚಾರಗಳನ್ನು ನೇರವಾಗಿ ಪ್ರವೇಶಿಸುತ್ತದೆಯೇ?

ಉತ್ತರ:

ಡಬಲ್ ಡಿಫ್ಲೇಶನ್ ಕಾರ್ಯವಿಧಾನವು ಪಿಎಫ್‌ಸಿಇ (PFCE) ಲೆಕ್ಕಾಚಾರವನ್ನು ನೇರವಾಗಿ ಪ್ರವೇಶಿಸುವುದಿಲ್ಲ.

ಡಬಲ್ ಡಿಫ್ಲೇಶನ್ ಎಂಬುದು ಉತ್ಪಾದನೆಯ ಒಟ್ಟು ಮೌಲ್ಯ ಮತ್ತು ಮಧ್ಯಂತರ ಬಳಕೆಯನ್ನು ಪ್ರತ್ಯೇಕವಾಗಿ ಡಿಫ್ಲೇಟ್ ಮಾಡುವ ಮೂಲಕ ಸ್ಥಿರ ಬೆಲೆಗಳಲ್ಲಿ ಉದ್ಯಮದ ಒಟ್ಟು ಮೌಲ್ಯ ವರ್ಧಿತವನ್ನು (GVA) ಅಂದಾಜಿಸಲು ಬಳಸುವ ಉತ್ಪಾದನಾ-ಬದಿಯ ತಂತ್ರವಾಗಿದೆ. ಪಿಎಫ್‌ಸಿಇ ಎಂಬುದು ಅಂತಿಮ ಬೇಡಿಕೆಯ ಅಳತೆಯಾಗಿರುವುದರಿಂದ (ಅಂತಿಮ ಬಳಕೆಗಾಗಿ ಸರಕು ಮತ್ತು ಸೇವೆಗಳ ಮೇಲಿನ ವೆಚ್ಚ), ಇದರಲ್ಲಿ ಕಳೆಯಲು ಯಾವುದೇ ಮಧ್ಯಂತರ ಬಳಕೆಯಿರುವುದಿಲ್ಲ.

ತ್ರೈಮಾಸಿಕ ಮಟ್ಟದಲ್ಲಿ, ಪಿಎಫ್‌ಸಿಇ ಅನ್ನು ವಿವರವಾದ ವಸ್ತು/ವಸ್ತುಗಳ ಗುಂಪಿನ ಹಂತದಲ್ಲಿ ಅಂದಾಜಿಸಲಾಗುತ್ತದೆ. ಆಹಾರ ಮತ್ತು ತಯಾರಿಸಿದ ಉತ್ಪನ್ನಗಳಂತಹ ವಿವಿಧ ಸರಕುಗಳಿಗಾಗಿ, ಸೂಕ್ತವಾದ ಪ್ರಮಾಣದ ಸೂಚಕಗಳನ್ನು ಬಳಸಿ ಸ್ಥಿರ-ಬೆಲೆಯ ಅಂದಾಜುಗಳನ್ನು ಮೊದಲು ಸಂಕಲಿಸಲಾಗುತ್ತದೆ ಮತ್ತು ತರುವಾಯ ಸಂಬಂಧಿತ ಗ್ರಾಹಕ ಬೆಲೆ ಸೂಚ್ಯಂಕಗಳನ್ನು ಬಳಸಿ ಪ್ರಸ್ತುತ-ಬೆಲೆಯ ಅಂದಾಜುಗಳನ್ನು ಪಡೆಯಲಾಗುತ್ತದೆ.

ಪಿಎಫ್‌ಸಿಇ ಅಡಿಯಲ್ಲಿರುವ ಶಿಕ್ಷಣ, ಆರೋಗ್ಯ, ಉಪಹಾರ ಗೃಹಗಳು ಮತ್ತು ವಸತಿ ಸೇವೆಗಳಂತಹ ಹಲವಾರು ಸೇವಾ ವಸ್ತುಗಳಿಗೆ, ಸೂಕ್ತ ಉತ್ಪಾದನಾ ಸೂಚಕಗಳನ್ನು ಬಳಸಿ ಪ್ರಸ್ತುತ-ಬೆಲೆಯ ಅಂದಾಜುಗಳನ್ನು ಸಂಕಲಿಸಲಾಗುತ್ತದೆ ಮತ್ತು ಸೂಕ್ತವಾದ ಬೆಲೆ ಸೂಚ್ಯಂಕಗಳನ್ನು ಬಳಸಿ ಅದಕ್ಕೆ ಅನುಗುಣವಾದ ಸ್ಥಿರ-ಬೆಲೆಯ ಅಂದಾಜುಗಳನ್ನು ಪಡೆಯಲಾಗುತ್ತದೆ.

ಹೀಗಾಗಿ, ಡಬಲ್ ಡಿಫ್ಲೇಶನ್ ಎಂಬುದು ಉತ್ಪಾದನಾ-ಬದಿಯ ಜಿವಿಎ ಅಂದಾಜಿಗೆ ಸಂಬಂಧಿಸಿದೆ ಮತ್ತು ಇದು ಪಿಎಫ್‌ಸಿಇ ಅನ್ನು ಅಂದಾಜಿಸಲು ನೇರವಾಗಿ ಬಳಸುವ ವಿಧಾನವಲ್ಲ.

5. ಗಣಿಗಾರಿಕೆ ವಲಯದ ನಾಮಮಾತ್ರ ಜಿವಿಎ ಮತ್ತು ನೈಜ ಜಿವಿಎ ಅಂದಾಜುಗಳ ನಡುವೆ ಬೃಹತ್ ಅಂತರವಿರಲು ಕಾರಣವೇನು?

ಉತ್ತರ:

ತ್ರೈಮಾಸಿಕ ಜಿಡಿಪಿ ಸಂಕಲನದಲ್ಲಿ, ಗಣಿಗಾರಿಕೆ ಮತ್ತು ಕಲ್ಲುಗಳ ಗಣಿಗಾರಿಕೆ (Mining & Quarrying) ವಲಯದ ಸ್ಥಿರ ಬೆಲೆಯ ಅಂದಾಜುಗಳನ್ನು ಸಂಬಂಧಿತ ಕೈಗಾರಿಕಾ ಉತ್ಪಾದನಾ ಸೂಚ್ಯಂಕವನ್ನು (IIP) ಪ್ರಮಾಣದ ಸೂಚಕವಾಗಿ ಬಳಸಿ ಸಂಕಲಿಸಲಾಗುತ್ತದೆ. 2026-27 ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್), ಗಣಿಗಾರಿಕೆ ಮತ್ತು ಕಲ್ಲುಗಳ ಗಣಿಗಾರಿಕೆಯ ಐಐಪಿ (IIP) ಬೆಳವಣಿಗೆಯು ಏಪ್ರಿಲ್‌ನಲ್ಲಿ -3.8%, ಮೇನಲ್ಲಿ -1.4% ಮತ್ತು ಜೂನ್‌ನಲ್ಲಿ 1.6% ರಷ್ಟಿತ್ತು.

ಐಐಪಿ (IIP) ಯಲ್ಲಿನ ಬೆಳವಣಿಗೆಯ ದರ

ವಿವರಣೆ

ಏಪ್ರಿಲ್-26

ಮೇ-26

ಜೂನ್-26

ಗಣಿಗಾರಿಕೆ ಮತ್ತು ಕಲ್ಲುಗಳ ಗಣಿಗಾರಿಕೆ

-3.8

-1.4

1.6

(ಎ) ಇಂಧನ ಖನಿಜಗಳು

-5.6

-6.1

-1.8

(ಬಿ) ಅಪರೂಪದ ಭೂ ಖನಿಜಗಳು ಸೇರಿದಂತೆ ಲೋಹೀಯ ಖನಿಜಗಳು

12.4

18.3

39.4

(ಸಿ) ಸಣ್ಣ ಖನಿಜಗಳು ಸೇರಿದಂತೆ ಅಲೋಹ ಖನಿಜಗಳು

-10.3

-6.1

-11.7

ಇದು 2026-27 ರ ಮೊದಲ ತ್ರೈಮಾಸಿಕದಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಳ ಗಣಿಗಾರಿಕೆ ವಲಯದ ನೈಜ ಜಿವಿಎ ಯಲ್ಲಿನ -2.4% ಬೆಳವಣಿಗೆಗೆ ವ್ಯಾಪಕವಾಗಿ ಅನುಗುಣವಾಗಿದೆ.

ವಿವಿಧ ಖನಿಜ ಗುಂಪುಗಳ ಅನುರೂಪ ನೈಜ ಅಂದಾಜುಗಳಿಗೆ ಸಂಬಂಧಿತ ಉತ್ಪಾದಕ ಬೆಲೆ ಸೂಚ್ಯಂಕಗಳನ್ನು ಅನ್ವಯಿಸುವ ಮೂಲಕ ನಾಮಮಾತ್ರ ಅಂದಾಜುಗಳನ್ನು ಪಡೆಯಲಾಗುತ್ತದೆ. 2026-27 ರ ಮೊದಲ ತ್ರೈಮಾಸಿಕದ ಪಿಸಿಐ ದತ್ತಾಂಶವು ಗಣಿಗಾರಿಕೆ ಮತ್ತು ಕಲ್ಲುಗಳ ಗಣಿಗಾರಿಕೆ ವಲಯದಲ್ಲಿ ಗಮನಾರ್ಹ ಬೆಲೆ ಏರಿಕೆಯನ್ನು ಸೂಚಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಬೆಲೆಗಳು ಏಪ್ರಿಲ್‌ನಲ್ಲಿ 69.5%, ಮೇನಲ್ಲಿ 72.2% ಮತ್ತು ಜೂನ್‌ನಲ್ಲಿ 33.7% ರಷ್ಟು ಹೆಚ್ಚಿದ್ದರೆ, ಲೋಹದ ಅದಿರುಗಳ ಗಣಿಗಾರಿಕೆಯು ಅನುಕ್ರಮವಾಗಿ 27.6%, 25.2% ಮತ್ತು 23.5% ರಷ್ಟು ಹಣದುಬ್ಬರವನ್ನು ದಾಖಲಿಸಿದೆ.

ಪಿಸಿಐ (PPI) ಆಧಾರಿತ ಹಣದುಬ್ಬರ

ಸರಕಿನ ಹೆಸರು

ಏಪ್ರಿಲ್-26

ಮೇ-26

ಜೂನ್-26

ಗಣಿಗಾರಿಕೆ ಮತ್ತು ಕಲ್ಲುಗಳ ಗಣಿಗಾರಿಕೆ

22.0

21.2

15.5

() ಲೋಹದ ಅದಿರುಗಳ ಗಣಿಗಾರಿಕೆ

27.6

25.2

23.5

(ಬಿ) ಕಲ್ಲಿದ್ದಲು ಮತ್ತು ಲಿಗ್ನೈಟ್ ಗಣಿಗಾರಿಕೆ

-1.6

-2.3

-1.6

(ಸಿ) ಇತರ ಗಣಿಗಾರಿಕೆ ಮತ್ತು ಕಲ್ಲುಗಳ ಗಣಿಗಾರಿಕೆ

6.9

6.5

8.7

(ಡಿ) ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಹೊರತೆಗೆಯುವಿಕೆ

69.5

72.2

33.7

ಹೀಗಾಗಿ, ನೈಜ ಮತ್ತು ನಾಮಮಾತ್ರ ಜಿವಿಎ ಬೆಳವಣಿಗೆಯ ನಡುವಿನ ಗಣನೀಯ ವ್ಯತ್ಯಾಸವು ಮುಖ್ಯವಾಗಿ ಖನಿಜ ಬೆಲೆಗಳಲ್ಲಿನ, ವಿಶೇಷವಾಗಿ ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಲೋಹದ ಅದಿರುಗಳ ಬೆಲೆಗಳಲ್ಲಿನ ಬಲವಾದ ಏರಿಕೆಯ ಫಲಿತಾಂಶವಾಗಿದೆಯೇ ಹೊರತು ನೈಜ ಮತ್ತು ನಾಮಮಾತ್ರ ಅಂದಾಜುಗಳ ನಡುವಿನ ಅಸಂಗತತೆಯಲ್ಲ. ಗಣಿಗಾರಿಕೆ ಮತ್ತು ಕಲ್ಲುಗಳ ಗಣಿಗಾರಿಕೆ ವಲಯದ ನಾಮಮಾತ್ರ ಜಿವಿಎ ಬೆಳವಣಿಗೆಯು 2026-27 ಮೊದಲ ತ್ರೈಮಾಸಿಕದಲ್ಲಿ 22.3% ರಷ್ಟಿದೆ.

6. 2026-27 ಮೊದಲ ತ್ರೈಮಾಸಿಕದಲ್ಲಿ ಪ್ರಸ್ತುತ ಮತ್ತು ಸ್ಥಿರ ಬೆಲೆ ಜಿಡಿಪಿ ಅಂದಾಜುಗಳೆರಡರಲ್ಲೂ ವ್ಯತ್ಯಾಸಗಳು ಹೆಚ್ಚಿರುವುದರಿಂದ, ಮುಂದಿನ ಪರಿಷ್ಕರಣೆ ಸುತ್ತಿನಲ್ಲಿ ವ್ಯತ್ಯಾಸಗಳನ್ನು ಸರಿಹೊಂದಿಸಿದಾಗ ಜಿಡಿಪಿ ಅಂದಾಜುಗಳು ಗಣನೀಯವಾಗಿ ಪರಿಷ್ಕರಣೆಗೊಳ್ಳುತ್ತವೆ ಎಂದರ್ಥವೇ?

ಉತ್ತರ:

ವ್ಯತ್ಯಾಸ ಎಂಬುದು ಉತ್ಪಾದನೆ ಮತ್ತು ವೆಚ್ಚದ ವಿಧಾನಗಳ ಮೂಲಕ ಸಂಕಲಿಸಲಾದ ಜಿಡಿಪಿ ಅಂದಾಜುಗಳ ನಡುವಿನ ವ್ಯತ್ಯಾಸದಿಂದ ಹೊರಹೊಮ್ಮುವ ಒಂದು ಸಾಂಖ್ಯಿಕ ಸಮತೋಲನ ಅಂಶವಾಗಿದೆ. ಆದ್ದರಿಂದ ಅದರ ಚಲನೆಯನ್ನು ವರದಿ ಮಾಡಲಾದ ಜಿಡಿಪಿಯನ್ನು ಕಡಿಮೆ ಅಂದಾಜು ಮಾಡಲಾಗಿದೆ ಅಥವಾ ಹೆಚ್ಚು ಅಂದಾಜು ಮಾಡಲಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಅರ್ಥೈಸಬಾರದು.

2026-27ರ ಮೊದಲ ತ್ರೈಮಾಸಿಕದ ಅಂದಾಜುಗಳು ಪ್ರಸ್ತುತ ಹಂತದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿವೆ ಮತ್ತು ಹೆಚ್ಚು ಸಮಗ್ರ ಹಾಗೂ ನವೀಕರಿಸಿದ ಮೂಲ ಡೇಟಾ ಲಭ್ಯವಾದಂತೆ ಪರಿಷ್ಕರಣೆಗೆ ಒಳಪಟ್ಟಿರುತ್ತವೆ. ಹೆಚ್ಚುವರಿ ಮಾಹಿತಿಯನ್ನು ಸೇರಿಸಿದಂತೆ, ವಿವಿಧ ವಿಧಾನಗಳ ಅಡಿಯಲ್ಲಿನ ಅಂದಾಜುಗಳು ಬದಲಾಗಬಹುದು ಮತ್ತು ಪರಿಣಾಮವಾಗಿ ಸಾಂಖ್ಯಿಕ ವ್ಯತ್ಯಾಸವೂ ಬದಲಾಗಬಹುದು.

ಆದ್ದರಿಂದ, ಪ್ರಸ್ತುತ ವ್ಯತ್ಯಾಸವು ತರುವಾಯದ ಪರಿಷ್ಕರಣೆ ಸುತ್ತುಗಳಲ್ಲಿ ಬದಲಾಗಬಹುದಾದರೂ, ಜಿಡಿಪಿಯನ್ನು ಅನಿವಾರ್ಯವಾಗಿ ಮೇಲ್ಮುಖವಾಗಿ ಪರಿಷ್ಕರಿಸಲಾಗುತ್ತದೆ ಅಥವಾ ನಿರ್ದಿಷ್ಟ ಪ್ರಮಾಣದಲ್ಲಿ ಪರಿಷ್ಕರಿಸಲಾಗುತ್ತದೆ ಎಂದು ಮುಂಚಿತವಾಗಿ ತೀರ್ಮಾನಿಸಲು ಸಾಧ್ಯವಿಲ್ಲ. ಯಾವುದೇ ಪರಿಷ್ಕರಣೆಯ ದಿಕ್ಸೂಚಿ ಮತ್ತು ಪ್ರಮಾಣವು ಕೇವಲ ವ್ಯತ್ಯಾಸದ ಯಾಂತ್ರಿಕ ಹೊಂದಾಣಿಕೆಯನ್ನು ಅವಲಂಬಿಸಿರುವುದಕ್ಕಿಂತ ಹೆಚ್ಚಾಗಿ ಮೂಲಭೂತ ಉತ್ಪಾದನೆ ಮತ್ತು ವೆಚ್ಚ-ಬದಿಯ ಅಂದಾಜುಗಳ ಪರಿಷ್ಕರಣೆಗಳನ್ನು ಅವಲಂಬಿಸಿರುತ್ತದೆ.

ಪ್ರಸ್ತುತ ಬೆಲೆಗಳಲ್ಲಿ ಅಂತಿಮ ಅಂದಾಜುಗಳನ್ನು ಬಿಡುಗಡೆ ಮಾಡುವ ಸಮಯದಲ್ಲಿ, ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24 ರ ಸಂದರ್ಭದಲ್ಲಿ ಕಂಡುಬಂದಂತೆ ಈ ವ್ಯತ್ಯಾಸಗಳು ಅತ್ಯಂತ ಅತ್ಯಲ್ಪ ಅಥವಾ ಶೂನ್ಯವಾಗಿರುತ್ತವೆ.

 

*****


(ಪ್ರಕಟಣೆ ಐ.ಡಿ.: 2305962) ವಿಸಿಟರ್ ಕೌಂಟರ್ : 25
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , Bengali-TR , English , Urdu , Marathi , हिन्दी , Gujarati