ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಡೆದ ‘ಹುಲಿ ಭೂ ಪ್ರದೇಶ: ಜೀವನೋಪಾಯ ಮತ್ತು ಆದಾಯ ಸೃಷ್ಟಿಗಾಗಿ ಸಂರಕ್ಷಣೆ, ಜೈವಿಕ ಆರ್ಥಿಕತೆ ಮತ್ತು ಪರಿಸರ ಪ್ರವಾಸೋದ್ಯಮ’ಎಂಬ  ಕುರಿತ ಅಂತಾರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿದ ಕೇಂದ್ರ ಪರಿಸರ ಸಚಿವರು


ಪರಿಸರ ಸಂರಕ್ಷಣೆಗೆ ಸಾಮರಸ್ಯ ಮತ್ತು ಮಾನವ-ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವುದು ಅಡಿಪಾಯವಾಗಬೇಕು: ಶ್ರೀ ಭೂಪೇಂದರ್ ಯಾದವ್

ಭೂ ಪ್ರದೇಶ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಜ್ಞಾನ ವಿನಿಮಯ ಮತ್ತು ಪ್ರಕೃತಿ-ಸಕಾರಾತ್ಮಕ ಹಣಕಾಸು ಉಪಕ್ರಮಗಳಲ್ಲಿ ಸಹಯೋಗವನ್ನು ಬಲಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದ ಐಬಿಸಿಎ ಮತ್ತು ಎಡಿಬಿ

ಪ್ರಕಟಣಾ ದಿನಾಂಕ: 02 SEP 2026 11:47AM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವರಾದ ಶ್ರೀ ಭೂಪೇಂದರ್ ಯಾದವ್ ನವದೆಹಲಿಯಲ್ಲಿಂದು “ಹುಲಿ ಭೂ ಪ್ರದೇಶಗಳು: ಜೀವನೋಪಾಯ ಮತ್ತು ಆದಾಯ ಸೃಷ್ಟಿಗೆ ಆಧಾರಸ್ತಂಭಗಳಾಗಿ ಸಂರಕ್ಷಣೆ, ಜೈವಿಕ ಆರ್ಥಿಕತೆ ಮತ್ತು ಪರಿಸರ ಪ್ರವಾಸೋದ್ಯಮ’ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿದರು. ಈ ಕಾರ್ಯಾಗಾರವನ್ನು ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ (ಐಬಿಸಿಎ), ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ), ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ (ಎಂಒಇಎಫ್‌ಸಿಸಿ) ಜಂಟಿಯಾಗಿ 2026ರ ಸೆಪ್ಟೆಂಬರ್ 2 ಮತ್ತು 3ರಂದು  ಆಯೋಜಿಸುತ್ತಿವೆ.

ಇಎಫ್‌ಸಿಸಿ ಕಾರ್ಯದರ್ಶಿ ಶ್ರೀ ತನ್ಮಯ್ ಕುಮಾರ್; ಡಿಜಿ (ಅರಣ್ಯ) ಮತ್ತು ವಿಶೇಷ ಕಾರ್ಯದರ್ಶಿ (ಇಎಫ್‌ಸಿಸಿ) ಶ್ರೀ ಸುಶೀಲ್ ಕುಮಾರ್ ಅವಸ್ಥಿ; ಐಬಿಸಿಎ, ಮಹಾನಿರ್ದೇಶಕರಾದ ಶ್ರೀ ಎಸ್.ಪಿ. ಯಾದವ್; ಎಡಿಬಿಯ ಭಾರತದ ನಿರ್ದೇಶಕಿ ಶ್ರೀಮತಿ ಮಿಯಾ ಓಕಾ, ಸಚಿವಾಲಯ, ಐಬಿಸಿಎ, ಎನ್‌ಟಿಸಿಎ, ಎಡಿಬಿ ಮತ್ತು ಹುಲಿ-ಶ್ರೇಣಿಯ ದೇಶಗಳ ಪ್ರತಿನಿಧಿಗಳು ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಭಾಗವಹಿಸಿದ್ದರು. ಹುಲಿ ಭೂ ಪ್ರದೇಶಗಳನ್ನು ನೈಸರ್ಗಿಕ ಬಂಡವಾಳವಾಗಿ ಗುರುತಿಸುವುದು, ಪರಿಸರ ವ್ಯವಸ್ಥೆಯ ಸೇವೆಗಳ ಮೌಲ್ಯವನ್ನು ಉಲ್ಲೇಖಿಸಿ ಮತ್ತು ಸಂರಕ್ಷಣೆ, ಜೈವಿಕ ಆರ್ಥಿಕತೆ ಮತ್ತು ಪರಿಸರ ಪ್ರವಾಸೋದ್ಯಮವು ಸುಸ್ಥಿರ ಜೀವನೋಪಾಯ, ಸ್ಥಳೀಯ ಆದಾಯಸೃಷ್ಟಿ ಮತ್ತು ದೀರ್ಘಕಾಲೀನ ಪರಿಸರ ಭದ್ರತೆಯ ಪ್ರಮುಖ ಚಾಲಕರಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅನ್ವೇಷಿಸುವ ಬಗ್ಗೆ ಚರ್ಚೆಗಳು ಗಮನಹರಿಸುತ್ತವೆ.

ಉದ್ಘಾಟನಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ಯಾದವ್, ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಭಾರತದ ಗಮನಾರ್ಹ ಸಂರಕ್ಷಣಾ ಪಯಣವನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಹುಲಿಗಳ ಉಳಿವು ಕಾಡುಗಳು, ಹುಲ್ಲುಗಾವಲುಗಳು, ನದಿಗಳು, ಬೇಟೆಯಾಡುವ ಪ್ರಭೇದಗಳು, ವನ್ಯಜೀವಿ ಕಾರಿಡಾರ್‌ಗಳು ಮತ್ತು ಸ್ಥಳೀಯ ಸಮುದಾಯಗಳ ಆರೋಗ್ಯಕ್ಕೆ ಅಂತರ್ಗತವಾಗಿ ಸಂಬಂಧಿಸಿದೆ ಎಂದು ಹೇಳಿದರು. ಹುಲಿ ಭೂ ಪ್ರದೇಶಗಳು ಅಮೂಲ್ಯವಾದ ನೈಸರ್ಗಿಕ ಬಂಡವಾಳವನ್ನು ಪ್ರತಿನಿಧಿಸುತ್ತವೆ, ನೀರಿನ ಸುರಕ್ಷತೆ, ಇಂಗಾಲದ ಪ್ರತ್ಯೇಕತೆ, ಹವಾಮಾನ ನಿಯಂತ್ರಣ, ಜೀವವೈವಿಧ್ಯ ಸಂರಕ್ಷಣೆ ಮತ್ತು ಜೀವನೋಪಾಯ ಬೆಂಬಲದಂತಹ ನಿರ್ಣಾಯಕ ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸುತ್ತವೆ ಎಂದು ಅವರು ಉಲ್ಲೇಖಿಸಿದರು. ತಳಿ-ಕೇಂದ್ರಿತ ಸಂರಕ್ಷಣೆಯನ್ನು ಮೀರಿ ಪರಿಸರ ಭದ್ರತೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಏಕಕಾಲದಲ್ಲಿ ಮುನ್ನಡೆಸುವ ಸಮಗ್ರ ಭೂಪ್ರದೇಶದ  ನಿರ್ವಹಣೆಯತ್ತ ಸಾಗುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ಪ್ರಕೃತಿ ಆಧಾರಿತ ಪರಿಹಾರಗಳು, ನವೀನ ಹಣಕಾಸು ಕಾರ್ಯವಿಧಾನಗಳು ಮತ್ತು ಸಮುದಾಯ ಆಧಾರಿತ ಪರಿಸರ ಪ್ರವಾಸೋದ್ಯಮದ ಮಹತ್ವವನ್ನು ಅವರು ಒತ್ತಿ ಹೇಳಿದರು.

“ಸಾಮರಸ್ಯದೊಂದಿಗೆ ಸಂರಕ್ಷಣೆ ಮತ್ತು ಮಾನವ-ಪ್ರಕೃತಿ ಸಹಬಾಳ್ವೆ ಪರಿಸರ ಸಂರಕ್ಷಣೆಯ ಭದ್ರ ಬುನಾದಿಯಾಗಿರಬೇಕು’’ ಎಂದು ಶ್ರೀ ಯಾದವ್ ಒತ್ತಿ ಹೇಳಿದರು. ಭೂ ಸಂರಕ್ಷಣೆ ಎಂದರೆ ಗುಣಮಟ್ಟದ ಆಹಾರದ ರಕ್ಷಣೆ, ಇದು ಅಂತಿಮವಾಗಿ ಮನುಕುಲದ ಉಳಿವಿಗೆ ಅವಶ್ಯಕವಾಗಿದೆ ಎಂದು ಅವರು ಒತ್ತಿ ಹೇಳಿದರು. ಮರುಭೂಮೀಕರಣ ಮತ್ತು ಮಣ್ಣಿನ ತೇವಾಂಶದ ಸವಕಳಿ ಮತ್ತು ಮಣ್ಣಿನ ಗುಣಮಟ್ಟದ ಅವನತಿಯ ಸವಾಲನ್ನು ಜಗತ್ತು ಎದುರಿಸುತ್ತಿದೆ ಎಂದು ಸಚಿವರು ಹೇಳಿದರು. ಈ ಸನ್ನಿವೇಶದಲ್ಲಿ ಪ್ರಕೃತಿಯ ರಕ್ಷಣೆಯ ಜೊತೆಗೆ ಸುಸ್ಥಿರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಸುಗಮಗೊಳಿಸಲು ಸ್ಥಳೀಯ ಸಮುದಾಯದ ಬುದ್ಧಿವಂತಿಕೆಯನ್ನು ಬಳಸಿಕೊಳ್ಳುವ ಮೂಲಕ ಹುಲಿ ಭೂಪ್ರದೇಶಗಳ ಸಂರಕ್ಷಣೆಯು ಅತ್ಯಂತ ಮಹತ್ವದ್ದಾಗಿದೆ.

ಮಾತುಕತೆ, ಜೈವಿಕ ಆರ್ಥಿಕತೆ ಮತ್ತು ಪರಿಸರ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಸಾಂಪ್ರದಾಯಿಕ ಜ್ಞಾನವನ್ನು ಕ್ರೋಡೀಕರಿಸುವ ಮತ್ತು ನೀತಿ ನಿರೂಪಣೆಯಲ್ಲಿ ಆ ಬುದ್ಧಿವಂತಿಕೆಯನ್ನು ಸಂಯೋಜಿಸುವ ಅಗತ್ಯತೆಯ ಬಗ್ಗೆ ಚರ್ಚಿಸಲು ಸಚಿವರು ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಕರೆ ನೀಡಿದರು. ಈ ಕಾರ್ಯಾಗಾರವು ಜ್ಞಾನ ಹಂಚಿಕೆ, ಸಾಮರ್ಥ್ಯ ವೃದ್ಧಿ, ಸ್ಥಳೀಯ ಜ್ಞಾನ ಹಂಚಿಕೆ ಮತ್ತು ನೀತಿ ನಿರೂಪಣೆಯ ಸ್ವರೂಪವನ್ನು ಪರಿವರ್ತಿಸುವತ್ತ ಗಮನಹರಿಸಬೇಕು. ಪರಿಸರ ಸಂರಕ್ಷಣಾ ನೀತಿಗಳನ್ನು ರೂಪಿಸುವಲ್ಲಿ ಜಾಗತಿಕ ದಕ್ಷಿಣದ ಸ್ಥಳೀಯ ಬುದ್ಧಿವಂತಿಕೆಯನ್ನು ಒಗ್ಗೂಡಿಸಲು ಐಬಿಸಿಎ ಮುಂದಾಳತ್ವ ವಹಿಸಬೇಕು ಎಂದು ಅವರು ಹೇಳಿದರು.

ಇದೇ ವೇಳೆ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್‌ (ಐಬಿಸಿಎ) ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕುವ ಮೂಲಕ ತಮ್ಮ ಪಾಲುದಾರಿಕೆ ಅಧಿಕೃತಗೊಳಿಸಿದವು. ಇದು ಭೂಪ್ರದೇಶ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಜ್ಞಾನ ವಿನಿಮಯ ಮತ್ತು ಪ್ರಕೃತಿ-ಸಕಾರಾತ್ಮಕ ಹಣಕಾಸು ಉಪಕ್ರಮಗಳಲ್ಲಿ ಸಹಯೋಗವನ್ನು ಬಲಪಡಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಡಿಯಲ್ಲಿ, ಏಳು ದೊಡ್ಡ ಬೆಕ್ಕು ಪ್ರಭೇದಗಳ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುವ ದೇಶಗಳು ಮತ್ತು ಸಂಸ್ಥೆಗಳ ನಡುವಿನ ಸಹಕಾರಕ್ಕಾಗಿ ಜಾಗತಿಕ ವೇದಿಕೆಯಾಗಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ (ಐಬಿಸಿಎ) ಬೆಳೆಯುತ್ತಿರುವ ಪಾತ್ರವನ್ನು ಶ್ರೀ ಯಾದವ್ ಪ್ರಮುಖವಾಗಿ ಪ್ರಸ್ತಾಪಿಸಿದರು.

ಐಬಿಸಿಎ ಮತ್ತು ಎಡಿಬಿ ನಡುವಿನ ಪಾಲುದಾರಿಕೆಯನ್ನು ಸ್ವಾಗತಿಸಿದ ಶ್ರೀಮತಿ ಮಿಯಾ ಓಕಾ, 2026 ಭಾರತದೊಂದಿಗೆ ಎಡಿಬಿಯ ಪಾಲುದಾರಿಕೆಯ 40 ವರ್ಷಗಳನ್ನು ಪೂರ್ಣಗೊಳಿಸುತ್ತದೆ ಎಂದು ತಿಳಿಸಿದರು. ಭಾರತವು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಅಪಾರ ಅನುಭವವನ್ನು ಬಿಗ್ ಕ್ಯಾಟ್ ಶ್ರೇಣಿ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಿದೆ ಎಂದು ಹೇಳಿದರು. ಬಿಗ್ ಕ್ಯಾಟ್ (ದೊಡ್ಡ ಬೆಕ್ಕು) ಶ್ರೇಣಿ ದೇಶಗಳನ್ನು ಒಗ್ಗೂಡಿಸುವಲ್ಲಿ ಮತ್ತು ಭಾರತದ ಶ್ರೀಮಂತ ಸಂರಕ್ಷಣಾ ಅನುಭವವನ್ನು ಹಂಚಿಕೊಳ್ಳುವಲ್ಲಿ ಹಾಗೂ ಪರಿಸರ ಸಂರಕ್ಷಣೆಗಾಗಿ ಸುಸ್ಥಿರ ಹಣಕಾಸು ಅವಕಾಶಗಳನ್ನು ಸೃಷ್ಟಿಸುವಲ್ಲಿ ಎಡಿಬಿ ವಹಿಸುವ ಪಾತ್ರವನ್ನು ಶ್ರೀಮತಿ ಓಕಾ ಪ್ರಮುಖವಾಗಿ ಪ್ರಸ್ತಾಪಿಸಿದರು.

ಈ ಕಾರ್ಯಾಗಾರವು ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯಾ, ಮಲೇಷ್ಯಾ, ನೇಪಾಳ ಮತ್ತು ವಿಯೆಟ್ನಾಂನ ಪ್ರತಿಷ್ಠಿತ ಅಂತಾರಾಷ್ಟ್ರೀಯ ತಜ್ಞರು ಮತ್ತು ಸರ್ಕಾರಿ ಪ್ರತಿನಿಧಿಗಳನ್ನು, ಎಂಒಇಎಫ್ ಸಿಸಿ ಯ ಹಿರಿಯ ಅಧಿಕಾರಿಗಳು, ದೇಶಾದ್ಯಂತದ ರಾಜ್ಯ ಅರಣ್ಯ ಇಲಾಖೆಗಳು ಮತ್ತು ಹುಲಿ ಸಂರಕ್ಷಣಾ ಪ್ರದೇಶಗಳ ಪ್ರತಿನಿಧಿಗಳು, ಅಭಿವೃದ್ಧಿ ಪಾಲುದಾರರು, ಸಂಶೋಧಕರು, ಸಂರಕ್ಷಣಾ ವೃತ್ತಿಪರರು ಮತ್ತು ಇತರ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸಿದೆ. ಇದು ಅನುಭವಗಳನ್ನು ಹಂಚಿಕೊಳ್ಳಲು, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಉದ್ದೇಶಗಳನ್ನು ಮುನ್ನಡೆಸುವಾಗ ಭೂಪ್ರದೇಶ ಸಂರಕ್ಷಣೆಯನ್ನು ಬಲಪಡಿಸಲು ನವೀನ ವಿಧಾನಗಳನ್ನು ಗುರುತಿಸಲು ಒಂದು ಅನನ್ಯ ವೇದಿಕೆಯನ್ನು ಒದಗಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2305855) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Gujarati , Malayalam