ಕೃಷಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್


100 ಧನ್-ಧಾನ್ಯ ಜಿಲ್ಲೆಗಳ ಸರಾಸರಿ ಅಂಕ ಏಪ್ರಿಲ್‌ ನಲ್ಲಿದ್ದ 22.54 ರಿಂದ ಜುಲೈ 2026 ರಲ್ಲಿ 38.85 ಕ್ಕೆ ಏರಿಕೆ

ಫಲಿತಾಂಶ ಆಧಾರಿತ ಮೇಲ್ವಿಚಾರಣೆ, 36 ಯೋಜನೆಗಳ ಸಮನ್ವಯ ಮತ್ತು ರೈತರಿಗೆ ಪ್ರಯೋಜನಗಳು ತಲುಪುವುದನ್ನು ಖಾತರಿಪಡಿಸುವುದಕ್ಕೆ ಒತ್ತು

ಪ್ರಕಟಣಾ ದಿನಾಂಕ: 01 SEP 2026 4:28PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯ ಕೃಷಿ ಭವನದಲ್ಲಿ ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ (ಪಿಎಂ-ಡಿಡಿಕೆವೈ) ಪ್ರಗತಿ ಪರಿಶೀಲನೆ ನಡೆಸಿದರು. ಗುರುತಿಸಲಾದ 100 ಜಿಲ್ಲೆಗಳಲ್ಲಿ ಯೋಜನೆಯ ಅನುಷ್ಠಾನವನ್ನು ವೇಗಗೊಳಿಸುವುದು, ಯೋಜನೆಗಳ ನಡುವಿನ ಸಂಯೋಜನೆಯನ್ನು ಬಲಪಡಿಸುವುದು, ಜಿಲ್ಲಾ ಮಟ್ಟದ ಸಾಧನೆಯನ್ನು ಸುಧಾರಿಸುವುದು ಮತ್ತು ಕೈಗೊಳ್ಳುವ ಕಾರ್ಯಕ್ರಮಗಳು ರೈತರಿಗೆ ಫಲಿತಾಂಶಗಳು ಹಾಗೂ ಸ್ಪಷ್ಟ ಪ್ರಯೋಜನಗಳಾಗಿ ಪರಿವರ್ತಿತವಾಗುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಈ ಪರಿಶೀಲನೆಯು ಗಮನಹರಿಸಿತು.

 

ಪರಿಶೀಲನೆಯ ಸಂದರ್ಭದಲ್ಲಿ, ಯೋಜನೆಯ ಡ್ಯಾಶ್‌ಬೋರ್ಡ್ ಮೂಲಕ ಪಿಎಂ-ಡಿಡಿಕೆವೈ ಪ್ರಗತಿಯನ್ನು ಸಚಿವರಿಗೆ ವಿವರಿಸಲಾಯಿತು. ಇದರಲ್ಲಿ ಜಿಲ್ಲಾವಾರು ಸಾಧನೆ, ಜಿಲ್ಲಾ ಕ್ರಿಯಾ ಯೋಜನೆಗಳು, ಕೇಂದ್ರ ನೋಡಲ್ ಅಧಿಕಾರಿಗಳ (ಸಿ ಎನ್‌ ಒ) ಕ್ಷೇತ್ರ ಮಟ್ಟದ ಮೇಲ್ವಿಚಾರಣೆ, ಆರ್ಥಿಕ ಪ್ರಗತಿ, ಸಾಮರ್ಥ್ಯ ವೃದ್ಧಿ, ಯೋಜನೆಗಳ ಸಮನ್ವಯ ಮತ್ತು ಫಲಾನುಭವಿ ಮಟ್ಟದ ಫಲಿತಾಂಶಗಳನ್ನು ಟ್ರ್ಯಾಕ್ ಮಾಡಲು ಅಭಿವೃದ್ಧಿಪಡಿಸಲಾಗುತ್ತಿರುವ ವ್ಯವಸ್ಥೆಗಳು ಸೇರಿವೆ.

 

100 ಜಿಲ್ಲೆಗಳ ದತ್ತಾಂಶ ಆಧಾರಿತ ಮೇಲ್ವಿಚಾರಣೆ

 

ಪಿಎಂ-ಡಿಡಿಕೆವೈ ಯೋಜನೆಯು ಕಡಿಮೆ ಕೃಷಿ ಉತ್ಪಾದಕತೆ, ಕಡಿಮೆ ಬೆಳೆ ತೀವ್ರತೆ ಮತ್ತು ಕಡಿಮೆ ಕೃಷಿ ಸಾಲ ವಿತರಣೆಯ ಆಧಾರದ ಮೇಲೆ ಗುರುತಿಸಲಾದ 100 ಜಿಲ್ಲೆಗಳಲ್ಲಿ ಕೃಷಿ ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.

 

ಈ ಯೋಜನೆಯು ಆರು ಪ್ರಮುಖ ಉದ್ದೇಶಗಳ ಮೇಲೆ ಗಮನಹರಿಸುತ್ತದೆ: ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು; ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು; ಕೊಯ್ಲಿನ ನಂತರ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದು; ನೀರಾವರಿ ಮೂಲಸೌಕರ್ಯವನ್ನು ಸುಧಾರಿಸುವುದು; ಅಲ್ಪಾವಧಿ ಮತ್ತು ದೀರ್ಘಾವಧಿಯ ಕೃಷಿ ಸಾಲಗಳಿಗೆ ಹೆಚ್ಚಿನ ಪ್ರವೇಶವನ್ನು ಕಲ್ಪಿಸುವುದು; ಮತ್ತು ಆಡಳಿತ ಹಾಗೂ ಸೇವಾ ವಿತರಣೆಯನ್ನು ಸುಧಾರಿಸುವುದು.

 

11 ಸಚಿವಾಲಯಗಳು ಮತ್ತು ಇಲಾಖೆಗಳ 36 ಕೇಂದ್ರ ಯೋಜನೆಗಳು, ರಾಜ್ಯದ ಯೋಜನೆಗಳು ಮತ್ತು ಖಾಸಗಿ ವಲಯದ ಸಹಭಾಗಿತ್ವದ ಸಮನ್ವಯಯೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

 

ವಾರ್ಷಿಕ ಗುರಿಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು 36 ಯೋಜನೆಗಳಾದ್ಯಂತ 74  ಫಲಿತಾಂಶ (ಔಟ್‌ಪುಟ್) ಸೂಚಕಗಳು ಮತ್ತು 47  ಪರಿಣಾಮ (ಔಟ್‌ಕಮ್) ಸೂಚಕಗಳು ಸೇರಿದಂತೆ ಒಟ್ಟು 121 ಸೂಚಕಗಳನ್ನು ಗುರುತಿಸಲಾಗಿದೆ. ಔಟ್‌ಪುಟ್ ಸೂಚಕಗಳಲ್ಲಿ ಜಿಲ್ಲೆಯ ಸಾಧನೆಗೆ ಪಿಎಂ-ಡಿಡಿಕೆವೈ ಡ್ಯಾಶ್‌ಬೋರ್ಡ್ ಮೂಲಕ ಪ್ರತಿ ತಿಂಗಳು ಶ್ರೇಯಾಂಕ ನೀಡಲಾಗುತ್ತದೆ, ಔಟ್‌ಕಮ್ ಸೂಚಕಗಳು ಮೂಲಮಟ್ಟದ ಅಂಕಿಅಂಶಗಳಿಗೆ ಹೋಲಿಸಿದ ಪ್ರಗತಿಯನ್ನು ನಿರ್ಣಯಿಸಲು ನೆರವಾಗಲಿವೆ.

ಆರು ಉದ್ದೇಶಗಳಾದ್ಯಂತ 100 ಜಿಲ್ಲೆಗಳ ಸರಾಸರಿ ಸ್ಕೋರ್ ಏಪ್ರಿಲ್ 2026 ರಲ್ಲಿದ್ದ 22.54 ರಿಂದ ಜುಲೈ 2026 ರಲ್ಲಿ 38.85 ಕ್ಕೆ ಏರಿಕೆಯಾಗಿದೆ, ಇದು 16.31 ಅಂಕಗಳ ಸುಧಾರಣೆಯಾಗಿದೆ.

 

ಈ ಅವಧಿಯಲ್ಲಿ ಉದ್ದೇಶವಾರು ಸಾಧನೆಯೂ ಸುಧಾರಣೆಯನ್ನು ದಾಖಲಿಸಿದೆ. ಕೃಷಿ ಉತ್ಪಾದಕತೆಯ ಸರಾಸರಿ ಸ್ಕೋರ್ ಏಪ್ರಿಲ್‌ ನಲ್ಲಿದ್ದ 2.53 ರಿಂದ ಜುಲೈನಲ್ಲಿ 6.70 ಕ್ಕೆ ಏರಿದೆ; ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳು 5.60 ರಿಂದ 8.65 ಕ್ಕೆ; ಕೊಯ್ಲೋತ್ತರ ಸಂಗ್ರಹಣಾ ಸಾಮರ್ಥ್ಯ 2.61 ರಿಂದ 3.82 ಕ್ಕೆ; ನೀರಾವರಿ ಮೂಲಸೌಕರ್ಯ 1.65 ರಿಂದ 4.20 ಕ್ಕೆ; ಕೃಷಿ ಸಾಲದ ಲಭ್ಯತೆಯು 2.81 ರಿಂದ 5.59 ಕ್ಕೆ; ಮತ್ತು ಆಡಳಿತ ಹಾಗೂ ಸೇವಾ ವಿತರಣೆ 7.94 ರಿಂದ 10.33 ಕ್ಕೆ ಏರಿಕೆಯಾಗಿದೆ.

 

ಎಲ್ಲಾ 100 ಜಿಲ್ಲೆಗಳು ಜಿಲ್ಲಾ ಕ್ರಿಯಾ ಯೋಜನೆಗಳನ್ನು ಅಪ್‌ಲೋಡ್ ಮಾಡಿವೆ

 

ಎಲ್ಲಾ 100 ಜಿಲ್ಲೆಗಳು ತಮ್ಮ ಜಿಲ್ಲಾ ಕ್ರಿಯಾ ಯೋಜನೆಗಳನ್ನು (ಡಿಎಪಿ) ಅಪ್‌ಲೋಡ್ ಮಾಡಿವೆ ಮತ್ತು ಎಲ್ಲಾ 100 ಜಿಲ್ಲೆಗಳ ಡಿಎಪಿಗಳಿಗೆ ಪ್ರತಿಕ್ರಿಯೆಯನ್ನು ನೀಡಲಾಗಿದೆ ಎಂದು ಪರಿಶೀಲನೆಯ ವೇಳೆ ತಿಳಿಸಲಾಯಿತು.

 

ಎಲ್ಲಾ 100 ಜಿಲ್ಲೆಗಳು ಜುಲೈ 2026 ರವರೆಗಿನ ಔಟ್‌ಪುಟ್ ಸೂಚಕಗಳ ದತ್ತಾಂಶವನ್ನು ಸಲ್ಲಿಸಿವೆ, ಹಾಗೆಯೇ ಎಲ್ಲಾ 100 ಜಿಲ್ಲೆಗಳು 2025-26 ರ ಆರ್ಥಿಕ ವರ್ಷದ ಔಟ್‌ಕಮ್ ಸೂಚಕಗಳ ದತ್ತಾಂಶವನ್ನೂ ಸಲ್ಲಿಸಿವೆ.

 

ಪರಿಶೀಲನೆ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯ, ಜಿಲ್ಲೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಕೇಂದ್ರ ನೋಡಲ್ ಅಧಿಕಾರಿಗಳು ಸಹ ಅನುಷ್ಠಾನದ ಕ್ಷೇತ್ರ ಮಟ್ಟದ ಮೇಲ್ವಿಚಾರಣೆಯನ್ನು ನಿಯಮಿತವಾಗಿ ನಡೆಸುತ್ತಿದ್ದಾರೆ.

 

ಫಲಿತಾಂಶಗಳು ಮತ್ತು ರೈತರಿಗೆ ತಲುಪುವ ಸೌಲಭ್ಯಗಳ ಮೇಲೆ ಒತ್ತು

 

ಕೇವಲ ಚಟುವಟಿಕೆಗಳು ಮತ್ತು ವೆಚ್ಚಗಳನ್ನು ಟ್ರ್ಯಾಕ್ ಮಾಡುವುದನ್ನು ಮೀರಿ, ನಿಜವಾದ ಫಲಿತಾಂಶಗಳು ಮತ್ತು ರೈತರಿಗೆ ತಲುಪುವ ನೈಜ ಪ್ರಯೋಜನಗಳನ್ನು ಅಳೆಯುವ ನಿಟ್ಟಿನಲ್ಲಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಈ ಪರಿಶೀಲನೆಯು ಒತ್ತಿಹೇಳಿತು.

 

ಪಿಎಂ-ಡಿಡಿಕೆವೈ ಡ್ಯಾಶ್‌ಬೋರ್ಡ್‌ ನ ಆರ್ಥಿಕ ಪ್ರಗತಿಯ ಮಾಡ್ಯೂಲ್ ಅನ್ನು 31 ಆಗಸ್ಟ್ 2026 ರಂದು ಅನುಷ್ಠಾನಗೊಳಿಸಲಾಯಿತು. ಫಲಾನುಭವಿ ಮಟ್ಟದ ಪ್ರಗತಿಯನ್ನು ವ್ಯವಸ್ಥಿತವಾಗಿ ದಾಖಲಿಸಲು ಸೆಪ್ಟೆಂಬರ್ 2026 ರ ಮಧ್ಯಭಾಗದ ವೇಳೆಗೆ ಫಲಾನುಭವಿ ಪ್ರಗತಿಯ ಮಾಡ್ಯೂಲ್ ಅನ್ನು ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಲಾಗಿದೆ.

 

ಬಲಪಡಿಸಲಾದ ಪ್ರಗತಿ ಫಲಕದ ಮೂಲಕ ಕೇಂದ್ರ ಯೋಜನೆಗಳು, ರಾಜ್ಯ ಯೋಜನೆಗಳು ಮತ್ತು ಇತರ ಮೂಲಗಳ ಮೂಲಕ ಧನ್-ಧಾನ್ಯ ಜಿಲ್ಲೆಗಳಲ್ಲಿ ಕೈಗೊಳ್ಳಲಾಗುತ್ತಿರುವ ಹೂಡಿಕೆಗಳು ಮತ್ತು ಅಭಿವೃದ್ಧಿ ಕ್ರಮಗಳನ್ನು ಒಟ್ಟುಗೂಡಿಸಿ ದಾಖಲಿಸಲು ಸಾಧ್ಯವಾಗಲಿದೆ.

 

ಇದರಿಂದ ಗುರುತಿಸಲಾದ ಜಿಲ್ಲೆಗಳಲ್ಲಿ ನಿಯೋಜಿಸಲಾದ ಸಂಪನ್ಮೂಲಗಳು, ಕೈಗೊಂಡ ಚಟುವಟಿಕೆಗಳು, ಪ್ರಯೋಜನ ಪಡೆದ ರೈತರು ಮತ್ತು ಸಾಧಿಸಿದ ಫಲಿತಾಂಶಗಳ ಸಮಗ್ರ ಮೌಲ್ಯಮಾಪನವನ್ನು ಮಾಡಲು ಸಾಧ್ಯವಾಗುತ್ತದೆ.

 

ರೈತರು ಮತ್ತು ವಿಸ್ತರಣಾ ಕಾರ್ಯಕರ್ತರ ಸಾಮರ್ಥ್ಯ ವೃದ್ಧಿ

 

ಸಾಮರ್ಥ್ಯ ಅಭಿವೃದ್ಧಿಯು ಪಿಎಂ-ಡಿಡಿಕೆವೈ ಅನುಷ್ಠಾನದ ಪ್ರಮುಖ ಅಂಶವಾಗಿದೆ. ಜನವರಿಯಿಂದ ಜುಲೈ 2026 ರ ಅವಧಿಯಲ್ಲಿ, ಒಟ್ಟು 6,90,530 ರೈತರಿಗೆ ಮತ್ತು 88,961 ವಿಸ್ತರಣಾ ಕಾರ್ಯಕರ್ತರಿಗೆ ವಿವಿಧ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗಿದೆ.

 

ಇದರ ಜೊತೆಗೆ, ಈ ಅವಧಿಯಲ್ಲಿ 2,20,683 ರೈತರು ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ನೈಸರ್ಗಿಕ ಕೃಷಿಯಲ್ಲಿ ತರಬೇತಿ ನೀಡಲಾಗಿದೆ.

 

ಸಾಮರ್ಥ್ಯ ಅಭಿವೃದ್ಧಿ ಮತ್ತು ಕ್ಷೇತ್ರ ಮಟ್ಟದ ಕಾರ್ಯಕ್ರಮಗಳಿಗಾಗಿ ಕೃಷಿ ವಿಜ್ಞಾನ ಕೇಂದ್ರಗಳನ್ನು (ಕೆವಿಕೆ) ತಾಂತ್ರಿಕ ಭಾಗಿದಾರರಾಗಿ ಬಳಸಿಕೊಳ್ಳಲಾಗುತ್ತಿದೆ, ಇದು ಕೃಷಿ ವಿಸ್ತರಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ರೈತರಲ್ಲಿ ಸುಧಾರಿತ ಕೃಷಿ ಪದ್ಧತಿಗಳ ಪ್ರಸಾರಕ್ಕೆ ಅನುಕೂಲ ಮಾಡಿಕೊಡುತ್ತದೆ.

 

ಸಮನ್ವಯ ಮತ್ತು ಸಹಭಾಗಿತ್ವದ ಬಲವರ್ಧನೆ

 

11 ಸಚಿವಾಲಯಗಳು ಮತ್ತು ಇಲಾಖೆಗಳ 36 ಕೇಂದ್ರ ಯೋಜನೆಗಳು, ರಾಜ್ಯ ಯೋಜನೆಗಳು ಮತ್ತು ಖಾಸಗಿ ವಲಯದ ಕಾರ್ಯಕ್ರಮಗಳ ನಡುವಿನ ಸಮನ್ವಯವನ್ನು ಬಲಪಡಿಸುವ ಬಗ್ಗೆಯೂ ಪರಿಶೀಲನೆಯ ವೇಳೆ ಗಮನ ಹರಿಸಲಾಯಿತು.

 

ಸಾರ್ವಜನಿಕ ಉದ್ಯಮಗಳ ಇಲಾಖೆಯು 2026-27 ಮತ್ತು 2027-28 ರ ಸಾಮಾಜಿಕ ಹೊಣೆಗಾರಿಕೆ (ಸಿ ಎಸ್‌ ಆರ್) ಚಟುವಟಿಕೆಗಳಿಗಾಗಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಿಂದ ಪಿಎಂ-ಡಿಡಿಕೆವೈ ಜಿಲ್ಲೆಗಳ ದತ್ತು ಸ್ವೀಕಾರವನ್ನು ಸೇರ್ಪಡೆಗೊಳಿಸಿದೆ, ಇದರಿಂದ ಗುರುತಿಸಲಾದ ಜಿಲ್ಲೆಗಳಲ್ಲಿ ಅಭಿವೃದ್ಧಿ ಕ್ರಮಗಳನ್ನು ಬೆಂಬಲಿಸಲು ಹೆಚ್ಚುವರಿ ಮಾರ್ಗವೊಂದು ದೊರೆಯಲಿದೆ.

 

ಧನ್-ಧಾನ್ಯ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಕಾರ್ಯಕ್ರಮಗಳ ಸಂಯೋಜಿತ ಪರಿಣಾಮದ ಮೌಲ್ಯಮಾಪನವನ್ನು ಮಾಡಲು ಇಂತಹ ಸಮನ್ವಯ ಮತ್ತು ಹೂಡಿಕೆಗಳನ್ನು ದಾಖಲಿಸಲು ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.

 

ಅಕ್ಟೋಬರ್‌ ನಲ್ಲಿ ಪಿಎಂ-ಡಿಡಿಕೆವೈ ಗೆ ಒಂದು ವರ್ಷ ಪೂರ್ಣ

 

ಪಿಎಂ-ಡಿಡಿಕೆವೈ ಅನ್ನು ಕೇಂದ್ರ ಸಂಪುಟವು 16 ಜುಲೈ 2025 ರಂದು ಅನುಮೋದಿಸಿತು ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರು 11 ಅಕ್ಟೋಬರ್ 2025 ರಂದು ಅಧಿಕೃತವಾಗಿ ಚಾಲನೆ ನೀಡಿದರು. ಪಿಎಂ-ಡಿಡಿಕೆವೈ ಡ್ಯಾಶ್‌ಬೋರ್ಡ್ ಅನ್ನು ಅಕ್ಟೋಬರ್ 2025 ರ ಕೊನೆಯ ವಾರದಲ್ಲಿ ಸಕ್ರಿಯಗೊಳಿಸಲಾಯಿತು, ಮತ್ತು ನವೆಂಬರ್ 2025 ರಿಂದ ಮಾಸಿಕ ಔಟ್‌ಪುಟ್-ಸೂಚಕ ಶ್ರೇಣೀಕರಣಗಳು ಪ್ರಾರಂಭವಾದವು.

 

ಅಕ್ಟೋಬರ್ 2026 ರಲ್ಲಿ ಯೋಜನೆಯು ತನ್ನ ಮೊದಲ ವರ್ಷವನ್ನು ಪೂರ್ಣಗೊಳಿಸುತ್ತಿರುವುದರಿಂದ, 100 ಧನ್-ಧಾನ್ಯ ಜಿಲ್ಲೆಗಳ ಪ್ರಗತಿ ಮತ್ತು ಸಾಧನೆಯನ್ನು ಉಲ್ಲೇಖಿಸಲು ಕಾರ್ಯಕ್ರಮವೊಂದನ್ನು ಯೋಜಿಸಲಾಗುತ್ತಿದೆ. ರಬಿ ಮತ್ತು ಪ್ರಾದೇಶಿಕ ಸಮ್ಮೇಳನಗಳಲ್ಲೂ ಪ್ರಗತಿಯನ್ನು ಪ್ರದರ್ಶಿಸಲಾಗುವುದು.

 

ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆ ಕರೆಯುವ ಮತ್ತು ಪ್ರತಿ ಜಿಲ್ಲಾ ಧನ್-ಧಾನ್ಯ ಸಮಿತಿಯಲ್ಲಿ ಇಬ್ಬರು ಪ್ರಗತಿಪರ ರೈತರನ್ನು ನಾಮನಿರ್ದೇಶನ ಮಾಡುವ ಪ್ರಸ್ತಾವದ ಮೂಲಕ ರೈತರ ಭಾಗವಹಿಸುವಿಕೆಯನ್ನು ಬಲಪಡಿಸುವ ಕುರಿತೂ ಪರಿಶೀಲನೆ ವೇಳೆ ಚರ್ಚಿಸಲಾಯಿತು.

 

*****

 


(ಪ್ರಕಟಣೆ ಐ.ಡಿ.: 2305779) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Bengali , Gujarati , Odia , Tamil