ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆರ್ಮೇನಿಯಾ ಗಣರಾಜ್ಯದ ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 31 AUG 2026 3:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆರ್ಮೇನಿಯಾ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನಿಕೋಲ್ ಪಶಿನಿಯನ್ ಅವರು ಇಂದು ಕಿರ್ಗಿಜ್ ಗಣರಾಜ್ಯದ ಬಿಷ್ಕೆಕ್ ನಲ್ಲಿ ನಡೆದ 26ನೇ ಎಸ್ ಸಿ ಒ ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾದರು. ಈ ವರ್ಷದ ಜೂನ್ ನಲ್ಲಿ ಆರ್ಮೇನಿಯಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಪ್ರಧಾನಮಂತ್ರಿ ಪಶಿನಿಯನ್ ಅವರ ಮರು ಚುನಾಯಿತರಾದ ಬಳಿಕ ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ಪಶಿನಿಯನ್ ನಡುವೆ ನಡೆದ ಮೊದಲ ಭೇಟಿ ಇದಾಗಿದೆ.

ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಪಶಿನಿಯನ್ ಅವರಿಗೆ ಚುನಾವಣೆಯಲ್ಲ ಬಂದ ಗೆಲುವು ಮತ್ತು ಅಧಿಕಾರ ಸ್ವೀಕಾರಕ್ಕಾಗಿ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಉಭಯ ನಾಯಕರು ರಕ್ಷಣೆ, ಅರ್ಥವ್ಯವಸ್ಥೆ, ಔಷಧ, ಗಣಿಗಾರಿಕೆ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಿದರು. ಇತ್ತೀಚಿನ ದಿನಗಳಲ್ಲಿ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ವಿಸ್ತರಣೆಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಉಭಯ ದೇಶಗಳ ನಡುವಿನ ವಿಶೇಷ ಆತ್ಮೀಯತೆ ಹಾಗೂ ಸ್ನೇಹದಿಂದ ಕೂಡಿದ ಈ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಬದ್ಧತೆ ವ್ಯಕ್ತಪಡಿಸಿದರು.

ಉಭಯ ನಾಯಕರು ಪಶ್ಚಿಮ ಏಷ್ಯಾದ ಪರಿಸ್ಥಿತಿ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ನಿರಂತರ ಪ್ರಯತ್ನಗಳ ಅಗತ್ಯವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.

ಆರ್ಮೇನಿಯಾ-ಅಜರ್ಬೈಜಾನ್ ಶಾಂತಿ ಒಪ್ಪಂದದ ಅನುಷ್ಠಾನದ ಪ್ರಸ್ತುತ ಸ್ಥಿತಿಯ ಬಗ್ಗೆ ಪ್ರಧಾನಮಂತ್ರಿ ಪಶಿನಿಯನ್ ಅವರು ಪ್ರಧಾನಮಂತ್ರಿ ಮೋದಿಯವರಿಗೆ ವಿವರಿಸಿದರು.

ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಮತ್ತು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮುನ್ನಡೆಸಲು ಉಭಯ ನಾಯಕರು ಒಪ್ಪಿಕೊಂಡರು.

 

*****


(ಪ್ರಕಟಣೆ ಐ.ಡಿ.: 2304998) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Assamese , Manipuri , Gujarati , Tamil , Telugu