ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತದ ಮಾನವರಹಿತ ರಕ್ಷಣಾ ಸಾಮರ್ಥ್ಯಗಳಿಗೆ ಉತ್ತೇಜನ, ಸ್ವದೇಶಿ ಮೈಕ್ರೋ ಮತ್ತು ಸಣ್ಣ ಗ್ಯಾಸ್ ಟರ್ಬೈನ್ ಇಂಜಿನ್‌ಗಳನ್ನು ಅನಾವರಣಗೊಳಿಸಿದ ಸಿಎಸ್ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್

ಪ್ರಕಟಣಾ ದಿನಾಂಕ: 25 AUG 2026 2:51PM by PIB Bengaluru

ಸುಧಾರಿತ ಏರೋಸ್ಪೇಸ್ ಶಕ್ತಿ ಚಾಲನಾ (propulsion) ವ್ಯವಸ್ಥೆಯಲ್ಲಿ ಸ್ವಾವಲಂಬನೆಯತ್ತ ಪ್ರಮುಖ ಹೆಜ್ಜೆಯಿಟ್ಟಿರುವ ಸಿಎಸ್ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (CSIR-NAL) ಇಂದು ನವದೆಹಲಿಯ ಸಿಎಸ್ಐಆರ್ ಪ್ರಧಾನ ಕಚೇರಿಯ ಎಸ್‌ಎಸ್‌ಬಿ ಸಭಾಂಗಣದಲ್ಲಿ ಮೂರು ಸ್ವದೇಶಿ ಮೈಕ್ರೋ ಮತ್ತು ಸಣ್ಣ ಗ್ಯಾಸ್ ಟರ್ಬೈನ್ ಇಂಜಿನ್‌ಗಳನ್ನು — 5 ಕೆಜಿ ನೂಕುಬಲದ (thrust) NJ-05, 50 ಕೆಜಿ ನೂಕುಬಲದ NJ-50 ಮತ್ತು 100 ಕೆಜಿ ನೂಕುಬಲದ NJ-100 — ಅನಾವರಣಗೊಳಿಸಿತು. ಸ್ವದೇಶಿ ರಕ್ಷಣಾ ತಂತ್ರಜ್ಞಾನಗಳಲ್ಲಿನ ನಿರ್ಣಾಯಕ ಅಗತ್ಯತೆಗಳನ್ನು ಪೂರೈಸಲು ಅಭಿವೃದ್ಧಿಪಡಿಸಲಾದ ಈ ಸಣ್ಣ ಗಾತ್ರದ ಪ್ರೊಪಲ್ಷನ್ ವ್ಯವಸ್ಥೆಗಳನ್ನು ಕೌಶಲ ಆಧಾರಿತ ಮಾನವರಹಿತ ವೈಮಾನಿಕ ವಾಹನಗಳು (UAVs), ಡ್ರೋನ್ ಇಂಟರ್‌ಸೆಪ್ಟರ್‌ಗಳು ಮತ್ತು ಸಣ್ಣ ಗಾತ್ರದ ಕ್ಷಿಪಣಿ ವ್ಯವಸ್ಥೆಗಳು ಸೇರಿದಂತೆ ಹಲವು ಅನ್ವಯಿಕೆಗಳಿಗಾಗಿ ಬಳಸಲು ಉದ್ದೇಶಿಸಲಾಗಿದೆ.

ಈ ಕಾರ್ಯಕ್ರಮವು ಭಾರತದ ರಕ್ಷಣಾ ಮತ್ತು ವೈಜ್ಞಾನಿಕ ಸಮುದಾಯಗಳ ಹಿರಿಯ ನಾಯಕರನ್ನು ಒಂದೆಡೆ ಸೇರಿಸಿದೆ. ಚೀಫ್ಸ್ ಆಫ್ ಸ್ಟಾಫ್ ಕಮಿಟಿ (CISC) ಅಧ್ಯಕ್ಷರ ಸಂಯೋಜಿತ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಏರ್ ಮಾರ್ಷಲ್ ತೇಜಿಂದರ್ ಸಿಂಗ್ (PVSM, AVSM, VM) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಶೋಭಾಯಮಾನಗೊಳಿಸಿದರು.

ಎಡದಿಂದ ಬಲಕ್ಕೆ: ನವದೆಹಲಿಯ ಎಸ್‌ಎಸ್‌ಬಿ ಸಭಾಂಗಣದಲ್ಲಿ ಸ್ವದೇಶಿ ಮೈಕ್ರೋ ಮತ್ತು ಸಣ್ಣ ಗ್ಯಾಸ್ ಟರ್ಬೈನ್ ಇಂಜಿನ್‌ಗಳ ಅನಾವರಣದ ವೇಳೆ ಡಾ (ಶ್ರೀಮತಿ) ಎನ್ ಕಲೈಸೆಲ್ವಿ, ಮಹಾನಿರ್ದೇಶಕರು (CSIR) ಮತ್ತು ಕಾರ್ಯದರ್ಶಿ (DSIR), ಏರ್ ಮಾರ್ಷಲ್ ತೇಜಿಂದರ್ ಸಿಂಗ್, PVSM, VSM, VM (ಮುಖ್ಯ ಅತಿಥಿ ಮತ್ತು CISC) ಮತ್ತು ಡಾ ಅಭಯ್ ಎ ಪಾಶಿಲ್ಕರ್, ನಿರ್ದೇಶಕರು (CSIR-NAL).

ಸಭೆಯನ್ನು ಸ್ವಾಗತಿಸಿದ ಸಿಎಸ್ಐಆರ್-ಎನ್‌ಎಎಲ್ ನಿರ್ದೇಶಕರಾದ ಡಾ ಅಭಯ್ ಎ. ಪಾಶಿಲ್ಕರ್ ಅವರು, ದೇಶದ ಬೆಳೆಯುತ್ತಿರುವ ಡ್ರೋನ್ ಪರಿಸರ ವ್ಯವಸ್ಥೆಗೆ ಬಹು-ಹಂತದ ಸಂಯೋಜಕವಾಗಿ (multi-stage integrator) ಪ್ರಯೋಗಾಲಯದ ಬೆಳೆಯುತ್ತಿರುವ ಪಾತ್ರವನ್ನು ಎತ್ತಿಹಿಡಿದರು. ವೇಗವಾಗಿ ವಿಸ್ತರಿಸುತ್ತಿರುವ ಏರೋಸ್ಪೇಸ್ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ ಸೇರಿದಂತೆ ಭಾರತೀಯ ಉದ್ಯಮವು ಭಾರತೀಯ ರಕ್ಷಣಾ ವಲಯದ ಅಗತ್ಯತೆಗಳನ್ನು ಪೂರೈಸಲು ಈ ಸುಧಾರಿತ ಇಂಜಿನ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಒತ್ತಿಹೇಳಿದರು.

ಶ್ರೀ ಆರ್. ಪ್ರತಾಪನಾಯಕ ಅವರ ನೇತೃತ್ವದ ಸಿಎಸ್ಐಆರ್-ಎನ್‌ಎಎಲ್ ವೈಜ್ಞಾನಿಕ ತಂಡವು ಗ್ಯಾಸ್ ಟರ್ಬೈನ್ ಇಂಜಿನ್‌ಗಳ ಅಭಿವೃದ್ಧಿಯ ಕುರಿತು ವಿವರವಾದ ತಾಂತ್ರಿಕ ಪ್ರಸ್ತುತಿಯನ್ನು ನೀಡಿತು. ಪ್ರಸ್ತುತಿಯು ಹೈ-ಆರ್‌ಪಿಎಮ್ ಟರ್ಬೊಮೆಷಿನರಿ ಮತ್ತು ಹೆಚ್ಚಿನ ತಾಪಮಾನದ ದಹನ ತಂತ್ರಜ್ಞಾನಗಳಲ್ಲಿನ ಪ್ರಗತಿಯನ್ನು ಎತ್ತಿಹಿಡಿಯಿತು, ಇವು ಈ ಸ್ವದೇಶಿ ಪ್ರೊಪಲ್ಷನ್ ವ್ಯವಸ್ಥೆಗಳ ಅಭಿವೃದ್ಧಿಗೆ ಅನುವು ಮಾಡಿಕೊಟ್ಟಿವೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಸ್ಐಆರ್ ಮಹಾನಿರ್ದೇಶಕಿ ಮತ್ತು ಡಿಎಸ್‌ಐಆರ್ ಕಾರ್ಯದರ್ಶಿ ಡಾ. ಎನ್. ಕಲೈಸೆಲ್ವಿ ಅವರು ಯೋಜನಾ ತಂಡದ ಜಂಟಿ ಪ್ರಯತ್ನಗಳನ್ನು ಶ್ಲಾಘಿಸಿದರು. ಇಂತಹ ಅತ್ಯಂತ ವಿಶೇಷ ಮತ್ತು ನಿರ್ಣಾಯಕ ಉಪವ್ಯವಸ್ಥೆಗಳ ಸ್ವದೇಶಿ ಅಭಿವೃದ್ಧಿಯು ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ 'ಆತ್ಮನಿರ್ಭರ ಭಾರತ'ವನ್ನು ಮುನ್ನಡೆಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ಅವರು ಒತ್ತಿಹೇಳಿದರು.

ಪ್ರೊಪಲ್ಷನ್ ವ್ಯವಸ್ಥೆಗಳನ್ನು ಅನಾವರಣಗೊಳಿಸಿ ಮಾತನಾಡಿದ ಏರ್ ಮಾರ್ಷಲ್ ತೇಜಿಂದರ್ ಸಿಂಗ್ ಅವರು, ದೇಶದೊಳಗೆ ಸುಧಾರಿತ ಗ್ಯಾಸ್ ಟರ್ಬೈನ್ ಇಂಜಿನ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದರ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಇಂತಹ ನಿರ್ಣಾಯಕ ತಂತ್ರಜ್ಞಾನಗಳಲ್ಲಿನ ಸ್ವದೇಶಿ ಸಾಮರ್ಥ್ಯಗಳು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತವೆ ಮತ್ತು ಸಶಸ್ತ್ರ ಪಡೆಗಳ ತಾಂತ್ರಿಕ ಸ್ವಾವಲಂಬನೆಯನ್ನು ಹೆಚ್ಚಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

NJ-05, NJ-50 ಮತ್ತು NJ-100 ಗಳ ಯಶಸ್ವಿ ಅಭಿವೃದ್ಧಿಯು, ಕಿರು ಗ್ಯಾಸ್ ಟರ್ಬೈನ್ ಪ್ರೊಪಲ್ಷನ್ ವ್ಯವಸ್ಥೆಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಸ್ವದೇಶಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಪ್ರಮುಖ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಉದಯೋನ್ಮುಖ ದೇಶೀಯ ಉತ್ಪಾದನಾ ಸಾಮರ್ಥ್ಯಗಳೊಂದಿಗೆ, ಈ ತಂತ್ರಜ್ಞಾನಗಳು ಭಾರತದ ಬೆಳೆಯುತ್ತಿರುವ ಯುಎವಿ (UAV), ಡ್ರೋನ್ ಮತ್ತು ರಕ್ಷಣಾ ಏರೋಸ್ಪೇಸ್ ಪರಿಸರ ವ್ಯವಸ್ಥೆಗೆ ಗಣನೀಯ ಕೊಡುಗೆ ನೀಡುವ ನಿರೀಕ್ಷೆಯಿದೆ.

 

*****


(ಪ್ರಕಟಣೆ ಐ.ಡಿ.: 2303134) ವಿಸಿಟರ್ ಕೌಂಟರ್ : 42
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी