ಹಣಕಾಸು ಸಚಿವಾಲಯ
ಆರ್‌ಬಿಐನ ಡಾಲರ್-ರೂಪಾಯಿ ವಿನಿಮಯ ಸೌಲಭ್ಯದಿಂದ ಭಾರತಕ್ಕೆ ಅಭೂತಪೂರ್ವ ವಿದೇಶಿ ವಿನಿಮಯ ಹರಿವು: ಹನ್ನೊಂದು ವಾರಗಳಲ್ಲಿ 73 ಬಿಲಿಯನ್ ಡಾಲರ್ ಸಂಗ್ರಹಿಸಿದ ಬ್ಯಾಂಕ್‌ಗಳು
ಯೋಜನೆಯ ಯಶಸ್ಸು ಭಾರತದ ಬ್ಯಾಂಕಿಂಗ್ ವಲಯ ಮತ್ತು ಆರ್ಥಿಕತೆಯ ಮೇಲೆ ಅನಿವಾಸಿ ಭಾರತೀಯ ಸಮುದಾಯ ಹೊಂದಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ
प्रविष्टि तिथि:
24 AUG 2026 7:53PM by PIB Bengaluru
ಎಫ್‌ಸಿಎನ್‌ಆರ್ (ಬಿ) ಠೇವಣಿಗಳು, ವಿದೇಶಿ ವಿದೇಶಿ ವಿನಿಮಯ ಸಾಲಗಳು (ಒಎಫ್‌ಸಿಬಿ) ಮತ್ತು ಬಾಹ್ಯ ವಾಣಿಜ್ಯ ಸಾಲಗಳಿಗೆ (ಈಸಿಬಿ) ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ 2026ರ ಜೂನ್ 8 ರಂದು ಪ್ರಾರಂಭಿಸಿದ ವಿಶೇಷ ಡಾಲರ್-ರೂಪಾಯಿ (USD-INR) ವಿದೇಶಿ ವಿನಿಮಯ ಸ್ವಾಪ್ ಸೌಲಭ್ಯವು ದೇಶಕ್ಕೆ ಅಭೂತಪೂರ್ವ ಪ್ರಮಾಣದ ವಿದೇಶಿ ವಿನಿಮಯ ಹರಿವನ್ನು ತಂದಿದೆ. 2026 ರ ಆಗಸ್ಟ್ 21 ರ ಹೊತ್ತಿಗೆ ಒಟ್ಟು 73 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ವಿನಿಮಯ ಹರಿವನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಎಫ್‌ಸಿಎನ್‌ಆರ್ (ಬಿ) ಠೇವಣಿಗಳ ಪಾಲು ಒಂದೇ 65.40 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಈ ಯೋಜನೆಗೆ ಅನಿವಾಸಿ ಭಾರತೀಯರಿಂದ ದೊರೆತ ಅಪಾರ ಸ್ಪಂದನೆಯನ್ನು ಇದು ತೋರಿಸುತ್ತದೆ.
ಈ ಯೋಜನೆಯ ಯಶಸ್ಸು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಭಾರತದ ಅಭಿವೃದ್ಧಿಯ ಪಯಣದಲ್ಲಿ ತಮ್ಮ ಆರ್ಥಿಕ ಮತ್ತು ಭಾವನಾತ್ಮಕ ಪಾಲುದಾರಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ ಅನಿವಾಸಿ ಭಾರತೀಯರ ಶಕ್ತಿಯನ್ನು ಎತ್ತಿಹಿಡಿಯುತ್ತದೆ. ಅವರು ನಿರೀಕ್ಷೆಗೂ ಮೀರಿದ ವೇಗದಲ್ಲಿ ತಮ್ಮ ಉಳಿತಾಯವನ್ನು ಎಫ್‌ಸಿಎನ್‌ಆರ್ (ಬಿ) ಠೇವಣಿಗಳಲ್ಲಿ ತೊಡಗಿಸಿದ್ದಾರೆ.
ಇನ್ನೂ ಒಂದು ವಾರ ಬಾಕಿ ಇರುವಂತೆಯೇ, ಹನ್ನೊಂದು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ 73 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದ್ದು, ಭಾರತವು ಕೈಗೊಂಡ ಅತ್ಯಂತ ದೊಡ್ಡ ಮತ್ತು ವೇಗದ ವಿದೇಶಿ ವಿನಿಮಯ ಸಂಗ್ರಹಣಾ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಇದು ಸುಮಾರು ಮೂರು ತಿಂಗಳಲ್ಲಿ 26 ಬಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹಿಸಿದ್ದ 2013 ರ ಆರ್‌ಬಿಐನ ಎಫ್‌ಸಿಎನ್‌ಆರ್ (ಬಿ) ಸ್ವಾಪ್ ಯೋಜನೆಯ ಪ್ರಮಾಣ ಮತ್ತು ವೇಗವನ್ನು ಮೀರಿಸಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ತನ್ನ ಗುರಿಯನ್ನು ಸಾಧಿಸಿದ ಕಾರಣ, ಆರ್‌ಬಿಐ ಎಫ್‌ಸಿಎನ್‌ಆರ್ (ಬಿ) ವಿಂಡೋದ ಮುಕ್ತಾಯದ ದಿನಾಂಕವನ್ನು ಸೆಪ್ಟೆಂಬರ್ 30 ರಿಂದ 2026 ರ ಆಗಸ್ಟ್ 31 ಕ್ಕೆ ಮುಂಚಿತವಾಗಿಯೇ ಬದಲಾಯಿಸುವಷ್ಟು ಸ್ಪಂದನೆ ದೊರೆತಿದೆ.
ದೊಡ್ಡ ಪ್ರಮಾಣದ, ದೀರ್ಘಕಾಲೀನ ಅನಿವಾಸಿ ಠೇವಣಿಗಳನ್ನು ಮತ್ತು ವಾಣಿಜ್ಯ ಸಾಂಸ್ಥಿಕ ಹಣಕಾಸನ್ನು ಸುಲಭವಾಗಿ ಪಡೆಯುವ ಮೂಲಕ, ಭಾರತ ಸರ್ಕಾರವು ತನ್ನ ಬಾಹ್ಯ ಆರ್ಥಿಕ ಸುರಕ್ಷತಾ ಕವಚವನ್ನು ಅತ್ಯಂತ ವೆಚ್ಚ-ಉಪಯುಕ್ತ ರೀತಿಯಲ್ಲಿ ಬಲಪಡಿಸಿದೆ. ಜಾಗತಿಕ ಹಣಕಾಸು ಕ್ಷೇತ್ರದಲ್ಲಿ ಅಭೂತಪೂರ್ವ ಸವಾಲುಗಳಿದ್ದಾಗ್ಯೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತೀಯ ಆರ್ಥಿಕತೆಯು ನಿರಂತರವಾಗಿ ಬಲಗೊಳ್ಳುತ್ತಿದೆ ಎಂಬುದಕ್ಕೆ ಈ ಅದ್ಭುತ ಸ್ಪಂದನೆಯು ಸಾಕ್ಷಿಯಾಗಿದೆ.
*****
(रिलीज़ आईडी: 2302959)
आगंतुक पटल : 8