ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 25 ರಿಂದ ಸೆಪ್ಟೆಂಬರ್ 2, 2026ರವರೆಗೆ ಕೆನಡಾ ಮತ್ತು ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ


ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ಸೀತಾರಾಮನ್ ಮತ್ತು ಕೆನಡಾದ ಹಣಕಾಸು ಹಾಗೂ ಕಂದಾಯ ಸಚಿವರಾದ ಗೌರವಾನ್ವಿತ  ಶ್ರೀ ಫ್ರಾಂಕೋಯಿಸ್-ಫಿಲಿಪ್ ಷಾಂಪೇನ್  ಅವರು ಎರಡೂ ದೇಶಗಳ ನಡುವಿನ ಉದ್ಘಾಟನಾ ಆರ್ಥಿಕ ಮತ್ತು ಹಣಕಾಸು ಸಂವಾದದಲ್ಲಿ ಭಾಗವಹಿಸಲಿದ್ದಾರೆ

ಕೆನಡಾ ಮತ್ತು ಅಮೆರಿಕ ಭೇಟಿಯ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ಸೀತಾರಾಮನ್ ಅವರು ಪ್ರಮುಖ ಹೂಡಿಕೆದಾರರು, ಉದ್ಯಮಿಗಳು ಮತ್ತು ಹಣಕಾಸು ಕ್ಷೇತ್ರದ ಪ್ರತಿನಿಧಿಗಳೊಂದಿಗೆ ದುಂಡುಮೇಜಿನ ಸಭೆಗಳಲ್ಲಿ ಭಾಗವಹಿಸುವುದರ ಜೊತೆಗೆ, ಖಾಸಗಿ ಕ್ಷೇತ್ರದೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ

ಅಮೆರಿಕದ ಜಿ20 ಅಧ್ಯಕ್ಷತೆಯ ಅಡಿಯಲ್ಲಿ ನಡೆಯಲಿರುವ ಜಿ20 ಎಫ್ಎಂಸಿಬಿಜಿ   ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವರು ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ

ಜನರ ನಡುವಿನ ಹಾಗೂ ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಹಣಕಾಸು ಸಚಿವರು ಟೊರೊಂಟೊ ಮತ್ತು ಚಿಕಾಗೋದಲ್ಲಿ ನೆಲೆಸಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ

प्रविष्टि तिथि: 24 AUG 2026 3:40PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ದ್ವಿಪಕ್ಷೀಯ ಆರ್ಥಿಕ ಮತ್ತು ಹಣಕಾಸು ಸಹಭಾಗಿತ್ವವನ್ನು ಬಲಪಡಿಸುವ, ಹೂಡಿಕೆ ಸಂಬಂಧಗಳನ್ನು ವೃದ್ಧಿಸುವ ಮತ್ತು ಹಂಚಿಕೆಯ ಜಾಗತಿಕ ಆರ್ಥಿಕ ಆದ್ಯತೆಗಳ ಕುರಿತು ಸಹಕಾರವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಆಗಸ್ಟ್ 25 ರಿಂದ ಸೆಪ್ಟೆಂಬರ್ 2, 2026ರವರೆಗೆ ಕೆನಡಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಕೆನಡಾದ ಟೊರೊಂಟೊಗೆ ನೀಡುವ ಭೇಟಿಯ ಸಮಯದಲ್ಲಿ, ಶ್ರೀಮತಿ ಸೀತಾರಾಮನ್ ಅವರು ಕೆನಡಾದ ಹಣಕಾಸು ಮತ್ತು ಕಂದಾಯ ಸಚಿವರಾದ ಗೌರವಾನ್ವಿತ ಶ್ರೀ ಫ್ರಾಂಕೋಯಿಸ್-ಫಿಲಿಪ್ ಷಾಂಪೇನ್ ಅವರೊಂದಿಗೆ ಉದ್ಘಾಟನಾ ಆರ್ಥಿಕ ಮತ್ತು ಹಣಕಾಸು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಸಂವಾದವು ಬೃಹತ್ ಆರ್ಥಿಕ  ಬೆಳವಣಿಗೆಗಳು, ಹಣಕಾಸು ಕ್ಷೇತ್ರದ ಸಹಕಾರ, ದ್ವಿಪಕ್ಷೀಯ ಹೂಡಿಕೆ ಅವಕಾಶಗಳು ಮತ್ತು ಹಂಚಿಕೆಯ ಅಂತಾರಾಷ್ಟ್ರೀಯ ಆದ್ಯತೆಗಳ ಕುರಿತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಹಾಗೂ ನವೀಕರಿಸಿದ ಭಾರತ ಮತ್ತು ಕೆನಡಾ ಪಾಲುದಾರಿಕೆಯ ಆರ್ಥಿಕ ಮತ್ತು ಹಣಕಾಸು ಸ್ತಂಭವನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ.

ಇತ್ತೀಚಿನ ತಿಂಗಳುಗಳಲ್ಲಿ ನಡೆದ ದ್ವಿಪಕ್ಷೀಯ ಚರ್ಚೆಗಳು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ನಿರಂತರ ಪ್ರಯತ್ನಗಳ ಜೊತೆಗೆ ಇಂಧನ, ನಿರ್ಣಾಯಕ ಖನಿಜಗಳು, ತಂತ್ರಜ್ಞಾನ, ನಾವೀನ್ಯತೆ ಮತ್ತು ಚೇತರಿಸಿಕೊಳ್ಳುವ ಪೂರೈಕೆ ಸರಪಳಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಅವಕಾಶಗಳ ಮೇಲೆ ಗಮನ ಕೇಂದ್ರೀಕರಿಸಿವೆ.

ಶ್ರೀಮತಿ ಸೀತಾರಾಮನ್ ಅವರು ಇಂಧನ, ಕೃತಕ ಬುದ್ಧಿಮತ್ತೆ ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರಗಳ ಪ್ರಮುಖ ಸಿಇಒಗಳು, ಅಧ್ಯಕ್ಷರು ಮತ್ತು ಹಿರಿಯ ಪ್ರತಿನಿಧಿಗಳೊಂದಿಗೆ ಹೂಡಿಕೆ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂವಾದವು ವ್ಯಾಪಾರದಿಂದ ವ್ಯಾಪಾರದ ನಡುವಿನ  ಸಂಬಂಧಗಳನ್ನು ಸುಗಮಗೊಳಿಸಲು, ಹೂಡಿಕೆ ಅವಕಾಶಗಳನ್ನು ಗುರುತಿಸಲು ಮತ್ತು ಗಿಫ್ಟ್ ಸಿಟಿ-ಐಎಫ್ಎಸ್ಸಿ ಅವಕಾಶಗಳು ಸೇರಿದಂತೆ ಭಾರತ ಮತ್ತು ಕೆನಡಾ ನಡುವೆ ದೀರ್ಘಕಾಲೀನ ವಾಣಿಜ್ಯ ಪಾಲುದಾರಿಕೆಯನ್ನು ಉತ್ತೇಜಿಸಲು ಶ್ರಮಿಸಲಿದೆ.

ಮತ್ತೊಂದು ವ್ಯಾಪಾರ ದುಂಡುಮೇಜಿನ ಸಭೆಯಲ್ಲಿ, ಕೇಂದ್ರ ಹಣಕಾಸು ಸಚಿವರು ಕೆನಡಾ-ಭಾರತ ಸಹಕಾರ, ದೀರ್ಘಕಾಲೀನ ಹೂಡಿಕೆ ಮತ್ತು ಹಣಕಾಸು ಕ್ಷೇತ್ರದ ಬೆಳವಣಿಗೆಯ ಅವಕಾಶಗಳ ಕುರಿತು ಹಿರಿಯ ಉದ್ಯಮ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ಭಾರತೀಯ ಸಾರ್ವಜನಿಕ ರಂಗದ ಬ್ಯಾಂಕ್ ಗಳ ಹಿರಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ಈ ಚರ್ಚೆಗಳಲ್ಲಿ ಭಾಗವಹಿಸಲಿದ್ದು, ಹೆಚ್ಚಿನ ಹಣಕಾಸು-ಕ್ಷೇತ್ರದ ಸಹಕಾರ ಮತ್ತು ಹೂಡಿಕೆ ಸಂಬಂಧಗಳ ಮಾರ್ಗಗಳನ್ನು ಅನ್ವೇಷಿಸಲು ಇದು ಅವಕಾಶವನ್ನು ಒದಗಿಸುತ್ತದೆ.

ಕೆನಡಿಯನ್ ಕ್ಲಬ್ ಆಫ್ ಟೊರೊಂಟೊ, ಕೆನಡಾ-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಸಹಯೋಗದೊಂದಿಗೆ, ಉಭಯ ದೇಶಗಳ ನಡುವಿನ ಹಂಚಿಕೆಯ ಆರ್ಥಿಕ ಹಿತಾಸಕ್ತಿಗಳನ್ನು ಮುನ್ನಡೆಸುವ ಕುರಿತು ಶ್ರೀಮತಿ ಸೀತಾರಾಮನ್ ಮತ್ತು ಗೌರವಾನ್ವಿತ ಶ್ರೀ ಷಾಂಪೇನ್ ನಡುವೆ ಅನೌಪಚಾರಿಕ ಆತ್ಮೀಯ ಸಂವಾದವನ್ನು  ಆಯೋಜಿಸುತ್ತದೆ. ಈ ಚರ್ಚೆಯು ನವೀಕರಿಸಿದ ಕೆನಡಾ-ಭಾರತ ದ್ವಿಪಕ್ಷೀಯ ಸಂಬಂಧ, ಹೂಡಿಕೆ ವಾತಾವರಣ, ಆಂತರಿಕ ಆರ್ಥಿಕ ಆದ್ಯತೆಗಳು ಮತ್ತು ಭಾರತ-ಕೆನಡಾ ಆರ್ಥಿಕ ಹಾಗೂ ಹಣಕಾಸು ಸಂಬಂಧಗಳ ವಿಕಸನ ಮತ್ತು ಭವಿಷ್ಯದ ಪಥವನ್ನು ಒಳಗೊಂಡಿರುತ್ತದೆ.

ಶ್ರೀಮತಿ ಸೀತಾರಾಮನ್ ಅವರು ಕೆನಡಾ ಮೂಲದ ಕಂಪನಿಗಳ ಸಿಇಒಗಳು ಮತ್ತು ಹಿರಿಯ ನಾಯಕರೊಂದಿಗೆ ಮುಖಾಮುಖಿ ಸಭೆಗಳನ್ನು ನಡೆಸಲಿದ್ದು, ಈ ಚರ್ಚೆಗಳು ಭಾರತದ ಹೂಡಿಕೆ ಅವಕಾಶಗಳು, ಭಾರತದ ಬೆಳವಣಿಗೆಯ ಸಾಧ್ಯತೆಗಳು ಮತ್ತು ಭಾರತದಲ್ಲಿ ಕೆನಡಾದ ಉದ್ಯಮಗಳ ಉಪಸ್ಥಿತಿಯನ್ನು ವಿಸ್ತರಿಸುವ ಮಾರ್ಗಗಳ ಮೇಲೆ ಗಮನ ಹರಿಸುವ ನಿರೀಕ್ಷೆಯಿದೆ.

ಕೇಂದ್ರ ಹಣಕಾಸು ಸಚಿವರು ಟೊರೊಂಟೊದಲ್ಲಿರುವ ಭಾರತೀಯ ಸಮುದಾಯ ಜೊತೆಗಿನ ಸಂವಾದದಲ್ಲೂ ಭಾಗವಹಿಸಲಿದ್ದು, ಭಾರತೀಯ ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ಮತ್ತು ಭಾರತ ಹಾಗೂ ಕೆನಡಾ ನಡುವಿನ ಜನರ ನಡುವಿನ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಅದರ ಪ್ರಮುಖ ಪಾತ್ರವನ್ನು ಗುರುತಿಸಲು ಇದು ಅವಕಾಶ ನೀಡುತ್ತದೆ.

ಅಮೆರಿಕ ಭೇಟಿಯ ಸಮಯದಲ್ಲಿ, ಶ್ರೀಮತಿ ಸೀತಾರಾಮನ್ ಅವರು ಆಗಸ್ಟ್ 28 ರಿಂದ ಸೆಪ್ಟೆಂಬರ್ 2 2026ರವರೆಗೆ ಚಿಕಾಗೋ, ಆಶ್ ವಿಲ್ಲೆ ಮತ್ತು ನ್ಯೂಯಾರ್ಕ್ ಗೆ ಪ್ರಯಾಣ ಬೆಳೆಸಲಿದ್ದಾರೆ.

ಚಿಕಾಗೋದಲ್ಲಿ, ಶ್ರೀಮತಿ ಸೀತಾರಾಮನ್ ಅವರು ಪ್ರಮುಖ ಹೂಡಿಕೆದಾರರೊಂದಿಗೆ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಮತ್ತು ಖಾಸಗಿ ಕ್ಷೇತ್ರದ ಪ್ರಮುಖ ಸಿಇಒಗಳು, ಅಧ್ಯಕ್ಷರು ಮತ್ತು ಹಿರಿಯ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಚಿಕಾಗೋದ ಆಯ್ದ ಕಂಪನಿಗಳ ಸಿಇಒಗಳು ಮತ್ತು ಹಿರಿಯ ನಾಯಕರೊಂದಿಗೆ ದ್ವಿಪಕ್ಷೀಯ ಮುಖಾಮುಖಿ ಸಭೆಗಳೂ ನಡೆಯಲಿವೆ. ಚರ್ಚೆಗಳು ಭಾರತದ ಹೂಡಿಕೆ ಅವಕಾಶಗಳು, ಆರ್ಥಿಕ ಮುನ್ನೋಟ ಮತ್ತು ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಮತ್ತು ಹೂಡಿಕೆ ಪಾಲುದಾರಿಕೆಯನ್ನು ಬಲಪಡಿಸುವ ಕ್ಷೇತ್ರಗಳ ಮೇಲೆ ಗಮನ ಹರಿಸಲಿವೆ.

ಶ್ರೀಮತಿ ಸೀತಾರಾಮನ್ ಅವರು ಚಿಕಾಗೋ ವಿಶ್ವವಿದ್ಯಾಲಯದ ಪೋಲ್ಸ್ಕಿ ಸೆಂಟರ್ ಫಾರ್ ಎಂಟರ್ಪ್ರೆನರ್ಶಿಪ್ ಅಂಡ್ ಇನ್ನೋವೇಶನ್ಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಉದ್ಯಮಶೀಲತೆ, ನಾವೀನ್ಯತೆ, ತಂತ್ರಜ್ಞಾನ ವಾಣಿಜ್ಯೀಕರಣ ಮತ್ತು ಭಾರತದ ಕ್ಷಿಪ್ರವಾಗಿ ವಿಸ್ತರಿಸುತ್ತಿರುವ ನವೋದ್ಯಮ  ಹಾಗೂ ನಾವೀನ್ಯತೆಯ  ಪರಿಸರ ವ್ಯವಸ್ಥೆಯೊಂದಿಗೆ ಬಾಂಧವ್ಯವನ್ನು ಬಲಪಡಿಸುವ ಕುರಿತು ತಮ್ಮ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ ಕೇಂದ್ರ ಹಣಕಾಸು ಸಚಿವರು ಚಿಕಾಗೋದಲ್ಲಿರುವ ಭಾರತೀಯ ಸಮುದಾಯದ ಸದಸ್ಯರೊಂದಿಗೂ ಮಾತುಕತೆ ನಡೆಸಲಿದ್ದಾರೆ.

ಉತ್ತರ ಕೆರೊಲಿನಾದ ಆಶ್ವಿಲ್ಲೆಯಲ್ಲಿ, ಅಮೆರಿಕದ ಜಿ20 ಅಧ್ಯಕ್ಷತೆಯಡಿಯಲ್ಲಿ ನಡೆಯಲಿರುವ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳ (ಎಫ್ಎಂಸಿಬಿಜಿ ) ಸಭೆಯಲ್ಲಿ ಶ್ರೀಮತಿ ಸೀತಾರಾಮನ್ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ಈ ಸಭೆಯು ಪ್ರಮುಖ ಜಾಗತಿಕ ಆರ್ಥಿಕ ಮತ್ತು ಹಣಕಾಸು ವಿಷಯಗಳ ಕುರಿತು ಚರ್ಚಿಸಲು ಜಿ20 ಸದಸ್ಯರ ಹಣಕಾಸು ಸಚಿವರು, ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳು ಮತ್ತು ಹಿರಿಯ ಆರ್ಥಿಕ ಅಧಿಕಾರಿಗಳನ್ನು ಒಂದೆಡೆ ಸೇರಿಸುತ್ತದೆ. ಈ ಸಭೆಯು ಆಗಸ್ಟ್ 29 ಮತ್ತು 30 ರಂದು ನಿಗದಿಯಾಗಿರುವ ಜಿ20 ಫೈನಾನ್ಸ್ ಮತ್ತು ಸೆಂಟ್ರಲ್ ಬ್ಯಾಂಕ್ ಡೆಪ್ಯೂಟೀಸ್ ಸಭೆಯ ನಂತರ ನಡೆಯಲಿದೆ.

ʻಜಿ20 ಫೈನಾನ್ಸ್ ಟ್ರ್ಯಾಕ್ʼನಲ್ಲಿ ಭಾರತದ ಭಾಗವಹಿಸುವಿಕೆಯು ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆ, ಅಂತಾರಾಷ್ಟ್ರೀಯ ಹಣಕಾಸು ಸಹಕಾರ ಮತ್ತು ಉದಯೋನ್ಮುಖ ಹಾಗೂ ಮುಂದುವರಿದ ಆರ್ಥಿಕತೆಗಳಿಗೆ ಪ್ರಾಮುಖ್ಯತೆ ಇರುವ ಇತರ ವಿಷಯಗಳ ಚರ್ಚೆಗೆ ಕೊಡುಗೆ ನೀಡಲು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ. ಈ ತೊಡಗಿಸಿಕೊಳ್ಳುವಿಕೆಯು ಸಮಕಾಲೀನ ಜಾಗತಿಕ ಆರ್ಥಿಕ ಸವಾಲುಗಳ ಕುರಿತು ತನ್ನ ದೃಷ್ಟಿಕೋನಗಳನ್ನು ಮುನ್ನಡೆಸಲು ಮತ್ತು ಜಿ20 ಪಾಲುದಾರರೊಂದಿಗೆ ಸಹಕಾರವನ್ನು ಬಲಪಡಿಸಲು ಭಾರತಕ್ಕೆ ಅವಕಾಶವನ್ನು ನೀಡುತ್ತದೆ.

ನ್ಯೂಯಾರ್ಕಿನಲ್ಲಿ, ಶ್ರೀಮತಿ ಸೀತಾರಾಮನ್ ಅವರು ನ್ಯೂಯಾರ್ಕ್ ಮೂಲದ ಪ್ರಮುಖ ಕಂಪನಿಗಳ ಸಿಇಒಗಳು ಮತ್ತು ಹಿರಿಯ ಪ್ರತಿನಿಧಿಗಳೊಂದಿಗೆ ಹೂಡಿಕೆದಾರರ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹೂಡಿಕೆ ಅವಕಾಶಗಳು, ಭಾರತದ ಆರ್ಥಿಕ ಮತ್ತು ಹಣಕಾಸು ಪರಿಣಾಮಗಳು ಹಾಗೂ ಭಾರತ ಮತ್ತು ಅಮೆರಿಕ ನಡುವಿನ ಹಣಕಾಸು ಮತ್ತು ಸಾಂಸ್ಥಿಕ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲು ಅವರು ಹಣಕಾಸು ಕ್ಷೇತ್ರದ ಹಿರಿಯ ಅಧಿಕಾರಿಗಳು ಮತ್ತು ಸಿಇಒಗಳೊಂದಿಗೆ ಮುಖಾಮುಖಿ ಸಭೆಗಳನ್ನು ನಡೆಸಲಿದ್ದಾರೆ.

ತಮ್ಮ ನ್ಯೂಯಾರ್ಕ್ ಭೇಟಿಯ ಸಮಯದಲ್ಲಿ, ಪ್ರವರ್ತಕ ಜಾಗತಿಕ ಎಲೆಕ್ಟ್ರಾನಿಕ್ ಮಾರುಕಟ್ಟೆ ಮತ್ತು ವಿಶ್ವದ ಪ್ರಮುಖ ತಂತ್ರಜ್ಞಾನ ಆಧಾರಿತ ಹಣಕಾಸು ಮಾರುಕಟ್ಟೆ ವೇದಿಕೆಗಳಲ್ಲಿ ಒಂದಾದ ನಾಸ್ದಾಕ್ (NASDAQ) — ಶ್ರೀಮತಿ ಸೀತಾರಾಮನ್ ಅವರ ಉಪಸ್ಥಿತಿಯಲ್ಲಿ ಬೆಲ್-ರಿಂಗಿಂಗ್ (ಗಂಟೆ ಬಾರಿಸುವ)  ಸಮಾರಂಭವನ್ನು ಆಯೋಜಿಸುತ್ತದೆ. ಈ ಭೇಟಿಯು ತಂತ್ರಜ್ಞಾನ ಚಾಲಿತ ಹಣಕಾಸು ಮಾರುಕಟ್ಟೆಗಳ ಬೆಳವಣಿಗೆಗಳು ಮತ್ತು ತಂತ್ರಜ್ಞಾನ ಹಾಗೂ ಬಂಡವಾಳ ಮಾರುಕಟ್ಟೆಗಳ ನಡುವೆ ವಿಕಸನಗೊಳ್ಳುತ್ತಿರುವ ಸಂಬಂಧದ ಕುರಿತು ಒಳನೋಟಗಳನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ.

 

*****


(रिलीज़ आईडी: 2302763) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Bengali , Bengali-TR , Gujarati