ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರಿಂದ ಭಾರತ ಸರ್ಕಾರದ ಕಾರ್ಯದರ್ಶಿಗಳೊಂದಿಗೆ 3ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ
ದೇಶದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬುದರ ಕುರಿತು ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಆಲೋಚಿಸುವಂತೆ ಕಾರ್ಯದರ್ಶಿಗಳಿಗೆ ಪ್ರಧಾನಮಂತ್ರಿಗಳ ಕರೆ
ದತ್ತಾಂಶ ದೇಶದ ಆಸ್ತಿ ಮತ್ತು ಭವಿಷ್ಯದ ಸಂಪನ್ಮೂಲ ಎಂದ ಪ್ರಧಾನಮಂತ್ರಿ; ದತ್ತಾಂಶದ ಹೆಚ್ಚಿನ ಪರಸ್ಪರ ಮತ್ತು ಪರಿಣಾಮಕಾರಿ ಬಳಕೆಗೆ ಕರೆ
ಸೈಲೋಗಳು ಕೇವಲ ಸಾಂಸ್ಥಿಕ ಸಮಸ್ಯೆಯಲ್ಲ, ಬದಲಿಗೆ ಮನಸ್ಥಿತಿಯ ಸಮಸ್ಯೆಯಾಗಿದೆ ಎಂದ ಪ್ರಧಾನಮಂತ್ರಿ; ಆಪ್ತ ಭಾವನೆಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ
ಅಧಿಕಾರಿಗಳ ನಡುವೆ ಅನೌಪಚಾರಿಕ ಸಂವಹನ ಮತ್ತು ತಂಡದ ಮನೋಭಾವವನ್ನು ಬೆಳೆಸಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದ ಪ್ರಧಾನಮಂತ್ರಿ
ನೀತಿ ನಿರೂಪಣೆಯಲ್ಲಿ ಹೊಸ ದೃಷ್ಟಿಕೋನಗಳನ್ನು ತರಲು ಸರ್ಕಾರಿ ಇಲಾಖೆಗಳು, ವಿಶ್ವವಿದ್ಯಾಲಯಗಳು ಮತ್ತು ಯುವಕರ ನಡುವೆ ಹೆಚ್ಚಿನ ತೊಡಗಿಸಿಕೊಳ್ಳುವಿಕೆಗೆ ಪ್ರಧಾನಮಂತ್ರಿ ಕರೆ
ಮಾನವನ ಮಧ್ಯಸ್ಥಿಕೆ ಮತ್ತು ನಿರ್ಣಯವನ್ನು ಕಾಯ್ದುಕೊಳ್ಳುತ್ತಲೇ ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆಗೆ ಪ್ರಧಾನಮಂತ್ರಿಯವರಿಂದ ಕರೆ
ಭಾರತದ ರಕ್ಷಣಾ ಉದ್ಯಮವನ್ನು ಮತ್ತಷ್ಟು ಬಲಪಡಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಅದನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಮಂತ್ರಿ
ಪ್ರಮುಖ ಆದ್ಯತೆಗಳು ಮತ್ತು ಅನುಷ್ಠಾನದ ಸವಾಲುಗಳ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡ ಕಾರ್ಯದರ್ಶಿಗಳು
प्रविष्टि तिथि:
20 AUG 2026 9:37PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಅಧಿಕೃತ ನಿವಾಸವಾದ 7, ಲೋಕ ಕಲ್ಯಾಣ ಮಾರ್ಗದಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಮೂರನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೂಲಸೌಕರ್ಯ ಮತ್ತು ಸಂಪರ್ಕ, ಭದ್ರತೆ ಮತ್ತು ವಿದೇಶಾಂಗ ವ್ಯವಹಾರಗಳು ಹಾಗೂ ಆಡಳಿತಕ್ಕೆ ಸಂಬಂಧಿಸಿದ ಸಚಿವಾಲಯಗಳು ಮತ್ತು ಇಲಾಖೆಗಳ ಭವಿಷ್ಯದ ಕಾರ್ಯಸೂಚಿಯ ಬಗ್ಗೆ ಅವರು ಚರ್ಚಿಸಿದರು.
ಈಗಾಗಲೇ ಕಾರ್ಯದರ್ಶಿಗಳ ಎರಡು ಗುಂಪುಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕಾರ್ಯದರ್ಶಿಗಳು ತಕ್ಷಣದ ಸಮಸ್ಯೆಗಳು ಮತ್ತು ಅಂಕಿ-ಅಂಶಗಳ ಬಗ್ಗೆ ಆಲೋಚಿಸುವುದರ ಜೊತೆಗೆ, ದೇಶದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬುದರ ಕುರಿತು ದೀರ್ಘಕಾಲೀನ ದೃಷ್ಟಿಕೋನದಿಂದ ಆಲೋಚಿಸಬೇಕು ಎಂದು ಹೇಳಿದರು.
ಇಲಾಖಾ ಮಿತಿಗಳನ್ನು (ಸೈಲೋ) ಮೀರಿಸುವ ಸವಾಲಿನ ಕುರಿತು ಚರ್ಚಿಸಿದ ಪ್ರಧಾನಮಂತ್ರಿಯವರು, ಇಲಾಖಾ ಮಿತಿಗಳು ಕೇವಲ ಸಾಂಸ್ಥಿಕ ಸಮಸ್ಯೆಯಲ್ಲ, ಬದಲಿಗೆ ಮನಸ್ಥಿತಿಯ ಸಮಸ್ಯೆಯಾಗಿದೆ ಎಂದು ಒತ್ತಿ ಹೇಳಿದರು. ಇವು ಶ್ರೇಣೀ ಮತ್ತು ಇತರ ವಿಭಾಗಗಳ ಎರಡೂ ರೂಪದಲ್ಲಿರಬಹುದು ಎಂದರು. ಅಧಿಕಾರಿಗಳು ತಮ್ಮ ಜವಾಬ್ದಾರಿಗಳ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು ಮತ್ತು ಆಪ್ತ ಬಾಂಧವ್ಯ ಭಾವನೆಯಿಂದ ಕೆಲಸ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.
ಸಾಮೂಹಿಕ ಪ್ರಯತ್ನದ ಮಹತ್ವವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಮಯದ ಅನುಭವವನ್ನು ಉಲ್ಲೇಖಿಸಿದರು. ಆ ಸಮಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಇಂತಹ ಸಮನ್ವಯ ವ್ಯವಸ್ಥೆಗಳು ಸರ್ಕಾರದ ಕೆಲಸದ ಸಂಸ್ಕೃತಿಯ ಸಹಜ ಭಾಗವಾಗಬೇಕು ಎಂದು ಅವರು ಹೇಳಿದರು.
ಮಾನವನ ಮಧ್ಯಸ್ಥಿಕೆ ಮತ್ತು ನಿರ್ಣಯವನ್ನು ಕಾಯ್ದುಕೊಳ್ಳುತ್ತಲೇ ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆಗೆ ಪ್ರಧಾನಮಂತ್ರಿ ಕರೆ ನೀಡಿದರು. ಕೃತಕ ಬುದ್ಧಿಮತ್ತೆಯ ಸಾಮರ್ಥ್ಯಗಳನ್ನು ಮಾನವನ ಪರಿಣತಿಯೊಂದಿಗೆ ಸಂಯೋಜಿಸುವ ನವೀನ ಮಾರ್ಗಗಳನ್ನು ಅನ್ವೇಷಿಸಲು ಅವರು ಸೂಚಿಸಿದರು.
ದತ್ತಾಂಶವು ದೇಶದ ಆಸ್ತಿ ಮತ್ತು ಭವಿಷ್ಯದ ಸಂಪನ್ಮೂಲ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದತ್ತಾಂಶವನ್ನು ಸಂಗ್ರಹಿಸಲು, ಸಂಗ್ರಹಿಸಿಡಲು ಮತ್ತು ನಿರ್ವಹಿಸಲು ಸರ್ಕಾರವು ಸಂಪನ್ಮೂಲಗಳನ್ನು ಹೂಡಿಕೆ ಮಾಡುತ್ತದೆ, ಆದರೆ ಇಲಾಖಾ ಮಿತಿಗಳು ಮತ್ತು ವಿಭಜಿತ ವ್ಯವಸ್ಥೆಗಳಿಂದಾಗಿ ಅದರ ಸಂಪೂರ್ಣ ಸಾಮರ್ಥ್ಯವನ್ನು ಯಾವಾಗಲೂ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಅಂಶದ ಬಗ್ಗೆ ಅವರು ಗಮನ ಸೆಳೆದರು. ವಿವಿಧ ಉದ್ದೇಶಗಳಿಗಾಗಿ ದತ್ತಾಂಶವನ್ನು ಸಂಗ್ರಹಿಸುವ ಮತ್ತು ನಿರ್ವಹಿಸುವ ರೀತಿಯಲ್ಲಿರುವ ವ್ಯತ್ಯಾಸಗಳನ್ನು ಎತ್ತಿ ತೋರಿಸಿದಅವರು, ಹೆಚ್ಚಿನ ಅಂತರ-ಕಾರ್ಯಸಾಧ್ಯತೆ ಮತ್ತು ದತ್ತಾಂಶದ ಪರಿಣಾಮಕಾರಿ ಬಳಕೆಯನ್ನು ಸಾಧ್ಯವಾಗಿಸುವ ಪರಿಹಾರಗಳನ್ನು ಕಂಡುಕೊಳ್ಳಲು ಕರೆ ನೀಡಿದರು.
ನೀತಿ ನಿರೂಪಣೆಯಲ್ಲಿ ಹೊಸ ದೃಷ್ಟಿಕೋನಗಳನ್ನು ತರಲು ಸರ್ಕಾರಿ ಇಲಾಖೆಗಳು, ವಿಶ್ವವಿದ್ಯಾಲಯಗಳು ಮತ್ತು ಯುವಕರ ನಡುವೆ ಹೆಚ್ಚಿನ ತೊಡಗಿಸಿಕೊಳ್ಳುವಿಕೆಗೆ ಪ್ರಧಾನಮಂತ್ರಿಯವರು ಕರೆ ನೀಡಿದರು. ವಿಶ್ವವಿದ್ಯಾಲಯಗಳು ಮತ್ತು ಯುವಜನರೊಂದಿಗೆ ವಿಶಾಲವಾದ ತೊಡಗಿಸಿಕೊಳ್ಳುವಿಕೆಯು ಹೊಸ ಮತ್ತು ನವೀನ ಕಲ್ಪನೆಗಳನ್ನು ತರಬಲ್ಲದು ಎಂದು ಅವರು ಹೇಳಿದರು.
ರಕ್ಷಣಾ ವಲಯವೂ ಸೇರಿದಂತೆ ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚಿನ ಗಮನ ನೀಡುವಂತೆ ಪ್ರಧಾನಮಂತ್ರಿ ಕರೆ ನೀಡಿದರು. ಭಾರತದ ರಕ್ಷಣಾ ಉದ್ಯಮವನ್ನು ಮತ್ತಷ್ಟು ಬಲಪಡಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಅದನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನವೀನ ರಕ್ಷಣಾ ಕೋರ್ಸುಗಳನ್ನು ಅಭಿವೃದ್ಧಿಪಡಿಸುವುದು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಬಲಪಡಿಸುವ ಮಹತ್ವವನ್ನು ಅವರು ಪ್ರತಿಪಾದಿಸಿದರು.
ಭಾರತದ ಕರಾವಳಿ ಕ್ಷೇತ್ರವನ್ನು ಬಲಪಡಿಸಲು ಸಮಗ್ರ ವಿಧಾನದ ಅಗತ್ಯತೆಯ ಕುರಿತು ಪ್ರಧಾನಮಂತ್ರಿ ಚರ್ಚಿಸಿದರು. ಹಡಗು ನಿರ್ಮಾಣಕ್ಕೆ ಮೂಲಸೌಕರ್ಯದ ದರ್ಜೆ ನೀಡಲಾಗಿದ್ದನ್ನು ನೆನಪಿಸಿದ ಅವರು, ಉದ್ದೇಶಿತ ಗುರಿಗಳನ್ನು ಮಿಷನ್ ಮೋಡ್ ನಲ್ಲಿ ಸಾಧಿಸಲಾಗುತ್ತಿದೆಯೇ ಎಂಬುದನ್ನು ಮೌಲ್ಯಮಾಪನ ಮಾಡಲು ಕರೆ ನೀಡಿದರು. ಭಾರತವು ಬಂದರು ಅಭಿವೃದ್ಧಿಯಿಂದ 'ಬಂದರು ಆಧಾರಿತ ಅಭಿವೃದ್ಧಿ'ಯತ್ತ ಸಾಗಬೇಕಾದ ಅಗತ್ಯವನ್ನು ಅವರು ಪುನರುಚ್ಚರಿಸಿದರು.
ದೇಶದ ಉತ್ಪಾದನಾ ಘಟಕಗಳು ಮತ್ತು ರಫ್ತು ಆಧಾರಿತ ಘಟಕಗಳ ನಡುವೆ ಉತ್ತಮ ಸಂಪರ್ಕದ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು, ಇದರಿಂದ ಭಾರತದ ಉತ್ಪಾದನೆ ಮತ್ತು ರಫ್ತು ಸಾಮರ್ಥ್ಯಗಳು ಕರಾವಳಿ ಮೂಲಸೌಕರ್ಯದಿಂದ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು ಎಂದರು.
ಸಂಕೀರ್ಣ ಸವಾಲುಗಳನ್ನು ಎದುರಿಸಲು ಮತ್ತು ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಭಾರತದ ಭವಿಷ್ಯವನ್ನು ರೂಪಿಸಲು ಇಡೀ ಸರ್ಕಾರದ ಸಮಗ್ರ ವಿಧಾನ ಹೆಚ್ಚಿನ ಸಮನ್ವಯ, ನವೀನ ಆಲೋಚನೆ ಮತ್ತು ಸಾಮೂಹಿಕ ಮಾಲೀಕತ್ವದ ಅಗತ್ಯವನ್ನು ಪುನರುಚ್ಚರಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಮಾತನ್ನು ಮುಗಿಸಿದರು.
ಅಧಿಕಾರಿಗಳ ನಡುವೆ ಅನೌಪಚಾರಿಕ ಸಂವಹನ ಮತ್ತು ಒಂದೇ ತಂಡವೆನ್ನುವ ಭಾವನೆಯನ್ನು ಬೆಳೆಸಿಕೊಳ್ಳುವ ಮಹತ್ವವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಕಿರಿಯ ಸಹೋದ್ಯೋಗಿಗಳೊಂದಿಗೆ ಹೆಚ್ಚಿನ ವೈಯಕ್ತಿಕ ಮತ್ತು ಅನೌಪಚಾರಿಕ ತೊಡಗಿಸಿಕೊಳ್ಳುವಿಕೆಯನ್ನು ಬೆಳೆಸಿಕೊಳ್ಳಲು ಮತ್ತು ವಿವಿಧ ತಂಡಗಳು ಹಾಗೂ ಇಲಾಖೆಗಳಲ್ಲಿ ಬಲವಾದ ಜಾಲವನ್ನು ರೂಪಿಸಲು ಅವರು ಹಿರಿಯ ಅಧಿಕಾರಿಗಳಿಗೆ ಪ್ರೋತ್ಸಾಹಿಸಿದರು.
ಕಾರ್ಯದರ್ಶಿಗಳು ವಲಯವಾರು ಆದ್ಯತೆಗಳು, ಉದಯೋನ್ಮುಖ ಸವಾಲುಗಳು ಮತ್ತು ಅನುಷ್ಠಾನದ ಸಮಸ್ಯೆಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಭೆಯಲ್ಲಿ ಸಚಿವ ಸಂಪುಟ ಕಾರ್ಯದರ್ಶಿ, ಪ್ರಮುಖ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಪ್ರಧಾನಮಂತ್ರಿಯವರ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*****
(रिलीज़ आईडी: 2301843)
आगंतुक पटल : 5