ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ (ಎನ್‌ ಐ ಸಿ ಡಿ ಐ ಟಿ) ನ ಉನ್ನತ ಮೇಲ್ವಿಚಾರಣಾ ಪ್ರಾಧಿಕಾರದ 3ನೇ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ವಹಿಸಿದ್ದರು ಮತ್ತು ಎನ್‌‌ ಐ ಸಿ ಡಿ ಪಿ ಅಡಿಯಲ್ಲಿನ ಯೋಜನೆಗಳ ಪ್ರಗತಿಯನ್ನು ಪರಾಮರ್ಶಿಸಿದರು


ಮೂಲಸೌಕರ್ಯ, ಭೂಮಿ ಹಂಚಿಕೆ, ಹೂಡಿಕೆ ಮತ್ತು ಉತ್ಪಾದನೆ ಆರಂಭಿಸುವ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಶ್ರೀಮತಿ ಸೀತಾರಾಮನ್ ಸೂಚನೆ

ಪ್ಲಗ್-ಅಂಡ್-ಪ್ಲೇ ಮೂಲಸೌಕರ್ಯ ಹೊಂದಿರುವ ಹೂಡಿಕೆದಾರ ಸ್ನೇಹಿ ಕೈಗಾರಿಕಾ ಪರಿಸರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಕರೆ

ಭವ್ಯ (BHAVYA) ಹಾಗೂ ಭವಿಷ್ಯದ ಕೈಗಾರಿಕಾ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಗತಿಶಕ್ತಿ ಆಧಾರಿತ ಸಮಗ್ರ ಪ್ರದೇಶಾಭಿವೃದ್ಧಿ ವಿಧಾನ ಅಳವಡಿಸಿಕೊಳ್ಳುವಂತೆ ಶ್ರೀ ಪಿಯೂಷ್ ಗೋಯಲ್ ಕರೆ

ʼಭವ್ಯʼ ಯೋಜನೆಯ ಮೊದಲ ಸುತ್ತಿಗೆ ರಾಜ್ಯಗಳಿಂದ ಉತ್ತಮ ಪ್ರತಿಕ್ರಿಯೆ

प्रविष्टि तिथि: 17 AUG 2026 8:54PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ (ಎನ್‌ ಐ ಸಿ ಡಿ ಟಿ) ನ ಉನ್ನತ ಮೇಲ್ವಿಚಾರಣಾ ಪ್ರಾಧಿಕಾರದ 3 ನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ (ಎನ್ ಸಿ ಡಿ ಪಿ) ಅಡಿಯಲ್ಲಿನ ಯೋಜನೆಗಳ ಪ್ರಗತಿಯನ್ನು ಪರಾಮರ್ಶಿಸಲಾಯಿತು ಮತ್ತು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಯ ಮುಂದಿನ ಹಂತದ ಆದ್ಯತೆಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್; ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ಅಶೋಕ್ ಕುಮಾರ್ ಲಾಹಿರಿ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಎನ್‌ ಐ ಸಿ ಡಿ ಪಿ ಅಡಿಯಲ್ಲಿ ಸಾಧಿಸಲಾದ ಪ್ರಗತಿಯನ್ನು ಶ್ಲಾಘಿಸಿದರು ಮತ್ತು ನೆಲಮಟ್ಟದಲ್ಲಿ ಉತ್ತೇಜನಕಾರಿ ಫಲಿತಾಂಶಗಳು ಹೂಡಿಕೆದಾರರ ಹೆಚ್ಚುತ್ತಿರುವ ಬೇಡಿಕೆಯನ್ನು ಸೂಚಿಸುತ್ತವೆ ಎಂದು ಹೇಳಿದರು. ಪ್ರಸ್ತುತ ಲಭ್ಯವಿರುವ ಕೈಗಾರಿಕಾ ಭೂಮಿ ಮತ್ತು ಮೂಲಸೌಕರ್ಯದ ಸಾಮರ್ಥ್ಯ ಸಂಪೂರ್ಣವಾಗಿ ಬಳಸಿಕೊಳ್ಳುವ ಮೊದಲೇ ಮುಂದಿನ ಹಂತದ ಕೈಗಾರಿಕಾ ಭೂಮಿ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದು ಅವರು ಒತ್ತಿ ಹೇಳಿದರು.

ಕೈಗಾರಿಕಾ ಉತ್ಪಾದನೆಯನ್ನು ವಿಸ್ತರಿಸುವುದು, ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಬಲಪಡಿಸುವುದು ಹಾಗೂ ಜಾಗತಿಕವಾಗಿ ಸ್ಪರ್ಧಾತ್ಮಕ ಕೈಗಾರಿಕಾ ಪರಿಸರ ವ್ಯವಸ್ಥೆಗಳನ್ನು ಸೃಷ್ಟಿಸುವ ಕೇಂದ್ರ ಸರ್ಕಾರದ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭಗಳಲ್ಲಿ ಕೈಗಾರಿಕಾ ಕಾರಿಡಾರ್‌ ಗಳೂ ಸೇರಿವೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.

ಹಿಂದಿನ ಅಪೆಕ್ಸ್‌ ಸಭೆಯಲ್ಲಿ ನೀಡಲಾಗಿದ್ದ ಒತ್ತನ್ನು ಸ್ಮರಿಸಿದ ಅವರು, ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಯನ್ನು ‘ಟೀಮ್ ಇಂಡಿಯಾ’ ಮನೋಭಾವದೊಂದಿಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು. ಕಾರ್ಯಕ್ರಮದ ಯಶಸ್ಸಿಗಾಗಿ ಸರಕು ಸಾಗಣೆ, ಕೈಗಾರಿಕಾ ಅಭಿವೃದ್ಧಿ, ರೈಲ್ವೆ ಮತ್ತು ಎಕ್ಸ್‌ಪ್ರೆಸ್‌ವೇಗಳ - ಅಂದರೆ ʼಫೈರ್‌ʼ (FIRE) ಕಾರಿಡಾರ್‌ ಗಳ - ಸಮನ್ವಯವೂ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಒತ್ತಿ ಹೇಳಿದರು.

ಯೋಜನೆಗಳಿಗೆ ಅನುಮೋದನೆ ನೀಡುವುದನ್ನು ಮೀರಿ, ಈಗ ಮೂಲಸೌಕರ್ಯ ನಿರ್ಮಾಣ, ಭೂಮಿ ಹಂಚಿಕೆ, ಹೂಡಿಕೆ ಮತ್ತು ಉತ್ಪಾದನೆ ಆರಂಭಿಸುವ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವತ್ತ ಗಮನ ಹರಿಸಬೇಕು ಎಂದು ಹಣಕಾಸು ಸಚಿವರಾದರು ಹೇಳಿದರು. ಭೂಮಿ, ಸಂಪರ್ಕ ವ್ಯವಸ್ಥೆ, ಉಪಯುಕ್ತ ಸೇವೆಗಳು, ಶಾಸನಬದ್ಧ ಅನುಮತಿಗಳು ಮತ್ತು ಯೋಜನೆಯ ವಿಶೇಷ ಉದ್ದೇಶದ ಘಟಕಗಳ (ಎಸ್‌ ಪಿ ವಿ) ಅಧಿಕಾರಗಳಿಗೆ ಸಂಬಂಧಿಸಿದ ಅಡೆತಡೆಗಳನ್ನು ರಾಜ್ಯಗಳು ನಿವಾರಿಸಬೇಕು ಎಂದು ಅವರು ಕರೆ ನೀಡಿದರು.

ಪಿಎಂ ಗತಿಶಕ್ತಿ ಮೂಲಕ ಸಮಗ್ರ ಯೋಜನೆ ರೂಪಿಸುವುದು ಹಾಗೂ ಹೂಡಿಕೆದಾರ ಸ್ನೇಹಿ ಭೂಮಿ ಹಂಚಿಕೆ ವ್ಯವಸ್ಥೆಗಳನ್ನು ಮುಂದುವರಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು. ಕಾರ್ಮಿಕರ ವಸತಿ, ಆರೋಗ್ಯ ಸೇವೆ, ಕೌಶಲ್ಯಾಭಿವೃದ್ಧಿ, ಸಾರ್ವಜನಿಕ ಸಾರಿಗೆ ಮತ್ತು ಇತರ ಸಾಮಾಜಿಕ ಸೌಲಭ್ಯಗಳು ಕೈಗಾರಿಕಾ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿರಬೇಕು ಎಂದು ಅವರು ಹೇಳಿದರು.

ಹೆಚ್ಚಿನ ಸಾರ್ವಜನಿಕ ಬಂಡವಾಳ ವೆಚ್ಚ, ಎಸ್‌ ಎ ಎಸ್‌ ಸಿ ಅಡಿಯಲ್ಲಿ ರಾಜ್ಯಗಳಿಗೆ ನೀಡುತ್ತಿರುವ ಬೆಂಬಲ, ಉತ್ಪಾದನಾ ವಲಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸುಧಾರಿತ ಸಾಲ ಸೌಲಭ್ಯ ಹಾಗೂ ದೇಶೀಯ ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳನ್ನು ಬಲಪಡಿಸುವ ಉದ್ದೇಶದ ತೆರಿಗೆ ಮತ್ತು ಕಸ್ಟಮ್ಸ್ ಕ್ರಮಗಳ ಮೂಲಕ ಮೂಲಸೌಕರ್ಯ ಮತ್ತು ಉತ್ಪಾದನಾ ವಲಯಕ್ಕೆ ಭಾರತ ಸರ್ಕಾರ ನೀಡುತ್ತಿರುವ ಬೆಂಬಲವನ್ನೂ ಶ್ರೀಮತಿ ಸೀತಾರಾಮನ್ ಪ್ರಸ್ತಾಪಿಸಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಕೈಗಾರಿಕಾ ಕಾರಿಡಾರ್ ಯೋಜನೆಗಳ ಅನುಷ್ಠಾನವನ್ನು ಇನ್ನಷ್ಟು ತ್ವರಿತಗೊಳಿಸುವಂತೆ ಮತ್ತು ಫಲಿತಾಂಶ ಆಧಾರಿತವಾಗಿ ಕೈಗೊಳ್ಳುವಂತೆ ಕರೆ ನೀಡಿದರು. ಸಕಾಲಿಕ ಹೂಡಿಕೆ ಮತ್ತು ಕಾರ್ಯಾರಂಭಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಭವ್ಯ (BHAVYA) ಮತ್ತು ಭವಿಷ್ಯದ ಕೈಗಾರಿಕಾ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿ ಗತಿಶಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಹಾಗೂ ಸಮಗ್ರ ಪ್ರದೇಶಾಭಿವೃದ್ಧಿ ವಿಧಾನವನ್ನು ಅನುಸರಿಸಿ ಯೋಜಿಸಬೇಕು ಎಂದು ಶ್ರೀ ಗೋಯಲ್ ಹೇಳಿದರು.

ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳಿಂದ ದೊರೆಯುವ ಅವಕಾಶಗಳನ್ನು ಬಳಸಿಕೊಳ್ಳುವುದು ಹಾಗೂ ದೇಶವಾರು ಮತ್ತು ವಲಯವಾರು ಕೈಗಾರಿಕಾ ವಲಯಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಅನ್ವೇಷಿಸುವುದು ಸೇರಿದಂತೆ ಕೈಗಾರಿಕಾ ನೋಡ್‌ ಗಳ ಬಗ್ಗೆ ಹೂಡಿಕೆದಾರರಿಗೆ ಉದ್ದೇಶಿತ ರೀತಿಯಲ್ಲಿ ಮಾಹಿತಿ ತಲುಪಿಸುವಂತೆ ಮತ್ತು ಅವುಗಳ ಪ್ರಚಾರವನ್ನು ಬಲಪಡಿಸುವಂತೆ ಅವರು ಕರೆ ನೀಡಿದರು.

ಹೂಡಿಕೆದಾರರ ಅಗತ್ಯಗಳಿಗೆ ಸೂಕ್ತ ಸ್ಥಳಗಳನ್ನು ಹೊಂದಾಣಿಕೆ ಮಾಡಬೇಕು ಮತ್ತು ಪ್ಲಗ್-ಅಂಡ್-ಪ್ಲೇ ಮೂಲಸೌಕರ್ಯ, ಸಿದ್ಧ ಕಾರ್ಖಾನೆಗಳು, ಕಾರ್ಮಿಕರ ವಸತಿ ಹಾಗೂ ಪೂರಕ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ಒಳಗೊಂಡ ಸಿದ್ಧ ಕೈಗಾರಿಕಾ ಪರಿಸರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಚಿವರಾದರು ಒತ್ತಿ ಹೇಳಿದರು. ಇಂತಹ ವಿಧಾನವು ಹೂಡಿಕೆಗಳು ಮತ್ತು ಕಾರ್ಯಾಚರಣೆಗಳು ತ್ವರಿತವಾಗಿ ಆರಂಭಗೊಳ್ಳಲು ನೆರವಾಗಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ಈಗ 13 ರಾಜ್ಯಗಳು ಮತ್ತು 7 ಕೈಗಾರಿಕಾ ಕಾರಿಡಾರ್‌ ಗಳಲ್ಲಿ 20 ಅನುಮೋದಿತ ಯೋಜನೆಗಳಿವೆ.

ಧೋಲೆರಾ, ಶೇಂದ್ರ-ಬಿಡ್ಕಿನ್, ಗ್ರೇಟರ್ ನೋಯ್ಡಾ ಮತ್ತು ವಿಕ್ರಮ್ ಉದ್ಯೋಗಪುರಿ ಎಂಬ ನಾಲ್ಕು ಕೈಗಾರಿಕಾ ಸ್ಮಾರ್ಟ್ ಸಿಟಿಗಳು ಉತ್ಪಾದನಾ ಹಂತವನ್ನು ಪ್ರವೇಶಿಸಿವೆ.

2024ರ ಆಗಸ್ಟ್‌ ನಲ್ಲಿ ಅನುಮೋದಿಸಲಾದ 12 ಯೋಜನೆಗಳಲ್ಲಿಯೂ ಪ್ರಗತಿ ಕಂಡುಬರುತ್ತಿದ್ದು, ಮೂಲಸೌಕರ್ಯ ಅಭಿವೃದ್ಧಿ, ಭೂಮಿ ಹಂಚಿಕೆ ಮತ್ತು ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸುವ ಕಾರ್ಯಗಳನ್ನು ಸಮಾನಾಂತರವಾಗಿ ಕೈಗೊಳ್ಳಲಾಗುತ್ತಿದೆ.

ಇದುವರೆಗೆ ಸುಮಾರು 5,348 ಎಕರೆ ಪ್ರದೇಶವನ್ನು ಒಳಗೊಂಡ 469 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇವುಗಳಲ್ಲಿ ಸುಮಾರು ₹2.21 ಲಕ್ಷ ಕೋಟಿ ಹೂಡಿಕೆಯ ಸಾಧ್ಯತೆ ಇದ್ದು, ಸುಮಾರು 1.29 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಈಗಾಗಲೇ 134 ಘಟಕಗಳು ಉತ್ಪಾದನೆಯಲ್ಲಿ ತೊಡಗಿದ್ದು, 95 ಘಟಕಗಳು ನಿರ್ಮಾಣ ಹಂತದಲ್ಲಿವೆ.

ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರು ರಾಷ್ಟ್ರೀಯ ಜಲಮಾರ್ಗಗಳನ್ನು ಕೈಗಾರಿಕಾ ಕಾರಿಡಾರ್‌ ಗಳೊಂದಿಗೆ ಸಂಯೋಜಿಸುವ ಅಗತ್ಯವನ್ನು ಒತ್ತಿ ಹೇಳಿದರು. ಕಾರಿಡಾರ್ ಅಭಿವೃದ್ಧಿಗೆ ಜಲಮಾರ್ಗಗಳನ್ನು ಸಂಭಾವ್ಯ ಮುಖ್ಯ ಆಧಾರವಾಗಿ ಪರಿಗಣಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಅವರು ಸಲಹೆ ನೀಡಿದರು.

ದೇಶದ ಕೈಗಾರಿಕಾ ನೆಲೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಈಶಾನ್ಯ ರಾಜ್ಯಗಳಲ್ಲಿ ಕೈಗಾರಿಕಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು. ವಿಶೇಷವಾಗಿ ಉತ್ತಮ ಸಂಪರ್ಕ ವ್ಯವಸ್ಥೆ, ಭೂಮಿಯ ಲಭ್ಯತೆ, ಸ್ಥಳೀಯ ಸಂಪನ್ಮೂಲಗಳ ಅನುಕೂಲತೆ ಮತ್ತು ಮಾರುಕಟ್ಟೆಯ ಸಾಮರ್ಥ್ಯ ಹೊಂದಿರುವ ಸ್ಥಳಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ಅಶೋಕ್ ಕುಮಾರ್ ಲಾಹಿರಿ ಅವರು, ಕೈಗಾರಿಕಾ ಕಾರಿಡಾರ್ ಕಾರ್ಯಕ್ರಮದ ಅನುಮೋದಿತ ಸಾಂಸ್ಥಿಕ ಮತ್ತು ಕಾನೂನು ಚೌಕಟ್ಟಿಗೆ ಅನುಗುಣವಾಗಿ ಯೋಜನಾ ವಿಶೇಷ ಉದ್ದೇಶದ ಘಟಕಗಳಿಗೆ (ಎಸ್‌ ಪಿ ವಿ) ಸಮರ್ಪಕ ಯೋಜನೆ, ಅಭಿವೃದ್ಧಿ ಮತ್ತು ನಗರಾಡಳಿತ ಅಧಿಕಾರಗಳನ್ನು ನೀಡುವ ಮೂಲಕ ಅವುಗಳನ್ನು ಸಬಲಗೊಳಿಸಲು ರಾಜ್ಯ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಈ ಅಧಿಕಾರಗಳನ್ನು ಪರಿಣಾಮಕಾರಿಯಾಗಿ ಹಸ್ತಾಂತರಿಸುವುದರಿಂದ ಎಸ್‌ ಪಿ ವಿ ಗಳು ಸಮಯೋಚಿತ ನಿರ್ಧಾರಗಳನ್ನು ಕೈಗೊಳ್ಳಲು, ವಿವಿಧ ರಾಜ್ಯ ಸರ್ಕಾರಿ ಸಂಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಹೆಚ್ಚು ಸಮನ್ವಯದ, ಪರಿಣಾಮಕಾರಿಯಾದ ಹಾಗೂ ಹೂಡಿಕೆದಾರ ಸ್ನೇಹಿ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಅವರು ಒತ್ತಿ ಹೇಳಿದರು.

ಸಭೆಯ ಆರಂಭದಲ್ಲಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಕಾರ್ಯದರ್ಶಿ ಹಾಗೂ ಎನ್‌ ಐ ಸಿ ಡಿ ಐ ಟಿ ಅಧ್ಯಕ್ಷರಾದ ಶ್ರೀ ಅಮರದೀಪ್ ಸಿಂಗ್ ಭಾಟಿಯಾ ಅವರು ಸ್ವಾಗತ ಭಾಷಣ ಮಾಡಿದರು. ಹಿಂದಿನ ಮೇಲ್ವಿಚಾರಣಾ ಸಮಿತಿಯ ಸಭೆಯ ನಂತರ ಆಗಿರುವ ಪ್ರಗತಿ ಮತ್ತು ಪ್ರಾಧಿಕಾರದ ಮುಂದಿರುವ ಪ್ರಮುಖ ಅನುಷ್ಠಾನ ಸಮಸ್ಯೆಗಳನ್ನು ಅವರು ವಿವರಿಸಿದರು.

ಇದಾದ ಬಳಿಕ ಎನ್‌ ಐ ಸಿ ಡಿ ಐ ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಜತ್ ಕುಮಾರ್ ಸೈನಿ ಅವರು ಕೈಗಾರಿಕಾ ಕಾರಿಡಾರ್ ಯೋಜನೆಗಳ ಪ್ರಸ್ತುತ ಸ್ಥಿತಿಗತಿ ಕುರಿತು ಪ್ರಸ್ತುತಿ ನೀಡಿದರು. ಇದರಲ್ಲಿ ಅನುಷ್ಠಾನದ ಪ್ರಗತಿ, ಭೂಮಿ ಹಂಚಿಕೆ ಮತ್ತು ಹೂಡಿಕೆದಾರರನ್ನು ಆಕರ್ಷಿಸುವ ಪ್ರಗತಿಯ ಜೊತೆಗೆ ರಾಜ್ಯಗಳೊಂದಿಗೆ ಸಮನ್ವಯದ ಅಗತ್ಯವಿರುವ ಯೋಜನೆ-ನಿರ್ದಿಷ್ಟ ಸಮಸ್ಯೆಗಳನ್ನೂ ವಿವರಿಸಲಾಯಿತು.

ಭಾಗವಹಿಸಿದ್ದ ರಾಜ್ಯಗಳ ಪ್ರತಿನಿಧಿಗಳು ಯೋಜನೆವಾರು ಪ್ರಗತಿ, ಅನುಷ್ಠಾನದಲ್ಲಿನ ಪ್ರಮುಖ ಸವಾಲುಗಳು ಹಾಗೂ ಸಮನ್ವಯಯುತ ಬೆಂಬಲ ಅಗತ್ಯವಿರುವ ಕ್ಷೇತ್ರಗಳ ಬಗ್ಗೆ ವಿವರಗಳನ್ನು ಹಂಚಿಕೊಂಡರು. ಈ ಚರ್ಚೆಗಳು ಯೋಜನೆ-ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅನುಷ್ಠಾನವನ್ನು ತ್ವರಿತಗೊಳಿಸಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಕೇಂದ್ರೀಕೃತ ಸಮನ್ವಯಕ್ಕೆ ವೇದಿಕೆ ಒದಗಿಸಿದವು.

ಪೂರ್ಣಗೊಂಡ ಮತ್ತು ಪ್ರಗತಿಯಲ್ಲಿರುವ ಯೋಜನೆಗಳು ಎಷ್ಟು ವೇಗವಾಗಿ ಸಕ್ರಿಯ ಉತ್ಪಾದನಾ ಕೇಂದ್ರಗಳಾಗಿ ಪರಿವರ್ತನೆಯಾಗುತ್ತವೆ, ಹೂಡಿಕೆಯನ್ನು ಆಕರ್ಷಿಸುತ್ತವೆ ಮತ್ತು ಉದ್ಯೋಗ ಸೃಷ್ಟಿಸುತ್ತವೆ ಎಂಬುದೇ ಮುಂದಿನ ಹಂತದಲ್ಲಿ ಪ್ರಗತಿಯನ್ನು ಅಳೆಯುವ ಮಾನದಂಡವಾಗಲಿದೆ ಎಂದು ಸಭೆಯು ಸ್ಪಷ್ಟಪಡಿಸಿತು.

ದೇಶದಾದ್ಯಂತ 100 ಹೂಡಿಕೆ-ಸಿದ್ಧ, ಪ್ಲಗ್-ಅಂಡ್-ಪ್ಲೇ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವ ಭಾರತ ಔದ್ಯೋಗಿಕ ವಿಕಾಸ ಯೋಜನೆ (BHAVYA)ಯ ಅನುಷ್ಠಾನವನ್ನೂ ಸಭೆಯು ಪರಿಶೀಲಿಸಿತು.

ಮೊದಲ ಸುತ್ತಿನಲ್ಲಿ ಗರಿಷ್ಠ 20 ಯೋಜನೆಗಳನ್ನು ಅನುಮೋದನೆಗಾಗಿ ಪ್ರಸ್ತಾಪಿಸಲಾಗಿದ್ದರೂ, ರಾಜ್ಯಗಳಿಂದ 87 ಅರ್ಜಿಗಳು ಸ್ವೀಕರಿಸಲ್ಪಟ್ಟಿವೆ. ಇದು ದೇಶಾದ್ಯಂತ ಈ ಯೋಜನೆಗೆ ರಾಜ್ಯಗಳಲ್ಲಿರುವ ಬಲವಾದ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ.

BHAVYA ಯೋಜನೆಗಳ ಯೋಜನೆ ರೂಪಿಸುವಿಕೆ ಮತ್ತು ಮೌಲ್ಯಮಾಪನವನ್ನು ಸಂಪೂರ್ಣವಾಗಿ ಪ್ರಧಾನಮಂತ್ರಿ ಗತಿಶಕ್ತಿಯೊಂದಿಗೆ ಜೋಡಿಸಬೇಕು ಎಂದು ಒತ್ತಿ ಹೇಳಲಾಯಿತು. ಕೈಗಾರಿಕಾ ಪ್ರದೇಶಗಳ ಒಳಗೆ ಮತ್ತು ಸುತ್ತಮುತ್ತಲಿನ ಮೂಲಸೌಕರ್ಯವನ್ನು ಕೈಗಾರಿಕಾ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿ ಯೋಜಿಸಬೇಕು ಎಂದು ತಿಳಿಸಲಾಯಿತು.

BHAVYA ಯೋಜನೆಯು ಕೈಗಾರಿಕಾ ಕಾರಿಡಾರ್ ಯೋಜನೆಗಳಿಂದ ಪಡೆದ ಅನುಭವದ ಆಧಾರದ ಮೇಲೆ ಮುಂದುವರಿಯಲಿದೆ. ಪ್ರಸ್ತಾವನೆಗಳ ಮೌಲ್ಯಮಾಪನದಲ್ಲಿ ಸಿದ್ಧ ಭೂಮಿಯ ಲಭ್ಯತೆ, ವಿಶ್ವಾಸಾರ್ಹ ಕೈಗಾರಿಕಾ ಬೇಡಿಕೆ, ಉತ್ತಮ ಸಂಪರ್ಕ ವ್ಯವಸ್ಥೆ, ಖಚಿತವಾದ ಉಪಯುಕ್ತ ಸೇವೆಗಳು, ವಾಸ್ತವಿಕ ಹಂತವಾರು ಅನುಷ್ಠಾನ ಮತ್ತು ಆರಂಭಿಕ ಹಂತದಲ್ಲೇ ಹೂಡಿಕೆದಾರರನ್ನು ಆಕರ್ಷಿಸುವ ಸಾಮರ್ಥ್ಯ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಲಾಗುತ್ತದೆ.

ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿಯ ಮುಂದಿನ ಹಂತಕ್ಕೆ ಸಭೆಯ ಚರ್ಚೆಗಳು ಸ್ಪಷ್ಟವಾದ ದಿಕ್ಕನ್ನು ನೀಡಿದವು. ನಿರ್ಮಿಸಲಾದ ಮೂಲಸೌಕರ್ಯದ ಪ್ರಮಾಣದಿಂದ ಮಾತ್ರವಲ್ಲದೆ, ಯೋಜನೆಗಳು ಎಷ್ಟು ವೇಗವಾಗಿ ಹೂಡಿಕೆಯನ್ನು ಆಕರ್ಷಿಸುತ್ತವೆ, ಉತ್ಪಾದನೆಯನ್ನು ಆರಂಭಿಸುತ್ತವೆ ಮತ್ತು ಆರ್ಥಿಕ ಚಟುವಟಿಕೆ ಹಾಗೂ ಉದ್ಯೋಗವನ್ನು ಸೃಷ್ಟಿಸುತ್ತವೆ ಎಂಬುದರ ಆಧಾರದ ಮೇಲೂ ಪ್ರಗತಿಯನ್ನು ಅಳೆಯಲಾಗುತ್ತದೆ.

ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಬಿಹಾರದ ಮುಖ್ಯಮಂತ್ರಿ ಶ್ರೀ ಸಾಮ್ರಾಟ್ ಚೌಧರಿ, ಹರಿಯಾಣದ ಮುಖ್ಯಮಂತ್ರಿ ಶ್ರೀ ನಾಯಬ್ ಸಿಂಗ್ ಸೈನಿ, ಕೇರಳದ ಮುಖ್ಯಮಂತ್ರಿ ಶ್ರೀ ವಿ. ಡಿ. ಸತೀಶನ್, ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ, ಭಾಗವಹಿಸಿದ್ದ ರಾಜ್ಯಗಳ ಸಚಿವರಾದರು, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಹಾಗೂ ಇತರ ಪಾಲುದಾರರು ಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದರು.

ಎನ್‌ ಸಿ ಡಿ ಟಿ ಕುರಿತು

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ (ಎನ್‌ ಐ ಸಿ ಡಿ ಐ ಟಿ) ದೇಶಾದ್ಯಂತ ಕೈಗಾರಿಕಾ ಕಾರಿಡಾರ್‌ ಗಳ ಸಮನ್ವಯಯುತ ಮತ್ತು ಏಕೀಕೃತ ಅಭಿವೃದ್ಧಿಗಾಗಿ ಭಾರತ ಸರ್ಕಾರ ರಚಿಸಿರುವ ಟ್ರಸ್ಟ್ ಆಗಿದೆ. ಇದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ)ಯ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಅನುಮೋದಿತ ಚೌಕಟ್ಟಿನಡಿ ಕೈಗಾರಿಕಾ ನೋಡ್‌ ಗಳಲ್ಲಿ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಗೆ ಇದು ಬೆಂಬಲ ನೀಡುತ್ತದೆ. BHAVYA ಯೋಜನೆಯಡಿ ಯೋಜನಾ ವಿಶೇಷ ಉದ್ದೇಶದ ಘಟಕಗಳಲ್ಲಿ (ಎಸ್‌ ಪಿ ವಿ) ಭಾರತ ಸರ್ಕಾರದ ಪಾಲ್ಗೊಳ್ಳುವಿಕೆ ಮತ್ತು ಈಕ್ವಿಟಿ ಬೆಂಬಲವನ್ನು ಎನ್‌ ಐ ಸಿ ಡಿ ಐ ಟಿ ಮೂಲಕ ಒದಗಿಸಲಾಗುತ್ತದೆ.

ಎನ್‌ ಸಿ ಡಿ ಸಿ ಕುರಿತು

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ ನಿಯಮಿತ (ಎನ್‌ ಐ ಸಿ ಡಿ ಸಿ)ವು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಡಿಪಿಐಯಟಿಯ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಶೇಷ ಉದ್ದೇಶದ ಘಟಕವಾಗಿದೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಕೈಗಾರಿಕಾ ಕಾರಿಡಾರ್ ಯೋಜನೆಗಳ ಯೋಜನಾ ಅಭಿವೃದ್ಧಿ ಚಟುವಟಿಕೆಗಳನ್ನು ಎನ್‌ ಐ ಸಿ ಡಿ ಸಿ ಕೈಗೊಳ್ಳುತ್ತದೆ ಹಾಗೂ ಅವುಗಳ ಅನುಷ್ಠಾನವನ್ನು ಸಮನ್ವಯಗೊಳಿಸುತ್ತದೆ. ಹೂಡಿಕೆ-ಸಿದ್ಧ ಕೈಗಾರಿಕಾ ಪ್ರದೇಶಗಳು ಮತ್ತು ಸ್ಮಾರ್ಟ್ ಕೈಗಾರಿಕಾ ನಗರಗಳನ್ನು ಅಭಿವೃದ್ಧಿಪಡಿಸಲು ಇದು ರಾಜ್ಯ ಸರ್ಕಾರಗಳು ಮತ್ತು ಯೋಜನಾ ವಿಶೇಷ ಉದ್ದೇಶದ ಘಟಕಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. BHAVYA ಯೋಜನೆಯಡಿ ಯೋಜನೆಯ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಎನ್‌ ಐ ಸಿ ಡಿ ಸಿಯನ್ನು ಯೋಜನಾ ನಿರ್ವಹಣಾ ಸಂಸ್ಥೆಯಾಗಿ ನೇಮಿಸಲಾಗಿದೆ.

 

*****


(रिलीज़ आईडी: 2300691) आगंतुक पटल : 9
इस विज्ञप्ति को इन भाषाओं में पढ़ें: English , Marathi , हिन्दी , Gujarati , Tamil