ಕೃಷಿ ಸಚಿವಾಲಯ
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ಗೆ ಚಾಲನೆ ನೀಡಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಎನ್ ಎಸ್ ಪಿ-ಡಿಬಿಟಿ ಮೂಲಕ 6,000 ಕ್ಕೂ ಅಧಿಕ ಕೃಷಿ ವಿದ್ಯಾರ್ಥಿಗಳಿಗೆ 21.35 ಕೋಟಿ ರೂ. ಮೌಲ್ಯದ ವಿದ್ಯಾರ್ಥಿವೇತನ ಬಿಡುಗಡೆ ಮಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಾಯೋಗಿಕ ತರಬೇತಿ, ಸಕಾಲಿಕ ನೆರವು ಮತ್ತು ಕೃಷಿ ನಾವೀನ್ಯತೆಗೆ ಒತ್ತು ನೀಡಿದ ಕೇಂದ್ರ ಸಚಿವರು
“ಪರೀಕ್ಷೆ, ಪ್ರವೇಶ ಮತ್ತು ಪಾವತಿ - ಎಲ್ಲವೂ ಸಮಯಕ್ಕೆ ಸರಿಯಾಗಿ ನಡೆಯಬೇಕು; ಅದು ಯಾವುದೇ ವ್ಯವಸ್ಥೆಯ ನಿಜವಾದ ಪರೀಕ್ಷೆ”: ಶ್ರೀ ಶಿವರಾಜ್ ಸಿಂಗ್ ಚೌಹಾಣ್
“ಕೃಷಿ ಕೇವಲ ತರಗತಿ ಕೊಠಡಿಗಳಿಗೆ ಸೀಮಿತವಲ್ಲ; ನೈಜ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಾಯೋಗಿಕ ತರಬೇತಿ ಅತ್ಯಗತ್ಯ”: ಶ್ರೀ ಶಿವರಾಜ್ ಸಿಂಗ್
“ತೋಟಗಳು, ರೈತರು ಮತ್ತು ವಿಜ್ಞಾನ ಒಟ್ಟಾಗಿ ದೇಶದ ಆಹಾರ ಭದ್ರತೆ ಮತ್ತು ಸ್ವಾವಲಂಬನೆ ಬಲಪಡಿಸುತ್ತವೆ”: ಶ್ರೀ ಶಿವರಾಜ್ ಸಿಂಗ್ ಚೌಹಾಣ್
“ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಡಿ ಕೃಷಿ, ಆಹಾರ ಭದ್ರತೆ, ಪೌಷ್ಟಿಕಾಂಶ ಮತ್ತು ರೈತರ ಆದಾಯ ಭದ್ರತೆ ಆದ್ಯತೆಗಳಾಗಿವೆ”: ಶ್ರೀ ಶಿವರಾಜ್ ಸಿಂಗ್
‘ಹರಿಯಾಲಿ ಅಮವಾಸ್ಯೆಯಂದು’ದೇಶಾದ್ಯಂತ ಐಸಿಎಆರ್ ಸಂಸ್ಥೆಗಳಲ್ಲಿ ಸಸಿ ನೆಡುವ ಅಭಿಯಾನಗಳನ್ನು ಕೈಗೊಳ್ಳಲು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಕೃಷಿ ವಿದ್ಯಾರ್ಥಿಗಳಿಗೆ ಮನವಿ
ಪ್ರಕಟಣಾ ದಿನಾಂಕ:
11 AUG 2026 12:01PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಸೋಮವಾರ ದೇಶಾದ್ಯಂತದ ಕೃಷಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ನಿಧಿಗಳನ್ನು ಪೂಸಾದ ಐಸಿಎಆರ್-ಐಎಆರ್‌ಐನಲ್ಲಿರುವ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (ಎನ್‌ಎಸ್‌ಪಿ) ಮೂಲಕ ಬಿಡುಗಡೆ ಮಾಡಿದರು. ಈ ಉಪಕ್ರಮದಡಿಯಲ್ಲಿ, 6,000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಒಟ್ಟು 21.35 ಕೋಟಿ ರೂ.ಗಳನ್ನು ನೇರವಾಗಿ ಬಿಡುಗಡೆ ಮಾಡಲಾಗಿದೆ. ಈ ಹೊಸ ಉಪಕ್ರಮದ ಪರಿಚಯದೊಂದಿಗೆ, ಕೃಷಿ ವಿದ್ಯಾರ್ಥಿಗಳು ಈಗ ಪ್ರತಿ ತಿಂಗಳು ಅನಗತ್ಯ ತೊಂದರೆಗಳು ಅಥವಾ ವಿಳಂಬಗಳನ್ನು ಎದುರಿಸದೆ ಡಿಬಿಟಿ ಮೂಲಕ ತಮ್ಮ ವಿದ್ಯಾರ್ಥಿವೇತನ ಮೊತ್ತವನ್ನು ಪಡೆಯುವರು. ವಿದ್ಯಾರ್ಥಿವೇತನ ವಿತರಣೆಯ ಪ್ರಕ್ರಿಯೆಯನ್ನು ಹೆಚ್ಚು ಸುವ್ಯವಸ್ಥಿತಗೊಳಿಸುವುದು ಮತ್ತು ವಿದ್ಯಾರ್ಥಿಗಳು ಸಕಾಲಿಕ ಮತ್ತು ತೊಂದರೆ-ಮುಕ್ತ ರೀತಿಯಲ್ಲಿ ಹಣಕಾಸಿನ ನೆರವು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳುವುದು ಈ ಉಪಕ್ರಮದ ಗುರಿಯಾಗಿದೆ.

ಈ ವೇಳೆ ಮಾತನಾಡಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ವಿದ್ಯಾರ್ಥಿವೇತನವು ಕೇವಲ ಆರ್ಥಿಕ ನೆರವು ಮಾತ್ರವಲ್ಲ, ಕೃಷಿ ಶಿಕ್ಷಣವನ್ನು ಬಲಿಷ್ಠ, ಹೆಚ್ಚು ಪ್ರಾಯೋಗಿಕ ಮತ್ತು ಅವಕಾಶಗಳೊಂದಿಗೆ ಉತ್ತಮವಾಗಿ ಸಂಪರ್ಕಿಸುವ ಸಾಧನವಾಗಿದೆ ಎಂದು ಹೇಳಿದರು. ಈಗ ಜಾರಿಯಲ್ಲಿರುವ ಡಿಬಿಟಿ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಸಹಾಯವನ್ನು ಪಡೆಯುತ್ತಾರೆ ಮತ್ತು ಸಾಂಪ್ರದಾಯಿಕ ವಿಳಂಬದ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೃಷಿ ಶಿಕ್ಷಣದಲ್ಲಿ ಪ್ರಾಯೋಗಿಕ ತರಬೇತಿ ಅತ್ಯಂತ ಮುಖ್ಯವಾಗಿದೆ, ಏಕೆಂದರೆ ತರಗತಿ ಆಧಾರಿತ ಕಲಿಕೆ ಮಾತ್ರ ಉತ್ತಮ ರೈತರು, ವಿಜ್ಞಾನಿಗಳು ಅಥವಾ ಕೃಷಿ ಉದ್ಯಮಿಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ. ಪ್ರಾಯೋಗಿಕ ಅನುಭವವನ್ನು ಪಡೆಯಲು ಮತ್ತು ತರಗತಿಯಿಂದಾಚೆಗೆ ಕೃಷಿಯ ವಾಸ್ತವಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶಗಳು ಬೇಕಾಗುತ್ತವೆ ಎಂದು ಅವರು ಒತ್ತಿ ಹೇಳಿದರು. ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಯನ್ನು ನಿರಂತರವಾಗಿ ಬಲಪಡಿಸಲು ಸಾಧ್ಯವಾಗುವಂತೆ ಸುಧಾರಣೆಗಾಗಿ ತಮ್ಮ ಸಲಹೆಗಳು ಮತ್ತು ಚಿಂತನೆಗಳನ್ನು ಹಂಚಿಕೊಳ್ಳಲು ಅವರು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ಕೃಷಿ ಶಿಕ್ಷಣದ ಉದ್ದೇಶವು ಜ್ಞಾನವನ್ನು ನೀಡುವುದು ಮಾತ್ರವಲ್ಲದೆ, ಕೃಷಿ ಕ್ಷೇತ್ರಕ್ಕೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯ, ಆತ್ಮವಿಶ್ವಾಸ ಮತ್ತು ತಿಳಿವಳಿಕೆಯೊಂದಿಗೆ ಯುವಜನರನ್ನು ಸಜ್ಜುಗೊಳಿಸುವುದಾಗಿರಬೇಕು ಎಂದು ಅವರು ಹೇಳಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಆಹಾರ ಭದ್ರತೆ, ಪೋಷಕಾಂಶ ಸುಧಾರಣೆ ಮತ್ತು ರೈತರ ಆದಾಯ ಭದ್ರತೆಗೆ ಆದ್ಯತೆ ನೀಡುತ್ತಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಮಂಡಳಿ) ವಿಜ್ಞಾನಿಗಳ ಕೊಡುಗೆಯನ್ನು ಶ್ಲಾಘಿಸಿದ ಅವರು, ರೈತರ ಕಠಿಣ ಪರಿಶ್ರಮದ ಜೊತೆಗೆ ಅವರ ಸಂಶೋಧನೆಯು ದೇಶದ ಆಹಾರ ಧಾನ್ಯಗಳ ನಿಕ್ಷೇಪವನ್ನು ಬಲಪಡಿಸಿದೆ ಮತ್ತು ಭಾರತದ ಕೃಷಿ ಪ್ರಗತಿಗೆ ಗಮನಾರ್ಹವಾಗಿ ಕೊಡುಗೆ ನೀಡಿದೆ ಎಂದು ಹೇಳಿದರು. ಯುವಜನರು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದರ ಜೊತೆಗೆ ದೊಡ್ಡ ಗುರಿಗಳನ್ನು ನಿಗದಿಪಡಿಸಿಕೊಳ್ಳಲು ಅವರು ಕರೆ ನೀಡಿದರು ಮತ್ತು ದೇಶಕ್ಕಾಗಿ ಅರ್ಥಪೂರ್ಣವಾದದ್ದನ್ನು ಮಾಡಲು ಅವರನ್ನು ಪ್ರೋತ್ಸಾಹಿಸಿದರು. ಕೃಷಿ ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕುವುದಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು, ನಾವೀನ್ಯತೆ, ನವೋದ್ಯಮಗಳು ಮತ್ತು ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕೇಂದ್ರ ಸಚಿವ ಶ್ರೀ ಚೌಹಾಣ್ ಹೇಳಿದರು. ಯುವ ಪೀಳಿಗೆ ಕೃಷಿಯನ್ನು ವ್ಯಾಪಕ ಶ್ರೇಣಿಯ ಅವಕಾಶಗಳನ್ನು ನೀಡುವ ಕ್ಷೇತ್ರವಾಗಿ ನೋಡುವಂತೆ ಮತ್ತು ಉದಯೋನ್ಮುಖ ಸವಾಲುಗಳಿಗೆ ಹೊಸ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಕೊಡುಗೆ ನೀಡಬೇಕೆಂದು ಅವರು ಪ್ರೋತ್ಸಾಹಿಸಿದರು. ಈ ವಲಯದಲ್ಲಿ ವೈಜ್ಞಾನಿಕ ಪ್ರಗತಿ, ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಯುವ ಕೃಷಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳ ಮಹತ್ವವನ್ನು ಅವರು ಒತ್ತಿ ಹೇಳಿದರು.

ಎನ್ ಎಸ್ ಪಿ-ಡಿಬಿಟಿ ವ್ಯವಸ್ಥೆಯು ವಿದ್ಯಾರ್ಥಿವೇತನ ವಿತರಣೆಯನ್ನು ಹೆಚ್ಚು ಪಾರದರ್ಶಕ, ವೇಗ ಮತ್ತು ಸುಗಮವಾಗಿಸುತ್ತದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಈ ವ್ಯವಸ್ಥೆಯು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಣಕಾಸಿನ ನೆರವು ಪಡೆಯುವುದನ್ನು ಖಾತ್ರಿಪಡಿಸುತ್ತದೆ, ವಿದ್ಯಾರ್ಥಿವೇತನ ನಿಧಿಗಳ ಬಿಡುಗಡೆಗೆ ಸಂಬಂಧಿಸಿದ ಅನಿಶ್ಚಿತತೆಯಿಂದ ಹೊರೆಯಾಗದೆ ಅವರು ತಮ್ಮ ಶಿಕ್ಷಣದ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಗಮನಹರಿಸಲು ಅನುವು ಮಾಡಿಕೊಡುತ್ತದೆ. ಶೈಕ್ಷಣಿಕ ಜ್ಞಾನದಿಂದ ಮಾತ್ರವಲ್ಲದೆ ಪ್ರಾಯೋಗಿಕ ಸಾಮರ್ಥ್ಯಗಳು ಮತ್ತು ಕೃಷಿಯ ಬದಲಾಗುತ್ತಿರುವ ಅವಶ್ಯಕತೆಗಳ ತಿಳಿವಳಿಕೆಯೊಂದಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಶಿಕ್ಷಣ ವ್ಯವಸ್ಥೆಯನ್ನು ರಚಿಸುವ ಅಗತ್ಯವನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು.
“ಹರಿಯಾಳಿ ಅಮವಾಸ್ಯೆಯ’ ಸಂದರ್ಭದಲ್ಲಿ ಸಸಿ ನೆಡುವ ಚಟುವಟಿಕೆಗಳನ್ನು ಕೈಗೊಳ್ಳಲು ದೇಶಾದ್ಯಂತದ ಐಸಿಎಆರ್ ಸಂಸ್ಥೆಗಳ ಕೃಷಿ ವಿದ್ಯಾರ್ಥಿಗಳಿಗೆ ಶ್ರೀ ಚೌಹಾಣ್ ಮನವಿ ಮಾಡಿದರು. ಹಸಿರು ಉಪಕ್ರಮಗಳು ಕೃಷಿ ಮತ್ತು ಪರಿಸರ ಎರಡರ ಬಗ್ಗೆಯೂ ಸಾಮೂಹಿಕ ಜವಾಬ್ದಾರಿಯ ಭಾಗವಾಗಿದೆ ಎಂದು ಅವರು ಹೇಳಿದರು ಮತ್ತು ವಿದ್ಯಾರ್ಥಿಗಳು ಸಸಿ ನೆಡುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಪರಿಸರದ ಬಗ್ಗೆ ಜಾಗೃತಿ ಮತ್ತು ಜವಾಬ್ದಾರಿಯನ್ನು ಬಲಪಡಿಸಲು ಕೊಡುಗೆ ನೀಡಲು ಪ್ರೋತ್ಸಾಹಿಸಿದರು

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಶ್ರೀ ಭಾಗೀರಥ ಚೌಧರಿ, ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಂ.ಎಲ್. ಜಾಟ್, ಐಸಿಎಆರ್ ಕಾರ್ಯದರ್ಶಿ ಶ್ರೀ ಜ್ಞಾನೇಂದ್ರ ತ್ರಿಪಾಠಿ, ಉಪ ಮಹಾನಿರ್ದೇಶಕ ಡಾ. ಯಶ್ಪಾಲ್ ಸಿಂಗ್ ಮಲಿಕ್ ಮತ್ತು ಐಎಆರ್ ನ ನಿರ್ದೇಶಕರಾದ ಡಾ. ಸಿ. ಶ್ರೀನಿವಾಸ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐಸಿಎಆರ್ ಮತ್ತು ಐಎಆರ್ ನ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಸಾವಿರಾರು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿಯೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
*****
(ಪ್ರಕಟಣೆ ಐ.ಡಿ.: 2297491)
ವಿಸಿಟರ್ ಕೌಂಟರ್ : 110