ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
300 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ವಿದ್ಯುತ್ ಸಾಮರ್ಥ್ಯದ ಮೈಲುಗಲ್ಲು ಸಾಧಿಸಿದ ಭಾರತ
ಪ್ರಕಟಣಾ ದಿನಾಂಕ:
09 AUG 2026 2:31PM by PIB Bengaluru
ರಾಷ್ಟ್ರದ ಶುದ್ಧ ಇಂಧನ ಪರಿವರ್ತನೆ ಮತ್ತು ಹವಾಮಾನ ಉಪಕ್ರಮ ಗುರಿಗಳ ಪ್ರಮುಖ ಮೈಲಿಗಲ್ಲಾಗಿ, ಭಾರತವು 2026ರ ಜುಲೈ 31ರ ವೇಳೆಗೆ 300 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಆಧಾರಿತ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ದಾಟಿದೆ. ಇದು 2030ರ ವೇಳೆಗೆ ಸಾಧಿಸಲು ಹೊಂದಲಾಗಿದ್ದ 500 ಗಿಗಾವ್ಯಾಟ್ ಸಾಮರ್ಥ್ಯದ ಗುರಿಯಲ್ಲಿ ಶೇ.60ಕ್ಕಿಂತ ಹೆಚ್ಚನ್ನು ಸೂಚಿಸುತ್ತದೆ.
ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ವಿವರ (31.07.2026 ರಂತೆ):
- ಸೌರಶಕ್ತಿ: 164.59 ಗಿಗಾವ್ಯಾಟ್
- ಪವನ ಶಕ್ತಿ: 58.14 ಗಿಗಾವ್ಯಾಟ್
- ಜಲ ವಿದ್ಯುತ್ (ದೊಡ್ಡ ಮತ್ತು ಸಣ್ಣ): 57.24 ಗಿಗಾವ್ಯಾಟ್
- ಜೈವಿಕ ಶಕ್ತಿ: 11.75 ಗಿಗಾವ್ಯಾಟ್
- ಪರಮಾಣು ಶಕ್ತಿ: 8.78 ಗಿಗಾವ್ಯಾಟ್
- ಒಟ್ಟು ಪಳೆಯುಳಿಕೆಯೇತರ ಸಾಮರ್ಥ್ಯ: 300.50 ಗಿಗಾವ್ಯಾಟ್
ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಪಳೆಯುಳಿಕೆಯೇತರ ಇಂಧನ ವಿದ್ಯುತ್ ಸಾಮರ್ಥ್ಯದ ಪಾಲು (ಪ್ರಸ್ತುತ ಸುಮಾರು 552 ಗಿಗಾವ್ಯಾಟ್) 54% ಕ್ಕಿಂತ ಹೆಚ್ಚಾಗಿದೆ.
ಸರ್ಕಾರವು ಒದಗಿಸಿದ ಪ್ರಮುಖ ನೀತಿ ಬೆಂಬಲದೊಂದಿಗೆ ಈ ಪರಿವರ್ತನೆ ಸಾಧ್ಯವಾಗಿದೆ. ಈ ಸ್ಮರಣೀಯ ಸಾಧನೆಯು ʻಆತ್ಮನಿರ್ಭರ ಇಂಧನʼ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಮತ್ತು 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಸಾಮರ್ಥ್ಯದ ಗುರಿಯನ್ನು ಸಾಧಿಸುವತ್ತ ಭಾರತದ ತ್ವರಿತ ಪ್ರಗತಿಯನ್ನು ಎತ್ತಿ ತೋರಿಸುತ್ತದೆ.
ಶುದ್ಧ ಇಂಧನ ಉತ್ಪಾದನೆಯ ಬೆಳವಣಿಗೆಯು ವಿವಿಧ ಕ್ಷೇತ್ರಗಳಾದ್ಯಂತ ಅಗಾಧ ಕೊಡುಗೆಗಳನ್ನು ಆಧರಿಸಿದೆ. ಸೌರ ಶಕ್ತಿಯು 2014ರಲ್ಲಿ ಕೇವಲ 2.8 ಗಿಗಾವ್ಯಾಟ್ ಇದ್ದದ್ದು ಪ್ರಸ್ತುತ ಸುಮಾರು 165 ಗಿಗಾವ್ಯಾಟ್ ಆಗಿದ್ದು, ಪ್ರಮುಖ ಬೆಳವಣಿಗೆಯ ಎಂಜಿನ್ ಆಗಿ ರೂಪುಗೊಂಡಿದೆ. ಇದೇ ವೇಳೆ, ಪವನ ಶಕ್ತಿ ಕ್ಷೇತ್ರವು 2014 ರಲ್ಲಿ 21 ಗಿಗಾವ್ಯಾಟ್ ನಿಂದ 58 ಗಿಗಾವ್ಯಾಟ್ ಗೆ ತಲುಪುವ ಮೂಲಕ ವೇಗವನ್ನು ಕಂಡಿದೆ.
2025-26ರಲ್ಲಿ, 44.6 ಗಿಗಾವ್ಯಾಟ್ ಸೌರ ಶಕ್ತಿ ಮತ್ತು 6 ಗಿಗಾವ್ಯಾಟ್ ಪವನ ಶಕ್ತಿಯ ಪ್ರಮುಖ ಕೊಡುಗೆಗಳ ಮೂಲಕ ದೇಶದಲ್ಲಿ 55.29 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ ಸಾಮರ್ಥ್ಯದ ದಾಖಲೆಯನ್ನು ಸಾಧಿಸಲಾಗಿದೆ.
ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿನ ತ್ವರಿತ ಪ್ರಗತಿಯು ದೇಶದ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಪ್ರತಿಫಲಿಸುತ್ತದೆ, ಇದು 2014-15ರಲ್ಲಿ 190.96 ಶತಕೋಟಿ ಯೂನಿಟ್‌ಗಳಿಂದ 2025-26ರಲ್ಲಿ 477.79 ʻಬಿಯುʼಗೆ ಏರಿದೆ.
ಈ ಕ್ಷಿಪ್ರ ವಿಸ್ತರಣೆಯನ್ನು ಬೆಂಬಲಿಸಲು ಮತ್ತು ಪೂರೈಕೆ ಸರಪಳಿಯ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು, ಭಾರತವು ತನ್ನ ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಪರಿವರ್ತಿಸಿದೆ. ಹೆಚ್ಚಿನ ದಕ್ಷತೆಯ, ಸ್ಥಳೀಯವಾಗಿ ಉತ್ಪಾದಿಸಲಾದ ಮಾಡ್ಯೂಲ್‌ಗಳ ಮೂಲಕ ರಾಷ್ಟ್ರದ ಸೌರ ವಿದ್ಯುತ್ ಸ್ಥಾವರಗಳ ಮೇಲೆ ಗಮನ ಕೇಂದ್ರೀಕರಿಸಿ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ಸೌರ ಪಿವಿ ಮಾಡ್ಯೂಲ್‌ಗಳಿಗಾಗಿ ಅನುಮೋದಿತ ಮಾದರಿಗಳು ಮತ್ತು ತಯಾರಕರ ಪಟ್ಟಿ (ಎಎಲ್ ಎಂಎಂ) ಅಡಿಯಲ್ಲಿ ಪಟ್ಟಿ ಮಾಡಲಾದ ಸಾಮರ್ಥ್ಯವು ಐತಿಹಾಸಿಕ 200 ಗಿಗಾವ್ಯಾಟ್ ಮೈಲಿಗಲ್ಲನ್ನು ದಾಟಿದೆ, ಇದು 2014 ರಲ್ಲಿ ಕೇವಲ 2.3 ಗಿಗಾವ್ಯಾಟ್‌ನಷ್ಟಿತ್ತು.
ಶುದ್ಧ ಇಂಧನ ಪರಿವರ್ತನೆಯು ಈಗ ಕೇವಲ ಹವಾಮಾನ ಬದ್ಧತೆಯಾಗಿ ಉಳಿದಿಲ್ಲ – ಬದಲಿಗೆ, ಇದು ಭಾರತದ ಕೈಗಾರಿಕಾ ಸ್ಪರ್ಧಾತ್ಮಕತೆ, ಇಂಧನ ಸ್ವಾತಂತ್ರ್ಯ ಮತ್ತು ಆರ್ಥಿಕ ಸದೃಢತೆಯನ್ನು ರೂಪಿಸುವಲ್ಲಿ ಕೇಂದ್ರಬಿಂದುವಾಗಿದೆ.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಆಳವಾದ ಕೈಗಾರಿಕಾ ಇಂಗಾಲಾಮ್ಲರಹಿತತೆಗೆ (ಡಿಕಾರ್ಬನೈಸೇಷನ್) ಚಾಲನೆ ನೀಡುತ್ತಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅನುಷ್ಠಾನದ ಮೂಲಕ ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವಾಗುವಂತೆ ಮಾಡಿದೆ.
*****
(ಪ್ರಕಟಣೆ ಐ.ಡಿ.: 2296828)
ವಿಸಿಟರ್ ಕೌಂಟರ್ : 138