ರೈಲ್ವೇ ಸಚಿವಾಲಯ
ಏಕೈಕ ಅಖಿಲ ಭಾರತ ಪರವಾನಗಿಯೊಂದಿಗೆ ಎಲ್ಲಾ ಮಾರ್ಗಗಳಲ್ಲೂ ಕಾರ್ಯಾಚರಣೆಗೆ ಅವಕಾಶ: ಕಂಟೇನರ್ ರೈಲು ನಿರ್ವಾಹಕರಿಗೆ ಶುಭ ಸುದ್ದಿ, ಸುಲಭ ವ್ಯವಹಾರಕ್ಕೆ ಉತ್ತೇಜನ
ಪರವಾನಗಿ ಚೌಕಟ್ಟು ಸರಳೀಕರಿಸಿದ ಭಾರತೀಯ ರೈಲ್ವೆ; ಸಾರಿಗೆ ವೆಚ್ಚ ಮತ್ತು ಮಾಲಿನ್ಯ ತಗ್ಗಿಸಲು, ರಸ್ತೆ ದಟ್ಟಣೆ ಕಡಿಮೆ ಮಾಡಲು ಹಾಗೂ ಉದ್ಯಮಕ್ಕೆ, ವಿಶೇಷವಾಗಿ ಎಂ ಎಸ್ ಎಂ ಇ ಗಳಿಗೆ ಅನುಕೂಲ ನೀಡುವ ಸುಧಾರಣೆಗಳು
₹25 ಕೋಟಿಯ ಏಕರೂಪದ ನೋಂದಣಿ ಶುಲ್ಕ ಮತ್ತು ವಿಸ್ತರಣೆಗೆ ಯಾವುದೇ ನವೀಕರಣ ಶುಲ್ಕವಿಲ್ಲದಿರುವುದು ಇತರ ಸುಧಾರಣೆಗಳಲ್ಲಿ ಸೇರಿವೆ
प्रविष्टि तिथि:
05 AUG 2026 8:32PM by PIB Bengaluru
ಭಾರತೀಯ ರೈಲ್ವೆ ಜಾಲದಲ್ಲಿ ಕಂಟೇನರ್ ರೈಲು ಕಾರ್ಯಾಚರಣೆಗೆ ಅನುಮತಿ ನೀಡುವ ಮಾದರಿ ರಿಯಾಯಿತಿ ಒಪ್ಪಂದದಲ್ಲಿ (ಎಂಸಿಎ) ತಿದ್ದುಪಡಿಗಳನ್ನು ಮಾಡಲು ಭಾರತೀಯ ರೈಲ್ವೆ ಅನುಮೋದನೆ ನೀಡಿದೆ. ಅನುಮೋದಿತ ಬದಲಾವಣೆಗಳ ಪ್ರಕಾರ, ಕಂಟೇನರ್ ರೈಲು ನಿರ್ವಾಹಕರು (ಸಿಟಿಒ) ವಿವಿಧ ಮಾರ್ಗ ವರ್ಗಗಳಿಗೆ ಪ್ರತ್ಯೇಕ ಅನುಮತಿ ಮತ್ತು ಶುಲ್ಕ ಪಾವತಿಸುವ ಹಳೆಯ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಇನ್ನು ಮುಂದೆ ₹25 ಕೋಟಿಯ ಏಕರೂಪದ ನೋಂದಣಿ ಶುಲ್ಕದೊಂದಿಗೆ ಏಕೈಕ 'ಅಖಿಲ ಭಾರತ ಪರವಾನಗಿ'ಯಡಿಯಲ್ಲಿ ಇಡೀ ರೈಲ್ವೆ ಜಾಲದ ಎಲ್ಲಾ ಮಾರ್ಗಗಳಲ್ಲೂ ಕಂಟೇನರ್ ರೈಲುಗಳನ್ನು ಓಡಿಸಲು ಅವಕಾಶ ನೀಡಲಾಗುವುದು. ಈ ಬದಲಾವಣೆಗಳನ್ನು ಶೀಘ್ರದಲ್ಲೇ ಗೆಜೆಟ್ ಅಧಿಸೂಚನೆಯ ಮೂಲಕ ಪ್ರಕಟಿಸಲಾಗುವುದು.
ಎಲ್ಲಾ ಮಾರ್ಗಗಳಿಗೂ ಏಕೈಕ ಪರವಾನಗಿ
ಅನುಮೋದಿತ ಸುಧಾರಣೆಗಳ ಭಾಗವಾಗಿ, ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗವಾರು ಪರವಾನಗಿ ವರ್ಗೀಕರಣವನ್ನು ರದ್ದುಗೊಳಿಸಲಾಗುತ್ತದೆ. ರೈಲ್ವೆ ಸಚಿವಾಲಯದ ಅನುಮೋದನೆಗೆ ಒಳಪಟ್ಟು, ಕಂಟೇನರ್ ರೈಲು ನಿರ್ವಾಹಕರಿಗೆ 'ಏಕೈಕ ಅಖಿಲ ಭಾರತ ಪರವಾನಗಿ' ನೀಡಲಾಗುವುದು. ಇದು ಭಾರತೀಯ ರೈಲ್ವೆ ಜಾಲದ ಎಲ್ಲಾ ಮಾರ್ಗಗಳಲ್ಲೂ ಕಂಟೇನರ್ ರೈಲುಗಳನ್ನು ಕಾರ್ಯಾಚರಣೆ ಮಾಡಲು ಅನುವು ಮಾಡಿಕೊಡುತ್ತದೆ.
ಏಕರೂಪದ ನೋಂದಣಿ ಶುಲ್ಕ
ವಿವಿಧ ಮಾರ್ಗ ವರ್ಗಗಳಿಗೆ ವಿಭಿನ್ನ ನೋಂದಣಿ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಇನ್ನು ಮುಂದೆ ಪ್ರತಿಯೊಬ್ಬ ಅರ್ಜಿದಾರರು ಇಡೀ ಭಾರತೀಯ ರೈಲ್ವೆ ಜಾಲದಲ್ಲಿ ಕಾರ್ಯಾಚರಣೆ ನಡೆಸಲು ₹25 ಕೋಟಿಯ ಮರುಪಾವತಿಯಾಗದ ಏಕರೂಪದ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಅವಧಿ ವಿಸ್ತರಣೆಗೆ ಯಾವುದೇ ಶುಲ್ಕವಿಲ್ಲ
ಅನುಮೋದಿತ ತಿದ್ದುಪಡಿಗಳ ಪ್ರಕಾರ, ಕಂಟೇನರ್ ರೈಲು ನಿರ್ವಾಹಕರಿಗೆ ನೀಡಲಾದ ಅನುಮತಿಯ ಅವಧಿ ಮುಗಿದ ನಂತರ, ಅವರ ತೃಪ್ತಿಕರ ಸಾಧನೆಯನ್ನು ಆಧರಿಸಿ ಸಕ್ಷಮ ಪ್ರಾಧಿಕಾರವು ಮುಂದಿನ 20 ವರ್ಷಗಳ ಅವಧಿಗೆ ಪರವಾನಗಿಯನ್ನು ವಿಸ್ತರಿಸಬಹುದು. ಈ ಮೊದಲ ವಿಸ್ತರಣೆಗೆ ಅಥವಾ ಭವಿಷ್ಯದಲ್ಲಿ ನೀಡಲಾಗುವ ಯಾವುದೇ ವಿಸ್ತರಣೆಗಳಿಗೆ ನಿರ್ವಾಹಕರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಹಾಲಿ ನಿರ್ವಾಹಕರಿಗೆ ವಿನಾಯಿತಿ ಮತ್ತು ಪರಿಹಾರ
ಈಗಾಗಲೇ ಕೆಟಗರಿ I ಪರವಾನಗಿ ಹೊಂದಿರುವ ನಿರ್ವಾಹಕರು ತಮ್ಮ ಗುತ್ತಿಗೆ ಅವಧಿ ಮುಗಿಯುವವರೆಗೆ ಪ್ರಸ್ತುತ ವರ್ಗದಲ್ಲೇ ಮುಂದುವರಿಯಬಹುದು. ಹೊಸ ಪರವಾನಗಿ ವ್ಯವಸ್ಥೆಯಡಿಯಲ್ಲಿ ನವೀಕರಣ ಅಥವಾ ಅವಧಿ ವಿಸ್ತರಣೆ ಮಾಡಿಕೊಳ್ಳುವಾಗ ಅವರಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ.
ಕೆಟಗರಿ II, III ಮತ್ತು IV ರಲ್ಲಿರುವ ನಿರ್ವಾಹಕರು ಸಹ ತಮ್ಮ ಪ್ರಸ್ತುತ ಗುತ್ತಿಗೆ ಅವಧಿ ಮುಗಿಯುವವರೆಗೆ ಮುಂದುವರಿಯಬಹುದು. ಹೊಸ ಪರವಾನಗಿಗೆ ನವೀಕರಣ ಅಥವಾ ವಿಸ್ತರಣೆ ಮಾಡಿಕೊಳ್ಳುವಾಗ ಅವರು ₹15 ಕೋಟಿ ಮಾತ್ರ ಪಾವತಿಸಬೇಕಾಗುತ್ತದೆ (ಹೊಸ ಶುಲ್ಕ ₹25 ಕೋಟಿಯಲ್ಲಿ ಅವರು ಈಗಾಗಲೇ ಪಾವತಿಸಿರುವ ₹10 ಕೋಟಿಯನ್ನು ಕಳೆದು ಉಳಿದ ಮೊತ್ತ). ಈ ಮೊತ್ತ ಮರುಪಾವತಿಯಾಗುವುದಿಲ್ಲ.
ಈ ನಿರ್ವಾಹಕರು ತಮ್ಮ 20 ವರ್ಷಗಳ ಗುತ್ತಿಗೆ ಅವಧಿ ಮುಗಿಯುವ ಮುನ್ನವೇ ಇಷ್ಟಪಟ್ಟರೆ ಹೊಸ ಪರವಾನಗಿ ವ್ಯವಸ್ಥೆಗೆ ಬದಲಾಗಬಹುದು. ಇದಕ್ಕೂ ಸಹ ಅವರು ₹15 ಕೋಟಿ ವ್ಯತ್ಯಾಸದ ಮೊತ್ತವನ್ನಷ್ಟೇ ಪಾವತಿಸಬೇಕಾಗುತ್ತದೆ.
ಉದ್ಯಮಕ್ಕೆ ಸಿಗುವ ಪ್ರಯೋಜನಗಳು
ಏಕರೂಪದ ನೋಂದಣಿ ಶುಲ್ಕ ಮತ್ತು ವಿಸ್ತರಣೆ ಶುಲ್ಕ ರದ್ದತಿಯಿಂದಾಗಿ ಅನುಮೋದನೆ ಪ್ರಕ್ರಿಯೆ ಸರಳವಾಗಲಿದ್ದು, ನಿರ್ವಾಹಕರ ನಿಯಂತ್ರಕ ಹಾಗೂ ನಿಯಮ ಪಾಲನೆಯ ವೆಚ್ಚಗಳು ಕಡಿಮೆಯಾಗಲಿವೆ.
ಈ ಸರಳೀಕೃತ ಪರವಾನಗಿ ವ್ಯವಸ್ಥೆಯು ಖಾಸಗಿ ವಲಯದ ಹೆಚ್ಚಿನ ಭಾಗವಹಿಸುವಿಕೆಗೆ ಮತ್ತು ಕಂಟೇನರ್ ರೈಲು ಕಾರ್ಯಾಚರಣೆಯ ವಿಸ್ತರಣೆಗೆ ಪ್ರೋತ್ಸಾಹ ನೀಡಲಿದೆ. ಇದರಿಂದ ದೇಶಾದ್ಯಂತ ರೈಲು ಆಧಾರಿತ ಸರಕು ಸಾಗಣೆ ಸುಧಾರಿಸಲಿದೆ. ಕಂಟೇನರ್ ಸಾರಿಗೆಗಾಗಿ ರೈಲ್ವೆಯ ಬಳಕೆಯು ಹೆಚ್ಚಾಗುವುದರಿಂದ, ಉದ್ಯಮಗಳಿಗೆ, ಮುಖ್ಯವಾಗಿ ಎಂ ಎಸ್ ಎಂ ಇ ಗಳಿಗೆ ಕಡಿಮೆ ವೆಚ್ಚದ ಹಾಗೂ ಸುಗಮ ಸರಕು ಸಾಗಣೆ ವ್ಯವಸ್ಥೆ ದೊರೆತು ಸಾಗಣೆ ವೆಚ್ಚ ತಗ್ಗಲಿದೆ.
ಸರಕು ಸಾಗಣೆಯು ರಸ್ತೆಯಿಂದ ರೈಲ್ವೆಗೆ ಬದಲಾಗುವುದರಿಂದ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ, ಇಂಧನ ಬಳಕೆ ತಗ್ಗಲಿದೆ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿ ಪರಿಸರಸ್ನೇಹಿ ಸರಕು ಸಾಗಣೆಗೆ ನೆರವಾಗಲಿದೆ.
ಸರಳ ಮತ್ತು ಏಕರೂಪದ ಪರವಾನಗಿ ವ್ಯವಸ್ಥೆಯತ್ತ
ಈ ತಿದ್ದುಪಡಿಗಳು ಭಾರತೀಯ ರೈಲ್ವೆ ಜಾಲದಾದ್ಯಂತ ಕಂಟೇನರ್ ರೈಲು ನಿರ್ವಾಹಕರಿಗೆ ಅತ್ಯಂತ ಸರಳ ಹಾಗೂ ಏಕರೂಪದ ಪರವಾನಗಿ ಚೌಕಟ್ಟನ್ನು ಒದಗಿಸುವ ಗುರಿಯನ್ನು ಹೊಂದಿವೆ. ಈ ಸುಧಾರಣೆಗಳು ಮಾದರಿ ರಿಯಾಯಿತಿ ಒಪ್ಪಂದದಡಿಯಲ್ಲಿ ಕಂಟೇನರ್ ರೈಲು ಕಾರ್ಯಾಚರಣೆಗಳಿಗೆ ಸರಳ ಅನುಮೋದನೆ ವ್ಯವಸ್ಥೆ ಮತ್ತು ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಲು ನೆರವಾಗಲಿವೆ.
*****
(रिलीज़ आईडी: 2295252)
आगंतुक पटल : 5