ಸಂಪುಟ
azadi ka amrit mahotsav

ರೂ. 84,084 ಕೋಟಿ ವೆಚ್ಚದ 'ಸಮುದ್ರ ಮಂಥನ' (ರಾಷ್ಟ್ರೀಯ ಕಡಲ ಅನ್ವೇಷಣಾ ಯೋಜನೆ) ಯೋಜನೆಗೆ ಸಚಿವ ಸಂಪುಟದ ಅನುಮೋದನೆ

प्रविष्टि तिथि: 31 JUL 2026 4:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕೇಂದ್ರ ವಲಯದ ಯೋಜನೆಯಾದ 'ಸಮುದ್ರ ಮಂಥನ' - ರಾಷ್ಟ್ರೀಯ ಕಡಲಿನ ಅನ್ವೇಷಣಾ ಯೋಜನೆಗೆ  2030-31ರ ಹಣಕಾಸು ವರ್ಷದವರೆಗೆ ಅನುಷ್ಠಾನಗೊಳಿಸಲು ರೂ. 84,084 ಕೋಟಿ ಅನುಮೋದಿತ ವೆಚ್ಚದೊಂದಿಗೆ ಅನುಮೋದನೆ ನೀಡಿದೆ.

ಈ ಯೋಜನೆಯು, ಭಾರತದ ವಿಶಾಲವಾದ  ಕಡಲಿನ (ಆಫ್ಶೋರ್) ಇಂಧನ ಸಾಮರ್ಥ್ಯವನ್ನು ಬಳಸಿಕೊಳ್ಳಲು 2025 ರ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಿಂದ ಪ್ರಧಾನಮಂತ್ರಿಯವರು ತಿಳಿಸಿದ್ದ ಆಧುನಿಕ ದಿನದ 'ಸಮುದ್ರ ಮಂಥನ'ದ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತದೆ. ಇದು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ, ದೇಶೀಯ ಅನ್ವೇಷಣೆ ಮತ್ತು ಉತ್ಪಾದನೆಯನ್ನು ವೇಗಗೊಳಿಸುವ, ತಾಂತ್ರಿಕ ನಾಯಕತ್ವವನ್ನು ಉತ್ತೇಜಿಸುವ ಮತ್ತು 'ವಿಕಸಿತ ಭಾರತ'ದ ದೃಷ್ಟಿಕೋನವನ್ನು ಮುನ್ನಡೆಸುವ ನಿಟ್ಟಿನಲ್ಲಿ ಒಂದು ಮೈಲಿಗಲ್ಲಾಗಿದೆ.

ಈ ಯೋಜನೆಯು ಕಡಲಿನ (ಆಫ್ ಶೋರ್) ಅನ್ವೇಷಣಾ ಮೌಲ್ಯ ಸರಪಳಿಯಾದ್ಯಂತ ಸಮಗ್ರ ಮಧ್ಯಸ್ಥಿಕೆಗಳ ಸರಣಿಯನ್ನು ಒಳಗೊಂಡಿದೆ. ಇದು ಉತ್ತಮ ಗುಣಮಟ್ಟದ ಸಿಸ್ಮಿಕ್  ದತ್ತಾಂಶದ ಬೃಹತ್ ಪ್ರಮಾಣದ ಸಂಗ್ರಹಣೆ, ಸಂಸ್ಕರಣೆ ಮತ್ತು ವಿಶ್ಲೇಷಣೆ, ವೇಗವರ್ಧಿತ ಆಳಸಮುದ್ರ ಮತ್ತು ಅತಿ ಆಳಸಮುದ್ರದ ಪರಿಶೋಧನಾತ್ಮಕ ಕೊರೆಯುವಿಕೆ, ಗಡಿ ಜಲಾನಯನ ಪ್ರದೇಶಗಳಲ್ಲಿ  ವೈಜ್ಞಾನಿಕ ಕೊರೆಯುವಿಕೆ, ಸಾಮಾನ್ಯ ಕಡಲ (ಆಫ್ ಶೋರ್) ಉತ್ಪಾದನೆ ಮತ್ತು ಸ್ಥಳಾಂತರಿಸುವ   ಮೂಲಸೌಕರ್ಯಗಳ ಅಭಿವೃದ್ಧಿ, ಹಾಗೂ ಸಮಗ್ರ ತೈಲ ಮತ್ತು ಅನಿಲ ಉತ್ಪಾದನೆ ಮತ್ತು ಸೇವೆಗಳ ವಲಯದ ಸ್ಥಾಪನೆಗೆ ಅವಕಾಶ ಕಲ್ಪಿಸುತ್ತದೆ. ಇದು ಡಿಜಿಟಲ್ ಕಾರ್ಯಕ್ರಮ ನಿರ್ವಹಣೆ, ಸಾಮರ್ಥ್ಯ ವರ್ಧನೆ, ತಂತ್ರಜ್ಞಾನ ಅಳವಡಿಕೆ, ಪಾಲುದಾರರ ತೊಡಗಿಸಿಕೊಳ್ಳುವಿಕೆ ಮತ್ತು ಅಂತರರಾಷ್ಟ್ರೀಯ ಮಟ್ಟದ ತಲುಪುವಿಕೆಗೆ ಮೀಸಲಾದ ನಿಬಂಧನೆಗಳನ್ನು ಒಳಗೊಂಡಿದ್ದು, ದೇಶದಲ್ಲಿ ಕಡಲ ಅನ್ವೇಷಣೆ ಮತ್ತು ಉತ್ಪಾದನೆಯನ್ನು ವೇಗಗೊಳಿಸಲು ಸಮಗ್ರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.

'ಸಮುದ್ರ ಮಂಥನ' ಯೋಜನೆಯು 600 ದಶಲಕ್ಷ ಮೆಟ್ರಿಕ್ ಟನ್ ತೈಲ ಸಮನಾದ (ಎಂಎಂಟಿಒಇ)  ಹೆಚ್ಚಿನ ಮೀಸಲು ಸಂಗ್ರಹಣೆಗೆ ಪ್ರೇರಕವಾಗಲಿದ್ದು, ಕಡಲ  ಅನ್ವೇಷಣಾ ಚಟುವಟಿಕೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ, ಹೆಚ್ಚಿನ ದೇಶೀಯ ತೈಲ ಮತ್ತು ಅನಿಲ ಉತ್ಪಾದನೆಯನ್ನು ಉತ್ತೇಜಿಸಲಿದೆ, ಬೃಹತ್ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲಿದೆ, 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ'ದ ಅಡಿಯಲ್ಲಿ ಸ್ವದೇಶಿ ತಯಾರಿಕೆಯನ್ನು ಬಲಪಡಿಸಲಿದೆ ಹಾಗೂ ಆಫ್ಶೋರ್ ತಂತ್ರಜ್ಞಾನಗಳು ಮತ್ತು ಸೇವೆಗಳಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ಪೋಷಿಸಲಿದೆ. ಈ ಯೋಜನೆಯು ಅನ್ವೇಷಣೆ ಮತ್ತು ಉತ್ಪಾದನೆಯ ಮೌಲ್ಯ ಸರಪಳಿಯಾದ್ಯಂತ ಗಮನಾರ್ಹ ಹೂಡಿಕೆಗಳನ್ನು  ಉತ್ತೇಜಿಸುವ ನಿರೀಕ್ಷೆಯಿದ್ದು, ಉದ್ಯಮ, ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಗೆ ದೀರ್ಘಕಾಲೀನ ಅವಕಾಶಗಳನ್ನು ಸೃಷ್ಟಿಸುತ್ತದೆ.

ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವೆಡೆ  ಸಾಗುತ್ತಿರುವಾಗ, ಸಮುದ್ರ ಮಂಥನವು ದೇಶದ ಆಫ್ ಶೋರ್ ಇಂಧನ ಸಂಪನ್ಮೂಲಗಳನ್ನು ಹೊರತೆರೆಯುವ, ದೀರ್ಘಕಾಲೀನ ಇಂಧನ ಭದ್ರತೆಯನ್ನು ಬಲಪಡಿಸುವ, ತಾಂತ್ರಿಕ ಸಾಮರ್ಥ್ಯಗಳನ್ನು ಆಳವಾಗಿಸುವ ಮತ್ತು ಅರ್ಥವ್ಯವಸ್ಥೆ ಹಾಗೂ ಭವಿಷ್ಯದ ಪೀಳಿಗೆಗೆ  ಶಾಶ್ವತ ಮೌಲ್ಯವನ್ನು ಸೃಷ್ಟಿಸುವ ಪರಿವರ್ತನಕಾರಿ ರಾಷ್ಟ್ರೀಯ ಉಪಕ್ರಮವನ್ನು ಪ್ರತಿನಿಧಿಸುತ್ತದೆ.

ಕಳೆದ ದಶಕದಲ್ಲಿ, ಸರ್ಕಾರವು ಇಡೀ ಆಫ್ ಶೋರ್ ವಿಸ್ತೀರ್ಣವನ್ನು ಅನ್ವೇಷಣೆಗೆ ಮುಕ್ತಗೊಳಿಸುವುದು, ಶಾಸನಬದ್ಧ ಮತ್ತು ಗುತ್ತಿಗೆ ಚೌಕಟ್ಟನ್ನು ಆಧುನಿಕಗೊಳಿಸುವುದು ಮತ್ತು ರಾಷ್ಟ್ರೀಯ ದತ್ತಾಂಶ ಸಂಗ್ರಹವನ್ನು  ಬಲಪಡಿಸುವುದು ಸೇರಿದಂತೆ ಉತ್ಪಾದನೆಯ ಆರಂಭಿಕ ಹಂತಗಳ ( ಅಪ್ ಸ್ಟ್ರೀಮ್)  ವಲಯದಾದ್ಯಂತ ಪರಿವರ್ತನಕಾರಿ ಸುಧಾರಣೆಗಳನ್ನು ಕೈಗೊಂಡಿದೆ. ಈ ಸುಧಾರಣೆಗಳ ಆಧಾರದ ಮೇಲೆ, ಸಮುದ್ರ ಮಂಥನವು ಕಾರ್ಯತಂತ್ರದ ಸಾರ್ವಜನಿಕ ಹೂಡಿಕೆ, ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ವಿಶ್ವದರ್ಜೆಯ ಮೂಲಸೌಕರ್ಯಗಳ ಮೂಲಕ ವೇಗವರ್ಧಿತ ಆಫ್ ಶೋರ್ ಅನ್ವೇಷಣೆಯ ಹೊಸ ಯುಗಕ್ಕೆ ಚಾಲನೆ ನೀಡಲಿದೆ.

 

*****


(रिलीज़ आईडी: 2292509) आगंतुक पटल : 20
इस विज्ञप्ति को इन भाषाओं में पढ़ें: Telugu , Malayalam , Marathi , Assamese , Bengali , Odia , English , Urdu , हिन्दी , Manipuri , Punjabi , Gujarati , Tamil