ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಪರಿಸ್ಥಿತಿ ಪರಿಶೀಲಿಸಲು ಸಿಸಿಎಸ್ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ


ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಕ್ರಮಗಳ ತ್ವರಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಬೆಳವಣಿಗೆಗಳ ನಿಯಮಿತ ಉಸ್ತುವಾರಿಗಾಗಿ ಏಕೀಕೃತ ಮತ್ತು ಸಂಯೋಜಿತ ವ್ಯವಸ್ಥೆಗೆ ಪ್ರಧಾನಮಂತ್ರಿ ಕರೆ

ಹಡಗು ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಸಮಯೋಚಿತ ಮಾಹಿತಿ, ತುರ್ತು ನೆರವು ಮತ್ತು ಸಲಹೆ ಒದಗಿಸಲು ವ್ಯವಸ್ಥೆಯನ್ನು ರೂಪಿಸುವಂತೆ ಪ್ರಧಾನಮಂತ್ರಿ ಸೂಚನೆ

ಮುಂಬರುವ ಹಿಂಗಾರು ಋತುವಿನ ರಸಗೊಬ್ಬರಗಳ ಅಗತ್ಯತೆ ಮೌಲ್ಯಮಾಪನ; ರಸಗೊಬ್ಬರಗಳ ತಡೆರಹಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಮಂತ್ರಿ ನಿರ್ದೇಶನ

ಈ ಸಂಘರ್ಷದ ಪ್ರಭಾವದಿಂದ ನಾಗರಿಕರು ಹಾಗೂ ಭಾರತೀಯ ಅನಿವಾಸಿಗಳನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಪ್ರಧಾನಮಂತ್ರಿ ಪ್ರತಿಪಾದನೆ

ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಪ್ರಧಾನಮಂತ್ರಿ ಒತ್ತು

ಪೆಟ್ರೋಲಿಯಂ ಉತ್ಪನ್ನಗಳ ಪರ್ಯಾಪ್ತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಉಪಕ್ರಮಗಳ ಬಗ್ಗೆ ಪ್ರಧಾನಮಂತ್ರಿಗೆ ವಿವರಣೆ ನೀಡಿದ ಸಂಪುಟ ಕಾರ್ಯದರ್ಶಿ

प्रविष्टि तिथि: 30 JUL 2026 7:05PM by PIB Bengaluru

ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಹಾಗೂ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭದ್ರತೆ ಕುರಿತ ಸಂಪುಟ ಸಮಿತಿಯ (CCS) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವಿಷಯದ ಕುರಿತು ನಡೆದ 4ನೇ ವಿಶೇಷ ಸಿಸಿಎಸ್ ಸಭೆ ಇದಾಗಿದೆ.

ಪ್ರಸ್ತುತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ಬಗ್ಗೆ ಸಂಪುಟ ಕಾರ್ಯದರ್ಶಿಯವರು ಸಿಸಿಎಸ್‌ಗೆ ವಿವರಣೆ ನೀಡಿದರು. ಎಲ್‌ಎನ್‌ಜಿ/ಎಲ್‌ಪಿಜಿ ಮತ್ತು ರಸಗೊಬ್ಬರಗಳು ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಪರ್ಯಾಪ್ತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಉಪಕ್ರಮಗಳ ಬಗ್ಗೆ ಅವರು ಮಾತನಾಡಿದರು. ಎಲ್‌ಪಿಜಿ ಸಂಗ್ರಹಣೆಯ ಮೂಲಗಳನ್ನು ಈಗಾಗಲೇ ವೈವಿಧ್ಯಗೊಳಿಸಲಾಗಿದೆ ಮತ್ತು ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಒಟ್ಟಾರೆ ದಾಸ್ತಾನು ಹಾಗೂ ಪೂರೈಕೆ ಪರಿಸ್ಥಿತಿ ಪರ್ಯಾಪ್ತವಾಗಿದೆ ಎಂದು ಅವರು ಹೇಳಿದರು. ಕಚ್ಚಾ ತೈಲದ ಲಭ್ಯತೆಯು ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (CPSE) ಸಂಸ್ಕರಣಾಗಾರಗಳು 100% ಗಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯಾಚರಣೆ ನಡೆಸಲು ಅನುವು ಮಾಡಿಕೊಟ್ಟಿದೆ, ಇದು ಪೆಟ್ರೋಲ್, ಡೀಸೆಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳ ನಿರಂತರ ಉತ್ಪಾದನೆಯನ್ನು ಖಚಿತಪಡಿಸಿದೆ. ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕಗಳನ್ನು ವಿಸ್ತರಿಸಲು ಉಪಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರ ಪರಿಣಾಮವಾಗಿ ಪಿಎನ್‌ಜಿ ಸಂಪರ್ಕಗಳಲ್ಲಿ ಗಣನೀಯ ಏರಿಕೆಯಾಗಿದೆ. ರಾಷ್ಟ್ರೀಯ ಗ್ಯಾಸ್ ಗ್ರಿಡ್‌ನ ವಿಸ್ತರಣೆ, ಎಲ್‌ಎನ್‌ಜಿ ಆಮದು ಮತ್ತು ಮರು-ಅನಿಲೀಕರಣ ಮೂಲಸೌಕರ್ಯಗಳ ಹೆಚ್ಚಳ, ಸಿಟಿ ಗ್ಯಾಸ್ ವಿತರಣಾ ಜಾಲಗಳ ವಿಸ್ತರಣೆ ಮತ್ತು ಪೈಪ್‌ಲೈನ್ ಮೂಲಸೌಕರ್ಯ ಆದೇಶ, 2026 ರ ಅಡಿಯಲ್ಲಿ ಕಾಲಮಿತಿಯ ಪೈಪ್‌ಲೈನ್ ಮತ್ತು ಅಂತಿಮ ಹಂತದ ಸಂಪರ್ಕ ಅನುಮೋದನೆಗಳ ಮೂಲಕ ಎಲ್‌ಪಿಜಿಯ ಕೈಗಾರಿಕಾ ಪರ್ಯಾಯ ಬಳಕೆಯನ್ನು ಸರ್ಕಾರವು ಸುಗಮಗೊಳಿಸುತ್ತಿದೆ.

ಸಭೆಯಲ್ಲಿ ಸಂದರ್ಭದಲ್ಲಿ, ಮುಂಬರುವ ಹಿಂಗಾರು ಋತುವಿನ ರಸಗೊಬ್ಬರಗಳ ಅಗತ್ಯತೆಗಳನ್ನು ಮೌಲ್ಯಮಾಪನ ಮಾಡಲಾಯಿತು ಮತ್ತು ರಸಗೊಬ್ಬರಗಳ ಪರ್ಯಾಯ ಮೂಲಗಳ ಬಗ್ಗೆಯೂ ಚರ್ಚಿಸಲಾಯಿತು. ರಸಗೊಬ್ಬರಗಳ ತಡೆರಹಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಸಂಘರ್ಷ ಪೀಡಿತ ಪ್ರದೇಶಗಳಲ್ಲಿನ ದೇಶೀಯ ಹಾಗೂ ವಿದೇಶಿ ಧ್ವಜ ಹೊಂದಿರುವ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಡಗು ಸಿಬ್ಬಂದಿಯ ಪರಿಸ್ಥಿತಿಯ ಕುರಿತಾಗಿಯೂ ಚರ್ಚಿಸಲಾಯಿತು. ಹಡಗು ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಸಮಯೋಚಿತ ಮಾಹಿತಿ, ತುರ್ತು ನೆರವು ಮತ್ತು ಸಲಹೆಗಳನ್ನು ಒದಗಿಸಲು ಒಂದು ವ್ಯವಸ್ಥೆಯನ್ನು ರೂಪಿಸುವಂತೆ ಪ್ರಧಾನಮಂತ್ರಿ ನಿರ್ದೇಶನ ನೀಡಿದರು.

ಈ ಸಂಘರ್ಷದ ಪ್ರಭಾವದಿಂದ ದೇಶದ ನಾಗರಿಕರು ಹಾಗೂ ಭಾರತೀಯ ಅನಿವಾಸಿಗಳನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಇಂಧನ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳಲು, ಸೌರ ಇಂಧನ ಮತ್ತು ಇತರ ಪಳೆಯುಳಿಕೆಯೇತರ ಇಂಧನ ಆಧಾರಿತ ಮೂಲಗಳು ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಒತ್ತು ನೀಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಈ ಬಿಕ್ಕಟ್ಟಿನಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಸಮಗ್ರ ಸರ್ಕಾರಿ ವಿಧಾನವನ್ನು (whole of government approach) ಅನುಸರಿಸುವುದನ್ನು ಮುಂದುವರಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತ ಕ್ರಮಗಳ ತ್ವರಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಬೆಳವಣಿಗೆಗಳ ನಿಯಮಿತ ಉಸ್ತುವಾರಿಗಾಗಿ ಏಕೀಕೃತ ಹಾಗೂ ಸಂಯೋಜಿತ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದರು.

 
*****


(रिलीज़ आईडी: 2292091) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , हिन्दी , Marathi , Gujarati , Odia , Malayalam