ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ʻನಮಸ್ತೆ ಯೋಜನೆʼಯು ಪ್ರತಿಯೊಬ್ಬ ನೈರ್ಮಲ್ಯ ಕಾರ್ಮಿಕರು ಘನತೆ, ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವ ಸರ್ಕಾರದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ; ಈ ಯೋಜನೆಯು 'ಸಬ್‌ ಕಾ ಸಾಥ್ - ಸಬ್‌ ಕಾ ವಿಕಾಸ್ -ಸಬ್‌ ಕಾ ವಿಶ್ವಾಸ್ -ಸಬ್‌ ಕಾ ಪ್ರಯಾಸ್' ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್


ಈ ಯೋಜನೆಯಡಿಯಲ್ಲಿ 89,000 ಕ್ಕೂ ಹೆಚ್ಚು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕೆಲಸಗಾರರು, 2,81,000 ಕ್ಕೂ ಹೆಚ್ಚು ತ್ಯಾಜ್ಯ ಆಯುವವರನ್ನು ಮೌಲ್ಯೀಕರಿಸಲಾಗಿದೆ; ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕೆಲಸಗಾರರಲ್ಲಿ 87,000 ಕ್ಕೂ ಹೆಚ್ಚು ಪಿಪಿಇ ಕಿಟ್‌ಗಳನ್ನು ಮತ್ತು ತ್ಯಾಜ್ಯ ಆಯುವವರಿಗೆ 1,84,118 ಪಿಪಿಇ ಕಿಟ್‌ಗಳನ್ನು ವಿತರಿಸಲಾಗಿದೆ; ದೇಶಾದ್ಯಂತ 76,000 ಕ್ಕೂ ಹೆಚ್ಚು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕೆಲಸಗಾರರು ಮತ್ತು 1,04,000 ಕ್ಕೂ ಹೆಚ್ಚು ತ್ಯಾಜ್ಯ ಆಯುವವರಿಗೆ ಆರೋಗ್ಯ ಕಾರ್ಡ್‌ಗಳನ್ನು ನೀಡಲಾಗಿದೆ

प्रविष्टि तिथि: 19 JUL 2026 7:53PM by PIB Bengaluru

ನೈರ್ಮಲ್ಯ ಕಾರ್ಮಿಕರ ಸುರಕ್ಷತೆ, ಘನತೆ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ದೇಶಾದ್ಯಂತ ನೈರ್ಮಲ್ಯ ಸಂರಕ್ಷಣೆಯನ್ನು ಯಾಂತ್ರೀಕೃತಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ʻಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ನಮಸ್ತೆ) ಅನ್ನು ಜಾರಿಗೆ ತರುತ್ತಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಜಂಟಿಯಾಗಿ ಜಾರಿಗೆ ತಂದಿರುವ ಈ ಯೋಜನೆಯು ಯಾಂತ್ರೀಕೃತ ಶುಚಿಗೊಳಿಸುವ ಅಭ್ಯಾಸಗಳು, ಕೌಶಲ್ಯ ಅಭಿವೃದ್ಧಿ ಮತ್ತು ನೈರ್ಮಲ್ಯ ಕಾರ್ಮಿಕರಿಗೆ ಸಮಗ್ರ ಕಲ್ಯಾಣ ಕ್ರಮಗಳನ್ನು ಉತ್ತೇಜಿಸುತ್ತದೆ. ಆ ಮೂಲಕ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಅಪಾಯಕಾರಿ ರೀತಿಯಲ್ಲಿ ಕೈಯಿಂದ ಸ್ವಚ್ಛಗೊಳಿಸುವುದನ್ನು ತೊಡೆದುಹಾಕುವ ಗುರಿಯನ್ನು ಇದು ಹೊಂದಿದೆ.

ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ.ವೀರೇಂದ್ರ ಕುಮಾರ್ ಅವರು, ಪ್ರತಿಯೊಬ್ಬ ನೈರ್ಮಲ್ಯ ಕಾರ್ಮಿಕರು ಘನತೆ, ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವ ಸರ್ಕಾರದ ಅಚಲ ಬದ್ಧತೆಯನ್ನು ʻನಮಸ್ತೆʼ ಯೋಜನೆಯು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಯಾಂತ್ರೀಕರಣ, ಕೌಶಲ್ಯ ಅಭಿವೃದ್ಧಿ, ಆರೋಗ್ಯ ರಕ್ಷಣೆ ಮತ್ತು ಜೀವನೋಪಾಯದ ಬೆಂಬಲದ ಮೂಲಕ, ನಾವು ನೈರ್ಮಲ್ಯ ಕಾರ್ಯವನ್ನು ಸುರಕ್ಷಿತ ಮತ್ತು ಹೆಚ್ಚು ಗೌರವಯುತ ವೃತ್ತಿಯಾಗಿ ಪರಿವರ್ತಿಸುತ್ತಿದ್ದೇವೆ. ನೈರ್ಮಲ್ಯ ಕೆಲಸದಲ್ಲಿ ಶೂನ್ಯ ಸಾವಿನ ದೃಷ್ಟಿಕೋನದತ್ತ ಸಾಗುತ್ತಿದ್ದೇವೆ ಎಂದು ಅವರು ಹೇಳಿದರು.

ನೈರ್ಮಲ್ಯ ಕಾರ್ಮಿಕರು ಮತ್ತು ಅವರ ಕುಟುಂಬಗಳ ಜೀವನವನ್ನು ಸುಧಾರಿಸಲು ತಂತ್ರಜ್ಞಾನ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ರಕ್ಷಣೆ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಸಂಯೋಜಿಸುವ ಸಮಗ್ರ ಕಾರ್ಯವಿಧಾನವನ್ನು ಸರ್ಕಾರ ಅಳವಡಿಸಿಕೊಂಡಿದೆ ಎಂದು ಸಚಿವರು ಹೇಳಿದರು.  ಸಾರ್ವಜನಿಕ  ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಕೊಡುಗೆ ನೀಡುವವರು ಅರ್ಹ ಗೌರವ, ರಕ್ಷಣೆ ಮತ್ತು ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಈ ಯೋಜನೆಯು 'ಸಬ್ ಕಾ ಸಾಥ್- ಸಬ್ ಕಾ ವಿಕಾಸ್- ಸಬ್ ಕಾ ವಿಶ್ವಾಸ್- ಸಬ್ ಕಾ ಪ್ರಯಾಸ್' ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ʻನಮಸ್ತೆʼ ಯೋಜನೆಯಡಿ, ನೈರ್ಮಲ್ಯ ಕಾರ್ಮಿಕರನ್ನು ಗುರುತಿಸಲಾಗುತ್ತಿದೆ, ಅವರ ಪ್ರೊಫೈಲ್ ಸೃಷ್ಟಿಸಲಾಗುತ್ತಿದೆ ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಆರೋಗ್ಯ ವಿಮೆ, ಆಯುಷ್ಮಾನ್ ಭಾರತ್ ವ್ಯಾಪ್ತಿ, ಔದ್ಯೋಗಿಕ ಸುರಕ್ಷತಾ ತರಬೇತಿ, ಕೌಶಲ್ಯ ಅಭಿವೃದ್ಧಿ, ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ನೆರವು ಹಾಗೂ ಆಧುನಿಕ ಯಾಂತ್ರೀಕೃತ ನೈರ್ಮಲ್ಯ ಸಾಧನಗಳ ಒದಗಣೆ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಕಲ್ಪಿಸಲಾಗುತ್ತಿದೆ. ಸುರಕ್ಷಿತ ನೈರ್ಮಲ್ಯ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ತುರ್ತು ಪ್ರತಿಕ್ರಿಯೆ ನೈರ್ಮಲ್ಯ ಘಟಕಗಳನ್ನು (ಇಆರ್‌ಎಸ್‌ಯು) ಸುಧಾರಿತ ಸುರಕ್ಷತಾ ಸಾಧನಗಳೊಂದಿಗೆ ಬಲಪಡಿಸಲಾಗುತ್ತಿದೆ.

ಈ ಯೋಜನೆಯು ನೈರ್ಮಲ್ಯ ಕಾರ್ಯದಲ್ಲಿ ಶೂನ್ಯ ಸಾವುನೋವುಗಳನ್ನು ಸಾಧಿಸಲು, ಅಪಾಯಕಾರಿ ತ್ಯಾಜ್ಯದೊಂದಿಗೆ ನೇರ ಮಾನವ ಸಂಪರ್ಕವನ್ನು ತೊಡೆದುಹಾಕಲು, ಯಾಂತ್ರೀಕೃತ ಉಪಕರಣಗಳ ಮೂಲಕ ನೈರ್ಮಲ್ಯ ಕಾರ್ಯಾಚರಣೆಗಳನ್ನು ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ನುರಿತ ನೈರ್ಮಲ್ಯ ಕಾರ್ಯಪಡೆಯನ್ನು ರಚಿಸಲು ಮತ್ತು ಸ್ವಸಹಾಯ ಗುಂಪುಗಳು ಹಾಗೂ ಇತರ ಜೀವನೋಪಾಯದ ಅವಕಾಶಗಳ ಮೂಲಕ ನೈರ್ಮಲ್ಯ ಕಾರ್ಮಿಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.

ಯೋಜನೆಯ ಇತ್ತೀಚಿನ ಸಾಧನೆಗಳ ಭಾಗವಾಗಿ, 89,915 ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರು ಮತ್ತು 2,81,117 ತ್ಯಾಜ್ಯ ಆಯುವವರನ್ನು ಯೋಜನೆಯಡಿ ಗುರುತಿಸಲಾಗಿದೆ. ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರಿಗೆ ಒಟ್ಟು 87,037 ಪಿಪಿಇ ಕಿಟ್‌ಗಳನ್ನು  ಮತ್ತು ತ್ಯಾಜ್ಯ  ಆಯುವವರಿಗೆ 1,84,118 ಪಿಪಿಇ ಕಿಟ್‌ಗಳನ್ನು ವಿತರಿಸಲಾಗಿದೆ. 76,845 ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರು ಮತ್ತು 1,04,729 ತ್ಯಾಜ್ಯ ಆಯುವವರಿಗೆ ʻಆರೋಗ್ಯ ಕಾರ್ಡ್‌ʼಗಳನ್ನು ನೀಡಲಾಗಿದೆ. ದೇಶಾದ್ಯಂತ  ತುರ್ತು ನೈರ್ಮಲ್ಯ ಸೇವೆಗಳನ್ನು ಬಲಪಡಿಸಲು 753 ತುರ್ತು ಪ್ರತಿಕ್ರಿಯೆ ನೈರ್ಮಲ್ಯ ಘಟಕಗಳಿಗೆ (ಇಆರ್‌ಎಸ್‌ಯು) ಆಧುನಿಕ ಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದೆ.

ಯಾಂತ್ರೀಕೃತ ನೈರ್ಮಲ್ಯ ಸೇವೆಗಳನ್ನು ವಿಸ್ತರಿಸಲು, ಔದ್ಯೋಗಿಕ ಸುರಕ್ಷತಾ ಮಾನದಂಡಗಳನ್ನು ಬಲಪಡಿಸಲು ಮತ್ತು ನೈರ್ಮಲ್ಯ ಕಾರ್ಮಿಕರ ಸಾಮಾಜಿಕ-ಆರ್ಥಿಕ ಯೋಗಕ್ಷೇಮವನ್ನು ಸುಧಾರಿಸಲು ಸರ್ಕಾರವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಅನುಷ್ಠಾನ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಿದೆ.

ನಿರಂತರ ಸಹಯೋಗ ಮತ್ತು ಸಮುದಾಯದ ಭಾಗವಹಿಸುವಿಕೆಯ ಮೂಲಕ, ʻನಮಸ್ತೆʼ ಯೋಜನೆಯು ಸ್ವಚ್ಛ, ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಂಡ ಭಾರತವನ್ನು ನಿರ್ಮಿಸಲು ಕೊಡುಗೆ ನೀಡುತ್ತಿದೆ. ಜೊತೆಗೆ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವವರಿಗೆ ಘನತೆ ಮತ್ತು ಗೌರವವನ್ನು ಖಾತ್ರಿಪಡಿಸುತ್ತಿದೆ.

 

*****

 


(रिलीज़ आईडी: 2286499) आगंतुक पटल : 19
इस विज्ञप्ति को इन भाषाओं में पढ़ें: English , Gujarati , Urdu , Marathi , हिन्दी