ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಹೆಚ್ಚಿನ ಆಲ್ಕೋಹಾಲ್ ಅಂಶ ಹೊಂದಿರುವ ಔಷಧಗಳ ನಿಯಂತ್ರಣವನ್ನು ಬಲಪಡಿಸಲು ಸರ್ಕಾರದಿಂದ ‘ಔಷಧ ನಿಯಮಗಳು, 1945’ಕ್ಕೆ ತಿದ್ದುಪಡಿ
ಹೆಚ್ಚಿನ ಆಲ್ಕೋಹಾಲ್ ಅಂಶ ಹೊಂದಿರುವ ಔಷಧಗಳಿಗೆ ಪರವಾನಗಿ ಕಡ್ಡಾಯ ಮತ್ತು ವೈದ್ಯರ ಚೀಟಿ ಇದ್ದರೆ ಮಾತ್ರ ವಿತರಣೆ
30 ಮಿ.ಲೀ ಗಿಂತ ಹೆಚ್ಚಿನ ಪ್ರಮಾಣದಲ್ಲಿ 12% v/v ಗಿಂತ ಹೆಚ್ಚು ಎಥೈಲ್ ಆಲ್ಕೋಹಾಲ್ ಹೊಂದಿರುವ ಔಷಧಿಗಳಿಗೆ ಇನ್ನು ಮುಂದೆ ‘ಶೆಡ್ಯೂಲ್ ಕೆ’ ವಿನಾಯಿತಿ ಅನ್ವಯಿಸುವುದಿಲ್ಲ; ‘ಶೆಡ್ಯೂಲ್ ಎಚ್1’ ಅಡಿಯಲ್ಲಿ ಸೇರ್ಪಡೆ ಮಾಡಲಾಗಿದೆ
प्रविष्टि तिथि:
10 JUL 2026 11:49AM by PIB Bengaluru
ಹೆಚ್ಚಿನ ಆಲ್ಕೋಹಾಲ್ ಅಂಶವಿರುವ ಔಷಧೀಯ ಉತ್ಪನ್ನಗಳ ದುರುಪಯೋಗವನ್ನು ತಡೆಯಲು ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಥೈಲ್ ಆಲ್ಕೋಹಾಲ್ ಹೊಂದಿರುವ ಔಷಧಿಗಳಿಗೆ ಇದ್ದ ಪರವಾನಗಿ ಅಗತ್ಯತೆಗಳ ವಿನಾಯಿತಿಯನ್ನು (ಶೆಡ್ಯೂಲ್ ಕೆ ಅಡಿಯಲ್ಲಿ) ತೆಗೆದುಹಾಕಿದೆ.
ಏಲಕ್ಕಿ, ಶುಂಠಿ ಟಿಂಕ್ಚರ್ ಗಳು ಮತ್ತು ಇತರ ಸುಗಂಧಿತ ಸಿದ್ಧತೆಗಳು ಸೇರಿದಂತೆ ಕೆಲವು ಔಷಧೀಯ ಉತ್ಪನ್ನಗಳಿಗೆ ‘ಔಷಧ ನಿಯಮಗಳು, 1945’ರ ‘ಶೆಡ್ಯೂಲ್ ಕೆ’ ಅಡಿಯಲ್ಲಿ ಪರವಾನಗಿ ಅಗತ್ಯತೆಗಳಿಂದ ವಿನಾಯಿತಿ ನೀಡಲಾಗಿತ್ತು. ಈ ಕೆಲವು ಸೂತ್ರೀಕರಣಗಳು ಹೆಚ್ಚಿನ ಪ್ರಮಾಣದ ಎಥೈಲ್ ಆಲ್ಕೋಹಾಲ್ ಸಾಂದ್ರತೆಯನ್ನು ಹೊಂದಿರುತ್ತವೆ (ಕೆಲವು ಸಂದರ್ಭಗಳಲ್ಲಿ 80-90% v/v ವರೆಗೆ), ಇದು ಅವುಗಳನ್ನು ಅಮಲಿಗಾಗಿ ದುರುಪಯೋಗಪಡಿಸಿಕೊಳ್ಳಲು ಪೂರಕವಾಗಿಸುತ್ತದೆ. ಈ ಸಂಬಂಧ ಕೆಲವು ರಾಜ್ಯ ಸರ್ಕಾರಗಳಿಂದಲೂ ಉಲ್ಲೇಖಗಳನ್ನು ಸ್ವೀಕರಿಸಲಾಗಿತ್ತು.
ಈ ಕಳಕಳಿಯನ್ನು ಪರಿಹರಿಸಲು, 30 ಮಿ.ಲೀ ಗಿಂತ ಹೆಚ್ಚಿನ ಪ್ರಮಾಣದಲ್ಲಿ 12% v/v ಗಿಂತ ಹೆಚ್ಚು ಎಥೈಲ್ ಆಲ್ಕೋಹಾಲ್ ಹೊಂದಿರುವ ಎಲ್ಲಾ ಔಷಧಿಗಳಿಗೆ (ಸೂತ್ರೀಕರಣ)ಗಳಿಗೆ ಇನ್ನು ಮುಂದೆ ‘ಶೆಡ್ಯೂಲ್ ಕೆ’ ಅಡಿಯಲ್ಲಿ ಒದಗಿಸಲಾದ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಸರ್ಕಾರ ಕಡ್ಡಾಯಗೊಳಿಸಿದೆ. ಪರಿಣಾಮವಾಗಿ, ಅಂತಹ ಉತ್ಪನ್ನಗಳು ‘ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940’ ರ ಅಡಿಯಲ್ಲಿ ಅಗತ್ಯವಿರುವ ಪರವಾನಗಿಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.
ಈ ತಿದ್ದುಪಡಿಯು ಸದರಿ ಉತ್ಪನ್ನಗಳನ್ನು ‘ಔಷಧ ನಿಯಮಗಳು, 1945’ ರ ‘ಶೆಡ್ಯೂಲ್ ಎಚ್1’ ಗೆ ಬದಲಾಯಿಸುತ್ತದೆ, ಇದು ನೋಂದಾಯಿತ ವೈದ್ಯಕೀಯ ವೃತ್ತಿಪರರ ಚೀಟಿಯ ಆಧಾರದ ಮೇಲೆ ಮಾರಾಟ ಮಾಡುವುದನ್ನು ಮತ್ತು ಕಟ್ಟುನಿಟ್ಟಾದ ದಾಖಲೆ ನಿರ್ವಹಣೆಯನ್ನು ಕಡ್ಡಾಯಗೊಳಿಸುತ್ತದೆ.
ಈ ತಿದ್ದುಪಡಿಯು ಆಲ್ಕೋಹಾಲ್ ಹೊಂದಿರುವ ಔಷಧೀಯ ಉತ್ಪನ್ನಗಳ ಮೇಲಿನ ನಿಯಂತ್ರಕ ಮೇಲ್ವಿಚಾರಣೆಯನ್ನು ಬಲಪಡಿಸುವ ನಿರೀಕ್ಷೆಯಿದೆ, ಹಾಗೂ ನಿಯಂತ್ರಿತ ಔಷಧೀಯ ಪೂರೈಕೆ ಸರಪಳಿಯ ಮೂಲಕ ಮಾತ್ರ ಅವುಗಳ ಪೂರೈಕೆಯನ್ನು ಖಚಿತಪಡಿಸುತ್ತದೆ. ಇದು ಕಾನೂನುಬದ್ಧ ಸದ್ಬಳಕೆಯ ಚಿಕಿತ್ಸಕ ಉದ್ದೇಶಗಳಿಗಾಗಿ ಅವುಗಳ ನಿರಂತರ ಲಭ್ಯತೆಯನ್ನು ಖಾತ್ರಿಪಡಿಸುವ ಜೊತೆಗೆ, ದುರುಪಯೋಗ ಮತ್ತು ದಿಕ್ಕು ತಪ್ಪಿಸುವ ಸಾಧ್ಯತೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಈ ಉಪಕ್ರಮವು ಔಷಧಗಳ ನಿಯಂತ್ರಣ ಚೌಕಟ್ಟನ್ನು ಬಲಪಡಿಸಲು, ಔಷಧೀಯ ಉತ್ಪನ್ನಗಳ ತರ್ಕಬದ್ಧ ಮತ್ತು ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸಲು ಹಾಗೂ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಸರ್ಕಾರದ ನಿರಂತರ ಪ್ರಯತ್ನಗಳಿಗೆ ಅನುಗುಣವಾಗಿದೆ.
ವಿವರವಾದ ತಿದ್ದುಪಡಿಗಳನ್ನು ಒಳಗೊಂಡಿರುವ ಗೆಜೆಟ್ ಅಧಿಸೂಚನೆಯು ಸಚಿವಾಲಯ ಮತ್ತು ಇಲಾಖೆಯ ಜಾಲತಾಣದಲ್ಲಿ ಲಭ್ಯವಿದ್ದು, ತಕ್ಷಣದ ಉಲ್ಲೇಖಕ್ಕಾಗಿ ಇಲ್ಲಿ ನೋಡಬಹುದು: https://egazette.gov.in/WriteReadData/2026/274311.pdf
*****
(रिलीज़ आईडी: 2283311)
आगंतुक पटल : 12