ಪ್ರಧಾನ ಮಂತ್ರಿಯವರ ಕಛೇರಿ
ಇಂಡೋನೇಷ್ಯಾ ಸಂಸತ್ತನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
प्रविष्टि तिथि:
07 JUL 2026 5:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಕಾರ್ತದಲ್ಲಿ ಇಂಡೋನೇಷ್ಯಾ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡಿದರು. ಇಂಡೋನೇಷ್ಯಾ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದ ಭಾರತದ ಮೊದಲ ಪ್ರಧಾನಮಂತ್ರಿ ಅವರಾಗಿದ್ದಾರೆ.
ಇಂಡೋನೇಷ್ಯಾದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಪ್ರಬೋವೊ ಸುಬಿಯಾಂತೊ ಅವರ ಘನ ಉಪಸ್ಥಿತಿಗೆ ಮತ್ತು ಸಂಸತ್ತಿನ ಸಭಾಪತಿಗಳಾದ ಘನತೆವೆತ್ತ ಶ್ರೀಮತಿ ಪುವಾನ್ ಮಹಾರಾಣಿ ಅವರ ಆತ್ಮೀಯ ಆಹ್ವಾನ ಹಾಗೂ ಭಾರತ-ಇಂಡೋನೇಷ್ಯಾ ಸಹಭಾಗಿತ್ವಕ್ಕೆ ಅವರು ನೀಡಿದ ಮಹತ್ವದ ಕೊಡುಗೆಗಾಗಿ ಧನ್ಯವಾದಗಳನ್ನು ಅರ್ಪಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಭಾರತದ 140 ಕೋಟಿ ಜನರ ಪರವಾಗಿ ಸಂಸದರಿಗೆ ಶುಭಾಶಯಗಳನ್ನು ಕೋರಿದ ಅವರು, ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತವು ಇಂಡೋನೇಷ್ಯಾದೊಂದಿಗೆ ಪ್ರಜಾಸತ್ತಾತ್ಮಕ ಬಾಂಧವ್ಯವನ್ನು ಬಲಪಡಿಸಲು ಉತ್ಸುಕವಾಗಿದೆ ಎಂದು ತಿಳಿಸಿದರು. ಉಭಯ ದೇಶಗಳ ನಡುವಿನ ಆಳವಾದ ನಾಗರಿಕ ಮತ್ತು ಕಡಲ ಸಂಬಂಧಗಳನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಎರಡು ಸಹಸ್ರಮಾನಗಳಿಗೂ ಹೆಚ್ಚು ಕಾಲದಿಂದ ಹಿಂದೂ ಮಹಾಸಾಗರವು ಆಲೋಚನೆಗಳು, ವಾಣಿಜ್ಯ, ಸಂಸ್ಕೃತಿ ಮತ್ತು ನಂಬಿಕೆಗಳ ವಿನಿಮಯದ ಮೂಲಕ ಭಾರತ ಮತ್ತು ಇಂಡೋನೇಷ್ಯಾವನ್ನು ಬೆಸೆದಿದೆ ಎಂಬುದನ್ನು ಗಮನಕ್ಕೆ ತಂದರು. 'ವಸುಧೈವ ಕುಟುಂಬಕಂ' ಮತ್ತು 'ಭಿನ್ನೇಕ ತುಂಗಲ್ ಇಕಾ' (ವೈವಿಧ್ಯತೆಯಲ್ಲಿ ಏಕತೆ) ಎಂಬ ಹಂಚಿಕೆಯ ಆದರ್ಶಗಳನ್ನು ಉಲ್ಲೇಖಿಸಿದ ಅವರು, ಈ ಮೌಲ್ಯಗಳು ಉಭಯ ದೇಶಗಳ ನಡುವಿನ ಸಹಭಾಗಿತ್ವಕ್ಕೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿವೆ ಎಂದು ಹೇಳಿದರು. ಎರಡೂ ದೇಶಗಳ ಐತಿಹಾಸಿಕ ಪಥಗಳು, ಸಾಮೂಹಿಕ ಸವಾಲುಗಳು ಮತ್ತು ಜನರ ಹಂಚಿಕೆಯ ಆಕಾಂಕ್ಷೆಗಳು ಭಾರತ ಮತ್ತು ಇಂಡೋನೇಷ್ಯಾವನ್ನು ನೈಸರ್ಗಿಕ ಹಾಗೂ ವಿಶ್ವಾಸಾರ್ಹ ಪಾಲುದಾರರನ್ನಾಗಿ ಒಟ್ಟಿಗೆ ತರುತ್ತವೆ ಎಂದು ಅವರು ಹೇಳಿದರು.
ಭಾರತದ ಅಭಿವೃದ್ಧಿ ಪಯಣ ಮತ್ತು 'ವಿಕಸಿತ ಭಾರತ 2047' ಹಾಗೂ 'ಗೋಲ್ಡನ್ ಇಂಡೋನೇಷ್ಯಾ 2045' (ಇಂಡೋನೇಷ್ಯಾ ಎಮಾಸ್ 2045) ದೃಷ್ಟಿಕೋನಗಳ ನಡುವಿನ ಪರಸ್ಪರ ಪೂರಕತೆಯನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು ವ್ಯಾಪಾರ, ಹೂಡಿಕೆ, ಸಂಪರ್ಕ, ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಆಳವಾದ ಸಹಯೋಗಕ್ಕೆ ಕರೆ ನೀಡಿದರು. ಜಾಗತಿಕ ದಕ್ಷಿಣದ ಧ್ವನಿಯನ್ನು ಬಲಪಡಿಸಲು ಮತ್ತು ಮುಕ್ತ, ಒಳಗೊಳ್ಳುವ ಹಾಗೂ ನಿಯಮ-ಆಧಾರಿತ ಇಂಡೋ-ಪೆಸಿಫಿಕ್ ವಲಯಕ್ಕಾಗಿ ಇಂಡೋನೇಷ್ಯಾದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಶತಮಾನಗಳಷ್ಟು ಹಳೆಯದಾದ ನಾಗರಿಕ ಸಂಬಂಧಗಳಿಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಗಾಗಿ 'ಗಂಗಾ-ಮಹಾಕಮ್ ದೃಷ್ಟಿಕೋನ'ದ ಆಧಾರದ ಮೇಲೆ ಭಾರತ-ಇಂಡೋನೇಷ್ಯಾ ಸಂಬಂಧದಲ್ಲಿ ಹೊಸ ಆರಂಭಕ್ಕೆ ಕರೆ ನೀಡಿದರು. ಈ ಕಾರ್ಯವಿಧಾನದ ಭಾಗವಾಗಿ, ಎರಡೂ ದೇಶಗಳು ತಮ್ಮ ನಾಗರಿಕ ಸಂಪರ್ಕವನ್ನು ವೃದ್ಧಿಸಬೇಕು; ತಮ್ಮ ಅಭಿವೃದ್ಧಿ ಮಾರ್ಗಗಳನ್ನು ಪರಸ್ಪರ ಹಂಚಿಕೊಳ್ಳಬೇಕು; ಭದ್ರತೆ ಮತ್ತು ಕಾರ್ಯತಂತ್ರದ ವಿಶ್ವಾಸವನ್ನು ಬಲಪಡಿಸಬೇಕು; ಕಡಲ ಸಮೃದ್ಧಿಗಾಗಿ ಶ್ರಮಿಸಬೇಕು ಮತ್ತು ಜಾಗತಿಕ ದಕ್ಷಿಣದ ಧ್ವನಿಯನ್ನು ಬಲಪಡಿಸಬೇಕು ಎಂದು ಅವರು ಹೇಳಿದರು.
ಈ ಭಾಷಣವು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಶಾಶ್ವತ ನಾಗರಿಕ ಬಾಂಧವ್ಯ ಮತ್ತು ಹಂಚಿಕೆಯ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಒತ್ತಿಹೇಳಿತು ಮತ್ತು ತಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಲು ಉಭಯ ದೇಶಗಳ ಬದ್ಧತೆಯನ್ನು ಪುನರುಚ್ಚರಿಸಿತು.
*****
(रिलीज़ आईडी: 2282356)
आगंतुक पटल : 6
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Gujarati
,
Tamil
,
Telugu
,
Malayalam