ಗ್ರಾಮೀಣಾಭಿವೃದ್ಧಿ ಸಚಿವಾಲಯ
ಆಂಧ್ರಪ್ರದೇಶದಿಂದ ದೇಶವ್ಯಾಪಿ 'ವಿಕಸಿತ್ ಭಾರತ್ - ಜಿ-ರಾಮ್ ಜಿ ಕಾಯ್ದೆ'ಗೆ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಶ್ರೀ ಪವನ್ ಕಲ್ಯಾಣ್ ಅವರೊಂದಿಗೆ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಚಾಲನೆ
"ಪ್ರತಿಯೊಂದು ಕೈಗೂ ಕೆಲಸವಿರಬೇಕು, ಪ್ರತಿಯೊಂದು ಹೊಟ್ಟೆಗೂ ಅನ್ನವಿರಬೇಕು": ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಂಕಲ್ಪವು ವಾಸ್ತವದಲ್ಲಿ ಜಾರಿಯಾಗುತ್ತಿದೆ ಎಂದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
"ಮನರೇಗಾ (MGNREGA) ದಿಂದ 'ವಿ.ಬಿ - ಜಿ ರಾಮ್ ಜಿ'ಗೆ ಮುನ್ನಡೆ, ಈಗ 125 ದಿನಗಳ ಉದ್ಯೋಗದ ದೃಢವಾದ ಖಾತರಿ": ಶ್ರೀ ಶಿವರಾಜ್ ಸಿಂಗ್
"ಐದು ವರ್ಷಗಳಲ್ಲಿ 7.5 ಲಕ್ಷ ಕೋಟಿ ರೂ.ಗಳ ಗುರಿ, ಅಭಿವೃದ್ಧಿಗಾಗಿ ಪ್ರತಿ ಪಂಚಾಯತ್ ಗೆ ಪ್ರತಿ ವರ್ಷ 2 ಕೋಟಿ ರೂ.ಗಳಿಗೂ ಅಧಿಕ ಅನುದಾನ": ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು
"ಕಾರ್ಮಿಕರ ಬೆವರಿಗೆ ಸಂಪೂರ್ಣ ಪ್ರತಿಫಲ, ವಿಳಂಬವಾದ ವೇತನವನ್ನು ಬಡ್ಡಿ ಸಮೇತ ಪಾವತಿಸಲು ಕಾನೂನುಬದ್ಧ ಅವಕಾಶ": ಶ್ರೀ ಶಿವರಾಜ್ ಸಿಂಗ್
"ಒಂಬತ್ತು ತಿಂಗಳಲ್ಲಿ ಆಂಧ್ರಪ್ರದೇಶಕ್ಕೆ 7,707 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್, ಗ್ರಾಮೀಣ ಅಭಿವೃದ್ಧಿಯ ಹೊಸ ಮಾದರಿ": ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಆಂಧ್ರಪ್ರದೇಶಕ್ಕೆ ಶಿವರಾಜ್ ಅವರ ಕೊಡುಗೆ - ವಸತಿ ಮತ್ತು ರಸ್ತೆಗಳಿಗೆ ಬೃಹತ್ ಮಂಜೂರಾತಿಯೊಂದಿಗೆ ತೋತಾಪುರಿ ಮಾವು ಬೆಳೆಗಾರರಿಗೆ ಪರಿಹಾರ
"ಸ್ವರ್ಣ ಆಂಧ್ರಪ್ರದೇಶಕ್ಕಾಗಿ ಮೂರು ರಾಜಧಾನಿಗಳಲ್ಲ, ಬದಲಾಗಿ ಒಂದೇ ಒಂದು ಶಾಶ್ವತ ರಾಜಧಾನಿ": ಶ್ರೀ ಚಂದ್ರಬಾಬು ನಾಯ್ಡು
ತೋಟಗಾರಿಕಾ ಹಬ್ ಆಗಿ ಮಾಡಲು 1 ಲಕ್ಷ ಕೋಟಿ ರೂ. ಹೂಡಿಕೆ, ಶ್ರೀ ಚಂದ್ರಬಾಬು ನಾಯ್ಡು ಅವರ ಯೋಜನೆ
"ಶ್ರೀ ಶಿವರಾಜ್ ಅವರ 49 ವರ್ಷಗಳ ಸಾರ್ವಜನಿಕ ಜೀವನವು ರೈತರು, ಗ್ರಾಮೀಣ ಭಾರತ ಮತ್ತು ಸಾರ್ವಜನಿಕ ಸೇವೆಯ ಮೇಲಿನ ಸಮರ್ಪಣೆಯ ಸಂಕೇತವಾಗಿದೆ": ಶ್ರೀ ಪವನ್ ಕಲ್ಯಾಣ್
प्रविष्टि तिथि:
02 JUL 2026 6:53PM by PIB Bengaluru
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಮುಕ್ಕವಾರಿಪಲ್ಲಿ ಗ್ರಾಮದಲ್ಲಿ ಇಂದು ರಾಷ್ಟ್ರವ್ಯಾಪಿ 'ವಿಕಸಿತ್ ಭಾರತ್ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತರಿ ಯೋಜನೆ'ಗೆ ಚಾಲನೆ ನೀಡಲಾಯಿತು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಶ್ರೀ ಪವನ್ ಕಲ್ಯಾಣ್, ಕೇಂದ್ರ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಮತ್ತು ಶ್ರೀ ಕಮಲೇಶ್ ಪಾಸ್ವಾನ್ ಅವರೊಂದಿಗೆ ಸಂಸದರು, ಶಾಸಕರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ದೇಶಾದ್ಯಂತ ಬಡ ಕಾರ್ಮಿಕರು, ರೈತರು ಮತ್ತು ಗ್ರಾಮಗಳ ಉದ್ಯೋಗ ಖಾತರಿಗಾಗಿ ಹೊಸ ಮಾದರಿಯನ್ನು ಪ್ರಸ್ತುತಪಡಿಸಲಾಯಿತು. ಇದರೊಂದಿಗೆ ಗ್ರಾಮಗಳ ಅಭಿವೃದ್ಧಿಗಾಗಿ ಬೃಹತ್ ಆರ್ಥಿಕ ಅನುದಾನ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಸಹ ಪರಿಚಯಿಸಲಾಯಿತು.

ಭಗವಾನ್ ವೆಂಕಟೇಶ್ವರನ ಪಾದಗಳಿಗೆ ನಮಸ್ಕರಿಸುವ ಮೂಲಕ ಆರಂಭ – ವಿಬಿ - ಜಿ ರಾಮ್ ಜಿ
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಭಾಷಣವನ್ನು 'ನಮಃ ವೆಂಕಟೇಶ್ವರಾಯ' ಹಾಗೂ 'ಗೋವಿಂದಾ, ಗೋವಿಂದಾ' ಎಂಬ ನಾಮಸ್ಮರಣೆಯೊಂದಿಗೆ ಪ್ರಾರಂಭಿಸಿದರು. ಈ ಪವಿತ್ರ ಭೂಮಿಯಿಂದ ‘ವಿಕಸಿತ್ ಭಾರತ್ ಜಿ-ರಾಮ್ ಜಿ ಯೋಜನೆ’ಗೆ ಚಾಲನೆ ನೀಡುತ್ತಿರುವುದು ಬಡವರು ಮತ್ತು ಕಾರ್ಮಿಕರ ಮೇಲಿನ ದೈವಿಕ ಆಶೀರ್ವಾದದ ಮಳೆಯಂತಿದೆ ಎಂದು ಅವರು ತಿಳಿಸಿದರು. ದೇಶದ ಯಾವುದೇ ಬಡ ಕಾರ್ಮಿಕನು ಕೆಲಸವಿಲ್ಲದೆ ಉಳಿಯಬಾರದು, ಪ್ರತಿಯೊಂದು ಕೈಗೂ ಕೆಲಸ ಸಿಗಬೇಕು ಮತ್ತು ಪ್ರತಿಯೊಂದು ಹೊಟ್ಟೆಗೂ ಆಹಾರ ಸಿಗಬೇಕು ಎಂದು ಅವರು ಪ್ರಾರ್ಥಿಸಿದರು. ಈ ಸಂಕಲ್ಪವನ್ನು ಕಾರ್ಯರೂಪಕ್ಕೆ ತಂದಿದ್ದಕ್ಕಾಗಿ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

ಮನರೇಗಾದಿಂದ (MGNREGA) ವಿಬಿ - ಜಿ ರಾಮ್ ಜಿ ವರೆಗೆ – 125 ದಿನಗಳ ಖಾತರಿ ಉದ್ಯೋಗದತ್ತ ಒಂದು ಹೆಜ್ಜೆ
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾದ ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಕೇವಲ 100 ದಿನಗಳ ಉದ್ಯೋಗದ ಖಾತರಿಯನ್ನು ಮಾತ್ರ ನೀಡುತ್ತಿತ್ತು ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ನೆನಪಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೊಸ ಕಾರ್ಯತಂತ್ರದ ಅಡಿಯಲ್ಲಿ, 'ವಿಕಸಿತ್ ಭಾರತ್ – ಜಿ ರಾಮ್ ಜಿ ಯೋಜನೆ'ಯು ಕಾರ್ಮಿಕರಿಗೆ ಪೂರ್ಣ 125 ದಿನಗಳ ಕೆಲಸದ ದೃಢವಾದ ಖಾತರಿಯನ್ನು ನೀಡುತ್ತದೆ ಎಂದು ಅವರು ಹೇಳಿದರು. ಇದು ಕೇವಲ ದಿನಗಳ ಸಂಖ್ಯೆಯಲ್ಲಿನ ಹೆಚ್ಚಳವಲ್ಲ, ಬದಲಿಗೆ ಆಲೋಚನಾ ವಿಧಾನದಲ್ಲಿನ ಬದಲಾವಣೆಯಾಗಿದೆ, ಈಗ ಯಾವುದೇ ಕೈಗಳು ಖಾಲಿ ಉಳಿಯಬಾರದು ಎಂಬುದು ಇದರ ಗುರಿಯಾಗಿದೆ ಎಂದು ಅವರು ತಿಳಿಸಿದರು. ಈ ಹೊಸ ಯೋಜನೆಯ ಅನುಷ್ಠಾನದ ಮೊದಲ ದಿನವೇ ದೇಶಾದ್ಯಂತ ಲಕ್ಷಾಂತರ ಕಾರ್ಮಿಕರಿಗೆ ಕೆಲಸ ಸಿಕ್ಕಿದೆ ಮತ್ತು ಮನರೇಗಾವನ್ನು ವಿಬಿ - ಜಿ ರಾಮ್ ಜಿ ಯೋಜನೆಯ ಸುಧಾರಿತ ರೂಪಕ್ಕೆ ಪರಿವರ್ತಿಸಲಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.

ಮೊದಲ ವರ್ಷದಲ್ಲಿ 1.51 ಲಕ್ಷ ಕೋಟಿ ರೂ.ಗಳ ನಿಯೋಜನೆ, ಐದು ವರ್ಷಗಳಲ್ಲಿ 7.5 ಲಕ್ಷ ಕೋಟಿ ರೂ.ಗಳ ಗುರಿ
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಯೋಜನೆಯ ಆರ್ಥಿಕ ಮುಖ್ಯಾಂಶಗಳ ಬಗ್ಗೆ ವಿವರವಾಗಿ ಮಾತನಾಡಿ, 'ವಿಕಸಿತ್ ಭಾರತ್ – ಜಿ ರಾಮ್ ಜಿ ಯೋಜನೆ'ಯ ಮೊದಲ ವರ್ಷದಲ್ಲೇ ಕೇಂದ್ರದ ಪಾಲು 95,000 ಕೋಟಿ ರೂ.ಗಳಿಗಿಂತ ಹೆಚ್ಚಿರಲಿದೆ ಮತ್ತು ರಾಜ್ಯಗಳ ಶೇಕಡಾ 40 ರಷ್ಟು ಪಾಲನ್ನು ಸೇರಿಸಿದರೆ, ವಾರ್ಷಿಕ ವೆಚ್ಚವು ಸುಮಾರು 1.51 ಲಕ್ಷ ಕೋಟಿ ರೂ.ಗಳನ್ನು ತಲುಪಲಿದೆ ಎಂದು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಯಡಿ ಒಟ್ಟು 7.5 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುವ ಗುರಿ ಹೊಂದಲಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಮಾಹಿತಿ ನೀಡಿದರು. ಈ ಹಣವು ದೇಶದ 2.86 ಲಕ್ಷ ಪಂಚಾಯತ್‌ಗಳನ್ನು ತಲುಪಲಿದ್ದು, ಪ್ರತಿ ಪಂಚಾಯತ್‌ಗೆ ವರ್ಷಕ್ಕೆ ಸರಾಸರಿ 2 ಕೋಟಿ ರೂ.ಗಳಿಗಿಂತ ಹೆಚ್ಚು ಹಣ ಸಿಗಲಿದೆ, ಇದು ಗ್ರಾಮಗಳಲ್ಲಿ ಉದ್ಯೋಗವನ್ನು ಹೆಚ್ಚಿಸುವುದರ ಜೊತೆಗೆ ಶಾಶ್ವತ ಆಸ್ತಿಗಳನ್ನು ಸಹ ಸೃಷ್ಟಿಸಲಿದೆ.

ಉದ್ಯೋಗದ ಕಾನೂನುಬದ್ಧ ಗ್ಯಾರಂಟಿ – 15 ದಿನಗಳೊಳಗೆ ಕೆಲಸ, ಇಲ್ಲದಿದ್ದರೆ ನಿರುದ್ಯೋಗ ಭತ್ಯೆ
‘ವಿಕಸಿತ್ ಭಾರತ್ – ಜಿ ರಾಮ್ ಜಿ ಯೋಜನೆ’ ಅಡಿಯಲ್ಲಿ ಕಾರ್ಮಿಕರ ಹಕ್ಕುಗಳಿಗೆ ಕಾನೂನುಬದ್ಧ ಬಲವನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಯಾವುದೇ ಕಾರ್ಮಿಕರು ಕೆಲಸವನ್ನು ಕೇಳಿದ ತಕ್ಷಣ, 15 ದಿನಗಳೊಳಗೆ ಉದ್ಯೋಗ ನೀಡುವುದು ಕಡ್ಡಾಯವಾಗಿರುತ್ತದೆ ಮತ್ತು ನಿಗದಿತ ಅವಧಿಯೊಳಗೆ ಕೆಲಸವನ್ನು ನೀಡದಿದ್ದರೆ, ಸಂಬಂಧಪಟ್ಟ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕಾಗುತ್ತದೆ. ಇನ್ನು ಮುಂದೆ ಯಾರೂ ಕಾರ್ಮಿಕರ ಬೆವರಿನೊಂದಿಗೆ ಆಟವಾಡಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಕೂಲಿ ಪಾವತಿಯಲ್ಲಿ ವಿಳಂಬವಾಗುವ ಹಳೆಯ ಸಮಸ್ಯೆಯನ್ನು ಕೊನೆಗಾಣಿಸಲು, ಈ ಯೋಜನೆಯಲ್ಲಿ ಒಂದು ನಿಬಂಧನೆಯನ್ನು ಸೇರಿಸಲಾಗಿದ್ದು, ಕೂಲಿ ಪಾವತಿ ವಿಳಂಬವಾದರೆ ಕಾರ್ಮಿಕರಿಗೆ ವಿಳಂಬಿತ ಕೂಲಿಯ ಜೊತೆಗೆ ಬಡ್ಡಿಯನ್ನು ಸಹ ಪಾವತಿಸಲಾಗುವುದು. ಬಡವರ ಸೇವೆಯನ್ನು ದೇವರ ಪೂಜೆ ಎಂದು ಪರಿಗಣಿಸುವ ‘ಮೋದಿ ಮಂತ್ರ’ವು ನೆಲದ ಮೇಲೆ ಕಾಣಿಸುವಂತಾಗಲು ಮತ್ತು ಕಾರ್ಮಿಕನ ಬೆವರಿಗೆ ಪೂರ್ಣ ಮೌಲ್ಯ ಸಿಗುವಂತಾಗಲು ಈ ಕ್ರಮ ಕೈಗೊಳ್ಳಲಾಗಿದೆ.

ಶೇಕಡಾ 9 ರಷ್ಟು ಆಡಳಿತಾತ್ಮಕ ವೆಚ್ಚದೊಂದಿಗೆ ವ್ಯವಸ್ಥೆಯ ಬಲವರ್ಧನೆ, ಕ್ಷೇತ್ರ ಸಿಬ್ಬಂದಿಗೆ ಪೂರ್ಣ ಸಂಬಳ
ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಡಳಿತಾತ್ಮಕ ವೆಚ್ಚವನ್ನು ಶೇಕಡಾ 6 ರಿಂದ ಶೇಕಡಾ 9 ಕ್ಕೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಮಾಹಿತಿ ನೀಡಿದರು. ಇದರ ಅಡಿಯಲ್ಲಿ, ಗ್ರಾಮ ಉದ್ಯೋಗ ಸಹಾಯಕರು (ಗ್ರಾಮ ಪಂಚಾಯತ್‌ಗಳಲ್ಲಿನ ಗುತ್ತಿಗೆ ನೌಕರರು), ಮೇಟ್‌ಗಳು ಮತ್ತು ಇತರ ಕ್ಷೇತ್ರ ಮಟ್ಟದ ಸಿಬ್ಬಂದಿಯ ಸಂಬಳ ಮತ್ತು ಸೌಲಭ್ಯಗಳಿಗಾಗಿ 13,000 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಮೀಸಲಿರಿಸಲಾಗಿದೆ. ಹಳ್ಳಿಗಳಲ್ಲಿ ಕಾರ್ಮಿಕರ ಮತ್ತು ಅಭಿವೃದ್ಧಿಯ ಕೆಲಸಗಳನ್ನು ನಿರ್ವಹಿಸುವ ನೌಕರರು ತಮ್ಮ ಗಮನ ಬೇರೆಡೆ ಹರಿಯದಂತೆ ಮತ್ತು ವ್ಯವಸ್ಥೆಯು ಸದೃಢವಾಗಿರಲು ತಮ್ಮ ಪೂರ್ಣ ಸಂಬಳವನ್ನು ಸಮಯಕ್ಕೆ ಸರಿಯಾಗಿ ಪಡೆಯುವುದು ಅತ್ಯಗತ್ಯ ಎಂದು ಅವರು ಹೇಳಿದರು. ಈ ರೀತಿಯಾಗಿ, ಈ ಯೋಜನೆಯು ಕಾರ್ಮಿಕರ ಜೊತೆಗೆ ಆಡಳಿತಾತ್ಮಕ ರಚನೆಯನ್ನು ಬಲಪಡಿಸಲು ಕೆಲಸ ಮಾಡುತ್ತದೆ.
ಗ್ರಾಮದ ನಿರ್ಧಾರ ಗ್ರಾಮದಲ್ಲೇ – ಕಾಮಗಾರಿಗಳನ್ನು ಗ್ರಾಮ ಸಭೆಯು ನಿರ್ಧರಿಸಲಿದೆ
ಯಾವ ಹಳ್ಳಿಯಲ್ಲಿ ಯಾವ ಕಾಮಗಾರಿ ನಡೆಯಬೇಕು ಎಂಬುದನ್ನು ದೆಹಲಿ ಅಥವಾ ಅಮರಾವತಿಯಿಂದ (ಆಂಧ್ರಪ್ರದೇಶದಲ್ಲಿ) ನಿರ್ಧರಿಸಲಾಗುವುದಿಲ್ಲ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಕಾಮಗಾರಿಗಳನ್ನು ನಿರ್ಧರಿಸುವ ಹಕ್ಕು ಗ್ರಾಮ ಪಂಚಾಯತ್ ಮತ್ತು ಗ್ರಾಮ ಸಭೆಯ ಬಳಿಯೇ ಇರುತ್ತದೆ. ಉದಾಹರಣೆ ನೀಡುತ್ತಾ, ತಮಗೆ ಅಂಗನವಾಡಿ, ಶಾಲೆ, ಆಸ್ಪತ್ರೆ ಅಥವಾ ರಸ್ತೆ ಬೇಕೇ, ಕೃಷಿ ರಸ್ತೆಗಳು, ಎಫ್ ಪಿ ಒ (ರೈತ ಉತ್ಪಾದಕ ಸಂಸ್ಥೆಗಳು) ಗಳಿಗಾಗಿ ಕಟ್ಟಡಗಳು, ಕೆರೆಗಳು, ಚೆಕ್ ಡ್ಯಾಮ್ ಗಳು, ಅಣೆಕಟ್ಟುಗಳು ಅಥವಾ ನೈಸರ್ಗಿಕ ವಿಕೋಪಗಳಿಂದ ರಕ್ಷಣೆಗಾಗಿ ತಡೆಗೋಡೆಗಳನ್ನು ನಿರ್ಮಿಸಬೇಕೇ ಎಂಬುದನ್ನು ಗ್ರಾಮದ ಜನರೇ ನಿರ್ಧರಿಸುತ್ತಾರೆ - ಈ ಎಲ್ಲಾ ನಿರ್ಧಾರಗಳನ್ನು ಗ್ರಾಮದಲ್ಲಿ ಕುಳಿತು ಗ್ರಾಮ ಸಭೆಯು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಗ್ರಾಮದ ನಿರ್ಧಾರವು ಗ್ರಾಮದಲ್ಲೇ ಆಗಿರುತ್ತದೆ; ಇದು ಜಿ-ರಾಮ್-ಜಿ ಯೋಜನೆಯ ಆತ್ಮವಾಗಿದೆ.
ಹಿಂದುಳಿದ ಪಂಚಾಯತ್ ಗಳಿಗೆ ಹೆಚ್ಚುವರಿ ನೆರವು, ಆಂಧ್ರಪ್ರದೇಶಕ್ಕೆ 7,707 ಕೋಟಿ ರೂ.ಗಳ ವಿಶೇಷ ಅನುದಾನ
ಒಳನಾಡು ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ರಾಜ್ಯಗಳು ತಮ್ಮ ಪಂಚಾಯತ್ ಗಳನ್ನು 'ಎ, ಬಿ ಮತ್ತು ಸಿ' ವರ್ಗಗಳಾಗಿ ವಿಂಗಡಿಸಬಹುದು ಹಾಗೂ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಪಂಚಾಯತ್ ಗಳಿಗೆ ಹೆಚ್ಚಿನ ಅನುದಾನವನ್ನು ನೀಡಬಹುದು ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯಗಳಿಗೆ ತಿಳಿಸಿದರು. ಆಂಧ್ರಪ್ರದೇಶದ ವಿಷಯಕ್ಕೆ ಬಂದರೆ, ಕೇವಲ ಒಂಬತ್ತು ತಿಂಗಳ ಅವಧಿಗೆ 'ವಿಕಸಿತ್ ಭಾರತ್ - ಜಿ ರಾಮ್ ಜಿ ಯೋಜನೆ'ಯಡಿ ಕೇಂದ್ರದಿಂದ 7,707 ಕೋಟಿ ರೂ.ಗಳ ವಿಶೇಷ ಮೊತ್ತವನ್ನು ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯ ಸರ್ಕಾರದ ಪಾಲಿನೊಂದಿಗೆ, ಈ ಪ್ಯಾಕೇಜ್ ಆಂಧ್ರಪ್ರದೇಶವನ್ನು ದೇಶದ ಅಗ್ರಗಣ್ಯ ರಾಜ್ಯಗಳ ಸಾಲಿಗೆ ತರುತ್ತದೆ ಮತ್ತು ಹಳ್ಳಿಗಳಲ್ಲಿನ ಉದ್ಯೋಗ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಬಲವನ್ನು ಒದಗಿಸುತ್ತದೆ. ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಶ್ರೀ ಪವನ್ ಕಲ್ಯಾಣ್ ಅವರ ನಾಯಕತ್ವದಲ್ಲಿ, ಆಂಧ್ರಪ್ರದೇಶವು ಗ್ರಾಮೀಣ ಅಭಿವೃದ್ಧಿಯ ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ವೇತನ ದರಗಳು
ಇನ್ನು ಮುಂದೆ ಯಾವುದೇ ರಾಜ್ಯದಲ್ಲಿ ದಿನಗೂಲಿಯು 300 ರೂ.ಗಳಿಗಿಂತ ಕಡಿಮೆಯಿರುವುದಿಲ್ಲ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದರು. ಕಾರ್ಮಿಕರ ಬೆವರಿಗೆ ತಕ್ಕ ಸಂಪೂರ್ಣ ಪ್ರತಿಫಲ ದೊರೆಯುವಂತೆ ಮಾಡಲು, ಆಂಧ್ರಪ್ರದೇಶದಲ್ಲಿ ಈ ದರವನ್ನು 312 ರಿಂದ 315 ರೂ.ಗಳ ನಡುವೆ ನಿಗದಿಪಡಿಸಲಾಗಿದೆ.
ಪ್ರಧಾನಮಂತ್ರಿ ವಸತಿ ಮತ್ತು ಗ್ರಾಮೀಣ ರಸ್ತೆಗಳಿಗೆ ಬೃಹತ್ ಕೊಡುಗೆಗಳು – ವೇದಿಕೆಯ ಮೇಲಿಂದಲೇ ಮಂಜೂರಾತಿ ಪತ್ರ ಹಸ್ತಾಂತರ
ಪ್ರಧಾನಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G) ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ – IV (PMGSY) ಅಡಿಯಲ್ಲಿ ಆಂಧ್ರಪ್ರದೇಶದ ಬಡ ಕುಟುಂಬಗಳು ಮತ್ತು ಹಳ್ಳಿಗಳಿಗೆ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಬೃಹತ್ ಕೊಡುಗೆಗಳನ್ನು ಘೋಷಿಸಿದರು. ಯಾವುದೇ ಅರ್ಹ ಬಡ ಕುಟುಂಬವು ಕಚ್ಚಾ ಮನೆಯಲ್ಲಿ ಉಳಿಯಬಾರದು ಮತ್ತು ಪ್ರತಿಯೊಬ್ಬರಿಗೂ ಗೌರವಾನ್ವಿತ ವಸತಿ ಸಿಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಯಡಿ ಆಂಧ್ರಪ್ರದೇಶಕ್ಕೆ 74,212 ಹೊಸ ಪಕ್ಕಾ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದರೊಂದಿಗೆ, ಇದುವರೆಗೂ ಪಕ್ಕಾ ರಸ್ತೆಗಳ ಸಂಪರ್ಕವಿಲ್ಲದ ಹಳ್ಳಿಗಳ ಬಗ್ಗೆಯೂ ಅವರು ಗಮನ ಹರಿಸಿದರು. ಅಂತಹ ಪ್ರದೇಶಗಳಿಗೆ ಒಟ್ಟು 422 ಕೋಟಿ ರೂ.ಗೂ ಅಧಿಕ ಮೊತ್ತದಲ್ಲಿ 146 ಹೊಸ ರಸ್ತೆಗಳು ಹಾಗೂ 19 ಸೇತುವೆಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ತಿಳಿಸಿದರು. ವೇದಿಕೆಯ ಮೇಲಿಂದಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ಈ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಹಳ್ಳಿಗಳು ಪ್ರಗತಿ ಹೊಂದಿದರೆ ಭಾರತವು ಬದಲಾಗುತ್ತದೆ ಮತ್ತು ಆಂಧ್ರಪ್ರದೇಶದ ಸಂಪೂರ್ಣ ಗ್ರಾಮೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಶಕ್ತಿಮೀರಿ ಶ್ರಮಿಸಲಿದೆ ಎಂದು ಭರವಸೆ ನೀಡಿದರು.
ತೋತಾಪುರಿ ಮಾವು ಬೆಳೆಗಾರರಿಗೆ ಪರಿಹಾರ – ನ್ಯಾಯಯುತ ಬೆಲೆ ಖಾತರಿಪಡಿಸಲು ಮಾರುಕಟ್ಟೆ ಮಧ್ಯಸ್ಥಿಕೆ
ಆಂಧ್ರಪ್ರದೇಶದ ತೋತಾಪುರಿ ಮಾವು ಬೆಳೆಯುವ ರೈತರ ಸಮಸ್ಯೆಗಳನ್ನು ಉಲ್ಲೇಖಿಸಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ತೋತಾಪುರಿ ಮಾವಿನ ಬೆಲೆ ಕುಸಿತದಿಂದಾಗಿ ರೈತರು ಭಾರಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ರೈತರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಮತ್ತು ಅವರ ಕಠಿಣ ಶ್ರಮಕ್ಕೆ ಬೆಲೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರವು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (MIS) ಯಡಿ ಹೆಚ್ಚಿನ ಪ್ರಮಾಣದಲ್ಲಿ ತೋತಾಪುರಿ ಮಾವನ್ನು ಖರೀದಿಸಲು ನಿರ್ಧರಿಸಿದೆ ಎಂದು ತಿಳಿಸಿದರು. ಇದರೊಂದಿಗೆ, ಮಾವಿನ ತೋಟಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ಉತ್ತಮ ತಳಿಗಳು ಲಭ್ಯವಾಗುವಂತೆ ಮಾಡಲು ಐಸಿಆರ್ (ICR) ವೈಜ್ಞಾನಿಕ ತಂಡವು ರಾಜ್ಯ ಸರ್ಕಾರದ ತಂಡದೊಂದಿಗೆ ಕಸಿ ಮತ್ತು ತಳಿ ಬದಲಾವಣೆ ತಂತ್ರಗಳ ಕುರಿತು ಜಂಟಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಮಾಹಿತಿ ನೀಡಿದರು.
ಪರಿಸರ ಸಂರಕ್ಷಣೆಯ ಸಂಕಲ್ಪ
ಪರಿಸರ ಸಂರಕ್ಷಣೆಗಾಗಿ ಸಂಕಲ್ಪ ಮಾಡುವಂತೆ ಜನರಿಗೆ ಮನವಿ ಮಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ನಾನು ಪ್ರತಿದಿನ ಗಿಡಗಳನ್ನು ನೆಡುತ್ತೇನೆ ಮತ್ತು ಸಾರ್ವಜನಿಕರು ಸಹ ತಮ್ಮ ಹುಟ್ಟುಹಬ್ಬದಂದು ಕನಿಷ್ಠ ಒಂದು ಗಿಡವನ್ನಾದರೂ ನೆಡಬೇಕು ಎಂದು ಕೋರಿದರು. ಇದೇ ವೇದಿಕೆಯಿಂದ, ಅಭಿವೃದ್ಧಿ ಹೊಂದಿದ ಹಳ್ಳಿಗಳು, ಅಭಿವೃದ್ಧಿ ಹೊಂದಿದ ಆಂಧ್ರಪ್ರದೇಶ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ (ವಿಕಸಿತ ಭಾರತ್) ಅವರು ಜನರಿಂದ ಸಾಮೂಹಿಕ ಪ್ರತಿಜ್ಞೆ ಮಾಡಿಸಿದರು.
ಹಳ್ಳಿಗಳು ಮತ್ತು ಗ್ರಾಮೀಣ ಜೀವನ ಮಟ್ಟವನ್ನು ಪರಿವರ್ತಿಸಲಿರುವ ವಿಕಸಿತ್ ಭಾರತ್ – ಜಿ ರಾಮ್ ಜಿ ಯೋಜನೆ
ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಅವರು ತಮ್ಮ ಭಾಷಣದಲ್ಲಿ, 'ವಿಕಸಿತ್ ಭಾರತ್ – ಜಿ ರಾಮ್ ಜಿ ಯೋಜನೆ'ಯನ್ನು ಹಳ್ಳಿಗಳು ಮತ್ತು ಗ್ರಾಮೀಣ ಜೀವನ ಮಟ್ಟದಲ್ಲಿ ಬದಲಾವಣೆಯನ್ನು ತರುವ ಕಾರ್ಯಕ್ರಮ ಎಂದು ಬಣ್ಣಿಸಿದರು. ಈ ಹಿಂದೆ ನರೇಗಾ (MGNREGA) ರಾಯಲಸೀಮೆಯಿಂದ ಪ್ರಾರಂಭವಾಗಿ ದೇಶಕ್ಕೇ ಒಂದು ಮಾದರಿಯನ್ನು ನೀಡಿತ್ತು, ಈಗ ಅದೇ ತಳಹದಿಯ ಮೇಲೆ ಆದರೆ ಇನ್ನಷ್ಟು ಸಶಕ್ತ ರೂಪದಲ್ಲಿ ‘ವಿ.ಬಿ - ಜಿ ರಾಮ್ ಜಿ ಯೋಜನೆ’ ಪ್ರಾರಂಭವಾಗುತ್ತಿದ್ದು, ಇದು ಸ್ವರ್ಣ ಆಂಧ್ರಪ್ರದೇಶ ಮತ್ತು ವಿಕಸಿತ್ ಭಾರತದತ್ತ ಇಟ್ಟ ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. 125 ದಿನಗಳ ಉದ್ಯೋಗದ ಖಾತರಿಯೊಂದಿಗೆ ಕೃಷಿ ರಸ್ತೆಗಳು, ಕೊಳಗಳು, ಚರಂಡಿ ಹಾಗೂ ಇತರ ಸೌಲಭ್ಯಗಳ ನಿರ್ಮಾಣ ಮತ್ತು ಭೂರಹಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದರಿಂದ ಗ್ರಾಮೀಣ ಜೀವನ ಮಟ್ಟದಲ್ಲಿ ನೇರ ಸುಧಾರಣೆಯಾಗಲಿದೆ ಎಂದು ಅವರು ತಿಳಿಸಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಡಿಜಿಟಲ್ ಮೇಲ್ವಿಚಾರಣೆ, ಗ್ರಾಮಸಭೆಗಳಿಂದಲೇ ಅಭಿವೃದ್ಧಿಯ ಯೋಜನೆ
ಈ ಹೊಸ ಯೋಜನೆಯಲ್ಲಿ ಕಾಮಗಾರಿಗಳ ಮೇಲ್ವಿಚಾರಣೆಗಾಗಿ ಡಿಜಿಟಲ್ ಮಾಸ್ಟರ್ ರೋಲ್, ಆಧಾರ್ ಆಧಾರಿತ ಪಾವತಿಗಳು, ರಿಯಲ್-ಟೈಮ್ ಮೇಲ್ವಿಚಾರಣೆ ಮತ್ತು ಜಿಯೋ-ಟ್ಯಾಗಿಂಗ್ ತಂತ್ರಜ್ಞಾನಗಳನ್ನು ಬಳಸಲಾಗುವುದು ಎಂದು ಶ್ರೀ ಚಂದ್ರಬಾಬು ನಾಯ್ಡು ಮಾಹಿತಿ ನೀಡಿದರು. ಇದರಿಂದ ಯಾವುದೇ ಕೆಲಸ ಮಾಡದೆ ಕೇವಲ ಕಾಗದದ ಮೇಲೆ ಲೆಕ್ಕ ತೋರಿಸುವ ಹಳೆಯ ಪದ್ಧತಿಗೆ ಬ್ರೇಕ್ ಬೀಳಲಿದ್ದು, ಹಣವನ್ನು ಸರಿಯಾದ ಜಾಗದಲ್ಲಿಯೇ ಖರ್ಚು ಮಾಡಲಾಗುತ್ತದೆ. ಶ್ರೀ ಪವನ್ ಕಲ್ಯಾಣ್ ಅವರ ನಾಯಕತ್ವದಲ್ಲಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಗ್ರಾಮಸಭೆಗಳು, ಸಿಸಿ (ಸಿಮೆಂಟ್ ಕಾಂಕ್ರೀಟ್) ರಸ್ತೆಗಳು, ಗೋಶಾಲೆಗಳು, ನೀರಿನ ಟ್ಯಾಂಕ್ ಗಳು, ಪಂಪ್-ಕೊಳಗಳು ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ನಿರ್ಮಿಸಲಾದ ರಸ್ತೆಗಳನ್ನು ಉಲ್ಲೇಖಿಸಿದ ಅವರು, ಈ ಅನುಭವಗಳ ಆಧಾರದ ಮೇಲೆ, 'ವಿ.ಬಿ - ಜಿ ರಾಮ್ ಜಿ ಯೋಜನೆ'ಯನ್ನು ಈಗ ಅತ್ಯುತ್ತಮ ರೀತಿಯಲ್ಲಿ ಜಾರಿಗೊಳಿಸಲಾಗುವುದು ಮತ್ತು ಆಂಧ್ರಪ್ರದೇಶವನ್ನು ದೇಶದ ಮಾದರಿ ರಾಜ್ಯವನ್ನಾಗಿ ಮಾಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತೋಟಗಾರಿಕಾ ಹಬ್ ಗಾಗಿ ಬೃಹತ್ ಹೂಡಿಕೆ
ರಾಯಲಸೀಮೆ ಪ್ರದೇಶವನ್ನು ತೋಟಗಾರಿಕಾ ಹಬ್ (ಕೇಂದ್ರ) ಆಗಿ ಮಾಡುವ ತಮ್ಮ ದೃಷ್ಟಿಕೋನವನ್ನು ಮುಖ್ಯಮಂತ್ರಿಯವರು ಹಂಚಿಕೊಂಡರು. 'ಪೂರ್ವೋದಯ' ಕಾರ್ಯಕ್ರಮದಡಿ, ನೀರಾವರಿ ಯೋಜನೆಗಳು, ರಸ್ತೆ ಸಂಪರ್ಕ, ಉಗ್ರಾಣಗಳು ಮತ್ತು ಮೂಲಸೌಕರ್ಯಗಳ ಮೂಲಕ ರಾಯಲಸೀಮೆಯನ್ನು ದೇಶದ ಪ್ರಮುಖ ಹಣ್ಣು ಮತ್ತು ತೋಟಗಾರಿಕಾ ಕೇಂದ್ರವನ್ನಾಗಿ ಮಾಡಲು, ಸಾರ್ವಜನಿಕ ಅಥವಾ ಸರ್ಕಾರಿ ವಲಯದಿಂದ ಸುಮಾರು 40,000 ಕೋಟಿ ರೂ. ಹಾಗೂ ಖಾಸಗಿ ವಲಯದಿಂದ ಸುಮಾರು 60,000 ಕೋಟಿ ರೂ.ಗಳ ಹೂಡಿಕೆಯ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು. ಈ ದೃಷ್ಟಿಕೋನವನ್ನು 'ಸ್ವರ್ಣ ಆಂಧ್ರಪ್ರದೇಶ'ದತ್ತ ಇಟ್ಟ ನಿರ್ಣಾಯಕ ಹೆಜ್ಜೆ ಎಂದು ಬಣ್ಣಿಸಿದ ಅವರು, ಗ್ರಾಮೀಣ ಉದ್ಯೋಗ, ತೋಟಗಾರಿಕೆ, ಕೈಗಾರಿಕಾ ಹೂಡಿಕೆ ಮತ್ತು ಮೂಲಸೌಕರ್ಯ - ಇವೆಲ್ಲವೂ ಒಟ್ಟಾಗಿ ಸೇರಿ ಆಂಧ್ರಪ್ರದೇಶವನ್ನು ಮುಂಚೂಣಿ ರಾಜ್ಯವನ್ನಾಗಿ ಮಾಡಲು ಕೊಡುಗೆ ನೀಡಲಿವೆ ಎಂದರು.
ಸ್ವರ್ಣ ಆಂಧ್ರಪ್ರದೇಶಕ್ಕಾಗಿ ಅಮರಾವತಿ, ಪೋಲಾವರಂ ಮತ್ತು ಕೈಗಾರಿಕಾ ಹೂಡಿಕೆ
ಅಮರಾವತಿಯನ್ನು 'ದೇವರುಗಳ ರಾಜಧಾನಿ' ಎಂದು ಬಣ್ಣಿಸಿದ ಶ್ರೀ ಚಂದ್ರಬಾಬು ನಾಯ್ಡು ಅವರು, ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜಧಾನಿ ಯೋಜನೆ, ಪೋಲಾವರಂ, ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ, ಡೇಟಾ ಸೆಂಟರ್ ಗಳು ಮತ್ತು ಫೈಟರ್ ಜೆಟ್ ಯೋಜನೆಯಂತಹ ಯೋಜನೆಗಳ ಮೂಲಕ ಆಂಧ್ರಪ್ರದೇಶದ ಬ್ರಾಂಡ್ ಇಮೇಜ್ ಅನ್ನು ಮತ್ತೆ ಎತ್ತರಿಸಲಾಗಿದೆ ಎಂದು ಹೇಳಿದರು. "ಸೂಕ್ತ ನಾಯಕ, ಸೂಕ್ತ ಸ್ಥಳ, ಸೂಕ್ತ ಸಮಯ - ಅದೇ ಪ್ರಧಾನಿ ಶ್ರೀ ನರೇಂದ್ರ ಮೋದಿ" ಎಂದ ಅವರು, 2047ರ ವೇಳೆಗೆ ಭಾರತವನ್ನು ನಂಬರ್ ಒನ್ ದೇಶವನ್ನಾಗಿ ಮಾಡುವ ದೃಷ್ಟಿಕೋನದೊಂದಿಗೆ, ಸ್ವರ್ಣ ಆಂಧ್ರಪ್ರದೇಶದತ್ತಲೂ ಕಾರ್ಯಗಳು ವೇಗವಾಗಿ ಸಾಗುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ಮಾತನಾಡಿ, 'ವಿ.ಬಿ - ಜಿ ರಾಮ್ ಜಿ' ಯೋಜನೆಯಲ್ಲಿ ಕೆಲಸದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಿರುವುದು ಮಾತ್ರವಲ್ಲದೆ, ಕೆಲಸ ಲಭ್ಯವಿಲ್ಲದ ಸಂದರ್ಭದಲ್ಲಿ ನಿರುದ್ಯೋಗ ಭತ್ಯೆ ನೀಡುವ ಅವಕಾಶವೂ ಇದೆ ಎಂದು ಹೇಳಿದರು. ಇದು ಪ್ರತಿಯೊಬ್ಬ ಕಾರ್ಮಿಕನಿಗೂ ಕೆಲಸ ಸಿಗುವುದನ್ನು ಖಚಿತಪಡಿಸುತ್ತದೆ. ಮತ್ತೊಂದೆಡೆ, ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಶ್ರೀ ಕಮಲೇಶ್ ಪಾಸ್ವಾನ್ ಅವರು, 'ವಿ.ಬಿ - ಜಿ ರಾಮ್ ಜಿ ಯೋಜನೆ'ಯು ವಿಕಸಿತ ಭಾರತದ ಅಡಿಪಾಯವಾಗಲಿದೆ ಎಂದು ಹೇಳಿದರು. ಈ ಯೋಜನೆಯಡಿ 300ಕ್ಕೂ ಹೆಚ್ಚು ರೀತಿಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು, ಇದು ಗ್ರಾಮೀಣ ಭಾರತವನ್ನು ಸಶಕ್ತ ಮತ್ತು ಸಮೃದ್ಧವನ್ನಾಗಿ ಮಾಡುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಲಿದೆ. ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶ್ರೀ ರೋಹಿತ್ ಕನ್ಸಾಲ್ ಹಾಗೂ ಜಂಟಿ ಕಾರ್ಯದರ್ಶಿ ಶ್ರೀಮತಿ ರೋಹಿಣಿ ಆರ್. ಭಾಜಿಭಾಕರೆ ಉಪಸ್ಥಿತರಿದ್ದರು.
ಕೇಂದ್ರದ ಸಹಕಾರದಿಂದ ಆಂಧ್ರಪ್ರದೇಶಕ್ಕೆ ಹೆಚ್ಚಿನ ಬಲ
ಉಪಮುಖ್ಯಮಂತ್ರಿ ಶ್ರೀ ಪವನ್ ಕಲ್ಯಾಣ್ ಅವರು ಮಾತನಾಡಿ, "ಶಿವರಾಜ್ ಜೀ, ನಿಮ್ಮ 49 ವರ್ಷಗಳ ಸಾರ್ವಜನಿಕ ಜೀವನವು ರೈತರು ಮತ್ತು ಗ್ರಾಮೀಣ ಭಾರತದ ಮೇಲಿನ ನಿಮ್ಮ ಸಮರ್ಪಣೆ ಹಾಗೂ ಸಾರ್ವಜನಿಕ ಸೇವೆಯ ಸಂಕೇತವಾಗಿದೆ. ಆರು ಬಾರಿ ಸಂಸದರಾಗಿ ಮತ್ತು ನಾಲ್ಕು ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನೀವು ದೇಶಕ್ಕೆ ಸೇವೆ ಸಲ್ಲಿಸಿ ಸ್ಪೂರ್ತಿದಾಯಕ ಉದಾಹರಣೆಯನ್ನು ಸ್ಥಾಪಿಸಿದ್ದೀರಿ. ಪ್ರಜಾಪ್ರಭುತ್ವವನ್ನು ರಕ್ಷಿಸಲು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನೀವು ನಡೆಸಿದ ಹೋರಾಟ ಮತ್ತು ಜೈಲುವಾಸ ನಮ್ಮೆಲ್ಲರಿಗೂ ಸ್ಫೂರ್ತಿಯ ಮೂಲವಾಗಿದೆ. ನಿಮ್ಮ ಮಾರ್ಗದರ್ಶನ ಮತ್ತು ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ, ಆಂಧ್ರಪ್ರದೇಶವು ಗ್ರಾಮೀಣಾಭಿವೃದ್ಧಿಗಾಗಿ 12,845 ಕೋಟಿ ರೂ.ಗಳ ಅನುಮೋದನೆಯನ್ನು ಪಡೆದಿದೆ. ನಿಮ್ಮ ಸಹಕಾರದಿಂದ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಬಲಗೊಂಡಿದೆ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸಸಿ ನೆಡುವ ಕಾರ್ಯವೂ ಸೇರಿದಂತೆ ಹಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ಪ್ರಗತಿ ಹೊಂದಿವೆ, ಹಾಗೂ ಆಂಧ್ರಪ್ರದೇಶವು ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (RGSA) ರಾಷ್ಟ್ರೀಯ ಶ್ರೇಯಾಂಕದಲ್ಲಿ 24ನೇ ಸ್ಥಾನದಿಂದ 1ನೇ ಸ್ಥಾನಕ್ಕೆ ತಲುಪಿದೆ. 'ವಿ.ಬಿ - ಜಿ ರಾಮ್ ಜಿ' ಯೋಜನೆಯ ರಾಷ್ಟ್ರೀಯ ಉದ್ಘಾಟನೆಗಾಗಿ ಆಂಧ್ರಪ್ರದೇಶವನ್ನು ಆಯ್ಕೆ ಮಾಡುವ ಮೂಲಕ, ನೀವು ನಮ್ಮ ರಾಜ್ಯದ ಪ್ರತಿಯೊಬ್ಬ ಪ್ರಜೆಯ ಗೌರವವನ್ನು ಹೆಚ್ಚಿಸಿದ್ದೀರಿ" ಎಂದು ಅವರು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ, ಮುಖ್ಯಮಂತ್ರಿ ಶ್ರೀ ನಾಯ್ಡು ಮತ್ತು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕೃಷಿ ಹೊಂಡದ ಸ್ಥಳಕ್ಕೆ ಆಗಮಿಸಿ, ಪೂಜೆ ಮತ್ತು ಭೂಮಿ ಪೂಜೆ ನೆರವೇರಿಸಿದರು. ನಂತರ ಸಸಿಗಳನ್ನು ನೆಟ್ಟು, 'ಮ್ಯಾಜಿಕ್ ಡ್ರೈನ್' ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು ಮತ್ತು ಆಂಧ್ರಪ್ರದೇಶದ ಸಾಧನೆಗಳು ಹಾಗೂ ಉಪಕ್ರಮಗಳ ಕುರಿತಾದ ವಸ್ತುಪ್ರದರ್ಶನವನ್ನು ವೀಕ್ಷಿಸಿದರು.
*****
(रिलीज़ आईडी: 2280543)
आगंतुक पटल : 27