ಜವಳಿ ಸಚಿವಾಲಯ
azadi ka amrit mahotsav

ಭಾರತದ ಅತಿ ದೊಡ್ಡ ಜಾಗತಿಕ ಜವಳಿ ಪ್ರದರ್ಶನ ‘ಭಾರತ್ ಟೆಕ್ಸ್ 2026’ ಕ್ಕೆ ಕ್ಷಣಗಣನೆ ಆರಂಭ


‘ಭಾರತ್ ಟೆಕ್ಸ್ 2026: ಭಾರತೀಯ ಜವಳಿ ಶ್ರೇಷ್ಠತೆಯನ್ನು ಜಾಗತಿಕ ಬೆಳವಣಿಗೆಯ ಜೊತೆ ಜೋಡಿಸುವುದು’

प्रविष्टि तिथि: 02 JUL 2026 4:28PM by PIB Bengaluru

ಭಾರತದ ಅತಿ ದೊಡ್ಡ ಜಾಗತಿಕ ಜವಳಿ ಮೇಳವಾದ ‘ಭಾರತ್ ಟೆಕ್ಸ್ 2026’ ಜುಲೈ 14 ರಿಂದ 17 ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದ್ದು, ಇದು ಭಾರತದ ಜವಳಿ ಉದ್ಯಮದ ಸಂಪೂರ್ಣ ಆಳ ಮತ್ತು ಅಗಲವನ್ನು ಒಂದೇ ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲಿದೆ. ಜವಳಿ ರಫ್ತು ಉತ್ತೇಜನಾ ಮಂಡಳಿಗಳು ಮತ್ತು ಉದ್ಯಮ ಸಂಸ್ಥೆಗಳ ಒಕ್ಕೂಟವಾದ ‘ಭಾರತ್ ಟೆಕ್ಸ್ ಟ್ರೇಡ್ ಫೆಡರೇಶನ್’ ವತಿಯಿಂದ, ಭಾರತ ಸರ್ಕಾರದ ಜವಳಿ ಸಚಿವಾಲಯದ ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನವು ಜವಳಿ, ಫ್ಯಾಷನ್, ಸುಸ್ಥಿರತೆ, ತಂತ್ರಜ್ಞಾನ, ನಾವೀನ್ಯತೆ, ಹೂಡಿಕೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಭಾರತದ ಬೆಳೆಯುತ್ತಿರುವ ಜಾಗತಿಕ ನಾಯಕತ್ವವನ್ನು ತೋರಿಸುತ್ತವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 5ಎಫ್ ವಿಷನ್  - ಫಾರ್ಮ್ ಟು ಫೈಬರ್ ಟು ಫ್ಯಾಕ್ಟರಿ ಟು ಫ್ಯಾಷನ್ ಟು ಫಾರಿನ್  (ಹೊಲದಿಂದ ನೂಲಿಗೆ, ನೂಲಿನಿಂದ ಕಾರ್ಖಾನೆಗೆ, ಕಾರ್ಖಾನೆಯಿಂದ ಫ್ಯಾಷನ್ ಗೆ, ಫ್ಯಾಷನ್ ನಿಂದ ವಿದೇಶಕ್ಕೆ) ನಿಂದ ಪ್ರೇರಿತವಾದ ಭಾರತ್ ಟೆಕ್ಸ್ 2026, ಇಡೀ ಜವಳಿ ಉದ್ಯಮದಲ್ಲಿ ವ್ಯಾಪಾರ, ಹೂಡಿಕೆ, ಪಡೆಯುವಿಕೆ, ನಾವೀನ್ಯತೆ, ನೀತಿ ಸಂವಾದ ಮತ್ತು ಕಾರ್ಯತಂತ್ರದ ಪಾಲುದಾರಿಕೆಗೆ ಒಂದು ಪ್ರಮುಖ ಜಾಗತಿಕ ವೇದಿಕೆಯಾಗಿ ಹೊರಹೊಮ್ಮಿದೆ. ಈ ಕಾರ್ಯಕ್ರಮವು ಜವಳಿ ತಯಾರಕರು, ರಫ್ತುದಾರರು, ಜಾಗತಿಕ ಖರೀದಿದಾರರು, ಬ್ರ್ಯಾಂಡ್ ಗಳು, ಸೋರ್ಸಿಂಗ್ ಸಲಹೆಗಾರರು, ಹೂಡಿಕೆದಾರರು, ನೀತಿ ನಿರೂಪಕರು, ರಾಜ್ಯಗಳು, ಅಂತರರಾಷ್ಟ್ರೀಯ ನಿಯೋಗಗಳು, ವಿನ್ಯಾಸಕರು, ಕುಶಲಕರ್ಮಿಗಳು, ನವೋದ್ಯಮಗಳು ಮತ್ತು ತಂತ್ರಜ್ಞಾನ ಪೂರೈಕೆದಾರರನ್ನು ಒಟ್ಟುಗೂಡಿಸುತ್ತದೆ.

ಈ ಮೂರನೇ ಆವೃತ್ತಿಯಲ್ಲಿ 7,000ಕ್ಕೂ ಹೆಚ್ಚು ಖರೀದಿದಾರರು, 1.3 ಲಕ್ಷಕ್ಕೂ ಹೆಚ್ಚು ವ್ಯಾಪಾರಿ ಸಂದರ್ಶಕರು ಭಾಗವಹಿಸುವ ನಿರೀಕ್ಷೆಯಿದ್ದು, 1.6 ದಶಲಕ್ಷ ಚದರ ಅಡಿ ವಿಸ್ತೀರ್ಣದ ಪ್ರದರ್ಶನದಲ್ಲಿ 20,000 ಕ್ಕೂ ಹೆಚ್ಚು ಜವಳಿ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು. ಇದು ಕಾರ್ಯಕ್ರಮದ ಅವಧಿಯಲ್ಲಿ ಮಹತ್ವದ ವಾಣಿಜ್ಯ ಒಪ್ಪಂದಗಳಿಗೆ ದಾರಿ ಮಾಡಿಕೊಡಲಿದೆ.

ಈ ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ದೇಶಗಳ ಅಂತರರಾಷ್ಟ್ರೀಯ ತಜ್ಞರು, ರಾಷ್ಟ್ರೀಯ ಉದ್ಯಮ ಮುಖಂಡರು, ಸಿಎಕ್ಸ್ಒಗಳು  , ನೀತಿ ನಿರೂಪಕರು ಮತ್ತು ಚಿಂತಕರು ಸೇರಿದಂತೆ 350 ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸಲಿದ್ದಾರೆ. ಜೊತೆಗೆ ಜಾಗತಿಕ ಸಹಭಾಗಿತ್ವವನ್ನು ಹೆಚ್ಚಿಸಲು ಮತ್ತು ಗಡಿಯಾಚೆಗಿನ ವ್ಯವಹಾರವನ್ನು ಸುಲಭಗೊಳಿಸಲು ಪ್ರತ್ಯೇಕ 'ಅಂತರರಾಷ್ಟ್ರೀಯ ಪೆವಿಲಿಯನ್' ಅನ್ನು ವಿನ್ಯಾಸಗೊಳಿಸಲಾಗಿದೆ. ಅಮೆರಿಕ, ಯುನೈಟೆಡ್ ಕಿಂಗ್ಡಮ್, ಜರ್ಮನಿ, ಸ್ಪೇನ್, ಇಟಲಿ, ನೆದರ್ ಲ್ಯಾಂಡ್ಸ್ , ಬೆಲ್ಜಿಯಂ, ಕೆನಡಾ, ಪೋರ್ಚುಗಲ್, ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ದಕ್ಷಿಣ ಕೊರಿಯಾ, ಥೈಲ್ಯಾಂಡ್, ಶ್ರೀಲಂಕಾ, ಹಾಂಗ್ ಕಾಂಗ್, ಸ್ವೀಡನ್, ಕೀನ್ಯಾ, ಬಾಂಗ್ಲಾದೇಶ, ವಿಯೆಟ್ನಾಂ, ಈಜಿಪ್ಟ್ ಮತ್ತು ಇಂಡೋನೇಷ್ಯಾದ ತಜ್ಞರು ಈ ಚರ್ಚೆಗಳಿಗೆ ಕೊಡುಗೆ ನೀಡಲಿದ್ದಾರೆ.

ಈ ಆವೃತ್ತಿಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ಎಂಟು ರಾಜ್ಯಗಳು ಪ್ರಾಯೋಜಕ ರಾಜ್ಯಗಳಾಗಿ ಭಾಗವಹಿಸುತ್ತಿವೆ. ಇದರೊಂದಿಗೆ ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್ ಗಢ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಮಣಿಪುರ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರದರ್ಶಕರಾಗಿ ಭಾಗವಹಿಸುತ್ತಿವೆ. ಈ ರಾಜ್ಯಗಳ ಭಾಗವಹಿಸುವಿಕೆಯು ಭಾರತದ ಪ್ರಾದೇಶಿಕ ಜವಳಿ ವ್ಯವಸ್ಥೆ, ಹೂಡಿಕೆ ಅವಕಾಶಗಳು, ಕೈಗಾರಿಕಾ ಕ್ಲಸ್ಟರ್ ಸಾಮರ್ಥ್ಯಗಳು, ಉತ್ಪಾದನಾ ಮೂಲಸೌಕರ್ಯ ಮತ್ತು ನೀತಿ ಮತ್ತು ನಿಯಂತ್ರಕ ಬೆಂಬಲವನ್ನು ಪ್ರದರ್ಶಿಸಲಿದೆ.

ಪ್ರದರ್ಶನದಲ್ಲಿ, ಭಾರತ್ ಟೆಕ್ಸ್ 2026 ಭಾರತದ ಸಂಪೂರ್ಣ ಜವಳಿ ಮೌಲ್ಯ ಸರಪಳಿಯ ಸಮಗ್ರ ಪ್ರದರ್ಶನವನ್ನು ಪ್ರಸ್ತುತಪಡಿಸಲಿದೆ. ನೂಲು, ಬಟ್ಟೆ, ಸಿದ್ಧ ಉಡುಪುಗಳು ಮತ್ತು ಫ್ಯಾಷನ್, ಗೃಹ ಜವಳಿ,  ತಾಂತ್ರಿಕ ಜವಳಿ ಮತ್ತು ಪೂರಕ ಉದ್ಯಮಗಳಿಗೆ ಸಂಬಂಧಿಸಿದಂತೆ 1,600ಕ್ಕೂ ಹೆಚ್ಚು ಪ್ರದರ್ಶಕರು ಇಲ್ಲಿ ಭಾಗವಹಿಸಲಿದ್ದಾರೆ. ಭಾರತದ ಪ್ರಮುಖ ಜವಳಿ ಕ್ಲಸ್ಟರ್ ಗಳಾದ ತಿರುಪುರ್, ಇಚಲಕರಂಜಿ ಮತ್ತು ಅಹಮದಾಬಾದ್ ಮುಂತಾದವುಗಳ ವೈಶಿಷ್ಟ್ಯಗಳನ್ನು ಆಚರಿಸುವುದು ಮತ್ತು ಪ್ರದರ್ಶಿಸುವುದು ಈ ಪ್ರದರ್ಶನದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ಆವೃತ್ತಿಯಲ್ಲಿ ಅಮೆರಿಕ, ಯುನೈಟೆಡ್ ಕಿಂಗ್ಡಮ್, ಜಪಾನ್, ಪೋರ್ಚುಗಲ್, ಸ್ಪೇನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ನೇಪಾಳ ಸೇರಿದಂತೆ 14 ದೇಶಗಳ ಅಂತರರಾಷ್ಟ್ರೀಯ ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಜೊತೆಗೆ, ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಯೂನಿಯನ್ನಿಂದ ಬಲವಾದ ಸಾಂಸ್ಥಿಕ ಪ್ರಾತಿನಿಧ್ಯವಿದೆ. ಟ್ರೈಡೆಂಟ್, ವರ್ಧಮಾನ್ ಟೆಕ್ಸ್ಟೈಲ್ಸ್, ಆರ್ ಎಸ್ ಡಬ್ಲ್ಯೂಎಂ, ಶಾಹಿ ಎಕ್ಸ್ಪೋರ್ಟ್ಸ್, ಕಲರ್ ಜೆಟ್, ಅರವಿಂದ್, ಪಿಡಿಎಸ್ ಲಿಮಿಟೆಡ್ ಮತ್ತು ಸತ್ತ್ವ ಸೇರಿದಂತೆ ಪ್ರಮುಖ ಉದ್ಯಮ ಸಂಸ್ಥೆಗಳು ಪ್ರಾಯೋಜಕರಾಗಿ ಭಾಗವಹಿಸುತ್ತಿದ್ದು, ಇದು ಭಾರತ್ ಟೆಕ್ಸ್ ಭಾರತದ ಅತಿ ದೊಡ್ಡ ಜಾಗತಿಕ ಜವಳಿ ಪ್ರದರ್ಶನ ಎನ್ನುವುದನ್ನು ಎತ್ತಿಹಿಡಿಯುತ್ತದೆ.

ಹೆಚ್ಚುವರಿಯಾಗಿ, ಈ ಮೂರನೇ ಆವೃತ್ತಿಯಲ್ಲಿ 100ಕ್ಕೂ ಹೆಚ್ಚು ಜ್ಞಾನ ಪರಿಚಯದ ಕಾರ್ಯಕ್ರಮದ ಅವಧಿಗಳನ್ನು  ಹಮ್ಮಿಕೊಳ್ಳಲಾಗಿದ್ದು, ಇದು ಹಿಂದಿನ ಆವೃತ್ತಿಗಿಂತ ಗಣನೀಯವಾಗಿ ಹೆಚ್ಚಾಗಿದೆ. ಇವುಗಳಲ್ಲಿ 39 ಪ್ಯಾನೆಲ್ ಚರ್ಚೆಗಳು, 16 ದುಂಡುಮೇಜಿನ ಸಭೆಗಳು, 37 ಮಾಸ್ಟರ್ ಕ್ಲಾಸ್ಗಳು, 8 ರಾಜ್ಯಗಳ ವಿಶೇಷ ಅವಧಿಗಳು ಮತ್ತು ಇತರ ವಿಶೇಷ ಕಾರ್ಯಕ್ರಮಗಳು ಸೇರಿವೆ. ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಲು 50 ಕ್ಕೂ ಹೆಚ್ಚು ಪಾಲುದಾರ ಸಂಸ್ಥೆಗಳನ್ನು ಸೇರಿಸಿಕೊಳ್ಳಲಾಗಿದೆ. ವ್ಯಾಪಾರ ಮತ್ತು ಹೂಡಿಕೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಸುಸ್ಥಿರತೆ ಮತ್ತು ಮರುಬಳಕೆ, ಫ್ಯಾಷನ್ ಮತ್ತು ಕ್ರಾಫ್ಟ್, ಹಾಗೂ ನೀತಿ ವಿಷಯಗಳು ಇಲ್ಲಿನ ಪ್ರಮುಖ ವಿಷಯಗಳಾಗಿವೆ. ಈ ಅವಧಿಗಳು ಜವಳಿ ಉದ್ಯಮ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮತ್ತು ರಫ್ತು ಸಿದ್ಧತೆ, ಸುಸ್ಥಿರತೆಯ ನಿಯಮಗಳು, ಇಂಡಸ್ಟ್ರಿ 5.0, ನೂಲಿನ ಭದ್ರತೆ, ಉತ್ಪನ್ನ ನಾವೀನ್ಯತೆ, ಜಾಗತಿಕ ಸೋರ್ಸಿಂಗ್ ಟ್ರೆಂಡ್ ಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಗಮನ ಹರಿಸಲಿವೆ. ಇದು ಎಂಎಸ್ಎಂಇ   ಮತ್ತು ಹೊಸ ರಫ್ತುದಾರರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮವಾಗಿ ಸ್ಪರ್ಧಿಸಲು ಸಹಾಯ ಮಾಡುತ್ತದೆ.

ಈ ಸಂದರ್ಭದಲ್ಲಿ ಸುಮಾರು 3,500 ಆಯ್ಕೆ ಮಾಡಿದ ಬಿ2ಬಿ  ಸಭೆಗಳು, 100ಕ್ಕೂ ಹೆಚ್ಚು ಬಿ2ಜಿ  ಸಭೆಗಳು ನಡೆಯುವ ನಿರೀಕ್ಷೆಯಿದೆ. ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಸುಸ್ಥಿರತೆ, ಮಾರುಕಟ್ಟೆ ಪ್ರವೇಶ ಮತ್ತು ಸಾಂಸ್ಥಿಕ ಸಹಯೋಗದಾದ್ಯಂತ 20ಕ್ಕೂ ಹೆಚ್ಚು ತಿಳುವಳಿಕಾ ಪತ್ರಗಳಿಗೆ   ಸಹಿ ಹಾಕಲಾಗುವುದು. ಈ ಒಪ್ಪಂದಗಳು ರಫ್ತುದಾರರು, ತಯಾರಕರು, ಖರೀದಿದಾರರು, ಪೂರೈಕೆದಾರರು, ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಪಾಲುದಾರರಿಗೆ ಸ್ಪಷ್ಟ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವು ಹೂಡಿಕೆ ಉತ್ತೇಜನ, ಜಾಗತಿಕ ಸೋರ್ಸಿಂಗ್ ಪಾಲುದಾರಿಕೆ, ಎಂಎಸ್ ಎಂಇ ಏಕೀಕರಣ, ತಾಂತ್ರಿಕ ಜವಳಿ ಉದ್ಯಮದ ಬೆಳವಣಿಗೆ, ಸುಸ್ಥಿರ ಉತ್ಪಾದನೆ ಮತ್ತು ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ 'ಬ್ರ್ಯಾಂಡ್ ಇಂಡಿಯಾ' ಸ್ಥಾನವನ್ನು ಬಲಪಡಿಸಲು ಪ್ರಮುಖ ಉತ್ತೇಜನ ನೀಡಲಿದೆ.

ಸರ್ಕಾರಗಳು, ಉದ್ಯಮ ಸಂಸ್ಥೆಗಳು ಮತ್ತು ಜಾಗತಿಕ ಜವಳಿ ಪಾಲುದಾರರಿಂದ ಹೆಚ್ಚುತ್ತಿರುವ ಆಸಕ್ತಿಯೊಂದಿಗೆ ಭಾರತ್ ಟೆಕ್ಸ್ ನ ಅಂತರರಾಷ್ಟ್ರೀಯ ರೂಪವನ್ನು ನಿರಂತರವಾಗಿ ವಿಸ್ತರಿಸುತ್ತಿದೆ. ನ್ಯೂಜಿಲೆಂಡ್, ಶ್ರೀಲಂಕಾ, ಜೋರ್ಡಾನ್, ಕಾಂಬೋಡಿಯಾ ಮತ್ತು ಬ್ರೂನೈ ಸೇರಿದಂತೆ ಹಲವು ದೇಶಗಳ ಸಚಿವರ ಮಟ್ಟದ ನಿಯೋಗಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ್ದು, ಇದು ಅಂತರರಾಷ್ಟ್ರೀಯ ನೀತಿ ಸಂವಾದ ಮತ್ತು ದ್ವಿಪಕ್ಷೀಯ ಸಹಕಾರಕ್ಕೆ ಭಾರತ್ ಟೆಕ್ಸ್ ಒಂದು ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿರುವುದನ್ನು ಬಿಂಬಿಸುತ್ತದೆ.

ಸಮಾನಾಂತರವಾಗಿ, ಅಮೆರಿಕ, ಜಪಾನ್, ಸ್ಪೇನ್, ಯುನೈಟೆಡ್ ಕಿಂಗ್ಡಮ್, ಪೋರ್ಚುಗಲ್, ರಷ್ಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಯುನೈಟೆಡ್ ಅರಬ್ ಎಮಿರೇಟ್ಸ್, ಥೈಲ್ಯಾಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಉಗಾಂಡಾ ಸೇರಿದಂತೆ ಇನ್ನಿತರ ದೇಶಗಳ ಉದ್ಯಮ ಮತ್ತು ವಾಣಿಜ್ಯ ನಿಯೋಗಗಳು ಭಾಗವಹಿಸುವ ನಿರೀಕ್ಷೆಯಿದೆ. ಇದು ಜಾಗತಿಕ ಜವಳಿ ಮೌಲ್ಯ ಸರಪಳಿಯಲ್ಲಿ ವ್ಯಾಪಾರ, ಸೋರ್ಸಿಂಗ್ (ಪಡೆಯುವಿಕೆ)  ಮತ್ತು ಹೂಡಿಕೆ ಪಾಲುದಾರಿಕೆಗೆ ಗಮನಾರ್ಹ ಅವಕಾಶಗಳನ್ನು ಸೃಷ್ಟಿಸುತ್ತದೆ. ಪ್ರತಿಯೊಂದು ನಿಯೋಗದ ನಿರ್ದಿಷ್ಟ ಅಗತ್ಯತೆಗಳಿಗೆ ಅನುಗುಣವಾಗಿ, ದ್ವಿಪಕ್ಷೀಯ ವ್ಯಾಪಾರ ಆದ್ಯತೆಗಳು ಮತ್ತು ಹಂಚಿಕೆಯ ಉದ್ಯಮ ಹಿತಾಸಕ್ತಿಗಳಿಗೆ ಹೊಂದಿಕೆಯಾಗುವಂತೆ ಈ ಸಭೆಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ಅವಧಿಗಳು ಭಾರತ-ಅಮೆರಿಕ ಹತ್ತಿ ಪಾಲುದಾರಿಕೆ, ಭಾರತ-ನ್ಯೂಜಿಲೆಂಡ್ ಉಣ್ಣೆ ಪರಿಸರ ವ್ಯವಸ್ಥೆ, ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿ ಎ) , ಜಪಾನ್ ನಿಯೋಗದ ಸಭೆ ಮತ್ತು ರಷ್ಯಾ-ಕೇಂದ್ರಿತ ಜವಳಿ ಚರ್ಚೆಗಳಂತಹ ವಿಷಯಗಳನ್ನು ಒಳಗೊಂಡಿರುತ್ತವೆ.

ಈ ಆವೃತ್ತಿಯ ಮತ್ತೊಂದು ಗಮನಾರ್ಹ  ವೈಶಿಷ್ಟ್ಯವೆಂದರೆ 'ರಾಜ್ಯ ಹೂಡಿಕೆದಾರರ ಸಂಪರ್ಕ ಅಧಿವೇಶನಗಳು'. ಈ ಅಧಿವೇಶನಗಳು ರಾಜ್ಯಗಳಿಗೆ ತಮ್ಮ ಹೂಡಿಕೆ ಅವಕಾಶಗಳು, ಕೈಗಾರಿಕಾ ಮೂಲಸೌಕರ್ಯಗಳು, ʻಪಿಎಂ ಮಿತ್ರʼ ಸಂಪರ್ಕಗಳು, ನೀತಿ ಬೆಂಬಲ ಮತ್ತು ವಲಯದ ಸಾಮರ್ಥ್ಯಗಳನ್ನು ಪ್ರಸ್ತುತಪಡಿಸಲು ವೇದಿಕೆಯನ್ನು ಒದಗಿಸುತ್ತವೆ. ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಬಿಹಾರ, ಮಹಾರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ವಿಶೇಷ ಅಧಿವೇಶನಗಳನ್ನು ಯೋಜಿಸಲಾಗಿದೆ. ಇದರೊಂದಿಗೆ ಗುಜರಾತ್ ಮತ್ತು ಉತ್ತರ ಪ್ರದೇಶದ 'ಪಿಎಂ ಮಿತ್ರ ಮಾಸ್ಟರ್ ಡೆವಲಪರ್' ಅವಧಿಯೂ ನಡೆಯಲಿದೆ. ಈ ಅವಧಿಗಳು ಕೇಂದ್ರ-ರಾಜ್ಯ-ಉದ್ಯಮದ ನಡುವಿನ ಸಹಯೋಗವನ್ನು ಬಲಪಡಿಸಲು, ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಜವಳಿ ಉತ್ಪಾದನಾ ವ್ಯವಸ್ಥೆಯ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡಲಿವೆ.

ಭಾರತ್ ಟೆಕ್ಸ್ 2026 ಪ್ರದರ್ಶನವು 'ಸಿಐಟಿಐ ಜವಳಿ ಸುಸ್ಥಿರತೆ ಪ್ರಶಸ್ತಿಗಳು 2026' ಅನ್ನು ಸಹ ಆಯೋಜಿಸಲಿದೆ. ಇದು ಸಂಪನ್ಮೂಲ ದಕ್ಷತೆ, ಇಂಧನ ಮತ್ತು ಹೊರಸೂಸುವಿಕೆ, ವೃತ್ತಾಕಾರದ ಆರ್ಥಿಕತೆ , ಸುಸ್ಥಿರ ವಸ್ತುಗಳು, ಸಾಮಾಜಿಕ ಜವಾಬ್ದಾರಿ, ಜವಾಬ್ದಾರಿಯುತ ವ್ಯವಹಾರ ಮತ್ತು ಉದ್ಯಮ ಸಹಯೋಗ ಎಂಬ ಏಳು ಪ್ರಮುಖ ಕ್ಷೇತ್ರಗಳ ಸುತ್ತ ರಚಿತವಾಗಿದೆ. ಇದು ನೀರು ಮತ್ತು ವಸ್ತುಗಳ ಸಂರಕ್ಷಣೆ, ನವೀಕರಿಸಬಹುದಾದ ಇಂಧನ ಅಳವಡಿಕೆಯಿಂದ ಹಿಡಿದು ನಾವೀನ್ಯತೆ, ನೈತಿಕ ಪೂರೈಕೆ ಸರಪಳಿಗಳು ಮತ್ತು ಕ್ಲಸ್ಟರ್ ಮಟ್ಟದ ಪಾಲುದಾರಿಕೆಗಳವರೆಗೆ ಇಡೀ ಜವಳಿ ಉದ್ಯಮದಲ್ಲಿನ ಸುಸ್ಥಿರ ಮತ್ತು ಜವಾಬ್ದಾರಿಯುತ ಅಭ್ಯಾಸಗಳ ಸಂಪೂರ್ಣ ಚಿತ್ರಣವನ್ನು ಬಿಂಬಿಸುತ್ತದೆ.

ಡಿಜಿಟಲ್ ಸಬಲೀಕರಣವನ್ನು ಬಲಪಡಿಸಲು, ಇತ್ತೀಚೆಗೆ 'ಭಾರತ್ ಟೆಕ್ಸ್ 2026 ಮೊಬೈಲ್ ಆ್ಯಪ್ ' ಅನ್ನು ಪ್ರದರ್ಶಕರು, ಖರೀದಿದಾರರು, ಪ್ರತಿನಿಧಿಗಳು, ಭಾಷಣಕಾರರು ಮತ್ತು ಸಂದರ್ಶಕರಿಗಾಗಿ ಒಂದು ಏಕೀಕೃತ ಡಿಜಿಟಲ್ ಒಡನಾಡಿಯಾಗಿ ಪ್ರಾರಂಭಿಸಲಾಗಿದೆ. ಈ ಆ್ಯಪ್ ಮೂಲಕ ಸುಲಭವಾಗಿ ಕಾರ್ಯಕ್ರಮದ ನ್ಯಾವಿಗೇಷನ್, ಪ್ರದರ್ಶಕರ ಹುಡುಕಾಟ, ಬಿ2ಬಿ ಸಭೆಗಳ ವೇಳಾಪಟ್ಟಿ, ಡಿಜಿಟಲ್ ಬ್ಯಾಡ್ಜ್ ಪ್ರವೇಶ, ಕ್ಯೂಆರ್   ಆಧಾರಿತ ಲೀಡ್ ಕ್ಯಾಪ್ಚರ್, ಲೈವ್ ಕಾರ್ಯಸೂಚಿ ಪ್ರವೇಶ ಮತ್ತು ಎಐ  ಚಾಲಿತ ಸಹಾಯವನ್ನು ಪಡೆಯಬಹುದು. ಈ ಆ್ಯಪ್   ಖರೀದಿದಾರರು, ಪ್ರತಿನಿಧಿಗಳು ಮತ್ತು ಪ್ರದರ್ಶಕರಿಗೆ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲು, ಸಭೆಗಳನ್ನು ನಿರ್ವಹಿಸಲು, ಮಳಿಗೆಗಳನ್ನು ಪತ್ತೆಹಚ್ಚಲು, ನೆಲದ ನಕ್ಷೆಗಳನ್ನು  ವೀಕ್ಷಿಸಲು, ನೈಜ-ಸಮಯದ ನವೀಕರಣಗಳನ್ನು ಪಡೆಯಲು ಮತ್ತು ಕಾರ್ಯಕ್ರಮದ ನಂತರದ ಸಂಪರ್ಕಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಭೇಟಿ ನೀಡಲು ಯಾರಾದರೂ ಆ್ಯಪ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಆ್ಯಪ್ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿhttps://onelink.to/zcrm4s ಅಥವಾ ಭಾರತ್ ಟೆಕ್ಸ್ ನ ಅಧಿಕೃತ ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳಬಹುದು: @https://bharat-tex.com/general-visitor-registration/

'ಪ್ರೀ-ಫೇರ್ ಡೈರೆಕ್ಟರಿ' ಕಾರ್ಯಕ್ರಮಕ್ಕೂ ಮುನ್ನವೇ ಖರೀದಿದಾರ ಮತ್ತು ಮಾರಾಟಗಾರರ ನಡುವೆ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡುತ್ತದೆ. ಈ ಡೈರೆಕ್ಟರಿಯು ಖರೀದಿದಾರರು, ಪ್ರದರ್ಶಕರು ಮತ್ತು ಸೋರ್ಸಿಂಗ್ ಸಲಹೆಗಾರರಿಗೆ ಸಂಬಂಧಿತ ಕಂಪನಿಗಳು, ಉತ್ಪನ್ನ ವಿಭಾಗಗಳು ಮತ್ತು ವ್ಯಾಪಾರ ಪಾಲುದಾರರನ್ನು ಮುಂಚಿತವಾಗಿಯೇ ಗುರುತಿಸಲು ಸಹಾಯ ಮಾಡುತ್ತದೆ. ಇದರಿಂದ ಕಾರ್ಯಕ್ರಮದ ಸಮಯದಲ್ಲಿ ಹೆಚ್ಚು ಉತ್ಪಾದಕ ಸಭೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ, ಮೊಬೈಲ್ ಆ್ಯಪ್ ಮತ್ತು ಪ್ರೀ-ಫೇರ್ ಡೈರೆಕ್ಟರಿಗಳು ಭಾರತ್ ಟೆಕ್ಸ್ 2026 ಅನ್ನು ಹೆಚ್ಚು ಡಿಜಿಟಲ್ ಸಕ್ರಿಯ, ದತ್ತಾಂಶ ಚಾಲಿತ ಮತ್ತು ವ್ಯಾಪಾರ ಕೇಂದ್ರಿತ ವ್ಯಾಪಾರ ವೇದಿಕೆಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ.

ಭಾರತ್ ಟೆಕ್ಸ್ 2026 ಜಾಗತಿಕ ಜವಳಿ ಸಮುದಾಯಕ್ಕೆ ತನ್ನ ಬಾಗಿಲುಗಳನ್ನು ತೆರೆಯುತ್ತಿರುವಾಗ, ಇದು ಕೇವಲ ಭಾರತದ ಜವಳಿ ಸಾಮರ್ಥ್ಯಗಳನ್ನು ಪ್ರದರ್ಶಿಸುವುದಷ್ಟೇ ಅಲ್ಲ; ಜಾಗತಿಕವಾಗಿ ಸ್ಪರ್ಧಾತ್ಮಕ, ಚೇತರಿಕೆ ಮತ್ತು ಸುಸ್ಥಿರ ಜವಳಿ ಮೌಲ್ಯ ಸರಪಳಿಗಳನ್ನು ನಿರ್ಮಿಸುವ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ. ಜೊತೆಗೆ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಪಾಲುದಾರಿಕೆ ಮತ್ತು ನಾವೀನ್ಯತೆಗಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದು ಜಾಗತಿಕ ಜವಳಿ ಬೆಳವಣಿಗೆಯ ಮುಂದಿನ ಹಂತವನ್ನು ರೂಪಿಸುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ. ಸರ್ಕಾರಗಳು, ಉದ್ಯಮ ಮುಖಂಡರು, ರಫ್ತುದಾರರು, ನೀತಿ ನಿರೂಪಕರು, ಹೂಡಿಕೆದಾರರು, ನಾವೀನ್ಯಕಾರರು, ವಿನ್ಯಾಸಕರು, ಖರೀದಿದಾರರು ಮತ್ತು ತಯಾರಕರನ್ನು ಒಂದೇ ವೇದಿಕೆಗೆ ತರುವ ಮೂಲಕ, ಭಾರತ್ ಟೆಕ್ಸ್ 2026 ಅಂತರರಾಷ್ಟ್ರೀಯ ಪಾಲುದಾರಿಕೆಯನ್ನು ಗಂಭೀರಗೊಳಿಸಲು, ಹೊಸ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಮುಕ್ತಗೊಳಿಸಲು, ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ವೇಗಗೊಳಿಸಲು ಮತ್ತು ಜಾಗತಿಕ ಜವಳಿ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ವಿಶ್ವಾಸಾರ್ಹ ಮತ್ತು ಆದ್ಯತೆಯ ಪಾಲುದಾರನಾಗಿ ಬಲಪಡಿಸಲು ಶ್ರಮಿಸುತ್ತದೆ. ಈ ಕಾರ್ಯಕ್ರಮವು ಜಾಗತಿಕ ಜವಳಿ ಉದ್ಯಮದ ಭವಿಷ್ಯವನ್ನು ಮುನ್ನಡೆಸುವಲ್ಲಿ ಭಾರತದ ಬೆಳೆಯುತ್ತಿರುವ ಆತ್ಮವಿಶ್ವಾಸ, ಸಾಮರ್ಥ್ಯ ಮತ್ತು ಬದ್ಧತೆಯನ್ನು ಬಿಂಬಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿwww.bharat-tex.com

 

*****


(रिलीज़ आईडी: 2280527) आगंतुक पटल : 9
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil , Telugu