ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಸಮ್ಮುಖದಲ್ಲಿ, ರಾಜಸ್ಥಾನ ಮತ್ತು ಹರಿಯಾಣ ಸರ್ಕಾರಗಳು ಯಮುನಾ ಜಲ ಯೋಜನೆಯ ನಿರ್ಮಾಣ ಮತ್ತು ಅನುಷ್ಠಾನಕ್ಕಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ
ಈ ಒಪ್ಪಂದದೊಂದಿಗೆ, ಸುಮಾರು ಮೂರು ದಶಕಗಳಷ್ಟು ಹಳೆಯದಾದ ಹರಿಯಾಣ ಮತ್ತು ರಾಜಸ್ಥಾನದ ಜನರ ದೀರ್ಘಕಾಲದ ನೀರಿನ ಸಂಬಂಧಿತ ಸಮಸ್ಯೆಗೆ ಇಂದು ಪರಿಹಾರ ಸಿಕ್ಕಿದೆ
ಈ ಒಪ್ಪಂದವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ‘ಸಂವಾದದ ಮೂಲಕ ಪರಿಹಾರ’ ಎನ್ನುವ ಮಂತ್ರಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ
ಪ್ರಧಾನಮಂತ್ರಿ ಮೋದಿ ಅವರ 'ಸಹಕಾರಿ ಒಕ್ಕೂಟ ವ್ಯವಸ್ಥೆಯ' ಸಂದೇಶವನ್ನು ಹರಿಯಾಣ, ರಾಜಸ್ಥಾನ ಮತ್ತು ಜಲಶಕ್ತಿ ಸಚಿವಾಲಯವು ಅದರ ನೈಜ ಮನೋಭಾವದಲ್ಲಿ ಸಾಕಾರಗೊಳಿಸಿದೆ
ಈ ಒಪ್ಪಂದದ ನಂತರ, ರಾಜಸ್ಥಾನದ ಸಿಕರ್, ಚುರು ಮತ್ತು ಝುಂಜುನು ಪ್ರದೇಶಗಳೊಂದಿಗೆ ಹರಿಯಾಣದ ಭಿವಾನಿ ಮತ್ತು ಫತೇಹಾಬಾದ್ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲು ವ್ಯವಸ್ಥೆ ಮಾಡಲಾಗುವುದು
ಈ ಹಿಂದೆ ಯಾರಿಗೂ ಬಳಕೆಯಾಗದೆ ವ್ಯರ್ಥವಾಗುತ್ತಿದ್ದ ಮಳೆನೀರು, ಈಗ ಈ ಒಪ್ಪಂದದ ನಂತರ ಜನರ ಬಾಯಾರಿಕೆಯನ್ನು ನೀಗಿಸಲಿದೆ ಮತ್ತು ಅಂತರ್ಜಲ ಮಟ್ಟವನ್ನು ಮರುಪೂರಣಗೊಳಿಸಲು ದೊಡ್ಡ ಕೊಳಗಳಲ್ಲಿ ಸಂಗ್ರಹಿಸಲಾಗುವುದು
ಈ ಒಪ್ಪಂದವು ಹರಿಯಾಣ ಮತ್ತು ರಾಜಸ್ಥಾನ ಎರಡಕ್ಕೂ ಲಾಭವಾಗುವ ಪರಿಸ್ಥಿತಿಗೆ ಅತ್ಯುತ್ತಮ ಉದಾಹರಣೆಯಾಗಿದೆ
ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಕೇವಲ ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ
ಈ ಒಪ್ಪಂದಕ್ಕಾಗಿ ರೂಪಿಸಲಾದ ಚೌಕಟ್ಟು ಮುಂಬರುವ ಹಲವು ದಶಕಗಳವರೆಗೆ ವಿವಾದ ಮುಕ್ತ ಒಪ್ಪಂದವಾಗಿ ಉಳಿಯಲಿದೆ
प्रविष्टि तिथि:
29 JUN 2026 3:04PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಸಮ್ಮುಖದಲ್ಲಿ, ರಾಜಸ್ಥಾನ ಮತ್ತು ಹರಿಯಾಣ ಸರ್ಕಾರಗಳು ಇಂದು ನವದೆಹಲಿಯಲ್ಲಿ ಯಮುನಾ ಜಲ ಯೋಜನೆಯ ನಿರ್ಮಾಣ ಮತ್ತು ಅನುಷ್ಠಾನಕ್ಕಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದವು. ಈ ಸಂದರ್ಭದಲ್ಲಿ, ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ಹರಿಯಾಣ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಸೈನಿ, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಈ ಒಪ್ಪಂದವು ಹರಿಯಾಣ ಮತ್ತು ರಾಜಸ್ಥಾನದ ಜನರು ಎದುರಿಸುತ್ತಿದ್ದ ಸುಮಾರು ಮೂರು ದಶಕಗಳಷ್ಟು ಹಳೆಯದಾದ ನೀರಿಗೆ ಸಂಬಂಧಪಟ್ಟ ಸಮಸ್ಯೆಯನ್ನು ಇಂದು ಪರಿಹರಿಸಿದೆ ಎಂದು ಹೇಳಿದರು. ಈ ಒಪ್ಪಂದವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ‘ಸಂವಾದದ ಮೂಲಕ ಪರಿಹಾರ’ ಎನ್ನುವ ಮಂತ್ರಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು. ರಾಜ್ಯಗಳು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವದೊಂದಿಗೆ ಮುನ್ನಡೆದರೆ, ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಯನ್ನೂ ಸಹ ಸುಲಭವಾಗಿ ಪರಿಹರಿಸಬಹುದು ಎಂಬುದನ್ನು ಈ ಒಪ್ಪಂದವು ತೋರಿಸುತ್ತದೆ ಎಂದು ಹೇಳಿದರು.
ಇಂದಿನ ಒಪ್ಪಂದದಡಿಯಲ್ಲಿ, ಜುಲೈನಿಂದ ಅಕ್ಟೋಬರ್ ವರೆಗೆ ಯಮುನಾ ಕಾಲುವೆಯಿಂದ ರಾಜಸ್ಥಾನಕ್ಕೆ ಸುಮಾರು 580 ಮಿಲಿಯನ್ ಕ್ಯೂಬಿಕ್ ಮೀಟರ್ (ಎಂಸಿಎಂ) ನೀರನ್ನು ಮೂರು ಭೂಗತ ಪೈಪ್ ಲೈನ್ ಗಳ ಮೂಲಕ ಸರಬರಾಜು ಮಾಡಲಾಗುವುದು ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಈ ಮೂರು ಪೈಪ್ ಲೈನ್ ಗಳು 3.6 ಮೀಟರ್ ಗಿಂತಲೂ ಹೆಚ್ಚು ವ್ಯಾಸವನ್ನು ಹೊಂದಿವೆ ಮತ್ತು ರಾಜಸ್ಥಾನ ಮತ್ತು ಹರಿಯಾಣ ಎರಡೂ ರಾಜ್ಯಗಳಿಗೆ ಕುಡಿಯುವ ನೀರನ್ನು ಒದಗಿಸುತ್ತವೆ. ಈ ಒಪ್ಪಂದವು ಎರಡೂ ರಾಜ್ಯಗಳಿಗೂ ಲಾಭವಾಗುವ ಪರಿಸ್ಥಿತಿಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಶ್ರೀ ಶಾ ಹೇಳಿದರು. ಈ ಒಪ್ಪಂದವು ಹಣಕಾಸಿನ ಜವಾಬ್ದಾರಿಗಳು, ವೆಚ್ಚದ ಹಂಚಿಕೆ, ನೀರು ಹಂಚಿಕೆ, ನೀರು ಬಿಡುಗಡೆಯ ಶಿಷ್ಟಾಚಾರಗಳು ಮತ್ತು ನಿರ್ವಹಣಾ ವ್ಯವಸ್ಥೆಗಳನ್ನು ಹೆಚ್ಚಿನ ಗಮನಹರಿಸಿ ಪರಿಹರಿಸಿದೆ. ಈ ವೈಜ್ಞಾನಿಕವಾದ ಸಮಗ್ರ ಒಪ್ಪಂದವು ಮೂಲಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ, ಮೇಲ್ವಿಚಾರಣಾ ವ್ಯವಸ್ಥೆಗಳು, ಪಾರದರ್ಶಕತೆ ಕ್ರಮಗಳು ಮತ್ತು ದೃಢವಾದ ವಿವಾದ ಪರಿಹಾರ ಕಾರ್ಯವಿಧಾನವನ್ನು ಸಹ ಬಹಳ ಚೆನ್ನಾಗಿ ಒಳಗೊಂಡಿದೆ.
ಹರಿಯಾಣ, ರಾಜಸ್ಥಾನ, ಮತ್ತು ವಿಶೇಷವಾಗಿ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಸಿದ್ಧಪಡಿಸಿದ ಈ ಒಪ್ಪಂದದ ಚೌಕಟ್ಟು ಮುಂಬರುವ ಹಲವು ದಶಕಗಳವರೆಗೆ ವಿವಾದ ಮುಕ್ತ ಒಪ್ಪಂದವಾಗಿ ಉಳಿಯುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಕೆಲವೇ ದಿನಗಳಲ್ಲಿ ಒಂದು ಪರಿಹಾರವನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು. ಈ ಒಪ್ಪಂದದ ನಂತರ, ರಾಜಸ್ಥಾನದ ಸಿಕಾರ್, ಚುರು ಮತ್ತು ಝುಂಜುನು ಜಿಲ್ಲೆಗಳಿಗೆ ಹಾಗೂ ಹರಿಯಾಣದ ಭಿವಾನಿ ಮತ್ತು ಫತೇಹಾಬಾದ್ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುವುದು.
ಈ ಒಪ್ಪಂದವು ರಾಜಸ್ಥಾನ ಮತ್ತು ಹರಿಯಾಣದಲ್ಲಿ, ವಿಶೇಷವಾಗಿ ರಾಜಸ್ಥಾನದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಾಕಷ್ಟು ಸಹಾಯ ಮಾಡುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಹಿಂದೆ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರು ಈಗ ಜನರ ಬಾಯಾರಿಕೆಯನ್ನು ನೀಗಿಸಲಿದೆ ಮತ್ತು ಅಂತರ್ಜಲ ಮಟ್ಟವನ್ನು ಮರುಪೂರಣಗೊಳಿಸಲು ದೊಡ್ಡ ಕೊಳಗಳಲ್ಲಿ ಸಂಗ್ರಹಿಸಲಾಗುವುದು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಸಹಕಾರಿ ಒಕ್ಕೂಟ ವ್ಯವಸ್ಥೆಯ ಸಂದೇಶವನ್ನು ಹರಿಯಾಣ, ರಾಜಸ್ಥಾನ ಮತ್ತು ಜಲಶಕ್ತಿ ಸಚಿವಾಲಯಗಳು ನಿಜವಾದ ಅರ್ಥದಲ್ಲಿ ಸಾಕಾರಗೊಳಿಸಿವೆ ಎಂದು ಶ್ರೀ ಶಾ ತಿಳಿಸಿದರು.
ಈ ಯೋಜನೆಯು ರಾಜಸ್ಥಾನಕ್ಕೆ ಹಂಚಿಕೆಯಾದ ಯಮುನಾ ನೀರನ್ನು ಪಶ್ಚಿಮ ಯಮುನಾ ಕಾಲುವೆಯಿಂದ ಭೂಗತ ಪೈಪ್ ಲೈನ್ ವ್ಯವಸ್ಥೆಯ ಮೂಲಕ ಸಾಗಿಸಲು ಅನುಕೂಲವಾಗುವಂತೆ ಮಾಡುತ್ತದೆ, ಇದರಿಂದಾಗಿ 1994ರ ಮೇಲ್ಭಾಗದ ಯಮುನಾ ಜಲಾನಯನ ಪ್ರದೇಶದ ಬಳಸಬಹುದಾದ ಮೇಲ್ಮೈ ನೀರಿನ ಹಂಚಿಕೆಯ ಕುರಿತಾದ ತಿಳುವಳಿಕೆ ಒಪ್ಪಂದದಡಿಯಲ್ಲಿ ರಾಜ್ಯವು ಅದಕ್ಕೆ ಹಂಚಿಕೆಯಾದ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಈ ಯೋಜನೆಯು ವಿಶ್ವಾಸಾರ್ಹ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಮತ್ತು ರಾಜಸ್ಥಾನದ ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಬೆಂಬಲ ನೀಡುವ ಮೂಲಕ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಒಪ್ಪಂದವು ಕೇಂದ್ರ ಸರ್ಕಾರ ಮತ್ತು ಭಾಗವಹಿಸುವ ರಾಜ್ಯ ಸರ್ಕಾರಗಳ ಸಂಘಟಿತ ಪ್ರಯತ್ನಗಳ ಮೂಲಕ ಯೋಜನೆಯನ್ನು ಸಮಯೋಚಿತವಾಗಿ ಅನುಷ್ಠಾನಗೊಳಿಸಲು ಬಲವಾದ ಅಡಿಪಾಯವನ್ನು ಹಾಕುತ್ತದೆ.
*****
(रिलीज़ आईडी: 2279064)
आगंतुक पटल : 6