ಉಕ್ಕು ಸಚಿವಾಲಯ
ಪ್ರಧಾನಮಂತ್ರಿ ಮೋದಿ ಅವರ ವಿಕಸಿತ ಭಾರತ ದೃಷ್ಟಿಕೋನಕ್ಕೆ ಡಿಜಿಟಲ್ ರೂಪಾಂತರಗೊಂಡ ಉಕ್ಕು ವಲಯದಿಂದ ಶಕ್ತಿ: ಹೆಚ್.ಡಿ. ಕುಮಾರಸ್ವಾಮಿ
ಡಿಜಿಟಲೀಕರಣವು ಇನ್ನು ಮುಂದೆ ಆಯ್ಕೆಯಲ್ಲ, ಬದಲಿಗೆ ಉಕ್ಕು ವಲಯದ ಉಳಿವಿನ ತಂತ್ರ: ಹೆಚ್.ಡಿ. ಕುಮಾರಸ್ವಾಮಿ
ಉಕ್ಕು ವಲಯವು ಸಾಮರ್ಥ್ಯ ವಿಸ್ತರಣೆಯನ್ನು ಮೀರಿ ವಿವೇಚನಾಯುತ ಉತ್ಪಾದನೆಯತ್ತ ಸಾಗಬೇಕು: ಹೆಚ್.ಡಿ. ಕುಮಾರಸ್ವಾಮಿ
“ಭಾರತದ ಉಕ್ಕಿನ ಭವಿಷ್ಯವು ದತ್ತಾಂಶ, ಕೃತಕ ಬುದ್ಧಿಮತ್ತೆ ಮತ್ತು ಸ್ಮಾರ್ಟ್ ಕಾರ್ಖಾನೆಗಳಿಂದ ರೂಪುಗೊಳ್ಳುತ್ತದೆ": ಹೆಚ್.ಡಿ. ಕುಮಾರಸ್ವಾಮಿ
ಭಾರತದ ಉಕ್ಕು ಉದ್ಯಮಕ್ಕೆ ಡಿಜಿಟಲ್ ಪರಿವರ್ತನೆಯ ಹಾದಿಯನ್ನು ʻಚಿಂತನ ಶಿಬಿರ-2026ʼ ಪಟ್ಟಿ ಮಾಡಿದೆ
प्रविष्टि तिथि:
24 JUN 2026 1:32PM by PIB Bengaluru
ಡಿಜಿಟಲೀಕರಣವು ಭಾರತದ ಉಕ್ಕು ಉದ್ಯಮಕ್ಕೆ ಇನ್ನು ಮುಂದೆ ಒಂದು ಆಯ್ಕೆಯಲ್ಲ, ಬದಲಿಗೆ "ದೀರ್ಘಕಾಲೀನ ಉಳಿವಿನ ಅಡಿಪಾಯ" ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಪ್ರತಿಪಾದಿಸಿದರು. ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಉಳಿಯಲು ಈ ವಲಯವು ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿಹೇಳಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಉಕ್ಕು ವಲಯದಲ್ಲಿ ಡಿಜಿಟಲೀಕರಣ ಕುರಿತ ʻಚಿಂತನ ಶಿಬಿರ-2026ʼ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, “ಉಕ್ಕು ಉದ್ಯಮದ ಭವಿಷ್ಯವನ್ನು ಕೇವಲ ಉತ್ಪಾದನಾ ಸಾಮರ್ಥ್ಯದಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಬುದ್ಧಿವಂತ, ಸಂಪರ್ಕಿತ ಮತ್ತು ಡೇಟಾ-ಚಾಲಿತ ಉತ್ಪಾದನಾ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವ ಸಾಮರ್ಥ್ಯದ ಮೂಲಕ ಅದನ್ನು ನಿರ್ಧರಿಸಲಾಗುತ್ತದೆ,ʼʼ ಎಂದು ಹೇಳಿದರು. 2047ರ ವೇಳೆಗೆ ವಿಕಸಿತ ಭಾರತದ ನಿರ್ಮಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಉಲ್ಲೇಖಿಸಿದ ಹೆಚ್.ಡಿ.ಕುಮಾರಸ್ವಾಮಿ, “ಉಕ್ಕು ವಲಯವು ಭಾರತದ ಆರ್ಥಿಕ ಪರಿವರ್ತನೆಯ ಕಾರ್ಯತಂತ್ರದ ಆಧಾರಸ್ತಂಭವಾಗಿದೆ, ಮೂಲಸೌಕರ್ಯ ಸೃಷ್ಟಿ, ಉತ್ಪಾದನೆ, ನವೀಕರಿಸಬಹುದಾದ ಇಂಧನ, ನಗರೀಕರಣ, ಸಾರಿಗೆ ಮತ್ತು ರಕ್ಷಣಾ ಉತ್ಪಾದನೆಗೆ ಶಕ್ತಿ ತುಂಬುತ್ತದೆ,ʼʼ ಎಂದು ಬಣ್ಣಿಸಿದರು.

"ಉಕ್ಕು, ರಾಷ್ಟ್ರ ನಿರ್ಮಾಣದ ಬೆನ್ನೆಲುಬಾಗಿದೆ" ಎಂದು ಹೇಳಿದ ಅವರು, ಹಲವಾರು ಮುಂದುವರಿದ ಆರ್ಥಿಕತೆಗಳಲ್ಲಿ ಉಕ್ಕಿನ ಬೇಡಿಕೆ ಕಡಿಮೆಯಾಗಿದ್ದರೂ ಸಹ, ಭಾರತವು 2018 ರಿಂದ ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕನಾಗಿ ತನ್ನ ಸ್ಥಾನವನ್ನು ಸ್ಥಿರವಾಗಿ ಉಳಿಸಿಕೊಂಡಿದೆ ಎಂದುರು. ಈ ವಲಯದ ದೃಢವಾದ ಬೆಳವಣಿಗೆಯ ಪಥವನ್ನು ಉಲ್ಲೇಖಿಸಿದ ಸಚಿವರು, 2021-22ರ ಹಣಕಾಸು ವರ್ಷದಿಂದ ಕಚ್ಚಾ ಉಕ್ಕು ಉತ್ಪಾದನೆಯು ವಾರ್ಷಿಕ ಸರಾಸರಿ 8 ಪ್ರತಿಶತದಷ್ಟು ದರದಲ್ಲಿ ವಿಸ್ತರಿಸಿದೆ. ಇದೇವೇಳೆ, ಸಿದ್ಧ ಉಕ್ಕಿನ ಬಳಕೆಯು ವಾರ್ಷಿಕವಾಗಿ ಸುಮಾರು 13 ಪ್ರತಿಶತದಷ್ಟು ಬೆಳೆದಿದೆ, ಇದು ಬಲವಾದ ದೇಶೀಯ ಬೇಡಿಕೆ ಮತ್ತು ತ್ವರಿತ ಕೈಗಾರಿಕೀಕರಣವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

2030ರ ವೇಳೆಗೆ ಭಾರತದ ಉಕ್ಕು ತಯಾರಿಕೆ ಸಾಮರ್ಥ್ಯವನ್ನು 300 ದಶಲಕ್ಷ ಟನ್ ಮತ್ತು 2035ರ ವೇಳೆಗೆ 400 ದಶಲಕ್ಷ ಟನ್‌ಗಳಿಗೆ ಹೆಚ್ಚಿಸುವ ಸರ್ಕಾರದ ದೀರ್ಘಾವಧಿಯ ದೂರದೃಷ್ಟಿಯನ್ನು ಕುಮಾರಸ್ವಾಮಿ ಪುನರುಚ್ಚರಿಸಿದರು. ಆದಾಗ್ಯೂ, ಈ ಗುರಿಗಳನ್ನು ಸಾಧಿಸಲು ಉದ್ಯಮವು ಕಚ್ಚಾ ವಸ್ತುಗಳ ಭದ್ರತೆ, ಕಾರ್ಯಾಚರಣೆಯ ದಕ್ಷತೆ, ಡಿಕಾರ್ಬನೈಸೇಶನ್, ಆಧುನೀಕರಣ ಮತ್ತು ರಫ್ತು ಸ್ಪರ್ಧಾತ್ಮಕತೆಗೆ ಸಂಬಂಧಿಸಿದ ಸವಾಲುಗಳನ್ನು ಏಕಕಾಲದಲ್ಲಿ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ತಂತ್ರಜ್ಞಾನದ ಪರಿವರ್ತಕ ಸಾಮರ್ಥ್ಯವನ್ನು ಒತ್ತಿ ಹೇಳಿದ ಸಚಿವರು, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ʻಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್ʼ, ಡಿಜಿಟಲ್ ಟ್ವಿನ್ಸ್, ರೊಬೊಟಿಕ್ಸ್ ಮತ್ತು ಸುಧಾರಿತ ಡೇಟಾ ವಿಶ್ಲೇಷಣೆಗಳು ಜಾಗತಿಕವಾಗಿ ಉಕ್ಕು ಉತ್ಪಾದನೆಯನ್ನು ಮರುವ್ಯಾಖ್ಯಾನಿಸುತ್ತಿವೆ ಮತ್ತು ಭಾರತದಲ್ಲಿ ವ್ಯಾಪಕವಾಗಿ ಇವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಡಿಜಿಟಲೀಕರಣ ಮತ್ತು ಯಾಂತ್ರೀಕರಣದ ಮೂಲಕ ಉತ್ಪಾದಕತೆಯನ್ನು ಗಮನಾರ್ಹವಾಗಿ ಸುಧಾರಿಸಬಹುದು, ಇಂಧನ ಬಳಕೆಯನ್ನು ಉತ್ತಮಗೊಳಿಸಬಹುದು. ಇದು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಉಪಕರಣಗಳ ವೈಫಲ್ಯಗಳು ಸಂಭವಿಸುವ ಮೊದಲು ಅವುಗಳನ್ನು ಗುರುತಿಸುವ ಸಾಮರ್ಥ್ಯವಿರುವ ಮುನ್ಸೂಚಕ ನಿರ್ವಹಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲು ಅನುವಾಗಿಸುತ್ತದೆ ಎಂದು ಅವರು ಹೇಳಿದರು. ಇಂತಹ ಮಧ್ಯಸ್ಥಿಕೆಗಳು ಯೋಜಿತವಲ್ಲದ ಸಮಯವನ್ನು ಕಡಿಮೆ ಮಾಡಲು, ಮಾನವ ದೋಷಗಳನ್ನು ಕಡಿಮೆ ಮಾಡಲು ಜೊತೆಗೆ ಕೆಲಸದ ಸ್ಥಳದ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿಂತನ ಶಿಬಿರವು ಕೃತಕ ಬುದ್ಧಿಮತ್ತೆ ಆಧಾರಿತ ಗಣಿಗಾರಿಕೆ ಪರಿಹಾರಗಳು, ಉಕ್ಕಿನ ಸ್ಥಾವರಗಳ ಡಿಜಿಟಲ್ ರೂಪಾಂತರ, ʻಪಿಎಂ ಗತಿ ಶಕ್ತಿʼ, ʻಉದ್ಯಮ 4.0ʼ ತಂತ್ರಾಂಶಗಳು ಮತ್ತು ಅಳೆಯಬಹುದಾದ ವ್ಯಾಪಾರ ಪರಿಣಾಮಗಳನ್ನು ಪ್ರದರ್ಶಿಸುವ ಕೇಸ್ ಸ್ಟಡೀಸ್ ಕುರಿತು ವಿಷಯಾಧಾರಿತ ಅಧಿವೇಶನಗಳನ್ನು ಒಳಗೊಂಡಿತ್ತು. ವಲಯದ ತಾಂತ್ರಿಕ ಪರಿವರ್ತನೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಚರ್ಚೆಗಳಲ್ಲಿ ಪ್ರಮುಖ ನವೋದ್ಯಮಗಳೂ ಮತ್ತು ಉದ್ಯಮದ ಮಧ್ಯಸ್ಥಗಾರರು ಸಹ ಭಾಗವಹಿಸಿದ್ದರು. ಚರ್ಚೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ವೇದಿಕೆಯಿಂದ ಹೊರಹೊಮ್ಮುವ ಒಳನೋಟಗಳು ಪ್ರಧಾನಮಂತ್ರಿಯವರ ʻಆತ್ಮನಿರ್ಭರ ಭಾರತʼ ಮತ್ತು ʻವಿಕಸಿತ ಭಾರತ-2047ʼ ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ಮಾರ್ಟ್, ಪರಿಸ್ರ ಸ್ನೇಹಿ, ಹೆಚ್ಚು ಪರಿಣಾಮಕಾರಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಉಕ್ಕು ಉದ್ಯಮವನ್ನು ನಿರ್ಮಿಸಲು ಕೊಡುಗೆ ನೀಡುತ್ತವೆ ಎಂದು ಹೇಳಿದರು.

ಉಕ್ಕು ಸಚಿವಾಲಯದ ಅಡಿಯಲ್ಲಿ ನಡೆದ ಈ ಸಮಾವೇಶದಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು, ಎಸ್ಎಐಎಲ್, ಎನ್ಎಂಡಿಸಿ ಮತ್ತು ಎಂಒಐಎಲ್ ಸೇರಿದಂತೆ ಪ್ರಮುಖ ಉಕ್ಕು ಸಾರ್ವಜನಿಕ ವಲಯದ ಉದ್ಯಮಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಉದ್ಯಮದ ನಾಯಕರು, ನವೋದ್ಯಮಗಳು ಮತ್ತು ತಂತ್ರಜ್ಞಾನ ತಜ್ಞರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.
*****
(रिलीज़ आईडी: 2277417)
आगंतुक पटल : 21