ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಎಥನಾಲ್ ಮಿಶ್ರಣ ಕಾರ್ಯಕ್ರಮವು ವೈಜ್ಞಾನಿಕವಾಗಿ ಸಾಬೀತಾಗಿದೆ ಮತ್ತು ಸರ್ಕಾರದಿಂದ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ; ಸಾಮಾಜಿಕ ಮಾಧ್ಯಮಗಳಲ್ಲಿ ದಾರಿ ತಪ್ಪಿಸುವ ಹೇಳಿಕೆಗಳು ಮತ್ತು ಹಳೆಯ ಚಿತ್ರಗಳನ್ನು ಹರಡಲಾಗುತ್ತಿದೆ

प्रविष्टि तिथि: 23 JUN 2026 7:57PM by PIB Bengaluru

ಪೆಟ್ರೋಲ್‌ ಗೆ ಎಥನಾಲ್ ಮಿಶ್ರಣ ಮಾಡುವ (ಇಬಿಪಿ) ಯೋಜನೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಕೆಲವು ತಪ್ಪು ಮತ್ತು ಆಧಾರವಿಲ್ಲದ ವದಂತಿಗಳನ್ನು ಭಾರತ ಸರ್ಕಾರ ಗಮನಿಸಿದೆ. ಇವು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಉದ್ದೇಶ ಹೊಂದಿರುವಂತೆ ಕಾಣುತ್ತಿವೆ. ಕೇವಲ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಜನರಲ್ಲಿ ಅನಗತ್ಯ ಭಯ ಹುಟ್ಟಿಸಲು ಹಳೆಯ ಚಿತ್ರಗಳು ಹಾಗೂ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಹಂಚಿಕೊಳ್ಳಲಾಗುತ್ತಿರುವುದನ್ನು ಗಮನಿಸಲಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ಎಥನಾಲ್ ಮಿಶ್ರಣ ಕಾರ್ಯಕ್ರಮವು ವೈಜ್ಞಾನಿಕವಾಗಿ ಪರೀಕ್ಷಿಸಲ್ಪಟ್ಟಿದೆ ಮತ್ತು ಸರ್ಕಾರವು ಇದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ. ವಿದೇಶಗಳಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡುವುದು, ದೇಶದ ಇಂಧನ ಭದ್ರತೆಯನ್ನು ಹೆಚ್ಚಿಸುವುದು ಮತ್ತು ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ 2003 ರಲ್ಲಿ ಈ ಎಥನಾಲ್ ಮಿಶ್ರಣ ಯೋಜನೆಯನ್ನು ತರಲಾಯಿತು. ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಂಡು ಮತ್ತು ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚಿಸಿ ಈ ಯೋಜನೆಯನ್ನು ಹಂತ-ಹಂತವಾಗಿ ಜಾರಿಗೆ ತರಲಾಗಿದೆ. ಇದರ ಅಂಗವಾಗಿ 2023 ರಿಂದ ಪೆಟ್ರೋಲ್‌ ನಲ್ಲಿ 20 ಪ್ರತಿಶತ ಎಥನಾಲ್ ಮಿಶ್ರಣ ಮಾಡುವ (ಇ20) ಪ್ರಕ್ರಿಯೆ ಚಾಲ್ತಿಯಲ್ಲಿದೆ.

ತೈಲ ಮಾರಾಟ ಕಂಪನಿಗಳು, ವಾಹನ ತಯಾರಕರು, ಇಂಧನ ಪರೀಕ್ಷಾ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರವು ಈ ಯೋಜನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಈ ಇ20 ಪೆಟ್ರೋಲ್ ಬಳಕೆಗೆ ಬಂದಾಗಿನಿಂದ, ಎಥನಾಲ್ ಮಿಶ್ರಣದ ಕಾರಣದಿಂದಾಗಿ ವಾಹನಗಳ ಎಂಜಿನ್ ಕೆಟ್ಟುಹೋಗಿರುವ ಅಥವಾ ವಾಹನಗಳು ನಿಂತುಹೋಗಿರುವ ಯಾವುದೇ ದೊಡ್ಡ ದೂರುಗಳು ವರದಿಯಾಗಿಲ್ಲ.

ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಎಥನಾಲ್ ನೀರನ್ನು ಹೀರಿಕೊಳ್ಳುತ್ತದೆ (ಹೈಗ್ರೊಸ್ಕೋಪಿಕ್) ಎಂಬ ವಿಷಯದ ಬಗ್ಗೆ ಚರ್ಚೆಯಾಗುತ್ತಿದೆ. ಪೆಟ್ರೋಲ್ ಸಾಮಾನ್ಯ ಇರಲಿ ಅಥವಾ ಎಥನಾಲ್ ಮಿಶ್ರಿತ ಇರಲಿ, ಇಂಧನ ಟ್ಯಾಂಕ್ ಒಳಗೆ ನೀರು ಹೋಗುವುದು ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆಧುನಿಕ ವಾಹನಗಳಲ್ಲಿ ಇಂಧನ ಟ್ಯಾಂಕ್ ಒಳಗೆ ನೀರು ಹೋಗದಂತೆ ತಡೆಯಲು ವಿಶೇಷ ವಿನ್ಯಾಸ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ.

ಕೆಲವರು ಕಬ್ಬಿನ ರಸವನ್ನು ನೇರವಾಗಿ ಪೆಟ್ರೋಲ್ ಜೊತೆ ಬೆರೆಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ವೀಡಿಯೊಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಇದು ಸಂಪೂರ್ಣವಾಗಿ ಆಧಾರರಹಿತ ಮತ್ತು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ. ಪೆಟ್ರೋಲ್ ಜೊತೆ ಮಿಶ್ರಣ ಮಾಡುವ ಎಥನಾಲ್ ಅನ್ನು ದೊಡ್ಡ ಕೈಗಾರಿಕೆಗಳಲ್ಲಿ ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ತಯಾರಿಸಲಾಗುತ್ತದೆ ಮತ್ತು ಕಟ್ಟುನಿಟ್ಟಾದ ಗುಣಮಟ್ಟದ ಪರೀಕ್ಷೆಗಳ ನಂತರವಷ್ಟೇ ಪೆಟ್ರೋಲ್ ಜೊತೆ ಸೇರಿಸಲಾಗುತ್ತದೆ.

ಎಥನಾಲ್ ಅನ್ನು ಕಬ್ಬಿನ ರಸ, ಕಾಕಂಬಿ (ಮೊಲಾಸಸ್), ನುಚ್ಚಕ್ಕಿ ಮತ್ತು ಜೋಳದಂತಹ ಕೃಷಿ ಉತ್ಪನ್ನಗಳಿಂದ ತಯಾರಿಸುವುದು ನಿಜವಾದರೂ, ತಯಾರಾದ ಎಥನಾಲ್‌ ನ ಗುಣಲಕ್ಷಣಗಳು ಆ ಮೂಲ ವಸ್ತುಗಳಿಗಿಂತ ಸಂಪೂರ್ಣವಾಗಿ ಬೇರೆಯಾಗಿರುತ್ತವೆ. ಏಕೆಂದರೆ ಇದು ಹುದುಗುವಿಕೆ (ಫರ್ಮೆಂಟೇಶನ್) ಸೇರಿದಂತೆ ಹಲವು ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಪಟ್ಟಿರುತ್ತದೆ, ಇದರಿಂದಾಗಿ ಮೂಲ ವಸ್ತುವಿನಲ್ಲಿರುವ ಸಕ್ಕರೆಯಂಶವೆಲ್ಲವೂ ಬದಲಾಗಿಹೋಗುತ್ತದೆ.

ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಉದ್ದೇಶ ಕೇವಲ ವಿಷಯವನ್ನು ದೊಡ್ಡದು ಮಾಡಿ ತಮ್ಮ ವೀಡಿಯೊಗಳಿಗೆ ವೀಕ್ಷಕರನ್ನು ಹೆಚ್ಚಿಸಿಕೊಳ್ಳುವುದಷ್ಟೇ ಆಗಿದೆ.

ಭಾರತದಲ್ಲಿ ಎಥನಾಲ್ ಮಿಶ್ರಣವು ಕಟ್ಟುನಿಟ್ಟಾದ ಇಂಧನ ಗುಣಮಟ್ಟದ ನಿಯಮಗಳಿಗೆ ಬದ್ಧವಾಗಿದೆ ಮತ್ತು ಬಳಕೆಗೆ ಬರುವ ಮುನ್ನ ಕಠಿಣ ಪರೀಕ್ಷೆಗಳಿಗೆ ಒಳಪಡುತ್ತದೆ. ವಾಹನ ತಯಾರಕ ಕಂಪನಿಗಳು ಮತ್ತು ತಜ್ಞರೊಂದಿಗೆ ಸುದೀರ್ಘ ಚರ್ಚೆ ಹಾಗೂ ತಾಂತ್ರಿಕ ಮೌಲ್ಯಮಾಪನ ಮಾಡಿದ ನಂತರವೇ ಹೆಚ್ಚಿನ ಪ್ರಮಾಣದ ಮಿಶ್ರಣಕ್ಕೆ ಅನುಮತಿ ನೀಡಲಾಗಿದೆ.

ಇತ್ತೀಚೆಗೆ, ವಾಹನದ ಇಂಧನ ಟ್ಯಾಂಕ್ ಬಳಿ ಇರುವೆಗಳು ಓಡಾಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಕ್ಕೆ ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಸ್ಪಷ್ಟನೆ ನೀಡಿದ್ದು, ಪೆಟ್ರೋಲ್ ಮಿಶ್ರಣಕ್ಕೆ ಬಳಸುವ ಎಥನಾಲ್ ಅನ್ನು ಹುದುಗುವಿಕೆ ಮತ್ತು ಬಟ್ಟಿ ಇಳಿಸುವಿಕೆಯ (ಡಿಸ್ಟಿಲೇಶನ್) ಪ್ರಕ್ರಿಯೆಗಳ ಮೂಲಕ ಶುದ್ಧೀಕರಿಸಲಾಗುತ್ತದೆ. ಇದರಿಂದಾಗಿ ಅದರಲ್ಲಿ ಸಕ್ಕರೆಯ ಯಾವುದೇ ಅಂಶ ಉಳಿಯುವುದಿಲ್ಲ. ಜೊತೆಗೆ, ಈ ಎಥನಾಲ್‌‌ ನಲ್ಲಿ ಕೀಟಗಳನ್ನು ದೂರ ಓಡಿಸುವ ರಾಸಾಯನಿಕಗಳು (ಡೆನಾಚುರಂಟ್ಸ್) ಇರುತ್ತವೆ. ಹೀಗಾಗಿ ಇ20 ಇಂಧನದಲ್ಲಿ ಇರುವೆಗಳನ್ನು ಆಕರ್ಷಿಸುವ ಯಾವುದೇ ಅಂಶ ಇರುವುದಿಲ್ಲ. ಆದ್ದರಿಂದ, ಇ20 ಪೆಟ್ರೋಲ್‌ ನಿಂದಾಗಿ ಇರುವೆಗಳು ಬರುತ್ತವೆ ಎಂಬ ವಾದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಅದೇ ರೀತಿ, ಇ20 ಪೆಟ್ರೋಲ್ ಬಳಸಿದರೆ ವಾಹನ ವಿಮೆ ರದ್ದಾಗುತ್ತದೆ ಎಂದು ಹರಡಿದ್ದ ವದಂತಿಗಳೂ ಸುಳ್ಳು ಎಂದು ಸಂಬಂಧಪಟ್ಟ ಸಂಸ್ಥೆಗಳು ಸ್ಪಷ್ಟಪಡಿಸಿವೆ. ಎಥನಾಲ್ ಮಿಶ್ರಣ ಮಾಡುವುದು ಜಾಗತಿಕವಾಗಿ ಒಪ್ಪಿತವಾದ ಪದ್ಧತಿಯಾಗಿದ್ದು, ಅಮೆರಿಕ, ಬ್ರೆಜಿಲ್ ಮತ್ತು ಜಪಾನ್‌ ನಂತಹ ದೇಶಗಳಲ್ಲಿ ಇದನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ಬ್ರೆಜಿಲ್ ದೇಶದಲ್ಲಂತೂ ಬಹಳ ವರ್ಷಗಳಿಂದ ಪೆಟ್ರೋಲ್‌ನಲ್ಲಿ ಶೇಕಡಾ 27 ರಷ್ಟು ಎಥನಾಲ್ (ಇ27) ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಎಥನಾಲ್ ಮಿಶ್ರಣ ಯೋಜನೆಯಿಂದಾಗಿ ವಿದೇಶಿ ಕಚ್ಚಾ ತೈಲ ಆಮದು ಕಡಿಮೆಯಾಗಿದ್ದು, ಇದರಿಂದ ದೇಶಕ್ಕೆ ₹1.4 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯ ಹಣ ಉಳಿತಾಯವಾಗಿದೆ ಎಂಬುದನ್ನು ಗಮನಿಸಬೇಕು. ಈ ಯೋಜನೆಯಿಂದಾಗಿ ಎಥನಾಲ್ ತಯಾರಿಸಲು ಬಳಸುವ ಕೃಷಿ ಉತ್ಪನ್ನಗಳಿಗೆ ನಿರಂತರ ಬೇಡಿಕೆ ಬಂದಿದ್ದು, ಇದು ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡಿದೆ.

ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸಲು, ಇಂಗಾಲದ ಹೊರಸೂಸುವಿಕೆಯನ್ನು (ಮಾಲಿನ್ಯ) ಕಡಿಮೆ ಮಾಡಲು ಮತ್ತು ದೇಶವು ಪರಿಸರ ಸ್ನೇಹಿ ವಾಹನಗಳತ್ತ ಸಾಗಲು ಎಥನಾಲ್ ಮಿಶ್ರಣವು ಪ್ರಮುಖ ಪಾತ್ರ ವಹಿಸುತ್ತದೆ. ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ, ಈ ಯೋಜನೆಯನ್ನು ಸುರಕ್ಷಿತವಾಗಿ, ಪಾರದರ್ಶಕವಾಗಿ ಮತ್ತು ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನಡೆಸಲು ಸರ್ಕಾರ ಬದ್ಧವಾಗಿದೆ.

 

*****


(रिलीज़ आईडी: 2277247) आगंतुक पटल : 12
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Tamil , Malayalam