ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ಎಲ್ಲರಿಗೂ ನ್ಯಾಯದ ಪ್ರವೇಶವನ್ನು ಬಲಪಡಿಸುವ ಉದ್ದೇಶದ ಕೇಂದ್ರ ವಲಯದ ಯೋಜನೆಯಾದ ʻದಿಶಾ-2.0’ಗೆ(ನ್ಯಾಯದ ಸಮಗ್ರ ಪ್ರವೇಶಕ್ಕಾಗಿ ನವೀನ ಪರಿಹಾರಗಳ ವಿನ್ಯಾಸ) ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಖಾತೆ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರಿಂದ ಅನುಮೋದನೆ


ʻದಿಶಾ- 2.0ʼ ಯೋಜನೆಗಾಗಿ 2026-27 ರಿಂದ 2030-31ರ ಅವಧಿಗೆ 16ನೇ ಹಣಕಾಸು ಆಯೋಗದ ಆವರ್ತನದಲ್ಲಿ ಒಟ್ಟು 255 ಕೋಟಿ ರೂ.ಗಳ ಹಣಕಾಸು ನಿಧಿಯನ್ನು ಅನುಮೋದಿಸಲಾಗಿದೆ

ತಂತ್ರಜ್ಞಾನ-ಶಕ್ತ ನ್ಯಾಯ ವಿತರಣೆಗಾಗಿ ಕೇಂದ್ರೀಕೃತ ಡಿಜಿಟಲ್ ವೇದಿಕೆಯಲ್ಲಿ ʻವಿಧಿ-ಸಂಜೀವಿನಿʼ ಎಂಬ ಹೊಸ ಘಟಕ ಮತ್ತುಕೃತಕ ಬುದ್ಧಿಮತ್ತೆ ಚಾಲಿತ ʻನ್ಯಾಯ ಸೇತುʼ ಚಾಟ್‌ಬೋಟ್‌ ಪರಿಚಯಿಸಲಾಗಿದೆ

ಎಲ್ಲಾ ನಾಲ್ಕು ಕಾರ್ಯಕ್ರಮಗಳ ಘಟಕಗಳಲ್ಲಿ 3 ಕೋಟಿ ಫಲಾನುಭವಿಗಳನ್ನು ತಲುಪುವ ಗುರಿಯನ್ನು ʻದಿಶಾ 2.0ʼ ಹೊಂದಿದೆ

प्रविष्टि तिथि: 22 JUN 2026 1:44PM by PIB Bengaluru

ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಖಾತೆ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು 1 ಏಪ್ರಿಲ್ 2026ರಿಂದ ಮಾರ್ಚ್ 31, 2031ರವರೆಗೆ ಐದು ವರ್ಷಗಳ ಅವಧಿಗೆ ʻದಿಶಾ-2.0ʼ ಎಂದು ಪುನರ್‌ರಚಿಸಲಾದ ಕೇಂದ್ರ ವಲಯದ ಯೋಜನೆ 'ಸಮಗ್ರ ನ್ಯಾಯಕ್ಕೆ ನವೀನ ಪರಿಹಾರಗಳ ವಿನ್ಯಾಸʼ(ದಿಶಾ)' ಅನ್ನು ಮುಂದುವರಿಸಲು ಅನುಮೋದನೆ ನೀಡಿದ್ದಾರೆ. ಈ ಯೋಜನೆಗೆ ಒಟ್ಟು ಅನುಮೋದಿತ ಹಣಕಾಸು ವೆಚ್ಚವಾಗಿ 255 ಕೋಟಿ ರೂ.ಗಳನ್ನು ಭಾರತ ಸರ್ಕಾರದ ಆಯ-ವ್ಯಯದ ಮೂಲಕ ಸಂಪೂರ್ಣ ಪ್ರಮಾಣದಲ್ಲಿ ಒದಗಿಸಲಾಗುವುದು. ಕಾನೂನು ಮತ್ತು ನ್ಯಾಯ ಸಚಿವಾಲಯದ ನ್ಯಾಯಾಂಗ ಇಲಾಖೆಯ ಕಾರ್ಯದರ್ಶಿ ಶ್ರೀ ನೀರಜ್ ವರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ಥಾಯಿ ಹಣಕಾಸು ಸಮಿತಿ ಸಭೆಯು ಕೇಂದ್ರ ವಲಯದ ಯೋಜನೆ ʻದಿಶಾ 2.0ʼ ಅನ್ನು ಮೌಲ್ಯಮಾಪನ ಮಾಡಿ ಶಿಫಾರಸು ಮಾಡಿದೆ.

ʻವಿಧಿʼ (ವಿಷನ್ ಫಾರ್ ಇಂಟಿಗ್ರೇಟೆಡ್ ಡೆಲಿವರಿ ಆಫ್ ಹಾರ್ಮೋನೈಸ್ಡ್ ಲೀಗಲ್ ಇನಿಶಿಯೇಟಿವ್ಸ್) ಎಂಬ ಹೊಸ ಘಟಕದೊಂದಿಗೆ ಪ್ರಾರಂಭಿಸಲಾದ ʻದಿಶಾ-2.0ʼ (2026-31), ನಿಖರವಾಗಿ ಸುಸಂಬದ್ಧಗೊಳಿಸಿದ ಮತ್ತು ಪುನಾರಚಿಸಿದ ಯೋಜನೆಯಾಗಿದೆ. ʻದಿಶಾ 2.0ʼ - ಇದು ಭಾರತದ ಸಂವಿಧಾನದ ಪೀಠಿಕೆ ಮತ್ತು ಅನುಚ್ಛೇದ 14, 21 ಮತ್ತು 39 ಎ ಅಡಿಯಲ್ಲಿ ವಿವರಿಸಿದಂತೆ ಭಾರತದ ಜನರಿಗೆ "ನ್ಯಾಯದ ಪ್ರವೇಶ"ದ ಸಾಂವಿಧಾನಿಕ ಆದೇಶವನ್ನು ಪೂರೈಸುವ ಗುರಿಯನ್ನು ಹೊಂದಿದೆ. ಶಾಂತಿ, ನ್ಯಾಯ ಮತ್ತು ಬಲವಾದ ಸಂಸ್ಥೆಗಳ ಕುರಿತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 16 (ಎಸ್‌ಡಿಜಿ-16) ಅನುಷ್ಠಾನವನ್ನು ಬೆಂಬಲಿಸುತ್ತದೆ. ಅಸ್ತಿತ್ವದಲ್ಲಿರುವ ʻದಿಶಾʼ ಯೋಜನೆಯ ಮೂರು ಘಟಕಗಳ ಆಧಾರದ ಮೇಲೆ, ʻದಿಶಾ 2.0ʼ ಕೇಂದ್ರೀಕೃತ ಡಿಜಿಟಲ್ ವೇದಿಕೆಯೊಂದಿಗೆ ಹೊಸ ಘಟಕ ʻವಿಧಿ-ಸಂಜೀವಿನಿʼ ಮತ್ತು ತಂತ್ರಜ್ಞಾನ-ಸಶಕ್ತ ನ್ಯಾಯ ವಿತರಣೆಗಾಗಿ ಕೃತಕ ಬುದ್ಧಿಮತ್ತೆ ಚಾಲಿತ ʻನ್ಯಾಯ ಸೇತುʼ ಚಾಟ್‌ಬೋಟ್ ಅನ್ನು ಪರಿಚಯಿಸುತ್ತದೆ. ʻದಿಶಾ 2.0ʼ ಈ ಕೆಳಗಿನ ನಾಲ್ಕು ಘಟಕಗಳನ್ನು ಒಳಗೊಂಡಿದೆ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರತದಾದ್ಯಂತ ಇದನ್ನು ಜಾರಿಗೆ ತರಲಾಗುವುದು:

  1. ಟೆಲಿ-ಕಾನೂನು (ತಲುಪದವರನ್ನು ತಲುಪುವುದು): ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಮಟ್ಟದ ಉದ್ಯಮಿಗಳು (ವಿಎಲ್ಇ) ನಿರ್ವಹಿಸುವ 2,50,000 ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್ಸಿ) ಜಾಲದ ಮೂಲಕ ಎಲ್ಲಾ ವ್ಯಕ್ತಿಗಳಿಗೆ ವ್ಯಾಜ್ಯ ಪೂರ್ವ ಕಾನೂನು ಸಲಹೆಯನ್ನು ಉಚಿತವಾಗಿ ನೀಡಲಾಗುವುದು, ಇದು 112 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು ಸೇರಿದಂತೆ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 784 ಜಿಲ್ಲೆಗಳನ್ನು ಒಳಗೊಂಡಿದೆ. ನ್ಯಾಯ ಸಹಾಯಕರು ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ಮನೆ ಬಾಗಿಲಿಗೆ ಕಾನೂನು ನೆರವು ನೀಡುವುದನ್ನು ಮುಂದುವರಿಸುತ್ತಾರೆ. ಕೃತಕ ಬುದ್ಧಿಮತ್ತೆ-ಸಂಯೋಜನೆ, ಬಹುಭಾಷಾ ಪ್ರವೇಶ ಮತ್ತು ಡಿಜಿಟಲ್ ವೇದಿಕೆಗಳ ಉನ್ನತೀಕರಣದ ಮೂಲಕ ಕಾರ್ಯಕ್ರಮವನ್ನು ಮತ್ತಷ್ಟು ಬಲಪಡಿಸಲಾಗುವುದು.
  2. ನ್ಯಾಯ ಬಂಧು (ಪ್ರೊ-ಬೋನೊ ಕಾನೂನು ಸೇವೆಗಳು) ಕಾರ್ಯಕ್ರಮ: ಕಾರ್ಯಕ್ರಮವು ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ-1987ರ ಸೆಕ್ಷನ್ 12ರ ಅಡಿಯಲ್ಲಿ ಉಚಿತ ಕಾನೂನು ನೆರವಿಗೆ ಅರ್ಹ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ಮತ್ತು ನ್ಯಾಯಾಲಯದ ಪ್ರಾತಿನಿಧ್ಯವನ್ನು ನೀಡುವ ಮೂಲಕ ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳಲ್ಲಿ ʻಪ್ರೊ-ಬೋನೊʼ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ʻಪ್ರೊ-ಬೋನೊʼ ವಕೀಲರ ತೊಡಗಿಸಿಕೊಳ್ಳುವಿಕೆ, ʻಪ್ರೊ-ಬೋನೊ ಕ್ಲಬ್ʼ(ಪಿಬಿಸಿ) ಯೋಜನೆಯಡಿ ಕಾನೂನು ಕಾಲೇಜುಗಳ ಸೇರ್ಪಡೆ ಮತ್ತು ಡಿಜಿಟಲ್ ಸಂಪರ್ಕದ ಮೂಲಕ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು.
  3. ಕಾನೂನು ಸಾಕ್ಷರತೆ ಮತ್ತು ಕಾನೂನು ಜಾಗೃತಿ ಕಾರ್ಯಕ್ರಮ (ಎಲ್ಎಲ್ಎಪಿ): ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು), ನಾಗರಿಕ ಸಮಾಜ ಸಂಸ್ಥೆಗಳು (ಸಿಎಸ್ಒ), ಕಾನೂನು ವಿಶ್ವವಿದ್ಯಾಲಯಗಳು ಮತ್ತು ಮಾಧ್ಯಮ ಪಾಲುದಾರರೊಂದಿಗೆ ಸಹಭಾಗಿತ್ವದ ಮೂಲಕ ಕಾನೂನು ಜಾಗೃತಿ ಮತ್ತು ಸಾಕ್ಷರತೆಯನ್ನು ಹರಡುತ್ತದೆ. ಸರ್ಕಾರಿ, ಖಾಸಗಿ ಮತ್ತು ʻಸಿಎಸ್ಒʼ ವಲಯಗಳ ಅನುಷ್ಠಾನ ಏಜೆನ್ಸಿಗಳನ್ನು ಆನ್‌ಲೈನ್‌ ಮತ್ತು ಆಫ್‌ಲೈನ್ ಜನಸಂಪರ್ಕ ಅಭಿಯಾನಗಳಿಗಾಗಿ ಎಂಒಎಎಸ್ / ತಿಳಿವಳಿಕೆ ಒಪ್ಪಂದಗಳ ಮೂಲಕ ತೊಡಗಿಸಿಕೊಳ್ಳಲಾಗುತ್ತದೆ.
  4. ವಿಧಿ ಸಂಜೀವಿನಿ: ಕೇಂದ್ರೀಕೃತ ಡಿಜಿಟಲ್ ವೇದಿಕೆಯನ್ನು ಮೊದಲಿನಿಂದ ಕೊನೆಯವರೆಗೆ ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಡೇಟಾ-ಚಾಲಿತ ನಿರ್ಧಾರ ತೆಗೆದುಕೊಳ್ಳಲು ನಾಲ್ಕನೇ ಘಟಕವಾಗಿ ಪರಿಚಯಿಸಲಾಗಿದೆ. ಇದು ಎಲ್ಲಾ ನಾಲ್ಕು ಘಟಕಗಳಿಂದ ನೈಜ-ಸಮಯದ ಡೇಟಾ ಹರಿವುಗಳನ್ನು ಕ್ರೋಢೀಕರಿಸುವ ಇಂಟಿಗ್ರೇಟೆಡ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿರುತ್ತದೆ; ಕಾನೂನು ಪ್ರಶ್ನೆ ಪರಿಹಾರ ಮತ್ತು ಡೇಟಾ ವಿಶ್ಲೇಷಣೆ ಮತ್ತು ವರದಿಗಾಗಿ ಕೃತಕ ಬುದ್ಧಿಮತ್ತೆ ಚಾಲಿತ ಬಹುಭಾಷಾ ಚಾಟ್ಬಾಟ್ ʻನ್ಯಾಯ ಸೇತುʼ (ಭಾಶಿನಿಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ) ಏಕೀಕರಣ.

ʻದಿಶಾ 2.0ʼ ಇದು  ʻಎಸ್‌ಡಿಜಿ-16ʼ ಮತ್ತು 2047ರ ʻವಿಕಸಿತ ಭಾರತʼ ಆಶಯಕ್ಕೆ ಭಾರತದ ಬದ್ಧತೆಯನ್ನು ಮುನ್ನಡೆಸುತ್ತದೆ. 2025ರ ನವೆಂಬರ್ 8 ರಂದು ನಡೆದ 'ಕಾನೂನು ನೆರವು ವಿತರಣಾ ಕಾರ್ಯವಿಧಾನಗಳ ಬಲವರ್ಧನೆ' ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ "ಸುಲಭ ನ್ಯಾಯ" ಇಲ್ಲದೆ ಸುಲಭ ವ್ಯವಹಾರ" ಮತ್ತು "ಸುಲಭ ಜೀವನ"  ಅಪೂರ್ಣವಾಗಿ ಉಳಿಯುತ್ತದೆ ಎಂಬ ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಇದು ಹೊಂದಿಕೆಯಾಗಿದೆ. ಆರ್ಥಿಕ ಅಥವಾ ಇತರ ಅಂಗವೈಕಲ್ಯಗಳ ಕಾರಣದಿಂದಾಗಿ ಯಾವುದೇ ನಾಗರಿಕರಿಗೆ ನ್ಯಾಯದ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರದ ನಿರಂತರ ಬದ್ಧತೆಯನ್ನು ʻ2.0ʼ ಪುನರುಚ್ಚರಿಸುತ್ತದೆ.  ಭಾರತದ ಸಂವಿಧಾನದ ಅನುಚ್ಛೇದ 39ಎ ಅಡಿಯಲ್ಲಿ ಹೇಳಿದಂತೆ. ʻದಿಶಾ 2.0ʼ ಕಾರ್ಯಕ್ರಮದ ಎಲ್ಲಾ ನಾಲ್ಕು ಘಟಕಗಳಲ್ಲಿ 3.00 ಕೋಟಿ ಫಲಾನುಭವಿಗಳನ್ನು ತಲುಪುವ ಗುರಿಯನ್ನು ಹೊಂದಿದೆ

ಹಿಂದಿನ ʻದಿಶಾʼ ಯೋಜನೆಯನ್ನು(2021-26), 250 ಕೋಟಿ ರೂ.ಗಳ ಆರ್ಥಿಕ ವೆಚ್ಚದೊಂದಿಗೆ, ನ್ಯಾಯಾಂಗ ಇಲಾಖೆಯು ಅಖಿಲ ಭಾರತ ಮಟ್ಟದಲ್ಲಿ ಜಾರಿಗೆ ತಂದಿತು.  2026ರ ಮೇ 31ರಂತೆ, ʻದಿಶಾʼ ಯೋಜನೆಯು 2.37 ಕೋಟಿ ಫಲಾನುಭವಿಗಳ ಒಟ್ಟು ವ್ಯಾಪ್ತಿಯನ್ನು ಸಾಧಿಸಿದೆ. ಇದರಲ್ಲಿ ʻಟೆಲಿ-ಲಾʼ ಅಡಿಯಲ್ಲಿ 1.13 ಕೋಟಿಗೂ ಅಧಿಕ ವ್ಯಾಜ್ಯ ಪೂರ್ವ ಕಾನೂನು ಸಲಹೆಗಳು, 10,681 ನೋಂದಾಯಿತ ʻಪ್ರೊ-ಬೋನೊʼ ವಕೀಲರು ಮತ್ತು 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾದ 109 ʻಪ್ರೊ-ಬೋನೊ ಕ್ಲಬ್‌ʼಗಳು ಮತ್ತು ʻಎಲ್ಎಲ್ಎಲ್ಎಪಿʼ ಅಡಿಯಲ್ಲಿ 1.24 ಕೋಟಿಗೂ ಅಧಿಕ ಫಲಾನುಭವಿಗಳನ್ನು ತಲುಪಲಾಗಿದೆ.

 

*****


(रिलीज़ आईडी: 2276677) आगंतुक पटल : 15
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil