ಶಿಕ್ಷಣ ಸಚಿವಾಲಯ
ಯುವ ಸಂಗಮ ಹಂತ VI ರ ಅಡಿಯಲ್ಲಿ ರಾಜಸ್ಥಾನದ ಶ್ರೀಮಂತ ಪರಂಪರೆ, ಆವಿಷ್ಕಾರದ ಪರಿಸರ ವ್ಯವಸ್ಥೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯನ್ನು ಅನ್ವೇಷಿಸಿದ ಕರ್ನಾಟಕದ ನಿಯೋಗ
ಜೈಪುರದ MNIT ಆತಿಥ್ಯದಲ್ಲಿ ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಕಿಸನ್ ರಾವ್ ಬಾಗ್ಡೆ ಅವರೊಂದಿಗೆ ಸಂವಾದ ನಡೆಸಿದ ಪ್ರತಿನಿಧಿಗಳು
प्रविष्टि तिथि:
15 JUN 2026 6:56PM by PIB Bengaluru
ಯುವ ಸಂಗಮ ಹಂತ VIರ ಭಾಗವಾಗಿ, ಧಾರವಾಡದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (IIIT) ನೇತೃತ್ವದ ಕರ್ನಾಟಕದ ನಿಯೋಗವೊಂದು, ಜೈಪುರದ ಮಾಳವೀಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MNIT) ಆತಿಥ್ಯದಲ್ಲಿ ರಾಜಸ್ಥಾನಕ್ಕೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಮ್ಮಿಲನದ ಭೇಟಿಯನ್ನು ಕೈಗೊಂಡಿತು. ರಾಜ್ಯದ ಶ್ರೀಮಂತ ಸಂಪ್ರದಾಯಗಳು, ಪರಂಪರೆ ಮತ್ತು ಶೈಕ್ಷಣಿಕ ಪರಿಸರ ವ್ಯವಸ್ಥೆಯನ್ನು ಭಾಗವಹಿಸುವವರಿಗೆ ಪರಿಚಯಿಸಲಾಯಿತು. ಈ ಭೇಟಿಯು ಕಳೆದ ಶುಕ್ರವಾರ (ಜೂನ್ 12, 2026) ಮುಕ್ತಾಯಗೊಂಡಿತು.
ಮಂಗಳವಾರ (ಜೂನ್ 9, 2026) ಜೈಪುರದ ಲೋಕ ಭವನದಲ್ಲಿ ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಕಿಸನ್‌ರಾವ್ ಬಾಗ್ಡೆಅವರೊಂದಿಗೆ ನಿಯೋಗವು ನಡೆಸಿದ ಸಂವಾದವು ಈ ಭೇಟಿಯ ಪ್ರಮುಖ ಘಟ್ಟವಾಗಿತ್ತು. ಸಂವಾದದ ವೇಳೆ, ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅಳವಡಿಸಿಕೊಳ್ಳಲು, ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಕೊಡುಗೆ ನೀಡಲು ಮತ್ತು ರಾಷ್ಟ್ರೀಯ ಏಕತೆಯ ರಾಯಭಾರಿಗಳಾಗಿ ಕಾರ್ಯನಿರ್ವಹಿಸಲು ರಾಜ್ಯಪಾಲರು ಪ್ರತಿನಿಧಿಗಳನ್ನು ಪ್ರೋತ್ಸಾಹಿಸಿದರು. ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವಲ್ಲಿ ಮತ್ತು ವಿವಿಧ ಪ್ರದೇಶಗಳ ನಡುವೆ ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸುವಲ್ಲಿ ಯುವಕರ ತೊಡಗಿಸಿಕೊಳ್ಳುವಿಕೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಈ ಅಧಿವೇಶನವು ನಾಯಕತ್ವ, ಸಾರ್ವಜನಿಕ ಸೇವೆ ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಯುವ ನಾಗರಿಕರ ಪಾತ್ರದ ಕುರಿತು ಮೌಲ್ಯಯುತ ಒಳನೋಟಗಳನ್ನು ಒದಗಿಸಿತು.


ತಮ್ಮ ವಾಸ್ತವ್ಯದ ಅವಧಿಯಲ್ಲಿ, ಪ್ರತಿನಿಧಿಗಳು ರಾಜಸ್ಥಾನದ ಹಲವಾರು ಪ್ರಸಿದ್ಧ ಪಾರಂಪರಿಕ ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ವೀಕ್ಷಿಸಿದರು. ಈ ಮೂಲಕ ರಾಜ್ಯದ ಶ್ರೀಮಂತ ಐತಿಹಾಸಿಕ ಪರಂಪರೆ, ವಾಸ್ತುಶಿಲ್ಪದ ಭವ್ಯತೆ ಮತ್ತು ವಿಶಿಷ್ಟ ಸಂಪ್ರದಾಯಗಳ ನೇರ ಅನುಭವವನ್ನು ಪಡೆದರು. ಸಾಂಸ್ಕೃತಿಕ ಪ್ರದರ್ಶನಗಳು, ಸ್ಥಳೀಯ ಕಲಾವಿದರೊಂದಿಗಿನ ಸಂವಾದಗಳು ಮತ್ತು ಸಾಂಪ್ರದಾಯಿಕ ಕರಕುಶಲ ಹಾಗೂ ಸ್ಥಳೀಯ ಕಲಾ ಪ್ರಕಾರಗಳ ಪರಿಚಯದ ಮೂಲಕ ಭಾಗವಹಿಸಿದವರು ರಾಜಸ್ಥಾನದ ವಿಶಿಷ್ಟ ಜಾನಪದ ಸಂಸ್ಕೃತಿಯನ್ನು ಸವಿದರು.
ನಿಯೋಗವು ಜೈಪುರದ MNIT ಯ ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳಿಗೂ ಭೇಟಿ ನೀಡಿತು. ಅಲ್ಲಿ ಅವರು ಬೋಧಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಆವಿಷ್ಕಾರಗಳು, ಸಂಶೋಧನಾ ಉಪಕ್ರಮಗಳು, ಉದ್ಯಮಶೀಲತಾ ಚಟುವಟಿಕೆಗಳು ಮತ್ತು ಪ್ರಗತಿಯನ್ನು ಅರ್ಥಮಾಡಿಕೊಳ್ಳಲು ಈ ಭೇಟಿಯು ಅವಕಾಶವನ್ನು ಒದಗಿಸಿತು. ಭಾಗವಹಿಸಿದವರು ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಶೈಕ್ಷಣಿಕ ಸಹಯೋಗ ಹಾಗೂ ಅಂತರ್-ಸಾಂಸ್ಕೃತಿಕ ಕಲಿಕೆಯನ್ನು ಉತ್ತೇಜಿಸಿದರು.
ಯುವ ಸಂಗಮದ ಅನುಭವಾತ್ಮಕ ಕಲಿಕೆಯ ಭಾಗವಾಗಿ, ಪ್ರತಿನಿಧಿಗಳು ರಾಜಸ್ಥಾನದಾದ್ಯಂತ ವಿವಿಧ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಪ್ರಮುಖ ಸ್ಥಳಗಳನ್ನು ವೀಕ್ಷಿಸಿದರು. ಈ ಮೂಲಕ ನಗರಾಭಿವೃದ್ಧಿ, ಸುಸ್ಥಿರ ಪದ್ಧತಿಗಳು, ಪ್ರವಾಸೋದ್ಯಮ ಉತ್ತೇಜನ ಮತ್ತು ಸಾರ್ವಜನಿಕ ಆಡಳಿತದಲ್ಲಿ ರಾಜ್ಯದ ಸಾಧನೆಗಳ ಕುರಿತು ಒಳನೋಟಗಳನ್ನು ಪಡೆದರು.
ದೇಶದ ಯುವಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವ ಮತ್ತು ಜನರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ, ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು 'ಏಕ ಭಾರತ ಶ್ರೇಷ್ಠ ಭಾರತ' ಕಾರ್ಯಕ್ರಮದ ಅಡಿಯಲ್ಲಿ 'ಯುವ ಸಂಗಮ ಹಂತ VI' ಉಪಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮವು 22 ಜೋಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳಿಗೆ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಸಂಪ್ರದಾಯಗಳು, ಶೈಕ್ಷಣಿಕ ಸಂಸ್ಥೆಗಳು, ಆವಿಷ್ಕಾರದ ಕ್ಷೇತ್ರಗಳು ಮತ್ತು ಅಭಿವೃದ್ಧಿ ಉಪಕ್ರಮಗಳೊಂದಿಗೆ ತೊಡಗಿಸಿಕೊಳ್ಳಲು ಅವಕಾಶಗಳನ್ನು ಒದಗಿಸುತ್ತದೆ. ಆ ಮೂಲಕ, ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರದ ಬಗೆಗಿನ ಮೆಚ್ಚುಗೆಯನ್ನು ಇದು ಮತ್ತಷ್ಟು ಹೆಚ್ಚಿಸುತ್ತದೆ.
*****
(रिलीज़ आईडी: 2273282)
आगंतुक पटल : 15