ನೀತಿ ಆಯೋಗ
azadi ka amrit mahotsav

ಶಾಲಾ ನಾವೀನ್ಯತೆ ಪ್ರಯೋಗಾಲಯಗಳ ಮೂಲಕ ದ್ವಿಪಕ್ಷೀಯ ನಾವೀನ್ಯತೆ ಸಹಕಾರವನ್ನು ಬಲಪಡಿಸಲು ಭಾರತ–ಫ್ರಾನ್ಸ್ ಎಟಿಎಲ್ ಸೇತುವೆ


ಅಟಲ್ ಇನ್ನೋವೇಶನ್ ಮಿಷನ್ ಮತ್ತು ಡಾಸೋ ಸಿಸ್ಟಮ್ಸ್   ಸಂಸ್ಥೆಗಳ ಈ ಮಹತ್ವದ ಉಪಕ್ರಮವು,  ಪಾಲುದಾರಿಕೆಯ ನಾವೀನ್ಯತೆ ಪರಿಸರ ವ್ಯವಸ್ಥೆಯ ಮೂಲಕ ಭಾರತ ಮತ್ತು ಫ್ರಾನ್ಸ್ನ ಯುವ ನಾವೀನ್ಯಕಾರರನ್ನು ಒಟ್ಟಿಗೆ ಜೋಡಿಸುತ್ತದೆ

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ಉದ್ಘಾಟಿಸಿದ 'ಭಾರತ್ ಇನ್ನೋವೇಟ್ಸ್ 2026' ಕಾರ್ಯಕ್ರಮದ ಸಂದರ್ಭದಲ್ಲಿ, ಫ್ರಾನ್ಸ್ನ ನೈಸ್   ನಗರದಲ್ಲಿ ಒಪ್ಪಂದದ ಪತ್ರಕ್ಕೆ ಸಹಿ ಹಾಕಲಾಯಿತು

प्रविष्टि तिथि: 14 JUN 2026 8:12PM by PIB Bengaluru

ಫ್ರಾನ್ಸ್/ದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವೆ ನಾವೀನ್ಯತೆ ಆಧಾರಿತ ಸಹಕಾರವನ್ನು ಮತ್ತಷ್ಟು ಗಾಢಗೊಳಿಸಲು ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರಾನ್ ಅವರ ಹಂಚಿಕೆಯ ಸಂಕಲ್ಪದ ಮಾರ್ಗದರ್ಶನದಲ್ಲಿ, ಅಟಲ್ ಇನ್ನೋವೇಶನ್ ಮಿಷನ್, ನೀತಿ ಆಯೋಗ ಮತ್ತು ಲಾ ಫೌಂಡೇಶನ್ ಡಾಸೋ ಸಿಸ್ಟಮ್ಸ್ ಸಂಸ್ಥೆಗಳು ಜಂಟಿಯಾಗಿ ಎರಡೂ ದೇಶಗಳ ಯುವ ನಾವೀನ್ಯಕಾರರ ನಡುವೆ ಸಹಯೋಗವನ್ನು ಏರ್ಪಡಿಸಲು "ಭಾರತ–ಫ್ರಾನ್ಸ್ ಎಟಿಎಲ್ ಸೇತುವೆ" ಯನ್ನು ಸ್ಥಾಪಿಸಿವೆ.

ಈ ಉಪಕ್ರಮವು ಭಾರತದ ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ಮಾದರಿಯಿಂದ ಪ್ರೇರಿತಗೊಂಡು, ಫ್ರಾನ್ಸ್ ನಲ್ಲಿ ಮೊದಲ ಬಾರಿಗೆ 'ಶಾಲಾ ನಾವೀನ್ಯತೆ ಪ್ರಯೋಗಾಲಯ'ವನ್ನು ಸ್ಥಾಪಿಸುತ್ತದೆ. ಇದು ಯುವ ವಿದ್ಯಾರ್ಥಿಗಳಿಗೆ ಒಟ್ಟಾಗಿ ಕೆಲಸ ಮಾಡಲು, ನಾವೀನ್ಯತೆ ಪರಿಸರ ವ್ಯವಸ್ಥೆಗಳ ನಡುವಿನ ಸಂಬಂಧವನ್ನು ಬಲಪಡಿಸಲು ಮತ್ತು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ನಾವೀನ್ಯತೆ ಸಹಕಾರವನ್ನು ಹೆಚ್ಚಿಸಲು ಒಂದು ವ್ಯವಸ್ಥಿತ ವೇದಿಕೆಯನ್ನು ಸೃಷ್ಟಿಸುತ್ತದೆ.

ಈ ಸಹಯೋಗವನ್ನು ಅಧಿಕೃತಗೊಳಿಸುವ ಒಪ್ಪಂದದ ಪತ್ರವನ್ನು (LoI) ಅಟಲ್ ಇನ್ನೋವೇಶನ್ ಮಿಷನ್ (ನೀತಿ ಆಯೋಗ) ಇದರ ಮಿಷನ್ ಡೈರೆಕ್ಟರ್ ದೀಪಕ್ ಬಾಗ್ಲಾ ಮತ್ತು ಲಾ ಫೌಂಡೇಶನ್ ಡಾಸೋ ಸಿಸ್ಟಮ್ಸ್ನ ವ್ಯವಸ್ಥಾಪಕ ನಿರ್ದೇಶಕಿ  ಮೇರಿ-ಪಿಯರೆ ಔಲಾಸ್ ಅವರು ಇಂದು ಫ್ರಾನ್ಸ್ನಲ್ಲಿ ಪರಸ್ಪರ ವಿನಿಮಯ ಮಾಡಿಕೊಂಡರು.

ಭಾರತ–ಫ್ರಾನ್ಸ್ ಎಟಿಎಲ್ ಸೇತುವೆಯು ಗಡಿಗಳನ್ನು ಮೀರಿದ ನಾವೀನ್ಯತೆ ಕಾರ್ಯಕ್ರಮಗಳು, ಉದ್ಯಮಶೀಲತೆಯ ವಿನಿಮಯಗಳು ಮತ್ತು ಭಾರತ ಹಾಗೂ ಫ್ರಾನ್ಸ್ ನ ನಾವೀನ್ಯತೆ ಪರಿಸರ ವ್ಯವಸ್ಥೆಗಳ ನಡುವಿನ ಆಳವಾದ ಸಹಯೋಗವನ್ನು ಉತ್ತೇಜಿಸಲು ಒಂದು ಕಾರ್ಯತಂತ್ರದ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಜ್ಞಾನ ವಿನಿಮಯ, ಸಾಮರ್ಥ್ಯ ವೃದ್ಧಿ ಮತ್ತು ಜಂಟಿ ನಾವೀನ್ಯತೆ ಚಟುವಟಿಕೆಗಳ ಮೂಲಕ, ಈ ಎಟಿಎಲ್ ಸೇತುವೆಯು ಯುವ ನಾವೀನ್ಯಕಾರರಿಗೆ ನೈಜ ಪ್ರಪಂಚದ ಸವಾಲುಗಳಿಗೆ ಜಂಟಿಯಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಆರಂಭಿಕ ಹಂತದ ನಾವೀನ್ಯತೆ ಸಾಮರ್ಥ್ಯಗಳನ್ನು ಬಲಪಡಿಸಲು ಅನುವು ಮಾಡಿಕೊಡುತ್ತದೆ. ಯುವ ನಾವೀನ್ಯಕಾರರು, ಶಿಕ್ಷಕರು ಮತ್ತು ಪಾಲುದಾರರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಮೂಲಕ, ಈ ಉಪಕ್ರಮವು ನಾವೀನ್ಯತೆಯ ಸದಾ ಚೈತನ್ಯದಾಯಕ ಸಂಸ್ಕೃತಿಯನ್ನು ಬೆಳೆಸುವ ಮತ್ತು ಭಾರತ ಹಾಗೂ ಫ್ರಾನ್ಸ್ ನಡುವೆ ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಭಾರತ–ಫ್ರಾನ್ಸ್ ಎಟಿಎಲ್ ಸೇತುವೆ ಉಪಕ್ರಮವನ್ನು "ಭಾರತ–ಫ್ರಾನ್ಸ್ ನಾವೀನ್ಯತೆ ವರ್ಷ 2026" ರ ಅವಧಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ಇದು ನಾವೀನ್ಯತೆ ಆಧಾರಿತ ಸಹಕಾರವನ್ನು ಬಲಪಡಿಸಲು ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಬಲ್ಲ ಪ್ರತಿಭೆಗಳನ್ನು ಪೋಷಿಸಲು ಉಭಯ ದೇಶಗಳ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಉಪಕ್ರಮವು ಶಾಲಾ ಮಟ್ಟದ ನಾವೀನ್ಯತೆಯಲ್ಲಿ ಅಂತರರಾಷ್ಟ್ರೀಯ ಸಹಯೋಗವನ್ನು ವಿಸ್ತರಿಸಲು ಮತ್ತು ಎರಡೂ ದೇಶಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ನಾವೀನ್ಯತೆ ಪರಿಸರ ವ್ಯವಸ್ಥೆಗಳ ನಡುವೆ ಅರ್ಥಪೂರ್ಣ ವಿನಿಮಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

ಭಾರತದ ಸಾಂಸ್ಕೃತಿಕ ತತ್ವವಾದ "ವಸುಧೈವ ಕುಟುಂಬಕಂ" - ಇಡೀ ಜಗತ್ತು ಒಂದು ಕುಟುಂಬ ಎಂಬ ಪರಿಕಲ್ಪನೆಯಲ್ಲಿ ಬೇರೂರಿರುವ ಈ ಉಪಕ್ರಮವು ಜ್ಞಾನ, ನಾವೀನ್ಯತೆ ಮತ್ತು ಪ್ರಗತಿಯನ್ನು ಎಲ್ಲರೊಂದಿಗೆ ಹಂಚಿಕೊಂಡಾಗ ಮಾತ್ರ ಅವು ಹೆಚ್ಚು ಅರ್ಥಪೂರ್ಣವಾಗುತ್ತವೆ ಎಂಬ ನಂಬಿಕೆಯನ್ನು ಬಿಂಬಿಸುತ್ತದೆ. ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ಕಾರ್ಯವಿಧಾನ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯ ವಿಧಾನವನ್ನು ಹಂಚಿಕೊಳ್ಳುವ ಮೂಲಕ, ಭಾರತವು ಕೇವಲ ಒಂದು ಯಶಸ್ವಿ ನಾವೀನ್ಯತೆ ಮಾದರಿಯನ್ನು ಮಾತ್ರವಲ್ಲದೆ, ಪಾಲುದಾರಿಕೆ, ಸ್ನೇಹ ಮತ್ತು ಸಾಮೂಹಿಕ ಬೆಳವಣಿಗೆಯ ಮನೋಭಾವವನ್ನೂ ವಿಸ್ತರಿಸುತ್ತಿದೆ.

ಈ ಉಪಕ್ರಮದ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ), ನೀತಿ ಆಯೋಗದ ಮಿಷನ್ ಡೈರೆಕ್ಟರ್ ದೀಪಕ್ ಬಾಗ್ಲಾ ಅವರು, "ಈ ಮೈಲಿಗಲ್ಲು ಭಾರತದ ನಾವೀನ್ಯತೆಯ ಪಯಣದ ಮೇಲೆ ಜಗತ್ತಿಗೆ ಇರುವ ಬೆಳೆಯುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ, ಭಾರತವು ಕೇವಲ ದೇಶೀಯವಾಗಿ ನಾವೀನ್ಯತೆಯನ್ನು ಪೋಷಿಸುವ ದೇಶವಾಗಿ ಮಾತ್ರವಲ್ಲದೆ, ಜಾಗತಿಕವಾಗಿ ಪ್ರಸ್ತುತವಾದ ಮಾದರಿಗಳು ಮತ್ತು ಪರಿಹಾರಗಳನ್ನು ಕೊಡುಗೆಯಾಗಿ ನೀಡುವ ದೇಶವಾಗಿ ವಿಕಸನಗೊಂಡಿದೆ. ನಾವು 'ವಿಕಸಿತ ಭಾರತ 2047'ರ ಗುರಿಯತ್ತ ಮುನ್ನಡೆಯುತ್ತಿರುವಾಗ, ಭಾರತ–ಫ್ರಾನ್ಸ್ ಎಟಿಎಲ್ ಸೇತುವೆಯಂತಹ ಉಪಕ್ರಮಗಳು ನಾವೀನ್ಯತೆ, ಉದ್ಯಮಶೀಲತೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತವೆ. ಭಾರತದ ಅಟಲ್ ಟಿಂಕರಿಂಗ್ ಲ್ಯಾಬ್ ಪರಿಸರ ವ್ಯವಸ್ಥೆಯೊಂದಿಗೆ ಜೋಡಿಸಲಾದ ಶಾಲಾ ನಾವೀನ್ಯತೆ ಪ್ರಯೋಗಾಲಯವನ್ನು ಫ್ರಾನ್ಸ್ ನಲ್ಲಿ ಸ್ಥಾಪಿಸುವುದು ಕೇವಲ ಹೊಸ ಕಲಿಕೆಯ ಸ್ಥಳವನ್ನು ಸೃಷ್ಟಿಸುವುದಲ್ಲ; ಬದಲಿಗೆ ಭೌಗೋಳಿಕ ಗಡಿಗಳನ್ನು ಮೀರಿ ಪ್ರತಿಯೊಬ್ಬ ಯುವಕನಿಗೂ ಹೊಸದನ್ನು ಅನ್ವೇಷಿಸಲು, ಸೃಷ್ಟಿಸಲು ಮತ್ತು ಮುನ್ನಡೆಸಲು ಅವಕಾಶ ಸಿಗಬೇಕು ಎಂಬ ದೂರದೃಷ್ಟಿಯನ್ನು ಹಂಚಿಕೊಳ್ಳುವುದಾಗಿದೆ" ಎಂದರು.

ಲಾ ಫೌಂಡೇಶನ್ ಡಾಸೋ ಸಿಸ್ಟಮ್ಸ್ ವ್ಯವಸ್ಥಾಪಕ, ನಿರ್ದೇಶಕರಾದ ಮೇರಿ-ಪಿಯರೆ ಔಲಾಸ್ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ, "ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಶಿಕ್ಷಣವು ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಪರಿಶೋಧನಾತ್ಮಕ ಮತ್ತು ಪ್ರಾಯೋಗಿಕ ಕಲಿಕೆಯ ಮೂಲಕ ಯುವಜನರು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕಲಿಯಲು ಮತ್ತು ಅನ್ವೇಷಿಸಲು ಪ್ರೇರೇಪಿಸುವುದು ಅತ್ಯಗತ್ಯ. ಅಟಲ್ ನಾವೀನ್ಯತೆ ಪ್ರಯೋಗಾಲಯಗಳು ಚಿಕ್ಕ ವಯಸ್ಸಿನಿಂದಲೇ ಸೃಜನಶೀಲತೆ, ಪ್ರಯೋಗಶೀಲತೆ ಮತ್ತು ಉದ್ಯಮಶೀಲತೆಯ ಕೌಶಲ್ಯಗಳನ್ನು ಪೋಷಿಸುವ ಮೂಲಕ ಈ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಸಹಾಯ ಮಾಡುವ ವಿಶಿಷ್ಟ ಉಪಕ್ರಮವಾಗಿವೆ. ಕಳೆದ 7 ವರ್ಷಗಳಿಂದ, ಭಾರತ ಮತ್ತು ಫ್ರಾನ್ಸ್ ನಲ್ಲಿ ನಮ್ಮ ಕಾರ್ಯಚಟುವಟಿಕೆಗಳ ಮೂಲಕ, ಲಾ ಫೌಂಡೇಶನ್ ಡಾಸೋ ಸಿಸ್ಟಮ್ಸ್ ಈ ನಾವೀನ್ಯತೆಯ ಮನೋಭಾವವನ್ನು ಬೆಳೆಸಲು ಮತ್ತು ಅಂತರರಾಷ್ಟ್ರೀಯ ಸಹಯೋಗವನ್ನು ಬಲಪಡಿಸಲು ಬದ್ಧವಾಗಿದೆ. ಅಟಲ್ ಇನ್ನೋವೇಶನ್ ಮಿಷನ್ ಗೆ ಧನ್ಯವಾದಗಳು, ಯುವಜನರ ಸೇವೆ ಮತ್ತು ಹಂಚಿಕೆಯ ನಾವೀನ್ಯತೆಯ ಭವಿಷ್ಯಕ್ಕಾಗಿ ನಮ್ಮ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಈ ಹೊಸ ಹೆಜ್ಜೆ ಇಟ್ಟಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ" ಎಂದು ಹೇಳಿದರು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶಾದ್ಯಂತ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಬೆಳೆಸುವ ಮತ್ತು 'ವಿಕಸಿತ ಭಾರತ 2047'ರ ಗುರಿಗೆ ಕೊಡುಗೆ ನೀಡುವ ದೂರದೃಷ್ಟಿಯೊಂದಿಗೆ 2016ರಲ್ಲಿ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ಅನ್ನು ಪ್ರಾರಂಭಿಸಿದರು. ಆರಂಭದಿಂದಲೂ, ಎಐಎಮ್ ಶಾಲೆಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ನವೋದ್ಯಮಗಳು ಮತ್ತು ಕೈಗಾರಿಕೆಗಳಾದ್ಯಂತ ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಸೃಷ್ಟಿಸಲು ಮತ್ತು ಉತ್ತೇಜಿಸಲು ಒಂದು ಪ್ರಮುಖ ರಾಷ್ಟ್ರೀಯ ಉಪಕ್ರಮವಾಗಿ ಹೊರಹೊಮ್ಮಿದೆ. ಎಐಎಂ ಅಡಿಯಲ್ಲಿ, ಅಟಲ್ ಟಿಂಕರಿಂಗ್ ಲ್ಯಾಬ್ ಗಳು ವಿಶ್ವದ ಅತಿ ದೊಡ್ಡ ಶಾಲಾ ಆಧಾರಿತ ನಾವೀನ್ಯತೆ ಜಾಲಗಳಲ್ಲಿ ಒಂದಾಗಿ ವಿಕಸನಗೊಂಡಿವೆ, ಇದು ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿನ್ಯಾಸ ಚಿಂತನೆ, ಸಮಸ್ಯೆ ಬಗೆಹರಿಸುವುದು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಉದ್ಯಮಶೀಲತೆಯ ಕೌಶಲ್ಯಗಳನ್ನು ಸಬಲೀಕರಣಗೊಳಿಸಿವೆ.

ಕಳೆದ ದಶಕದಲ್ಲಿ, ಭಾರತವು ವಿಶ್ವದ ಅತಿ ದೊಡ್ಡ ನಾವೀನ್ಯತೆ ಪರಿಸರ ವ್ಯವಸ್ಥೆಗಳಲ್ಲಿ ಒಂದನ್ನು ನಿರ್ಮಿಸಿದೆ. ಈ ರೂಪಾಂತರದ ಪ್ರಮುಖ ಪ್ರೇರಕ ಶಕ್ತಿಯೆಂದರೆ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್, ಇದು ತರಗತಿಗಳಿಂದ ಹಿಡಿದು ನವೋದ್ಯಮಗಳು ಮತ್ತು ಕೈಗಾರಿಕೆಗಳವರೆಗೆ ನಾವೀನ್ಯತೆಯನ್ನು ಪೋಷಿಸಿದೆ.

2016 ರಿಂದ, ಭಾರತದಾದ್ಯಂತ 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಸ್ಥಾಪಿಸಲಾಗಿದ್ದು, ಇದು  1.1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿಗೆ ವಿನ್ಯಾಸ ಚಿಂತನೆ, ರೊಬೊಟಿಕ್ಸ್, ಎಲೆಕ್ಟ್ರಾನಿಕ್ಸ್, 3ಡಿ ವಿನ್ಯಾಸ ಮತ್ತು ಮುದ್ರಣ, ಕೃತಕ ಬುದ್ಧಿಮತ್ತೆ  ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳೊಂದಿಗೆ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ನಾವೀನ್ಯತೆಯು ಕುತೂಹಲದಿಂದ ಪ್ರಾರಂಭವಾಗುತ್ತದೆ ಮತ್ತು ಯುವ ಮನಸ್ಸುಗಳಿಗೆ ಪ್ರಯೋಗ ಮಾಡಲು, ಸೃಷ್ಟಿಸಲು ಮತ್ತು ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಸರಿಯಾದ ವಾತಾವರಣವನ್ನು ಒದಗಿಸಿದಾಗ ಅದು ಅಭಿವೃದ್ಧಿ ಹೊಂದುತ್ತದೆ ಎಂಬುದನ್ನು ಎಟಿಎಲ್ ಆಂದೋಲನವು ನಿರೂಪಿಸಿದೆ.

ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗಮನಿಸಿದಂತೆ, "ಭಾರತದ ಭವಿಷ್ಯವು ಯುವಜನರು ಮಾಡುವ ನಾವೀನ್ಯತೆಗಳು ಮತ್ತು ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ." ಭಾರತ–ಫ್ರಾನ್ಸ್ ಎಟಿಎಲ್ ಸೇತುವೆಯು ಈ ದೂರದೃಷ್ಟಿಯನ್ನು ಸಾಕಾರಗೊಳಿಸುತ್ತದೆ ಮತ್ತು ಹೆಚ್ಚು ನಾವೀನ್ಯತೆ ಹಾಗೂ ಸಮೃದ್ಧ ಭವಿಷ್ಯವನ್ನು ರೂಪಿಸಲು ಯುವ ನಾವೀನ್ಯಕಾರರು ಮತ್ತು ವಿದ್ಯಾರ್ಥಿ ಉದ್ಯಮಿಗಳ ಶಕ್ತಿಯಲ್ಲಿ ನಂಬಿಕೆ, ಸ್ನೇಹ ಮತ್ತು ಸಹಯೋಗದ ಪ್ರಬಲ ಸಂಕೇತವಾಗಿ ನಿಲ್ಲುತ್ತದೆ.

 

*****


(रिलीज़ आईडी: 2272897) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Gujarati , Telugu , Malayalam