ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ವಿಜ್ಞಾನ ಆಧಾರಿತ ಬೆಳವಣಿಗೆಯನ್ನು ವೇಗಗೊಳಿಸಲು ಬಲವಾದ ಉದ್ಯಮ-ಶೈಕ್ಷಣಿಕ ಪಾಲುದಾರಿಕೆಗೆ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಕರೆ
ಸಂಶೋಧನೆ ಮತ್ತು ನಾವೀನ್ಯತೆಯ ಸರಳೀಕರಣವನ್ನು ಸಕ್ರಿಯಗೊಳಿಸಲು ಹಾಗೂ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ: ಡಾ. ಜಿತೇಂದ್ರ ಸಿಂಗ್
ಉದ್ಯಮದ ಅಳವಡಿಕೆಗೆ ಸಿದ್ಧವಾಗಿರುವ 800 ಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ಒಳಗೊಂಡಿರುವ ಸಿಎಸ್ಐಆರ್ ತಂತ್ರಜ್ಞಾನ ಪ್ರದರ್ಶನ ಪೋರ್ಟಲ್
प्रविष्टि तिथि:
13 JUN 2026 8:08PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಇಲಾಖೆಯ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಪ್ರಧಾನಮಂತ್ರಿ ಕಚೇರಿ, ಪರಮಾಣು ಇಂಧನ ಇಲಾಖೆ, ಬಾಹ್ಯಾಕಾಶ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಇಲಾಖೆಯ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು, ವೈಜ್ಞಾನಿಕ ಜ್ಞಾನವನ್ನು ಮಾರುಕಟ್ಟೆಗೆ ಸಿದ್ಧವಾಗಿರುವ ಪರಿಹಾರಗಳಾಗಿ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಫಲಿತಾಂಶಗಳಾಗಿ ಪರಿವರ್ತಿಸುವುದನ್ನು ವೇಗಗೊಳಿಸಲು ಸಂಶೋಧನಾ ಸಂಸ್ಥೆಗಳು, ಉದ್ಯಮ ಮತ್ತು ಸ್ಟಾರ್ಟ್-ಅಪ್ ಗಳ ನಡುವೆ ಆಳವಾದ ಸಹಯೋಗದ ಅಗತ್ಯವನ್ನು ಇಂದು ಒತ್ತಿಹೇಳಿದರು.
ರೈಸ್ ಸಮಾವೇಶ 2026 ರ ಸಂದರ್ಭದಲ್ಲಿ ನಡೆದ ಉದ್ಯಮ ಸಂವಾದ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ವೈಜ್ಞಾನಿಕ ಪ್ರಗತಿಯನ್ನು ಅದರ ಸಾಮಾಜಿಕ ಮತ್ತು ಆರ್ಥಿಕ ಪ್ರಭಾವದ ಮೂಲಕ ಹೆಚ್ಚಾಗಿ ಮೌಲ್ಯಮಾಪನ ಮಾಡಬೇಕಾದ ಯುಗಕ್ಕೆ ಭಾರತವು ಪ್ರವೇಶಿಸಿದೆ ಎಂದು ಒತ್ತಿಹೇಳಿದರು. ನಾವೀನ್ಯತೆಗಳು ಕೇವಲ ಪ್ರಾಯೋಗಿಕ ಹಂತವನ್ನು ಮೀರಿ ದೊಡ್ಡ ಪ್ರಮಾಣದಲ್ಲಿ ಅಂತಿಮ ಬಳಕೆದಾರರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳು ನಿಕಟ ಸಮನ್ವಯದೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು.
ಅನುಕೂಲಕರ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್ ಅವರು, ಸಾರ್ವಜನಿಕ ಅನುದಾನಿತ ಸಂಶೋಧನಾ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳುವಾಗ ಎದುರಿಸುತ್ತಿರುವ ಸವಾಲುಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಂತೆ ಉದ್ಯಮದ ಪ್ರತಿನಿಧಿಗಳಿಗೆ ತಿಳಿಸಿದರು.
ಸಾರ್ವಜನಿಕ ಅನುದಾನಿತ ಸಂಶೋಧನೆಗಳ ಮೂಲಕ ಅಭಿವೃದ್ಧಿಪಡಿಸಲಾದ ಸ್ಥಳೀಯ ತಂತ್ರಜ್ಞಾನಗಳ ಲಭ್ಯತೆಯನ್ನು ಸುಧಾರಿಸಲು ಕೈಗೊಳ್ಳಲಾಗುತ್ತಿರುವ ಹೆಚ್ಚುತ್ತಿರುವ ಪ್ರಯತ್ನಗಳನ್ನು ಸಚಿವರು ಉಲ್ಲೇಖಿಸಿದರು. ಸಿಎಸ್ಐಆರ್ ತಂತ್ರಜ್ಞಾನ ಪ್ರದರ್ಶನ ಪೋರ್ಟಲ್, ಪ್ರಸ್ತುತ 800 ಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ಒಳಗೊಂಡಿದೆ ಎಂದು ಭಾಗಿಗಳಿಗೆ ತಿಳಿಸಿದ ಅವರು, ಇದು ಕೈಗಾರಿಕೆಗಳು, ಉದ್ಯಮಿಗಳು ಮತ್ತು ಸ್ಟಾರ್ಟ್-ಅಪ್ ಗಳಿಗೆ ತಮ್ಮ ಅವಶ್ಯಕತೆಗಳಿಗೆ ಸೂಕ್ತವಾದ ಪರಿಹಾರಗಳನ್ನು ಗುರುತಿಸಲು ಹಾಗೂ ತಂತ್ರಜ್ಞಾನದ ಅಳವಡಿಕೆಯನ್ನು ವೇಗಗೊಳಿಸಲು ಒಂದು ಸಿದ್ಧ ವೇದಿಕೆಯನ್ನು ಒದಗಿಸುತ್ತದೆ ಎಂದರು.
ಉದ್ಯಮದೊಂದಿಗಿನ ಸಂಬಂಧವನ್ನು ಬಲಪಡಿಸುವ ಮಹತ್ವವನ್ನು ಒತ್ತಿಹೇಳಿದ ಡಾ. ಜಿತೇಂದ್ರ ಸಿಂಗ್ ಅವರು, ಉದ್ಯಮದೊಂದಿಗಿನ ಸಹಯೋಗವು ತಂತ್ರಜ್ಞಾನಗಳು ಪಕ್ವವಾದ ನಂತರವಲ್ಲದೆ, ಸಂಶೋಧನಾ ಯೋಜನೆಗಳ ಪರಿಕಲ್ಪನೆಯ ಹಂತದಲ್ಲೇ ಪ್ರಾರಂಭವಾಗಬೇಕು ಎಂದು ಹೇಳಿದರು. ಇಂತಹ ಆರಂಭಿಕ ತೊಡಗಿಸಿಕೊಳ್ಳುವಿಕೆಯು ವೈಜ್ಞಾನಿಕ ಪ್ರಯತ್ನಗಳನ್ನು ಮಾರುಕಟ್ಟೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಂದಿಸಲು ಸಹಾಯ ಮಾಡುತ್ತದೆ, ತಂತ್ರಜ್ಞಾನ ವರ್ಗಾವಣೆಯನ್ನು ಸುಗಮಗೊಳಿಸುತ್ತದೆ ಮತ್ತು ವಾಣಿಜ್ಯ ಯಶಸ್ಸಿನ ಸಾಧ್ಯತೆಗಳನ್ನು ಸುಧಾರಿಸುತ್ತದೆ ಎಂದು ಉಲ್ಲೇಖಿಸಿದರು.
ಸ್ಟಾರ್ಟ್-ಅಪ್ ಗಳು ಮತ್ತು ಸಣ್ಣ ಉದ್ಯಮಗಳಿಗೆ ಪ್ರವೇಶದ ಅಡೆತಡೆಗಳನ್ನು ಕಡಿಮೆ ಮಾಡುವಲ್ಲಿ ಹಂಚಿಕೆಯ ವೈವಿಧ್ಯಮಯ ವೈಜ್ಞಾನಿಕ ಮೂಲಸೌಕರ್ಯಗಳ ಮಹತ್ವವನ್ನು ಡಾ. ಜಿತೇಂದ್ರ ಸಿಂಗ್ ಒತ್ತಿಹೇಳಿದರು. ಸಿಎಸ್ಐಆರ್ ಪ್ರಯೋಗಾಲಯಗಳ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಸಾರ್ವಜನಿಕ ಹೂಡಿಕೆಯ ಮೂಲಕ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ಸೌಲಭ್ಯಗಳು ಉದಯೋನ್ಮುಖ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವೀನ್ಯಕಾರರು ಮತ್ತು ಕೈಗಾರಿಕೆಗಳಿಗೆ ಸುಲಭವಾಗಿ ಲಭ್ಯವಾಗುವ ಸಾಮಾನ್ಯ ವೇದಿಕೆಗಳಾಗಿ ಹೆಚ್ಚಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸ್ವಚ್ಛ ಇಂಧನ ತಂತ್ರಜ್ಞಾನಗಳ ಪ್ರಗತಿಯನ್ನು ಉಲ್ಲೇಖಿಸಿದ ಸಚಿವರು, ಪ್ರತಿದಿನ ಸುಮಾರು 1,000 ಸೆಲ್‌ಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಸ್ಥಾಪಿಸಲಾದ ಲಿಥಿಯಂ ಬ್ಯಾಟರಿ ಉತ್ಪಾದನಾ ಸೌಲಭ್ಯದ ಉದಾಹರಣೆಯನ್ನು ಒತ್ತಿ ಹೇಳಿದರು. ವೈಜ್ಞಾನಿಕ ಮೂಲಸೌಕರ್ಯಗಳು ಸ್ಥಾಪಿತ ಕೈಗಾರಿಕೆಗಳು ಮತ್ತು ಉದಯೋನ್ಮುಖ ಉದ್ಯಮಗಳೆರಡಕ್ಕೂ ಸ್ಥಳೀಯ ತಾಂತ್ರಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಹೇಗೆ ಬೆಂಬಲ ನೀಡಬಲ್ಲವು ಎಂಬುದನ್ನು ಇದು ಪ್ರದರ್ಶಿಸುತ್ತದೆ ಎಂದರು.
ಬಲವಾದ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಗೆ ಇನ್ಕ್ಯುಬೇಷನ್ ಹಂತವನ್ನು ಮೀರಿ ನಿರಂತರ ಸಾಂಸ್ಥಿಕ ಬೆಂಬಲದ ಅಗತ್ಯವಿದೆ ಎಂದು ಸಚಿವರು ಉಲ್ಲೇಖಿಸಿದರು. ಡೀಪ್-ಟೆಕ್ ಉದ್ಯಮಗಳಿಗಾಗಿ ವೈಜ್ಞಾನಿಕ ಮೂಲಸೌಕರ್ಯ ಮತ್ತು ಬೆಂಬಲ ಕಾರ್ಯವಿಧಾನಗಳ ಪ್ರವೇಶವನ್ನು ಸರಳಗೊಳಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಭಾಗಿಗಳಿಗೆ ತಿಳಿಸಿದರು. ಉದಯೋನ್ಮುಖ ತಂತ್ರಜ್ಞಾನದ ಸ್ಟಾರ್ಟ್-ಅಪ್ ಗಳು ಹೆಚ್ಚಾಗಿ ವಿಶಿಷ್ಟ ಸವಾಲುಗಳನ್ನು ಎದುರಿಸುತ್ತವೆ ಮತ್ತು ಆದ್ದರಿಂದ ನಾವೀನ್ಯತೆ ಆಧಾರಿತ ಉದ್ಯಮಶೀಲತೆಯ ವಾಸ್ತವಗಳನ್ನು ಗುರುತಿಸುವ ಹೊಂದಿಕೊಳ್ಳುವ ನೀತಿ ಚೌಕಟ್ಟುಗಳ ಅಗತ್ಯವಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಗಡಿರೇಖೆಯ ತಂತ್ರಜ್ಞಾನ (Frontier technology) ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್-ಅಪ್ ಗಳನ್ನು ಪೋಷಿಸಲು ಪ್ರತ್ಯೇಕ ಇನ್ಕ್ಯುಬೇಷನ್ ಕಾರ್ಯವಿಧಾನಗಳನ್ನು ಹೆಚ್ಚಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೈಲೈಟ್ ಮಾಡಿದರು. ಸಿಎಸ್ಐಆರ್ ಪರಿಸರ ವ್ಯವಸ್ಥೆಯಡಿಯಲ್ಲಿ ಸ್ಥಾಪಿಸಲಾದ ಆರು ಇನ್ಕ್ಯುಬೇಷನ್ ಕೇಂದ್ರಗಳು ಮಾರ್ಗದರ್ಶನ, ತಾಂತ್ರಿಕ ಸಲಹೆ ಮತ್ತು ಸಂಶೋಧನಾ ಸೌಲಭ್ಯಗಳ ಪ್ರವೇಶದ ಮೂಲಕ ನಾವೀನ್ಯಕಾರರನ್ನು ಬೆಂಬಲಿಸುತ್ತಿವೆ, ಆ ಮೂಲಕ ದೇಶದ ವಿಜ್ಞಾನ ಚಾಲಿತ ಉದ್ಯಮಶೀಲತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿವೆ ಎಂದು ಅವರು ಉಲ್ಲೇಖಿಸಿದರು.
ಸಾಮರ್ಥ್ಯ ವೃದ್ಧಿಯ ಮಹತ್ವವನ್ನು ಒತ್ತಿಹೇಳಿದ ಸಚಿವರು, ವೈಜ್ಞಾನಿಕ ಆಡಳಿತಗಾರರು ಮತ್ತು ಸಾಂಸ್ಥಿಕ ನಾಯಕರು ಸಹ ನಾವೀನ್ಯತೆ ರಂಗದ ಬದಲಾಗುತ್ತಿರುವ ಅವಶ್ಯಕತೆಗಳಿಗೆ ತಕ್ಕಂತೆ ಹೊಂದಿಕೊಳ್ಳಬೇಕು ಎಂದು ಹೇಳಿದರು. ಉದ್ಯಮ ಮತ್ತು ಸ್ಟಾರ್ಟ್-ಅಪ್ ಗಳ ನಿರೀಕ್ಷೆಗಳಿಗೆ ಅನುಗುಣವಾಗಿ ಆಡಳಿತಗಾರರನ್ನು ಸಂವೇದನಾಶೀಲರನ್ನಾಗಿಸುವ ನಿರಂತರ ಪ್ರಯತ್ನಗಳನ್ನು ಅವರು ಪ್ರಸ್ತಾಪಿಸಿದರು, ಆ ಮೂಲಕ ಹೆಚ್ಚು ಸ್ಪಂದಿಸುವ ಮತ್ತು ಸಹಯೋಗದ ಸಂಶೋಧನಾ ವಾತಾವರಣವನ್ನು ಉತ್ತೇಜಿಸಲಾಗುತ್ತಿದೆ ಎಂದರು.
ಸಂಶೋಧನಾ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮತ್ತು ದೇಶದ ವೈಜ್ಞಾನಿಕ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಭಾಗವಹಿಸಲು ಉದ್ಯಮದ ಮುಖಂಡರನ್ನು ಡಾ. ಜಿತೇಂದ್ರ ಸಿಂಗ್ ಪ್ರೋತ್ಸಾಹಿಸಿದರು. ಕೇವಲ ಜ್ಞಾನವನ್ನು ಸೃಷ್ಟಿಸುವುದು ಮಾತ್ರವಲ್ಲದೆ, ಉದ್ಯೋಗ ಸೃಷ್ಟಿ, ಕೈಗಾರಿಕಾ ಸ್ಪರ್ಧಾತ್ಮಕತೆ ಮತ್ತು ಸುಧಾರಿತ ಜೀವನದ ಗುಣಮಟ್ಟಕ್ಕೆ ಕೊಡುಗೆ ನೀಡುವ ತಂತ್ರಜ್ಞಾನಗಳು, ಉದ್ಯಮಗಳು ಮತ್ತು ಪರಿಹಾರಗಳನ್ನು ಸೃಷ್ಟಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಸಂವಾದದಲ್ಲಿ ಉದ್ಯಮ ಸಂಘಗಳ ಪ್ರತಿನಿಧಿಗಳು, ಸ್ಟಾರ್ಟ್-ಅಪ್ ಗಳು, ಸಂಶೋಧಕರು ಮತ್ತು ವೈಜ್ಞಾನಿಕ ಸಂಸ್ಥೆಗಳ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದರು, ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಸಂಶೋಧನಾ ಮೂಲಸೌಕರ್ಯಗಳಿಗೆ ಉದ್ಯಮದ ಪ್ರವೇಶವನ್ನು ಸುಧಾರಿಸುವ, ತಂತ್ರಜ್ಞಾನ ವರ್ಗಾವಣೆ ಕಾರ್ಯವಿಧಾನಗಳನ್ನು ಹೆಚ್ಚಿಸುವ ಮತ್ತು ನಾವೀನ್ಯತೆ ಆಧಾರಿತ ಬೆಳವಣಿಗೆಯನ್ನು ಉತ್ತೇಜಿಸುವ ಕುರಿತು ಸಲಹೆಗಳನ್ನು ನೀಡಿದರು.
ಸಂವಾದವನ್ನು ಮುಕ್ತಾಯಗೊಳಿಸುತ್ತಾ, ಡಾ. ಜಿತೇಂದ್ರ ಸಿಂಗ್ ಅವರು ಮುಕ್ತ, ಸಹಯೋಗದ ಮತ್ತು ಪಾಲುದಾರರ ಅಗತ್ಯಗಳಿಗೆ ಸ್ಪಂದಿಸುವ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಪೋಷಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಯೋಗಾಲಯಗಳು, ಉದ್ಯಮ ಮತ್ತು ಉದ್ಯಮಿಗಳ ನಡುವಿನ ಬಲವಾದ ಪಾಲುದಾರಿಕೆಯು ಭಾರತವನ್ನು ನಾವೀನ್ಯತೆ ಮತ್ತು ತಾಂತ್ರಿಕ ಶ್ರೇಷ್ಠತೆಯ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವುದನ್ನು ವೇಗಗೊಳಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.




*****
(रिलीज़ आईडी: 2272592)
आगंतुक पटल : 16