ಪ್ರಧಾನ ಮಂತ್ರಿಯವರ ಕಛೇರಿ
ಫ್ರಾನ್ಸ್ ಮತ್ತು ಸ್ಲೋವಾಕಿಯಾಗೆ ಪ್ರಧಾನಮಂತ್ರಿ ಅವರ ಭೇಟಿ
प्रविष्टि तिथि:
09 JUN 2026 7:35PM by PIB Bengaluru
ಫ್ರಾನ್ಸ್ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರಾನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 13 - 14 ಜೂನ್ 2026 (ನೈಸ್), ಮತ್ತು 16 - 19 ಜೂನ್ 2026 (ಎವಿಯನ್ ಮತ್ತು ಪ್ಯಾರಿಸ್) ರವರೆಗೆ ಫ್ರಾನ್ಸ್ ದೇಶಕ್ಕೆ, ಹಾಗೆಯೇ 14 - 16 ಜೂನ್ 2026 ರವರೆಗೆ ಸ್ಲೋವಾಕಿಯಾ ದೇಶಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಭೇಟಿಯ ಮೊದಲ ಹಂತದಲ್ಲಿ, ಪ್ರಧಾನಮಂತ್ರಿಯವರು ಜೂನ್ 14 ರಂದು ಅಧ್ಯಕ್ಷರಾದ ಮ್ಯಾಕ್ರಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಾಗಿ ನೈಸ್ ಗೆ ಭೇಟಿ ನೀಡಲಿದ್ದಾರೆ. ಈ ವರ್ಷದ ಆರಂಭದಲ್ಲಿ 'ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ'ಯ ಮಟ್ಟಕ್ಕೆ ಏರಿಸಲಾದ ಭಾರತ-ಫ್ರಾನ್ಸ್ ದ್ವಿಪಕ್ಷೀಯ ಸಂಬಂಧದ ಸಂಪೂರ್ಣ ವ್ಯಾಪ್ತಿಯನ್ನು ಉಭಯ ನಾಯಕರು ಪರಾಮರ್ಶಿಸಲಿದ್ದಾರೆ. ನೈಸ್ ನಲ್ಲಿ, ಉಭಯ ನಾಯಕರು ಜಂಟಿಯಾಗಿ 'ಭಾರತ್ ಇನ್ನೋವೇಟ್ಸ್' ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದು ಭಾರತ, ಫ್ರಾನ್ಸ್ ಮತ್ತು ಇತರ ದೇಶಗಳ ಉನ್ನತ ನಾವೀನ್ಯತೆ ನವೋದ್ಯಮಗಳು ಹಾಗೂ ವೆಂಚರ್ ಕ್ಯಾಪಿಟಲ್ ಫಂಡ್ ಗಳನ್ನು ಒಂದೆಡೆ ಸೇರಿಸಲಿದೆ. ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷದ ಅಂಗವಾಗಿ ಆಯೋಜಿಸಲಾಗುತ್ತಿರುವ ಈ ಪ್ರಮುಖ ಕಾರ್ಯಕ್ರಮವು ಉಭಯ ದೇಶಗಳ ನಡುವೆ ಇರುವ ಚೈತನ್ಯದಾಯಕ ನಾವೀನ್ಯತೆ ಪಾಲುದಾರಿಕೆಯನ್ನು ಬಲಪಡಿಸುತ್ತದೆ.
ತಮ್ಮ ಭೇಟಿಯ ಎರಡನೇ ಹಂತದಲ್ಲಿ, ಸ್ಲೋವಾಕ್ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ರಾಬರ್ಟ್ ಫಿಕೊ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 14 - 16 ಜೂನ್ 2026 ರವರೆಗೆ ಸ್ಲೋವಾಕ್ ಗಣರಾಜ್ಯಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. 1993ರಲ್ಲಿ ಸ್ಲೋವಾಕಿಯಾ ಸ್ವಾತಂತ್ರ್ಯ ಪಡೆದ ನಂತರ ಭಾರತದ ಪ್ರಧಾನಮಂತ್ರಿಯೊಬ್ಬರು ಅಲ್ಲಿಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಈ ಭೇಟಿಯು 2025ರ ಏಪ್ರಿಲ್ ನಲ್ಲಿ ಗೌರವಾನ್ವಿತ ರಾಷ್ಟ್ರಪತಿಯವರ ಸ್ಲೋವಾಕಿಯಾ ಗಣರಾಜ್ಯಕ್ಕೆ ಅಧಿಕೃತ ಭೇಟಿ ಮತ್ತು 2026ರ ಫೆಬ್ರವರಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಸ್ಲೋವಾಕ್ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪೀಟರ್ ಪೆಲ್ಲೆಗ್ರಿನಿ ಅವರ ಭಾರತ ಭೇಟಿಯ ಮುಂದುವರಿದ ಭಾಗವಾಗಿದೆ. ಪ್ರಧಾನಮಂತ್ರಿಯವರು ಪ್ರಧಾನಿ ಫಿಕೊ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸಲಿದ್ದಾರೆ. ಪ್ರಧಾನಮಂತ್ರಿಯವರು ಅಧ್ಯಕ್ಷರಾದ ಪೆಲ್ಲೆಗ್ರಿನಿ ಅವರನ್ನೂ ಭೇಟಿಯಾಗಲಿದ್ದಾರೆ. ಈ ಭೇಟಿಯು ವ್ಯಾಪಾರ, ಹೂಡಿಕೆ, ಮತ್ತು ಆಟೋಮೊಬೈಲ್ ಹಾಗೂ ರೈಲ್ವೆ ಉತ್ಪಾದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ಲೋವಾಕಿಯಾ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ಭೇಟಿಯ ಮೂರನೇ ಹಂತದಲ್ಲಿ, ಪ್ರಧಾನಮಂತ್ರಿಯವರು 16 - 17 ಜೂನ್ 2026 ರಂದು ಫ್ರಾನ್ಸ್ ನ ಎವಿಯನ್ ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಶೃಂಗಸಭೆಯ ಸಂದರ್ಭದಲ್ಲಿ, ಅವರು ಜಿ7 ನಾಯಕರು, ಆಹ್ವಾನಿತ ಪಾಲುದಾರ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ನಾಯಕರೊಂದಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. - 'ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟನ್ನು ಮರುನಿರ್ಮಾಣ ಮಾಡುವುದು'; 'ಎಲ್ಲರಿಗೂ ಸಮತೋಲಿತ, ಹಂಚಿಕೆಯ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಪುನಶ್ಚೇತನಗೊಳಿಸುವುದು'; ಮತ್ತು ಎಐನ ಸುರಕ್ಷಿತ, ಕ್ಷಿಪ್ರ ಮತ್ತು ದಕ್ಷ ನಿಯೋಜನೆಯನ್ನು ಖಚಿತಪಡಿಸಿಕೊಳ್ಳುವುದು'. ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಹಲವಾರು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನೂ ನಡೆಸಲಿದ್ದಾರೆ.
ಭೇಟಿಯ ಅಂತಿಮ ಹಂತದಲ್ಲಿ, ಪ್ರಧಾನಮಂತ್ರಿಯವರು ಮುಂದಿನ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಗಳಿಗಾಗಿ ಮತ್ತು ಯುರೋಪಿನ ಅತಿ ದೊಡ್ಡ ತಂತ್ರಜ್ಞಾನ ಮತ್ತು ನವೋದ್ಯಮ ಕಾರ್ಯಕ್ರಮವಾದ ವಿವಾಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು 18 ಜೂನ್ 2026 ರಂದು ಪ್ಯಾರಿಸ್ ಗೆ ಭೇಟಿ ನೀಡಲಿದ್ದಾರೆ. ಪ್ರಧಾನಮಂತ್ರಿಯವರು ಪ್ಯಾರಿಸ್ ನಲ್ಲಿರುವ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಪ್ರಧಾನಮಂತ್ರಿಯವರ ಮುಂಬರುವ ಯುರೋಪ್ ಭೇಟಿಯು ಫ್ರಾನ್ಸ್, ಸ್ಲೋವಾಕಿಯಾ ಮತ್ತು ಜಿ7 ದೇಶಗಳೊಂದಿಗೆ ಭಾರತದ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಜಿ7 ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಉಪಸ್ಥಿತಿಯು ಜಾಗತಿಕ ದಕ್ಷಿಣದ ಪ್ರಮುಖ ಧ್ವನಿಯಾಗಿ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಪ್ರಮುಖ ಪಾಲುದಾರನಾಗಿ ಭಾರತದ ಸ್ಥಾನಮಾನವನ್ನು ಬಿಂಬಿಸುತ್ತದೆ. 'ಭಾರತ್ ಇನ್ನೋವೇಟ್ಸ್' ಮತ್ತು 'ವಿವಾಟೆಕ್ ಶೃಂಗಸಭೆ' ಎರಡರಲ್ಲೂ ಪ್ರಧಾನಮಂತ್ರಿಯವರ ಭಾಗವಹಿಸುವಿಕೆಯು ಭಾರತವನ್ನು ನಾವೀನ್ಯತೆ, ಡಿಜಿಟಲ್ ರೂಪಾಂತರ ಮತ್ತು ಉದ್ಯಮಶೀಲತೆಯ ಜಾಗತಿಕ ಕೇಂದ್ರವಾಗಿ ಬಿಂಬಿಸಲಿದೆ. ಇದು ಭಾರತೀಯ, ಫ್ರೆಂಚ್ ಮತ್ತು ಯುರೋಪಿಯನ್ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳ ನಡುವೆ ಹೊಸ ಪಾಲುದಾರಿಕೆಗಳನ್ನು ಪ್ರೇರೇಪಿಸುವ ನಿರೀಕ್ಷೆಯಿದೆ. ಈ ಪ್ರವಾಸವು ಐರೋಪ್ಯ ಒಕ್ಕೂಟದೊಂದಿಗಿನ ತನ್ನ ವಿಶಾಲವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
*****
(रिलीज़ आईडी: 2272208)
आगंतुक पटल : 13