ಪರಿಸರ ಮತ್ತು ಅರಣ್ಯ ಸಚಿವಾಲಯ
ದೆಹಲಿಯಲ್ಲಿ 18 ʻನಮೋ ಆಮ್ಲಜನಕ ಪಾರ್ಕ್ʼಗಳನ್ನು ಉದ್ಘಾಟಿಸಿದ ಕೇಂದ್ರ ಪರಿಸರ ಸಚಿವರು; ‘ವಿಶ್ವ ಪರಿಸರ ದಿನ-2026’ರ ಅಂಗವಾಗಿ ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಂದ ಪ್ರಮುಖ ಹಸಿರು ಉಪಕ್ರಮಗಳಿಗೆ ಚಾಲನೆ
ಭಾರತದ ಜಾಗತಿಕ ಪರಿಸರ ನಾಯಕತ್ವವನ್ನು ಉಲ್ಲೇಖಿಸಿದ ಸಚಿವರಾದ ಶ್ರೀ ಭೂಪೇಂದರ್ ಯಾದವ್; ಸಮುದಾಯ ನೇತೃತ್ವದ ಪರಿಸರ ಸಂರಕ್ಷಣೆಗೆ ಕರೆ
ಈ ವರ್ಷ ದೆಹಲಿಯಲ್ಲಿ 15 ಲಕ್ಷ ಮರ ನೆಡಲಾಗುವುದು; ಹಸಿರು ಹೊದಿಕೆಯನ್ನು ಪೋಷಿಸುವಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಒತ್ತಿ ಹೇಳಿದ ಮುಖ್ಯಮಂತ್ರಿ
ದೆಹಲಿ ʻಎನ್‌ಸಿಟಿʼಯ ವೈಜ್ಞಾನಿಕ ಪರಿಸರ ಆಡಳಿತವನ್ನು ಬಲಪಡಿಸಲು, ʻಅಸೋಲಾ ಭಟ್ಟಿ ಅಭಯಾರಣ್ಯದ ನಿರ್ವಹಣಾ ಯೋಜನೆʼ ಮತ್ತು ʻದೆಹಲಿ ಪಕ್ಷಿ ಅಟ್ಲಾಸ್ ಕಾರ್ಯಯೋಜನೆʼ ಬಿಡುಗಡೆ
प्रविष्टि तिथि:
05 JUN 2026 12:04PM by PIB Bengaluru
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಅವರು ದೆಹಲಿಯ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಅವರೊಂದಿಗೆ ಇಂದು ʻವಿಶ್ವ ಪರಿಸರ ದಿನ-2026ʼರ ಅಂಗವಾಗಿ ದೆಹಲಿಯಾದ್ಯಂತ ಹದಿನೆಂಟು ‘ನಮೋ ಆಕ್ಸಿಜನ್ ಪಾರ್ಕ್’ಗಳನ್ನು ಉದ್ಘಾಟಿಸಿದರು ಮತ್ತು ದೇಶವ್ಯಾಪಿ ಅಭಿಯಾನವಾದ ʻಅಮ್ಮನ ಹೆಸರಲ್ಲಿ ಒಂದು ಗಿಡʼ (ಏಕ್ ಪೇಡ್ ಮಾ ಕೆ ನಾಮ್) ಅಡಿಯಲ್ಲಿ ಸರಣಿ ಪರಿಸರ ಉಪಕ್ರಮಗಳಿಗೆ ಚಾಲನೆ ನೀಡಿದರು. ಮೈದಾನಗಢಿಯ ನಮೋ ಆಕ್ಸಿಜನ್ ಪಾರ್ಕ್‌ನಲ್ಲಿ ನಡೆದ ಈ ಕಾರ್ಯಕ್ರಮವು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ನಗರ ಹಸಿರೀಕರಣವನ್ನು ಬಲಪಡಿಸಲು, ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಸಮುದಾಯದ ನೇತೃತ್ವದ ಪರಿಸರ ಉಸ್ತುವಾರಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಈ ಸಂದರ್ಭದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವರಾದ ಶ್ರೀ ಕೀರ್ತಿ ವರ್ಧನ್ ಸಿಂಗ್; ಪರಿಸರ, ಅರಣ್ಯ ಮತ್ತು ವನ್ಯಜೀವಿ ಸಚಿವರಾದ (ಎನ್‌ಸಿಟಿ ದೆಹಲಿ) ಸರ್ದಾರ್ ಮಂಜಿಂದರ್ ಸಿಂಗ್ ಸಿರ್ಸಾ; ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ದೆಹಲಿ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಸೇರಿದ್ದರು ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಭೂಪೇಂದ್ರ ಯಾದವ್ ಅವರು, ಮಾನವಕುಲವು ಇಂದು ಮೂರು ಪ್ರಮುಖ ಪರಿಸರ ಸವಾಲುಗಳನ್ನು ಎದುರಿಸುತ್ತಿದೆ, ಅವುಗಳೆಂದರೆ: ಹವಾಮಾನ ಬದಲಾವಣೆ, ಜೀವವೈವಿಧ್ಯದ ನಷ್ಟ ಮತ್ತು ಮರುಭೂಮಿಕರಣಕ್ಕೆ ಕಾರಣವಾಗುವ ಭೂಮಿ ಸವಕಳಿ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಪರಿಸರ ಉಪಕ್ರಮಗಳಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು. ಸೌರ ಶಕ್ತಿ ಸಾಮರ್ಥ್ಯದ ಹೆಚ್ಚಳದಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಸ್ಥಾನ ಪಡೆದಿರುವುದು, ʻಪಿಎಂ ಸೂರ್ಯ ಘರ್ʼ ಯೋಜನೆಯ ಜಾರಿ, ಅಂತರರಾಷ್ಟ್ರೀಯ ಸೌರ ಮೈತ್ರಿಕೂಟ ಸ್ಥಾಪನೆ, ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ (ಐಬಿಸಿಎ) ಪ್ರಾರಂಭ, ʻರಾಮ್‌ಸರ್ʼ ಜೌಗು ಪ್ರದೇಶಗಳ ವಿಸ್ತರಣೆ ಮತ್ತು ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ನೀತಿ ಚೌಕಟ್ಟಿನ ಅಡಿಯಲ್ಲಿ ನಿಗದಿತ ಗುಡುವಿಗಿಂತಲೂ ಮುಂಚಿತವಾಗಿ ಹಲವಾರು ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (ಎನ್‌ಡಿಸಿ) ಗುರಿಗಳನ್ನು ಸಾಧಿಸುವುದು ಸೇರಿದಂತೆ ಪ್ರಮುಖ ಮೈಲುಗಲ್ಲುಗಳನ್ನು ಭಾರತ ಸಾಧಿಸಿದೆ ಎಂದು ಅವರು ಉಲ್ಲೇಖಿಸಿದರು.
ಪರಿಸರ ಸಂರಕ್ಷಣೆಗೆ ಸಾಮೂಹಿಕ ಕ್ರಮ ಮತ್ತು ಸಕ್ರಿಯ ಸಾರ್ವಜನಿಕ ಸಹಭಾಗಿತ್ವದ ಅಗತ್ಯವಿದೆ ಎಂದು ಸಚಿವರು ಒತ್ತಿ ಹೇಳಿದರು. ಪ್ರಧಾನಮಂತ್ರಿಯವರ ‘ಏಕ್ ಪೇಡ್ ಮಾ ಕೆ ನಾಮ್’ ದೃಷ್ಟಿಕೋನವನ್ನು ಉಲ್ಲೇಖಿಸಿದ ಅವರು, ಈ ಅಭಿಯಾನವು ಸಸಿ ನೆಡುವುದನ್ನು ಕೃತಜ್ಞತೆ, ಜವಾಬ್ದಾರಿ ಮತ್ತು ಪರಿಸರ ಪ್ರಜ್ಞೆಯಲ್ಲಿ ಬೇರೂರಿರುವ ಜನಾಂದೋಲನವಾಗಿ ಪರಿವರ್ತಿಸಿದೆ ಎಂದರು. ನಾಗರಿಕರು ಕೇವಲ ಸಸಿಗಳನ್ನು ನೆಡುವುದಲ್ಲದೆ ಭವಿಷ್ಯದ ಪೀಳಿಗೆಗಾಗಿ ಅವುಗಳನ್ನು ಪೋಷಿಸಬೇಕು ಮತ್ತು ರಕ್ಷಿಸಬೇಕು ಎಂದು ಕರೆ ನೀಡಿದರು.

ದೆಹಲಿಯ ಪರಿಸರವನ್ನು ಸುಧಾರಿಸುವ ಪ್ರಯತ್ನಗಳನ್ನು ಉಲ್ಲೇಖಿಸಿದ ಶ್ರೀ ಯಾದವ್, ದೆಹಲಿ ಸರ್ಕಾರವು ವಾಯು ಗುಣಮಟ್ಟ ನಿರ್ವಹಣಾ ಆಯೋಗದ (ಸಿಎಕ್ಯೂಎಂ) ಸಮನ್ವಯದೊಂದಿಗೆ, ರಸ್ತೆ ಧೂಳು, ವಾಹನ ಹೊಗೆ ಮತ್ತು ಕೈಗಾರಿಕಾ ಮಾಲಿನ್ಯ ಸೇರಿದಂತೆ ವಾಯುಮಾಲಿನ್ಯದ ಪ್ರಮುಖ ಮೂಲಗಳನ್ನು ಪರಿಹರಿಸಲು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. ಈ ಕ್ರಮಗಳಲ್ಲಿ ಆನ್‌ಲೈನ್ ಮೂಲಕ ನಿರಂತರ ಹೊರಸೂಸುವಿಕೆ ನಿಗಾ ವ್ಯವಸ್ಥೆ(ಒಸಿಇಎಂಎಸ್)ಸ್ಥಾಪನೆ, ವಾಯುಮಾಲಿನ್ಯ ನಿಯಂತ್ರಣ ಸಾಧನಗಳ (ಎಪಿಸಿಡಿ) ನಿಯೋಜನೆ, ರಸ್ತೆಗಳ ಯಾಂತ್ರೀಕೃತ ಶುಚಿಗೊಳಿಸುವಿಕೆ ಮತ್ತು ವಿದ್ಯುತ್ ವಾಹನಗಳತ್ತ ವೇಗದ ಪರಿವರ್ತನೆ ಸೇರಿವೆ.
ನಮೋ ವನಗಳು ಮತ್ತು ಅಂತಹುದೇ ಪರಿಸರ ಸ್ವತ್ತುಗಳ ಅಭಿವೃದ್ಧಿಯ ಮೂಲಕ ದೇಶಾದ್ಯಂತ ನಗರ ಹಸಿರೀಕರಣ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು. ಈ ದಿಕ್ಕಿನಲ್ಲಿ, ದೆಹಲಿಯಲ್ಲಿ ಹದಿನೆಂಟು ನಮೋ ಆಮ್ಲಜನಕ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಉದ್ಘಾಟಿಸಲಾಗಿದೆ, ಇದು ನಗರ ಹಸಿರು ಶ್ವಾಸಕೋಶಗಳಾಗಿ ಕಾರ್ಯನಿರ್ವಹಿಸುತ್ತದೆ, ಇದು ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ, ಜೀವವೈವಿಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ನಾಗರಿಕರಿಗೆ ಮನರಂಜನಾ ಸ್ಥಳಗಳನ್ನು ಒದಗಿಸುತ್ತದೆ. ಈ ಉಪಕ್ರಮಗಳ ದೀರ್ಘಕಾಲೀನ ಯಶಸ್ಸಿಗೆ ಸಮುದಾಯದ ಭಾಗವಹಿಸುವಿಕೆ ನಿರ್ಣಾಯಕವಾಗಿದೆ ಎಂದು ಅವರು ಒತ್ತಿ ಹೇಳಿದರು. ಸಮಗ್ರ ಪರಿಸರ ವ್ಯವಸ್ಥೆಯ ರಕ್ಷಣೆ ಮತ್ತು ಪರಿಸರ ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಿಕೊಳ್ಳಲು ಅರಣ್ಯಗಳು, ಗದ್ದೆಗಳು ಮತ್ತು ಹುಲ್ಲುಗಾವಲುಗಳ ಸಮಗ್ರ ಸಂರಕ್ಷಣೆಯ ಅಗತ್ಯವನ್ನು ಶ್ರೀ ಯಾದವ್ ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ದೆಹಲಿ ಸರ್ಕಾರವು ಸಿದ್ಧಪಡಿಸಿದ ಮೂರು ಪ್ರಮುಖ ಪರಿಸರ ಪ್ರಕಟಣೆಗಳನ್ನು ಸಹ ಬಿಡುಗಡೆ ಮಾಡಲಾಯಿತು:
- ದೆಹಲಿ ರಾಷ್ಟ್ರೀಯ ರಾಜಧಾನಿ ವಲಯದ ಕಾರ್ಯಯೋಜನೆ ದಾಖಲೆ (2026–27 ರಿಂದ 2036–37): ಇದು ದೆಹಲಿಯಲ್ಲಿ ಪರಿಸರ ಆಡಳಿತ, ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ತಂತ್ರಗಳು ಮತ್ತು ಗುರಿಗಳನ್ನು ರೂಪಿಸುವ ಹತ್ತು ವರ್ಷಗಳ ನೀತಿ ದಾಖಲೆಯಾಗಿದೆ.
- ಅಸೋಲಾ ಭಟ್ಟಿ ವನ್ಯಜೀವಿ ಅಭಯಾರಣ್ಯದ ನಿರ್ವಹಣಾ ಯೋಜನೆ (2024–25 ರಿಂದ 2034–35): ದೆಹಲಿಯ ಅತ್ಯಂತ ನಿರ್ಣಾಯಕ ಜೀವವೈವಿಧ್ಯ ಮೀಸಲು ಪ್ರದೇಶಗಳಲ್ಲಿ ಒಂದಾದ ಈ ಅಭಯಾರಣ್ಯದ ರಕ್ಷಣೆ, ಪುನಃಸ್ಥಾಪನೆ ಮತ್ತು ಮುಂದಿನ ದಶಕದಲ್ಲಿ ಸುಸ್ಥಿರ ನಿರ್ವಹಣೆಗಾಗಿ ಮಾರ್ಗಸೂಚಿಯನ್ನು ಒದಗಿಸುವ ಸಮಗ್ರ ನಿರ್ವಹಣಾ ನೀಲನಕ್ಷೆಯಾಗಿದೆ.
- ದೆಹಲಿ ಬರ್ಡ್ ಅಟ್ಲಾಸ್ (ಪಕ್ಷಿ ನಕ್ಷೆ): ಇದು ನಗರದಾದ್ಯಂತ ಪಕ್ಷಿ ವೀಕ್ಷಕರು, ಪ್ರಕೃತಿ ಪ್ರೇಮಿಗಳು ಮತ್ತು ಸ್ವಯಂಸೇವಕರನ್ನು ಒಳಗೊಂಡ ವ್ಯಾಪಕ ನಾಗರಿಕ ವೈಜ್ಞಾನಿಕ ಪ್ರಯತ್ನದ ಮೂಲಕ ಸಿದ್ಧಪಡಿಸಲಾದ, ದೆಹಲಿಯ ಪಕ್ಷಿಸಂಕುಲದ ದತ್ತಾಂಶಗಳ ಒಂದು ಹೆಗ್ಗುರುತಿನ ಸಂಕಲನವಾಗಿದೆ.
ವೇಗವಾಗಿ ಬೆಳೆಯುತ್ತಿರುವ ನಗರ ಜನಸಂಖ್ಯೆಯ ನಡುವೆ, ನಗರ ಪರಿಸರ ವ್ಯವಸ್ಥೆಗಳ ಮಾಹಿತಿ ಆಧಾರಿತ ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ, ಜೌಗು ಪ್ರದೇಶಗಳ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಬೆಂಬಲ ನೀಡುವ ಮೂಲಕ ಈ ವೈಜ್ಞಾನಿಕ ಯೋಜನಾ ದಾಖಲೆಗಳು ರಾಜಧಾನಿಯಲ್ಲಿ ಪರಿಸರ ಆಡಳಿತವನ್ನು ಗಣನೀಯವಾಗಿ ಬಲಪಡಿಸಲಿವೆ ಎಂದು ಶ್ರೀ ಭೂಪೇಂದ್ರ ಯಾದವ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಅವರು, ದೆಹಲಿಯ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಅತ್ಯಂತ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಪ್ರಸಕ್ತ ವರ್ಷದಲ್ಲಿ ನಗರದಾದ್ಯಂತ 15 ಲಕ್ಷ ಮರಗಳನ್ನು ನೆಡುವ ಗುರಿಯನ್ನು ದೆಹಲಿ ಸರ್ಕಾರ ಹೊಂದಿದೆ ಎಂದು ಅವರು ಘೋಷಿಸಿದರು. ಪರಿಸರ ಸಂರಕ್ಷಣೆಯಲ್ಲಿ ನಾಗರಿಕರ ಪಾತ್ರವನ್ನು ಒತ್ತಿಹೇಳಿದ ಅವರು, ಕೇವಲ ಸಸಿ ನೆಡುವ ಆಂದೋಲನಗಳಿಗೆ ಮಾತ್ರವಲ್ಲದೆ, ನೆಟ್ಟ ನಂತರ ಮರಗಳನ್ನು ಪೋಷಿಸಲು ಮತ್ತು ರಕ್ಷಿಸಲು ಸಮುದಾಯದ ಭಾಗವಹಿಸುವಿಕೆ ಅತ್ಯಗತ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ, ಗಣ್ಯರು ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜೊತೆಗೆ ‘ಧೂಳು ಮುಕ್ತ ದೆಹಲಿ’ ಅಭಿಯಾನದ ಅಡಿಯಲ್ಲಿ ಸ್ಥಳೀಯ ತಳಿಯ ಹುಲ್ಲುಗಳು ಮತ್ತು ಪೊದೆಗಳ ಪ್ರದರ್ಶನವನ್ನು ವೀಕ್ಷಿಸಿದರು. ಈ ಮೂಲಕ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಕಡೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಇದಲ್ಲದೆ, ʻದೆಹಲಿ ಬರ್ಡ್ ಅಟ್ಲಾಸ್’ಗೆ ಕೊಡುಗೆ ನೀಡಿದ ನಾಗರಿಕ ಸಮಾಜ ಸಂಸ್ಥೆಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಪರಿಸರ ದಾಖಲೀಕರಣ ಮತ್ತು ಉಸ್ತುವಾರಿಯಲ್ಲಿ ನಾಗರಿಕರ ಭಾಗವಹಿಸುವಿಕೆಯ ಅಮೂಲ್ಯವಾದ ಪಾತ್ರವನ್ನು ಗುರುತಿಸಿ ಅವರಿಗೆ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.

*****
(रिलीज़ आईडी: 2269285)
आगंतुक पटल : 6