ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
azadi ka amrit mahotsav

ನಗರ ಪ್ರದೇಶಗಳಲ್ಲಿ ಬಿಸಿಗಾಳಿ ಮತ್ತು ಅದರ ತಗ್ಗಿಸುವಿಕೆ ಕುರಿತು ಪರಿಸರ ಮತ್ತು ಹವಾಮಾನ ತಜ್ಞರ ಸಭೆಯನ್ನು ಆಯೋಜಿಸಿದ ಎನ್ ಎಚ್ ಆರ್ ಸಿ, ಭಾರತ


ಅಧ್ಯಕ್ಷರಾದ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಅವರು ಈಗಿರುವ ನೈಸರ್ಗಿಕ ಪರಿಸರಗಳ ಬಲವಾದ ರಕ್ಷಣೆ, ಜಲಮೂಲಗಳ ಸುತ್ತಲಿನ ನಿರ್ಮಾಣಗಳ ಕಟ್ಟುನಿಟ್ಟಾದ ನಿಯಂತ್ರಣ ಮತ್ತು ಸುಸ್ಥಿರ ನಗರಾಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿರುವ ಕಾರ್ಯಸಾಧ್ಯವಾದ ಶಿಫಾರಸುಗಳ ಅಗತ್ಯವನ್ನು ಒತ್ತಿಹೇಳಿದರು

ಸದಸ್ಯರಾದ ನ್ಯಾಯಮೂರ್ತಿ (ಡಾ.) ಬಿದ್ಯುತ್ ರಂಜನ್ ಸಾರಂಗಿ ಅವರು ಪರಿಸರ ಸಂರಕ್ಷಣೆಯೊಂದಿಗೆ ನಗರಾಭಿವೃದ್ಧಿಯನ್ನು ಸಮತೋಲನಗೊಳಿಸುವ ಅಗತ್ಯವನ್ನು ಉಲ್ಲೇಖಿಸಿದರು ಮತ್ತು ಪ್ರಕೃತಿಯನ್ನು ಸಂರಕ್ಷಿಸಲು ಸಾಮೂಹಿಕ ಕ್ರಮಕ್ಕೆ ಕರೆ ನೀಡಿದರು

ಪ್ರಧಾನ ಕಾರ್ಯದರ್ಶಿ ಶ್ರೀ ಭರತ್ ಲಾಲ್ ಅವರು ದೇಶಾದ್ಯಂತ ಬಿಸಿಗಾಳಿಯ ಪ್ರಭಾವವನ್ನು ತಗ್ಗಿಸಲು ಪ್ರಯತ್ನಗಳು ಇದ್ದರೂ, ಹೆಚ್ಚುತ್ತಿರುವ ಸಾವುಗಳ ಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು

ವಿವಿಧ ಸಲಹೆಗಳ ಪೈಕಿ, ಏಕೀಕೃತ, ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ವರದಿ ಮತ್ತು ದತ್ತಾಂಶ ನಿರ್ವಹಣಾ ವ್ಯವಸ್ಥೆಯ ಮೂಲಕ ಬಿಸಿಗಾಳಿಯ ದೆಸೆಯಿಂದಾಗುವ ಮರಣ ಮತ್ತು ರೋಗಗ್ರಸ್ತತೆಯ ಕಣ್ಗಾವಲನ್ನು ಸುಧಾರಿಸುವುದಕ್ಕೆ ವಿಶೇಷ ಒತ್ತು ನೀಡಲಾಯಿತು

प्रविष्टि तिथि: 04 JUN 2026 12:13PM by PIB Bengaluru

ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ ಎಚ್ ಆರ್ ಸಿ) ನವದೆಹಲಿಯ ʻಮಾನವ ಅಧಿಕಾರ್ ಭವನʼದಲ್ಲಿ ಹೈಬ್ರಿಡ್ ಮಾದರಿಯಲ್ಲಿ 'ನಗರ ಪ್ರದೇಶಗಳಲ್ಲಿ ಬಿಸಿಗಾಳಿ ಮತ್ತು ಅದರ ತಗ್ಗಿಸುವಿಕೆ' ಎಂಬ ವಿಷಯದ ಕುರಿತು ಪರಿಸರ ಮತ್ತು ಹವಾಮಾನ ತಜ್ಞರ ಸಭೆಯನ್ನು ಆಯೋಜಿಸಿತ್ತು. ಈ ಸಭೆಯು ವಿವಿಧ ಪಾಲುದಾರರಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿತು ಮತ್ತು ಅತ್ಯಂತ ಅರ್ಥಪೂರ್ಣ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್, "ಕಳೆದ ಕೆಲವು ಸಮಯದಿಂದ ಚಳಿಗಾಲದಲ್ಲಿ ಮಾಲಿನ್ಯ ಮತ್ತು ಬೇಸಿಗೆಯಲ್ಲಿ ಬಿಸಿಗಾಳಿಯ ಬಗ್ಗೆ ಪ್ರತಿವರ್ಷ ಪುನರಾವರ್ತಿತ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಿಕ್ಕಟ್ಟುಗಳ ಪ್ರಭಾವದಿಂದ  ಜೀವವನ್ನು ರಕ್ಷಿಸುವ ನಿಟ್ಟಿನಲ್ಲಿ ಕೈಗೊಂಡ ಉಪಶಮನ ಕ್ರಮಗಳ ಯಾವುದೇ ಪರಿಣಾಮಗಳು ಗೋಚರಿಸುತ್ತಿಲ್ಲ" ಎಂದರು.

ಸಭೆಯಲ್ಲಿ ಎನ್ ಎಚ್ ಆರ್ ಸಿ ಸದಸ್ಯರಾದ ನ್ಯಾಯಮೂರ್ತಿ (ಡಾ.) ಬಿದ್ಯುತ್ ರಂಜನ್ ಸಾರಂಗಿ, ಶ್ರೀಮತಿ ವಿಜಯಾ ಭಾರತಿ ಸಯಾನಿ; ಪ್ರಧಾನ ಕಾರ್ಯದರ್ಶಿ ಶ್ರೀ ಭರತ್ ಲಾಲ್; ಡಿಜಿ (ಐ) ಶ್ರೀಮತಿ ಅನುಪಮಾ ನಿಲೇಕರ್ ಚಂದ್ರ; ಜಂಟಿ ಕಾರ್ಯದರ್ಶಿ ಶ್ರೀಮತಿ ಸೈದಿಂಗ್ಪುಯಿ ಛಾಕ್ ಛುವಾಕ್; ಕೋರ್ ಗ್ರೂಪ್ ಸದಸ್ಯರು (ತಜ್ಞರ ಗುಂಪು), ವಿಶೇಷ ವರದಿಗಾರರು, ವಿಶೇಷ ಮೇಲ್ವಿಚಾರಕರು, ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಅರೆ-ಸರ್ಕಾರಿ ಸಂಸ್ಥೆಗಳ ಪದಾಧಿಕಾರಿಗಳು; ಅಹಮದಾಬಾದ್ ಮತ್ತು ಇಂದೋರ್ ನ ಮುನ್ಸಿಪಲ್ ಕಮಿಷನರ್ಗಳು, ಪ್ರಮುಖ ವಿಷಯ ತಜ್ಞರು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

 

ನ್ಯಾಯಮೂರ್ತಿ ರಾಮಸುಬ್ರಮಣಿಯನ್ ಅವರು ಮಾತನಾಡಿ, ಮಾನವ ಹಕ್ಕುಗಳ ವಿಕಸನವು ಮೊದಲ ಮತ್ತು ಎರಡನೆಯ ಮಹಾಯುದ್ಧಗಳ ನಂತರ ಆರಂಭದಲ್ಲಿ ನಾಗರಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳ ಮೇಲೆ ಕೇಂದ್ರೀಕೃತವಾಗಿತ್ತು, ಆದರೆ ಪರಿಸರ ಹಕ್ಕುಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗಿತ್ತು. 1948ರಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು (ಯುಸಿಎಚ್ ಆರ್) ಅಂಗೀಕರಿಸಲಾಗಿದ್ದರೂ, ಪರಿಸರ ನಾಶ ಮತ್ತು ಪ್ರಮುಖ ಪರಿಸರ ವಿಪತ್ತುಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯ ನಂತರ, ಅಂದರೆ  1970ರಲ್ಲಿ ಪರಿಸರ ಹಕ್ಕುಗಳ ಕುರಿತು ಗಂಭೀರ ಚರ್ಚೆ ಪ್ರಾರಂಭವಾಯಿತು ಎಂದರು.

ಕೈಗಾರಿಕಾ ಕ್ರಾಂತಿಯು ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ಬಿಸಿಗಾಳಿಗೆ ಎಷ್ಟು ಕೊಡುಗೆ ನೀಡಿದೆ ಎಂದರೆ, ಅದು ನಮ್ಮ ಜೀವನದ ಮೇಲೆ ನಿಜವಾದ ಪರಿಣಾಮ ಬೀರಿದ ನಂತರವೇ ನಾವು ಅದನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು. ಗಾಂಧೀಜಿ ಅವರ ಆರ್ಥಿಕತೆಯ ಬಗ್ಗೆ ಓದಿದರೆ, ಅವರು ಇಡೀ ದೇಶದ ಕೈಗಾರಿಕೀಕರಣವನ್ನು ಎಂದಿಗೂ ಯೋಚಿಸಿರಲಿಲ್ಲ. ಪ್ರತಿಯೊಂದು ಹಳ್ಳಿಯೂ ಸ್ವಾವಲಂಬಿಯಾಗಬೇಕು ಎಂದು ಅವರು ಭಾವಿಸಿದ್ದರು, ಆದರೆ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿ, ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೆಚ್ಚಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸಲು ಯೋಗ್ಯವಲ್ಲದ ಪರಿಸ್ಥಿತಿಗಳು ಮತ್ತು ನಗರಗಳಲ್ಲಿ 'ಕಾಂಕ್ರೀಟ್ ಕಾಡುಗಳ' ಬೆಳವಣಿಗೆಯು ತಾಪಮಾನದ ಹೆಚ್ಚಳ ಮತ್ತು ಬಿಸಿಗಾಳಿಗೆ ಸಂಬಂಧಿಸಿದ ಸವಾಲುಗಳಿಗೆ ಮತ್ತಷ್ಟು ಕಾರಣವಾಗಿದೆ. ಕಳೆದ ದಶಕಗಳಲ್ಲಿ ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಸರಿಕಪಡಿಸಲು ಸಾಧ್ಯವಿಲ್ಲ, ಆದ್ದರಿಂದ ಈಗ ಅದರ ಪ್ರಭಾವವನ್ನು ತಗ್ಗಿಸುವತ್ತ ಗಮನ ಹರಿಸಬೇಕು. ಕಾಲದ ಚಕ್ರವನ್ನು ಹಿಂದಕ್ಕೆ ತಿರುಗಿಸಲು ನಮಗೆ ಸಾಧ್ಯವಿಲ್ಲ. ಜಲಮೂಲಗಳು ಮತ್ತು ಕಾಡುಗಳ ನಾಶವೇ ಹೆಚ್ಚುತ್ತಿರುವ ಉಷ್ಣತೆಯ ಒತ್ತಡಕ್ಕೆ ಪ್ರಮುಖ ಕಾರಣ ಎಂದು ಒತ್ತಿಹೇಳಿದ ಅವರು, ಈಗಿರುವ  ನೈಸರ್ಗಿಕ ಪರಿಸರಗಳ ಬಲವಾದ ರಕ್ಷಣೆ, ಜಲಮೂಲಗಳ ಸುತ್ತಲಿನ ನಿರ್ಮಾಣಗಳ ಕಟ್ಟುನಿಟ್ಟಾದ ನಿಯಂತ್ರಣ ಮತ್ತು ಸುಸ್ಥಿರ ನಗರಾಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿರುವ ಕಾರ್ಯಸಾಧ್ಯವಾದ ಶಿಫಾರಸುಗಳಿಗಾಗಿ ಪ್ರತಿಪಾದಿಸಿದರು.

ಎನ್ ಎಚ್ ಆರ್ ಸಿ ಸದಸ್ಯರಾದ ನ್ಯಾಯಮೂರ್ತಿ (ಡಾ.) ಬಿದ್ಯುತ್ ರಂಜನ್ ಸಾರಂಗಿ ಮಾತನಾಡಿ, ಪರಿಸರ ಸಂರಕ್ಷಣೆಯೊಂದಿಗೆ ನಗರಾಭಿವೃದ್ಧಿಯನ್ನು ಸಮತೋಲನಗೊಳಿಸುವ ಅಗತ್ಯವಿದ್ದು, ಪ್ರಕೃತಿಯನ್ನು ಸಂರಕ್ಷಿಸಲು, ಹಸಿರು ಪ್ರದೇಶಗಳನ್ನು ವಿಸ್ತರಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸಂಪನ್ಮೂಲಗಳನ್ನು ರಕ್ಷಿಸಲು ಸಾಮೂಹಿಕ ಕ್ರಮದ ಅಗತ್ಯವಿದೆ ಎಂದು ಒತ್ತಾಯಿಸಿದರು.

ಇದಕ್ಕೂ ಮೊದಲು, ಎನ್ ಎಚ್ ಆರ್ ಸಿ  ಪ್ರಧಾನ ಕಾರ್ಯದರ್ಶಿ ಶ್ರೀ ಭರತ್ ಲಾಲ್ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ, ಪರಿಸರ ಮತ್ತು ಹವಾಮಾನದ ಕೋರ್ ಗ್ರೂಪ್ ಸಭೆಯನ್ನು (ತಜ್ಞರ ಸಭೆ) ಕರೆಯುವ ಹಿನ್ನೆಲೆಯನ್ನು ಹಂಚಿಕೊಂಡರು. ಬಿಸಿಗಾಳಿಯು ಪರಿಸರ ನಾಶ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಹೆಚ್ಚುತ್ತಿರುವ ಮಾನವ ಹಕ್ಕುಗಳ ಕಳವಳವಾಗಿದೆ ಎಂದು ಅವರು ಒತ್ತಿಹೇಳಿದರು. ಕಟ್ಟಡ ಕಾರ್ಮಿಕರು, ಹೊರಾಂಗಣ ಕಾರ್ಮಿಕರು, ಗಿಗ್ ಕಾರ್ಮಿಕರು,  ವೃದ್ಧರು, ಗರ್ಭಿಣಿಯರು ಮತ್ತು ಸೂಕ್ತವಾದ ವಸತಿ ಅಥವಾ ತಂಪಾಗಿಸುವ ಸೌಲಭ್ಯಗಳಿಲ್ಲದ ದುರ್ಬಲ ವರ್ಗಗಳ ಮೇಲೆ ಇದರ ಪ್ರಭಾವ ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದರು. ನಗರ ಪ್ರದೇಶಗಳಲ್ಲಿ ಬಿಸಿಗಾಳಿಯು ತೀವ್ರ ಸವಾಲಾಗಿ ಪರಿಣಮಿಸುತ್ತಿದೆ ಎಂದು ಹೇಳಿದ ಅವರು, ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಬಿಸಿಗಾಳಿಯಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

ಜೀವಿಸುವ, ಆರೋಗ್ಯದ ಮತ್ತು ಸ್ವಚ್ಛ ಪರಿಸರದ ಹಕ್ಕುಗಳು ಸ್ವಾಭಾವಿಕ ಮಾನವ ಹಕ್ಕುಗಳಾಗಿವೆ ಎಂದು ಒತ್ತಿಹೇಳಿದ ಅವರು, ಎನ್ ಎಚ್ ಆರ್ ಸಿ ಈ ನಿಟ್ಟಿನಲ್ಲಿ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸುತ್ತಾ ಬಂದಿದೆ ಎಂದರು. ಬಿಸಿಗಾಳಿಯ ಪ್ರಭಾವವನ್ನು ತಗ್ಗಿಸಲು ಹಲವಾರು ರಾಜ್ಯಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ಗಳು ಉಪಕ್ರಮಗಳನ್ನು ಕೈಗೊಂಡಿವೆ. ಆದರೆ, ಇದರ ಹೊರತಾಗಿಯೂ, ಎನ್ ಸಿ ಆರ್ ಬಿ ದತ್ತಾಂಶದ ಪ್ರಕಾರ ಬಿಸಿಗಾಳಿಯಿಂದ ಸಂಭವಿಸುವ ಸಾವುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ ಎಂದು ಅವರು ಹೇಳಿದರು.

ಅವರು ಸಭೆಯ ಮೂರು ಪ್ರಮುಖ ವಿಷಯಾಧಾರಿತ ಅವಧಿಗಳ ಅವಲೋಕನವನ್ನು ನೀಡಿದರು: ಎ) ಬಿಸಿಗಾಳಿಯ ಬಗ್ಗೆ  ಅರಿಯುವುದು ಮತ್ತು ಮಾನವ ಹಕ್ಕುಗಳ ಮೇಲೆ ಅದರ ಪ್ರಭಾವ; ಬಿ) ಆಡಳಿತಾತ್ಮಕ ಚೌಕಟ್ಟುಗಳು ಮತ್ತು ನಗರ ಪ್ರದೇಶಗಳಲ್ಲಿ ಬಿಸಿಗಾಳಿಗೆ ನಗರ ಮಟ್ಟದ ಪ್ರತಿಕ್ರಿಯೆ; ಮತ್ತು ಸಿ) ನಗರ ಪ್ರದೇಶಗಳಲ್ಲಿ ಚೇತರಿಸಿಕೊಳ್ಳುವ ಮತ್ತು ಸಮಗ್ರ ತಂಪಾಗಿಸುವಿಕೆಗಾಗಿ ಹಕ್ಕು ಆಧಾರಿತ ಮಾರ್ಗಗಳು. ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಜನರ ಜೀವ ಮತ್ತು ಅವರ ಜೀವನೋಪಾಯವನ್ನು ರಕ್ಷಿಸಲು ಬಿಸಿಗಾಳಿಯನ್ನು ತಗ್ಗಿಸಲು ಅಲ್ಪಾವಧಿ, ಮಧ್ಯಮ ಅವಧಿ ಮತ್ತು ದೀರ್ಘಾವಧಿಯ ಕ್ರಮಗಳನ್ನು ಸೂಚಿಸುವಂತೆ ಅವರು ಭಾಗವಹಿಸಿದವರನ್ನು ಕೋರಿದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ  ಸುಸ್ಥಿರ ತಂತ್ರಜ್ಞಾನ ಕೇಂದ್ರದ ಪ್ರೊಫೆಸರ್ (ನಿವೃತ್ತ) ಎನ್. ಎಚ್. ರವೀಂದ್ರನಾಥ್ ಅವರು, ತೇವಾಂಶ , ಸಸ್ಯವರ್ಗ ಮತ್ತು ಭೂ-ಮೇಲ್ಮೈ ಅಂಶಗಳನ್ನು ಒಳಗೊಂಡ ಬಿಸಿಗಾಳಿಯ ವ್ಯಾಪಕ ವ್ಯಾಖ್ಯಾನಕ್ಕೆ ಕರೆ ನೀಡಿದರು. ಜೊತೆಗೆ ವಾರ್ಡ್ ಮಟ್ಟದ ಮುನ್ಸೂಚನೆ, ಎಐ-ಚಾಲಿತ ಹೆಚ್ಚಿನ ಅಪಾಯಕ್ಕೆ ಈಡಾಗುವ ಸ್ಥಳಗಳ ನಕ್ಷೆ, ಬಲವಾದ ಬಿಸಿಗಾಳಿ ಕ್ರಿಯಾ ಯೋಜನೆಗಳು, ಮೀಸಲಾದ ಬಿಸಿಗಾಳಿ ಅಧಿಕಾರಿಗಳ ನೇಮಕ ಮತ್ತು ದುರ್ಬಲ ಕಾರ್ಮಿಕರ ರಕ್ಷಣೆಗೆ ಒತ್ತಾಯಿಸಿದರು. ಐಎಂಡಿ  ಸಂಸ್ಥೆಯ ಮಹಾನಿರ್ದೇಶಕರಾದ ಡಾ. ಅಖಿಲ್ ಶ್ರೀವಾಸ್ತವ ಮಾತನಾಡಿ, ಜೂನ್ ತಿಂಗಳಿನಲ್ಲಿ ಹಲವು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿಗಾಳಿಯ ದಿನಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು ಮತ್ತು ಐಎಂಡಿಯ ಬಹು-ಹಂತದ ಮುನ್ಸೂಚನೆ ಮತ್ತು ಮುನ್ನೆಚ್ಚರಿಕಾ ವ್ಯವಸ್ಥೆಯ ಬಗ್ಗೆ  ವಿವರಿಸಿದರು. ರಸ್ತೆ ಬದಿ ವ್ಯಾಪಾರಿಗಳು ಮತ್ತು ಗಿಗ್ ಕಾರ್ಮಿಕರಂತಹ ದುರ್ಬಲ ಗುಂಪುಗಳಿಗೆ ನೇರವಾಗಿ ಬಿಸಿಗಾಳಿ ಮುನ್ನೆಚ್ಚರಿಕೆಗಳು ಮತ್ತು ಸಲಹೆಗಳನ್ನು ತಲುಪಿಸುವ ಪ್ರಯತ್ನಗಳನ್ನು ಅವರು ಹಂಚಿಕೊಂಡರು.

ಎನ್ ಡಿ ಎಂ ಎ   ಸಲಹೆಗಾರರಾದ ಶ್ರೀ ಎಸ್. ರಾಕೇಶ್ ಕುಮಾರ್ ಮಾತನಾಡಿ, ಬಿಸಿಗಾಳಿಗೆ ತುತ್ತಾಗುವ ಎಲ್ಲಾ 23 ರಾಜ್ಯಗಳು ಈಗ ಬಿಸಿಗಾಳಿ ಕ್ರಿಯಾ ಯೋಜನೆ ಹೊಂದಿವೆ ಎಂದು ತಿಳಿಸಿದರು. ಅವರು ಬಲವಾದ ಜಿಲ್ಲಾ ಮತ್ತು ನಗರ ಮಟ್ಟದ ಯೋಜನೆ, ಅನುಷ್ಠಾನ ಕಾರ್ಯವಿಧಾನದ ಸಾಂಸ್ಥಿಕೀಕರಣ, ಅಧಿಕ ಮುನ್ನೆಚ್ಚರಿಕೆ ವ್ಯವಸ್ಥೆಗಳು, ದೃಢವಾದ ವರದಿ ಮಾಡುವ ವ್ಯವಸ್ಥೆಗಳು ಮತ್ತು ಬಿಸಿಗಾಳಿ ತಗ್ಗಿಸುವಿಕೆಗಾಗಿ  ಮೀಸಲು ನಿಧಿಯ ಅಗತ್ಯವನ್ನು ಪ್ರತಿಪಾದಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ (ಸಾರ್ವಜನಿಕ ಆರೋಗ್ಯ) ಶ್ರೀಮತಿ ಜಿ. ಎಸ್. ಚಿತ್ರಾ ಮಾತನಾಡಿ, ಸಚಿವಾಲಯವು ಸಲಹೆಗಳು ಮತ್ತು ಹವಾಮಾನ-ಆರೋಗ್ಯ ಕಾರ್ಯಕ್ರಮಗಳ ಮೂಲಕ ಆರೋಗ್ಯ ಕ್ಷೇತ್ರದ ಸನ್ನದ್ಧತೆಯನ್ನು ಬಲಪಡಿಸುತ್ತಿದೆ. ಹವಾಮಾನ ಬದಲಾವಣೆ ಮತ್ತು ಬಿಸಿಗಾಳಿಯ ಹೆಚ್ಚುತ್ತಿರುವ ಆರೋಗ್ಯದ ಪರಿಣಾಮಗಳನ್ನು ಎದುರಿಸಲು ಸಂಘಟಿತ ಕ್ರಮದ ಅಗತ್ಯವನ್ನು ಅವರು ಒತ್ತಿಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ನಿರ್ದೇಶಕ ಡಾ. ಆಕಾಶ್ ಶ್ರೀವಾಸ್ತವ ಅವರು, 2035 ರ ವೇಳೆಗೆ ಬಿಸಿಗಾಳಿಗೆ ಸಂಬಂಧಿಸಿದ ಆರೋಗ್ಯದ ಅಪಾಯಗಳು ಗಮನಾರ್ಹವಾಗಿ ಹೆಚ್ಚಾಗಲಿವೆ ಎಂದು ಎಚ್ಚರಿಸಿದರು. ಸಾವುನೋವುಗಳನ್ನು ಕಡಿಮೆ ಮಾಡಲು ವಿಸ್ತೃತ ಬಿಸಿಗಾಳಿ ಆರೋಗ್ಯ ಕ್ರಿಯಾ ಯೋಜನೆಗಳು, ಬಲವಾದ ಕಣ್ಗಾವಲು ವ್ಯವಸ್ಥೆಗಳು, ಹೆಚ್ಚಿನ ಆರೋಗ್ಯ ರಕ್ಷಣಾ ಸಾಮರ್ಥ್ಯ, ವೈದ್ಯಕೀಯ ಸಿಬ್ಬಂದಿಗೆ ವ್ಯಾಪಕ ತರಬೇತಿ ಮತ್ತು ಆಸ್ಪತ್ರೆಗಳ ಸನ್ನದ್ಧತೆಯನ್ನು ಸುಧಾರಿಸಲು ಕರೆ ನೀಡಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ಯುಎ)ದ  ಸಲಹೆಗಾರರಾದ ಶ್ರೀ ವಿ. ಕೆ. ಚೌರಾಸಿಯಾ ಅವರು, ತಂಪಾಗಿಸುವ ಕ್ರಿಯಾ ಯೋಜನೆಗಳು, ಜಲಮೂಲಗಳ ಪುನಶ್ಚೇತನ, ನಗರದ ಹಸಿರೀಕರಣ, ತಂಪಾದ ಛಾವಣಿಗಳು, ಸುಸ್ಥಿರ ಸಾರಿಗೆ, ಸುಸ್ಥಿರ ಸಾರಿಗೆ ಮತ್ತು ಹವಾಮಾನ-ಚೇತರಿಕೆ ನಗರ ಮೂಲಸೌಕರ್ಯಗಳ ಮೂಲಕ ನಗರಾಭಿವೃದ್ಧಿ ಯೋಜನೆಯಲ್ಲಿ ಬಿಸಿಗಾಳಿ ಚೇತರಿಕೆಯನ್ನು ಸಂಯೋಜಿಸಲು ತಿಳಿಸಿದರು.

ಸಿ ಎಸ್ ಇ ಸಂಸ್ಥೆಯ ಸುಸ್ಥಿರ ಕಟ್ಟಡ ಮತ್ತು ಆವಾಸಸ್ಥಾನ ಕಾರ್ಯಕ್ರಮದ ಕಾರ್ಯಕ್ರಮ ನಿರ್ದೇಶಕ ಶ್ರೀ ರಜನೀಶ್ ಸರೀನ್ ಅವರು ಕಾರ್ಮಿಕ-ಕೇಂದ್ರಿತ ಬಿಸಿ ಸುರಕ್ಷತಾ ನಿಯಮಾವಳಿಗಳು, ವಿಸ್ತೃತ ನಗರ-ಮಟ್ಟದ ತಾಪಮಾನ ವೀಕ್ಷಣಾಲಯಗಳು, ವಿತರಿಸಿದ ಹಸಿರು ಮತ್ತು ನೀಲಿ ಮೂಲಸೌಕರ್ಯ ಮತ್ತು ನಗರದ ಉಷ್ಣತೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನ ಚೇತರಿಕೆಯನ್ನು ಸುಧಾರಿಸಲು ಕಾರ್ಯಕ್ಷಮತೆ-ಆಧಾರಿತ ಮಾನದಂಡಗಳಿಗೆ ಕರೆ ನೀಡಿದರು. ರಾಷ್ಟ್ರೀಯ ಮಳೆಬೆಳೆ ಪ್ರದೇಶ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿ ಡಾ. ಅನಿಲ್ ಕುಮಾರ್ ಮಿಶ್ರಾ ಅವರು, ಗರಿಷ್ಠ ಬಿಸಿಲಿನ ತಾಪಕ್ಕೆ ಒಳಗಾಗುವುದನ್ನು ತಪ್ಪಿಸಲು ಕೆಲಸದ ಸಮಯವನ್ನು ಮಾರ್ಪಡಿಸುವುದು, ನಗರದ ಹಸಿರು ಜಾಗಗಳನ್ನು ತಂಪಾಗಿಸಲು ಸಂಸ್ಕರಿಸಿದ ಜಲತ್ಯಾಜ್ಯದ ಬಳಕೆಯನ್ನು ವಿಸ್ತರಿಸುವುದು, ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣವನ್ನು ಹೆಚ್ಚಿಸುವುದು ಮತ್ತು ನಗರಗಳಲ್ಲಿ ಬಿಸಿಗಾಳಿ ತಗ್ಗಿಸುವಿಕೆಯ  ಸಸ್ಯವರ್ಗವನ್ನು ಹೆಚ್ಚಿಸಲು ಸಲಹೆ ನೀಡಿದರು.

ಕ್ಲೈಮೇಟ್ ಟ್ರೆಂಡ್ಸ್‌ ನ  ಸಂಸ್ಥಾಪಕ-ನಿರ್ದೇಶಕಿ ಡಾ. ಆರತಿ ಖೋಸ್ಲಾ, ಅಪಾಯಗಳ ಆಧಾರದ ಮೇಲೆ ಬಿಸಿಗಾಳಿ ಕ್ರಿಯಾ ಯೋಜನೆಗಳಿಗೆ ಆದ್ಯತೆ ನೀಡುವುದು, ಕೈಗೆಟುಕುವ ಮತ್ತು ರಚನಾತ್ಮಕ ತಂಪಾಗಿಸುವ ಪರಿಹಾರಗಳ ಪ್ರಚಾರ, ಗಿಗ್ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಬಿಸಿಗಾಳಿಯ ಪ್ರಭಾವದಿಂದ ರಕ್ಷಿಸುವುದು, ಶಾಖ ಸಂಬಂಧಿತ ಆರೋಗ್ಯ ಪರಿಣಾಮಗಳ ಕುರಿತು ಸುಧಾರಿತ ದತ್ತಾಂಶ ಪಾರದರ್ಶಕತೆ ಮತ್ತು ಹೆಚ್ಚುತ್ತಿರುವ ಹವಾಮಾನ ಮತ್ತು ಬಿಸಿಗಾಳಿಯ ಅಪಾಯಗಳನ್ನು ಎದುರಿಸಲು ಬಲವಾದ ಸರ್ವ ಸಮನ್ವಯ ಮತ್ತು ಸಾರ್ವಜನಿಕ ಜಾಗೃತಿಯ ಅಗತ್ಯವನ್ನು ಒತ್ತಿಹೇಳಿದರು. ಫರೀದಾಬಾದಿನ ಪ್ರಾದೇಶಿಕ ಕಾರ್ಮಿಕ ಸಂಸ್ಥೆಯ ನಿರ್ದೇಶಕ (ಸುರಕ್ಷತೆ) ಮತ್ತು ಎಚ್ಒಒ ಶ್ರೀ ವಿಮಲ್ ಮೀನಾ ಅವರು ಕಾರ್ಮಿಕರ ಕಲ್ಯಾಣಕ್ಕಾಗಿ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ ಹಾಗೂ ಸಾಮಾಜಿಕ ಭದ್ರತಾ ಸಂಹಿತೆಯಡಿ ಇರುವ ನಿಬಂಧನೆಗಳನ್ನು ಎತ್ತಿ ತೋರಿದರು. ಒಪ್ಪಂದದ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಮಾನ ಕೆಲಸದ ಸ್ಥಳದ ರಕ್ಷಣೆಯನ್ನು ಅವರು ಒತ್ತಿಹೇಳಿದರು ಮತ್ತು ಬಿಸಿಲಿನ ಒತ್ತಡ ಮತ್ತು ಶಾಖದ ಹೊಡೆತದ   ಆರಂಭಿಕ ಲಕ್ಷಣಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕರೆ ನೀಡಿದರು.

ಸಿಇಇಡಬ್ಲ್ಯೂ  ಸಂಶೋಧನಾ ವಿಶ್ಲೇಷಕಿ  ಕುಮಾರಿ ಪ್ರೇರಣಾ ಓಜಾ ಅವರು, ಅಪಾಯ-ಆಧಾರಿತ ನಕ್ಷೆ, ಸನ್ನದ್ಧತೆಯ ಯೋಜನೆ, ದುರ್ಬಲ ವರ್ಗಗಳಿಗಾಗಿ ಉದ್ದೇಶಿತ ಮಧ್ಯಸ್ಥಿಕೆಗಳು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಚೌಕಟ್ಟುಗಳು, ಲಿಂಗ-ಸಂವೇದನಾಶೀಲ ವಿಧಾನಗಳು, ಸ್ಥಳೀಯ ನೈಜತೆಗಳ ಆಧಾರದ ಮೇಲೆ ಕ್ರಿಯಾತ್ಮಕ ನವೀಕರಣಗಳು ಮತ್ತು ಬಿಸಿ ಚೇತರಿಕೆಯನ್ನು ಸುಧಾರಿಸಲು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಮರುಹೊಂದಿಸುವ  ಮೂಲಕ ಬಿಸಿಗಾಳಿ ಕ್ರಿಯಾ ಯೋಜನೆಗಳನ್ನು ಅಭಿವೃದ್ಧಿಪಡಿಸುವ ತಮ್ಮ ಕಾರ್ಯವನ್ನು ವಿವರಿಸಿದರು. ಪರಿಸರವಾದಿ ಶ್ರೀ ಸುಂದರಂ ವರ್ಮಾ ಅವರು ಅರಣ್ಯನಾಶದ ಸಮಸ್ಯೆಯನ್ನು ಪ್ರಸ್ತಾಪಿಸಿದರು ಮತ್ತು ಅರಣ್ಯೀಕರಣದ ಪ್ರಯತ್ನಗಳನ್ನು ಹೆಚ್ಚಿಸಲು ಕರೆ ನೀಡಿದರು. ಇಂದೋರಿನ ಮುನ್ಸಿಪಲ್ ಕಮಿಷನರ್ ಶ್ರೀ ಕ್ಷಿತಿಜ್ ಸಿಂಘಾಲ್ ಅವರು ಕ್ಷಿಪ್ರ ನಗರಾಭಿವೃದ್ಧಿ, ಹಣಕಾಸು ಮತ್ತು ಮಾನವಶಕ್ತಿಯ ಕೊರತೆ ಹಾಗೂ ಸ್ಪರ್ಧಾತ್ಮಕ ನಾಗರಿಕ ಆದ್ಯತೆಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಪಟ್ಟಿ ಮಾಡಿದರು, ಜೊತೆಗೆ ದುರ್ಬಲ ವಸತಿ ಪ್ರದೇಶಗಳಲ್ಲಿ ಸೌರ-ಪ್ರತಿಫಲಿತ ಮೇಲ್ಛಾವಣಿ ಲೇಪನಗಳಂತಹ ಕಡಿಮೆ-ವೆಚ್ಚದ ಕ್ರಮಗಳ ಮೂಲಕ ಶಾಖದಿಂದಾಗುವ ನಷ್ಟದ ಚೇತರಿಕೆಯನ್ನು ಸುಧಾರಿಸುವ ಇಂದೋರ್ ನ ಪ್ರಯತ್ನಗಳನ್ನು ಹಂಚಿಕೊಂಡರು.

ಡೆಹ್ರಾಡೂನ್ ನ ಐಸಿಎಫ್ ಆರ್ ಇ  ಉಪ ಮಹಾನಿರ್ದೇಶಕ ಡಾ. ಎಚ್. ಎಸ್. ಗಿನ್ವಾಲ್ ಮಾತನಾಡಿ, ಬಿಸಿ ತಗ್ಗಿಸಲು ನಗರ ಪ್ರದೇಶದ ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಮತ್ತು ಪ್ರತಿಫಲಿತ ಮೇಲ್ಛಾವಣಿ ಕ್ರಮಗಳನ್ನು ಬಳಸುವ ಅಗತ್ಯವಿದೆ ಎಂದರು. ಅವರು ಮುನ್ನೆಚ್ಚರಿಕೆ   ವ್ಯವಸ್ಥೆಗಳನ್ನು ಬಲಪಡಿಸುವಂತೆ ಒತ್ತಾಯಿಸಿದರು. ಗ್ಲೋಬಲ್ ಫೌಂಡೇಶನ್ ಫಾರ್ ಅಡ್ವಾನ್ಸ್ಮೆಂಟ್ ಆಫ್ ಎನ್ವಿರಾನ್ಮೆಂಟ್ ಅಂಡ್ ಹ್ಯೂಮನ್ ವೆಲ್ ನೆಸ್ ನ ಗೌರವಾನ್ವಿತ ಸಲಹೆಗಾರ ಶ್ರೀ ನಿರಂಜನ್ ದೇವ್ ಭಾರದ್ವಾಜ್, ವಾರ್ಡ್ ಮಟ್ಟದ ಬಿಸಿ-ಅಪಾಯದ ನಕ್ಷೆ, ಹೈಪರ್ ಲೋಕಲ್ ಹೀಟ್ ಇಂಟೆಲಿಜೆನ್ಸ್, ಡಿಜಿಟಲ್ ಅಲರ್ಟ್ ಸಿಸ್ಟಮ್ಗಳು, ಹೊರಾಂಗಣ ಕಾರ್ಮಿಕರ ರಕ್ಷಣೆ, ನಗರಾಭಿವೃದ್ಧಿ ಯೋಜನೆಯಲ್ಲಿ ಬಿಸಿ ಚೇತರಿಕೆಯ  ಸಂಯೋಜನೆ ಮತ್ತು ಬಿಸಿಗಾಳಿಗಳಿಗಾಗಿಯೇ ಮೀಸಲಾದ ಹಣಕಾಸು ಮತ್ತು ಸಾಂಸ್ಥಿಕ ಸನ್ನದ್ಧತೆಯ ಮೂಲಕ ಪ್ರತಿಕ್ರಿಯಾತ್ಮಕ ಆಡಳಿತದಿಂದ ಮುನ್ಸೂಚಕ ಬಿಸಿ ಆಡಳಿತಕ್ಕೆ ಬದಲಾಗುವ ಅಗತ್ಯವನ್ನು ಎತ್ತಿ ತೋರಿಸಿದರು.

ಅಹಮದಾಬಾದ್ ನ ಮುನ್ಸಿಪಲ್ ಕಮಿಷನರ್ ಶ್ರೀ ಬಾಂಛಾನಿಧಿ ಪಾನಿ ಅವರು ಅಹಮದಾಬಾದ್ನ ಪ್ರವರ್ತಕ ಶಾಖ ಕ್ರಿಯಾ ಯೋಜನೆಯನ್ನು ಉಲ್ಲೇಖಿಸಿದರು. ಮುನ್ನೆಚ್ಚರಿಕೆಯ ವ್ಯವಸ್ಥೆಗಳು, ನಗರ ಹಸಿರೀಕರಣ, ತಂಪಾದ ಛಾವಣಿಗಳು, ನೆರಳಿನ ಸಾರ್ವಜನಿಕ ಸ್ಥಳಗಳು, ಸೂಕ್ಷ್ಮ-ಮಟ್ಟದ ಶಾಖ-ಅಪಾಯದ ನಕ್ಷೆ, ಕಾರ್ಮಿಕ ರಕ್ಷಣಾ ಕ್ರಮಗಳು, ಸಾರ್ವಜನಿಕ ಜಾಗೃತಿ ಅಭಿಯಾನಗಳು ಮತ್ತು ಹವಾಮಾನ ಚೇತರಿಕೆ  ನಗರ ಯೋಜನೆಯ ಮೂಲಕ ಶಾಖ ಸಂಬಂಧಿತ ಸಾವುಗಳನ್ನು ಕಡಿಮೆ ಮಾಡುವಲ್ಲಿ ಅದರ ಪಾತ್ರವನ್ನು ಅವರು ವಿವರಿಸಿದರು. ಚೆನ್ನೈನ ಅಡ್ವಾನ್ಸ್ಡ್ ಇನ್ಸ್ಟಿಟ್ಯೂಟ್ ಆಫ್ ವೈಲ್ಡ್ಲೈಫ್ ಕನ್ಸರ್ವೇಶನ್ ನ ಗೌರವ ಪ್ರಾಧ್ಯಾಪಕ ಡಾ. ಪ್ರಮೋದ್ ಕಾಂತ್ ಅವರು, ಪ್ರತಿಫಲಿತ ಮೇಲ್ಛಾವಣಿಗಳು ಮತ್ತು ಬಣ್ಣಗಳಂತಹ ಕೈಗೆಟುಕುವ ತಕ್ಷಣದ ತಂಪಾಗಿಸುವ ಪ್ರಯೋಜನಗಳಿಗಾಗಿ ದೊಡ್ಡ ಸಸ್ಯಗಳ ಮರುನೆಡುವಿಕೆ ಮತ್ತು ಶಾಲೆಗಳು ಹಾಗೂ ಸಾರ್ವಜನಿಕ ಸ್ಥಳಗಳ ಸುತ್ತ ನೆರಳಿನ ಹೊದಿಕೆಯನ್ನು ವಿಸ್ತರಿಸುವ ಮಹತ್ವವನ್ನು ಒತ್ತಿಹೇಳಿದರು. ಎನ್ ಐಡಿಎಂ  ಸಹಾಯಕ ಪ್ರಾಧ್ಯಾಪಕಿ ಡಾ. ಪ್ರೇರಣಾ ಜೋಶಿ ಅವರು ಹೊರಗೆ ಕೆಲಸ ಮಾಡುವ ಕಾರ್ಮಿಕರಿಗೆ ಬಿಸಿ-ರಕ್ಷಣಾ ಕ್ರಮಗಳ ಕಾನೂನು ಜಾರಿ, ಕಡಿಮೆ ಆದಾಯದ ಗುಂಪುಗಳಿಗೆ ನಿಷ್ಕ್ರಿಯ ಮತ್ತು ಇಂಧನ-ದಕ್ಷ ತಂಪಾಗಿಸುವ ಪರಿಹಾರಗಳ ಪ್ರಚಾರ, ಬಿಸಿಗಾಳಿ ಎಚ್ಚರಿಕೆಗಳ ವ್ಯಾಪಕ ಲಭ್ಯತೆ ಮತ್ತು ವಿಕೇಂದ್ರೀಕೃತ ಹಸಿರು ಸ್ಥಳಗಳು ಮತ್ತು ಕಿರು ಕಾಡುಗಳ  ಮೂಲಕ ನಗರ ಹಸಿರು ಹೊದಿಕೆ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕರೆ ನೀಡಿದರು.

'ದಿ ಶಿಲ್ಲಾಂಗ್ ಟೈಮ್ಸ್' ಪತ್ರಿಕೆಯ ಸಂಪಾದಕಿ ಶ್ರೀಮತಿ ಪೆಟ್ರಿಷಿಯಾ ಮುಖಿಮ್ ಅವರು, ಪರಿಸರ ಕಾನೂನುಗಳ ದುರ್ಬಲ ಜಾರಿ, ನದಿಗಳು, ಜೌಗು ಪ್ರದೇಶಗಳು ಮತ್ತು ಕಾಡುಗಳ ನಾಶ ಹಾಗೂ ನೈಸರ್ಗಿಕ ಪರಿಸರ ವ್ಯವಸ್ಥೆಗಳ ಮೇಲಿನ ಅತಿಕ್ರಮಣಗಳು ಈಶಾನ್ಯ ಭಾರತದಲ್ಲಿ ಹವಾಮಾನ ದುರ್ಬಲತೆಗೆ ಪ್ರಮುಖ ಕಾರಣಗಳಾಗಿವೆ ಎಂದು ಒತ್ತಿಹೇಳಿದರು. ಅವರು ಜಲಮೂಲಗಳು, ಹಸಿರು ಸ್ಥಳಗಳು ಮತ್ತು ಅರಣ್ಯ ಹೊದಿಕೆಯ ಬಲವಾದ ರಕ್ಷಣೆಗೆ ಕರೆ ನೀಡಿದರು. ವೈಲ್ಡ್‌ ಲೈಫ್‌  ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ವಿಜ್ಞಾನಿ ಶ್ರೀ ಗೌತಮ್ ತಾಲುಕ್ದಾರ್ ಅವರು ಬಿಸಿ ಮೌಲ್ಯಮಾಪನಗಳಲ್ಲಿ ಭೂ ಮೇಲ್ಮೈ ತಾಪಮಾನವನ್ನು ಸೇರಿಸುವುದು, ದೊಡ್ಡ ಸಂಸ್ಥೆಗಳಿಂದ ಹೊರಸೂಸುವ ಬಿಸಿ ಹೊರಸೂಸುವಿಕೆಯನ್ನು ಮೇಲ್ವಿಚಾರಣೆ ಮಾಡುವುದು, ನಗರದ ನೀಲಿ-ಹಸಿರು ಸ್ಥಳಗಳನ್ನು ಪತ್ತೆಹಚ್ಚಲು ʻನಗರ ಜೀವವೈವಿಧ್ಯ ಸೂಚ್ಯಂಕʼ ಬಳಸುವುದು ಮತ್ತು ಅಸಮರ್ಪಕ ಹೊಂದಾಣಿಕೆಯ ಕ್ರಮಗಳನ್ನು ತಪ್ಪಿಸುವುದನ್ನು ಪ್ರತಿಪಾದಿಸಿದರು.

ಸಿಎಸ್ ಐಆರ್-ನೀರಿ  ಸಂಸ್ಥೆಯ  ವಿಜಾನಿ  ಡಾ. ಶಾಲಿನಿ ಧ್ಯಾಮಿ ಅವರು, ನಗರ ಹಸಿರು ಸ್ಥಳಗಳ ಅಸಮಾನ ವಿತರಣೆಯನ್ನು ಸರಿಪಡಿಸುವುದು, ಪರಿಸರ ಕಾರಿಡಾರ್ ಗಳು ಮತ್ತು ಜೌಗು ಪ್ರದೇಶದ ಬಫರ್ ಗಳನ್ನು ಮರುಸ್ಥಾಪಿಸುವುದು, ಪರಿಸರ ವ್ಯವಸ್ಥೆ ಆಧಾರಿತ ನಗರ ಯೋಜನೆಯನ್ನು ಅಳವಡಿಸಿಕೊಳ್ಳುವುದು, ಪ್ರವೇಶಿಸಬಹುದಾದ ಸಾರ್ವಜನಿಕ ಹಸಿರು ಸ್ಥಳಗಳನ್ನು ವಿಸ್ತರಿಸುವುದು ಮತ್ತು ದುರ್ಬಲ ಕಾರ್ಮಿಕರಿಗೆ ಶಾಖ-ಸಂವೇದನಾಶೀಲ ಕೆಲಸದ ವೇಳಾಪಟ್ಟಿಗಳನ್ನು ಪರಿಚಯಿಸುವ ಅಗತ್ಯವನ್ನು ಎತ್ತಿ ತೋರಿಸಿದರು. ಎಂಒಇಎಫ್ ಸಿಸಿ   ಜಂಟಿ ನಿರ್ದೇಶಕ (ವನ್ಯಜೀವಿ) ಶ್ರೀ ಸುನಿಲ್ ಶರ್ಮಾ ಅವರು ಸಹ ಹಂತ-ಹಂತದ ಕೆಲಸದ ಶಿಫ್ಟ್ ಗಳು, ಸುಧಾರಿತ ನಗರ ಜೀವನ ಪರಿಸ್ಥಿತಿಗಳು, ನಗರ ಉದ್ಯಾನವನಗಳಲ್ಲಿ ಹೆಚ್ಚಿನ ಹೂಡಿಕೆ ಮತ್ತು ಶಾಖದ ಒತ್ತಡವನ್ನು ಕಡಿಮೆ ಮಾಡಲು ಪರಿಸರ ಮತ್ತು ಯೋಜನಾ ಕ್ರಮಗಳ ಕಟ್ಟುನಿಟ್ಟಾದ ಜಾರಿಗೆ ನೀಡಿದ ಸಲಹೆಯನ್ನು ಬೆಂಬಲಿಸಿದರು. ಪರಿಸರ ಮತ್ತು ಹವಾಮಾನ ಬದಲಾವಣೆಯ ಎನ್ ಎಚ್ ಆರ್ ಸಿ ವಿಶೇಷ ಮೇಲ್ವಿಚಾರಕ ಶ್ರೀ ವಿ. ಬಿ. ಕುಮಾರ್ ಅವರು ಕಟ್ಟಡ ಮತ್ತು ನಗರಾಭಿವೃದ್ಧಿ ನಿಯಮಗಳ ಅನುಸರಣೆಯ ಲೆಕ್ಕಪರಿಶೋಧನೆಗಳು, ಕಡ್ಡಾಯ ಮತ್ತು ಪ್ರೋತ್ಸಾಹಕ ಆಧಾರಿತ ಕ್ರಮಗಳ ಮೂಲಕ ಹಸಿರು ಮೂಲಸೌಕರ್ಯಗಳ ಪ್ರಚಾರ, ವಿವಿಧ ಶಾಖ-ಸಂಬಂಧಿತ ಯೋಜನೆಗಳನ್ನು ಒಂದೇ ಮೇಲ್ವಿಚಾರಣಾ ವೇದಿಕೆಯಲ್ಲಿ  ಸಂಯೋಜಿಸುವುದು ಮತ್ತು ಬಿಸಿಗಾಳಿ ಸೂಚ್ಯಂಕದ ಅಭಿವೃದ್ಧಿಗೆ ಕರೆ ನೀಡಿದರು.

ಚರ್ಚೆಯಿಂದ ಹೊರಹೊಮ್ಮಿದ ಪ್ರಮುಖ ಸಲಹೆಗಳು:

  • ಜಿಐಎಸ್, ರಿಮೋಟ್ ಸೆನ್ಸಿಂಗ್, ಎಐ, ಭೂ ಮೇಲ್ಮೈ ತಾಪಮಾನ ಮತ್ತು ಅಪಾಯಕ್ಕೊಳಗಾಗುವ ಸಮುದಾಯಗಳ ಸೂಚಕಗಳನ್ನು ಬಳಸಿಕೊಂಡು ವಾರ್ಡ್ ಮಟ್ಟದ ಶಾಖ ಅಪಾಯದ ಮತ್ತು ಚೇತರಿಕೆಯ  ನಕ್ಷೆಗಳನ್ನು ಅಭಿವೃದ್ಧಿಪಡಿಸುವುದು, ಇದಕ್ಕೆ ಸ್ಥಳೀಯ ಮುನ್ಸೂಚನೆ,  ಮುನ್ನೆಚ್ಚರಿಕೆ ವ್ಯವಸ್ಥೆಗಳು ಮತ್ತು ಸಂಯೋಜಿತ ಬಿಸಿ ಅಪಾಯಕ್ಕೊಳಗಾಗುವ ಸೂಚ್ಯಂಕದ ಬೆಂಬಲ ನೀಡುವುದು;
  • ಮೀಸಲಾದ ಶಾಖ ಅಧಿಕಾರಿಗಳು, ಸಂಯೋಜಿತ ಆಡಳಿತ ಡ್ಯಾಶ್ ಬೋರ್ಡ್ ಗಳು, ನಿಯಮಿತ ಮೇಲ್ವಿಚಾರಣೆ ಮತ್ತು ಇಲಾಖೆಗಳ ನಡುವಿನ ಸಮನ್ವಯದ ಮೂಲಕ ಎಲ್ಲಾ ರಾಜ್ಯಗಳು, ಜಿಲ್ಲೆಗಳು ಮತ್ತು ನಗರಗಳಲ್ಲಿ ಬಿಸಿಗಾಳಿ ಕ್ರಿಯಾ ಯೋಜನೆಗಳು ಮತ್ತು ಅವುಗಳ ಅನುಷ್ಠಾನವನ್ನು ಸಾಂಸ್ಥಿಕಗೊಳಿಸುವುದು;
  • ಏಕೀಕೃತ, ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ವರದಿ ಮತ್ತು ದತ್ತಾಂಶ ನಿರ್ವಹಣಾ ವ್ಯವಸ್ಥೆಯ ಮೂಲಕ ಬಿಸಿಗಾಳಿ ದೆಸೆಯಿಂದಾಗುವ ಮರಣ ಮತ್ತು ಅನಾರೋಗ್ಯದ ಕಣ್ಗಾವಲನ್ನು ಸುಧಾರಿಸುವುದು;
  • ವೃತ್ತಿಯಿಂದಾಗುವ ಶಾಖ-ಸುರಕ್ಷತಾ ಮಾನದಂಡಗಳು, ಸಾಮಾಜಿಕ ರಕ್ಷಣಾ ಕ್ರಮಗಳು, ಸಮುದಾಯ ತಂಪಾಗಿಸುವ ಕೇಂದ್ರಗಳು, ಪ್ರವೇಶಿಸಬಹುದಾದ ಸಾರ್ವಜನಿಕ ಹಸಿರು ಸ್ಥಳಗಳು ಮತ್ತು ವಲಸಿಗರು, ಗಿಗ್ ಕಾರ್ಮಿಕರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗಾಗಿ ಉದ್ದೇಶಿತ ಮಧ್ಯಸ್ಥಿಕೆಗಳ ಮೂಲಕ ದುರ್ಬಲವರ್ಗದ ಜನರನ್ನು ರಕ್ಷಿಸುವುದು;
  • ವಿಶೇಷ ಶಾಖಾಘಾತ ನಿರ್ವಹಣಾ ಘಟಕಗಳು, ತರಬೇತಿ ಪಡೆದ ಆರೋಗ್ಯ ಸಿಬ್ಬಂದಿ, ತುರ್ತು ತಂಪಾಗಿಸುವ ಉಪಕರಣಗಳು, ಆಂಬ್ಯುಲೆನ್ಸ್ ಗಳು ಮತ್ತು ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ ಪಠ್ಯಕ್ರಮದಲ್ಲಿ ಶಾಖ- ಆರೋಗ್ಯ ಶಿಕ್ಷಣದ ಸಂಯೋಜನೆಯ ಮೂಲಕ ಬಿಸಿ-ಆರೋಗ್ಯ (ಶಾಖ ಆರೋಗ್ಯ) ಸನ್ನದ್ಧತೆಯನ್ನು ಬಲಪಡಿಸುವುದು;
  • ನೈಸರ್ಗಿಕವಾಗಿ ತಂಪಾಗಿಸುವಿಕೆ, ತಂಪಾದ ಛಾವಣಿಗಳು, ಪ್ರತಿಫಲಿತ ವಸ್ತುಗಳು, ಅಸ್ತಿತ್ವದಲ್ಲಿರುವ ಕಟ್ಟಡಗಳ ನವೀಕರಣ, ಉತ್ತಮ ಗಾಳಿ ಬೆಳಕಿನ ಕಾರಿಡಾರ್ ಗಳು ಮತ್ತು ಹವಾಮಾನಕ್ಕೆ ತಕ್ಕನಾದ ಕಟ್ಟಡ ಮಾನದಂಡಗಳು ಸೇರಿದಂತೆ ಶಾಖ ಚೇತರಿಕೆ ಮತ್ತು ಹವಾಮಾನ-ಸಂವೇದನಾಶೀಲ ನಗರ ವಿನ್ಯಾಸವನ್ನು ಕಡ್ಡಾಯಗೊಳಿಸುವುದು;
  • ನಗರದ ಹಸಿರು ಹೊದಿಕೆ, ಸ್ಥಳೀಯ ಮರಗಳ ನೆಡುವಿಕೆ, ನಗರ ಅರಣ್ಯಗಳು, ಹಸಿರು ಕಾರಿಡಾರ್ ಗಳು, ಜೌಗು ಪ್ರದೇಶದ ಬಫರ್ ವಲಯಗಳನ್ನು ಹೆಚ್ಚಿಸುವ ಮೂಲಕ ಮತ್ತು ನದಿಗಳು, ಸರೋವರಗಳು, ಜೌಗು ಪ್ರದೇಶಗಳು ಮತ್ತು ಇತರ ನೀಲಿ-ಹಸಿರು ಮೂಲಸೌಕರ್ಯಗಳನ್ನು ಮರುಸ್ಥಾಪಿಸುವ ಮೂಲಕ ಪ್ರಕೃತಿ ಆಧಾರಿತ ಪರಿಹಾರಗಳನ್ನು ವಿಸ್ತರಿಸುವುದು;
  • ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ, ತ್ಯಾಜ್ಯನೀರಿನ ಮರುಬಳಕೆ ಮತ್ತು ನಗರ ಜಲಮೂಲಗಳು ಹಾಗೂ ಜಲಾನಯನ ಪ್ರದೇಶಗಳ ರಕ್ಷಣೆಯ ಮೂಲಕ ಸುಸ್ಥಿರ ನೀರಿನ ನಿರ್ವಹಣೆಯನ್ನು ಉತ್ತೇಜಿಸುವುದು;
  • ತ್ಯಾಜ್ಯ ಶಾಖದ ಹೊರಸೂಸುವಿಕೆಯನ್ನು ನಿಯಂತ್ರಿಸುವುದು, ಕಟ್ಟಡಗಳು ಮತ್ತು ವಸತಿ ಸಂಕೀರ್ಣಗಳಿಗೆ ಶಾಖ ಚೇತರಿಕೆಯ  ರೇಟಿಂಗ್ ಗಳನ್ನು ಪರಿಚಯಿಸುವುದು ಮತ್ತು ನಿಯತಕಾಲಿಕ ಅನುಸರಣೆ ಪರಿಶೋಧನೆಗಳ ಮೂಲಕ ಪರಿಸರ, ಕಟ್ಟಡ ಮತ್ತು ನಗರ ಯೋಜನಾ ನಿಯಮಗಳ ಜಾರಿಯನ್ನು ಬಲಪಡಿಸುವುದು;
  • ಡಿಜಿಟಲ್ ತಂತ್ರಜ್ಞಾನದಿಂದ ಹೊರಗುಳಿದಿರುವ ಜನರಿಗೆ ಧ್ವನಿ ಆಧಾರಿತ ಎಚ್ಚರಿಕೆಗಳು ಸೇರಿದಂತೆ ಬಹುಭಾಷಾ, ಸುಲಭವಾಗಿ ಲಭ್ಯವಾಗಬಹುದಾದ ಮತ್ತು ಸಮುದಾಯ ಆಧಾರಿತ ಪ್ರಚಾರದ ಮೂಲಕ ಸಾರ್ವಜನಿಕ ಜಾಗೃತಿ ಮತ್ತು ಅಪಾಯದ ಸಂವಹನವನ್ನು ಬಲಪಡಿಸುವುದು; ಮತ್ತು
  • ಸರ್ಕಾರದ ಎಲ್ಲಾ ಹಂತಗಳಲ್ಲಿ ಮೀಸಲಾಗಿಟ್ಟ ನಿಧಿ ಮತ್ತು ಸಾಂಸ್ಥಿಕ ಬೆಂಬಲದೊಂದಿಗೆ ನಗರದ ಮಾಸ್ಟರ್ ಪ್ಲಾನ್ ಗಳು, ಅಭಿವೃದ್ಧಿ ಯೋಜನೆಗಳು, ಮುನ್ಸಿಪಲ್ ಬಜೆಟ್ ಗಳು ಮತ್ತು ಹವಾಮಾನ ಕ್ರಿಯಾ ಕಾರ್ಯತಂತ್ರಗಳಲ್ಲಿ ಶಾಖ ಚೇತರಿಕೆಯನ್ನು  ಮುಖ್ಯವಾಹಿನಿಗೆ ತರುವುದು.

ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತನ್ನ ಶಿಫಾರಸುಗಳನ್ನು ಅಂತಿಮಗೊಳಿಸಲು ಈ ಸಲಹೆಗಳ ಕುರಿತು ಮತ್ತಷ್ಟು ಚರ್ಚಿಸಲಿದೆ.

 

*****


(रिलीज़ आईडी: 2269138) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil