ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಭಾರತದ ಕಚ್ಚಾ ತೈಲ ಆಮದು ಕಡಿಮೆ ಮಾಡಲು, ರೈತರಿಗೆ ಹೆಚ್ಚುವರಿ ಆದಾಯ ಒದಗಿಸಲು ಮತ್ತು ಕಡಿಮೆ ಇಂಗಾಲದ ಹೊರಸೂಸುವಿಕೆಯನ್ನು ಉತ್ತೇಜಿಸಲು ಫ್ಲೆಕ್ಸ್-ಇಂಧನ ವಾಹನಗಳು ಕಾರ್ಯಸಾಧ್ಯವಾದ ಪರಿಹಾರವನ್ನು ನೀಡುತ್ತವೆ: ಶ್ರೀ ಹರ್ ದೀಪ್  ಸಿಂಗ್ ಪುರಿ


ಭಾರತದ ಎಥೆನಾಲ್ ಮಿಶ್ರಣ ಕಾರ್ಯಕ್ರಮವು ಪರಿವರ್ತನಾತ್ಮಕ ಫಲಿತಾಂಶಗಳನ್ನು ನೀಡಿದೆ; ಭಾರತೀಯ ರೈತರಿಗೆ ₹1.58 ಲಕ್ಷ ಕೋಟಿ ಗಳಿಕೆಯನ್ನು ತಂದುಕೊಡುವ ಮೂಲಕ ನಮ್ಮ ಅನ್ನದಾತರನ್ನು ಇಂಧನ ಪೂರೈಕೆದಾರರನ್ನಾಗಿ ಮಾಡಿದೆ

E20 से E85 ईंधन पर चलने वाली बाइक्स का हुआ अनावरण! इस पहल से ना केवल भारत में हरित ऊर्जा के क्षेत्र में क्रांति आएगी बल्कि आत्मनिर्भरता को बल मिलेगा।

प्रविष्टि तिथि: 03 JUN 2026 9:20PM by PIB Bengaluru

ಫ್ಲೆಕ್ಸ್ ಇಂಧನ ವಾಹನಗಳು  ಭಾರತಕ್ಕೆ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಲು, ಎಥೆನಾಲ್ ಬೇಡಿಕೆಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಕಡಿಮೆ ಇಂಗಾಲದ ಹೊರಸೂಸುವಿಕೆ ಸಾರಿಗೆಯನ್ನು ಉತ್ತೇಜಿಸಲು ಒಂದು ಕಾರ್ಯಸಾಧ್ಯವಾದ ಪರಿಹಾರವನ್ನು ನೀಡುತ್ತವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್  ಸಿಂಗ್ ಪುರಿ ಅವರು ಇಂದು ಹೊಸ ದೆಹಲಿಯಲ್ಲಿ ಹೀರೋ ಮೋಟೋಕಾರ್ಪ್ ನ ಮೊದಲ ಫ್ಲೆಕ್ಸ್-ಫ್ಯುಯೆಲ್ (ಫ್ಲೆಕ್ಸ್ ಇಂಧನ) ಮೋಟಾರ್ ಸೈಕಲ್ ಬಿಡುಗಡೆ ಸಮಾರಂಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಕೂಡ ಉಪಸ್ಥಿತರಿದ್ದರು.

ಇ20 ರಿಂದ ಇ85 ವರೆಗಿನ ಎಥೆನಾಲ್ ಮಿಶ್ರಣಗಳಿಗೆ ಹೊಂದಿಕೆಯಾಗುವ ಹೊಸ ಮೋಟಾರ್ ಸೈಕಲ್ ಗಳ ಪರಿಚಯದೊಂದಿಗೆ ಈ ಚಾಲನೆಯು ಭಾರತದ ಇಂಧನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವಾಗಿದೆ ಎಂದು ಶ್ರೀ ಪುರಿ ಬಣ್ಣಿಸಿದರು. ಸ್ಪ್ಲೆಂಡರ್+ ಮತ್ತು ಎಚ್ ಎಫ್ ಡಿಲಕ್ಸ್ ಫ್ಲೆಕ್ಸ್ ಫ್ಯುಯೆಲ್ ಮೋಟಾರ್ ಸೈಕಲ್ ಗಳ ಬಿಡುಗಡೆಯು ಆತ್ಮನಿರ್ಭರ ವಾಹನಗಳೊಂದಿಗೆ ಭಾರತವು ಸಮೂಹ-ಮಾರುಕಟ್ಟೆಯ ಫ್ಲೆಕ್ಸ್-ಫ್ಯುಯೆಲ್ ಸಾರಿಗೆಗೆ ಪ್ರವೇಶಿಸುವುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ‘ಭಾರತದ ಬೈಕ್, ಭಾರತದ ಇಂಧನ!’

ಭಾರತವು 300 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ದ್ವಿಚಕ್ರ ವಾಹನಗಳ ಸಮೂಹದೊಂದಿಗೆ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಪರಿಸರ ವ್ಯವಸ್ಥೆಗಳಲ್ಲಿ ಒಂದನ್ನು ಹೊಂದಿದೆ. ಫ್ಲೆಕ್ಸ್-ಇಂಧನ ತಂತ್ರಜ್ಞಾನವು ಅಭೂತಪೂರ್ವ ಪ್ರಮಾಣದಲ್ಲಿ ಸಾರಿಗೆಯನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.

ಇಂದಿನ ಐತಿಹಾಸಿಕ ಚಾಲನೆಯು ಭಾರತದ ಸಾರಿಗೆ ಮತ್ತು ಎಥೆನಾಲ್ ಮಿಶ್ರಣದ ಅನ್ವೇಷಣೆಯಲ್ಲಿ ಒಂದು ನಿರ್ಣಾಯಕ ಕ್ಷಣವಾಗಿದೆ. ಇದು 2014 ರಲ್ಲಿ ಕೇವಲ 1.5% ರಷ್ಟಿತ್ತು ಮತ್ತು ಈಗ 20% ಮಿಶ್ರಣವನ್ನು ಸಾಧಿಸಿದೆ, ಆದಾಗ್ಯೂ ನಾವು ಇದರ ಆಚೆಗೂ ನೋಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು. ಇದು ನಮ್ಮ ಇಂಧನ ಆಮದು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಶದ ಅನ್ನದಾತರಾಗಿದ್ದ ನಮ್ಮ ರೈತರನ್ನು ಇಂಧನ ಪೂರೈಕೆದಾರರನ್ನಾಗಿ ಪರಿವರ್ತಿಸಿ ಅವರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುವುದನ್ನು ಮುಂದುವರಿಸುತ್ತದೆ.

ಭಾರತದ ಭವಿಷ್ಯದ ಸಾರಿಗೆ ಪರಿಸರ ವ್ಯವಸ್ಥೆಯು ಇವಿಗಳು, ಜೈವಿಕ ಇಂಧನಗಳು, ಜಲಜನಕ ಮತ್ತು ನವೀಕರಿಸಬಹುದಾದ ಇಂಧನಗಳನ್ನು ಭಾರತಕ್ಕೆ ಸೂಕ್ತವಾದ ರೀತಿಯಲ್ಲಿ ಸಂಯೋಜಿಸಲಿದೆ ಎಂದು ಸಚಿವರು ಹೇಳಿದರು. ಭಾರತವು ಪ್ರಸ್ತುತ ತನ್ನ ಕಚ್ಚಾ ತೈಲದ ಅಗತ್ಯತೆಯ ಸುಮಾರು 88.5% ರಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದು ಆರ್ಥಿಕತೆ ಮತ್ತು ಇಂಧನ ಭದ್ರತೆಯನ್ನು ಭೌಗೋಳಿಕ ರಾಜಕೀಯ ಅಸ್ಥಿರತೆಗಳಿಗೆ ಗುರಿಯಾಗುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

ಭಾರತ ಸರ್ಕಾರದ ಎಥೆನಾಲ್ ಮಿಶ್ರಣ ಕಾರ್ಯಕ್ರಮವು ಎಥೆನಾಲ್ ಸರಬರಾಜು ವರ್ಷ (ಇಎಸ್‌ ವೈ) 2014-15 ರಿಂದ ಭಾರತಕ್ಕೆ ₹1.84 ಲಕ್ಷ ಕೋಟಿ ವಿದೇಶಿ ವಿನಿಮಯವನ್ನು ಉಳಿಸಿದೆ, 302 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲದ ಪರ್ಯಾಯಕ್ಕೆ ಕಾರಣವಾಗಿದೆ ಮತ್ತು ಇಂಗಾಲದ ಹೊರಸೂಸುವಿಕೆಯಲ್ಲಿ 909 ಲಕ್ಷ ಮೆಟ್ರಿಕ್ ಟನ್ ಕಡಿತವನ್ನು ಮಾಡಿದೆ. ಇದರ ಗಮನಾರ್ಹ ಫಲಿತಾಂಶವೆಂದರೆ, ಈ ಕಾರ್ಯಕ್ರಮವು ರೈತರಿಗೆ ₹1.58 ಲಕ್ಷ ಕೋಟಿ ಗಳಿಕೆಯನ್ನು ಸೇರಿಸಿದ್ದು, ನಮ್ಮ ಅನ್ನದಾತರನ್ನು ಇಂಧನ  ಪೂರೈಕೆದಾರರನ್ನಾಗಿ ಮಾಡಿದೆ.

ಇಎಸ್‌ ವೈ 2026-27 ರ ಅವಧಿಯಲ್ಲಿ ಭಾರತದಲ್ಲಿ ವಾರ್ಷಿಕ ಪೆಟ್ರೋಲ್ ವಾಹನಗಳ ಮಾರಾಟದಲ್ಲಿ ಕೇವಲ 1% ರಷ್ಟು ಫ್ಲೆಕ್ಸ್ ವಾಹನಗಳನ್ನು ಅಳವಡಿಸಿಕೊಂಡರೂ, ಅದು 4 ಕೋಟಿ ಲೀಟರ್ ಎಥೆನಾಲ್ ಬೇಡಿಕೆಯನ್ನು ಸೃಷ್ಟಿಸುತ್ತದೆ. ಇದರಲ್ಲಿ ಡಿಸ್ಟಿಲರಿಗಳಿಗೆ ಸುಮಾರು ₹266 ಕೋಟಿ ಪಾವತಿ ಮಾಡಲಾಗುವುದು ಮತ್ತು ಇದು ನಮಗೆ ವಿದೇಶಿ ವಿನಿಮಯದಲ್ಲಿ ₹195 ಕೋಟಿಯನ್ನು ಉಳಿಸುತ್ತದೆ ಎಂದು ಸಚಿವರು ಹೇಳಿದರು. ಇದು ಸರಿಸುಮಾರು 0.28 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ಕಡಿತಕ್ಕೆ ಮತ್ತು ಸುಮಾರು 0.86 ಲಕ್ಷ ಮೆಟ್ರಿಕ್ ಟನ್ ನಿವ್ವಳ ಇಂಗಾಲದ ಕಡಿತಕ್ಕೆ ಕಾರಣವಾಗುತ್ತದೆ.

ಮುಖ್ಯವಾಗಿ, ತೈಲ ಆಮದಿಗಾಗಿ ದೇಶದಿಂದ ಹೊರಗೆ ಹೋಗುವ ಬದಲು ಸುಮಾರು ₹160 ಕೋಟಿ ನೇರವಾಗಿ ಭಾರತೀಯ ರೈತರಿಗೆ ತಲುಪುತ್ತದೆ. ಭಾರತದ ವಿಶಾಲವಾದ ದ್ವಿಚಕ್ರ ವಾಹನ ಪರಿಸರ ವ್ಯವಸ್ಥೆಯಾದ್ಯಂತ ಫ್ಲೆಕ್ಸ್- ಇಂಧನ ತಂತ್ರಜ್ಞಾನವು ವಿಸ್ತರಿಸುತ್ತಿದ್ದಂತೆ ಇದರ ಪ್ರಭಾವವು ಪರಿವರ್ತನಾತ್ಮಕವಾಗಲಿದೆ ಎಂದು ಅವರು ಹೇಳಿದರು.

ಇ-85 ಫ್ಲೆಕ್ಸ್ ಇಂಧನಗಳು ಕಡಿಮೆ ವಾಹನ ಉತ್ಪಾದನಾ ವೆಚ್ಚ, ಕನಿಷ್ಠ ಮೂಲಸೌಕರ್ಯ ಬಂಡವಾಳ ವೆಚ್ಚ, ಮತ್ತು ವೇಗದ ವಿತರಣೆ  (ಇವಿ ನೆಟ್ ವರ್ಕ್ಗಿಂತ ~10-15 ಪಟ್ಟು ವೇಗವಾಗಿ) ಮುಂತಾದ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಎಲೆಕ್ಟ್ರಿಕ್ ವಾಹನಗಳು ಬ್ಯಾಟರಿ ಘಟಕಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಮದಿನ ಮೇಲೆ ಅವಲಂಬಿತವಾಗಿವೆ ಮತ್ತು ಉತ್ಪಾದನಾ ಪ್ರಕ್ರಿಯೆಯಲ್ಲಿ ಗಮನಾರ್ಹ ಇಂಗಾಲದ ಹೊರಸೂಸುವಿಕೆಯನ್ನು ಉತ್ಪಾದಿಸುತ್ತವೆ.  .

ಇದಕ್ಕೆ ವ್ಯತಿರಿಕ್ತವಾಗಿ, ಫ್ಲೆಕ್ಸ್ ಇಂಧನ ವಾಹನಗಳು ದೇಶೀಯ ಜೈವಿಕ ಇಂಧನಗಳ ಮೇಲೆ ಅವಲಂಬಿತವಾಗಿವೆ ಮತ್ತು ಬ್ಯಾಟರಿ ಸಂಬಂಧಿತ ಹೊರಸೂಸುವಿಕೆಯನ್ನು ತಪ್ಪಿಸುತ್ತವೆ. ಇದು ಅವುಗಳನ್ನು ಸಂಪೂರ್ಣವಾಗಿ ಆತ್ಮನಿರ್ಭರವನ್ನಾಗಿ ಮಾಡುತ್ತದೆ ಮತ್ತು ಕಡಿಮೆ ಇಂಗಾಲದ ಹೊರಸೂಸುವಿಕೆಗೆ ಕಾರಣವಾಗುತ್ತದೆ. ಇದಲ್ಲದೆ, ಫ್ಲೆಕ್ಸ್ ಇಂಧನದ ಬೇಡಿಕೆಯು ಎಥೆನಾಲ್ ಕಚ್ಚಾ ವಸ್ತುಗಳ ಹೆಚ್ಚಿದ ಬೇಡಿಕೆಯ ಮೂಲಕ ನಮ್ಮ ರೈತರಿಗೆ ತಕ್ಷಣದ ಆದಾಯದ ಬೆಂಬಲವನ್ನು ನೀಡುತ್ತದೆ.

ಫ್ಲೆಕ್ಸ್-ಇಂಧನ ಸಾರಿಗೆಯು ಗ್ರಾಹಕರಿಗೂ ಆರ್ಥಿಕವಾಗಿ ಲಾಭದಾಯಕವಾಗಿರಬೇಕು ಎಂದು ಶ್ರೀ ಪುರಿ ತಿಳಿಸಿದರು. ಅಧ್ಯಯನಗಳ ಪ್ರಕಾರ, ಇ20 ಗೆ ಹೋಲಿಸಿದರೆ ಇ85 ಇಂಧನದ ಬೆಲೆಯನ್ನು ಸೂಕ್ತವಾಗಿ ಕಡಿಮೆ ನಿಗದಿಪಡಿಸಿದರೆ, ಇಂಧನದ ಕಡಿಮೆ ಬೆಲೆಯಿಂದಾಗಿ ಉಂಟಾಗುವ ಉಳಿತಾಯದ ಮೂಲಕ ಗ್ರಾಹಕರು ಸುಮಾರು ಮೂರು ವರ್ಷಗಳಲ್ಲಿ ವಾಹನಕ್ಕೆ ತೆತ್ತ ವೆಚ್ಚವನ್ನು ಮರಳಿ ಪಡೆಯಬಹುದು. ಕೈಗೆಟುಕುವ ದರದಲ್ಲಿ ಇದರ ಅಳವಡಿಕೆಯನ್ನು ವೇಗಗೊಳಿಸಲು ಸರ್ಕಾರವು ಸಕ್ರಿಯವಾಗಿ ಪೂರಕ ನೀತಿ ಚೌಕಟ್ಟುಗಳನ್ನು ಪರಿಶೀಲಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಫ್ಲೆಕ್ಸ್ ಇಂಧನ ಕುರಿತಾದ ಸಾಮಾನ್ಯ ತಪ್ಪು ಕಲ್ಪನೆಗಳನ್ನು ನಿವಾರಿಸಿದ ಸಚಿವರು, ಭಾರತದ ಇ20 ವಿತರಣೆಯನ್ನು ಸಿಯಾಮ್ (SIAM), ಏರಾಯ್ (ARAI), ಐಒಸಿಎಲ್ (IOCL) ಮತ್ತು ವಾಹನ ತಯಾರಕರು ವ್ಯಾಪಕವಾದ ಪರೀಕ್ಷೆಯ ನಂತರ ಜಾರಿಗೆ ತಂದಿದ್ದಾರೆ ಎಂದು ಸ್ಪಷ್ಟಪಡಿಸಿದರು. 2006-2008 ರ ನಡುವೆ ಬ್ರೆಸಿಲಿಯಾದಲ್ಲಿ ನನ್ನ ನಿಯೋಜನೆಯ ಸಮಯದಲ್ಲಿ ನಾನು ಖುದ್ದಾಗಿ ವೀಕ್ಷಿಸಲು ಅವಕಾಶ ಪಡೆದ ಬ್ರೆಜಿಲ್ ನ ಹೆಚ್ಚಿನ ಎಥೆನಾಲ್ ಮಿಶ್ರಣಗಳ ಯಶಸ್ವಿ ಅಳವಡಿಕೆ ಸೇರಿದಂತೆ ಜಾಗತಿಕ ಅನುಭವವು, ಫ್ಲೆಕ್ಸ್-ಇಂಧನ ಸಾರಿಗೆಯು ಸಾಬೀತಾದ, ವಿಸ್ತರಿಸಬಹುದಾದ ಮತ್ತು ವಿಶ್ವಾಸಾರ್ಹ ತಂತ್ರಜ್ಞಾನವಾಗಿದೆ ಎಂಬುದನ್ನು ಪ್ರದರ್ಶಿಸುತ್ತದೆ ಎಂದು ಸಚಿವರು ಮುಂದುವರೆದು ಹೇಳಿದರು.

ಈ ರಾಷ್ಟ್ರೀಯ ಪ್ರಯಾಣದಲ್ಲಿ ಪ್ರವರ್ತಕ ಹೆಜ್ಜೆ ಇಟ್ಟಿದ್ದಕ್ಕಾಗಿ ಶ್ರೀ ಪುರಿ ಅವರು ಹೀರೋ ಮೋಟೋಕಾರ್ಪ್ ಅನ್ನು ಅಭಿನಂದಿಸಿದರು. ಕಂಪನಿಯ ಹೊಸ ಮೋಟಾರ್ ಸೈಕಲ್ ಗಳು ಆಂತರಿಕ ದಹನ ಇಂಜಿನ್ಗಳು ಮತ್ತು ನವೀಕರಿಸಿದ ಇಂಧನ ವ್ಯವಸ್ಥೆಗಳನ್ನು ಹೊಂದಿದ್ದು, ಇವು ಪೆಟ್ರೋಲ್ ಮತ್ತು ಎಥೆನಾಲ್ ನ ಇ20 ರಿಂದ ಇ85 ವರೆಗಿನ ಯಾವುದೇ ಮಿಶ್ರಣದಲ್ಲಿ ಕಾರ್ಯನಿರ್ವಹಿಸಬಲ್ಲವು.

ಇಂಧನ ಬೆಲೆ ಬೆಂಬಲ ಮತ್ತು ಉದ್ದೇಶಿತ ಪ್ರೋತ್ಸಾಹಕಗಳು ಸೇರಿದಂತೆ ಪೂರಕ ನೀತಿಗಳು ಅಳವಡಿಕೆಯನ್ನು ವೇಗಗೊಳಿಸಬಹುದು, ಕೈಗೆಟುಕುವ ದರವನ್ನು ಸೃಷ್ಟಿಸಬಹುದು ಮತ್ತು ಫ್ಲೆಕ್ಸ್-ಇಂಧನ ಸಾರಿಗೆಯ ಪರಿಹಾರಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಬಹುದು ಎಂದು ಸಚಿವರು ಹೇಳಿದರು.

 

*****


(रिलीज़ आईडी: 2268791) आगंतुक पटल : 3
इस विज्ञप्ति को इन भाषाओं में पढ़ें: English , Urdu , हिन्दी , Assamese , Malayalam