ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತ ಮತ್ತು ದಕ್ಷಿಣ ಆಫ್ರಿಕಾ ಕೃತಕ ಬುದ್ಧಿಮತ್ತೆ, ಡಿಜಿಟಲ್ ಮೂಲಸೌಕರ್ಯ ಮತ್ತು ಸುಧಾರಿತ ಉತ್ಪಾದನೆಯನ್ನು ಪ್ರಮುಖ ಆದ್ಯತೆಗಳನ್ನಾಗಿಸಿಕೊಂಡು, ಭವಿಷ್ಯದ ತಂತ್ರಜ್ಞಾನಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಒಪ್ಪಿಗೆ ಸೂಚಿಸಿವೆ


ಉದಯೋನ್ಮುಖ ತಂತ್ರಜ್ಞಾನಗಳತ್ತ ಗಮನ ಹರಿಸುವ ಮುಂದಿನ ಪೀಳಿಗೆಯ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂತ್ರಜ್ಞಾನ ಪಾಲುದಾರಿಕೆಗೆ ಡಾ. ಜಿತೇಂದ್ರ ಸಿಂಗ್ ಕರೆ

ದಕ್ಷಿಣ ಆಫ್ರಿಕಾದ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಇಲಾಖೆಯ ಉಪ ಸಚಿವರಾದ ಡಾ. ನೊಮಾಲುಂಗೆಲೊ ಗಿನಾ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು

ಕ್ವಾಂಟಮ್ ತಂತ್ರಜ್ಞಾನಗಳು, ಜೈವಿಕ ತಂತ್ರಜ್ಞಾನ ಮತ್ತು ಜಲನಜನಕ  ಇಂಧನದಲ್ಲಿ ಹೊಸ ಪಾಲುದಾರಿಕೆಗಳನ್ನು ಅನ್ವೇಷಿಸುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ

ಬ್ರಿಕ್ಸ್ ವಿಜ್ಞಾನ ಮತ್ತು ನಾವೀನ್ಯತೆ ಉಪಕ್ರಮಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತಷ್ಟು ಬಲವಾಗಿ ಪಾಲ್ಗೊಳ್ಳುವಂತೆ ಡಾ. ಜಿತೇಂದ್ರ ಸಿಂಗ್ ಆಹ್ವಾನ

ಸಂಶೋಧನಾ ಪಾಲುದಾರಿಕೆಗಳನ್ನು ನಾವೀನ್ಯತೆ ಮತ್ತು ಉದ್ಯಮ ಸಹಯೋಗಗಳಾಗಿ ಪರಿವರ್ತಿಸಲು ಭಾರತ ಮತ್ತು ದಕ್ಷಿಣ ಆಫ್ರಿಕಾ ಯತ್ನ

प्रविष्टि तिथि: 03 JUN 2026 2:20PM by PIB Bengaluru

ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಇಂದು ಭವಿಷ್ಯದ ತಂತ್ರಜ್ಞಾನಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಂಡಿವೆ. ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯ ಮುಂದಿನ ಹಂತಕ್ಕೆ ಕೃತಕ ಬುದ್ಧಿಮತ್ತೆ, ಡಿಜಿಟಲ್ ಮೂಲಸೌಕರ್ಯ ಮತ್ತು ಸುಧಾರಿತ ಉತ್ಪಾದನೆ ಪ್ರಮುಖ ಆದ್ಯತೆಯ ಕ್ಷೇತ್ರಗಳಾಗಿ ಹೊರಹೊಮ್ಮಿವೆ.

ತಮ್ಮನ್ನು ಭೇಟಿ ಮಾಡಲು ಉನ್ನತ ಮಟ್ಟದ ನಿಯೋಗದೊಂದಿಗೆ ಬಂದಿದ್ದ ದಕ್ಷಿಣ ಆಫ್ರಿಕಾದ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಇಲಾಖೆಯ ಉಪ ಸಚಿವರಾದ ಡಾ. ನೊಮಾಲುಂಗೆಲೊ ಗಿನಾ ಅವರೊಂದಿಗೆ ಮಾತುಕತೆ ನಡೆಸಿದ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್, ಸಾಂಪ್ರದಾಯಿಕ ಸಂಶೋಧನಾ ಸಹಕಾರವನ್ನು ಮೀರಿ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮವನ್ನು ಬೀರಬಲ್ಲ ನಾವೀನ್ಯತೆ ಆಧಾರಿತ ಪಾಲುದಾರಿಕೆಯತ್ತ ಸಂಬಂಧವನ್ನು ಕೊಂಡೊಯ್ಯಲು ಕರೆ ನೀಡಿದರು.

ಡಾ. ನೊಮಾಲುಂಗೆಲೊ ಗಿನಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಡಾ. ಜಿತೇಂದ್ರ ಸಿಂಗ್, ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮುಂದಿನ ಹಂತದ ಬಾಂಧವ್ಯವು ಉದಯೋನ್ಮುಖ ತಂತ್ರಜ್ಞಾನಗಳು, ಆವಿಷ್ಕಾರದ ಪರಿಸರ ವ್ಯವಸ್ಥೆಗಳು, ನವೋದ್ಯಮ ಪಾಲುದಾರಿಕೆಗಳು ಮತ್ತು ಉದ್ಯಮ ಸಂಬಂಧಿತ ಸಂಶೋಧನೆಗಳ ಮೂಲಕ ರೂಪುಗೊಳ್ಳಬೇಕು ಎಂದು ಹೇಳಿದರು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೈಗೆಟುಕುವ, ವಿಸ್ತರಿಸಬಹುದಾದ ಮತ್ತು ಅಂತರ್ಗತ ತಾಂತ್ರಿಕ ಪರಿಹಾರಗಳನ್ನು ರೂಪಿಸಲು ಬಳಸಿಕೊಳ್ಳಬಹುದಾದ ಪೂರಕ ಸಾಮರ್ಥ್ಯಗಳನ್ನು ಉಭಯ ದೇಶಗಳು ಹೊಂದಿವೆ ಎಂದು ಅವರು ಹೇಳಿದರು.

ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ಸಾಮಾನ್ಯ ಇತಿಹಾಸ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಅಂತರ್ಗತ ಬೆಳವಣಿಗೆಗೆ ಹಂಚಿಕೊಂಡ ಬದ್ಧತೆಯ ಮೂಲಕ ವಿಶಿಷ್ಟ ಪಾಲುದಾರಿಕೆಯನ್ನು ಹೊಂದಿವೆ ಎಂದು ಸಚಿವರು ಹೇಳಿದರು. ಜಾಗತಿಕ ದಕ್ಷಿಣದ ಪ್ರಭಾವಶಾಲಿ ಧ್ವನಿಗಳಾಗಿ, ಎರಡೂ ದೇಶಗಳು ಬ್ರಿಕ್ಸ್, ಐಬಿಎಸ್ಎ, ಜಿ20 ಮತ್ತು ಐಒಆರ್ ಎ ನಂತಹ ವೇದಿಕೆಗಳ ಮೂಲಕ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕುರಿತಾದ ಅಂತರರಾಷ್ಟ್ರೀಯ ಚರ್ಚೆಗಳನ್ನು ರೂಪಿಸುವಲ್ಲಿ ಹೆಚ್ಚು ಕೊಡುಗೆ ನೀಡುತ್ತಿವೆ. ಜೊತೆಗೆ ಹಲವಾರು ಕಾರ್ಯತಂತ್ರದ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮುನ್ನಡೆಸುತ್ತಿವೆ ಎಂದು ಅವರು ಹೇಳಿದರು.

ಸಭೆಯು ನವದೆಹಲಿಯ ಕರ್ತವ್ಯ ಭವನದಲ್ಲಿ ನಡೆಯಿತು. ಭಾರತೀಯ ನಿಯೋಗದಲ್ಲಿ ಡಿ ಎಸ್ ಟಿ ಕಾರ್ಯದರ್ಶಿ ಡಾ. ರಾಜೇಶ್ ಎಸ್. ಗೋಖಲೆ, ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು ಇದ್ದರು. ದಕ್ಷಿಣ ಆಫ್ರಿಕಾದ ನಿಯೋಗದ ನೇತೃತ್ವವನ್ನು ಉಪ ಸಚಿವರಾದ ಡಾ. ನೊಮಾಲುಂಗೆಲೊ ಗಿನಾ ವಹಿಸಿದ್ದರು ಮತ್ತು ಇದರಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಇಲಾಖೆ ಹಾಗೂ ದಕ್ಷಿಣ ಆಫ್ರಿಕಾದ ಹೈಕಮಿಷನ್ ನ ಹಿರಿಯ ಅಧಿಕಾರಿಗಳು ಇದ್ದರು.

ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನಗಳು, ಸೈಬರ್- ಭೌತಿಕ ವ್ಯವಸ್ಥೆಗಳು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ನವೋದ್ಯಮ ಆಧಾರಿತ ಆವಿಷ್ಕಾರಗಳಲ್ಲಿನ ಪ್ರಮುಖ ರಾಷ್ಟ್ರೀಯ ಉಪಕ್ರಮಗಳ ಬೆಂಬಲದೊಂದಿಗೆ ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ನಾವೀನ್ಯತೆ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಈ ಬೆಳವಣಿಗೆಗಳು, ಪ್ರಗತಿಗಳು ದಕ್ಷಿಣ ಆಫ್ರಿಕಾದೊಂದಿಗೆ ಸಹಯೋಗದ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಾವೀನ್ಯತೆ ಪಾಲುದಾರಿಕೆಗೆ ಹೊಸ ಅವಕಾಶಗಳನ್ನು ಒದಗಿಸುತ್ತವೆ ಎಂದು ಅವರು ತಿಳಿಸಿದರು.

ವಿಜ್ಞಾನವು ಜನರ ಜೀವನವನ್ನು ಸುಧಾರಿಸುವ, ಉದ್ಯೋಗವನ್ನು ಸೃಷ್ಟಿಸುವ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಪರಿಹಾರಗಳಾಗಿ ಪರಿವರ್ತನೆಗೊಳ್ಳಬೇಕು ಎಂದು ಒತ್ತಿ ಹೇಳಿದ ಸಚಿವರು, ಉಭಯ ದೇಶಗಳ ಸಂಶೋಧನಾ ಸಂಸ್ಥೆಗಳು, ನಾವೀನ್ಯತೆ ಸಂಸ್ಥೆಗಳು, ನವೋದ್ಯಮಗಳು ಮತ್ತು ಉದ್ಯಮಗಳ ನಡುವೆ ಆಳವಾದ ತೊಡಗಿಸಿಕೊಳ್ಳುವಿಕೆಗೆ ಕರೆ ನೀಡಿದರು. ಭವಿಷ್ಯದ ಸಹಕಾರವು ಕೇವಲ ವೈಜ್ಞಾನಿಕ ಶ್ರೇಷ್ಠತೆಯ ಮೇಲೆ ಮಾತ್ರವಲ್ಲದೆ ತಂತ್ರಜ್ಞಾನದ ಬಳಕೆ, ವಾಣಿಜ್ಯೀಕರಣ ಮತ್ತು ಸಾಮಾಜಿಕ ಫಲಿತಾಂಶಗಳ ಮೇಲೂ ಗಮನ ಹರಿಸಬೇಕು ಎಂದು ಅವರು ಹೇಳಿದರು.

ಭಾರತ-ದಕ್ಷಿಣ ಆಫ್ರಿಕಾ ಜಂಟಿ ಸಮಿತಿ ಕಾರ್ಯವಿಧಾನದ ಅಡಿಯಲ್ಲಿ ಗುರುತಿಸಲಾದ ಆದ್ಯತೆಯ ಕ್ಷೇತ್ರಗಳಾದ ಸುಧಾರಿತ ವಸ್ತುಗಳು ಮತ್ತು ಉತ್ಪಾದನೆ, ಜಿಯೋಸ್ಪೇಷಿಯಲ್ (ಭೂ-ಸ್ಥಳೀಯ) ತಂತ್ರಜ್ಞಾನಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳಲ್ಲಿ ಸಹಯೋಗವನ್ನು ತೀವ್ರಗೊಳಿಸುವ ನಿರ್ಧಾರವು ಈ ಚರ್ಚೆಯ ಪ್ರಮುಖ ಫಲಿತಾಂಶವಾಗಿದೆ. ಈ ಗಮನಾರ್ಹ ಕ್ಷೇತ್ರಗಳನ್ನು ವಾಸ್ತವಿಕ ಸಹಯೋಗದ ಕಾರ್ಯಕ್ರಮಗಳು ಮತ್ತು ಫಲಿತಾಂಶಗಳಾಗಿ ಪರಿವರ್ತಿಸಲು ವಿಜ್ಞಾನಿಗಳು, ಸಂಸ್ಥೆಗಳು ಮತ್ತು ತಾಂತ್ರಿಕ ತಜ್ಞರ ನಡುವಿನ ಪರಸ್ಪರ ಸಂವಹನವನ್ನು ವೇಗಗೊಳಿಸಲು ಉಭಯ ಕಡೆಯವರು ಒಪ್ಪಿಕೊಂಡರು.

ಜೈವಿಕ ತಂತ್ರಜ್ಞಾನ, ಜೀನೋಮಿಕ್ಸ್, ಲಸಿಕೆ ಅಭಿವೃದ್ಧಿ, ಆರೋಗ್ಯ ತಂತ್ರಜ್ಞಾನಗಳು ಮತ್ತು ಸಾಂಕ್ರಾಮಿಕ ರೋಗ ಎದುರಿಸುವ ಸನ್ನದ್ಧತೆಯಲ್ಲಿರುವ ಗಣನೀಯ ಅವಕಾಶಗಳನ್ನು ಸಹ ಚರ್ಚೆಗಳು ಉಲ್ಲೇಖಿಸಿದವು. ಇತ್ತೀಚಿನ ಜಾಗತಿಕ ಅನುಭವಗಳು ಚೇತರಿಸಿಕೊಳ್ಳುವ ಆರೋಗ್ಯ ವ್ಯವಸ್ಥೆಗಳು ಮತ್ತು ವೈಜ್ಞಾನಿಕ ಪಾಲುದಾರಿಕೆಯ ಮಹತ್ವವನ್ನು ಬಲಪಡಿಸಿವೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಜೈವಿಕ ತಂತ್ರಜ್ಞಾನ, ಕೈಗೆಟುಕುವ ಆರೋಗ್ಯ ರಕ್ಷಣೆಯ ಆವಿಷ್ಕಾರ ಮತ್ತು ಲಸಿಕೆ ಉತ್ಪಾದನೆಯಲ್ಲಿ ಭಾರತದ ಸಾಮರ್ಥ್ಯಗಳು ದಕ್ಷಿಣ ಆಫ್ರಿಕಾದೊಂದಿಗೆ ಸಹಯೋಗಕ್ಕೆ ಹೆಚ್ಚಿನ ಅವಕಾಶವನ್ನು ನೀಡುತ್ತವೆ ಎಂದು ಅವರು ತಿಳಿಸಿದರು.

ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ತಂತ್ರಜ್ಞಾನಗಳು, ಸುಧಾರಿತ ಉತ್ಪಾದನೆ, ಡಿಜಿಟಲ್ ತಂತ್ರಜ್ಞಾನಗಳು, ಆರೋಗ್ಯ ವಿಜ್ಞಾನಗಳು, ಲಸಿಕೆ ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಭಾರತದೊಂದಿಗೆ ಸಹಕಾರವನ್ನು ವಿಸ್ತರಿಸಲು ದಕ್ಷಿಣ ಆಫ್ರಿಕಾ ತೀವ್ರ ಆಸಕ್ತಿ ವ್ಯಕ್ತಪಡಿಸಿತು. ದಕ್ಷಿಣ ಆಫ್ರಿಕಾವು ಭಾರತವನ್ನು ನಂಬಿಕಸ್ಥ ಪಾಲುದಾರ ಎಂದು ಪರಿಗಣಿಸುತ್ತದೆ ಮತ್ತು ಆದ್ಯತೆಯ ವಲಯಗಳಲ್ಲಿ ಸಾಂಸ್ಥಿಕ ಸಂಪರ್ಕಗಳು, ಸಂಶೋಧನಾ ಸಹಯೋಗ ಮತ್ತು ನಾವೀನ್ಯತೆಗಳ ಪಾಲುದಾರಿಕೆಯನ್ನು ಬಲಪಡಿಸಲು ಉತ್ಸುಕವಾಗಿದೆ ಎಂದು ಡಾ. ಗಿನಾ ಹೇಳಿದರು. ದ್ವಿಪಕ್ಷೀಯ ವೈಜ್ಞಾನಿಕ ತೊಡಗಿಸಿಕೊಳ್ಳುವಿಕೆಯ ಬಲವಾದ ತಡಿಪಾಯವನ್ನು ಸ್ಮರಿಸಿದ ಅವರು, ಉಭಯ ದೇಶಗಳು ಈಗಾಗಲೇ ವೈವಿಧ್ಯಮಯ ವೈಜ್ಞಾನಿಕ ವಿಭಾಗಗಳಲ್ಲಿ ಸುಮಾರು 150 ಸಹ-ನಿಧಿ ಯೋಜನೆಗಳು ಸೇರಿದಂತೆ ಸಹಯೋಗದ ಸಂಶೋಧನಾ ಉಪಕ್ರಮಗಳ ವ್ಯಾಪಕ ಜಾಲವನ್ನು ನಿರ್ಮಿಸಿವೆ ಎಂದು ಹೇಳಿದರು. ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮತ್ತು ಆವಿಷ್ಕಾರ ಆಧಾರಿತ ಸಹಯೋಗದಲ್ಲಿ ಗಮನಾರ್ಹ ವಿಸ್ತರಣೆಗೆ ಈ ಪಾಲುದಾರಿಕೆಯು ಈಗ ಉತ್ತಮ ಸ್ಥಿತಿಯಲ್ಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತ ಮತ್ತು ದಕ್ಷಿಣ ಆಫ್ರಿಕಾ ವೈಜ್ಞಾನಿಕ ತೊಡಗಿಸಿಕೊಳ್ಳುವಿಕೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಖಗೋಳಶಾಸ್ತ್ರದಲ್ಲಿನ ಸಹಕಾರವನ್ನು ಉಭಯ ನಾಯಕರು ಪರಿಶೀಲಿಸಿದರು. ಸ್ಕ್ವೇರ್ ಕಿಲೋಮೀಟರ್ ಅರೇ (ಎಸ್ ಕೆ ಎ) ಯೋಜನೆಯ ಮಹತ್ವವನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್, ಇದನ್ನು ಶತಮಾನದ ಅತ್ಯಂತ ಮಹತ್ವಾಕಾಂಕ್ಷೆಯ ವೈಜ್ಞಾನಿಕ ಪ್ರಯತ್ನಗಳಲ್ಲಿ ಒಂದೆಂದು ಬಣ್ಣಿಸಿದರು. ಅಂತರರಾಷ್ಟ್ರೀಯ ಸಹಯೋಗವು ವೈಜ್ಞಾನಿಕ ಆವಿಷ್ಕಾರ, ಸುಧಾರಿತ ಕಂಪ್ಯೂಟಿಂಗ್ ಸಾಮರ್ಥ್ಯಗಳು, ತಾಂತ್ರಿಕ ನಾವೀನ್ಯತೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಹೇಗೆ ಮುನ್ನಡೆಸುತ್ತದೆ ಎಂಬುದಕ್ಕೆ ಇದು ಪ್ರಬಲ ಉದಾಹರಣೆಯಾಗಿದೆ ಎಂದು ಹೇಳಿದರು.

ಬಹೂಪಕ್ಷೀಯ ವೈಜ್ಞಾನಿಕ ತೊಡಗಿಸಿಕೊಳ್ಳುವಿಕೆಯ ಬೆಳೆಯುತ್ತಿರುವ ಮಹತ್ವವನ್ನು ಗುರುತಿಸಿದ ಡಾ. ಜಿತೇಂದ್ರ ಸಿಂಗ್ ಅವರು, ಆಗಸ್ಟ್ 2026ರಲ್ಲಿ ಚೆನ್ನೈನಲ್ಲಿ ನಡೆಯಲಿರುವ ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಚಿವರ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ದಕ್ಷಿಣ ಆಫ್ರಿಕಾಕ್ಕೆ ಆಹ್ವಾನ ನೀಡಿದರು. ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಜೈವಿಕ ತಂತ್ರಜ್ಞಾನ, ಜಲಸಂಪನ್ಮೂಲಗಳು, ನಿಖರ ಕೃಷಿ ಮತ್ತು ವಸ್ತು ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಸಹಯೋಗದ ಸಂಶೋಧನೆಗೆ ಬ್ರಿಕ್ಸ್ ಸಹಕಾರವು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.

ಜಾಗತಿಕ ವೈಜ್ಞಾನಿಕ ಸಂವಾದ, ಜ್ಞಾನ ವಿನಿಮಯ ಮತ್ತು ನಾವೀನ್ಯತೆ ಪಾಲುದಾರಿಕೆಗಾಗಿ ಆಫ್ರಿಕಾದ ಪ್ರಮುಖ ವೇದಿಕೆಗಳಲ್ಲಿ ಒಂದಾದ ವಿಜ್ಞಾನ ವೇದಿಕೆ ದಕ್ಷಿಣ ಆಫ್ರಿಕಾ 2026  ('ಸೈನ್ಸ್ ಫೋರಂ ಸೌತ್ ಆಫ್ರಿಕಾ 2026')ರಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾ ಕೂಡ ಭಾರತವನ್ನು ಆಹ್ವಾನಿಸಿತು. ನಿಯಮಿತ ಸಾಂಸ್ಥಿಕ ಸಂವಹನಗಳು ಮತ್ತು ಉನ್ನತ ಮಟ್ಟದ ವಿನಿಮಯಗಳ ಮೂಲಕ ವೈಜ್ಞಾನಿಕ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುವ ಅವಕಾಶವನ್ನು ಉಭಯ ಕಡೆಯವರು ಸ್ವಾಗತಿಸಿದರು.

1995ರಲ್ಲಿ ದ್ವಿಪಕ್ಷೀಯ ವಿಜ್ಞಾನ ಮತ್ತು ತಂತ್ರಜ್ಞಾನ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ಚೈತನ್ಯದಾಯಕ ವಿಜ್ಞಾನ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಕಾಯ್ದುಕೊಂಡು ಬಂದಿವೆ. ವರ್ಷಗಳಲ್ಲಿ, ಈ ಬಾಂಧವ್ಯವು ಖಗೋಳಶಾಸ್ತ್ರ, ಜೈವಿಕ ತಂತ್ರಜ್ಞಾನ, ಆರೋಗ್ಯ ವಿಜ್ಞಾನಗಳು, ಸ್ಥಳೀಯ ಜ್ಞಾನ ವ್ಯವಸ್ಥೆಗಳು, ನವೀಕರಿಸಬಹುದಾದ ಇಂಧನ, ಸುಧಾರಿತ ವಸ್ತುಗಳು ಮತ್ತು ಭೂ ವಿಜ್ಞಾನಗಳಾದ್ಯಂತ ವಿಸ್ತರಿಸಿದೆ. ಎರಡೂ ದೇಶಗಳು ಜಂಟಿಯಾಗಿ ಹಲವಾರು ಸಂಶೋಧನಾ ಯೋಜನೆಗಳನ್ನು ಬೆಂಬಲಿಸಿವೆ ಮತ್ತು ವ್ಯವಸ್ಥಿತ ಸಾಂಸ್ಥಿಕ ಕಾರ್ಯವಿಧಾನಗಳ ಮೂಲಕ ಸಹಯೋಗವನ್ನು ಗಾಢವಾಗಿಸುವುದನ್ನು ಮುಂದುವರೆಸಿವೆ.

ಎರಡೂ ರಾಷ್ಟ್ರಗಳಿಗೆ ಅರ್ಥಪೂರ್ಣ ಪ್ರಯೋಜನಗಳನ್ನು ತರುವ ಮತ್ತು ಜಾಗತಿಕ ದಕ್ಷಿಣದ  ವಿಶಾಲ ಅಭಿವೃದ್ಧಿ ಆಕಾಂಕ್ಷೆಗಳಿಗೆ ಕೊಡುಗೆ ನೀಡುವ ಉದ್ದೇಶವನ್ನು ಹೊಂದಿರುವ, ಸಂಶೋಧನಾ ಉತ್ಕೃಷ್ಟತೆ, ತಂತ್ರಜ್ಞಾನ ಅಭಿವೃದ್ಧಿ, ನವೋದ್ಯಮ ಸಹಯೋಗ ಮತ್ತು ಜನರ ನಡುವಿನ ವೈಜ್ಞಾನಿಕ ವಿನಿಮಯಗಳ ಮೂಲಕ ಮುನ್ನಡೆಯುವ ಬಲವಾದ, ಭವಿಷ್ಯಕ್ಕೆ ಸಿದ್ಧವಾದ ಆವಿಷ್ಕಾರ ಪಾಲುದಾರಿಕೆಯನ್ನು ನಿರ್ಮಿಸುವ ಹಂಚಿಕೆಯ ಸಂಕಲ್ಪದೊಂದಿಗೆ ಸಭೆಯು ಮುಕ್ತಾಯವಾಯಿತು.

 

*****


(रिलीज़ आईडी: 2268450) आगंतुक पटल : 9
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Tamil