ಉಪರಾಷ್ಟ್ರಪತಿಗಳ ಕಾರ್ಯಾಲಯ
ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಕರ್ನಾಟಕದ ಬೆಳ್ತಂಗಡಿಯಲ್ಲಿ ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್ ಅನ್ನು ಉದ್ಘಾಟಿಸಿದರು
ಸಿರಿ ಸಂಸ್ಥೆಯು ಮಹಿಳಾ ನೇತೃತ್ವದ ಸಾಮಾಜಿಕ ಪರಿವರ್ತನೆ ಮತ್ತು ಸರ್ವರನ್ನೂ ಒಳಗೊಂಡ ಅಭಿವೃದ್ಧಿಯ ಒಂದು ಮಾದರಿಯಾಗಿದೆ: ಉಪರಾಷ್ಟ್ರಪತಿ
ವಿಕಸಿತ ಭಾರತದ ಕಡೆಗಿನ ಭಾರತದ ಪ್ರಯಾಣವು ಸ್ವಾವಲಂಬನೆ ಮತ್ತು ಗ್ರಾಮೀಣ ಸಬಲೀಕರಣದಲ್ಲಿ ಬೇರೂರಿರಬೇಕು: ಉಪರಾಷ್ಟ್ರಪತಿ
ಧರ್ಮಸ್ಥಳವು ಶತಮಾನಗಳಿಂದ ಸಾಮರಸ್ಯ, ಸಹಬಾಳ್ವೆ ಮತ್ತು ಸೇವೆಯ ಸಾಕ್ಷಾತ್ ನಿದರ್ಶನವಾಗಿದೆ: ಉಪರಾಷ್ಟ್ರಪತಿ
ಎಲ್ಲಾ ಧರ್ಮಗಳನ್ನು ಗೌರವಿಸಬೇಕು; ಬಲವಂತದ ಧಾರ್ಮಿಕ ಮತಾಂತರಗಳಿಗೆ ಆಸ್ಪದವಿರಬಾರದು: ಉಪರಾಷ್ಟ್ರಪತಿ
ಪ್ರಕಟಣಾ ದಿನಾಂಕ:
31 MAY 2026 2:06PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಬೆಳ್ತಂಗಡಿಯಲ್ಲಿರುವ ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್ ಅನ್ನು ಉದ್ಘಾಟಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಸಹಸ್ರಾರು ಮಹಿಳೆಯರು ಮತ್ತು ಗ್ರಾಮೀಣ ಕುಟುಂಬಗಳಿಗೆ ಜೀವನೋಪಾಯದ ಸೃಷ್ಟಿ ಮತ್ತು ಉದ್ಯಮಶೀಲತೆಯ ಮೂಲಕ ಸಬಲೀಕರಣಗೊಳಿಸಿರುವ 'ಸಿರಿ'ಯಂತಹ ಸಂಸ್ಥೆಗಳ ಮೂಲಕ ಸಮೃದ್ಧ ಗ್ರಾಮೀಣ ಭಾರತದ ಕನಸನ್ನು ನಿಜವಾಗಿಯೂ ಸಾಕಾರಗೊಳಿಸಬಹುದು ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳವು ಎತ್ತಿಹಿಡಿದಿರುವ ಮೌಲ್ಯಗಳ ಕುರಿತು ಮಾತನಾಡಿದ ಉಪರಾಷ್ಟ್ರಪತಿಯವರು, "ಭಾರತೀಯ ನಾಗರಿಕತೆಯು ಅನಾದಿಕಾಲದಿಂದಲೂ ಎಲ್ಲಾ ಧರ್ಮಗಳನ್ನು ಗೌರವಿಸುತ್ತಾ ಬಂದಿದೆ. ಧರ್ಮ ಯಾವುದಿದ್ದರೇನು, ನಿಷ್ಕಲ್ಮಶ ಭಕ್ತಿಯು ಸಾಮಾಜಿಕ ಸಾಮರಸ್ಯ ಮತ್ತು ನೈತಿಕ ಶಕ್ತಿಯನ್ನು ಹೆಚ್ಚಿಸುತ್ತದೆ" ಎಂದು ಒತ್ತಿ ಹೇಳಿದರು.
ಸರ್ವಧರ್ಮ ಸಮಭಾವದ ಮನೋಭಾವವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ ಅವರು, "ಪ್ರತಿಯೊಂದು ಧರ್ಮವನ್ನೂ ಸಮಾನ ಗೌರವ ಮತ್ತು ಘನತೆಯಿಂದ ಕಾಣಬೇಕು; ಯಾವುದೇ ರೀತಿಯ ಬಲವಂತದ ಮತಾಂತರಗಳಿಗೆ ಸಮಾಜದಲ್ಲಿ ಆಸ್ಪದವಿರಬಾರದು" ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯರು ಹಾಗೂ 'ಸಿರಿ' ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜೀವನವನ್ನು “ಸಮಾಜಕ್ಕೊಂದು ಸಂದೇಶ” ಎಂದು ಉಪರಾಷ್ಟ್ರಪತಿಯವರು ಶ್ಲಾಘಿಸಿದರು. ಆಧ್ಯಾತ್ಮಿಕತೆಯು ಸಮಾಜದ ಸಕಾರಾತ್ಮಕ ಪರಿವರ್ತನೆಗೆ ಹೇಗೆ ಒಂದು ಪ್ರಬಲ ಶಕ್ತಿಯಾಗಬಲ್ಲದು ಎಂಬುದನ್ನು ಡಾ. ಹೆಗ್ಗಡೆಯವರು ಕಳೆದ ಸುಮಾರು ಆರು ದಶಕಗಳಿಂದ ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಮಹಿಳಾ ಸಬಲೀಕರಣ ಮತ್ತು ಸಮಾಜ ಕಲ್ಯಾಣಕ್ಕಾಗಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ನೀಡುತ್ತಿರುವ ಕೊಡುಗೆಯನ್ನು ಕೊಂಡಾಡಿದ ಉಪರಾಷ್ಟ್ರಪತಿಯವರು, ಯಾವುದೇ ಒಂದು ಸಾಮಾಜಿಕ ಆಂದೋಲನದ ಯಶಸ್ಸು ತನ್ನ ಜೀವನ ಸಂಗಾತಿಯ ದೃಢ ಬೆಂಬಲ ಮತ್ತು ಬದ್ಧತೆಯಿಂದ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
'ಸಿರಿ' ಸಂಸ್ಥೆಯು ಇಂದು 3,000 ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಹಾಗೂ 10,000 ಕ್ಕೂ ಅಧಿಕ ಜನರಿಗೆ ಪರೋಕ್ಷ ಜೀವನೋಪಾಯ ಕಲ್ಪಿಸಿದೆ. ಇದರಲ್ಲಿ ಬಹುಪಾಲು ಮಹಿಳೆಯರು ಹಿಂದುಳಿದ ಹಿನ್ನೆಲೆಯಿಂದ ಬಂದವರಾಗಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಇದನ್ನು “ನಿಜವಾದ ಅರ್ಥದ ಸಾಮಾಜಿಕ ಪರಿವರ್ತನೆ” ಎಂದು ಬಣ್ಣಿಸಿದರು.
"ನಿಜವಾದ ಅಭಿವೃದ್ಧಿ ಎಂದರೆ ಅದು ಪ್ರತಿಯೊಬ್ಬರ ಜೀವನವನ್ನು ಸ್ಪರ್ಶಿಸಬೇಕು; ಸಮಾಜದ ಪ್ರತಿಯೊಂದು ವರ್ಗದಲ್ಲೂ ಘನತೆ, ಹೊಸ ಅವಕಾಶ ಹಾಗೂ ಆತ್ಮವಿಶ್ವಾಸವನ್ನು ತುಂಬಬೇಕು" ಎಂದು ಅವರು ಹೇಳಿದರು. ಅಲ್ಲದೆ, ಪ್ರತಿಯೊಬ್ಬ ನಾಗರಿಕನನ್ನೂ ಒಳಗೊಂಡ ಇಂತಹ ಸಮಗ್ರ ಅಭಿವೃದ್ಧಿಯೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ “ವಿಕಸಿತ ಭಾರತ 2047” ಕನಸಿನ ಪ್ರಮುಖ ಆಶಯವಾಗಿದೆ ಎಂದು ಅವರು ತಿಳಿಸಿದರು.
'ಸಿರಿ' ಸಂಸ್ಥೆಯ ಬೆಳವಣಿಗೆಯ ಹಾದಿಯನ್ನು ಸ್ಮರಿಸಿದ ಅವರು, ಈ ಸಂಸ್ಥೆಯು ಕಠಿಣ ಪರಿಶ್ರಮ, ನಾವೀನ್ಯತೆ, ತ್ಯಾಗ ಮತ್ತು ಸಮರ್ಪಣಾ ಭಾವದಿಂದ ಸಾಗಿಬಂದಿದ್ದು, ಗುಣಮಟ್ಟಕ್ಕೆ ಸದಾ ಆದ್ಯತೆ ನೀಡಿದೆ ಎಂದರು. ನೂತನವಾಗಿ ಉದ್ಘಾಟನೆಗೊಂಡ 'ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್'ನ ಮಾನವೀಯ ಕಾಳಜಿಯ ಮುಖವನ್ನು ಅವರು ವಿಶೇಷವಾಗಿ ಶ್ಲಾಘಿಸಿದರು. ಇಲ್ಲಿ ಮಹಿಳಾ ಉದ್ಯೋಗಿಗಳಿಗೆ ಹಾಸ್ಟೆಲ್ ವ್ಯವಸ್ಥೆ, ವಸತಿ ಗೃಹಗಳು, ಮಕ್ಕಳ ಆರೈಕೆ ಕೇಂದ್ರಗಳು, ನೈರ್ಮಲ್ಯದ ಅಡುಗೆಮನೆ, ಸಾರಿಗೆ ಮತ್ತು ಇತರೆ ಕಲ್ಯಾಣ ಸೌಲಭ್ಯಗಳನ್ನು ಕಲ್ಪಿಸಿರುವುದನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
'ಸಿರಿ' ಸಂಸ್ಥೆಯ ವೈವಿಧ್ಯಮಯ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಉಪರಾಷ್ಟ್ರಪತಿಯವರು, ಸಂಸ್ಥೆಯು ಸಾಂಪ್ರದಾಯಿಕ ಕೌಶಲ್ಯಗಳನ್ನು ಆಧುನಿಕ ನಿರ್ವಹಣಾ ಪದ್ಧತಿಗಳೊಂದಿಗೆ ಯಶಸ್ವಿಯಾಗಿ ಸಂಯೋಜಿಸಿದೆ ಎಂದರು. ಯಾವುದೇ ಸಂಸ್ಥೆಯ ಬೆಳವಣಿಗೆಗೆ ದಕ್ಷ ಹಾಗೂ ಸಹಾನುಭೂತಿಯ ನಿರ್ವಹಣೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟ ಅವರು, 'ಸಿರಿ' ಆಡಳಿತದಲ್ಲಿ ವೈಜ್ಞಾನಿಕ ಹಾಗೂ ಮಾನವೀಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದರು.
ರಾಷ್ಟ್ರದ ಸ್ವಾವಲಂಬನೆಯ ದೃಷ್ಟಿಕೋನವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, “ವೋಕಲ್ ಫಾರ್ ಲೋಕಲ್” (ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ) ಮತ್ತು “ಆತ್ಮನಿರ್ಭರ್ ಭಾರತ್” (ಸ್ವಾವಲಂಬಿ ಭಾರತ) ಮನೋಭಾವವೇ ದೇಶದ ಅಭಿವೃದ್ಧಿಯ ಪ್ರಯಾಣಕ್ಕೆ ದಾರಿದೀಪವಾಗಬೇಕು ಎಂದರು. 'ಸಿರಿ' ಸಂಸ್ಥೆಯನ್ನು ದೇಶಾದ್ಯಂತ ಅನುಕರಿಸಬಹುದಾದ ಒಂದು ಆದರ್ಶ ಮಾದರಿ ಎಂದು ಕರೆದ ಅವರು, ಕೈಗಾರಿಕೆಗಳು ಕೇವಲ ಲಾಭಕ್ಕಷ್ಟೇ ಅಲ್ಲದೆ ಸಾಮಾಜಿಕ ಜವಾಬ್ದಾರಿ, ಮಹಿಳಾ ಸಬಲೀಕರಣ, ಪರಿಸರ ಪ್ರಜ್ಞೆ ಮತ್ತು ಆಳವಾದ ಮಾನವೀಯ ಮೌಲ್ಯಗಳನ್ನು ಹೇಗೆ ಮೈಗೂಡಿಸಿಕೊಳ್ಳಬಹುದು ಎಂಬುದನ್ನು ಈ ಸಂಸ್ಥೆ ತೋರಿಸಿಕೊಟ್ಟಿದೆ ಎಂದರು. ಇಂತಹ ಗ್ರಾಮೀಣ ಕೈಗಾರಿಕಾ ಪರಿಸರ ವ್ಯವಸ್ಥೆಗಳು ದೇಶದ ಮೂಲೆ ಮೂಲೆಗಳಲ್ಲೂ ತಲೆಎತ್ತಲಿ ಎಂದು ಅವರು ಆಶಿಸಿದರು.
ಇದಕ್ಕೂ ಮುನ್ನ, ಉಪರಾಷ್ಟ್ರಪತಿಯವರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ಬಳಿಕ ಪ್ರಸಿದ್ಧ ಅನ್ನಪೂರ್ಣ ಪ್ರಸಾದ ನಿಲಯಕ್ಕೆ ಭೇಟಿ ನೀಡಿ ಭಕ್ತರೊಂದಿಗೆ ಸಂವಾದ ನಡೆಸಿದ ಅವರು, ಕರುಣೆ, ಸಮಾನತೆ ಮತ್ತು ಭಕ್ತಿಯ ತಳಹದಿಯ ಮೇಲೆ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ದೇವಸ್ಥಾನದ ಸಮುದಾಯ ಸೇವೆ ಹಾಗೂ ನಿರಂತರ ಉಚಿತ ಅನ್ನದಾನದ ಪರಂಪರೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ರಾಜ್ಯಸಭಾ ಸದಸ್ಯ ಹಾಗೂ 'ಸಿರಿ' ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ, ಲೋಕಸಭಾ ಸದಸ್ಯ ಶ್ರೀ ಬ್ರಿಜೇಶ್ ಚೌಟ ಮತ್ತು 'ಸಿರಿ' ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
****
(ಪ್ರಕಟಣೆ ಐ.ಡಿ.: 2267222)
ವಿಸಿಟರ್ ಕೌಂಟರ್ : 23