ಉಪರಾಷ್ಟ್ರಪತಿಗಳ ಕಾರ್ಯಾಲಯ
ದಾವಣಗೆರೆಯ ಯೂನಿವರ್ಸಿಟಿ ಬಿ.ಡಿ.ಟಿ. ಕಾಲೇಜ್ ಆಫ್ ಎಂಜಿನಿಯರಿಂಗ್ ನ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು ಉಪರಾಷ್ಟ್ರಪತಿ
“ತಂತ್ರಜ್ಞಾನವು ಮಾನವತೆಗೆ ಸೇವೆ ಸಲ್ಲಿಸಬೇಕು”: ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿ ಕರೆ
ಭಾರತದ ತಾಂತ್ರಿಕ ಸ್ವಾವಲಂಬನೆಯ ಪಯಣವನ್ನು ಮುನ್ನಡೆಸಲು ಯುವಜನತೆಗೆ ಉಪರಾಷ್ಟ್ರಪತಿ ಕರೆ
ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳು ನೈತಿಕ ಮೌಲ್ಯಗಳನ್ನೊಳಗೊಂಡ ನಾವೀನ್ಯಕಾರರು ಮತ್ತು ರಾಷ್ಟ್ರ ನಿರ್ಮಾತೃಗಳನ್ನು ಬೆಳೆಸಬೇಕು: ಉಪರಾಷ್ಟ್ರಪತಿ
ವಿಕಸಿತ ಭಾರತ @2047 ಅನ್ನು ರೂಪಿಸುವಲ್ಲಿ ಭಾರತದ ಎಂಜಿನಿಯರ್ ಗಳ ಪಾತ್ರ ಮಹತ್ತರವಾದುದು: ಉಪರಾಷ್ಟ್ರಪತಿ
ಪ್ರಕಟಣಾ ದಿನಾಂಕ:
29 MAY 2026 4:13PM by PIB Bengaluru
ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ಕರ್ನಾಟಕದ ದಾವಣಗೆರೆಯ ಯೂನಿವರ್ಸಿಟಿ ಬಿ.ಡಿ.ಟಿ. ಕಾಲೇಜ್ ಆಫ್ ಎಂಜಿನಿಯರಿಂಗ್ ನ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಭಾರತವನ್ನು ತಾಂತ್ರಿಕವಾಗಿ ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಪಯಣದಲ್ಲಿ ಯುವಜನತೆ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ಅವರು, ಭಾರತವನ್ನು ತಾಂತ್ರಿಕ ಪ್ರಗತಿ ಮತ್ತು ಜಾಗತಿಕ ಜ್ಞಾನದ ನಾಯಕತ್ವದತ್ತ ಮುನ್ನಡೆಸುವ ಸಾಮರ್ಥ್ಯವಿರುವ ಸಮಸ್ಯೆ-ನಿವಾರಕರು, ನಾವೀನ್ಯಕಾರರು, ನೈತಿಕ ನಾಯಕರು ಮತ್ತು ರಾಷ್ಟ್ರ ನಿರ್ಮಾತೃಗಳನ್ನು ಬೆಳೆಸುವ ಇಂಜಿನಿಯರಿಂಗ್ ಸಂಸ್ಥೆಗಳು ಪ್ರಮುಖ ಜವಾಬ್ದಾರಿಯನ್ನು ಹೊಂದಿವೆ ಎಂದು ಹೇಳಿದರು.
ಭಾರತವು ತಂತ್ರಜ್ಞಾನ, ನಾವೀನ್ಯತೆ ಮತ್ತು ತನ್ನ ಯುವಶಕ್ತಿಯ ಅಪಾರ ಬಲದಿಂದ ಪ್ರೇರಿತವಾದ ಪರಿವರ್ತನಾ ಯುಗಕ್ಕೆ ಸಾಕ್ಷಿಯಾಗುತ್ತಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿ ನಾಯಕತ್ವವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಸೆಮಿಕಂಡಕ್ಟರ್ ತಯಾರಿಕೆ, ಹಸಿರು ಇಂಧನ ಮತ್ತು ಆತ್ಮನಿರ್ಭರ ಭಾರತದಂತಹ ಉಪಕ್ರಮಗಳು ಯುವ ಇಂಜಿನಿಯರ್ ಗಳು, ಸಂಶೋಧಕರು, ನಾವೀನ್ಯಕಾರರು ಮತ್ತು ಉದ್ಯಮಿಗಳಿಗೆ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದರು.
2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಆಶಯವು ಬಹುಮಟ್ಟಿಗೆ ಎಂಜಿನಿಯರ್ ಗಳು, ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮಿಗಳ ಕೊಡುಗೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು. ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸುವಲ್ಲಿ ಸಂಸ್ಥೆಯ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಎಐಸಿಟಿಇ ಐಡಿಯಾ ಲ್ಯಾಬ್, ಡ್ರೋನ್ ತಂತ್ರಜ್ಞಾನ ಪ್ರಯೋಗಾಲಯ ಮತ್ತು ಕಾಲೇಜು ನಿರ್ಮಿಸಿರುವ ಉನ್ನತ ಸಂಶೋಧನಾ ಮೂಲಸೌಕರ್ಯಗಳಂತಹ ಉಪಕ್ರಮಗಳನ್ನು ಪ್ರಶಂಸಿಸಿದರು.
ಅಮೃತ ಮಹೋತ್ಸವವನ್ನು ಪರಂಪರೆ ಮತ್ತು ಭವಿಷ್ಯದ ಆಶಯಗಳ ಆಚರಣೆ ಎಂದು ಬಣ್ಣಿಸಿದ ಉಪರಾಷ್ಟ್ರಪತಿ ಅವರು, ಸಂಸ್ಥೆಯ ಎಪ್ಪತ್ತೈದು ವರ್ಷಗಳ ಪಯಣವು ದೃಷ್ಟಿಕೋನ, ಪರಿಶ್ರಮ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮಾಜಸೇವೆಯ ಪ್ರತಿಬಿಂಬವಾಗಿದೆ ಎಂದು ಹೇಳಿದರು. ದೂರದೃಷ್ಟಿಯ ಸಂಸ್ಥಾಪಕರು, ಬದ್ಧ ಶಿಕ್ಷಕರು, ಸಮರ್ಪಿತ ಆಡಳಿತಗಾರರು, ಪರಿಶ್ರಮಿ ವಿದ್ಯಾರ್ಥಿಗಳು ಮತ್ತು ಪ್ರತಿಷ್ಟಿತ ಹಳೆಯ ವಿದ್ಯಾರ್ಥಿಗಳ ಕೊಡುಗೆಗಳಿಂದ ಶ್ರೇಷ್ಠ ಸಂಸ್ಥೆಗಳು ತಲೆಮಾರುಗಳ ಅವಧಿಯಲ್ಲಿ ನಿರ್ಮಾಣವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ್ ಅವರ ದೂರದೃಷ್ಟಿಯ ದಾನಶೀಲತೆ ಮತ್ತು ಸಂಸ್ಥೆಯ ಸ್ಥಾಪನೆಗೆ ಆಶೀರ್ವಾದ ನೀಡಿದ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆಯನ್ನು ಸ್ಮರಿಸಿದ ಉಪರಾಷ್ಟ್ರಪತಿಯವರು, ಇಂತಹ ಸಂಸ್ಥೆಗಳು ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣದತ್ತ ತಮ್ಮ ಶಾಶ್ವತ ಬದ್ಧತೆಯ ಮೂಲಕ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ಅವರು, ಜ್ಞಾನವನ್ನು ವಿನಯ, ಪ್ರಾಮಾಣಿಕತೆ ಮತ್ತು ಸಹಾನುಭೂತಿಯೊಂದಿಗೆ ಬಳಸಬೇಕೆಂದು ಕರೆ ನೀಡಿದರು. ನಾವೀನ್ಯತೆಯ ನೈತಿಕ ಆಯಾಮಗಳನ್ನು ಒತ್ತಿಹೇಳಿದ ಅವರು, “ತಂತ್ರಜ್ಞಾನವು ಮಾನವತೆಗೆ ಸೇವೆ ಸಲ್ಲಿಸಬೇಕು” ಎಂದು ಹೇಳಿ, ವೈಜ್ಞಾನಿಕ ಪ್ರಗತಿ ಸದಾ ಸಾರ್ವಜನಿಕ ಹಿತಾಸಕ್ತಿ ಮತ್ತು ಮಾನವೀಯ ಮೌಲ್ಯಗಳಿಂದ ಮಾರ್ಗದರ್ಶನ ಹೊಂದಿರಬೇಕು ಎಂದು ತಿಳಿಸಿದರು.
ಮಾದಕ ದ್ರವ್ಯ ವ್ಯಸನದ ವಿರುದ್ಧ ಕಠಿಣ ಸಂದೇಶವನ್ನು ನೀಡಿದ ಉಪರಾಷ್ಟ್ರಪತಿಯವರು, ವಿದ್ಯಾರ್ಥಿಗಳು ಮತ್ತು ಒಟ್ಟಾರೆ ಸಮಾಜಕ್ಕೆ "ಮಾದಕ ದ್ರವ್ಯಗಳಿಗೆ ಇಲ್ಲ ಎಂದು ಹೇಳಿ" (No to Drugs) ಎಂದು ಕರೆ ನೀಡಿದರು. ವ್ಯಕ್ತಿಗಳು ತಮ್ಮ ಮನಸ್ಸಿನ ಮೇಲೆ ನಿಯಂತ್ರಣವನ್ನು ಹೊಂದಿರಬೇಕು ಮತ್ತು ಹಾನಿಕಾರಕ ಪದಾರ್ಥಗಳು ತಮ್ಮ ಜೀವನದ ಮೇಲೆ ಹಿಡಿತವನ್ನು ಸಾಧಿಸಲು ಎಂದಿಗೂ ಅವಕಾಶ ನೀಡಬಾರದು ಎಂದು ಅವರು ಒತ್ತಿಹೇಳಿದರು.
ಸಂಸ್ಥೆಯ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಉಪರಾಷ್ಟ್ರಪತಿಯವರ, ಯೂನಿವರ್ಸಿಟಿ ಬಿ.ಡಿ.ಟಿ. ಕಾಲೇಜ್ ಆಫ್ ಎಂಜಿನಿಯರಿಂಗ್ ಮುಂದುವರೆಯುತ್ತಾ ಶ್ರೇಷ್ಠತಾ ಕೇಂದ್ರವಾಗಿ ಹೊರಹೊಮ್ಮಿ, ಭಾರತದ ನಾವೀನ್ಯತೆ, ತಾಂತ್ರಿಕ ಪ್ರಗತಿ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಪಯಣದಲ್ಲಿ ಅರ್ಥಪೂರ್ಣ ಕೊಡುಗೆ ನೀಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್; ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ; ಕರ್ನಾಟಕದ ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್; ಸಂಸದರಾದ ಶ್ರೀ ಯದುವೀರ್ ಒಡೆಯರ್, ಡಾ. ಪ್ರಭಾ ಮಲ್ಲಿಕಾರ್ಜುನ; ಕರ್ನಾಟಕದ ಮಾಜಿ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ; ನಿಫ್ಟೆಮ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಟಿ.ಜಿ. ಸೀತಾರಾಂ; ವಿ.ಟಿ.ಯು ಉಪಕುಲಪತಿ ಡಾ. ಎಸ್. ವಿದ್ಯಾಶಂಕರ್; ಹಿರಿಯ ಅಧಿಕಾರಿಗಳು, ಬೋಧಕ ವೃಂದ, ವಿದ್ಯಾರ್ಥಿಗಳು ಹಾಗೂ ಗಣ್ಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2266646)
ವಿಸಿಟರ್ ಕೌಂಟರ್ : 34