ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ಸುರಂಗ ಎಂಜಿನಿಯರಿಂಗ್, ಇಳಿಜಾರು ಸ್ಥಿರತೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸುಧಾರಿತ ಸಲಹಾ ಬೆಂಬಲಕ್ಕಾಗಿ ನಾರ್ವೇಜಿಯನ್ ಜಿಯೋಟೆಕ್ನಿಕಲ್ ಇನ್ಸ್ಟಿಟ್ಯೂಟ್ ಜೊತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ  ಒಪ್ಪಂದ

प्रविष्टि तिथि: 22 MAY 2026 3:03PM by PIB Bengaluru

ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿಗಾಗಿ ತಾಂತ್ರಿಕ ಪರಿಣತಿಯನ್ನು ಬಲಪಡಿಸುವ ಉದ್ದೇಶದಿಂದ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು   ಇತ್ತೀಚೆಗೆ ಓಸ್ಲೋದಲ್ಲಿ ನಾರ್ವೆಯ ನಾರ್ವೇಜಿಯನ್ ಜಿಯೋಟೆಕ್ನಿಕಲ್ ಇನ್ಸ್ಟಿಟ್ಯೂಟ್   ಜೊತೆಗೆ ತಿಳುವಳಿಕೆ ಪತ್ರಕ್ಕೆ   ಸಹಿ ಹಾಕಿದೆ. ಈ ಸಹಯೋಗವು ಭೂತಾಂತ್ರಿಕ ಎಂಜಿನಿಯರಿಂಗ್ ಮತ್ತು ನೈಸರ್ಗಿಕ ವಿಕೋಪ ತಗ್ಗಿಸುವಿಕೆಯಲ್ಲಿ ಇನ್ಸ್ಟಿಟ್ಯೂಟ್ ನ ಅಂತರರಾಷ್ಟ್ರೀಯ ಮಟ್ಟದ ಪರಿಣತಿಯನ್ನು ಬಳಸಿಕೊಳ್ಳುವ ಮೂಲಕ, ಭಾರತದ ರಾಷ್ಟ್ರೀಯ ಹೆದ್ದಾರಿಗಳನ್ನು ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು  ಹೆದ್ದಾರಿ ಪ್ರಾಧಿಕಾರವು   ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ. ಇದು ವಿಶೇಷವಾಗಿ ಭೌಗೋಳಿಕವಾಗಿ ಸೂಕ್ಷ್ಮ ಮತ್ತು ಸವಾಲಿನ ಪ್ರದೇಶಗಳಲ್ಲಿ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಸುರಂಗ ನಿರ್ಮಾಣ, ಇಳಿಜಾರು ಸ್ಥಿರತೆಯ ವಿಶ್ಲೇಷಣೆ, ಇಳಿಜಾರುಗಳ ಮೇಲ್ವಿಚಾರಣೆ ಹಾಗೂ ಸಾಂಸ್ಥಿಕ ಸಾಮರ್ಥ್ಯ ವೃದ್ಧಿಯ ಕ್ಷೇತ್ರಗಳಲ್ಲಿನ ಪ್ರಮುಖ ಮೂಲಸೌಕರ್ಯ ಯೋಜನೆಗಳ ಯೋಜನೆ, ವಿನ್ಯಾಸ, ಮೌಲ್ಯಮಾಪನ ಮತ್ತು ಮೇಲ್ವಿಚಾರಣೆಯನ್ನು ಬೆಂಬಲಿಸಲು ಸುಧಾರಿತ ಅಂತರರಾಷ್ಟ್ರೀಯ ಪರಿಣತಿಯನ್ನು ಬಳಸಿಕೊಳ್ಳುವ ಗುರಿಯನ್ನು ಈ ಒಪ್ಪಂದವು ಹೊಂದಿದೆ. ಈ ಒಪ್ಪಂದದ ಅಡಿಯಲ್ಲಿ, ಎನ್‌ ಜಿ ಐ ವಿವಿಧ ಸಲಹಾ ಸೇವೆಗಳನ್ನು ಒದಗಿಸಲಿದೆ. ಇವುಗಳಲ್ಲಿ ಸುರಂಗ ಯೋಜನೆಗಳಿಗಾಗಿ ಸ್ಥಳದ ಗುಣಲಕ್ಷಣಗಳ ಅಧ್ಯಯನ, ಮುಂಬರುವ ಸುರಂಗ ಯೋಜನೆಗಳಿಗೆ ಕಾರ್ಯಸಾಧ್ಯತಾ ವರದಿಗಳು ಮತ್ತು ವಿವರವಾದ ಯೋಜನಾ ವರದಿಗಳ ಸಿದ್ಧತೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸುರಂಗಗಳ ರಚನಾತ್ಮಕ ಮೌಲ್ಯಮಾಪನ ಮತ್ತು ಸುರಕ್ಷತಾ ತಪಾಸಣೆಗಳು, ಸಂಭಾವ್ಯ ಅಪಾಯಗಳನ್ನು ಗುರುತಿಸಲು ಮತ್ತು ಸೂಕ್ತ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲು ಸುಧಾರಿತ ಇಳಿಜಾರು ಸ್ಥಿರತೆಯ ಮೌಲ್ಯಮಾಪನಗಳು ಸೇರಿವೆ. ಮೂಲಸೌಕರ್ಯ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ಇಳಿಜಾರುಗಳಿಗಾಗಿ ಇನ್ಸಾರ್ (InSAR) ಡೇಟಾದ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಹಾಗೂ  ಮುನ್ನೆಚ್ಚರಿಕೆ ವ್ಯವಸ್ಥೆಗಳ ಅಭಿವೃದ್ಧಿಯೂ ಈ ಸಹಯೋಗದಲ್ಲಿ ಒಳಗೊಂಡಿದೆ.

ಜೊತೆಗೆ, ಈ ಒಪ್ಪಂದವು ಸಾಂಸ್ಥಿಕ ಸಾಮರ್ಥ್ಯ ನಿರ್ಮಾಣ ಮತ್ತು ಜ್ಞಾನ ವಿನಿಮಯಕ್ಕೆ ಒತ್ತು ನೀಡುತ್ತದೆ. ಎರಡೂ ಸಂಸ್ಥೆಗಳು ನೈಸರ್ಗಿಕ ವಿಕೋಪಗಳ ತಗ್ಗಿಸುವಿಕೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳಲ್ಲಿ ಸಹಕಾರದಿಂದ ಕೆಲಸ ಮಾಡಲಿವೆ. ಜಂಟಿ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ತಾಂತ್ರಿಕ ತರಬೇತಿ ಕಾರ್ಯಕ್ರಮಗಳು ಮತ್ತು ವಿಶೇಷ ತಾಂತ್ರಿಕದ ಬಗ್ಗೆ ಕೃತಿಗಳ ಪ್ರಕಟಣೆಯ ಮೂಲಕ ಹೆದ್ದಾರಿ ವಲಯದ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲಾಗುವುದು.

ಎರಡೂ ಸಂಸ್ಥೆಗಳು ಗುರುತಿಸಲಾದ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಪ್ರಯತ್ನಿಸುತ್ತವೆ ಅಲ್ಲದೆ ಈ ವ್ಯವಸ್ಥೆಯು ಯಾವುದೇ ನಿರ್ಬಂಧಿತ ನಿಯಮಾವಳಿಗಳನ್ನು ಹೊಂದಿಲ್ಲ ಮತ್ತು ಪ್ತತಿ ಯೋಜನೆಗಳಿಗೆ ತಕ್ಕಂತೆ ಇದು ಅಗತ್ಯಕ್ಕೆ ಅನುಗುಣವಾಗಿ ಇತರ ಸಂಸ್ಥೆಗಳೊಂದಿಗೆ ಸ್ವತಂತ್ರವಾಗಿ ಸಹಯೋಗ ಹೊಂದುವ  ಅವಕಾಶವನ್ನು ಎರಡೂ ಪಕ್ಷಗಳಿಗೆ ನೀಡುತ್ತದೆ. ಈ ಒಪ್ಪಂದವು ಐದು ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನಾರ್ವೇಜಿಯನ್ ಜಿಯೋಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಡುವಿನ ಈ ಸಹಯೋಗವು ಸುರಕ್ಷಿತ, ಸುಸ್ಥಿರ ಮತ್ತು ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ಈ ಪಾಲುದಾರಿಕೆಯು ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನ ವಿನಿಮಯ ಮತ್ತು ಸುಸ್ಥಿರ ಎಂಜಿನಿಯರಿಂಗ್ ಕಾರ್ಯಪದ್ಧತಿಗಳ ಕ್ಷೇತ್ರದಲ್ಲಿ ಭಾರತ ಮತ್ತು ನಾರ್ವೆ ನಡುವೆ ಬೆಳೆಯುತ್ತಿರುವ ಸಹಕಾರವನ್ನು ತೋರಿಸುತ್ತದೆ, ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಆಳಗೊಳಿಸುತ್ತದೆ ಮತ್ತು ದೀರ್ಘಕಾಲೀನ ಸಾಂಸ್ಥಿಕ ಸಹಯೋಗವನ್ನು ಉತ್ತೇಜಿಸುತ್ತದೆ.

 

*****


(रिलीज़ आईडी: 2264195) आगंतुक पटल : 40
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Tamil , Telugu