ಪ್ರಧಾನ ಮಂತ್ರಿಯವರ ಕಛೇರಿ
ನೆದರ್‌ಲ್ಯಾಂಡ್ಸ್‌ನಲ್ಲಿ ನಡೆದ ಸಿಇಒಗಳ ದುಂಡುಮೇಜಿನ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
ಪ್ರಕಟಣಾ ದಿನಾಂಕ:
16 MAY 2026 10:17PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ರಾಬ್ ಜೆಟ್ಟನ್,
ಎರಡೂ ದೇಶಗಳ ಪ್ರತಿನಿಧಿಗಳೆ,
ನೆದರ್‌ಲ್ಯಾಂಡ್ಸ್‌ನ ಉದ್ಯಮ ದಿಗ್ಗಜರೆ,
ನಮಸ್ಕಾರ!
ವಿಶ್ವದ ಕೆಲವು ಅತ್ಯಂತ ನವೀನ ಕಂಪನಿಗಳ ನಾಯಕರ ಜತೆ ಇಂದು ನಾನು ಇಲ್ಲಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇಂದು 300ಕ್ಕೂ ಹೆಚ್ಚು ಡಚ್ ಕಂಪನಿಗಳು ಭಾರತದ ಯಶೋಗಾಥೆಯ ಭಾಗವಾಗಿವೆ. ಭಾರತದ ಮೇಲಿನ ನಿಮ್ಮ ದೃಷ್ಟಿಕೋನ ಮತ್ತು ವಿಶ್ವಾಸದಿಂದಾಗಿ, ಯುರೋಪ್ ಪೈಕಿ ನೆದರ್‌ಲ್ಯಾಂಡ್ಸ್ ಭಾರತದ ಅತಿದೊಡ್ಡ ಹೂಡಿಕೆದಾರರಾಗಿ ಮತ್ತು 2ನೇ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿ ಮಾರ್ಪಟ್ಟಿದೆ.
ಸ್ನೇಹಿತರೆ,
ಭಾರತದಲ್ಲಿರುವ ನಿಮ್ಮ ಕಂಪನಿಗಳು ಪ್ರಸಿದ್ಧ ಬ್ರ್ಯಾಂಡ್‌ಗಳು ಮಾತ್ರವಲ್ಲದೆ, ಭಾರತ-ನೆದರ್‌ಲ್ಯಾಂಡ್ಸ್ ಸ್ನೇಹದ ಬ್ರಾಂಡ್ ರಾಯಭಾರಿಗಳೂ ಆಗಿವೆ. ಎನ್‌ಎಕ್ಸ್‌ಪಿ, ಫಿಲಿಪ್ಸ್ ಮತ್ತು ಪ್ರೊಸಸ್ ಭಾರತದ ಪ್ರತಿಭೆಯೊಂದಿಗೆ ಒಟ್ಟಾಗಿ ವಿಶ್ವದ ಪ್ರಮುಖ ಪರಿಹಾರಗಳನ್ನು ಒದಗಿಸುತ್ತಿರುವುದು ನಮಗೆ ಸಂತೋಷ ತಂದಿದೆ.
ಎಪಿಎಂ, ಡ್ಯಾಮೆನ್ ಮತ್ತು ರಾಯಲ್ ವೊಪಾಕ್‌ನಂತಹ ಕಂಪನಿಗಳು ಭಾರತದ ಬಂದರುಗಳು, ಹಡಗು ಸಾಗಣೆ ಮತ್ತು ಸರಕು ಸಾಗಣೆ ವಲಯವನ್ನು ಪರಿವರ್ತಿಸುತ್ತಿವೆ. ಜಗತ್ತಿಗೆ ಉತ್ತಮ ಭವಿಷ್ಯ ಖಚಿತಪಡಿಸಿಕೊಳ್ಳಲು ಕೃಷಿ ಮತ್ತು ಸುಸ್ಥಿರತೆಯಲ್ಲಿ ಇನ್ನೂ ಅನೇಕರು ಭಾರತದೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ, ಎಎಸ್‌ಎಂಎಲ್ ಮತ್ತು ಟಾಟಾ ನಡುವೆ 1 ಒಪ್ಪಂದಕ್ಕೆ ಸಹಿ ಹಾಕಲಾಯಿತು - ಈಗ ಎಎಸ್‌ಎಂಎಲ್ ಉಪಕರಣಗಳೊಂದಿಗೆ ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳನ್ನು ತಯಾರಿಸಲಾಗುವುದು. ಇಂದು ನಿಮ್ಮೆಲ್ಲರ ಮಾತಿನಲ್ಲಿ ಹೇಳುವುದಾದರೆ, ಭಾರತದ ಬಗೆಗಿನ ಆಶಾವಾದವು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಆಶಾವಾದವನ್ನು ಫಲಿತಾಂಶಗಳಾಗಿ ಪರಿವರ್ತಿಸುವುದು ನಮ್ಮ ಖಾತರಿಯಾಗಿದೆ.
ಸ್ನೇಹಿತರೆ,
ಇಂದಿನ ಭಾರತವು ಪ್ರಮಾಣ ಮತ್ತು ಸ್ಥಿರತೆಯ ಸಂಕೇತವಾಗಿದೆ. ಪ್ರಮಾಣದ ಬಗ್ಗೆ ಹೇಳುವುದಾದರೆ, ನಾವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಮತ್ತು ಅತಿದೊಡ್ಡ ಪ್ರತಿಭಾನ್ವಿತ ಗುಂಪು ಆಗಿದ್ದೇವೆ. ಮೂಲಸೌಕರ್ಯ, ಸ್ವಚ್ಛ ಇಂಧನ ಅಥವಾ ಸಂಪರ್ಕದಲ್ಲಿ ಭಾರತದ ವೇಗವನ್ನು ಜಗತ್ತಿನಲ್ಲಿ ಇನ್ನೆಲ್ಲಿಯೂ ಹೊಂದಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಭಾರತವು ಇಂದು ಜಾಗತಿಕ ಬೆಳವಣಿಗೆಗೆ 17 ಪ್ರತಿಶತದಷ್ಟು ಕೊಡುಗೆ ನೀಡುತ್ತಿದೆ.
ಸ್ಥಿರತೆಯ ಬಗ್ಗೆ ಹೇಳುವುದಾದರೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ನನಗೆ ಈ ಹುದ್ದೆಯಲ್ಲಿ ಇಂದಿಗೆ 12 ವರ್ಷಗಳು ತುಂಬುತ್ತಿವೆ. ಈ 12 ವರ್ಷಗಳಲ್ಲಿ ನಿರಂತರ ಸುಧಾರಣೆಗಳ ಮೂಲಕ, ನಾವು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಪರಿವರ್ತಿಸಿದ್ದೇವೆ. ನಮ್ಮ ನಿರ್ದೇಶನವು ಸ್ಪಷ್ಟವಾಗಿದೆ - ಖಾಸಗಿ ವಲಯಕ್ಕೆ ನೀತಿ ಮುನ್ಸೂಚನೆ ಒದಗಿಸುವುದು ಮತ್ತು ಅವರಿಗೆ ಅವಕಾಶಗಳನ್ನು ವಿಸ್ತರಿಸುವುದಾಗಿದೆ.
ಬಾಹ್ಯಾಕಾಶ, ಗಣಿಗಾರಿಕೆ ಅಥವಾ ಪರಮಾಣು ಶಕ್ತಿ - ನಾವು ಪ್ರತಿಯೊಂದು ವಲಯವನ್ನು ಖಾಸಗಿ ವಲಯಕ್ಕೆ ತೆರೆದಿದ್ದೇವೆ. ನಾವು ನಿರಂತರವಾಗಿ ತೆರಿಗೆ ಮತ್ತು ಕಟ್ಟುಪಾಡುಗಳ ಅನುಸರಣೆಗಳನ್ನು ಕಡಿಮೆ ಮಾಡುತ್ತಿದ್ದೇವೆ, ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸುತ್ತಿದ್ದೇವೆ. ಇತ್ತೀಚೆಗೆ ನಾವು ತೆರಿಗೆ, ಕಾರ್ಮಿಕ ಸಂಹಿತೆಗಳು ಮತ್ತು ಆಡಳಿತದಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಭಾರತದಲ್ಲಿ ಉತ್ಪಾದನೆಯು ಈಗ ಹೆಚ್ಚು ವೆಚ್ಚ ಪರಿಣಾಮಕಾರಿಯಾಗುತ್ತಿದೆ.
ಈ ಹಿಂದೆ ಭಾರತಕ್ಕೆ ಪ್ರಮುಖ ಆಮದು ವಸ್ತುವಾಗಿದ್ದ ಎಲೆಕ್ಟ್ರಾನಿಕ್ಸ್, ಇಂದು ಭಾರತದ ಅತಿದೊಡ್ಡ ರಫ್ತು ವಸ್ತುವಾಗಿದೆ. ಈ ಉತ್ಪಾದನಾ ಬೆಳವಣಿಗೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು, ನಾವು ಅನೇಕ ಪ್ರಮುಖ ವಲಯಗಳಲ್ಲಿ ಪ್ರೋತ್ಸಾಹ ನೀಡುತ್ತಿದ್ದೇವೆ. ಇದರ ಲಾಭ ಪಡೆದುಕೊಳ್ಳುವ ಮೂಲಕ, ನೀವು ಇಡೀ ಜಗತ್ತಿಗೆ ಭಾರತದಲ್ಲಿ ಉತ್ಪಾದಿಸಬಹುದು.
ಅದೇ ರೀತಿ, ಸೇವಾ ವಲಯದಲ್ಲಿ ಭಾರತವು ತನ್ನ ಪ್ರತಿಭೆಯಿಂದ ಬೆಂಬಲಿತವಾದ ದಕ್ಷತೆ ಮತ್ತು ನಾವೀನ್ಯತೆಯ ಎಂಜಿನ್ ಆಗಿ ಮಾರ್ಪಟ್ಟಿದೆ. ಎಲ್ಲಾ ಜಾಗತಿಕ ತಂತ್ರಜ್ಞಾನ ಕಂಪನಿಗಳು ಭಾರತದಲ್ಲಿ ತಮ್ಮ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ತೆರೆದಿವೆ.
ಭಾರತದಲ್ಲಿ ವಿನ್ಯಾಸಗೊಳಿಸಲು ಮತ್ತು ನಾವೀನ್ಯತೆ ಮಾಡಲು ನಾನು ನಿಮ್ಮೆಲ್ಲರಿಗೂ ಆಹ್ವಾನ ನೀಡುತ್ತೇನೆ. ಇಂದಿಗಿಂತ ಉತ್ತಮ ಸಮಯ ಇನ್ನೊಂದಿಲ್ಲ.
ಸ್ನೇಹಿತರೆ,
2026 ರಿಂದ ಭಾರತ-ಯುರೋಪ್ ಸಂಬಂಧಗಳಲ್ಲಿ ಹೊಸ ಸುವರ್ಣ ಯುಗ ಪ್ರಾರಂಭವಾಗಿದೆ. ಈ ವರ್ಷ ನಾವು ಐತಿಹಾಸಿಕ ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ವಿಶ್ವದ 2 ಬೃಹತ್ ಪ್ರಜಾಪ್ರಭುತ್ವ ಮತ್ತು ಜವಾಬ್ದಾರಿಯುತ ಶಕ್ತಿಗಳ ನಡುವಿನ ಈ ಒಪ್ಪಂದವು ಹಂಚಿಕೆಯ ಸಮೃದ್ಧಿಗೆ ಬಲವಾದ ಅಡಿಪಾಯವಾಗಲಿದೆ.
ಈ ಒಪ್ಪಂದ ಸಂಪೂರ್ಣ ಸಾಮರ್ಥ್ಯವನ್ನು ಹೊರತೆಗೆಯಲು ಪ್ರಧಾನಮಂತ್ರಿ ಜೆಟ್ಟನ್ ಮತ್ತು ನಾನು ಇಂದು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ವಿಶ್ವಾಸಾರ್ಹ ಭಾರತ- ನೆದರ್‌ಲ್ಯಾಂಡ್ಸ್ ಪಾಲುದಾರಿಕೆಯನ್ನು ಕಾರ್ಯತಂತ್ರ ಪಾಲುದಾರಿಕೆಗೆ ಏರಿಸುತ್ತಿದ್ದೇವೆ. ನಾವು ಹಸಿರು ಹೈಡ್ರೋಜನ್‌ನಲ್ಲಿ ಮಹತ್ವಾಕಾಂಕ್ಷೆಯ ಜಂಟಿ ಮಾರ್ಗಸೂಚಿ ಪ್ರಾರಂಭಿಸುತ್ತಿದ್ದೇವೆ. ತಂತ್ರಜ್ಞಾನದಲ್ಲಿ ನಾವು ನಮ್ಮ ಸಂಬಂಧಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸುತ್ತಿದ್ದೇವೆ.
ನಾವು ನಮ್ಮ 2 ದೇಶಗಳ ನಡುವೆ ಪ್ರತಿಭೆ ಚಲನಶೀಲತೆ, ವಿಶ್ವವಿದ್ಯಾಲಯ ಪಾಲುದಾರಿಕೆ ಮತ್ತು ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಸಹ ಬಲಪಡಿಸುತ್ತಿದ್ದೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತ- ನೆದರ್‌ಲ್ಯಾಂಡ್ಸ್ ಪಾಲುದಾರಿಕೆಯ ಭವಿಷ್ಯವು ಹಿಂದೆಂದಿಗಿಂತಲೂ ಉಜ್ವಲವಾಗಿದೆ.
ಸ್ನೇಹಿತರೆ,
ಭಾರತ ಮತ್ತು ಯುರೋಪ್ ನಡುವಿನ ಕಾರ್ಯತಂತ್ರ ಪಾಲುದಾರಿಕೆ ಬಲಪಡಿಸುವುದು ನಮ್ಮ ವ್ಯಾಪಾರ ಸಂಬಂಧಗಳಿಗೆ ಹೊಸ ಸ್ಫೂರ್ತಿ ನೀಡುತ್ತಿದೆ. ಈ ದಿಕ್ಕಿನಲ್ಲಿ ವೇಗವಾಗಿ ಮುಂದುವರಿಯುವುದು ಈಗ ನಿಮ್ಮ ಕೈಯಲ್ಲಿದೆ. ನೀವು ಭಾರತದಲ್ಲಿ ನಿಮ್ಮ ವ್ಯಾಪ್ತಿ, ಹೂಡಿಕೆ ಮತ್ತು ಮಹತ್ವಾಕಾಂಕ್ಷೆಯನ್ನು ವಿಸ್ತರಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ನಿಮ್ಮೊಂದಿಗೆ, ಯುರೋಪಿನ ಸಂಪೂರ್ಣ ನಾವೀನ್ಯತೆ ಪರಿಸರ ವ್ಯವಸ್ಥೆಯು ಭಾರತಕ್ಕೆ ಬರುತ್ತದೆ.
ಸ್ನೇಹಿತರೆ,
ನೆದರ್‌ಲ್ಯಾಂಡ್ಸ್‌ನಲ್ಲಿ ಒಂದು ಮಾತಿದೆ: "ಹಡಗುಗಳು ಬಂದರಿನಲ್ಲಿ ಸುರಕ್ಷಿತವಾಗಿರುತ್ತವೆ, ಆದರೆ ಹಡಗುಗಳು ಬಂದರಿನಲ್ಲೇ ಉಳಿಯಲು ನಿರ್ಮಿತವಾಗಿಲ್ಲ."
ಡಚ್ ವ್ಯಾಪಾರ ಸಮುದಾಯಕ್ಕಿಂತ ಇದನ್ನು ಬೇರೆ ಇನ್ನಾರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ? ನಿಮ್ಮ ದೇಶವು ಶತಮಾನಗಳಿಂದ ಹೊಸ ಅವಕಾಶಗಳ ಹುಡುಕಾಟದಲ್ಲಿ ಮುಂದುವರೆದಿದೆ. ನಾನು ನಿಮಗೆ ಭರವಸೆ ನೀಡುತ್ತೇನೆ - ಭಾರತದಲ್ಲಿ ನಿಮ್ಮ ಹುಡುಕಾಟ ಯಶಸ್ವಿಯಾಗುತ್ತದೆ ಮತ್ತು ಅರ್ಥಪೂರ್ಣವಾಗಿರುತ್ತದೆ. ಈಗ ನೀವು ಭಾರತಕ್ಕೆ ಹೆಚ್ಚಿನ ದಿಟ್ಟತನದಿಂದ ಹೋಗಬೇಕು.
ತುಂಬು ಧನ್ಯವಾದಗಳು.
*****
(ಪ್ರಕಟಣೆ ಐ.ಡಿ.: 2262733)
ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Telugu
,
Malayalam