ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ರಾಜಸ್ಥಾನ, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿಯ ʻಎಂಸಿಡಿʼ ಪ್ರದೇಶದಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿಗಾಗಿ ಕ್ಷೇತ್ರ ಕಾರ್ಯಾಚರಣೆ ಪ್ರಾರಂಭ


ಗುಜರಾತ್, ಜಮ್ಮು- ಕಾಶ್ಮೀರ, ಲಡಾಖ್ ಮತ್ತು ಪುದುಚೇರಿಯಲ್ಲಿ ಸ್ವಯಂ ಎಣಿಕೆ ಪ್ರಾರಂಭ

1.44 ಕೋಟಿಗೂ ಹೆಚ್ಚು ಕುಟುಂಬಗಳು ಸ್ವಯಂ ಎಣಿಕೆ ಪೂರ್ಣಗೊಳಿಸಿವೆ

ಪ್ರಕಟಣಾ ದಿನಾಂಕ: 17 MAY 2026 10:42AM by PIB Bengaluru

ರಾಷ್ಟ್ರವ್ಯಾಪಿ ನಡೆಯುತ್ತಿರುವ ಜನಗಣತಿ (ಸೆನ್ಸಸ್‌-2027) ಕಾರ್ಯದ ಭಾಗವಾಗಿ, ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ರಾಜಸ್ಥಾನ, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿ ʻಎನ್‌ಸಿಟಿʼಯ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ) ಪ್ರದೇಶದಲ್ಲಿ ಮೊದಲ ಹಂತದ ಅಡಿಯಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿಗಾಗಿ (ಎಚ್ಎಲ್ಒ) ಕ್ಷೇತ್ರ ಕಾರ್ಯಾಚರಣೆಗಳು ಪ್ರಾರಂಭವಾಗಿವೆ.

ಏತನ್ಮಧ್ಯೆ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಚಂಡೀಗಢ, ಛತ್ತೀಸ್‌ಗಢ, ದಾದ್ರಾ ಮತ್ತು ನಗರ್ ಹವೇಲಿ ಹಾಗೂ ಡಿಯು-ದಮನ್, ಹರಿಯಾಣ, ಮಧ್ಯಪ್ರದೇಶ, ಪಂಜಾಬ್, ತೆಲಂಗಾಣ ಮತ್ತು ಉತ್ತರಾಖಂಡದಲ್ಲಿ ಎಣಿಕೆದಾರರಿಂದ ಮನೆ ಮನೆ ಪಟ್ಟಿ ಕಾರ್ಯ ಪ್ರಗತಿಯಲ್ಲಿದೆ.

ಸ್ವಯಂ ಎಣಿಕೆ (ಎಸ್ಇ) ಸೌಲಭ್ಯವು ಗುಜರಾತ್, ಜಮ್ಮು-ಕಾಶ್ಮೀರ, ಲಡಾಖ್ ಮತ್ತು ಪುದುಚೇರಿಯಲ್ಲಿ ಇಂದು ಪ್ರಾರಂಭವಾಗಿದೆ ಮತ್ತು ಮೇ 31, 2026 ರವರೆಗೆ ಲಭ್ಯವಿರುತ್ತದೆ. ಈ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿ ಕ್ಷೇತ್ರ ಕಾರ್ಯಾಚರಣೆಗಳನ್ನು ಜೂನ್ 1 ರಿಂದ ಜೂನ್ 30, 2026ರವರೆಗೆ ನಡೆಸಲಾಗುತ್ತದೆ.

ಪ್ರಸ್ತುತ ಉತ್ತರ ಪ್ರದೇಶದಲ್ಲಿ ಸ್ವಯಂ ಎಣಿಕೆ ಸೌಲಭ್ಯವು ಪ್ರಗತಿಯಲ್ಲಿದ್ದು 2026ರ ಮೇ 21 ರವರೆಗೆ ಮುಂದುವರಿಯುತ್ತದೆ. ನಂತರ ʻಎಚ್ಎಲ್ಒʼ ಕ್ಷೇತ್ರ ಕಾರ್ಯಾಚರಣೆಯನ್ನು ಮೇ 22 ರಿಂದ ಜೂನ್ 20, 2026 ರವರೆಗೆ ನಡೆಸಲಾಗುವುದು.

ಇದಕ್ಕೂ ಮೊದಲು, ಏಪ್ರಿಲ್ 16ರಿಂದ ಮೇ 15, 2026ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಮಿಜೋರಾಂ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿ ಕಾರ್ಯವನ್ನು ನಡೆಸಲಾಗದೆ. ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿಯ ಎನ್‌ಡಿಎಂಸಿ ಪ್ರದೇಶ ಮತ್ತು ದೆಹಲಿ ಕಂಟೋನ್ಮೆಂಟ್ ಬೋರ್ಡ್ ಪ್ರದೇಶದಲ್ಲೂ  ಮನೆ ಪಟ್ಟಿ ಮತ್ತು ವಸತಿ ಗಣತಿ ಪೂರ್ಣಗೊಳಿಸಲಾಗಿದೆ.

ಜನಗಣತಿ ಕಾರ್ಯದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಸ್ವಯಂ-ಎಣಿಕೆ(ಎಸ್ಇ) ಸೌಲಭ್ಯಕ್ಕೆ  ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 25 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 1.44 ಕೋಟಿಗೂ ಹೆಚ್ಚು ಕುಟುಂಬಗಳು ಈಗಾಗಲೇ ಅಧಿಕೃತ ಪೋರ್ಟಲ್ (se.census.gov.in) ಮೂಲಕ ಸ್ವಯಂ ಎಣಿಕೆಯನ್ನು ಪೂರ್ಣಗೊಳಿಸಿವೆ. ಈ ಉಪಕ್ರಮವು ಜನಗಣತಿ ಕಾರ್ಯದ ಡಿಜಿಟಲೀಕರಣದತ್ತ ಮಹತ್ವದ ಹೆಜ್ಜೆಯಾಗಿದೆ ಮತ್ತು ಜನಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿವಾಸಿಗಳಿಗೆ ಅನುಕೂಲಕರ ಮತ್ತು ಸುರಕ್ಷಿತ ವೇದಿಕೆಯನ್ನು ಒದಗಿಸುತ್ತದೆ.

ಸ್ವಯಂ-ಎಣಿಕೆಯನ್ನು ಪೂರ್ಣಗೊಳಿಸಿದ ನಿವಾಸಿಗಳು ತಮ್ಮ ಸ್ವಯಂ-ಎಣಿಕೆ ಐಡಿ (ಎಸ್ಇ ಐಡಿ) ಅನ್ನು ಸಿದ್ಧವಾಗಿಟ್ಟುಕೊಳ್ಳಲು ವಿನಂತಿಸಲಾಗಿದೆ ಮತ್ತು ಎಚ್ಎಲ್ಒ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕ್ಷೇತ್ರ ಭೇಟಿಯ ಸಮಯದಲ್ಲಿ ಅದನ್ನು ಎಣಿಕೆದಾರರೊಂದಿಗೆ ಹಂಚಿಕೊಳ್ಳಬೇಕು. ಸ್ವಯಂ ಎಣಿಕೆಯನ್ನು ಆಯ್ಕೆ ಮಾಡಿಕೊಳ್ಳದ ಕುಟುಂಬಗಳಿಗೆ ಎಣಿಕೆದಾರರು ಭೌತಿಕವಾಗಿ ಮನೆ ಮನೆಗೆ ಭೇಟಿ ನೀಡುವ ಸಮಯದಲ್ಲಿ ಇದರ ವ್ಯಾಪ್ತಿಗೆ ಬರುತ್ತಾರೆ.

ಸಮಗ್ರ ಮತ್ತು ನಿಖರವಾದ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು, ಸಾಂಪ್ರದಾಯಿಕ ಮನೆ-ಮನೆ ಎಣಿಕೆ ಪ್ರಕ್ರಿಯೆಯನ್ನು ಉಳಿಸಿಕೊಂಡು ಮೊದಲ ಬಾರಿಗೆ ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು 2027 ರ ಜನಗಣತಿಯನ್ನು ನಡೆಸಲಾಗುತ್ತಿದೆ. ಕ್ಷೇತ್ರ ಭೇಟಿಗಳ ಸಮಯದಲ್ಲಿ, ಎಣಿಕೆದಾರರು ವಿಶೇಷ ಮೊಬೈಲ್ ತಂತ್ರಾಂಶದ ಮೂಲಕ ಡಿಜಿಟಲ್ ದತ್ತಾಂಶವನ್ನು ಸಂಗ್ರಹಿಸುತ್ತಿದ್ದಾರೆ. ಈ ಹಂತದಲ್ಲಿ, ವಸತಿ ಪರಿಸ್ಥಿತಿಗಳು, ಮನೆಯ ವಿವರಗಳು, ಲಭ್ಯವಿರುವ ಸೌಲಭ್ಯಗಳು ಮತ್ತು ಕುಟುಂಬಗಳು ಹೊಂದಿರುವ ಸ್ವತ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು 33 ಅಧಿಸೂಚಿತ ಪ್ರಶ್ನೆಗಳನ್ನು ಒಳಗೊಂಡ ರಚನಾತ್ಮಕ ಪ್ರಶ್ನಾವಳಿಯ ಮೂಲಕ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಿದ ದತ್ತಾಂಶವು ಯೋಜನೆ ಮತ್ತು ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಮುಖ ಆಧಾರವಾಗಿದೆ.

ಜನಗಣತಿ ಕಾಯ್ದೆ-1948ರ ಅಡಿಯಲ್ಲಿ ಸಂಗ್ರಹಿಸಿದ ಎಲ್ಲಾ ದತ್ತಾಂಶವು ಅತ್ಯಂತ ಗೌಪ್ಯವಾಗಿರುತ್ತದೆ ಮತ್ತು ಸಂಖ್ಯಾಶಾಸ್ತ್ರೀಯ ಉದ್ದೇಶಗಳು ಮತ್ತು ಅಭಿವೃದ್ಧಿ ಯೋಜನೆಗಾಗಿ ಮಾತ್ರ ಬಳಸಲಾಗುತ್ತದೆ. ಅಧಿಸೂಚಿತ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಿವಾಸಿಗಳು ಮನೆ ಪಟ್ಟಿ ಕಾರ್ಯದ ಸಮಯದಲ್ಲಿ ಎಣಿಕೆದಾರರಿಗೆ ಸಂಪೂರ್ಣ ಸಹಕಾರವನ್ನು ನೀಡುವಂತೆ ಮತ್ತು ಈ ಪ್ರಮುಖ ರಾಷ್ಟ್ರೀಯ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿನಂತಿಸಲಾಗಿದೆ.

 

*****


(ಪ್ರಕಟಣೆ ಐ.ಡಿ.: 2261922) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी