ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ವೆಚ್ಚ ಹಣಕಾಸು ಸಮಿತಿಯ ಉನ್ನತ ಮಟ್ಟದ ಸಭೆ ನಡೆಯಿತು


ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಚಟುವಟಿಕೆಗಳ ವಿವರವಾದ ಪರಾಮರ್ಶೆ

ಸಂಯೋಜಿತ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಮೂಲಕ, ನಾವು ರೈತರ ಆದಾಯವನ್ನು ಹೆಚ್ಚಿಸುತ್ತೇವೆ ಮತ್ತು ಭೂಮಿತಾಯಿಯನ್ನೂ ರಕ್ಷಿಸುತ್ತೇವೆ: ಕೇಂದ್ರ ಕೃಷಿ ಸಚಿವರು

ಭಾರತೀಯ ಕೃಷಿಯನ್ನು ಹೆಚ್ಚು ಉತ್ಪಾದಕ, ಕಡಿಮೆ ವೆಚ್ಚದ ಮತ್ತು ಲಾಭದಾಯಕವಾಗಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಕೃಷಿಯು ಹೆಚ್ಚಿನ ಜನಸಂಖ್ಯೆಯ ಜೀವನೋಪಾಯದ ಪ್ರಮುಖ ಮೂಲವಾಗಿದೆ ಮತ್ತು ಭಾರತೀಯ ಆರ್ಥಿಕತೆಯ ಪ್ರಬಲ ಸ್ತಂಭವಾಗಿದೆ: ಕೇಂದ್ರ ಕೃಷಿ ಸಚಿವರು

ಪ್ರಕಟಣಾ ದಿನಾಂಕ: 16 MAY 2026 6:00PM by PIB Bengaluru

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ವೆಚ್ಚ ಹಣಕಾಸು ಸಮಿತಿಗೆ (ಇ ಎಫ್‌ ಸಿ) ಸಂಬಂಧಿಸಿದ ಉನ್ನತ ಮಟ್ಟದ ಸಭೆಯು ಇಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ, ನವದೆಹಲಿಯ 12, ಸಫ್ದರ್‌ಜಂಗ್ ರಸ್ತೆಯಲ್ಲಿರುವ ಅವರ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ, ಕೇಂದ್ರ ಸಚಿವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಕಾರ್ಯವೈಖರಿ ಮತ್ತು ಚಟುವಟಿಕೆಗಳ ವಿವರವಾದ ಪರಾಮರ್ಶೆ ನಡೆಸಿದರು. ಈ ಸಂದರ್ಭದಲ್ಲಿ, ಐಸಿಎಆರ್ ಮಹಾನಿರ್ದೇಶಕರು ಮತ್ತು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ. ಎಂ. ಎಲ್. ಜಾಟ್ ಅವರು ದೇಶಾದ್ಯಂತ ಐಸಿಎಆರ್ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಬಗ್ಗೆ ಕೇಂದ್ರ ಸಚಿವರಿಗೆ ವಿವರವಾಗಿ ಮಾಹಿತಿ ನೀಡಿದರು.

ಮಂಡಳಿಯ ಭವಿಷ್ಯದ ಮಾರ್ಗಸೂಚಿಯ ಬಗ್ಗೆಯೂ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದ ಅವರು, ದೇಶಾದ್ಯಂತದ ಭಾರತೀಯ ಕೃಷಿ ಮತ್ತು ಕೃಷಿ ಸಮುದಾಯಗಳಿಗೆ ಗರಿಷ್ಠ ಪ್ರಯೋಜನವನ್ನು ಖಚಿತಪಡಿಸಲು ಮಂಡಳಿಯು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ವಿವರಿಸಿದರು.

ಸಭೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಕೃಷಿಯು ದೇಶದ ಬಹುದೊಡ್ಡ ಜನಸಂಖ್ಯೆಯ ಜೀವನೋಪಾಯದ ಪ್ರಾಥಮಿಕ ಮೂಲವಾಗಿದೆ ಮತ್ತು ಭಾರತೀಯ ಆರ್ಥಿಕತೆಗೆ ಬಲವಾದ ಅಡಿಪಾಯವನ್ನು ಒದಗಿಸುತ್ತದೆ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಭಾರತೀಯ ಕೃಷಿಯನ್ನು ಹೆಚ್ಚು ಉತ್ಪಾದಕ, ಕಡಿಮೆ ವೆಚ್ಚದ ಮತ್ತು ಲಾಭದಾಯಕ ವೃತ್ತಿಯನ್ನಾಗಿ ಮಾಡುವತ್ತ ಎಲ್ಲಾ ಪ್ರಯತ್ನಗಳು ಮತ್ತು ಶಕ್ತಿಯನ್ನು ವಿನಿಯೋಗಿಸಬೇಕು ಎಂದು ಅವರು ಹೇಳಿದರು.

ಸಂಯೋಜಿತ ಕೃಷಿಯ ವ್ಯಾಪಕ ಉತ್ತೇಜನ ಮತ್ತು ವಿಸ್ತರಣೆಗೆ ಕೇಂದ್ರ ಸಚಿವರು ವಿಶೇಷ ಒತ್ತು ನೀಡಿದರು ಮತ್ತು ಇದನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ರೈತ ಬಾಂಧವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಇದು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಬಲಪಡಿಸುತ್ತದೆ ಎಂದು ಅವರು ತಿಳಿಸಿದರು.

ವೈಜ್ಞಾನಿಕ ಕೃಷಿಯು ಇಂದಿನ ಅಗತ್ಯವಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಹವಾಮಾನ ವೈಪರೀತ್ಯದ ಪ್ರಭಾವವು ಈಗ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ರಾಜ್ಯದ ಕೃಷಿ-ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ, ರಾಜ್ಯಗಳ ಒಪ್ಪಿಗೆಯೊಂದಿಗೆ ರಾಜ್ಯವಾರು ಕೃಷಿ ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ವೇಗವಾಗಿ ಕೆಲಸ ಮಾಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಂಧ್ರಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ ಮತ್ತು ರಾಜಸ್ಥಾನದಂತಹ ರಾಜ್ಯಗಳ ವಿನಂತಿಯ ಮೇರೆಗೆ ಈ ದಿಸೆಯಲ್ಲಿ ಈಗಾಗಲೇ ಕೆಲಸ ನಡೆಯುತ್ತಿದೆ ಮತ್ತು ಈ ರಾಜ್ಯಗಳಿಗೆ ಸ್ವತಂತ್ರ ಕೃಷಿ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು ಎಂದು ಅಧಿಕಾರಿಗಳು ಕೇಂದ್ರ ಕೃಷಿ ಸಚಿವರಿಗೆ ಮಾಹಿತಿ ನೀಡಿದರು.

ಐಸಿಎಆರ್‌ ನ ಕ್ರಿಯಾ ಯೋಜನೆಗೆ ತೃಪ್ತಿ ವ್ಯಕ್ತಪಡಿಸಿದ ಕೇಂದ್ರ ಸಚಿವರು, ನಿಗದಿತ ಅವಧಿಗಿಂತ ಮುಂಚಿತವಾಗಿ ಗುರಿಗಳನ್ನು ಸಾಧಿಸುವಂತೆ ಹೆಚ್ಚಿನ ಶಕ್ತಿ ಮತ್ತು ಉತ್ಸಾಹದಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

*****

 


(ಪ್ರಕಟಣೆ ಐ.ಡಿ.: 2261813) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , हिन्दी , Marathi , Gujarati , Tamil