ರೈಲ್ವೇ ಸಚಿವಾಲಯ
azadi ka amrit mahotsav

ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ಮರುಅಭಿವೃದ್ಧಿಗೊಂಡ ರಾಜಸ್ಥಾನದ ಜೈಸಲ್ಮೇರ್, ಬುಂಡಿ, ಬಾರ್ಮೇರ್, ಮಂಡಲಗಢ ಮತ್ತು ಸೋಮೇಸರ್ ಸೇರಿದಂತೆ 15 ರೈಲು ನಿಲ್ದಾಣಗಳು ಪ್ರಯಾಣಿಕರಿಗೆ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುತ್ತಿವೆ


2 ಕಡೆಯಿಂದ ಪ್ರವೇಶ, ಮತ್ತೊಂದು ಪ್ಲಾಟ್‌ಫಾರ್ಮ್, 6 ಮೀಟರ್ ಅಗಲದ ಎರಡು ಮೇಲ್ಸೇತುವೆಗಳು ಮತ್ತು ಒಂಬತ್ತು ಲಿಫ್ಟ್‌ ಗಳೊಂದಿಗೆ ₹112 ಕೋಟಿ ವೆಚ್ಚದಲ್ಲಿ ಮರುಅಭಿವೃದ್ಧಿಗೊಳ್ಳುತ್ತಿದೆ ಅಲ್ವಾರ್ ರೈಲು ನಿಲ್ದಾಣ

ರಾಜಸ್ಥಾನ ವಾಸ್ತುಶಿಲ್ಪದ ಪರಂಪರೆಯನ್ನು ಆಧುನಿಕ ಮೂಲಸೌಕರ್ಯದೊಂದಿಗೆ ಸಮ್ಮಿಲನಗೊಳಿಸಿ, ಅಲ್ವಾರ್ ನಿಲ್ದಾಣದ ಮರುಅಭಿವೃದ್ಧಿ ಕಾರ್ಯವು ಅತ್ಯಂತ ವೇಗವಾಗಿ ಪ್ರಗತಿಯಲ್ಲಿದೆ: ಅಶ್ವಿನಿ ವೈಷ್ಣವ್

ಪ್ರಕಟಣಾ ದಿನಾಂಕ: 15 MAY 2026 6:00PM by PIB Bengaluru

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಅವರು ಇಂದು ವರ್ಚುವಲ್ ಮಾಧ್ಯಮದ ಮೂಲಕ ರಾಜಸ್ಥಾನದಲ್ಲಿ ₹400 ಕೋಟಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಜ್ಯ ಸಚಿವ ಶ್ರೀ ಸಂಜಯ್ ಶರ್ಮಾ ಅವರೊಂದಿಗೆ ಇತರ ಗಣ್ಯರು ಮತ್ತು ರೈಲ್ವೆಯ ಹಿರಿಯ ಅಧಿಕಾರಿಗಳು ಸಹ ವರ್ಚುವಲ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರೈಲ್ವೆ ಸಚಿವರು ಮಾತನಾಡಿ, 'ಅಮೃತ್ ಭಾರತ್ ನಿಲ್ದಾಣ' ಯೋಜನೆಯಡಿ ₹112 ಕೋಟಿ ವೆಚ್ಚದಲ್ಲಿ ಅಲ್ವಾರ್ ರೈಲು ನಿಲ್ದಾಣದ ಮರುಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಮುಖ ದೆಹಲಿ-ಜೈಪುರ ಮಾರ್ಗದಲ್ಲಿ ಆಯಕಟ್ಟಿನ ಸ್ಥಳದಲ್ಲಿರುವ ಅಲ್ವಾರ್ ನಿಲ್ದಾಣವು ಪ್ರತಿದಿನ ಸಾವಿರಾರು ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಪ್ರಮುಖ ಕೇಂದ್ರವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಗಳು, ವಿಶಾಲವಾದ ಪಾರ್ಕಿಂಗ್ ಸೌಲಭ್ಯಗಳು, ವ್ಯವಸ್ಥಿತ ಆಗಮನ ಮತ್ತು ನಿರ್ಗಮನ ಪ್ರದೇಶಗಳು ಹಾಗೂ ಆಧುನಿಕ ಪ್ರಯಾಣಿಕ ಸೌಕರ್ಯಗಳೊಂದಿಗೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಹೇಳಿದರು.

ಅಲ್ವಾರ್ ರೈಲು ನಿಲ್ದಾಣದ ಮರುಅಭಿವೃದ್ಧಿ ಕಾಮಗಾರಿ ಅತ್ಯಂತ ವೇಗವಾಗಿ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ನಂತರ ಈ ನಿಲ್ದಾಣವು ಅತ್ಯಾಧುನಿಕ ಮತ್ತು ಸುಂದರವಾದ ವಿನ್ಯಾಸದ ಸೌಲಭ್ಯವಾಗಿ ಹೊರಹೊಮ್ಮಲಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ರೈಲು ನಿಲ್ದಾಣಗಳು ನಗರಗಳನ್ನು ಜೋಡಿಸುವ ಕೊಂಡಿಗಳಾಗಿ ಕಾರ್ಯನಿರ್ವಹಿಸಬೇಕು ಎಂಬ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿತ್ವಕ್ಕೆ ಅನುಗುಣವಾಗಿ ಅಲ್ವಾರ್ ನಿಲ್ದಾಣದ ಮರುಅಭಿವೃದ್ಧಿಯನ್ನು ಯೋಜಿಸಲಾಗಿದೆ ಎಂದು ಅವರು ಹೇಳಿದರು. ನಗರ ಸಂಪರ್ಕವನ್ನು ಸುಧಾರಿಸಲು ನಿಲ್ದಾಣದ ಎರಡೂ ಕಡೆಗಳಲ್ಲಿ ಪ್ರವೇಶ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಿಲ್ದಾಣದ ಕಟ್ಟಡಗಳನ್ನು ರಾಜಸ್ಥಾನದ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಪರಂಪರೆಗೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ. ಆಧುನಿಕ ಪ್ಲಾಟ್‌ಫಾರ್ಮ್‌ ಗಳು, ಪಾದಚಾರಿ ಮೇಲ್ಸೇತುವೆಗಳು, ಪಾರ್ಕಿಂಗ್ ವ್ಯವಸ್ಥೆಗಳು ಮತ್ತು ಪ್ರಯಾಣಿಕರ ಸಂಚಾರ ಸೌಲಭ್ಯಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶ್ರೀ ವೈಷ್ಣವ್ ತಿಳಿಸಿದರು.

ಈ ಮರುಅಭಿವೃದ್ಧಿ ಯೋಜನೆಯಡಿ, ಪ್ರಯಾಣಿಕರು ನಿಲ್ದಾಣದ ಮುಖ್ಯ ಮತ್ತು ಎರಡನೇ ಪ್ರವೇಶ ದ್ವಾರಗಳೆರಡರಲ್ಲೂ ಸುಧಾರಿತ ಮತ್ತು ತಡೆರಹಿತ ಆಗಮನ ಹಾಗೂ ನಿರ್ಗಮನ ವ್ಯವಸ್ಥೆಗಳ ಲಾಭವನ್ನು ಪಡೆಯಲಿದ್ದಾರೆ. ಸುಮಾರು 16,000 ಚದರ ಮೀಟರ್ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ನಿಲ್ದಾಣದ ಸಂಕೀರ್ಣವು ಆಧುನಿಕ ಮೂಲಸೌಕರ್ಯ ಮತ್ತು ಪ್ರಯಾಣಿಕರ ಅಗತ್ಯತೆಗಳಿಗೆ ಪೂರಕವಾದ ಸೌಲಭ್ಯಗಳನ್ನು ಹೊಂದಿರಲಿದೆ. ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕಾಗಿ ಹೆಚ್ಚುವರಿ ಎತ್ತರದ ಪ್ಲಾಟ್‌ಫಾರ್ಮ್, 6 ಮೀಟರ್ ಅಗಲದ ಎರಡು ಪಾದಚಾರಿ ಮೇಲ್ಸೇತುವೆಗಳು ಮತ್ತು ಒಂಬತ್ತು ಆಧುನಿಕ ಲಿಫ್ಟ್‌ಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಯಾಣಿಕರ ಸುಲಭ ಸಂಚಾರಕ್ಕಾಗಿ ಖಾಸಗಿ ವಾಹನಗಳು, ಟ್ಯಾಕ್ಸಿಗಳು ಮತ್ತು ಆಟೋ ರಿಕ್ಷಾಗಳಿಗಾಗಿ ಪ್ರತ್ಯೇಕ ಪಿಕ್-ಅಪ್ (ಹತ್ತಿಸಿಕೊಳ್ಳುವ) ಮತ್ತು ಡ್ರಾಪ್-ಆಫ್ (ಇಳಿಸುವ) ವಲಯಗಳನ್ನು ನಿರ್ಮಿಸಲಾಗುತ್ತಿದೆ. ಸರಿಸುಮಾರು 4,500 ಚದರ ಮೀಟರ್‌ ಗಳಷ್ಟು ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಪಾರ್ಕಿಂಗ್ ಸೌಲಭ್ಯವು ಸಂಪರ್ಕವನ್ನು ಮತ್ತಷ್ಟು ಸುಧಾರಿಸಲಿದೆ ಮತ್ತು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಇದರ ಜೊತೆಗೆ, ವಾಹನಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನಿಲ್ದಾಣದ ಹೊರ ವಲಯಕ್ಕೆ ಸಮಗ್ರ ಸಂಚಾರ ಪರಿಚಲನೆ ಯೋಜನೆಯನ್ನು ಸಹ ಸಿದ್ಧಪಡಿಸಲಾಗಿದೆ. ಮರುಅಭಿವೃದ್ಧಿ ಯೋಜನೆಯು ವಾಣಿಜ್ಯ ಚಟುವಟಿಕೆಗಳಿಗಾಗಿ ಸುಮಾರು 1,900 ಚದರ ಮೀಟರ್ ಜಾಗವನ್ನು ಅಭಿವೃದ್ಧಿಪಡಿಸುವುದನ್ನು ಸಹ ಒಳಗೊಂಡಿದೆ. ವಿಶ್ವದರ್ಜೆಯ ಪ್ರಯಾಣಿಕ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ಈ ಯೋಜನೆಯು ಈ ಪ್ರದೇಶದಲ್ಲಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯೋಗದ ಉದಯೋನ್ಮುಖ ಕೇಂದ್ರವಾಗಿ ಅಲ್ವಾರ್‌ನ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಅಲ್ವಾರ್ ಪ್ರದೇಶದ ಮೂರು ನಿಲ್ದಾಣಗಳಾದ ಗೋವಿಂದ್ ಗಢ್, ರಾಜಗಢ್ ಮತ್ತು ಖೈರ್ತಾಲ್ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ರಾಜಸ್ಥಾನದಾದ್ಯಂತ 85 ನಿಲ್ದಾಣಗಳಲ್ಲಿ ಮರುಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಪೈಕಿ 15 ನಿಲ್ದಾಣಗಳ ಕೆಲಸ ಇದುವರೆಗೆ ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಂಡಿರುವ ನಿಲ್ದಾಣಗಳಲ್ಲಿ ಬಾರ್ಮೇರ್, ಬುಂಡಿ, ದೌಸಾ, ದೀಗ್, ದೇಶ್‌ನೋಕ್, ಫತೇಪುರ್ ಶೇಖಾವತಿ, ಗಂಗಾಪುರ ಸಿಟಿ, ಗೋಗಾಮೇಡಿ, ಗೋವಿಂದ್ ಗಢ್, ರಾಜಗಢ್, ಖೈರ್ತಾಲ್, ಜೈಸಲ್ಮೇರ್, ಮಂಡಲಗಢ, ಮಂಡಾವರ್ ಮಹ್ವಾ ರೋಡ್ ಮತ್ತು ಸೋಮೇಸರ್ ಸೇರಿವೆ ಎಂದು ಶ್ರೀ ವೈಷ್ಣವ್ ತಿಳಿಸಿದರು. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ದೇಶಾದ್ಯಂತ 1,340 ನಿಲ್ದಾಣಗಳನ್ನು ಅಭಿವೃದ್ಧಿಗಾಗಿ ಗುರುತಿಸಲಾಗಿದೆ ಎಂದು ರೈಲ್ವೆ ಸಚಿವರು ಹೇಳಿದರು.

ರಾಜಸ್ಥಾನದಲ್ಲಿ ಪ್ರಸ್ತುತ ಐದು ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ಅಮೃತ್ ಭಾರತ್ ಎಕ್ಸ್‌ ಪ್ರೆಸ್ ರೈಲನ್ನು ಸಹ ಪರಿಚಯಿಸಲಾಗಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಕಳೆದ 1 ವರ್ಷದಲ್ಲಿ ರಾಜಸ್ಥಾನಕ್ಕೆ ಹಲವಾರು ಹೊಸ ರೈಲು ಸೇವೆಗಳನ್ನು ಪ್ರಾರಂಭಿಸಲಾಗಿದೆ. ಇವುಗಳಲ್ಲಿ ದೆಹಲಿಯಿಂದ ಜೋಧಪುರ ಮತ್ತು ದೆಹಲಿಯಿಂದ ಬಿಕಾನೇರ್‌ ಗೆ ವಂದೇ ಭಾರತ್ ಎಕ್ಸ್‌ ಪ್ರೆಸ್ ಸೇವೆಗಳು, ಉದಯಪುರ ಸಿಟಿಯಿಂದ ಅಹಮದಾಬಾದ್ ವಂದೇ ಭಾರತ್ ಎಕ್ಸ್‌ ಪ್ರೆಸ್, ಜೈಸಲ್ಮೇರ್ ಅನ್ನು ದೆಹಲಿಯೊಂದಿಗೆ ಸಂಪರ್ಕಿಸುವ ಸ್ವರ್ಣ ನಗರಿ ಎಕ್ಸ್‌ ಪ್ರೆಸ್, ಹೈದರಾಬಾದ್-ಜೋಧಪುರ ಭಗತ್ ಕಿ ಕೋಠಿ ಎಕ್ಸ್‌ ಪ್ರೆಸ್ ಮತ್ತು ಪುಣೆ-ಜೋಧಪುರ ಎಕ್ಸ್‌ ಪ್ರೆಸ್ ಸೇರಿವೆ. ಇತ್ತೀಚಿನ ವರ್ಷಗಳಲ್ಲಿ ರಾಜಸ್ಥಾನಕ್ಕೆ ಒಟ್ಟು 46 ಹೊಸ ರೈಲುಗಳನ್ನು ಒದಗಿಸಲಾಗಿದ್ದು, ಇದು ರಾಜ್ಯದಾದ್ಯಂತ ಸಂಪರ್ಕ ಮತ್ತು ಪ್ರಯಾಣಿಕರ ಅನುಕೂಲವನ್ನು ಗಮನಾರ್ಹವಾಗಿ ಸುಧಾರಿಸಿದೆ ಎಂದು ಅವರು ಹೇಳಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸುಮಾರು ₹₹682 ಕೋಟಿ ಇದ್ದ ರಾಜಸ್ಥಾನದ ರೈಲ್ವೆ ಬಜೆಟ್ ಹಂಚಿಕೆಯನ್ನು ಪ್ರಸ್ತುತ ಸರ್ಕಾರದ ಅವಧಿಯಲ್ಲಿ ₹10,228 ಕೋಟಿಗೆ ಹೆಚ್ಚಿಸಲಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದರು.

ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯಗಳ ಬೆಳವಣಿಗೆಯನ್ನು ಎತ್ತಿ ತೋರಿಸಿದ ಶ್ರೀ ವೈಷ್ಣವ್, 2014 ರಿಂದ ರಾಜಸ್ಥಾನದಲ್ಲಿ ಸುಮಾರು 3,900 ಕಿಲೋಮೀಟರ್ ರೈಲು ಹಳಿಗಳನ್ನು ಹಾಕಲಾಗಿದೆ ಎಂದರು. ಮಾರ್ವಾರ್ ಮುಂಡ್ವಾ, ಖೇಮ್ಲಿ, ಭೂಪಾಲ್ ಸಾಗರ್, ಸೋನು, ಹನ್ವಂತ್, ಸುಂಡ್ಲಾಕ್, ಮಂಡಲಗಢ, ನ್ಯೂ ಸರಧಾನಾ, ಹಿರ್ನೋಡಾ ಮತ್ತು ಕೈರ್ಲಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹತ್ತು ಗತಿ ಶಕ್ತಿ ಕಾರ್ಗೋ (ಸರಕು) ಟರ್ಮಿನಲ್‌ ಗಳನ್ನು ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ. ಜೋಗಿ ಮಗ್ರಾ, ಲನೇಲಾ, ಧಂಕ್ಯಾ, ಕೋಟಾ ಜಂಕ್ಷನ್, ನವಲಗಢ ಮತ್ತು ಬಿರಾಧ್ವಲ್‌ ನಲ್ಲಿ ಇನ್ನೂ ಆರು ಸರಕು ಟರ್ಮಿನಲ್‌ ಗಳು ನಿರ್ಮಾಣ ಹಂತದಲ್ಲಿದ್ದು, ಹೆಚ್ಚುವರಿ ಎಂಟು ಟರ್ಮಿನಲ್‌ ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಸಿಮೆಂಟ್ ಮತ್ತು ಜವಳಿಯಿಂದ ಹಿಡಿದು ಕರಕುಶಲ ವಸ್ತುಗಳು, ಸೆಮಿಕಂಡಕ್ಟರ್‌ ಗಳು ಮತ್ತು ಎಂಜಿನಿಯರಿಂಗ್ ಉತ್ಪನ್ನಗಳವರೆಗಿನ ವಿವಿಧ ವಲಯಗಳಿಗೆ ದೇಶಾದ್ಯಂತದ ಬಂದರುಗಳಿಗೆ ತಡೆರಹಿತ ಸರಕು ಸಾಗಣೆ ಸಂಪರ್ಕವನ್ನು ಖಚಿತಪಡಿಸುವ ಮೂಲಕ ರಾಜಸ್ಥಾನದ ಕೈಗಾರಿಕೆಗಳನ್ನು ಬೆಂಬಲಿಸಲು ಭಾರತೀಯ ರೈಲ್ವೆ ಸಂಪೂರ್ಣ ಬದ್ಧವಾಗಿದೆ ಎಂದು ರೈಲ್ವೆ ಸಚಿವರು ಹೇಳಿದರು.

ರಾಜಸ್ಥಾನದಾದ್ಯಂತ ಹಲವಾರು ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳು ಏಕಕಾಲದಲ್ಲಿ ಪ್ರಗತಿಯಲ್ಲಿವೆ ಎಂದು ಶ್ರೀ ವೈಷ್ಣವ್ ಹೇಳಿದರು. ಇವುಗಳಲ್ಲಿ ಆಗ್ರಾ-ಬಾಂದಿಕುಯಿ, ಅಜ್ಮೀರ್-ಚಿತ್ತೋರಗಢ, ಬಿಕಾನೇರ್-ಲಾಲಗಢ, ಚುರು-ಸಾದುಲ್ಪುರ ಮತ್ತು ಲುನಿ-ಭಿಲ್ಡಿ ವಿಭಾಗಗಳಲ್ಲಿ ಹಳಿಗಳ ದ್ವಿಗುಣಗೊಳಿಸುವ ಕಾಮಗಾರಿಗಳು; ಧೋಲ್ಪುರ್-ಸಿರ್ಮಥುರಾ-ಗಂಗಾಪುರ ಸಿಟಿ ಮತ್ತು ದೇವಗಢ ಮದಾರಿಯಾ-ನಾಥದ್ವಾರ ಸೇರಿದಂತೆ ಗೇಜ್ ಪರಿವರ್ತನೆ ಯೋಜನೆಗಳು; ಮಥುರಾ ಮತ್ತು ಝಾನ್ಸಿ ನಡುವಿನ ಮೂರನೇ ಮಾರ್ಗ; ಮಥುರಾ ಮತ್ತು ನಾಗ್ಡಾ ನಡುವೆ ಮೂರನೇ ಮತ್ತು ನಾಲ್ಕನೇ ಮಾರ್ಗಗಳು; ಮತ್ತು ನೀಮಚ್-ಬಾಡಿ ಸಾದ್ರಿ ಹಾಗೂ ಪುಷ್ಕರ್-ಮೇರ್ತಾ ಸಿಟಿ ಯಂತಹ ಹೊಸ ಮಾರ್ಗಗಳು ಸೇರಿವೆ ಎಂದು ಅವರು ಹೇಳಿದರು.

ರೇವಾರಿ-ಖಾತುವಾಸ್ ಮತ್ತು ರಿಂಗಸ್-ಸಿಕಾರ್ ವಿಭಾಗದಲ್ಲಿ ದ್ವಿಗುಣಗೊಳಿಸುವ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದು ರೈಲ್ವೆ ಸಚಿವರು ತಿಳಿಸಿದರು. ಶಿಯೋಪುರ್ ಕಲಾನ್-ಕೋಟಾ ಹೊಸ ಮಾರ್ಗ ಮತ್ತು ತರಂಗಾ ಹಿಲ್-ಅಬು ರೋಡ್ ಹೊಸ ಮಾರ್ಗ ಯೋಜನೆಗಳು ಸಹ ಮುನ್ನಡೆಯುತ್ತಿವೆ. ಇದರ ಜೊತೆಗೆ, ಉಮ್ರಾ-ದೇಬಾರಿ ದ್ವಿಗುಣಗೊಳಿಸುವ ಕಾಮಗಾರಿ ನಡೆಯುತ್ತಿದ್ದು, ರೈಲ್ವೆ ಅಭಿವೃದ್ಧಿಯು ರಾಜಸ್ಥಾನದ ಎಲ್ಲಾ ಪ್ರದೇಶಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಅಲ್ವಾರ್ ಪ್ರದೇಶದಲ್ಲಿ ರೈಲ್ವೆ ಸಂಪರ್ಕವನ್ನು ಬಲಪಡಿಸಿದ್ದಕ್ಕಾಗಿ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಅರ್ಪಿಸಿದ ಶ್ರೀ ಭೂಪೇಂದರ್ ಯಾದವ್, ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ಸೇವೆಗಳನ್ನು ಪ್ರಾರಂಭಿಸಲಾಗಿದೆ ಅಥವಾ ವಿಸ್ತರಿಸಲಾಗಿದೆ ಎಂದು ಹೇಳಿದರು. ಅಲ್ವಾರ್ ರೈಲು ನಿಲ್ದಾಣದ ಮರುಅಭಿವೃದ್ಧಿಯು ರಾಜಸ್ಥಾನದ ಭವ್ಯತೆ ಮತ್ತು ವಾಸ್ತುಶಿಲ್ಪದ ಗುರುತನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಯಾದವ್ ಹೇಳಿದರು. ಆಧುನೀಕೃತ ಅಲ್ವಾರ್ ನಿಲ್ದಾಣವು ರಾಜ್ಯದ ಅತ್ಯುತ್ತಮ ರೈಲು ನಿಲ್ದಾಣಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಈ ಪ್ರದೇಶದಲ್ಲಿ ಹಲವಾರು ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆ ಯೋಜನೆಗಳನ್ನು ಮಂಜೂರು ಮಾಡಿ ಪೂರ್ಣಗೊಳಿಸಿದ್ದಕ್ಕಾಗಿ ಅವರು ರೈಲ್ವೆ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿದರು. ಈ ಯೋಜನೆಯು ಸಂಪರ್ಕವನ್ನು ಸುಧಾರಿಸುವ ಮತ್ತು ಸಾರಿಗೆಯನ್ನು ಸುಲಭಗೊಳಿಸುವ ಮೂಲಕ ಖೈರ್ತಾಲ್, ಕಿಶನಗಢ್ ಬಾಸ್, ಬೆಹ್ರೋರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ರಾಜಸ್ಥಾನವು ದೆಹಲಿಗೆ ಹತ್ತಿರ ಇರುವುದರಿಂದ ಪ್ರಯೋಜನ ಪಡೆಯುತ್ತಿದ್ದು, ಇದು ರಾಜ್ಯದಲ್ಲಿ ಕೈಗಾರಿಕಾ ಮತ್ತು ಸಾರಿಗೆ ಸಂಪರ್ಕವನ್ನು ಬಲಪಡಿಸುತ್ತಿದೆ ಎಂದು ಶ್ರೀ ಭಜನ್ ಲಾಲ್ ಶರ್ಮಾ ಹೇಳಿದರು. ಭಿವಾಡಿ, ನೀಮ್ರಾನಾ ಮತ್ತು ಖುಷ್ಖೇರಾದಂತಹ ಕೈಗಾರಿಕಾ ಕೇಂದ್ರಗಳನ್ನು ಸುಧಾರಿತ ರೈಲ್ವೆ ಮತ್ತು ಸಾರಿಗೆ ಮೂಲಸೌಕರ್ಯಗಳ ಮೂಲಕ ಸಂಪರ್ಕಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಪ್ರದೇಶಕ್ಕಾಗಿ ಎರಡು ಪ್ರಮುಖ ರೈಲು ಸಂಪರ್ಕ ಕಾರಿಡಾರ್‌ ಗಳನ್ನು ಯೋಜಿಸಲಾಗುತ್ತಿದ್ದು, ಇದರಲ್ಲಿ ಅಲ್ವಾರ್ ಕಡೆಗೆ ಒಂದು ರೈಲು ಮಾರ್ಗ ಮತ್ತು ಬೆಹ್ರೋರ್ ಕಡೆಗೆ ಒಂದು ಆರ್‌ ಆರ್‌ ಟಿ ಎಸ್ (ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ) ಕಾರಿಡಾರ್ ಸೇರಿದೆ. ಈ ಯೋಜನೆಗಳು ಸಾಂಪ್ರದಾಯಿಕ ರೈಲ್ವೆ ಮೂಲಸೌಕರ್ಯ ಮತ್ತು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳೆರಡರೊಂದಿಗಿನ ಸಂಯೋಜನೆಯನ್ನು ಸುಧಾರಿಸಲಿದ್ದು, ಅವುಗಳ ಅನುಷ್ಠಾನವನ್ನು ವೇಗಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಭಾರತೀಯ ರೈಲ್ವೆಯು ಪ್ರಗತಿ, ವಿಶ್ವಾಸ ಮತ್ತು ಅಭಿವೃದ್ಧಿ ಹೊಂದಿದ ನವ ಭಾರತದ ಸಂಕೇತವಾಗಿ ಮುನ್ನಡೆಯುತ್ತಿದೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ಸುರಕ್ಷಿತ, ಅನುಕೂಲಕರ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರ ಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ನಿರಂತರವಾಗಿ ಶ್ರಮಿಸುತ್ತಿದೆ.

 

*****

 


(ಪ್ರಕಟಣೆ ಐ.ಡಿ.: 2261630) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil