ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಮತ್ತು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಕೃಷಿ ಮತ್ತು ಆರೋಗ್ಯವನ್ನು ಬೆಸೆಯುವ ಹೊಸ ಉಪಕ್ರಮ ‘ಸೇಹತ್ ಮಿಷನ್’ ಗೆ ಚಾಲನೆ


‘ಸೇಹತ್ ಮಿಷನ್’ ಸಕ್ರಿಯ ಆರೋಗ್ಯ ರಕ್ಷಣಾ ವ್ಯವಸ್ಥೆಯತ್ತ ಒಂದು ಪ್ರಮುಖ ಬದಲಾವಣೆಯನ್ನು ಸೂಚಿಸುತ್ತದೆ: ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ

ಕೃಷಿ ಮತ್ತು ಆರೋಗ್ಯದ ಸಮಾಗಮವು ವೈಜ್ಞಾನಿಕ, ಕೈಗೆಟುಕುವ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ನೀಡಲಿದೆ: ಶ್ರೀ ಜೆ.ಪಿ. ನಡ್ಡಾ

ಉತ್ತಮ ಆರೋಗ್ಯಕ್ಕಾಗಿ ಜನರು ಏನನ್ನು ಸೇವಿಸಬೇಕು ಎಂಬುದನ್ನು ಬೆಳೆಯುವತ್ತ ಭಾರತ ಈಗ ಗಮನಹರಿಸಬೇಕು: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಪೌಷ್ಟಿಕಾಂಶ, ರೈತರ ಸುರಕ್ಷತೆ ಮತ್ತು ರೋಗ ನಿಯಂತ್ರಣಕ್ಕೆ ‘ಸೇಹತ್ ಮಿಷನ್’ ಬಲವಾದ ಅಡಿಪಾಯವಾಗಲಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಐಸಿಎಆರ್ -ಐಸಿಎಂಆರ್‌ ಪಾಲುದಾರಿಕೆಯು ‘ಆರೋಗ್ಯಕರ ಆಹಾರ, ಆರೋಗ್ಯಕರ ಕೃಷಿಭೂಮಿ ಮತ್ತು ಆರೋಗ್ಯಕರ ಭಾರತ’ದತ್ತ ಹೊಸ ಹಾದಿಯನ್ನು ತೆರೆಯುತ್ತದೆ

ಪ್ರಕಟಣಾ ದಿನಾಂಕ: 11 MAY 2026 8:35PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಸೋಮವಾರ ದೆಹಲಿಯಲ್ಲಿ ‘ಸೇಹತ್ ಮಿಷನ್’ ಗೆ ಚಾಲನೆ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಈ ಪ್ರಮುಖ ರಾಷ್ಟ್ರೀಯ ಉಪಕ್ರಮವು ವೈಜ್ಞಾನಿಕ ಸಹಯೋಗದ ಮೂಲಕ ಕೃಷಿ, ಪೌಷ್ಟಿಕಾಂಶ ಮತ್ತು ಸಾರ್ವಜನಿಕ ಆರೋಗ್ಯವನ್ನು ಬೆಸೆಯುವ ಗುರಿಯನ್ನು ಹೊಂದಿದೆ. ‘ಆರೋಗ್ಯಕರ ಆಹಾರ, ಆರೋಗ್ಯಕರ ಕೃಷಿ ಭೂಮಿ ಮತ್ತು ಆರೋಗ್ಯಕರ ಭಾರತ’ ನಿರ್ಮಾಣದ ಉದ್ದೇಶದಿಂದ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ (ಐಸಿಎಂಆರ್) ಜಂಟಿಯಾಗಿ ಈ ಮಿಷನ್ ಅನ್ನು ಪ್ರಾರಂಭಿಸಿವೆ. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಭಗೀರಥ್ ಚೌಧರಿ, ಐಸಿಎಂಆರ್ ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ಮತ್ತು ಐಸಿಎಆರ್ ಮಹಾನಿರ್ದೇಶಕ ಡಾ. ಎಂ.ಎಲ್. ಜಾಟ್ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು, ‘ಸೇಹತ್ ಮಿಷನ್’ ಭಾರತದ ನೀತಿ ನಿರೂಪಣೆಯಲ್ಲಿನ ದೊಡ್ಡ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಸರ್ಕಾರವು ಈಗ ಕೇವಲ ಚಿಕಿತ್ಸೆಯ ಮೇಲೆ ಮಾತ್ರವಲ್ಲದೆ ರೋಗ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ನಿರಂತರ ಆರೈಕೆಯ ಮೇಲೆ ಗಮನಹರಿಸುತ್ತಿದೆ ಎಂದರು. ಭಾರತವು ಈಗ ರೋಗ ಬಂದ ಮೇಲೆ ಪ್ರತಿಕ್ರಿಯಿಸುವ ಬದಲು, ಮುನ್ನೆಚ್ಚರಿಕೆ ವಹಿಸುವ ಸಕ್ರಿಯ ಆರೋಗ್ಯ ರಕ್ಷಣಾ ವ್ಯವಸ್ಥೆಯತ್ತ ಸಾಗುತ್ತಿದೆ ಎಂಬುದಕ್ಕೆ ಈ ಉಪಕ್ರಮ ಸಾಕ್ಷಿಯಾಗಿದೆ ಎಂದರು.

ದಶಕಗಳಿಂದ ಕೃಷಿ ಮತ್ತು ಆರೋಗ್ಯ ಸಂಸ್ಥೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು, ಆದರೆ ಆದರೆ ಐಸಿಎಆರ್ ಮತ್ತು ಐಸಿಎಂಆರ್ ಒಗ್ಗೂಡಿರುವುದು ವಿಜ್ಞಾನ ಮತ್ತು ಸಾಕ್ಷ್ಯಾಧಾರಿತ ಪರಿಹಾರಗಳ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದು ಶ್ರೀ ನಡ್ಡಾ ಹೇಳಿದರು. ಅಪೌಷ್ಟಿಕತೆ ಮತ್ತು ವೇಗವಾಗಿ ಹೆಚ್ಚುತ್ತಿರುವ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಕ್ಯಾನ್ಸರ್‌ ನಂತಹ ಅಸಾಂಕ್ರಾಮಿಕ ರೋಗಗಳನ್ನು ಎದುರಿಸುವಲ್ಲಿ ಈ ಮಿಷನ್ ಪ್ರಮುಖ ಪಾತ್ರ ವಹಿಸಲಿದೆ. ಭಾರತವು ತನ್ನದೇ ಆದ ವೈಜ್ಞಾನಿಕ ಸಂಶೋಧನೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ದೇಶೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ತಿಳಿಸಿದರು. “ಕಡಿಮೆ ವೆಚ್ಚದ, ಉತ್ತಮ ಗುಣಮಟ್ಟದ ವೈಜ್ಞಾನಿಕ ಪರಿಹಾರಗಳು ದೇಶಕ್ಕೆ ಅತ್ಯಂತ ಉಪಯುಕ್ತವಾಗಲಿವೆ ಮತ್ತು ಐಸಿಎಂಆರ್ ಈ ನಿಟ್ಟಿನಲ್ಲಿ ಕೆಲಸ ಮಾಡಲು ಸಂಪೂರ್ಣ ಬದ್ಧವಾಗಿದೆ” ಎಂದು ಅವರು ಹೇಳಿದರು.

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ‘ಸೇಹತ್ ಮಿಷನ್’ ಚಾಲನೆಯನ್ನು ದೇಶದ ಐತಿಹಾಸಿಕ ಮತ್ತು ಅಭೂತಪೂರ್ವ ಹೆಜ್ಜೆ ಎಂದು ಬಣ್ಣಿಸಿದರು. ಇದು ಕೃಷಿ, ಪೌಷ್ಟಿಕಾಂಶ ಮತ್ತು ಆರೋಗ್ಯ ರಕ್ಷಣೆಯನ್ನು ಸಂಯೋಜಿಸುವ ಮೂಲಕ ಆರೋಗ್ಯಕರ ಭಾರತ ನಿರ್ಮಾಣಕ್ಕೆ ಬಲವಾದ ಚೌಕಟ್ಟನ್ನು ಸ್ಥಾಪಿಸುತ್ತದೆ ಎಂದರು.

ನಮ್ಮ ಭಾರತೀಯ ಸಂಪ್ರದಾಯವು ಯಾವಾಗಲೂ ಆರೋಗ್ಯಕರ ದೇಹವನ್ನು ಸುಖದ ಮೂಲವೆಂದು ಪರಿಗಣಿಸಿದೆ ಮತ್ತು ಉತ್ತಮ ಆರೋಗ್ಯವು ಮೂಲಭೂತವಾಗಿ ಸರಿಯಾದ ಆಹಾರದ ಮೇಲೆ ಅವಲಂಬಿತವಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಭಾರತವು ಈಗ ಕೇವಲ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯಿಂದ ಆಚೆ ಹೋಗಿ, ಪೌಷ್ಟಿಕಾಂಶವನ್ನು ಒದಗಿಸುವ, ರೋಗಗಳಿಂದ ರಕ್ಷಿಸುವ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಆಹಾರವನ್ನು ಉತ್ಪಾದಿಸುವತ್ತ ಗಮನಹರಿಸಬೇಕು ಎಂದು ಅವರು ಒತ್ತಿ ಹೇಳಿದರು.

ಭಾರತೀಯ ದಾರ್ಶನಿಕ ತತ್ವಗಳಾದ “ಹಿತಭುಕ್, ಮಿತಭುಕ್ ಮತ್ತು ಋತುಭುಕ್” (ಹಿತವಾದ, ಮಿತವಾದ ಮತ್ತು ಕಾಲೋಚಿತ ಆಹಾರ) ಇಂದಿಗೂ ಪ್ರಸ್ತುತವಾಗಿವೆ, ಏಕೆಂದರೆ ಇವೇ ಆರೋಗ್ಯದ ನಿಜವಾದ ಅಡಿಪಾಯ ಎಂದರು. “ಜನರು ಏನನ್ನು ತಿನ್ನಬೇಕು” ಎಂಬ ಬಗ್ಗೆ ಮಾತ್ರವಲ್ಲದೆ, “ದೇಶವು ಏನನ್ನು ಬೆಳೆಯಬೇಕು” ಎಂಬುದರ ಬಗ್ಗೆಯೂ ಗಂಭೀರವಾಗಿ ಆಲೋಚಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.

ಶ್ರೀ ಚೌಹಾಣ್ ಅವರ ಪ್ರಕಾರ, ಹೊಲಗಳು, ಆಹಾರದ ತಟ್ಟೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಸಂಪರ್ಕಿಸುವ ವೈಜ್ಞಾನಿಕ ಸರಪಳಿಯನ್ನು ಸೃಷ್ಟಿಸಲು ಐಸಿಎಆರ್ ಮತ್ತು ಐಸಿಎಂಆರ್ ಕೈಜೋಡಿಸಿವೆ. ಈ ಮಿಷನ್ ಜೈವಿಕ-ಬಲವರ್ಧಿತ ಬೆಳೆಗಳು, ಪೌಷ್ಟಿಕಾಂಶ ಭರಿತ ಆಹಾರ ಉತ್ಪನ್ನಗಳು, ಸಮಗ್ರ ಕೃಷಿ ಪದ್ಧತಿಗಳು, ರೈತರ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳು ಹಾಗೂ ಜೀವನಶೈಲಿ ರೋಗಗಳಿಗೆ ಪಥ್ಯದ ಪರಿಹಾರಗಳ ಮೇಲೆ ಗಮನಹರಿಸಲಿದೆ.

ಭಾರತವು ಇಂದು ಸಾಕಷ್ಟು ಆಹಾರಧಾನ್ಯ ಉತ್ಪಾದನೆಯನ್ನು ಹೊಂದಿದೆ, ಆದರೆ ಮುಂದಿನ ಗುರಿ ಪೌಷ್ಟಿಕಾಂಶಯುಕ್ತ ಕೃಷಿ ಉತ್ಪಾದನೆಯಾಗಬೇಕು. ಸತು, ಕಬ್ಬಿಣ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೆಳೆಗಳ ಜೊತೆಗೆ ಸಾಂಪ್ರದಾಯಿಕ ಧಾನ್ಯಗಳಾದ ಆರಕ, ಸಾಮೆ, ಜೋಳ, ರಾಗಿ ಮತ್ತು ಸಜ್ಜೆಯನ್ನು ಉತ್ತೇಜಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಸಮಗ್ರ ಕೃಷಿಯನ್ನು ಕೇವಲ ರೈತರ ಆದಾಯ ಹೆಚ್ಚಿಸುವ ಸಾಧನವಾಗಿ ಮಾತ್ರವಲ್ಲದೆ, ಕುಟುಂಬದ ಪೌಷ್ಟಿಕಾಂಶವನ್ನು ಬಲಪಡಿಸುವ ಮಾರ್ಗವಾಗಿಯೂ ನೋಡಬೇಕು ಎಂದು ಅವರು ಹೇಳಿದರು. ಕೃಷಿಯೊಂದಿಗೆ ಹಣ್ಣು, ತರಕಾರಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಜೇನುಸಾಕಣೆಯನ್ನು ಸಂಯೋಜಿಸುವುದರಿಂದ ಗ್ರಾಮೀಣ ಕುಟುಂಬಗಳಿಗೆ ಸಮತೋಲಿತ ಪೌಷ್ಟಿಕಾಂಶ ದೊರೆಯುತ್ತದೆ. ಕೀಟನಾಶಕಗಳು ಮತ್ತು ರಾಸಾಯನಿಕಗಳ ಅಸಮತೋಲಿತ ಬಳಕೆಯಿಂದ ರೈತರಿಗೆ ಉಂಟಾಗುವ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು ವೈಜ್ಞಾನಿಕ ಮಧ್ಯಸ್ಥಿಕೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳು ಮಿಷನ್‌ ನ ಪ್ರಮುಖ ಭಾಗವಾಗಿವೆ ಎಂದರು.

ಸರಿಯಾದ ಆಹಾರ ಪದ್ಧತಿ ಮತ್ತು ಸೂಕ್ತ ಬೆಳೆ ಆಯ್ಕೆಯ ಬಗ್ಗೆ ವೈಜ್ಞಾನಿಕವಾಗಿ ಕೆಲಸ ಮಾಡಿದರೆ, ಆಹಾರವೇ ಔಷಧಿಯಾಗಿ ಕೆಲಸ ಮಾಡಬಲ್ಲದು ಎಂದು ಶ್ರೀ ಚೌಹಾಣ್ ಹೇಳಿದರು. ‘ಸೇಹತ್ ಮಿಷನ್’ ನಿಗದಿತ ಕಾಲಮಿತಿಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಲಿದ್ದು, ದೇಶದ ಸಾರ್ವಜನಿಕ ಆರೋಗ್ಯ ಸುಧಾರಣೆಯಲ್ಲಿ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಮತ್ತು ವೈದ್ಯಕೀಯ ಸಂಶೋಧನಾ ವ್ಯವಸ್ಥೆಗಳ ನಡುವೆ ಬಲವಾದ ಸಾಂಸ್ಥಿಕ ಸಮನ್ವಯವನ್ನು ಸ್ಥಾಪಿಸುವುದು ಈ ಮಿಷನ್‌ ನ ಉದ್ದೇಶವಾಗಿದೆ. ಇದು ಪೌಷ್ಟಿಕಾಂಶದ ಗುಣಮಟ್ಟ ಸುಧಾರಣೆ, ಸೂಕ್ಷ್ಮ ಪೋಷಕಾಂಶಗಳ ಕೊರತೆ ನೀಗಿಸುವುದು, ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ಸುಸ್ಥಿರ ಆಹಾರ ವ್ಯವಸ್ಥೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಈ ಉಪಕ್ರಮದಿಂದ ನಿರೀಕ್ಷಿಸಲಾದ ಪ್ರಮುಖ ಫಲಿತಾಂಶಗಳೆಂದರೆ: ಪೌಷ್ಟಿಕಾಂಶದ ಗುಣಮಟ್ಟದಲ್ಲಿ ಸುಧಾರಣೆ, ‘ಪರೋಕ್ಷ ಹಸಿವು’ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸುವುದು, ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ರೈತರ ಉತ್ತಮ ಆರೋಗ್ಯ ಮತ್ತು ಸುರಕ್ಷತೆ, ಸುಸ್ಥಿರ ಆಹಾರ ವ್ಯವಸ್ಥೆಗಳ ಅಭಿವೃದ್ಧಿ ಹಾಗೂ ವಿಜ್ಞಾನ ಆಧಾರಿತ ನೀತಿಗಳಿಗೆ ಬಲವಾದ ಬೆಂಬಲ ನೀಡುವುದು. ಭಾರತದಲ್ಲಿನ ಆಹಾರ ಪದ್ಧತಿ, ಪೌಷ್ಟಿಕಾಂಶದ ಮಾದರಿಗಳು ಮತ್ತು ರೋಗಗಳ ಪ್ರವೃತ್ತಿಯ ನಡುವಿನ ಸಂಬಂಧದ ಕುರಿತು ದೀರ್ಘಕಾಲೀನ ಸಂಶೋಧನೆಯನ್ನು ಪ್ರೋತ್ಸಾಹಿಸುವ ಜೊತೆಗೆ, ಉತ್ತಮ ಸಾರ್ವಜನಿಕ ಆರೋಗ್ಯಕ್ಕೆ ಪೂರಕವಾಗುವ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು ಕೂಡ ಈ ಮಿಷನ್‌ ನ ಗುರಿಯಾಗಿದೆ.

ಈ ಉಪಕ್ರಮದೊಂದಿಗೆ ಸಂಬಂಧ ಹೊಂದಿರುವ ವಿಜ್ಞಾನಿಗಳು, ಅಧಿಕಾರಿಗಳು ಮತ್ತು ಪಾಲ್ಗೊಳ್ಳುವ ಸಂಸ್ಥೆಗಳನ್ನು ಅಭಿನಂದಿಸಿದ ಶ್ರೀ ಚೌಹಾಣ್ ಅವರು, ಕೃಷಿ ಮತ್ತು ಆರೋಗ್ಯ ರಕ್ಷಣಾ ಕ್ಷೇತ್ರಗಳು ಒಗ್ಗೂಡಿರುವುದು ಕೇವಲ ಭಾರತಕ್ಕೆ ಮಾತ್ರವಲ್ಲದೆ ಇಡೀ ಮಾನವಕುಲಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು. ‘SEHAT’ ಮಿಷನ್‌ ನ ಪೂರ್ಣ ರೂಪ — ‘Science Excellence for Health through Agricultural Transformation’ (ಕೃಷಿ ರೂಪಾಂತರದ ಮೂಲಕ ಆರೋಗ್ಯಕ್ಕಾಗಿ ವಿಜ್ಞಾನದ ಶ್ರೇಷ್ಠತೆ) ಎಂದು ವಿವರಿಸಲಾಯಿತು. ಇದು ಕೃಷಿಯನ್ನು ಉತ್ತಮ ಪೌಷ್ಟಿಕಾಂಶ, ರೋಗ ತಡೆಗಟ್ಟುವಿಕೆ ಮತ್ತು ರೈತ ಕಲ್ಯಾಣದೊಂದಿಗೆ ಬೆಸೆಯುವ ಐಸಿಎಆರ್ ಮತ್ತು ಐಸಿಎಂಆರ್ ನ ಜಂಟಿ ರಾಷ್ಟ್ರೀಯ ಮಿಷನ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು.

 

*****


(ಪ್ರಕಟಣೆ ಐ.ಡಿ.: 2260053) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Marathi , हिन्दी , Gujarati