ರಸಗೊಬ್ಬರ ಇಲಾಖೆ
ಭಾರತದ ರಸಗೊಬ್ಬರ ದಾಸ್ತಾನು ಬಲವರ್ಧನೆ: ಖಾರಿಫ್ ಹಂಗಾಮಿಗೂ ಮುನ್ನವೇ ಶೇ. 51 ರಷ್ಟು ಅವಶ್ಯಕತೆ ಪೂರೈಕೆ
ರಸಗೊಬ್ಬರ ದಾಸ್ತಾನು ಖಾರಿಫ್ ಗುರಿಯ ಶೇ. 51ಕ್ಕೆ ಏರಿಕೆ; ರೈತರಿಗೆ ಎಂ ಆರ್ ಪಿ ದರದಲ್ಲಿ ಯಾವುದೇ ಹೆಚ್ಚಳವಿಲ್ಲ
ಭಾರತದಿಂದ 200 ಲಕ್ಷ ಮೆಟ್ರಿಕ್ ಟನ್ (ಎಲ್ ಎಂ ಟಿ) ರಸಗೊಬ್ಬರ ತುರ್ತು ಮೀಸಲು ದಾಸ್ತಾನು ಭದ್ರತೆ; ಬಿಕ್ಕಟ್ಟಿನ ನಂತರ ದೇಶೀಯ ಉತ್ಪಾದನೆಯಲ್ಲಿ ದಾಖಲೆ
ಗರಿಷ್ಠ ಬೇಡಿಕೆಯ ಸಮಯದಲ್ಲಿ ಪೂರೈಕೆ ಖಚಿತಪಡಿಸಲು 19 ಎಲ್ ಎಂ ಟಿ ರಸಗೊಬ್ಬರಕ್ಕಾಗಿ ಜಾಗತಿಕ ಟೆಂಡರ್ ಗಳಿಗೆ ಸರ್ಕಾರದ ಅನುಮೋದನೆ
ಪ್ರಕಟಣಾ ದಿನಾಂಕ:
11 MAY 2026 6:38PM by PIB Bengaluru
ಭಾರತದ ರಸಗೊಬ್ಬರ ಭದ್ರತೆಯು ಸದೃಢವಾಗಿದ್ದು, ಎಲ್ಲಾ ಪ್ರಮುಖ ವರ್ಗಗಳಲ್ಲಿ ಲಭ್ಯತೆಯು ಅವಶ್ಯಕತೆಗಿಂತ ಹೆಚ್ಚಾಗಿರುವುದನ್ನು ಸರ್ಕಾರ ಖಚಿತಪಡಿಸಿದೆ. ಮುಂಬರುವ 2026ರ ಖಾರಿಫ್ ಹಂಗಾಮಿಗೆ ಪೂರಕವಾಗಿ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಒಟ್ಟು ರಸಗೊಬ್ಬರ ಅಗತ್ಯವನ್ನು 390.54 ಎಲ್ ಎಂ ಟಿ (ಲಕ್ಷ ಮೆಟ್ರಿಕ್ ಟನ್) ಎಂದು ಅಂದಾಜಿಸಿದೆ.

ಇಂದಿನ ಮಾಹಿತಿಯಂತೆ, ದೇಶವು 199.65 ಎಲ್ ಎಂ ಟಿ ಯಷ್ಟು ದಾಸ್ತಾನನ್ನು ಹೊಂದಿದೆ, ಇದು ಹಂಗಾಮಿನ ಒಟ್ಟು ಬೇಡಿಕೆಯ ಶೇಕಡಾ 51 ಕ್ಕಿಂತಲೂ ಹೆಚ್ಚಿದೆ. ಸಾಮಾನ್ಯವಾಗಿ ಕಂಡುಬರುವ ಶೇಕಡಾ 33 ರಷ್ಟು ತುರ್ತು ಮೀಸಲು ದಾಸ್ತಾನಿಗೆ (ಬಫರ್ ಸ್ಟಾಕ್) ಹೋಲಿಸಿದರೆ ಇದು ಗಣನೀಯ ಏರಿಕೆಯಾಗಿದ್ದು, ಮುಂಗಡ ದಾಸ್ತಾನು ಮತ್ತು ದಕ್ಷ ಲಾಜಿಸ್ಟಿಕ್ಸ್ ನಿರ್ವಹಣೆಯನ್ನು ಪ್ರತಿಬಿಂಬಿಸುತ್ತದೆ.
ಬಿಕ್ಕಟ್ಟಿನ ನಂತರದ ಚೇತರಿಕೆ
ಇತ್ತೀಚಿನ ಬಿಕ್ಕಟ್ಟಿನ ಅವಧಿಯ ನಂತರ, ದೇಶೀಯ ಉತ್ಪಾದನೆ ಮತ್ತು ಆಮದುಗಳು ವೇಗವಾಗಿ ಚೇತರಿಸಿಕೊಂಡಿದ್ದು, ಒಟ್ಟು ಲಭ್ಯತೆಗೆ ಸುಮಾರು 97 ಎಲ್ ಎಂ ಟಿ ರಸಗೊಬ್ಬರವನ್ನು ಸೇರಿಸಿವೆ. ಇದರಲ್ಲಿ ದೇಶೀಯ ಉತ್ಪಾದನೆಯೊಂದೇ 76.78 ಎಲ್ ಎಂ ಟಿ ಕೊಡುಗೆ ನೀಡಿದ್ದರೆ, ಭಾರತೀಯ ಬಂದರುಗಳಿಗೆ ತಲುಪಿರುವ ಆಮದು ಪ್ರಮಾಣ 19.94 ಎಲ್ ಎಂ ಟಿ ಯಷ್ಟಿದೆ.
- ಬಿಕ್ಕಟ್ಟಿನ ನಂತರ ರಸಗೊಬ್ಬರಗಳ ದೇಶೀಯ ಉತ್ಪಾದನೆ ಮತ್ತು ಆಮದು (ಲಕ್ಷ ಟನ್ ಗಳಲ್ಲಿ):
|
ಉತ್ಪನ್ನ
|
ಬಿಕ್ಕಟ್ಟಿನ ನಂತರದ ದೇಶೀಯ ಉತ್ಪಾದನೆ
|
ಬಿಕ್ಕಟ್ಟಿನ ನಂತರ ಭಾರತೀಯ ಬಂದರು ತಲುಪಿದ ಆಮದು
|
|
ಯೂರಿಯಾ
|
46.28
|
12.51
|
|
ಡಿಎಪಿ
|
6.20
|
0.76
|
|
ಎನ್ ಪಿ ಕೆ ಎಸ್
|
15.57
|
3.79
|
|
ಎಸ್ ಎಸ್ ಪಿ
|
8.73
|
0
|
|
ಎಂಒಪಿ
|
0
|
2.88
|
|
ಒಟ್ಟು
|
76.78
|
19.94
|
ಜಾಗತಿಕ ಟೆಂಡರ್ ಗಳು ಮತ್ತು ಭವಿಷ್ಯದ ಪೂರೈಕೆ
ಗರಿಷ್ಠ ಬೇಡಿಕೆಯ ಅವಧಿಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು, ಭಾರತೀಯ ರಸಗೊಬ್ಬರ ಕಂಪನಿಗಳು 12 ಎಲ್ ಎಂ ಟಿ ಡಿಎಪಿ, 4 ಎಲ್ ಎಂ ಟಿ ಟಿ ಎಸ್ ಪಿ ಮತ್ತು 3 ಎಲ್ ಎಂ ಟಿ ಅಮೋನಿಯಂ ಸಲ್ಫೇಟ್ ಗಾಗಿ ಒಟ್ಟುಗೂಡಿಸಿದ ಜಾಗತಿಕ ಟೆಂಡರ್ ಗಳನ್ನು ಆಹ್ವಾನಿಸಿವೆ. ಹೆಚ್ಚುವರಿಯಾಗಿ, 5.36 ಎಲ್ ಎಂ ಟಿ ಅಮೋನಿಯಾ ಮತ್ತು 5.94 ಎಲ್ ಎಂ ಟಿ ಸಲ್ಫರ್ ಸೇರಿದಂತೆ ಕಚ್ಚಾ ವಸ್ತುಗಳ ಟೆಂಡರ್ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.
ಇದಲ್ಲದೆ, ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ ಸುಮಾರು 7 ಎಲ್ ಎಂ ಟಿ ಎನ್ ಪಿ ಕೆ ಎಸ್ ಆಮದು ಬಂದರುಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಸರ್ಕಾರ ದೃಢಪಡಿಸಿದೆ.
ಬೆಲೆ ಸ್ಥಿರತೆ ಮತ್ತು ಮೇಲ್ವಿಚಾರಣೆ
ರೈತ ಸಮುದಾಯಕ್ಕೆ ದೊಡ್ಡ ಸಮಾಧಾನಕರ ವಿಷಯವೆಂದರೆ, ಪ್ರಮುಖ ರಸಗೊಬ್ಬರಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ (ಎಂ ಆರ್ ಪಿ) ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರ ಘೋಷಿಸಿದೆ. ರಸಗೊಬ್ಬರ ಇಲಾಖೆಯು ಯೂರಿಯಾ ಹಾಗೂ ಪಿ ಅಂಡ್ ಕೆ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಲಭ್ಯತೆಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದೆ. ಪೂರೈಕೆ ಸರಪಳಿಯಲ್ಲಿ ಹಣಕಾಸಿನ ಮುಗ್ಗಟ್ಟು ಉಂಟಾಗದಂತೆ ಸಬ್ಸಿಡಿ ಬಿಲ್ ಗಳನ್ನು ವಾರಕ್ಕೊಮ್ಮೆ ವಿಲೇವಾರಿ ಮಾಡಲಾಗುತ್ತಿದೆ.
ಲಭ್ಯತೆಯ ಸವಾಲುಗಳನ್ನು ನಿವಾರಿಸಲು ಕಾರ್ಯದರ್ಶಿಗಳ ಉನ್ನತಾಧಿಕಾರ ಸಮಿತಿಯು ಈವರೆಗೆ ಎಂಟು ಸಭೆಗಳನ್ನು ನಡೆಸಿದ್ದು, ರೈತರಿಗೆ ಯಾವುದೇ ಅಡೆತಡೆಯಿಲ್ಲದೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಸಿಗುವಂತೆ ಖಚಿತಪಡಿಸಿದೆ.
*****
(ಪ್ರಕಟಣೆ ಐ.ಡಿ.: 2260019)
ವಿಸಿಟರ್ ಕೌಂಟರ್ : 3