ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ರಾಷ್ಟ್ರವ್ಯಾಪಿ ಅತಿಉಷ್ಣ ವಾತಾವರಣದ ಅಲೆಯಲ್ಲಿ ಕಾರ್ಮಿಕರು ಮತ್ತು ಕೆಲಸಗಾರರನ್ನು ಸಂರಕ್ಷಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಕ್ರಮಪದ್ದತಿಗಳ ಸಲಹೆಗಳು
ಪ್ರಕಟಣಾ ದಿನಾಂಕ:
28 APR 2026 1:54PM by PIB Bengaluru
ದೇಶಾದ್ಯಂತ ಹೆಚ್ಚುತ್ತಿರುವ ತಾಪಮಾನ ಮತ್ತು ಶಾಖ ಅಲೆಯ ವಿಷಮ ಪರಿಸ್ಥಿತಿಗಳ ದುಷ್ಪರಿಣಾಮಗಳಿಂದ ಕಾರ್ಮಿಕರು ಮತ್ತು ಕೆಲಸಗಾರರನ್ನು ರಕ್ಷಿಸಲು ತಕ್ಷಣದ ತಡೆಗಟ್ಟುವಿಕೆ ಮತ್ತು ತಗ್ಗಿಸುವ ಕ್ರಮಗಳನ್ನು ಒತ್ತಾಯಿಸಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಅದರ ಸಂಬಂಧಿತ ಸಂಸ್ಥೆಗಳಿಗೆ ಕ್ರಮಪದ್ದತಿಗಳ ಸಲಹೆಗಳನ್ನು ನೀಡಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು/ನಿರ್ವಾಹಕರನ್ನು ಉದ್ದೇಶಿಸಿ ಮಾತನಾಡಿದ ಸಂವಹನದಲ್ಲಿ, ಕಾರ್ಮಿಕರನ್ನು, ವಿಶೇಷವಾಗಿ ಹೊರಾಂಗಣ ಮತ್ತು ಕಾರ್ಮಿಕ-ತೀವ್ರ ವಲಯಗಳಲ್ಲಿ ಕೆಲಸ ಮಾಡುವವರನ್ನು ರಕ್ಷಿಸಲು ಸಂಘಟಿತ, ಬಹು-ವಲಯ ಮತ್ತು ಬಹು-ಆಯಾಮದ ವಿಧಾನದ ಅಗತ್ಯವನ್ನು ಸಚಿವಾಲಯ ಒತ್ತಿ ಹೇಳಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಉದ್ಯೋಗದಾತರು, ನಿವಾಸಿಗಳು, ಕೈಗಾರಿಕೆಗಳು ಮತ್ತು ನಿರ್ಮಾಣ ಕಂಪನಿಗಳಿಗೆ ಕಾರ್ಮಿಕರ ಸುರಕ್ಷತಾ ಕ್ರಮಗಳನ್ನು ತಕ್ಷಣ ಅನುಷ್ಠಾನಗೊಳಿಸಲು ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಸೂಚಿಸಲಾಗಿದೆ, ಅವುಗಳೆಂದರೆ:
- ವಿವಿಧ ವಲಯಗಳಲ್ಲಿನ ಉದ್ಯೋಗಿಗಳು/ಕಾರ್ಮಿಕರಿಗೆ ಕೆಲಸದ ಸಮಯವನ್ನು ಮರು ನಿಗದಿಪಡಿಸಲು ಅವಕಾಶ ನೀಡುವುದು
- ಸಾಕಷ್ಟು ಕುಡಿಯುವ ನೀರಿನ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ವಿಶ್ರಾಂತಿ ಪ್ರದೇಶಗಳು ಮತ್ತು ಕೆಲಸದ ಸ್ಥಳಗಳ ತಂಪಾಗಿಸುವಿಕೆಗೆ ಅವಕಾಶ ಕಲ್ಪಿಸುವುದು
- ನಿರ್ಮಾಣ ಕೆಲಸ ಸೇರಿದಂತೆ ಅಂತಹ ಸೌಲಭ್ಯಗಳ ಅಗತ್ಯವಿರುವ ಕೆಲಸದ ಪರಿಸ್ಥಿತಿಗಳಿಗೆ ತುರ್ತು ಐಸ್ ಪ್ಯಾಕ್ ಗಳು ಮತ್ತು ಶಾಖದ ಕಾಯಿಲೆ ತಡೆಗಟ್ಟುವ ಸಾಮಗ್ರಿಗಳನ್ನು ಒದಗಿಸುವುದು
- ಕಾರ್ಮಿಕರ ನಿಯಮಿತ ಆರೋಗ್ಯ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವುದು
ತೀವ್ರವಾದ ಶಾಖದ ಅವಧಿಯಲ್ಲಿ ಕೆಲಸದ ವೇಗವನ್ನು ನಿಧಾನಗೊಳಿಸುವುದು, ನಿರಂತರ ಕೆಲಸ ಅನಿವಾರ್ಯವಾದಾಗ ಇಬ್ಬರು ವ್ಯಕ್ತಿಗಳ ಸಿಬ್ಬಂದಿಯನ್ನು ನಿಯೋಜಿಸುವುದು, ವಿಶ್ರಾಂತಿ ಪ್ರದೇಶಗಳನ್ನು ಒದಗಿಸುವುದು ಮತ್ತು ಸಾಕಷ್ಟು ಗಾಳಿ ಮತ್ತು ತಂಪಾಗಿಸುವ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಕಾರ್ಮಿಕರಿಗೆ ಹೆಚ್ಚಿನ ನಮ್ಯತೆಯನ್ನು ಅನುಮತಿಸಲು ಕಾರ್ಖಾನೆ ಮತ್ತು ಗಣಿ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ.
ನಿರ್ಮಾಣ ಕಾರ್ಮಿಕರು, ಇಟ್ಟಿಗೆ ಗೂಡು ಕಾರ್ಮಿಕರು, ಕೆಲಸಗಾರರು, ದಿನಗೂಲಿ ಕಾರ್ಮಿಕರು ಮತ್ತು ಸಾಂದರ್ಭಿಕ ಕಾರ್ಮಿಕರಿಗೆ ವಿಶೇಷ ಗಮನ ಹರಿಸಲು ಶಿಫಾರಸು ಮಾಡಲಾಗಿದೆ. ಕಾರ್ಮಿಕ ಕೇಂದ್ರ(ಚೌಕ್)ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲು, ಶಾಖ ತರಂಗ ಸುರಕ್ಷತಾ ಸಂದೇಶಗಳು ಮತ್ತು ತುರ್ತು ಸಂಪರ್ಕ ವಿವರಗಳನ್ನು ಹೊಂದಿರುವ ಪೋಸ್ಟರ್ ಗಳು ಮತ್ತು ಬ್ಯಾನರ್ ಗಳನ್ನು ಪ್ರದರ್ಶಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸಲಾಗಿದೆ.
ಶಾಖ /ಉಷ್ಣದ ಅಲೆ/ಕಾವು/ತರಂಗ ತೀವ್ರತೆ ತಗ್ಗಿಸುವಿಕೆ ಮತ್ತು ನಿರ್ವಹಣೆ ಕುರಿತು ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ತರಬೇತಿ ಮಹಾ ನಿರ್ದೇಶನಾಲಯ, ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮಂಡಳಿ (ಡಿ.ಟಿ.ಎನ್.ಬಿ.ಡಬ್ಲ್ಯೂ.ಇ.) ಗೆ ಸೂಚಿಸಲಾಗಿದೆ, ಇದರಲ್ಲಿ ಇವು ಸೇರಿವೆ:
- ಶಾಖ ಅಲೆ/ತರಂಗಗಳ ಕಾರಣಗಳು ಮತ್ತು ಪರಿಣಾಮ
- ಜಲಸಂಚಯನ ಮತ್ತು ವಿಶ್ರಾಂತಿ ವಿರಾಮಗಳಂತಹ ಸುರಕ್ಷಿತ ಕೆಲಸದ ಅಭ್ಯಾಸಗಳು
- ಶಾಖ / ಉಷ್ಣ ಒತ್ತಡದ ಲಕ್ಷಣಗಳ ಆರಂಭಿಕ ಗುರುತಿಸುವಿಕೆ
- ಕೆಲಸದ ಸ್ಥಳದಲ್ಲಿ ಮತ್ತು ಸಮುದಾಯ ಮಟ್ಟದಲ್ಲಿ ತಡೆಗಟ್ಟುವ ತಂತ್ರಗಳು
- ತುರ್ತು ಪ್ರತಿಕ್ರಿಯೆ ಮತ್ತು ಪ್ರಥಮ ಚಿಕಿತ್ಸಾ ಕ್ರಮಗಳು.
ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ಇ.ಎಸ್.ಐ.ಸಿ.) ಮತ್ತು ಕಾರ್ಮಿಕ ಕಲ್ಯಾಣ ಮಹಾನಿರ್ದೇಶಕರ (ಡಿ.ಜಿ.ಎಲ್.ಡಬ್ಲ್ಯೂ.) ಅಡಿಯಲ್ಲಿ ಬರುವ ಆಸ್ಪತ್ರೆಗಳು ಮತ್ತು ಔಷಧಾಲಯಗಳು ಶಾಖದ ಹೊಡೆತದ ಪ್ರಕರಣಗಳಿಗೆ ಮೀಸಲಾದ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಒ.ಆರ್.ಎಸ್., ಐಸ್ ಪ್ಯಾಕ್ ಗಳು ಮತ್ತು ಇತರ ಶಾಖದ ಅನಾರೋಗ್ಯ ತಡೆಗಟ್ಟುವ ಸಾಮಗ್ರಿಗಳ ಸಾಕಷ್ಟು ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಕೇಳಲಾಗಿದೆ.
ಇದಲ್ಲದೆ, ಮುಖ್ಯ ಕಾರ್ಮಿಕ ಆಯುಕ್ತರು (ಸಿ.ಎಲ್.ಸಿ.) ಮತ್ತು ಗಣಿ ಸುರಕ್ಷತಾ ಮಹಾನಿರ್ದೇಶನಾಲಯ (ಡಿ.ಜಿ.ಎಂ.ಎಸ್.) ನಂತಹ ಜಾರಿ ಸಂಸ್ಥೆಗಳು ಸುರಕ್ಷಿತ ಕೆಲಸದ ಪರಿಸ್ಥಿತಿಗಳು, ಕುಡಿಯುವ ನೀರು, ವಾತಾಯನ, ತಂಪಾಗಿಸುವ ಸೌಲಭ್ಯಗಳು ಮತ್ತು ಕಾರ್ಮಿಕರ ಆವರ್ತಕ ಆರೋಗ್ಯ ತಪಾಸಣೆಗಳಿಗೆ ಸಂಬಂಧಿಸಿದ ಕಾನೂನು ನಿಬಂಧನೆಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ವಿನಂತಿಸಲಾಗಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇ.ಪಿ.ಎಫ್.ಒ.) ಮತ್ತು ರಾಷ್ಟ್ರೀಯ ವೃತ್ತಿ ಸೇವೆ (ಎನ್.ಸಿ.ಎಸ್) ಶಿಬಿರಗಳು ಮತ್ತು ಜನಸಂಪರ್ಕ ಚಟುವಟಿಕೆಗಳ ಸಮಯದಲ್ಲಿ ತಂಪಾಗಿಸುವಿಕೆ ಮತ್ತು ವಾತಾಯನ (ಹವಾಮಾನ) ನಿಯಂತ್ರಣ ಮತ್ತು ಕುಡಿಯುವ ನೀರಿನ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಹೆಚ್ಚಿನ ಪರಿಶೀಲನೆ ಮತ್ತು ಮೇಲ್ವಿಚಾರಣೆಗಾಗಿ ಈ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳು ಮತ್ತು ಕೈಗೊಂಡ ಚಟುವಟಿಕೆಗಳ ಕುರಿತು ಪಾಕ್ಷಿಕ ಸ್ಥಿತಿ ವರದಿಗಳನ್ನು ಸಲ್ಲಿಸುವಂತೆ ಎಲ್ಲಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಬೇಸಿಗೆ ಕಾಲದಲ್ಲಿ ಕಾರ್ಮಿಕರ/ಕೆಲಸಗಾರರ ಆರೋಗ್ಯ, ಸುರಕ್ಷತೆ ಮತ್ತು ಉತ್ಪಾದಕತೆಯನ್ನು ಖಚಿತಪಡಿಸಿಕೊಳ್ಳಲು ಸಕಾಲಿಕ ತಡೆಗಟ್ಟುವ ಕ್ರಮ ಮತ್ತು ನಿಕಟ ಮೇಲ್ವಿಚಾರಣೆ ಅತ್ಯಗತ್ಯ ಎಂದು ಸಚಿವಾಲಯ ಪುನರುಚ್ಚರಿಸಿತು.
*****
(ಪ್ರಕಟಣೆ ಐ.ಡಿ.: 2256306)
ವಿಸಿಟರ್ ಕೌಂಟರ್ : 6